ಯಕ್ಷಗಾನದ ಶತಮಾನದ ಕೊಂಡಿ ರಾಜ ಹಾಸ್ಯಗಾರ ಪೆರುವಡಿ ನಾರಾಯಣ ಭಟ್ ನಿಧನ


ಮೊದಲ ಚಿತ್ರದಲ್ಲಿ, ಕುರಿಯ ವಿಠಲ ಶಾಸ್ತ್ರಿಗಳೊಂದಿಗೆ ನಾರದನಾಗಿ ಪೆರುವಡಿ ನಾರಾಯಣ ಭಟ್.

ಮಂಗಳೂರು: ಒಂದು ಶತಮಾನದ ಯಕ್ಷಗಾನ ಚರಿತ್ರೆಯ ಸಾಕ್ಷಿಯಂತೆ ಬದುಕಿದ, ಬಪ್ಪಳಿಗೆ ತೆಂಕಿಲ ನೂಜಿ ನಿವಾಸಿ, ಯಕ್ಷಗಾನದ "ರಾಜ ಹಾಸ್ಯಗಾರ" ಪೆರುವಡಿ (ಪೆರುವೋಡಿ) ನಾರಾಯಣ ಭಟ್ಟರು (98 ವರ್ಷ) ವಯೋಸಹಜ ಅನಾರೋಗ್ಯದಿಂದ ಮಂಗಳವಾರ (ಅ.31, 2023) ಪುತ್ತೂರಿನ ಆಸ್ಪತ್ರೆಯಲ್ಲಿ ನಿಧನರಾದರು.
ಆರನೇ ತರಗತಿಯವರೆಗೆ ವಿದ್ಯಾಬ್ಯಾಸ ಮಾಡಿದ್ದ ಅವರು ಎಂಟನೇ ವರ್ಷದಲ್ಲೇ ತಾಳಮದ್ದಳೆಗಳಲ್ಲಿ ಭಾಗವಹಿಸಲು ಪ್ರಾರಂಭಿಸಿದ್ದರು. 14ನೇ  ವರ್ಷದಲ್ಲಿ ಧರ್ಮಸ್ಥಳ ಮೇಳದಲ್ಲಿ ಮೊದಲ ತಿರುಗಾಟವನ್ನು ನಡೆಸಿದ್ದರು. 

ಬಾಲ್ಯದಲ್ಲಿ ಶಾಲಾ ವಿದ್ಯಾಭ್ಯಾಸದೊಂದಿಗೆ ಸಂಸ್ಕೃತ ಪಾಠ ಕಲಿತಿದ್ದ ಅವರು ಪಾಪಣ್ಣ ಭಟ್ರು ಎಂದೇ ಖ್ಯಾತರಾದವರು. ಇದಕ್ಕೆ ಕಾರಣ, ಗುಣಸುಂದರಿ ಪಾಪಣ್ಣ ವಿಜಯ ಪ್ರಸಂಗದಲ್ಲಿ ಅವರು ನಿರ್ವಹಿಸುತ್ತಿದ್ದ ಭಾವನಾತ್ಮಕವಾದ ಪಾಪಣ್ಣ ಪಾತ್ರ.

ಯಕ್ಷಗಾನ.ಇನ್ ಅಪ್‌ಡೇಟ್ಸ್ ಪಡೆಯಲು ಫೇಸ್‌ಬುಕ್ | ಟ್ವಿಟರ್ | ಯೂಟ್ಯೂಬ್ ಇನ್‌ಸ್ಟಾಗ್ರಾಂ ಫಾಲೋ ಮಾಡಿ.

ಧರ್ಮಸ್ಥಳ ಮೇಳದಲ್ಲಿ ಕುರಿಯ ವಿಠಲ ಶಾಸ್ತ್ರಿಗಳು, ಅಗರಿ ಶ್ರೀನಿವಾಸ ಭಾಗವತರು ಮೊದಲಾದ ದಿಗ್ಗಜರ ಒಡನಾಟದಲ್ಲಿ ತಿರುಗಾಟ ಮಾಡಿದ್ದ ಅವರು ದೇರಾಜೆ ಸೀತಾರಾಮಯ್ಯರಿಂದ ಪ್ರಭಾವಿತರಾದವರು. ಪೆರುವಡಿ ನಾರಾಯಣ ಭಟ್ಟರ ಯಕ್ಷಗಾನದ ಮಾತು ಕೇವಲ ಅರ್ಥವಾಗದೆ ‘ವಾಗರ್ಥ’ ಎನಿಸಿಕೊಳ್ಳುತ್ತಿತ್ತು.

ಹಾಸ್ಯಪಾತ್ರದಲ್ಲಿ ಅವರಂತೆ ಭಾಷೆಯನ್ನು ಸೊಗಸಾಗಿ ಬಳಸಿದವರಿಲ್ಲ. ಇವರದು ರಾಜ ಹಾಸ್ಯವೇ ಸರಿ. ಹಾಸ್ಯಗಾರರೆಂದು ಪ್ರಸಿದ್ಧರಾದರೂ ಗಂಭೀರ ಪೋಷಕ ಪಾತ್ರಗಳ ಪ್ರಸ್ತುತಿಗೂ ಹೆಸರಾಗಿದ್ದರು. ಅವರು ಯಜಮಾನ ನಾರಾಯಣ ಭಟ್ಟರೂ ಹೌದು! ತಮ್ಮ ಸೋದರ ಬಂಧುಗಳೊಂದಿಗೆ ಒಂದು ದಶಕಕ್ಕಿಂತಲೂ ಅಧಿಕ ಕಾಲ ಮುಲ್ಕಿ ಮೇಳವನ್ನು ನಡೆಸಿದ್ದರು.

ಕಾರವಾರದವರೆಗೆ ತೆಂಕುತಿಟ್ಟಿನ ದಿಗ್ವಿಜಯ ನಡೆಸಿದ್ದರು. ಪುತ್ತಿಗೆ ರಾಮಕೃಷ್ಣ ಜೋಯಿಸರನ್ನು, ಕಿರಿಯ ಬಲಿಪ ನಾರಾಯಣ ಭಾಗವತರನ್ನು ಮುಲ್ಕಿ ಮೇಳಕ್ಕೆ ಸೇರಿಸಿದ್ದರು. ಕಡತೋಕಾ ಮಂಜುನಾಥ ಭಾಗವತರನ್ನು ಮೊದಲ ಬಾರಿಗೆ ತೆಂಕುತಿಟ್ಟಿಗೆ ಪರಿಚಯಿಸಿದ ಕೀರ್ತಿಯೂ ಪೆರುವಡಿ ನಾರಾಯಣ ಭಟ್ಟರದಾಗಿತ್ತು.

ಪುತ್ತೂರು ನಾರಾಯಣ ಹೆಗಡೆ, ಎಂಪೆಕಟ್ಟೆ ರಾಮಯ್ಯ ರೈಯಂಥವರು ಮುಲ್ಕಿ ಮೇಳದಿಂದ ತಮ್ಮ ಯಶಸ್ವಿ ವೃತ್ತಿಬದುಕನ್ನು ಆರಂಭಿಸಿದ್ದರು. ಧರ್ಮಸ್ಥಳ ಮಂಜಯ್ಯ ಹೆಗ್ಗಡೆಯವರ ಕಾಲದಲ್ಲಿ, ಹಾರಾಡಿ ರಾಮ ಗಾಣಿಗ, ಕೊಕ್ಕರ್ಣೆ ನರಸಿಂಹ ಕಮ್ತಿ, ಕುರಿಯ ವಿಠಲ ಶಾಸ್ತ್ರಿ, ಅಳಿಕೆ ರಾಮಯ ರೈ, ಕಡಂದೇಲು ಪುರುಷೋತ್ತಮ ಭಟ್ಟ, ಕೋಳ್ಯೂರು ರಾಮಚಂದ್ರ ರಾವ್‌ ಮೊದಲಾದವರ ಕೂಡುವಿಕೆಯಲ್ಲಿ ಜರುಗಿದ ತೆಂಕು-ಬಡಗಿನ ಪ್ರತ್ಯೇಕ ಸ್ಪರ್ಧಾತ್ಮಕ ಪ್ರದರ್ಶನಗಳಲ್ಲಿ ಪೆರುವಡಿಯವರ ನಾರದನ ಪಾತ್ರ ಮೆಚ್ಚುಗೆಗೆ ಪಾತ್ರವಾಗಿತ್ತು.


ಬಡಗಿನ ಸಾಲಿಗ್ರಾಮ ಮೇಳದಲ್ಲಿ ಗುಂಡ್ಮಿ ಕಾಳಿಂಗ ನಾವಡ, ಚಿಟ್ಟಾಣಿ ರಾಮಚಂದ್ರ ಹೆಗಡೆ ಮೊದಲಾದವರೊಂದಿಗೆ ತಿರುಗಾಟ ನಡೆಸಿದ್ದರು. ಸುರತ್ಕಲ್‌ ಮೇಳದ  ‘ಪಾಪಣ್ಣ ವಿಜಯ’ದ ಪಾಪಣ್ಣನ ಪಾತ್ರದಲ್ಲಿ ಇವರನ್ನು ಮೀರಿಸಿದವರು ಇವತ್ತಿನವರೆಗೂ ಇಲ್ಲ. ನಳ ದಮಯಂತಿ ಪ್ರಸಂಗದ ಬಾಹುಕನ ಪಾತ್ರಕ್ಕೆ ಹೊಸ ಭಾವನಾತ್ಮಕ ಆಯಾಮವನ್ನು ಕೊಟ್ಟಿದ್ದರು. ಸದಾ ಅಧ್ಯಯನಶೀಲರಾಗಿ ಇತ್ತೀಚೆಗಿನವರೆಗೂ ‘ನಳದಮಯಂತಿ’ ಕಥನದ ಬೇರೆ ಬೇರೆ ಪಾಠಾಂತರಗಳನ್ನು ಓದುತ್ತಾ ಪಾತ್ರವನ್ನು, ಬಾಹುಕನನ್ನು ಹೇಗೆ ಹೊಸರೀತಿಯಲ್ಲಿ ಮಾಡಬಹುದೆಂದು ಯೋಚನೆ ಮಾಡುತ್ತಿದ್ದರು.

ಕದ್ರಿ ಮೇಳದಲ್ಲಿ ‘ಗೆಜ್ಜೆದ ಪೂಜೆ’ ಪ್ರಸಂಗದ ಬೇಚನ ಪಾತ್ರಚಿತ್ರಣ ಇವತ್ತಿಗೂ ಸ್ಮರಣೀಯ. ಬಪ್ಪನಾಡು ಮೇಳದಲ್ಲಿ ರಾಮದಾಸ ಸಾಮಗರ ಕೈಲಾಸ ಶಾಸ್ತ್ರಿ ಪಾತ್ರಕ್ಕೆ ಮಾಣಿಯಾಗಿ ಪೆರುವಡಿಯವರು ಜನಪ್ರಿಯರಾಗಿದ್ದರು. ಪೆರುವಡಿ ನಾರಾಯಣ ಭಟ್ಟರ ಆತ್ಮಕಥನವನ್ನು ನಾ. ಕಾರಂತ ಪೆರಾಜೆಯವರು ನಿರೂಪಿಸಿದ್ದು ಅದು ಪ್ರಕಟವಾಗಿದೆ.

ಪೆರುವಡಿ ನಾರಾಯಣ ಭಟ್ಟರು ಉಡುಪಿ ಯಕ್ಷಗಾನ ಕಲಾರಂಗದ ಆಹ್ವಾನದ ಮೇರೆಗೆ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ‘ಯಕ್ಷಗಾನ ಕಲಾರಂಗ’ ಪ್ರಶಸ್ತಿಗೂ ಭಾಜನರಾಗಿದ್ದರು. ಎರಡು ವರ್ಷಗಳ ಹಿಂದೆ ಮಾಸಪೂರ್ತಿ ಆಯೋಜನೆಗೊಂಡ ‘ಕೋಳ್ಯೂರು ವೈಭವ’ ಸಮಾರೋಪದ ಉದ್ಘಾಟಕರಾಗಿ ಭಾಗವಹಿಸಿ ಅರ್ಥಪೂರ್ಣವಾಗಿ ಮಾತನಾಡಿದ್ದರು.

ಪೆರುವಡಿ ನಾರಾಯಣ ಭಟ್ಟರ ನಿಧನದೊಂದಿಗೆ ಯಕ್ಷಗಾನದಲ್ಲಿ ‘ಹಾಸ್ಯರಸ’ದ ಘನತೆಯ ಅಭಿವ್ಯಕ್ತಿಯ ಮಾದರಿಯೊಂದು ಮರೆಗೆ ಸರಿದಂತಾಗಿದೆ. ಅವರಿಗೆ ಮೂವರು ಪುತ್ರಿಯರು ಇದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು