ಪೊಲ್ಯ ಲಕ್ಷ್ಮೀನಾರಾಯಣ ಶೆಟ್ಟರಿಗೆ ಕಡಬದ್ವಯ ಸಂಸ್ಮರಣಾ ಪ್ರಶಸ್ತಿ: ಅ.29ರಂದು ಮುಂಬಯಿಯಲ್ಲಿ ಪ್ರದಾನ


ಮಂಗಳೂರು: ಯಕ್ಷಗಾನದ ಹಿಮ್ಮೇಳದಲ್ಲಿ ಅದ್ಭುತ ರಸಸೃಷ್ಟಿಯ ಮೂಲಕ ಜನಮನ ಸೆಳೆದು ಅಲ್ಪಾವಧಿಯಲ್ಲೇ ನಮ್ಮನ್ನಗಲಿದ ಕಡಬ ನಾರಾಯಣ ಆಚಾರ್ಯ ಹಾಗೂ ಪುತ್ರ ಕಡಬ ವಿನಯ ಆಚಾರ್ಯ ಅವರ ಹೆಸರಿನಲ್ಲಿ ಪ್ರತಿವರ್ಷ ನೀಡಲಾಗುವ ಕಡಬದ್ವಯ ಪ್ರಶಸ್ತಿಗೆ ಈ ಬಾರಿ ಭಾಗವತರಾದ ಪೊಲ್ಯ ಲಕ್ಷ್ಮೀನಾರಾಯಣ ಶೆಟ್ಟಿ ಆಯ್ಕೆಯಾಗಿದ್ದಾರೆ.
ಇದೇ (ಅಕ್ಟೋಬರ್) 29ರಂದು ಭಾನುವಾರ ಮಧ್ಯಾಹ್ನ 2.30ರಿಂದ ಮುಂಬಯಿಯ ಗೋರೆಗಾಂವ್ ಪಶ್ಚಿಮದ ಕೇಶವ ಗೋರೆ ಸಭಾಗೃಹದಲ್ಲಿ ನಡೆಯುವ, ಕಡಬ ಸಂಸ್ಮರಣಾ ಸಮಿತಿಯ ನಾಲ್ಕನೇ ವರ್ಷದ ಕಾರ್ಯಕ್ರಮದಲ್ಲಿ ಪೊಲ್ಯ ಲಕ್ಷ್ಮೀನಾರಾಯಣ ಶೆಟ್ಟರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.

ಕಡಬ ಸಂಸ್ಮರಣಾ ಸಮಿತಿಯ ಅಧ್ಯಕ್ಷರಾದ ಬೆಳುವಾಯಿ ಸುಂದರ ಆಚಾರ್ಯರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮವನ್ನು ಮುಂಬೈಯ ಸ್ವರ್ಣ ಉದ್ಯಮಿ ಶ್ರೀಧರ ವಿ.ಆಚಾರ್ಯ ಅವರು ಉದ್ಘಾಟಿಸಲಿದ್ದಾರೆ. ಮುಂಬಯಿಯ ಕರ್ನಾಟಕ ವಿಶ್ವಕರ್ಮ ಅಸೋಸಿಯೇಷನ್ ಅಧ್ಯಕ್ಷರಾದ ಕಲ್ಯಾಣಪುರ ಸದಾನಂದ ಆಚಾರ್ಯ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಕನ್ನಡಿಗ ಕಲಾವಿದ ಪರಿಷತ್ತಿನ ಅಧ್ಯಕ್ಷರಾದ ಡಾ.ಸುರೇಂದ್ರ ಕುಮಾರ್ ಹೆಗ್ಡೆ, ಖ್ಯಾತ ಕೊಂಕಣಿ ರಂಗನಟ ಕಮಲಾಕ್ಷ ಸರಾಫ, ಯಕ್ಷಗಾನ ಕಲಾವಿದ ವಾಸುದೇವ ಮಾರ್ನಾಡ್ ಗೌರವ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಸಮಿತಿಯ ಗೌರವಾಧ್ಯಕ್ಷರಾದ ಜಿಟಿ ಆಚಾರ್ಯ ಇವರ ಉಪಸ್ಥಿತಿಯಲ್ಲಿ ನಡೆಯುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಫಲ್ಯ ಸೇವಾ ಸಂಘದ ಅಧ್ಯಕ್ಷರಾದ ಶ್ರೀನಿವಾಸ ಸಫಲ್ಯ ಅವರು ಅಭಿನಂದನ ಭಾಷಣವನ್ನು ಮಾಡಲಿದ್ದಾರೆ. ಕನ್ಯಾನ ಜನಾರ್ದನ ಆಚಾರ್ಯರು ಸಂಸ್ಮರಣ ಭಾಷಣ ಮಾಡಲಿದ್ದಾರೆ.

ಯಕ್ಷಗಾನ.ಇನ್ ಅಪ್‌ಡೇಟ್ಸ್ ಪಡೆಯಲು ಫೇಸ್‌ಬುಕ್ | ಟ್ವಿಟರ್ | ಯೂಟ್ಯೂಬ್ ಇನ್‌ಸ್ಟಾಗ್ರಾಂ ಫಾಲೋ ಮಾಡಿ.

ಸಭಾ ಕಾರ್ಯಕ್ರಮಕ್ಕೆ ಮುನ್ನ ಪ್ರಸಿದ್ಧ ಕಲಾವಿದ ಕೆ.ಜೆ.ಗಣೇಶ್ ತಂಡದವರಿಂದ “ಯಕ್ಷಗಾನ ನಾಟ್ಯ ವೈಭವ” ನಡೆಯಲಿದೆ. ಬಳಿಕ “ವಾಲಿಮೋಕ್ಷ” ಯಕ್ಷಗಾನ ತಾಳಮದ್ದಲೆ ನಡೆಯಲಿದ್ದು, ಭಾಗವತರಾಗಿ ಪೊಲ್ಯ ಲಕ್ಷ್ಮೀನಾರಾಯಣ ಶೆಟ್ಟಿ ಮತ್ತು ಶ್ರೀನಿವಾಸ್ ಸಫಲ್ಯ, ಹಿಮ್ಮೇಳದಲ್ಲಿ ಐ.ಲೋಕೇಶ್ ಕಟೀಲು, ಯೋಗೇಶ್ ಆಚಾರ್ಯ ಉಳೇಪಾಡಿ, ಗಿರೀಶ್ ಕಾವೂರು ಭಾಗವಹಿಸುವರು. ಡಾ. ಸುರೇಂದ್ರ ಕುಮಾರ್ ಹೆಗ್ಡೆ, ವಾಸುದೇವ ಮಾರ್ನಾಡ್, ದಾಮೋದರ ಶೆಟ್ಟಿ ಇರುವೈಲು ಅವರು ಅರ್ಥಧಾರಿಗಳಾಗಿರುತ್ತಾರೆ.

ಅಲ್ಪ ಕಾಲದಲ್ಲಿಯೇ ಅಪಾರ ಯಶಸ್ಸನ್ನೂ ಕೀರ್ತಿಯನ್ನೂ ಗಳಿಸಿ ಕಲಾಮಾತೆಯ ಪಾದ ಸೇರಿದ ನಾರಾಯಣ ಆಚಾರ್ಯ ಹಾಗೂ ವಿನಯ ಆಚಾರ್ಯರ ಹೆಸರು ಜನಮಾನಸದಲ್ಲಿ ಚಿರಸ್ಥಾಯಿಯಾಗಿ ಉಳಿಯುವಂತೆ ಮಾಡಲು ಅವರ ಶಿಷ್ಯಂದಿರು, ಅಭಿಮಾನಿಗಳು, ಕಲಾ ಪೋಷಕರು ಸೇರಿಕೊಂಡು “ಕಡಬ ಸಂಸ್ಕರಣ ಸಮಿತಿ”ಯನ್ನು ರಚಿಸಿ ಪ್ರತಿ ವರ್ಷ ಒಬ್ಬ ಹಿರಿಯ ಕಲಾವಿದರಿಗೆ “ಕಡಬದ್ವಯ ಸಂಸ್ಮರಣ ಪ್ರಶಸ್ತಿ”ಯನ್ನು ಕೊಡುತ್ತಾ ಬಂದಿರುತ್ತಾರೆ.

ನಾಲ್ಕನೇ ವರ್ಷದ ಪ್ರಶಸ್ತಿ ಪುರಸ್ಕೃತ ಪೊಲ್ಯ ಲಕ್ಷ್ಮೀನಾರಾಯಣ ಶೆಟ್ಟಿ
ಯಕ್ಷಗಾನದ ಅಭಿಮಾನಿಗಳಿಗೆ ಪೊಲ್ಯ ಲಕ್ಷ್ಮಿ ನಾರಾಯಣ ಶೆಟ್ಟಿ ಅವರದು ಚಿರಪರಿಚಿತ ಹೆಸರು. ಯಕ್ಷಗಾನದ ದಿಗ್ಗಜರಾದ ಪೊಲ್ಯ ದೇಜಪ್ಪ ಶೆಟ್ಟಿ ಅವರ ಮಗನಾದ ಪೊಲ್ಯ ಲಕ್ಷ್ಮೀನಾರಾಯಣ ಶೆಟ್ಟಿ ಅವರು ಕಂಚಿನ ಕಂಠದ ಭಾಗವತರು. ತೆಂಕು-ಬಡಗು ಉಭಯತಿಟ್ಟುಗಳಲ್ಲೂ ಸಮರ್ಥವಾಗಿ ಹಾಡಬಲ್ಲವರು. ಪ್ರಸಿದ್ಧವಾಗಿದ್ದ ಕದ್ರಿ ಮೇಳದಲ್ಲಿ ಒಂದಷ್ಟು ಕಾಲ ವ್ಯವಸಾಯ ಮಾಡಿದವರು. ಬ್ಯಾಂಕ್ ಉದ್ಯೋಗಿಯಾಗಿದ್ದು ಈಗ ಮುಂಬಯಿಯಲ್ಲಿ ನಿವೃತ್ತ ಜೀವನ ನಡೆಸುತ್ತಿದ್ದಾರೆ. ಭಾಗವತಿಕೆಯೊಂದಿಗೆ ರಂಗವನ್ನು ಸಮರ್ಥವಾಗಿ ನಿರ್ವಹಿಸಬಲ್ಲ ರಂಗ ನಿರ್ದೇಶಕರಾಗಿಯೂ ಹೆಸರು ಗಳಿಸಿದವರು. ತಮ್ಮ ಸುಶ್ರಾವ್ಯ ಗಾಯನದೊಂದಿಗೆ ಯಾವುದೇ ಪ್ರಸಂಗವಿರಲಿ ಅದನ್ನು ಸಮರ್ಪಕವಾಗಿ ನಿಭಾಯಿಸಬಲ್ಲ ಕೆಲವೇ ಕೆಲವು ಭಾಗವತರಲ್ಲಿ ಪೊಲ್ಯ ಲಕ್ಷ್ಮಿ ನಾರಾಯಣ ಶೆಟ್ಟಿ ಅವರದು ಮುಂಚೂಣಿಯಲ್ಲಿರುವ ಹೆಸರು.

ಕಡಬ ನಾರಾಯಣ ಆಚಾರ್ಯ:
ದಕ್ಷಿಣ ಕನ್ನಡದ ಪುತ್ತೂರು ತಾಲೂಕಿನ ಕಡಬದಲ್ಲಿ (ಈಗ ಕಡಬ ತಾಲೂಕು) ತಮ್ಮ ಕುಲಕಸುಬಾದ ಕಮ್ಮಾರಿಕೆಯಲ್ಲಿ ತೊಡಗಿದ್ದ ಕೊಗ್ಗ ಆಚಾರ್ಯ ಮತ್ತು ರಾಜೀವಿ ಆಚಾರ್ಯ ದಂಪತಿಯ ಎರಡನೇ ಮಗನಾಗಿ ಜನಿಸಿದ ನಾರಾಯಣ ಆಚಾರ್ಯರ ವಿದ್ಯಾಭ್ಯಾಸ ಕಡಬದಲ್ಲೇ ಆರಂಭವಾದರೂ ಹೆಚ್ವೇನೂ ಮುಂದುವರಿಸದೆ, ಕಡಬ ಪರಿಸರದಲ್ಲಿ ನಡೆಯುತ್ತಿದ್ದ ಯಕ್ಷಗಾನದ ಹಿಮ್ಮೇಳಕ್ಕೆ ಮನಸೋತು ಮನೆಯ ಸಮೀಪದ ಶ್ರೀ ಕಂಠ ಮಹಾಗಣಪತಿ ದೇವಳದ ಪರಿಸರದಲ್ಲಿ, ಆ ಸಮಯದಲ್ಲಿ ಹಿಮ್ಮೇಳದಲ್ಲಿ ಹೆಸರಾಗಿದ್ದ ಶ್ರೀ ಹರಿನಾರಾಯಣ ಬೈಪಾಡಿತ್ತಾಯರಿಂದ ಮದ್ದಲೆವಾದನವನ್ನು ಕಲಿತರು.  ಮೋಹನ ಬೈಪಾಡಿತ್ತಾಯರಿಂದ ಚೆಂಡೆವಾದನವನ್ನೂ ಕಲಿತರು. ತನ್ನ 14ನೇ ವಯಸ್ಸಿನಲ್ಲಿ ಚೌಡೇಶ್ವರಿ ಮೇಳಕ್ಕೆ ಸೇರಿ‌ ತಿರುಗಾಟಕ್ಕೆ ಪದಾರ್ಪಣೆ ಮಾಡಿದರು.

ಅಪ್ರತಿಮ ಹಿಮ್ಮೇಳ ಕಲಾವಿದರಾಗಿದ್ದ ದಿವಾಣ ಭೀಮಭಟ್ಟರ ಶಿಷ್ಯರಾಗಿ ಚೆಂಡೆ-ಮದ್ದಲೆಯಲ್ಲಿ ಹೆಚ್ಚಿನ ಪರಿಣತಿ ಪಡೆದ ಆಚಾರ್ಯರ ಕೈಚಳಕಕ್ಕೆ ಪ್ರೋತ್ಸಾಹ ಕೊಟ್ಟವರು ಆದಿಸುಬ್ರಹ್ಮಣ್ಯ ಮೇಳದ ಶೀನಪ್ಪ ಭಂಡಾರಿಯವರು. ಆಚಾರ್ಯರು ಯಶಸ್ಸಿನ  ಉತ್ತುಂಗಕ್ಕೇರಿದ್ದು ಸುಮಾರು 25 ವರ್ಷ ಸೇವೆ ಸಲ್ಲಿಸಿದ ಸುರತ್ಕಲ್ ವರದರಾಯ ಪೈ ಸಹೋದರರ ಶ್ರೀ ಮಹಾಮ್ಮಾಯಿ ಮೇಳದಲ್ಲಿನ ತಿರುಗಾಟದಲ್ಲಿ. ಆ ಮೇಳ ತಿರುಗಾಟ ನಿಲ್ಲಿಸಿದ ಬಳಿಕ ಒಂದು ವರ್ಷ ಮಂಗಳಾದೇವಿ ಮೇಳದಲ್ಲಿ ತಿರುಗಾಟ, ಆ ಬಳಿಕ ವೃತ್ತಿ ತಿರುಗಾಟಕ್ಕೆ ಮುಕ್ತಾಯ ಹಾಡಿದರು.

ಮಹಾಮ್ಮಾಯಿ ಮೇಳದ ತಿರುಗಾಟದಲ್ಲಿ ದಿಗ್ಗಜರಾದ ಅಗರಿ ಶ್ರೀನಿವಾಸ ಭಾಗವತರು ಮತ್ತು ಅಗರಿ ರಘುರಾಮ ಭಾಗವತರ ಮಾರ್ಗದರ್ಶನ, ದಾಮೋದರ ಮಂಡೆಚ್ಚರು, ಬಲಿಪ ನಾರಾಯಣ ಭಾಗವತರು, ದಿನೇಶ ಅಮ್ಮಣ್ಣಾಯರು, ಪದ್ಯಾಣ ಗಣಪತಿ ಭಟ್ಟರ ಭಾಗವತಿಗೆಗೆ ಮದ್ದಲೆಗಾರರಾಗಿ ಪ್ರಸಿದ್ದಿಗೆ ಬಂದರು.

ರಂಗಕ್ಕೆ ಬರುವ ಕಲಾವಿದರ ಮನವನ್ನು ಅರಿತು ಚೆಂಡೆ ಮದ್ದಲೆ ನುಡಿಸುವ ನೈಪುಣ್ಯ ಹೊಂದಿದ್ದ ಇವರು ರಂಗದಲ್ಲಿ ಯಾವ ಕಲಾವಿದರನ್ನು ಎಲ್ಲಿ ಹೇಗೆ ದುಡಿಸಿಕೊಳ್ಳಬೇಕೆಂಬುದನ್ನು ಚೆನ್ನಾಗಿ ಅರಿತು ಆ ರೀತಿ ಹಿಮ್ಮೇಳ ನುಡಿಸುತ್ತಿದ್ದು ಇವರು ಕಲಾವಿದರಿಗೆ ಆಪ್ತರಾಗಲು ಕಾರಣವಾಯಿತು.  ಪದ್ಯಾಣ-ಕಡಬರ ಜೋಡಿ ಒಂದು ಅಪ್ರತಿಮ ಜೋಡಿಯಾಗಿ ಕಲಾವಿದರ ಮತ್ತು ಕಲಾಸಕ್ತರ ಅಭಿಮಾನಕ್ಕೆ ಪಾತ್ರವಾಗಿತ್ತು. ಮುಂಬೈ ಮೈಸೂರು ಬೆಂಗಳೂರು ಕೊಯಂಬತ್ತೂರು ಮುಂತಾದ ಕಡೆ ಯಕ್ಷಗಾನ ಪ್ರದರ್ಶನಗಳಲ್ಲಿ ಭಾಗವಹಿಸಿ  ಅನೇಕ ಪ್ರಶಸ್ತಿ ಸನ್ಮಾನಗಳಿಗೆ ಪಾತ್ರರಾಗಿ ಜನಮನ್ನಣೆ ಪಡೆದ ಕಲಾವಿದರಿವರು.

ಪ್ರತೀವರ್ಷ ಮಳೆಗಾಲದ ಪ್ರದರ್ಶನಕ್ಕೆ ಮೇಳದೊಂದಿಗೆ ಮುಂಬಯಿಗೆ ಬರುತ್ತಿದ್ದ ನಾರಾಯಣ ಆಚಾರ್ಯರು ಮುಂಬಯಿಯಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದರು. ಚಿಗುರುಮೀಸೆಯ ಯುವಕ ಚೆಂಡೆಯನ್ನು ಹೆಗಲಿಗೇರಿಸಿ ಬಾರಿಸುತ್ತಿದ್ದ ಶೈಲಿಗೆ ಮರುಳಾಗದವರಿರಲಿಲ್ಲ. ಮುಂಬಯಿಯ ಅನೇಕ ಕಲಾವಿದರ ಮತ್ತು ಕಲಾಸಕ್ತರ ನಿಕಟ ಸಂಬಂಧ ಹೊಂದಿದ್ದರು. ಜೋಗೇಶ್ವರಿಯಲ್ಲಿ ಸಕ್ರಿಯವಾಗಿದ್ದ ಶ್ರೀ ಜಗದಂಬಾ ಯಕ್ಷಗಾನ ಕಲಾಮಂಡಲಿಗೆ ತಪ್ಪದೆ ಭೇಟಿಕೊಟ್ಟು ಅಲ್ಲಿ ನಡೆಯುತ್ತಿದ್ದ ತಾಳಮದ್ದಲೆಗಳಲ್ಲಿ ಮದ್ದಲೆ ನುಡಿಸುತ್ತಿದ್ದರು.

ತಮ್ಮ ನಿರ್ದೇಶನದಲ್ಲಿ ಮುಂಬಯಿಯ ಹವ್ಯಾಸಿ ಕಲಾವಿದರನ್ನು ಸೇರಿಸಿ “ಅಮರಶಿಲ್ಪಿ ವೀರ ಶಂಭು ಕಲ್ಕುಡ” ಯಕ್ಷಗಾನವನ್ನು ಯಶಸ್ವಿಯಾಗಿ ಆಯೋಜಿಸಿದ್ದರು. ತಿರುಗಾಟದ ನಿವೃತ್ತಿಯ ಬಳಿಕ ಪುಂಜಾಲಕಟ್ಟೆ, ಮೂಡಬಿದಿರೆ, ಮಂಗಳೂರಿನ ಕಾಳಿಕಾಂಬಾ ವಿನಾಯಕ ದೇವಸ್ಥಾನ ಮುಂತಾದೆಡೆ ಹಿಮ್ಮೇಳ ತರಗತಿಗಳನ್ನು ನಡೆಸುತ್ತಿದ್ದರು. ಸ್ವತಹ ಚಂಡೆ ಮದ್ದಲೆ ತಯಾರಿಯನ್ನು ಕೂಡ ಮಾಡುತ್ತಿದ್ದರು.

ಪತ್ನಿ ಸುಲೋಚನಾ, ಐದು ಗಂಡು, ಒಂದು ಹೆಣ್ಣು ಮಕ್ಕಳ ಜೊತೆ ಸುಖ ಸಂಸಾರದಲ್ಲಿದ್ದ ಕಡಬ ನಾರಾಯಣ ಆಚಾರ್ಯರು 2008ನೆ ಇಸವಿಯಲ್ಲಿ 49ರ ಹರೆಯದಲ್ಲಿ ವಿಧಿವಶರಾದರು. ಅವರ ಮಕ್ಕಳಲ್ಲಿ ಕಡಬ ವಿನಯ ಆಚಾರ್ಯರು ಮಾತ್ರ ತಂದೆಯ ಪರಂಪರೆಯನ್ನು ಅನುಸರಿಸಿದವರು.

ಕಡಬ ವಿನಯ ಆಚಾರ್ಯ:
ಕಡಬ ನಾರಾಯಣ ಆಚಾರ್ಯರ ಮಕ್ಕಳಲ್ಲಿ ಮೂರನೆಯವರಾದ ಕಡಬ ವಿನಯ ಆಚಾರ್ಯರು ಬಾಲ್ಯದಿಂದಲೇ ತಂದೆಯ ಚೆಂಡೆ ಮದ್ದಲೆ ನುಡಿತಕ್ಕೆ ಮರುಳಾದವರು. ವಿದ್ಯಾಭ್ಯಾಸವನ್ನು ಅರ್ಧದಲ್ಲಿ ನಿಲ್ಲಿಸಿ ತಂದೆಯವರಿಗೆ ಇಷ್ಟವಿಲ್ಲದಿದ್ದರೂ ಸಹ ಚೆಂಡೆ ಮದ್ದಲೆ ವಾದನದಲ್ಲಿ ಆಸಕ್ತಿ ತೋರಿಸಿ ಬಳಿಕ ತಂದೆಯವರಿಂದಲೇ ಪಾಠಗಳನ್ನು ಕಲಿತು ನೈಪುಣ್ಯ ಸಾಧಿಸಿದವರು.

ಮಂಗಳಾದೇವಿ, ಎಡನೀರು ಮತ್ತು ಹನುಮಗಿರಿ ಮೇಳಗಳಲ್ಲಿ ಹಿಮ್ಮೇಳ ವಾದಕರಾಗಿ ಖ್ಯಾತ ಭಾಗವತರಾದ ದಿನೇಶ್ ಅಮಣ್ಣಾಯ, ಪದ್ಯಾಣ ಗಣಪತಿ ಭಟ್, ರವಿಚಂದ್ರ ಕನ್ನಡಿಕಟ್ಟೆ ಮುಂತಾದವರಿಗೆ ಉತ್ತಮ ಸಹವಾದಕರಾಗಿ ಹೆಸರು ಮಾಡಿದರು. ಗಾನವೈಭವ ನಾಟ್ಯ ವೈಭವದಂತಹ ಕಾರ್ಯಕ್ರಮಗಳಲ್ಲಿ ತಮ್ಮ ವೈಶಿಷ್ಟ್ಯಪೂರ್ಣ ವಾದನದಿಂದ ಗಮನ ಸೆಳೆದವರು. 15 ವರ್ಷಗಳ ತಮ್ಮ ವೃತ್ತಿ ಜೀವನದಲ್ಲಿ ಅಪಾರ ಅಭಿಮಾನಿಗಳನ್ನೂ, ಜನಮನ್ನಣೆಯನ್ನೂ ಗಳಿಸಿದ ಕಡಬ ವಿನಯ ಆಚಾರ್ಯರು 2019 ನೇ ಇಸವಿಯಲ್ಲಿ ಅನಾರೋಗ್ಯದಿಂದ ಅಸು ನೀಗಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು