ಮಿಜಾರು ಮೋಹನ ಶೆಟ್ಟಿಗಾರರಿಗೆ ಶ್ರೀ ಹರಿಲೀಲಾ ಯಕ್ಷನಾದ ಪ್ರಶಸ್ತಿ 2023 ಪ್ರದಾನ

ಯಕ್ಷಗಾನದ ಹಿರಿಯ ಗುರು ದಂಪತಿ ಹರಿನಾರಾಯಣ ಹಾಗೂ ಲೀಲಾವತಿ ಬೈಪಾಡಿತ್ತಾಯರ ಹೆಸರಿನಲ್ಲಿ ಡಿಜಿ ಯಕ್ಷ ಫೌಂಡೇಶನ್ (ರಿ) ಕೊಡ ಮಾಡುವ 2023ನೇ ಸಾಲಿನ ಶ್ರೀ ಹರಿಲೀಲಾ ಯಕ್ಷನಾದ ಪ್ರಶಸ್ತಿಯನ್ನು ನ.19ರಂದು ಕುಡುಪು ದೇವಸ್ಥಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿರಿಯ ಮದ್ದಲೆಗಾರ ಮಿಜಾರು ಮೋಹನ ಶೆಟ್ಟಿಗಾರ್ ಅವರಿಗೆ ಪ್ರದಾನಿಸಲಾಯಿತು.

ಮಂಗಳೂರು: ಕಲಾವಿದನಿಗೆ ಚಾರಿತ್ರ್ಯ ಮುಖ್ಯ. ಚಾರಿತ್ರ್ಯದ ಪಾವಿತ್ರ್ಯ ಉಳಿಸುವುದು ಕಲಾವಿದರ ಜವಾಬ್ದಾರಿ ಎಂದು ಯಕ್ಷಗಾನ ಅಕಾಡೆಮಿ ಮಾಜಿ ಅಧ್ಯಕ್ಷ, ಹಿರಿಯ ಕಲಾವಿದ ಎಂ.ಎಲ್.ಸಾಮಗ ಅವರು ಹೇಳಿದರು.

ನ.19ರ ಭಾನುವಾರ ಕುಡುಪು ಶ್ರೀ ಅನಂತ ಪದ್ಮನಾಭ ದೇವಸ್ಥಾನದಲ್ಲಿ ಡಿಜಿ ಯಕ್ಷ ಫೌಂಡೇಶನ್‌ (ರಿ) ಆಯೋಜಿಸಿದ್ದ 'ಶ್ರೀಹರಿಲೀಲಾ ಯಕ್ಷನಾದ ಪ್ರಶಸ್ತಿ ಪ್ರದಾನ, ಯಕ್ಷನಾದೋತ್ಸವ' ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಹರಿನಾರಾಯಣ-ಲೀಲಾವತಿ ಬೈಪಾಡಿತ್ತಾಯ ದಂಪತಿ ಹೆಸರಿನಲ್ಲಿ ಹಿಮ್ಮೇಳ ಕಲಾವಿದರನ್ನು ಗೌರವಿಸಲು ಹಾಗೂ ಯಕ್ಷಗಾನ ಪರಂಪರೆಯನ್ನು ಉಳಿಸುವ ಉದ್ದೇಶದಲ್ಲಿ ಸ್ಥಾಪನೆಯಾಗಿರುವ ಡಿಜಿ ಯಕ್ಷ ಫೌಂಡೇಶನ್ (ರಿ), ಈ ಪ್ರಶಸ್ತಿಯನ್ನು ಸ್ಥಾಪಿಸಿದ್ದು, ಬೈಪಾಡಿತ್ತಾಯ ಶಿಷ್ಯ ವೃಂದದ ಸಹಕಾರದಲ್ಲಿ ಮೂರನೇ ವರ್ಷದ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಮೊದಲ ವರ್ಷ ಹಿರಿಯ ಹಿಮ್ಮೇಳ ಕಲಾವಿದ ಲಕ್ಷ್ಮೀಶ ಅಮ್ಮಣ್ಣಾಯ ಹಾಗೂ 2022ರಲ್ಲಿ ಹಿರಿಯ ಮದ್ಲೆಗಾರ ಪೆರುವಾಯಿ ನಾರಾಯಣ ಭಟ್ ಅವರಿಗೆ ಶ್ರೀ ಹರಿಲೀಲಾ ಯಕ್ಷನಾದ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಪ್ರಶಸ್ತಿಯು ರೂ.10,000, ಪ್ರಶಸ್ತಿಪತ್ರ, ಸ್ಮರಣಿಕೆಯನ್ನು ಒಳಗೊಂಡಿದೆ.

ಯಕ್ಷಗಾನ.ಇನ್ ಅಪ್‌ಡೇಟ್ಸ್ ಪಡೆಯಲು ಫೇಸ್‌ಬುಕ್ | ಟ್ವಿಟರ್ | ಯೂಟ್ಯೂಬ್ ಇನ್‌ಸ್ಟಾಗ್ರಾಂ ಫಾಲೋ ಮಾಡಿ.

ವಿದ್ಯಾದಧಾತಿ ವಿನಯಂ - ವಿದ್ಯೆಯು ವಿನಯವನ್ನು ಕೊಡುತ್ತದೆ ಹೌದು, ಆದರೆ, ಬೈಪಾಡಿತ್ತಾಯ ದಂಪತಿಯಾಗಲೀ, ಅವರ ಹೆಸರಿನಲ್ಲಿ ಪ್ರಶಸ್ತಿ ಪುರಸ್ಕೃತರಾದ ಮಿಜಾರು ಮೋಹನ ಶೆಟ್ಟಿಗಾರ್ ಅವರಾಗಲೀ, ವಿನಯದಿಂದಾಗಿಯೇ ವಿದ್ಯಾಸಂಪನ್ನರಾಗಿದ್ದಾರೆ ಎನ್ನಬಹುದು ಎಂದು ಅವರು ನುಡಿದರು.

‘ಯಕ್ಷಗಾನ ಕ್ಷೇತ್ರದಲ್ಲಿ ಅಪೂರ್ವ ಸೇವೆ ಸಲ್ಲಿಸುತ್ತಿರುವ ಹರಿನಾರಾಯಣ, ಲೀಲಾವತಿ ಬೈಪಾಡಿತ್ತಾಯ ದಂಪತಿ ಅದೆಷ್ಟೋ ಶಿಷ್ಯರನ್ನು ರೂಪಿಸಿದ್ದಾರೆ. ಅವರಿಂದ ವಿದ್ಯೆ ಕಲಿತವರು ಪ್ರಸಿದ್ಧಿ ಪಡೆಯುತ್ತಿದ್ದಾರೆ’ ಎಂದು ದೀಪ ಪ್ರಜ್ವಲನೆ ಬಳಿಕ ಆಶೀರ್ವಚನ ನೀಡಿದ ಕುಡುಪು ನರಸಿಂಹ ತಂತ್ರಿಗಳು ಹೇಳಿದರು.

ಉದ್ಯಮಿ, ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಅವರು ಮಾತನಾಡಿ, ‘ಬೈಪಾಡಿತ್ತಾಯ ದಂಪತಿಗೆ ಕೇಂದ್ರ ಸರ್ಕಾರವೇ ಪ್ರಶಸ್ತಿ ನೀಡಿ ಗುರುತಿಸಬೇಕು. ಅಂಥ ಸಾಧನೆ ಅವರದು’ ಎಂದು ನುಡಿದರು.

ಅಭ್ಯಾಗತರಾಗಿದ್ದ ಉಡುಪಿ ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಳಿ ಕಡೇಕಾರ್‌ ಮಾತನಾಡಿ, ಯಕ್ಷಗಾನ ಚರಿತ್ರೆಯಲ್ಲಿ ಬೈಪಾಡಿತ್ತಾಯ ದಂಪತಿ ಕೊಡುಗೆ ಅಪಾರವಾದುದು. ಅವರು ಕಲಾವಿದರನ್ನು ಕುಣಿಸಿದ್ದು ಮಾತ್ರವಲ್ಲ, ಹಿಮ್ಮೇಳ ಕಲಾವಿದರನ್ನು ಸೃಷ್ಟಿಸಿದ್ದಾರೆ. ಈ  ದಂಪತಿ ವೃತ್ತಿ ಕಲಾವಿದರಾಗಿ ಹಲವು ವರ್ಷಗಳಿಂದ ನಿರಂತರವಾಗಿ ರಾತ್ರಿಯಿಡೀ ನಡೆಯುವ ಆಟಗಳಲ್ಲಿ ಭಾಗವತಿಕೆ ನಡೆಸುತ್ತಾ, ಕಲಾಸೇವೆ ಮಾಡಿದವರು’ ಎಂದು ನೆನಪಿಸಿದರು.

ಪಂಚಮೇಳಗಳ ಯಜಮಾನ ಪಳ್ಳಿ ಕಿಶನ್‌ ಹೆಗ್ಡೆ ಮಾತನಾಡಿ, ಮಿಜಾರು ಮೋಹನ ಶೆಟ್ಟಿಗಾರರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಅತ್ಯಂತ ಅರ್ಹವಾದ ನಿರ್ಧಾರ ಎಂದರು.

ಹಿರಿಯ ಮದ್ದಳೆಗಾರ ಮಿಜಾರು ಮೋಹನ ಶೆಟ್ಟಿಗಾರ್‌ ಅವರಿಗೆ ‍ಶ್ರೀಹರಿಲೀಲಾ ಯಕ್ಷನಾದ ಪ್ರಶಸ್ತಿ-2023 ಪ್ರದಾನ ಮಾಡಲಾಯಿತು. ಡಿಜಿ ಯಕ್ಷ ಫೌಂಡೇಶನ್ ನಿರ್ದೇಶಕ ಅವಿನಾಶ್‌ ಬೈಪಾಡಿತ್ತಾಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಿಮ್ಮೇಳ ಕಲಾವಿದ ಚಂದ್ರಶೇಖರ್‌ ಭಟ್‌ ಕೊಂಕಣಾಜೆ ಅಭಿನಂದನಾ ಭಾಷಣ ಮಾಡಿದರು.

ಹರಿನಾರಾಯಣ ಬೈಪಾಡಿತ್ತಾಯ, ಲೀಲಾವತಿ ಬೈಪಾಡಿತ್ತಾಯ ವೇದಿಕೆಯಲ್ಲಿದ್ದರು. ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ -2023 ಪುರಸ್ಕೃತರಾದ ತೆಂಕುತಿಟ್ಟಿನ ಪ್ರಥಮ ಮಹಿಳಾ ಭಾಗವತೀ ಲೀಲಾವತಿ ಬೈಪಾಡಿತ್ತಾಯ ಅವರನ್ನು ಶಿಷ್ಯರೆಲ್ಲ ಸೇರಿಕೊಂಡು ಆತ್ಮೀಯವಾಗಿ ಸನ್ಮಾನಿಸಿದರು.

ಆನಂದ ಗುಡಿಗಾರ್‌ ಪ್ರಶಸ್ತಿಪತ್ರ ವಾಚಿಸಿದರು. ಸಾಯಿಸುಮ ನಾವಡ ಕಾರ್ಯಕ್ರಮ ನಿರೂಪಿಸಿದರು. ಶ್ರವಣ್ ಉಡುಪ ಕತ್ತಲ್‌ಸಾರ್ ವಂದಿಸಿದರು.

ಚಿತ್ರಗಳು: ಮಧುಸೂದನ ಅಲೆವೂರಾಯ










ಬೈಪಾಡಿತ್ತಾಯ ಶಿಷ್ಯ ವೃಂದದಿಂದ 11 ಚೆಂಡೆಗಳ ಅಬ್ಬರತಾಳದ ಯಕ್ಷನಾದೋತ್ಸವ ಜರುಗಿತು. ಶಾಲಿನಿ ಹೆಬ್ಬಾರ್ ಭಾಗವತಿಕೆಯಲ್ಲಿ, ಚಂದ್ರಶೇಖರ ಕೊಂಕಣಾಜೆ, ಆನಂದ ಗುಡಿಗಾರ, ಸೋಮಶೇಖರ ಭಟ್, ಕುಡುಪು ಪದ್ಮರಾಜ ತಂತ್ರಿ ಅವರು ಹಿಮ್ಮೇಳ ವಾದನದಲ್ಲಿ, ಹಿರಿಯ ಕಲಾವಿದರಾದ ಎಂ.ಎಲ್.ಸಾಮಗ, ಗಣರಾಜ ಕುಂಬ್ಳೆ ಮತ್ತು ಅನಂತ ಬೈಪಾಡಿತ್ತಾಯ ಅವರ ಮುಮ್ಮೇಳದಲ್ಲಿ 'ಶ್ರೀರಾಮ ದರ್ಶನ (ಜಾಂಬವತಿ ಕಲ್ಯಾಣ)' ತಾಳಮದ್ದಲೆ ಗಮನ ಸೆಳೆಯಿತು. ಸಭಾ ಕಾರ್ಯಕ್ರಮದ ಬಳಿಕ ಶ್ರೀಶ ಯಕ್ಷಗಾನ ಕಲಿಕಾ ಕೇಂದ್ರ, ತಲಕಳ ಇದರ ಮಕ್ಕಳು, ಗುರುಗಳಾದ ಕರ್ಗಲ್ಲು ವಿಶ್ವೇಶ್ವರ ಭಟ್ ಅವರ ನಿರ್ದೇಶನದಲ್ಲಿ ಪೂರ್ವರಂಗದ ಪೀಠಿಕಾ ಸ್ತ್ರೀವೇಷ ಹಾಗೂ ಪರಂಪರೆಯ ರಂಗ ನಡೆಗಳುಳ್ಳ 'ಕರ್ಣಾರ್ಜುನ ಕಾಳಗ' ಯಕ್ಷಗಾನವನ್ನು ಅದ್ಭುತವಾಗಿ ಪ್ರಸ್ತುತಪಡಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು