ಮಂಗಳೂರು: ಯಕ್ಷಗಾನ ರಂಗದ ವಿಶಿಷ್ಟ ಗುರು ದಂಪತಿ ಶ್ರೀ ಹರಿನಾರಾಯಣ ಬೈಪಾಡಿತ್ತಾಯ ಹಾಗೂ ಶ್ರೀಮತಿ ಲೀಲಾವತಿ ಬೈಪಾಡಿತ್ತಾಯ ಅವರ ಹೆಸರಿನಲ್ಲಿ ಸ್ಥಾಪನೆಗೊಂಡಿರುವ ಡಿಜಿ ಯಕ್ಷ ಫೌಂಡೇಶನ್ (ರಿ) ವತಿಯಿಂದ, 2023ರ "ಶ್ರೀ ಹರಿಲೀಲಾ ಯಕ್ಷನಾದ ಪ್ರಶಸ್ತಿ" ಗೆ ಹಿರಿಯ ಹಿಮ್ಮೇಳವಾದಕ ಮಿಜಾರು ಮೋಹನ ಶೆಟ್ಟಿಗಾರ್ ಅವರು ಆಯ್ಕೆಯಾಗಿದ್ದಾರೆ ಎಂದು ಡಿಜಿ ಯಕ್ಷ ಫೌಂಡೇಶನ್ ನಿರ್ದೇಶಕ ಅವಿನಾಶ್ ಬೈಪಾಡಿತ್ತಾಯ ತಿಳಿಸಿದರು.
ನಮ್ಮ ಯಕ್ಷಗಾನ.ಇನ್ ವಾಟ್ಸ್ಆ್ಯಪ್ ಚಾನೆಲ್ ಸೇರಿಕೊಳ್ಳಿ.
ಶುಕ್ರವಾರ (ಅ.13) ಮಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ವಿವರ ನೀಡಿದರು. ತೃತೀಯ ವರ್ಷದ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು 2023 ನ.19ರ ಭಾನುವಾರ ಮಧ್ಯಾಹ್ನ 2 ಗಂಟೆಯಿಂದ ಕುಡುಪು ಶ್ರೀ ಅನಂತಪದ್ಮನಾಭ ಕ್ಷೇತ್ರದಲ್ಲಿ ನಡೆಯಲಿದೆ. ₹10,077 ಮೊತ್ತದ ಚೆಕ್ ಸಹಿತ 2023ನೇ ಸಾಲಿನ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಮೊದಲೆರಡು ವರ್ಷಗಳಲ್ಲಿ ಹಿರಿಯ ಮದ್ದಳೆಗಾರರಾದ ಲಕ್ಷ್ಮೀಶ ಅಮ್ಮಣ್ಣಾಯ ಹಾಗೂ ಪೆರುವಾಯಿ ನಾರಾಯಣ ಭಟ್ ಅವರಿಗೆ ಹರಿಲೀಲಾ ಯಕ್ಷನಾದ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.
ವೇದಮೂರ್ತಿ ಶ್ರೀ ಕುಡುಪು ನರಸಿಂಹ ತಂತ್ರಿಗಳು ದೀಪೋಜ್ವಲನ ಮಾಡಿ ಆಶೀರ್ವಚನ ನೀಡುವರು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯಕ್ಷಗಾನದ ಹಿರಿಯ ವಿದ್ವಾಂಸ ಪ್ರೊ.ಎಂ.ಎಲ್.ಸಾಮಗ ಅವರು ವಹಿಸಲಿದ್ದು, ಮುಖ್ಯ ಅಭ್ಯಾಗತರಾಗಿ ಯಕ್ಷಗಾನ ಪೋಷಕ, ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಆಗಮಿಸುವರು.
ಪಂಚಮೇಳಗಳ ಯಜಮಾನ, ಯಕ್ಷಗಾನ ಅಕಾಡೆಮಿ ಮಾಜಿ ಸದಸ್ಯ ಪಳ್ಳಿ ಕಿಶನ್ ಹೆಗ್ಡೆ, ಉಡುಪಿ ಯಕ್ಷಗಾನ ಕಲಾರಂಗದ ಮುರಳಿ ಕಡೆಕಾರ್ ಅವರು ಅತಿಥಿಗಳಾಗಿ ಉಪಸ್ಥಿತರಿರುವರು.
ಮಿಜಾರು ಮೋಹನ ಶೆಟ್ಟಿಗಾರರ ಬಗ್ಗೆ (ಕ್ಲಿಕ್ ಮಾಡಿ)
ತಾಳಮದ್ದಲೆ, ಯಕ್ಷಗಾನ
ಸಭಾ ಕಾರ್ಯಕ್ರಮಕ್ಕೆ ಮುನ್ನ, ಗಿರೀಶ್ ರೈ ಕಕ್ಕೆಪದವು, ಶಾಲಿನಿ ಹೆಬ್ಬಾರ್ ಹಾಗೂ ಬೈಪಾಡಿತ್ತಾಯರ ಇತರ ಶಿಷ್ಯವೃಂದದ ಹಿಮ್ಮೇಳದೊಂದಿಗೆ ಎಂ.ಎಲ್.ಸಾಮಗ, ಗಣರಾಜ ಕುಂಬಳೆ ಹಾಗೂ ಅನಂತ ಬೈಪಾಡಿತ್ತಾಯರ ಮುಮ್ಮೇಳದೊಂದಿಗೆ ತಾಳಮದ್ದಲೆ ಶ್ರೀರಾಮ ದರ್ಶನ (ಕವಿ ಹಲಸಿನಹಳ್ಳಿ ನರಸಿಂಹ ಶಾಸ್ತ್ರಿ ವಿರಚಿತ ಜಾಂಬವತಿ ಕಲ್ಯಾಣ ಪ್ರಸಂಗದ ಭಾಗ) ಪ್ರದರ್ಶನಗೊಳ್ಳಲಿದೆ.
ಯಕ್ಷಗಾನ.ಇನ್ ಅಪ್‌ಡೇಟ್ಸ್ ಪಡೆಯಲು ಫೇಸ್‌ಬುಕ್ | ಟ್ವಿಟರ್ | ಯೂಟ್ಯೂಬ್ | ಇನ್‌ಸ್ಟಾಗ್ರಾಂ ಫಾಲೋ ಮಾಡಿ.
ಸಭಾ ಕಾರ್ಯಕ್ರಮದ ನಂತರ, ಶ್ರೀಶ ಕಲಿಕಾ ಕೇಂದ್ರ, ತಲಕಳ-ಬಜಪೆ ಇದರ ವಿದ್ಯಾರ್ಥಿಗಳಿಂದ, ಗುರು ಕರ್ಗಲ್ಲು ವಿಶ್ವೇಶ್ವರ ಭಟ್ ನಿರ್ದೇಶನದಲ್ಲಿ ಯಕ್ಷಗಾನ ಪ್ರಸಂಗ, ಕವಿ ಗೇರುಸೊಪ್ಪೆ ಶಾಂತಪ್ಪಯ್ಯ ವಿರಚಿತ "ಕರ್ಣಾರ್ಜುನ ಕಾಳಗ" ಅಪರೂಪದ ಪರಂಪರೆಯ ರಂಗನಡೆಗಳೊಂದಿಗೆ ನಡೆಯಲಿದೆ.
ಪ್ರವೇಶ ಉಚಿತವಾಗಿದ್ದು, ಡಿಜಿ ಯಕ್ಷ ಫೌಂಡೇಶನ್ ಗೌರವಾಧ್ಯಕ್ಷರಾದ ಹರಿನಾರಾಯಣ ಬೈಪಾಡಿತ್ತಾಯ ಹಾಗೂ ಲೀಲಾವತಿ ಬೈಪಾಡಿತ್ತಾಯ ಅವರು ಎಲ್ಲ ಯಕ್ಷಗಾನ ಕಲಾಭಿಮಾನಿಗಳಿಗೆ ಆದರದ ಸ್ವಾಗತ ಕೋರಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಹರಿನಾರಾಯಣ ಬೈಪಾಡಿತ್ತಾಯ, ಲೀಲಾವತಿ ಬೈಪಾಡಿತ್ತಾಯ, ಪ್ರಶಸ್ತಿ ಪ್ರದಾನ ಸಮಿತಿ ಅಧ್ಯಕ್ಷ ಚಂದ್ರಶೇಖರ ಕೊಂಕಣಾಜೆ, ಕಾರ್ಯದರ್ಶಿಗಳಾದ ಆನಂದ ಗುಡಿಗಾರ್ ಕೆರ್ವಾಶೆ ಹಾಗೂ ಮೈತ್ರಿ ಉಡುಪ ಕತ್ತಲ್‌ಸಾರ್ ಅವರು ಉಪಸ್ಥಿತರಿದ್ದರು.