![]() |
ಮೂರೂರು ವಿಷ್ಣು ಭಟ್, ಯಕ್ಷಗಾನ ಕಲಾವಿದ |
ಬಡಗು ತಿಟ್ಟು ಯಕ್ಷಗಾನದ ಪ್ರಸಿದ್ಧ ಸ್ತ್ರೀವೇಷಧಾರಿ ಮೂರೂರು ವಿಷ್ಣುಭಟ್ (65) ಭಾನುವಾರ ಉತ್ತರ ಕನ್ನಡದ ಸಿದ್ಧಾಪುರದ ತಾಲೂಕಿನ ಭಾನ್ಕುಳಿಯ ಶ್ರೀರಾಮದೇವ ಮಠದಲ್ಲಿ ನಿಧನ ಹೊಂದಿದರು.
ಗುಂಡಬಾಳ, ಅಮೃತೇಶ್ವರೀ, ಹಿರೇಮಹಾಲಿಂಗೇಶ್ವರ,ಶಿರಸಿ, ಪೆರ್ಡೂರು, ಮಂದಾರ್ತಿ, ಸಾಲಿಗ್ರಾಮ, ಪೂರ್ಣಚಂದ್ರ ಮೇಳಗಳಲ್ಲಿ ನಾಲ್ಕು ದಶಕಗಳಿಂದ ಕಲಾ ಸೇವೆ ಮಾಡಿದ್ದ ಅವರು ಯಕ್ಷಗಾನದಲ್ಲಿ ಸ್ತ್ರೀಪಾತ್ರಗಳಿಗೆ ಜೀವ ತುಂಬಿದ್ದರು.
ಕುಮಟಾ ತಾಲೂಕಿನ ಮೂರೂರಿನ ಗಜಾನನ ಭಟ್ - ಭಾಗೀರಥಿ ದಂಪತಿಯ ಪುತ್ರರಾಗಿದ್ದ ಅವರು ಎಸ್ಸೆಸ್ಸೆಲ್ಸಿ ಬಳಿಕ ಯಕ್ಷಗಾನ ರಂಗಕ್ಕೆ ಪ್ರವೇಶಿಸಿದ್ದರು. ಮೂರೂರು ರಾಮ ಹೆಗಡೆಯವರಲ್ಲಿ ಯಕ್ಷಗಾನ ಅಭ್ಯಸಿಸಿ, ಕರ್ಕಿ ಮೇಳದಲ್ಲಿ ಪಿ.ವಿ.ಹಾಸ್ಯಗಾರರ ಗರಡಿಯಲ್ಲಿ ಪಳಗಿ, ಬಳಿಕ ವಿವಿಧ ಮೇಳಗಳಲ್ಲಿ ಅತ್ಯುತ್ತಮ ಕಲಾವಿದರಾಗಿ ರೂಪುಗೊಳ್ಳುತ್ತಾ ಹೋದರು. ಹಿತಮಿತವಾದ ಕುಣಿತ, ಭಾವಪೂರ್ಣ ಅಭಿನಯ, ಲಾಲಿತ್ಯಪೂರ್ಣ ಹಾವ ಭಾವಗಳಿಂದ ಯಕ್ಷಗಾನ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿದ್ದ ಮೂರೂರು ವಿಷ್ಣು ಭಟ್, ಪುರುಷಪಾತ್ರಗಳಲ್ಲಿಯೂ ಜನಮನ ಸೆಳೆದಿದ್ದರು. ತಾಳಮದ್ದಲೆ ಅರ್ಥಧಾರಿಯಾಗಿಯೂ ಕಲಾರಸಿಕರ ಮನಸೂರೆಗೊಂಡಿದ್ದರು.
ದಾಕ್ಷಾಯಿಣಿ, ಸೀತೆ, ಅಂಬೆ, ಚಂದ್ರಮತಿ, ದಮಯಂತಿ ಮೊದಲಾದ ಪೌರಾಣಿಕ ಪಾತ್ರಗಳಿಗೆ ಜೀಲತುಂಬುತ್ತಾ ಆ ಪಾತ್ರಗಳನ್ನು ಅನನ್ಯವಾಗಿ ಚಿತ್ರಿಸಿದ್ದರು. ತಮ್ಮ ಭಾವಪೂರ್ಣ ಅಭಿನಯ, ಮಾತುಗಾರಿಕೆಯಿಂದ ಅಪಾರ ಸಂಖ್ಯೆಯ ಅಭಿಮಾನಿಗಳ ಪ್ರೀತ್ಯಾದರಕ್ಕೂ ಪಾತ್ರರಾಗಿದ್ದರು.
ಯಕ್ಷಗಾನ ಕಲಾರಂಗ ಪ್ರಶಸ್ತಿ,,ಪದ್ಮಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆ ಪ್ರಶಸ್ತಿ ಸೇರಿದಂತೆ ಹಲವು ಪುರಸ್ಕಾರಗಳಿಗೆ ಮೂರುರು ವಿಷ್ಣು ಭಟ್ ಅವರು ಭಾಜನರಾಗಿದ್ದರು. ಅವರು ಪತ್ನಿ, ಪುತ್ರನನ್ನು ಅಗಲಿದ್ದಾರೆ. ಅವರ ನಿಧನಕ್ಕೆ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ.ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ಸಂತಾಪ ವ್ಯಕ್ತಪಡಿಸಿದ್ದಾರೆ.
ನಿಧನದ ಸುದ್ದಿಗೆ ಯಕ್ಷಗಾನ ರಂಗದ ಕಲಾವಿದರು, ಒಡನಾಡಿಗಳು ಹಾಗೂ ಅಭಿಮಾನಿಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.