![]() |
ದಿಲ್ಲಿಗೆ ಹೊರಟ ಹನುಮಗಿರಿ ಮೇಳದ ಕಲಾವಿದರು ಮಂಗಳೂರು ವಿಮಾನ ನಿಲ್ದಾಣದಲ್ಲಿ. ಚಿತ್ರ: ಚೈತನ್ಯಕೃಷ್ಣ ಪದ್ಯಾಣ ಅವರ ಫೇಸ್ಬುಕ್ ಪುಟ |
ಮಂಗಳೂರು: ಯಕ್ಷಗಾನದ ತವರು ಕ್ಷೇತ್ರವಾಗಿರುವ ಕರಾವಳಿಯಲ್ಲೇ ಇಡೀ ರಾತ್ರಿ ಯಕ್ಷಗಾನ ಅಪರೂಪವಾಗಿರುವಾಗ ದೇಶದ ರಾಜಧಾನಿ ದೆಹಲಿಯಲ್ಲಿ ಪೂರ್ಣರಾತ್ರಿ ಯಕ್ಷಗಾನ ಪ್ರದರ್ಶನಕ್ಕೆ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ, ಹನುಮಗಿರಿ ತಂಡವು ಸಿದ್ಧವಾಗಿದೆ.
ಹನುಮಗಿರಿ ಮೇಳದ 32 ಮಂದಿ ಕಲಾವಿದರ ತಂಡವು ದೆಹಲಿ ಕರ್ನಾಟಕ ಸಂಘದ ಅಮೃತ ಮಹೋತ್ಸವ ಪ್ರಯುಕ್ತ ಆಗಸ್ಟ್ 19ರಂದು ಅಲ್ಲಿ ಪೂರ್ಣರಾತ್ರಿಯ ಯಕ್ಷಗಾನ ಪ್ರದರ್ಶನ ನೀಡಲು ಈಗಾಗಲೇ ದೆಹಲಿಗೆ ತೆರಳಿದೆ. ಆಗಸ್ಟ್ 19ರ ರಾತ್ರಿ 10ರಿಂದ ಮರುದಿನ ಬೆಳಿಗ್ಗೆವರೆಗೆ ಈ ವರ್ಷದ ಹಿಟ್ ಪ್ರಸಂಗ ಶುಕ್ರನಂದನೆ ಆಖ್ಯಾನವನ್ನು ಹನುಮಗಿರಿ ಮೇಳದ ಕಲಾವಿದರು ಪ್ರದರ್ಶಿಸಲಿದ್ದಾರೆ.
ಯಕ್ಷಗಾನ.ಇನ್ ಅಪ್‌ಡೇಟ್ಸ್ ಪಡೆಯಲು ಫೇಸ್‌ಬುಕ್ | ಟ್ವಿಟರ್ | ಯೂಟ್ಯೂಬ್ | ಇನ್‌ಸ್ಟಾಗ್ರಾಂ ಫಾಲೋ ಮಾಡಿ.
ಮೇಳದ ರಂಗಸ್ಥಳವನ್ನೂ ಅಲ್ಲಿಗೆ ರೈಲಿನ ಮೂಲಕ ರವಾನಿಸಲಾಗಿದೆ ಎಂದು ತಿಳಿದುಬಂದಿದೆ. ದೆಹಲಿಯಲ್ಲಿ ಇದೇ ಮೊದಲ ಬಾರಿಗೆ ತೆಂಕು ತಿಟ್ಟು ಯಕ್ಷಗಾನದ ಮೇಳವೊಂದು ತನ್ನದೇ ರಂಗಸ್ಥಳದಲ್ಲಿ ಯಕ್ಷಗಾನ ಪ್ರದರ್ಶಿಸುತ್ತಿದೆ. ಸುಮಾರು 8 ವರ್ಷಗಳ ಹಿಂದೊಮ್ಮೆ ವೃತ್ತಿಪರ ಕಲಾವಿದರ ತಂಡವೊಂದು ದೆಹಲಿಯಲ್ಲಿ ಇಡೀ ರಾತ್ರಿಯ ಪ್ರದರ್ಶನ ನೀಡಿತ್ತೆಂದು ಕಲಾವಿದೆ ವಿದ್ಯಾ ಕೋಳ್ಯೂರು ಅವರು ದಿ ಹಿಂದು ಪತ್ರಿಕೆಗೆ ತಿಳಿಸಿದ್ದಾರೆ. ರಾತ್ರಿಯಿಡೀ ನಡೆಯುವ ಯಕ್ಷಗಾನದ ಸಂದರ್ಭದಲ್ಲಿ ಪ್ರೇಕ್ಷಕರಿಗೆ ಕರಾವಳಿಯ ಪ್ರಸಿದ್ಧ ಚರುಮರಿ, ಪೋಡಿ, ಮೋಹನ ಲಾಡು ಹಾಗೂ ಚಹಾ ವಿತರಿಸಲಾಗುತ್ತದೆ ಎಂದವರು ಹೇಳಿದ್ದಾರೆ.
ಇಂದು (ಆಗಸ್ಟ್ 17ರಂದು) 32 ಮಂದಿ ಕಲಾವಿದರ ತಂಡವು ಮಂಗಳೂರು ವಿಮಾನ ನಿಲ್ದಾಣದಿಂದ ದೆಹಲಿಯತ್ತ ಹೊರಟಿದ್ದು, ಅವರು ಆಗಸ್ಟ್ 21ರಂದು ವಾಪಸಾಗಲಿದ್ದಾರೆ. ಇದೇ ಸಂದರ್ಭದಲ್ಲಿ ಕಲಾ ಪೋಷಕ, ಹನುಮಗಿರಿ ಮೇಳದ ಪ್ರವರ್ತಕರೂ ಆಗಿರುವ ನಿವೃತ್ತ ಐಎಎಸ್ ಅಧಿಕಾರಿ ಟಿ.ಶ್ಯಾಮ್ ಭಟ್ ಅವರನ್ನು ಕರ್ನಾಟಕ ಸಂಘವು ಗೌರವಿಸಲಿದೆ.
Tags:
ಸುದ್ದಿ