14 ಯಕ್ಷಗಾನ ಸಮ್ಮೇಳನ ನಡೆಸಿದ್ದ ಎಸ್.ಎನ್.ಪಂಜಾಜೆ ಇನ್ನಿಲ್ಲ


ಬೆಂಗಳೂರು: ಛಲಬಿಡದ ತ್ರಿವಿಕ್ರಮನಂತೆ ಯಕ್ಷಗಾನಕ್ಕಾಗಿ ದುಡಿದು, 14 ಬಾರಿ ಅಖಿಲ ಭಾರತ ಯಕ್ಷಗಾನ ಬಯಲಾಟ ಸಾಹಿತ್ಯ ಸಮ್ಮೇಳನಗಳನ್ನು ಆಯೋಜಿಸಿದ್ದ ಯಕ್ಷಗಾನ ಸಂಘಟಕ, ಕಲಾವಿದ ಸೂರ್ಯನಾರಾಯಣ ಪಂಜಾಜೆ  (ಎಸ್.ಎನ್.ಪಂಜಾಜೆ) ಅವರು ಅನಾರೋಗ್ಯದಿಂದ ಸೋಮವಾರ ಬೆಂಗಳೂರಿನಲ್ಲಿ ಇಹಲೋಕ ತ್ಯಜಿಸಿದರು. ಅವರಿಗೆ 71 ವರ್ಷ ವಯಸ್ಸಾಗಿತ್ತು.

ಅವರ ನಿಧನದಿಂದ ಯಕ್ಷಗಾನ ಲೋಕವು, ವಿಶೇಷವಾಗಿ ಬೆಂಗಳೂರಿನ ಯಕ್ಷಗಾನ ರಂಗವು ಬಡವಾಗಿದೆ. ಕೆಲವು ವರ್ಷಗಳ ಹಿಂದೆ ಬೈಕ್ ಅಪಘಾತದ ಬಳಿಕ ಯಕ್ಷಗಾನ ಕ್ಷೇತ್ರದಿಂದ ಸಕ್ರಿಯರಾಗಿದ್ದ ಅವರು, ಇತ್ತೀಚೆಗೆ ಚೇತರಿಸಿಕೊಂಡು ಉಲ್ಲಸಿತರಾಗಿ ಯಕ್ಷಗಾನ ರಂಗದಲ್ಲಿ ತೊಡಗಿಸಿಕೊಂಡಿದ್ದರು.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕನ್ಯಾನದವರಾದ ಎಸ್.ಎನ್.ಪಂಜಾಜೆ, 1980ರ ದಶಕದಲ್ಲೇ ಬೆಂಗಳೂರಿಗೆ ಬಂದು ಯಕ್ಷಗಾನ ಸಂಬಂಧಿತ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡವರು. ಯಕ್ಷಗಾನದ ಪಾತ್ರಧಾರಿಯಾಗಿ, ತಾಳಮದ್ದಳೆ ಅರ್ಥಧಾರಿಯಾಗಿ, ಸಂಘಟಕರಾಗಿ ಜನಾನುರಾಗಿಯಾಗಿದ್ದರು. ಇತ್ತೀಚೆಗೆ ಉಡುಪಿಯಲ್ಲಿ ಸರಕಾರದ ವತಿಯಿಂದ ನಡೆದ ಮೊದಲ ಸಮಗ್ರ ಯಕ್ಷಗಾನ ಸಾಹಿತ್ಯ ಸಮ್ಮೇಳನದಲ್ಲಿ (2023) ಗೌರವಿಸಲಾಗಿತ್ತು.

ಕರ್ನಾಟಕ ಸಾಂಸ್ಕೃತಿಕ ಕಲಾ ಪ್ರತಿಷ್ಠಾನ ಹೆಸರಿನಲ್ಲಿ ಯಕ್ಷಗಾನದ ಸೇವೆಯಲ್ಲಿ ತೊಡಗಿದ್ದ ಎಸ್.ಎನ್.ಪಂಜಾಜೆ ಅವರು ಪತ್ನಿ ಮನೋರಮಾ, ಪುತ್ರ ಕೈಲಾಸ್ ಭಟ್ ಹಾಗೂ ಅಪಾರ ಯಕ್ಷಗಾನ ಅಭಿಮಾನಿಗಳನ್ನು ಅಗಲಿದ್ದಾರೆ.

ವಾವರ, ಭೀಮ, ಕೌರವ, ಶೂರ್ಪನಖಿ, ಜಮದಗ್ನಿ, ದುಷ್ಟಬುದ್ಧಿ ಮುಂತಾದ ಪಾತ್ರಗಳಿಗೆ ಜೀವ ತುಂಬಿದ್ದ ಅವರು, ಕಂಪನಿ ನಾಟಕಗಳಲ್ಲಿಯೂ ಅಭಿನಯಿಸಿ, ತಮ್ಮ ಪ್ರತಿಭೆಯನ್ನು ಮೆರೆದವರು. ಅಲ್ಲದೆ,  ದೇಶ ವಿದೇಶಗಳಲ್ಲಿಯೂ ಯಕ್ಷಗಾನ ತಂಡವನ್ನು ಒಯ್ದು ಪ್ರದರ್ಶನ ಮಾಡಿದ್ದಾರೆ. ರಾಜ್ಯದ ವಿವಿಧೆಡೆಗಳಲ್ಲಿ ಅಖಿಲ ಭಾರತ ಯಕ್ಷಗಾನ ಬಯಲಾಟ ಸಾಹಿತ್ಯ ಸಮ್ಮೇಳನಗಳನ್ನು ಆಯೋಜಿಸಿರುವ ಅವರು, ಹಿರಿಯ ಕಲಾವಿದರನ್ನು ಗೌರವಿಸಿದ್ದಲ್ಲದೆ, ಯಕ್ಷಗಾನದ ಪ್ರಸಾರದಲ್ಲಿಯೂ ಮಹತ್ತರ ಪಾತ್ರ ವಹಿಸಿದ್ದಾರೆ. ಬೆಂಗಳೂರಿನ ಹವ್ಯಾಸಿ ಕಲಾವಿದರಿಗೆ ಯಕ್ಷಗಾನದ ವೇಷಭೂಷಣಗಳನ್ನು ಒದಗಿಸಿ, ಪ್ರಸಾಧನವನ್ನೂ ನಿರ್ವಹಿಸುತ್ತಾ ಬೆಂಗಳೂರಿನಲ್ಲಿ ತೆಂಕುತಿಟ್ಟು ಯಕ್ಷಗಾನವನ್ನು ಬೆಳೆಸಿದವರಲ್ಲೊಬ್ಬರು. ವಿನಯದಿಂದಲೇ ಎಲ್ಲರೊಂದಿಗೆ ಬೆರೆಯುತ್ತಾ ಬೆಳೆಯುವ ಕಲಾವಿದರಿಗೆ ಪ್ರೋತ್ಸಾಹ ನೀಡಿದವರು.

2018ರಲ್ಲಿ 13ನೇ ಅಖಿಲ ಭಾರತ ಯಕ್ಷಗಾನ ಸಾಹಿತ್ಯ ಸಮ್ಮೇಳನವನ್ನು ಕುಂದಾಪುರದಲ್ಲಿ ಸಂಘಟಿಸಿದ್ದ ಅವರಿಗೆ ನಂತರ ಅಪಘಾತವಾಗಿತ್ತು. ನಂತರ ಸಾಣೆಹಳ್ಳಿಯಲ್ಲಿ 14ನೇ ಯಕ್ಷಗಾನ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಿದ್ದರು. ಬಳಿಕ ಕೊರೊನಾ ಪಿಡುಗಿನ ಸಮಯದಲ್ಲಿ ಯಕ್ಷಗಾನದ ಚಟುವಟಿಕೆಗಳನ್ನು ನಡೆಸಲಾಗದೆ ನೊಂದಿದ್ದರು. ಧರ್ಮಸ್ಥಳದಲ್ಲಿ ಹದಿನೈದನೇ ಯಕ್ಷಗಾನ ಸಾಹಿತ್ಯ ಸಮ್ಮೇಳನ ನಡೆಸಿ, ಇದಕ್ಕೆ ಮಂಗಳ ಹಾಡಬೇಕೆಂದು ಅವರು ಆತ್ಮೀಯರೊಂದಿಗೆ ಹೇಳಿಕೊಂಡಿದ್ದರು. ಇದಲ್ಲದೆ, ಜೂನ್ ತಿಂಗಳಲ್ಲಿ ಬೆಂಗಳೂರಲ್ಲಿ ಯಕ್ಷಗಾನ ತಾಳಮದ್ದಳೆ ಉತ್ಸವವನ್ನು ಏರ್ಪಡಿಸುವ ಬಗ್ಗೆಯೂ ಆಲೋಚಿಸುತ್ತಿದ್ದರು. ಆದರೆ ವಿಧಿಯು ಅವರನ್ನು ಬೇಗನೇ ಕರೆದೊಯ್ದಿತು.

ಎಸ್.ಎನ್. ಪಂಜಾಜೆ ಎಂದೇ ಖ್ಯಾತರಾದ ಈ ಕಲಾರಾಧಕ ನಡೆಸಿದ ಏಕವ್ಯಕ್ತಿ ಸಾಹಸ ಯಕ್ಷಗಾನ ಕಲೆಯ ಹಿನ್ನೆಲೆಯಲ್ಲಿ ಬಹು ಮಹತ್ವದ ವಿಚಾರ. ಕೊನೆಯ ಯಕ್ಷಗಾನ ಸಮ್ಮೇಳನವನ್ನು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆಸಲು ಯೋಚನೆ ಮಾಡಿದ್ದೇನೆ ಎಂದು ದೂರವಾಣಿಯಯಲ್ಲಿ ಮಾತಾಡಿದ್ದರು. ಹಲವು ಲಕ್ಷ ರೂಪಾಯಿಗಳ ವೆಚ್ಚದ ಇಂತಹ ಬೃಹತ್ ಕಾರ್ಯಕ್ರಮಗಳನ್ನು ಸಂಯೋಜಿಸುವ ಅವರ ಸಾಹಸ ಕಲಾಲೋಕದಲ್ಲಿ ಜರುಗಿದ ದಾಖಲೆಯೇ ಸರಿ. ವೈವಿಧ್ಯಮಯ ಕಾರ್ಯಗಳಿಂದ ಯಕ್ಷಗಾನವಷ್ಟೇ ಅಲ್ಲದೆ ಅದನ್ನು ಹೊಂದಿಕೊಂಡಿರುವ ಅನೇಕ ಕಲಾಪ್ರಕಾರಗಳ ಪ್ರದರ್ಶನಗಳನ್ನು ನಾಡಿನಾದ್ಯಂತ ಸಂಯೋಜನೆ ಮಾಡಿ ಸೈ ಎನ್ನಿಸಿಕೊಂಡ ಈ ಸೂರ್ಯಣ್ಣ ಇಂದು ಅಸ್ತಂಗತರಾದರು ಎಂದಾಗ ಹೃದಯ ಹಿಂಡುವ ನೋವಾಯಿತು.  ಯಕ್ಷಗಾನದ ಅದೃಷ್ಟ ಅವರು. ತನಗೇನೂ ಬಯಸದೆ ಕಲೆಗಾಗಿ ಬಳಸಿದ ಸೂರ್ಯಣ್ಣ...ನಿಮ್ಮ ಸಾಹಸದ ನೆನಪು ನನಗಂತೂ ಸದಾ ಹಸಿರು.ಹೋಗಿ ಬನ್ನಿ..ಓಂ ಶಾಂತಿಃ ಎಂದು ಶ್ರದ್ಧಾಂಜಲಿ ಕೋರಿದ್ದಾರೆ ಪಾರ್ತಿಸುಬ್ಬ ಪ್ರಶಸ್ತಿ ಪುರಸ್ಕೃತ ಯಕ್ಷಗಾನ ಸಾಹಿತಿ, ಕಲಾವಿದ ಶ್ರೀಧರ್ ಡಿ.ಎಸ್. ಅವರು.

ಯಕ್ಷಗಾನದೊಂದಿಗೆ, ಬೆಂಗಳೂರಲ್ಲಿ ಯಕ್ಷಗಾನದ ವೇಷಭೂಷಣ ಒದಗಿಸುತ್ತಿದ್ದರು. ಯಕ್ಷಗಾನ ನಾಟ್ಯ ತರಗತಿ ಮಾಡಿ ತೆಂಕುತಿಟ್ಟು ಹೆಣ್ಮಕ್ಕಳ ಪ್ರದರ್ಶನವನ್ನು ಏರ್ಪಡಿಸಿದ್ದರು. ದೂರದರ್ಶನದಲ್ಲಿ ಯಕ್ಷಗಾನ, ಆಕಾಶವಾಣಿಯಲ್ಲಿ ತಾಳಮದ್ದಳೆ ಏರ್ಪಡಿಸಿದ್ದ ಅವರು ಊರಿನ ಹತ್ತಾರು ಕಲಾತಂಡಗಳಿಗೆ ದೂರದರ್ಶನದಲ್ಲಿ ಅವಕಾಶವನ್ನು ಕಲ್ಪಿಸಿದವರು. ಟಿ.ವಿ. ಧಾರಾವಾಹಿಗಳಲ್ಲಿಯೂ ನಟಿಸಿದ್ದಾರೆ. ಚಂದನದಲ್ಲಿ ನೂರಾರು ಹಿರಿ ಕಲಾವಿದರನ್ನು ಪರಿಚಯಿಸಿದ ಅವರು ಹತ್ತಾರು ಸ್ಮರಣಸಂಚಿಕೆಗಳನ್ನೂ ಹೊರತಂದಿದ್ದಾರೆ. ಏಕಪಾತ್ರಾಭಿನಯ, ಹರಿಕತೆಗಳನ್ನು ಮಾಡಿದ್ದರು ಎಂದು ಯಕ್ಷಗಾನ ಸಾಹಿತಿ, ಕಲಾವಿದ ರಾಜಗೋಪಾಲ ಕನ್ಯಾನ ಅವರು ನೆನಪಿಸಿಕೊಂಡಿದ್ದಾರೆ.

ಇವರ ಕಲಾ ಸೇವೆಗೆ ಕೇರಳ ರಾಜ್ಯಮಟ್ಟದ ಪ್ರಶಸ್ತಿ, ತೆಂಕುತಿಟ್ಟು ಯಕ್ಷಗಾನ ಪ್ರತಿಷ್ಠಾನ, ಚಿಟ್ಟಾಣಿ ಪ್ರಶಸ್ತಿ, ಕಲಾ ಕೌಮುದಿ ಪ್ರಶಸ್ತಿ, ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನೃತ್ಯೋತ್ಸವ ಪುರಸ್ಕಾರ, ಬೆಂಗಳೂರಿನ ಕೆಂಪೇಗೌಡ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ ಮುಂತಾದ ಹಲವು ಪುರಸ್ಕಾರಗಳು ಸಂದಿವೆ.

ಪಂಜಾಜೆ ಅವರ ನಿಧನಕ್ಕೆ ಹಿರಿಯ ಕಲಾವಿದರು, ಸಾಹಿತಿಗಳು, ಬಂಧು ಮಿತ್ರರು, ವಿಶೇಷವಾಗಿ ಬೆಂಗಳೂರಿನ ಕಲಾವಿದರು ಆಘಾತ ವ್ಯಕ್ತಪಡಿಸಿದ್ದು, ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು