ಯಕ್ಷಗಾನ - ಮಹಿಳೆ - ಮಾಧ್ಯಮ ಗೋಷ್ಠಿಯಲ್ಲಿ ಪದ್ಮಾ ಶಿವಮೊಗ್ಗ, ಕೆ. ಗೌರಿ, ಡಾ.ಆನಂದರಾಮ ಉಪಾಧ್ಯಾಯ, ಪೃಥ್ವಿರಾಜ ಕವತ್ತಾರು, ಅವಿನಾಶ್ ಬೈಪಾಡಿತ್ತಾಯ, ನವೀನ್ ಅಮ್ಮೆಂಬಳ ಭಾಗವಹಿಸಿದ್ದರು. |
ಬೆಂಗಳೂರು: ಯಕ್ಷಗಾನವನ್ನು ಪಸರಿಸುವ ನಿಟ್ಟಿನಲ್ಲಿ ಮಹಿಳೆಯರ ಪರಿಶ್ರಮ ಅಗಾಧವಾದದ್ದು ಎಂದು ಯಕ್ಷಗಾನ ಸಂಶೋಧಕ ಡಾ.ಆನಂದರಾಮ ಉಪಾಧ್ಯಾಯ ಹೇಳಿದರು.
ಬೆಂಗಳೂರಿನ ಕರ್ನಾಟಕ ಮಹಿಳಾ ಯಕ್ಷಗಾನ ಸಂಸ್ಥೆಯು ತನ್ನ ಬೆಳ್ಳಿಹಬ್ಬದ ಪ್ರಯುಕ್ತ ಮೀಡಿಯಾ ಅಲುಮ್ನಿ ಅಸೋಸಿಯೇಷನ್ ಆಫ್ ಮಂಗಳಗಂಗೋತ್ರಿ (ಮಾಮ್) ಸಹಯೋಗದಲ್ಲಿ ಭಾನುವಾರ (ಸೆ.10, 2023) ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಯಕ್ಷಗಾನ - ಮಹಿಳೆ - ಮಾಧ್ಯಮ ಚಿಂತನ ಮಂಥನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
1980ರ ದಶಕದಲ್ಲಿ ಸಿಂಡಿಕೇಟ್ ಬ್ಯಾಂಕಿನ ಹಲವು ಮಹಿಳಾ ಉದ್ಯೋಗಿಗಳು ಬೆಂಗಳೂರು ನಗರದಲ್ಲಿ ಯಕ್ಷಗಾನದ ಶಿಬಿರಗಳನ್ನೂ ಮಾಡಿ ಇಲ್ಲಿನ ಜನರಿಗೆ ಯಕ್ಷಗಾನದ ಒಲವು ಮೂಡಿಸಿದರು. ಹೀಗೆ ಯಕ್ಷಗಾನವನ್ನು ಗಂಡುಕಲೆ ಎಂದು ಪ್ರತ್ಯೇಕಿಸದೇ ಶ್ರೇಷ್ಠ ಕಲೆ ಎಂದು ಭಾವಿಸಬೇಕು ಎಂದು ಅಭಿಪ್ರಾಯಪಟ್ಟರು.
ಕರ್ನಾಟಕ ಪತ್ರಕರ್ತೆಯರ ಸಂಘದ ಅಧ್ಯಕ್ಷೆ ಪದ್ಮಾ ಶಿವಮೊಗ್ಗ ಮಾತನಾಡಿ, 'ಯಕ್ಷಗಾನಕ್ಕೆ ದೈವಿಕ ಅನುಸರಣೆ ಇದೆ. ಆದರೆ ಅದನ್ನು ಇಂದು ಹಾಸ್ಯ, ಸಿನಿಮಾ, ರಿಯಾಲಿಟಿ ಷೋ, ಸಿನಿಮಾ, ಮದುವೆಗಳಲ್ಲಿ ಬಳಸಿ ಮೂಲ ಸ್ವರೂಪಕ್ಕೆ ಧಕ್ಕೆ ತರಲಾಗುತ್ತಿದೆ' ಎಂದು ಅವರು ಹೇಳಿದರು.
ಗೋಷ್ಠಿಯ ವಿಡಿಯೊ ಇಲ್ಲಿದೆ:
ತಂತ್ರಜ್ಞಾನ ಬರುವ ಪೂರ್ವದಲ್ಲಿ ಯಕ್ಷಗಾನದ ಚೆಂಡೆಯ ಸದ್ದು ಪಕ್ಕದೂರಿಗೂ ಕೇಳಿಸುತ್ತಿತ್ತು. ದೊಂದಿಯ ಬೆಳಕಲ್ಲಿ ನಡೆಯುತ್ತಿದ್ದ ಪಾತ್ರಧಾರಿಗಳು ಹಾವಭಾವಗಳಿಂದ ನೋಡುಗರನ್ನು ವಿಸ್ಮಯ ಜಗತ್ತಿಗೆ ಕರೆದುಕೊಂಡು ಹೋಗುತ್ತಿದ್ದರು. ಆದರೆ ವಿಪರೀತ ತಂತ್ರಜ್ಞಾನದ ಬಳಕೆಯಿಂದ ಯಕ್ಷಗಾನದ ಪರಿಣಾಮಕಾರಿತ್ವ ಕಡಿಮೆಯಾಗಿದೆ.
ಕರ್ನಾಟಕ ಮಹಿಳಾ ಯಕ್ಷಗಾನದ ಕಾರ್ಯದರ್ಶಿ ಕೆ. ಗೌರಿ, 'ಯಕ್ಷಗಾನದ ಗಂಡು ಕಲೆ ಎನ್ನುವುದಕ್ಕಿಂತ ಶ್ರೇಷ್ಠ ಕಲೆ. ಏಕೆಂದರೆ ಕಲೆ ಇಂಥವರಿಗಷ್ಟೇ ಸೀಮಿತವಾಗಿದೆ ಎಂದು ಎಲ್ಲಿಯೂ ಇಲ್ಲ. ಆದರೆ ಬೇರೆ ಬೇರೆ ವಿಚಾರಗಳಿಗಾಗಿ ಇದನ್ನು ಗಂಡಸರಷ್ಟೇ ಮಾಡಿದ್ದಿರಬಹುದು' ಎಂದರು.
ಯಕ್ಷಗಾನ ಸಂಶೋಧಕ, ಪತ್ರಕರ್ತ ಪೃಥ್ವಿರಾಜ ಕವತ್ತಾರು ಮಾತನಾಡಿ, 'ಯಕ್ಷಗಾನವನ್ನು ಗಂಡು ಕಲೆ ಎಂದರೂ ಹಲವಾರು ಮಹಿಳೆಯರು ಇದನ್ನು ಬೆಳೆಸುವಲ್ಲಿ ಶ್ರಮವಹಿಸಿದ್ದಾರೆ' ಎಂದು ಹೇಳಿದರು.
ಪ್ರಜಾವಾಣಿ ಡಿಜಿಟಲ್ ವಿಭಾಗದ ಸಂಪಾದಕ ಅವಿನಾಶ್ ಬೈಪಾಡಿತ್ತಾಯ ಗೋಷ್ಠಿಯ ಸಮನ್ವಯಕಾರರಾಗಿ ಮಾತನಾಡಿ, 'ಹಿರಿಯರು ಯಕ್ಷಗಾನವನ್ನು ಇಷ್ಟೊಂದು ದೊಡ್ಡಮಟ್ಟಿಗೆ ಕಟ್ಟಿ ಬೆಳೆಸಿದ್ದಾರೆ. ಅದನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿ ನಮ್ಮ ಮೇಲಿದೆ' ಎಂದು ಹೇಳಿದರು. ಜೊತೆಗೆ, ನವ ಮಾಧ್ಯಮಗಳ ಧಾವಂತದಲ್ಲಿ ಯಕ್ಷಗಾನದ ಮೂಲ ಪರಂಪರೆಯನ್ನು ಕಾಪಿಡುವ, ದಾಖಲಿಸುವ ಜವಾಬ್ದಾರಿ ಇದೆ ಎಂದು ಹೇಳಿದರು.
ವಿಧಾನಸಭಾ ಸಭಾಧ್ಯಕ್ಷ ಯು.ಟಿ.ಖಾದರ್ ಸಮಾರಂಭ ಉದ್ಘಾಟಿಸಿದರು. ಕೆ. ಶಿವರಾಮ ಕಾರಂತರ ಪರಿಕಲ್ಪನೆಯ ಯಕ್ಷಗಾನ ಬ್ಯಾಲೆ, ಕಂಸವಧೆ ಇಂಗ್ಲಿಷ್ ಯಕ್ಷಗಾನ, ಅಮೃತಾ ಅಡಿಗ, ಚಿಂತನಾ ಹೆಗ್ಡೆ ಭಾಗವತಿಕೆಯಲ್ಲಿ 'ವೀರ ಅಭಿಮನ್ಯು' ಯಕ್ಷಗಾನ ಪ್ರದರ್ಶನ ನಡೆಯಿತು.
ದೂರದರ್ಶನ, ಆಕಾಶವಾಣಿಯ ನಿರ್ದೇಶಕರಾದ ನಿರ್ಮಲಾ ಎಲಿಗಾರ್, ಅದಮ್ಯ ಚೇತನ ಸಂಸ್ಥೆಯ ಅಧ್ಯಕ್ಷರಾದ ಡಾ. ತೇಜಸ್ವಿನಿ ಅನಂತ್ ಕುಮಾರ್, ಹಿರಿಯ ಪತ್ರಕರ್ತ ಡಾ.ಈಶ್ವರ್ ದೈತೋಟ, ದಕ್ಷಿಣ ಕನ್ನಡ ಸಂಘದ ಅಧ್ಯಕ್ಷರಾದ ರಾಮಚಂದ್ರ ಉಪಾಧ್ಯ, ವಿಕಾಸ್ ಗ್ಲೋಬಲ್ ಸೊಲ್ಯುಷನ್ಸ್ ಅಧ್ಯಕ್ಷರಾದ ಡಿ.ವಿ ವೆಂಕಟಾಚಲಪತಿ, ಜಿ. ಶ್ರೀನಿವಾಸ್ ರಾವ್ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ 14 ಯಕ್ಷಗಾನ ಗುರುಗಳಿಗೆ 'ಕರ್ನಾಟಕ ಯಕ್ಷ ಗುರು ಪ್ರಶಸ್ತಿ' ನೀಡಿ ಗೌರವಿಸಲಾಯಿತು. ಸಂಸ್ಥೆಯ ಸ್ಥಾಪಕರಾದ ಗೌರಿ ಕೆ. ಸ್ವಾಗತಿಸಿದರು.
'ಮಾಮ್' ಅಧ್ಯಕ್ಷ ನವೀನ್ ಅಮ್ಮೆಂಬಳ ಉಪಸ್ಥಿತರಿದ್ದರು. ವಿಜಯ ಕರ್ನಾಟಕದ ಪುರವಣಿ ವಿಭಾಗದ ಮುಖ್ಯಸ್ಥೆ ವಿದ್ಯಾರಶ್ಮಿ ಪೆಲತ್ತಡ್ಕ ಕಾರ್ಯಕ್ರಮ ನಿರೂಪಿಸಿದರು.
Tags:
ಸುದ್ದಿ