ಯಕ್ಷಗಾನ ಉಳಿಸೋಣ: ಯಾವ ಶಾಸ್ತ್ರವಿದೆ ಎಂಬ ಉಡಾಫೆ ಬೇಡ, ಟೆಂಟ್ ಮೇಳಗಳ ಅವನತಿ ಕಣ್ಣ ಮುಂದಿದೆ!

ಯಕ್ಷಗಾನ
ಯಕ್ಷಗಾನದ ಈ ಭವ್ಯ ಪರಂಪರೆ ರಕ್ಷಿಸೋಣ. (ಪ್ರಾತಿನಿಧಿಕ ಚಿತ್ರ).
ಇದು ಯಕ್ಷಗಾನದ ಉಳಿವಿನ ಬಗೆಗೆ ಇರುವ ನೈಜ ಕಾಳಜಿಯ ಲೇಖನ. ಈಗಾಗಲೇ ಸುಪುಷ್ಟವಾಗಿರುವ ಯಕ್ಷಗಾನಕ್ಕೆ ಆಕರ್ಷಣೆ-ಸುಧಾರಣೆ ನೆಪದಲ್ಲಿ ಹೊರಗಿನ ಸರಕೆಲ್ಲವೂ ಬರುತ್ತಿದ್ದು, ಯಕ್ಷಗಾನವು ಯಕ್ಷಗಾನವಾಗಿ ಉಳಿಯುತ್ತಿಲ್ಲ. ಬದಲಾಗಿ, ಜಾನಪದ, ಕೋಲಾಟ, ಗೀಗೀ ಪದ, ಸಿನಿಮಾ, ಭಾವಗೀತೆ, ಶಾಸ್ತ್ರೀಯ ಸಂಗೀತ - ಇವುಗಳ ಅನರ್ಥಕಾರಿ ಆಡುಂಬೊಲವಾಗುತ್ತಿದೆ. ಈ ಬಗ್ಗೆ ಯಕ್ಷಗಾನ ಕಲಾವಿದರು, ತಪ್ಪು-ಒಪ್ಪುಗಳನ್ನು ಪರಾಮರ್ಶಿಸಿ, ನಿಮ್ಮ ಅನಿಸಿಕೆ ತಿಳಿಸಿ. ಇದು ಯಕ್ಷಗಾನ ಉಳಿಸುವ ಕಾಳಜಿ. ಬನ್ನಿ ಕೈಜೋಡಿಸೋಣ.
-ಸಂಪಾದಕರು, ಯಕ್ಷಗಾನ.ಇನ್

ಲೇಖನ: ಸುರೇಂದ್ರ ಪಣಿಯೂರು

ಯಕ್ಷಗಾನ ಕಲೆಯನ್ನು ಬಳಸಿಕೊಂಡು ಕುಲಗೆಡಿಸಿದಷ್ಟು ಇನ್ಯಾವ ಕಲೆಯನ್ನೂ ಆ ಮಟ್ಟದಲ್ಲಿ ಬಳಸಿಕೊಂಡಿಲ್ಲ ಅನ್ನುವುದು ಕಟು ವಾಸ್ತವ.

ಸುಧಾರಣೆ ಹಾಗೂ ಆಕರ್ಷಣೆ ಎಂಬ ನೆವನದಲ್ಲಿ ರಂಗದಲ್ಲಿ ಏನೆಲ್ಲಾ ಸುಧಾರಣೆಗಳು ಮಾಡಬೇಕೋ ಅದೆಲ್ಲವನ್ನೂ ಮಾಡಿ ಮುಗಿಸಿದ ಧನ್ಯತೆ ನಮ್ಮದು. ಈ  ರೀತಿಯ ಸುಧಾರಣೆಯಲ್ಲಿ 60% ಸುಧಾರಣೆಗಳು ರಂಗಕ್ಕೆ ಬೇಡದಿದಿರುವ ಸುಧಾರಣೆಯೇ ಆದದ್ದು ಅನ್ನಲು ಯಾವ ರೀತಿಯ ಸಮಜಾಯಿಷಿಯನ್ನೂ ಕೊಡುವ ಅಗತ್ಯ ಇಲ್ಲ ಅನಿಸುತ್ತದೆ.
 
ಇದರ ಸ್ಥೂಲ ನೋಟದಲ್ಲಿ ಕಂಡ ವಿಚಾರಗಳಾಗಿ....

ಹಿಮ್ಮೇಳದಲ್ಲಿ ಭಾಗವತ ತನ್ನ ಜವಾಬ್ದಾರಿ ಮರೆತು ಗಾಯಕನಾದದ್ದು. ಅವನದ್ಧ ವಾದ್ಯಗಳು ಗಾಯಕನ ಧ್ವನಿಯನ್ನು ಅತಿಕ್ರಮಿಸಿ ಸಾಗಿದ್ದು ಒಂದು ವಿಭಾಗವಾದರೆ...
ಮುಮ್ಮೇಳದಲ್ಲಿ ಸಿನಿಮಾ ಕಂಪನಿ, ನಾಟಕ ಕಂಪನಿ, ಸರ್ಕಸ್ ಕಂಪನಿ ಮುಂತಾದ ಎಲ್ಲಾ ಕಂಪನಿಗಳು ಉಪಯೋಗಿಸಿ ಬಿಸಾಡಿದ ಅಷ್ಟೂ ಆಹಾರ್ಯಗಳನ್ನು ಯಕ್ಷಗಾನದ ವೇಷಗಾರಿಕೆಗೆ ಮುಜುಗರವಿಲ್ಲದೆ ಹೇರಿಕೊಂಡು ವಿಜೃಂಭಿಸಿದ ಪಾವನೀಯ ಭಾವ ನಮ್ಮದು.

ಇನ್ನು ಅಭಿನಯದಲ್ಲಿ ವಾಚಿಕಾಭಿನಯ, ಸಾತ್ವಿಕಾಭಿನಯ ಮರೆತು ಆಂಗಿಕಾಭಿನಯಕ್ಕೆ ಜೋತು ಬಿದ್ದ ಧನ್ಯತೆ ನಮ್ಮದು. ಇವೆಲ್ಲವೂ ಕಲೆ ಬಯಸಿದ ಸುಧಾರಣೆಗಳಲ್ಲ! ನಾವು ಆಗ್ರಹಿಸಿ ಕೊಟ್ಟ ಸುಧಾರಣೆಗಳು!

ಯಾಕಂದರೆ ಕಲೆ ಬಯಸಿದ ಸುಧಾರಣೆಯಾಗಿದ್ದಲ್ಲಿ ಈಗ ಅಧಿಕೃತವಾಗಿ ತೆಂಕು, ಬಡಗಿನ 14 ಹರಕೆ ಮೇಳಗಳು ಸುಮಾರು 2042ನೇ ಇಸವಿ ತನಕ ಸಂದು ಬಿಡದ ಹರಕೆ ಆಟವನ್ನು ಮುಂಗಡವಾಗಿ ನೋಂದಾಯಿಸಿಕೊಳ್ಳುತ್ತಿರಲಿಲ್ಲ... ಇದು ಕಲೆಯು ಸಾಗಿದ ಆರಾಧನೆಯ ಗುಣ.

ಯಕ್ಷಗಾನ.ಇನ್ ಅಪ್‌ಡೇಟ್ಸ್ ಪಡೆಯಲು ಫೇಸ್‌ಬುಕ್ | ಟ್ವಿಟರ್ | ಯೂಟ್ಯೂಬ್ ಇನ್‌ಸ್ಟಾಗ್ರಾಂ ಫಾಲೋ ಮಾಡಿ.

ಮೇಳಗಳು ಕಣ್ಣು ಮುಚ್ಚಿದ್ದೇ ನಮಗೆ ಸಿಕ್ಕಿದ ಸ್ಪಷ್ಟ ನಿರ್ದೇಶನ
ಅದೇ ರೀತಿಯಲ್ಲಿ ವ್ಯಾಪಾರಿ ಮನೋಭಾವದ ತೆಂಕು ಬಡಗಿನ ಸುಮಾರು 25 ಡೇರೆ ಮೇಳಗಳು ಸುಧಾರಣೆ-ಆಕರ್ಷಣೆಯನ್ನು ಒದಗಿಸಿ 70- 80ರ ದಶಕದಲ್ಲಿ ಉಜ್ಜಾಯ ಸ್ಥಿತಿಯನ್ನು ಕಂಡೂ ಈಗ ಕೇವಲ ಬಡಗಿನ ಎರಡು ಮೇಳಗಳಿಗೆ ಸೀಮಿತಗೊಂಡು ಅವುಗಳು ಕೂಡ ಏದುಸಿರು ಬಿಡುತ್ತಿರುವುದು ಸಕಾಲಿಕ.

ಹಾಗಾದರೆ ಯಕ್ಷಗಾನದಲ್ಲಿ ನವ್ಯೋತ್ತರ ಸುಧಾರಣೆಗಳಿಗೆ ಆಶ್ರಯ ಇಲ್ಲ ಎಂಬುದು ಸುಷ್ಪಷ್ಟವಾಯ್ತಲ್ಲ....

ಇವೆಲ್ಲವನ್ನೂ ಗಮನಿಸಿದಾಗ ಯಕ್ಷಗಾನವನ್ನು ನಾವು ಯಾವ ರೀತಿ ಬಳಸಿಕೊಳ್ಳಬೇಕು ಅನ್ನುವುದರ ಬಗ್ಗೆ ನಮಗೆ ಐವತ್ತು ವರ್ಷಗಳ ದೀರ್ಘಕಾಲದಲ್ಲಿ ಸ್ಪಷ್ಟ ನಿರ್ದೇಶನ ಸಿಕ್ಕಿದೆ ಅಂತಾಯಿತು. ಹಾಗಾದರೆ ಯಕ್ಷಗಾನದ ಆಹಾರ್ಯ, ಆಚರಣೆಗಳಲ್ಲಿ ಆಗಿರುವ ಅಪಸವ್ಯಗಳನ್ನು ಒಪ್ಪಿಕೊಳ್ಳುವ ಕೀಳು ಅಭಿರುಚಿ ನಮಗೆ ಯಾಕೆ?
 
ಶಾಸ್ತ್ರ ಎಲ್ಲಿದೆ ಎಂದು ಪ್ರಶ್ನಿಸುತ್ತಾರೆ!
ಎಲ್ಲಾ ವಿಚಾರಗಳನ್ನು ವಿಮರ್ಶೆ ಮಾಡಿ ಖಂಡಿಸಲು ಇರುವ ಏಕೈಕ ತೊಡಕು ಏನೆಂದರೆ ಯಕ್ಷಗಾನಕ್ಕೆ ಇದಮಿತ್ಥಂ ಎಂದು ಹೇಳುವ ಲಕ್ಷಣ ಇಲ್ಲದಿರುವುದು ಅನ್ನುವ ಒಂದು ಕೂಗು. ನೇರ ಮಾತಿನಲ್ಲಿ ಹೇಳುವುದಿದ್ದರೆ "ನಮಗೆ ತಿಳಿದ ಹಾಗೆ ಮಾಡುತ್ತೇವೆ, ಇದು ಹೀಗೇ ಮಾಡಬೇಕು ಅಂತ ಹೇಳಲು ಯಾವ ಶಾಸ್ತ್ರ ಇದೆ? ಹೇಳುವವರು ನೀವು ಯಾರು? ನಿಮಗೇನು ಗೊತ್ತಿದೆ?" ಎನ್ನುವ ಉಡಾಫೆ ಉತ್ತರ.

ಅದಕ್ಕೆ ಉತ್ತರವಾಗಿ... ಶಾಸ್ತ್ರ ಲಕ್ಷಣವಿಲ್ಲದೆ  ದಾರಿ ಬದಿಯಲ್ಲಿ ಬಿದ್ದುಕೊಂಡಿದ್ದ ಯಕ್ಷಗಾನವನ್ನು ಯಾರೂ ನೇರವಾಗಿ ಎತ್ತಿಕೊಂಡು ಬಂದು ರಂಗಪ್ರದರ್ಶನ ಮಾಡಿದ್ದು ಖಂಡಿತ ಅಲ್ಲ...ಅದಕ್ಕೊಂದು ದೇಸಿ ಶಾಸ್ತ್ರ ಇದೆ.

ಎಲ್ಲ ಕಲಾವಿದರಿಗೂ ಉತ್ತರದಾಯಿತ್ವವಿದೆ
ಯಕ್ಷಗಾನ ಕಲೆಯ ಮೂಲಕ ಆರ್ಥಿಕ ಗಳಿಕೆಯನ್ನು ಪಡೆದು ಉಪಕೃತರಾದ ಸರ್ವರಿಗೂ ಯಕ್ಷಗಾನ ಕಲೆಯ ಅಸ್ಮಿತೆಯನ್ನು ಉಳಿಸುವ ಉತ್ತರದಾಯಿತ್ವ ಇದೆ. ಅದರ ಶಾಸ್ತ್ರ ಅಲಿಖಿತವಾಗಿರಬಹುದು, ಆದರೆ ಅಸಂಸ್ಕೃತಿಯಲ್ಲ.

ಇಷ್ಟೆಲ್ಲಾ ಬರೆಯುವ ಹಿಂದಿನ ಉದ್ದೇಶ ಇತ್ತೀಚಿನ ಯಕ್ಷಗಾನ ಕಲಾಭಿವ್ಯಕ್ತಿಯ ನಡವಳಿಕೆ. ರಂಗದಲ್ಲಿ ತಾವೇನು ಮಾಡಿದರೂ ನಡೆಯುತ್ತದೆ ಎನ್ನುವ ಒಂದು ದಾರ್ಷ್ಟ್ಯ ಭಾವಕ್ಕೆ ನೇರ ಉತ್ತರ ನಮ್ಮ ಕಣ್ಣೆದುರಿಗೆ ಇದೆ, ಅದುವೇ ಟೆಂಟ್ ಮೇಳಗಳ ಅವನತಿ. ಪರ್ಯಾಯವಾಗಿ ಈ ಕಲೆಯಿಂದ ಪ್ರಯೋಜನ ಪಡೆಯುವ ದಾರಿ ವಿಪುಲವಾಗಲು ಕಾರಣ ಹರಕೆ ಮೇಳಗಳ ಸಂಖ್ಯಾಭಿವೃದ್ಧಿ. ಹಾಗಾಗಿ ಇಲ್ಲಿರುವ ಮೂಲ ಧ್ಯೇಯ ಆರಾಧನೆಯೇ ಹೊರತು ತಾತ್ಕಾಲಿಕ ಸರ್ಕಸ್ ಗಿಮಿಕ್ ಅಲ್ಲ ಅನ್ನೋದು ಸ್ಪಷ್ಟವಾಗಿ ನಾವು ತಿಳಿದಿರಬೇಕು.

ಯಕ್ಷಗಾನ ಉಳಿಯಲಿ
ಕಲೆಯ ಮರ್ಯಾದೆ ಉಳಿಸುವ
-ಸುರೇಂದ್ರ ಪಣಿಯೂರು

ಇದು ಯಕ್ಷಗಾನದ ಉಳಿವಿನ ಬಗೆಗೆ ಇರುವ ನೈಜ ಕಾಳಜಿಯ ಲೇಖನ. ಈಗಾಗಲೇ ಸುಪುಷ್ಟವಾಗಿರುವ ಯಕ್ಷಗಾನಕ್ಕೆ ಹೊರಗಿನ ಸರಕೆಲ್ಲವೂ ಬರುತ್ತಿದ್ದು, ಯಕ್ಷಗಾನವು ಯಕ್ಷಗಾನವಾಗಿ ಉಳಿಯುತ್ತಿಲ್ಲ. ಬದಲಾಗಿ, ಜಾನಪದ, ಕೋಲಾಟ, ಗೀಗೀ ಪದ, ಸಿನಿಮಾ, ಭಾವಗೀತೆ, ಶಾಸ್ತ್ರೀಯ ಸಂಗೀತ - ಇವುಗಳ ಅನರ್ಥಕಾರಿ ಆಡುಂಬೊಲವಾಗುತ್ತಿದೆ. ಈ ಬಗ್ಗೆ ಯಕ್ಷಗಾನ ಕಲಾವಿದರು, ತಪ್ಪು-ಒಪ್ಪುಗಳನ್ನು ಪರಾಮರ್ಶಿಸಿ, ನಿಮ್ಮ ಅನಿಸಿಕೆ ತಿಳಿಸಿ. ಇದು ಯಕ್ಷಗಾನ ಉಳಿಸುವ ಕಾಳಜಿ. ಬನ್ನಿ ಕೈಜೋಡಿಸೋಣ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು