![]() |
ಮಿಜಾರು ಮೋಹನ ಶೆಟ್ಟಿಗಾರ್ |
1952ರ ಮೇ 6ರಂದು ಮಿಜಾರಿನ ನಾರಾಯಣ ಶೆಟ್ಟಿಗಾರ್ -ಗೌರಮ್ಮ ದಂಪತಿಯ ಪುತ್ರರಾಗಿ ಬಡಗ ಎಡಪದವಿನ ಮಂಜನಕಟ್ಟೆ ಎಂಬಲ್ಲಿ ಜನಿಸಿದ ಮಿಜಾರು ಮೋಹನ ಶೆಟ್ಟಿಗಾರರು 15ನೇ ವಯಸ್ಸಿನಲ್ಲೇ ಗುರುಪುರ ಅಣ್ಣಿ ಗೌಡರಲ್ಲಿ ಚೆಂಡೆ-ಮದ್ದಳೆ ಅಭ್ಯಾಸ ಪ್ರಾರಂಭಿಸಿ, ಯಕ್ಷಗಾನ ರಂಗಕ್ಕೆ ಕಾಲಿಟ್ಟಿದ್ದರು.
ಕುಲಕಸುಬಾದ ನೇಕಾರಿಕೆಯನ್ನೂ ಮುಂದುವರಿಸಿಕೊಂಡು ಹಲವು ಮೇಳಗಳಿಗೆ ಚೆಂಡೆ-ಮದ್ದಲೆ ವಾದಕರಾಗಿ ಹೋಗುತ್ತಿದ್ದ ಮೋಹನ್ ಶೆಟ್ಟಿಗಾರರು, 1982ರಲ್ಲಿ ಕಟೀಲು ಮೂರನೇ ಮೇಳ ಆರಂಭವಾದಾಗ, ಮೇಳ ಸೇರಿ ಭಾಗವತರಾದ ಕುರಿಯ ಗಣಪತಿ ಶಾಸ್ತ್ರಿ ಹಾಗೂ ಮದ್ದಲೆವಾದಕ, ಗುರು ನೆಡ್ಲೆ ನರಸಿಂಹ ಭಟ್ ಅವರ ಸಹಕಾರದಲ್ಲಿ ಪಳಗಲಾರಂಭಿಸಿದರು. ಆ ಕಾಲದಲ್ಲಿ ಚೌಕಿ ಪೂಜೆಗೆ ಮದ್ದಲೆ ಹಿಡಿದರೆ ಮರುದಿನ ಬೆಳಗ್ಗೆಯೇ ಕೆಳಗಿಡುವ ಕಾಯಕ. ಈ ಸಂದರ್ಭದಲ್ಲಿ ಕುರಿಯ ಹಾಗೂ ನೆಡ್ಲೆಯವರ ಗರಡಿಯಲ್ಲಿ ಪಳಗಿದ ಶೆಟ್ಟಿಗಾರರು, ಹಿಮ್ಮೇಳದ ನೈಪುಣ್ಯ ಸಾಧಿಸತೊಡಗಿದರು.
ಕಟೀಲು ಮೇಳದ ಬಳಿಕ ಕಲ್ಲಾಡಿ ವಿಠಲ ಶೆಟ್ಟರದೇ ಯಾಜಮಾನ್ಯದ ಕರ್ನಾಟಕ ಮೇಳಕ್ಕೆ ಸೇರ್ಪಡೆಯಾದ ಶೆಟ್ಟಿಗಾರರು, ಅಲ್ಲಿಯೂ ಯಕ್ಷಗಾನದ ದಿಗ್ಗಜ ಕಲಾವಿದರೊಂದಿಗಿನ ಸಹಯೋಗದಿಂದಾಗಿ ಬೆಳೆಯುತ್ತಾ ಹೋದರು. ದಿ.ದಾಮೋದರ ಮಂಡೆಚ್ಚರ ಸಂಗೀತಭರಿತವಾದ ಹಾಡುಗಾರಿಕೆಗೆ ಇವರ ಮದ್ದಲೆಯ ನುಡಿತಗಳೂ ಬೆರೆಯಲಾರಂಭಿಸಿ, ಇವರ ವಾದನದ ಶೈಲಿಯು ಕರ್ಣಾನಂದಕರವಾಗುತ್ತಾ ಹೋಯಿತು.
ಬೊಟ್ಟಿಕೆರೆ ಪುರುಷೋತ್ತಮ ಪೂಂಜ, ದಿನೇಶ ಅಮ್ಮಣ್ಣಾಯರ ಜತೆಗಿನ ತಿರುಗಾಟವು ಅವರೊಳಗಿನ ಪ್ರತಿಭೆಗೆ ಮತ್ತಷ್ಟು ಅನುಕೂಲ ಕಲ್ಪಿಸಿತು. 1990ರಲ್ಲಿ ಮೇಳಗಳನ್ನು ಬಿಟ್ಟು ಕುಲಕಸುಬಿನಲ್ಲಿ ತೊಡಗಿಕೊಂಡರಾದರೂ, 1992ರಲ್ಲಿ ಪುನಃ ಕಲ್ಲಾಡಿ ವಿಠಲ ಶೆಟ್ಟರ ಒತ್ತಾಯಕ್ಕೆ ಮಣಿದು, ಮರಳಿ ಕಟೀಲು 1ನೇ ಮೇಳಕ್ಕೆ ಸೇರ್ಪಡೆಯಾದರು. ಬಳಿಕ 4ನೇ ಮೇಳ ಶುರುವಾದಾಗ ಭಾಗವತರಾಗಿದ್ದ ಕುಬಣೂರು ಶ್ರೀಧರ ರಾವ್ ಅವರೊಂದಿಗೆ ಹಿಮ್ಮೇಳಕ್ಕೆ ಜೊತೆಯಾದರು.
ಹಿಮ್ಮೇಳ ವಾದನದ ಘಾತ ಪೆಟ್ಟು, ಹುಸಿ ಪೆಟ್ಟು, ಮೆಲು ನುಡಿಯ ಕಣತ್ಕಾರ, ದಸ್ತು ಪೆಟ್ಟು - ಇವೆಲ್ಲವನ್ನೂ ಕರಗತ ಮಾಡಿಕೊಂಡ ಶೆಟ್ಟಿಗಾರರು ಅವುಗಳನ್ನು ಆಯಾ ಸಂದರ್ಭಕ್ಕೆ ತಕ್ಕಂತೆ ಬಳಸುತ್ತಾ, ತಮ್ಮ ವಾದನವೈಖರಿಗೆ ಶ್ರವಣಸುಖವನ್ನು ಲೇಪಿಸುತ್ತಾ ಹೋದರು. ಇಷ್ಟೇ ಅಲ್ಲ, ಶೆಟ್ಟಿಗಾರರು ಸುದೀರ್ಘ ತಿರುಗಾಟದ ಅವಧಿಯಲ್ಲಿ, ವಿಶೇಷವಾಗಿ ಕಟೀಲು ಮೇಳದಲ್ಲಿ ಹಿರಿಯ ಕಲಾವಿದರ ಒಡನಾಟದಿಂದಾಗಿ, ಯಕ್ಷಗಾನದ ಪರಂಪರೆಯ ಕುಣಿತಗಳು, ಪಾತ್ರೋಚಿತವಾದ ಪ್ರವೇಶದ ಗತಿ, ಲಯಗಳು, ಒಡ್ಡೋಲಗದ ವೈವಿಧ್ಯ, ಹನುಮಂತ, ಕಿರಾತರ ಪ್ರವೇಶ, ರಾಮ, ಕೃಷ್ಣ ಒಡ್ಡೋಲಗ ಇತ್ಯಾದಿಗಳ ಬಗ್ಗೆ ಅಪಾರ ಅನುಭವವನ್ನು ಪಡೆದು ಜ್ಞಾನ ಭಂಡಾರವಾಗಿದ್ದಾರೆ.
ಯಕ್ಷಗಾನದ ಪರಂಪರೆಯ ಸಂರಕ್ಷಣೆಯಲ್ಲಿ ಮಹತ್ವದ ಪಾತ್ರ ಇವರದು. ಕೇಳಿದವರಿಗೆಲ್ಲ ಅನುಭವವನ್ನು ಧಾರೆಯೆರೆಯುವ ನಿಷ್ಕಲ್ಮಷ, ಸರಳ ವ್ಯಕ್ತಿತ್ವದ ಸದ್ಗುಣ ಸಂಪನ್ನ ಇವರು. ಕಟೀಲಿನ ಶ್ರೀದುರ್ಗಾ ಮಕ್ಕಳ ಮೇಳ ಪುರಸ್ಕಾರ, ಅರುವ ಪ್ರಶಸ್ತಿ, ಕಡಬ ಸಂಸ್ಮರಣಾ ಪ್ರಶಸ್ತಿ, ಕಲ್ಲಾಡಿ ವಿಠಲ ಶೆಟ್ಟಿ ಪುರಸ್ಕಾರಗಳು ಇವರಿಗೆ ಅರ್ಹವಾಗಿಯೇ ಸಂದಿವೆ.
ಪತ್ನಿ ಮೀನಾಕ್ಷಿ ಹಾಗೂ ಪುತ್ರ ಜಗದೀಶ್ ಶೆಟ್ಟಿಗಾರ್ (ಕಟೀಲು ಮೇಳದ ಹಿಮ್ಮೇಳ ಕಲಾವಿದ), ಪುತ್ರಿ ಲಾವಣ್ಯ ಒಳಗೊಂಡ ಸಂಸಾರ ಅವರದು. ಪ್ರಸ್ತುತ ಈಗ ಕುಲ ಕಸುಬಿನಲ್ಲಿ ತೊಡಗಿಸಿಕೊಂಡಿರುವ ಮೋಹನ ಶೆಟ್ಟಿಗಾರ್, ಹಲವು ಶಿಷ್ಯರನ್ನೂ ತಯಾರು ಮಾಡಿದ್ದಾರೆ, ಮಾಡುತ್ತಿದ್ದಾರೆ.
ಕಟೀಲು ಮೇಳದಲ್ಲಿ ಒಟ್ಟು 37 ವರ್ಷ ಹಾಗೂ ಕರ್ನಾಟಕ ಮೇಳದಲ್ಲಿ 9 ವರ್ಷ ತಿರುಗಾಟದ ಅನುಭವದೊಂದಿಗೆ ಯಕ್ಷಗಾನದ ಅಮೂಲ್ಯ ಆಸ್ತಿಯಾಗಿರುವ ಮೋಹನ ಶೆಟ್ಟಿಗಾರ್ ಅವರಿಗೆ 3ನೇ ವರ್ಷದ ಶ್ರೀಹರಿಲೀಲಾ ಯಕ್ಷನಾದ ಪ್ರಶಸ್ತಿ-2023 ನೀಡಲು ಹೆಮ್ಮೆಯೆನಿಸುತ್ತದೆ ಎಂದು ಅ.13ರಂದು ಮಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹರಿನಾರಾಯಣ ಬೈಪಾಡಿತ್ತಾಯ, ಲೀಲಾವತಿ ಬೈಪಾಡಿತ್ತಾಯ ತಿಳಿಸಿದ್ದಾರೆ.