![]() |
ಯೂರೋಪ್ ಪ್ರವಾಸಕ್ಕೆ ಹೊರಟ ಪಟ್ಲ ಸತೀಶ್ ಶೆಟ್ಟಿ ನೇತೃತ್ವದ ಯಕ್ಷಗಾನ ತಂಡ. (ಚಿತ್ರ: ಚೈತನ್ಯ ಪದ್ಯಾಣ ಅವರ ಫೇಸ್‌ಬುಕ್ ವಾಲ್) |
ಮಂಗಳೂರು: ಕನ್ನಡದ ಕಮನೀಯ ಕಲೆ ಯಕ್ಷಗಾನವು ವಿದೇಶಗಳಲ್ಲಿ ಪ್ರಸಿದ್ಧಿಯಾಗುತ್ತಿದೆ. ಇಂಗ್ಲೆಂಡ್, ಗಲ್ಫ್ ರಾಷ್ಟ್ರಗಳು, ಅಮೆರಿಕ, ಆಸ್ಚ್ರೇಲಿಯಾ ಮುಂತಾದೆಡೆ ಈಗಾಗಲೇ ಹಲವಾರು ಯಕ್ಷಗಾನ ತಂಡಗಳು ಸೀಮೋಲ್ಲಂಘನ ಮಾಡಿ ಪ್ರದರ್ಶನ ನೀಡಿವೆ. ಈಗ ಯಕ್ಷಧ್ರುವ ಪಟ್ಲ ಫೌಂಡೇಶನ್ ಯೂರೋಪ್ ಖಂಡದಲ್ಲಿ ಯಕ್ಷಗಾನ ಅಭಿಯಾನವನ್ನು ಕೈಗೊಂಡಿದ್ದು, ಯಕ್ಷಗಾನ ಕಲೆಯ ವಿಸ್ತಾರಕ್ಕೆ ಹೊಸ ಹೊಳಪು ನೀಡಿದೆ. ಕಳೆದ ಜೂನ್ ತಿಂಗಳಲ್ಲಿಯೂ ಪಟ್ಲ ಫೌಂಡೇಶನ್ ನೇತೃತ್ವದ ತಂಡವು ಸ್ಕಾಟ್ಲೆಂಡ್ ಹಾಗೂ ಇಂಗ್ಲೆಂಡ್‌ನಲ್ಲಿ ವಿವಿಧ ಕಾರ್ಯಕ್ರಮಗಳನ್ನು ನೀಡಿತ್ತು.
ಇದೀಗ 2023 ಸೆಪ್ಟೆಂಬರ್ 9ರಿಂದ 19ರವರೆಗೆ ಭಾಗವತರಾದ ಪಟ್ಲ ಸತೀಶ್ ಶೆಟ್ಟಿ ನೇತೃತ್ವದ ತಂಡವು 10 ದಿನಗಳ ಕಾಲ ಯೂರೋಪ್ ಪರ್ಯಟನೆಗೆ ಹೊರಟಿದೆ. ಜರ್ಮನಿ, ಫ್ರಾನ್ಸ್, ಸ್ವಿಜರ್ಲೆಂಡ್ ಹಾಗೂ ಯುನೈಟೆಡ್ ಕಿಂಗ್‌ಡಂ ರಾಷ್ಟ್ರಗಳಲ್ಲಿ ಏಳು ಯಕ್ಷಗಾನ ಪ್ರದರ್ಶನಗಳನ್ನು ನೀಡಲಿದೆ. ಅಲ್ಲಿನ ಭಾರತೀಯರನ್ನಷ್ಟೇ ಅಲ್ಲದೆ, ವಿದೇಶೀಯರನ್ನೂ ಯಕ್ಷಗಾನವು ತಲುಪಲಿರುವುದು ಯಕ್ಷಗಾನಕ್ಕೆ ಹೆಮ್ಮೆಯ ವಿಚಾರ. ವಿದೇಶ ತಿರುಗಾಟದಲ್ಲಿ, ಪ್ರಸಿದ್ಧ ಕಲಾವಿದರನ್ನು ಒಳಗೊಂಡಿರುವ ಈ ತಂಡವು ಸುದರ್ಶನ ವಿಜಯ ಹಾಗೂ ಮಹಿಷ ಮರ್ದಿನಿ ಪ್ರಸಂಗಗಳನ್ನು ಕಾಲಮಿತಿಯಲ್ಲಿ ಪ್ರದರ್ಶಿಸಲಿದೆ.
ಯಕ್ಷಗಾನ.ಇನ್ ಅಪ್‌ಡೇಟ್ಸ್ ಪಡೆಯಲು ಫೇಸ್‌ಬುಕ್ | ಟ್ವಿಟರ್ | ಯೂಟ್ಯೂಬ್ | ಇನ್‌ಸ್ಟಾಗ್ರಾಂ ಫಾಲೋ ಮಾಡಿ.
ಹಿಮ್ಮೇಳದಲ್ಲಿ ಪಟ್ಲ ಸತೀಶ್ ಶೆಟ್ಟಿ (ಭಾಗವತಿಕೆ) ಅವರೊಂದಿಗೆ ಚೆಂಡೆ-ಮದ್ದಳೆಯಲ್ಲಿ ಪದ್ಮನಾಭ ಉಪಾಧ್ಯಾಯ ಮತ್ತು ಚೈತನ್ಯಕೃಷ್ಣ ಪದ್ಯಾಣ ಅವರಿದ್ದರೆ, ಮುಮ್ಮೇಳದಲ್ಲಿ ಜನಪ್ರಿಯ ಕಲಾವಿದರಾದ ಪ್ರೊ.ಎಂ.ಎಲ್.ಸಾಮಗ, ಚಂದ್ರಶೇಖರ ಧರ್ಮಸ್ಥಳ, ಪ್ರಶಾಂತ್ ನೆಲ್ಯಾಡಿ, ಮಹೇಶ್ ಮಣಿಯಾಣಿ ಮತ್ತು ಮೋಹನ ಬೆಳ್ಳಿಪ್ಪಾಡಿ ಇರುತ್ತಾರೆ.
ಸೆ.9ರಂದು ಜರ್ಮನಿಯ ಫ್ರಾಂಕ್‌ಫರ್ಟ್‌ನಲ್ಲಿ, ಸೆ.11ರಂದು ಯುಕೆಯ ಮಿಲ್ಟನ್ ಕೇಯ್ನ್ಸ್‌ನಲ್ಲಿ, ಸೆ.12ರಂದು ಯುಕೆಯ ಬೋವರ್ಸ್ ಆ್ಯಂಡ್ ಪಿಟ್ಸೀ ಫಂಕ್ಷನ್ ಹಾಲ್‌ನಲ್ಲಿ, ಸೆ.13ರಂದು ನೆಹರು ಸೆಂಟರ್‌ನಲ್ಲಿ, ಸೆ.14ರಂದು ಜಿಬಿ ಎಸ್‌ಆರ್‌ಎಸ್ ಬೃಂದಾವನ್‌ನಲ್ಲಿ, ಸೆ.16ರಂದು ಫ್ರಾನ್ಸ್‌ನ ಪ್ಯಾರಿಸ್‌ನಲ್ಲಿ, ಹಾಗೂ ಸೆ.17ರಂದು ಸ್ವಿಜರ್ಲೆಂಡ್‌ನ ಜ್ಯೂರಿಚ್‌ನಲ್ಲಿ ಯಕ್ಷಗಾನ ಪ್ರದರ್ಶನಗಳನ್ನು ಏರ್ಪಡಿಸಲಾಗಿದೆ.
ಜೂನ್ ತಿಂಗಳ ಯಕ್ಷಗಾನ ಪರ್ಯಟನೆ ಸಂದರ್ಭದಲ್ಲಿ ಲಂಡನ್ ವಿಮಾನ ನಿಲ್ದಾಣದಲ್ಲಿ ಯಕ್ಷಗಾನ ಕಲಾವಿದರು (ಫೈಲ್ ಚಿತ್ರ).
ಇಂಗ್ಲೆಂಡ್ ಹಾಗೂ ಸ್ಕಾಟ್ಲೆಂಡ್‌ಗಳಲ್ಲಿ ಈಗಾಗಲೇ ಜೂನ್ ತಿಂಗಳಲ್ಲಿ ತಿರುಗಾಟ ನಡೆಸಿರುವ ಪಟ್ಲ ಫೌಂಡೇಶನ್ ಟ್ರಸ್ಟ್ ತಂಡವು, ಈಗ ಜರ್ಮನಿ, ಬ್ರಿಟನ್, ಫ್ರಾನ್ಸ್ ಹಾಗೂ ಸ್ವಿಜರ್ಲೆಂಡ್ - ಈ ನಾಲ್ಕು ದೇಶಗಳಲ್ಲಿ ಏಳು ಕಾರ್ಯಕ್ರಮಗಳನ್ನು ನೀಡಲಿದೆ. ಭಾರತ ಸಂಸ್ಕೃತಿಯನ್ನು ಬಿಂಬಿಸುವ, ಕಾಪಿಡುವ ಪ್ರಮುಖ ಕೇಂದ್ರವೇ ಲಂಡನ್‌ನ ನೆಹರು ಸೆಂಟರ್. ಇಲ್ಲಿ ಕೂಡ ತಂಡದಿಂದ ಯಕ್ಷಗಾನ ಪ್ರದರ್ಶನ ನಡೆಯುತ್ತಿರುವುದು, ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ ಕಲೆಯನ್ನು ಪ್ರಚುರ ಪಡಿಸುವ ಸುವರ್ಣಾವಕಾಶ ಎಂದು ಬುಧವಾರ ಮಂಗಳೂರಿನಲ್ಲಿ ಜರುಗಿದ ಪತ್ರಿಕಾಗೋಷ್ಠಿಯಲ್ಲಿ ಪಟ್ಲ ಸತೀಶ್ ಶೆಟ್ಟರು ತಿಳಿಸಿದ್ದಾರೆ.
ಗೂಗಲ್ ನ್ಯೂಸ್‌ನಲ್ಲಿ ಯಕ್ಷಗಾನ.ಇನ್ ಫಾಲೋ ಮಾಡಲು ಕ್ಲಿಕ್ ಮಾಡಿ