ಯಕ್ಷಗಾನವು ಸ್ವಚ್ಛಂದವಲ್ಲ, ಇದು ಶಾಸ್ತ್ರೀಯ ಕಲೆ: ಎಲ್.ಎನ್.ಶಾಸ್ತ್ರಿ


ಯಕ್ಷಗಾನವು ಶಾಸ್ತ್ರೀಯ ಚೌಕಟ್ಟಿನಿಂದ ಹೊರಗೆ ಹೋಗುತ್ತಿರುವ ಬಗ್ಗೆ ನಿಜವಾದ ಯಕ್ಷಗಾನ ಪ್ರಿಯರಲ್ಲಿ ಆತಂಕ ಇದ್ದೇ ಇದೆ. ಅಂಥ ಕಾಲಘಟ್ಟದಲ್ಲಿ ಹಿರಿಯ ಪತ್ರಕರ್ತ, ಹಿರಿಯ ಬರಹಗಾರ ಲಕ್ಷ್ಮೀನಾರಾಯಣ ಎಸ್. ಶಾಸ್ತ್ರಿ (ಎಲ್.ಎಸ್.ಶಾಸ್ತ್ರಿ) ಅವರು ಬರೆದಿರುವ ಈ ವಿಚಾರ, ಎಲ್ಲರಿಗೂ ತಲುಪಬೇಕಾಗಿದೆ.
ಯಕ್ಷಗಾನ ಕಲೆ ಶಾಸ್ತ್ರೀಯವೋ ಜಾನಪದವೋ ಎಂಬ ಚರ್ಚೆ ಹಳೆಯದೇ. ಆಗಾಗ ಕೆಲವರು ಈ ಪ್ರಶ್ನೆ ಎತ್ತುವುದುಂಟು. ಏಕೆ ಎತ್ತುತ್ತಾರೆ, ಅದರ ಅಗತ್ಯ ಇದೆಯೇ, ಅದರಿಂದ ಪ್ರಯೋಜನ ಏನು ಎನ್ನುವುದು ನನಗಿನ್ನೂ ಅರ್ಥವಾಗಿಲ್ಲ. ಈಗಾಗಲೇ ಜಾನಪದ ಅಕಾಡೆಮಿ/ ಯಕ್ಷಗಾನ ಅಕಾಡೆಮಿ ಬೇರೆ ಬೇರೆ ಆಗಿಬಿಟ್ಟಿದೆ. ಅಂದರೆ ಯಕ್ಷಗಾನ ಜಾನಪದ ಕಲೆ ಅಲ್ಲ ಎಂದೇ ಅರ್ಥ.


ಅದೇನೇ ಇರಲಿ, ಯಕ್ಷಗಾನ ಹುಟ್ಟಿದ್ದು ಹಳ್ಳಿಯಲ್ಲಿ, ಆರಂಭದಲ್ಲಿ ಬಯಲಲ್ಲಿ ನಾಲ್ಕು ಕಂಬ ನೆಟ್ಟು ದೊಂದಿ ಬೆಳಕಿನಲ್ಲಿ ಆಡುತ್ತಿದ್ದರು ಎನ್ನುವುದಕ್ಕಾಗಿ ಅದನ್ನು ಜಾನಪದ ಕಲೆ ಎನ್ನಬೇಕೇ? ಆಗ ಯಾವುದೇ ಆಧುನಿಕ ಸೌಕರ್ಯ ಇನ್ನೂ ರೂಪುಗೊಂಡಿರಲಿಲ್ಲ. ಟೆಂಟು ಮೈಕು ಲೈಟು ಎಲ್ಲ ನಂತರ ಬಂದದ್ದು. ಅವು ಬಾಹ್ಯ ಸೌಕರ್ಯಗಳು. ಕಲೆಯೊಳಗಿನವುಗಳಲ್ಲ. 

ಹೇಗೆ ಶಾಸ್ತ್ರೀಯ?
ಆದರೆ ಯಕ್ಷಗಾನ ಕಲೆಯಲ್ಲಿ ಎಲ್ಲವೂ ಶಾಸ್ತ್ರೀಯವಾಗಿಯೇ ಇದೆ. ಛಂದೋಬದ್ಧವಾದ ಪದ್ಯಗಳು, ಶಾಸ್ತ್ರೀಯ ರಾಗಗಳು, ತಾಳಗಳು, ಪ್ರತಿ ಪಾತ್ರಕ್ಕೂ ನಿರ್ದಿಷ್ಟವಾದ ವೇಷಭೂಷಣ, ಮುಖವರ್ಣಿಕೆಗಳು, ಶಾಸ್ತ್ರೀಯವಾದ ನೃತ್ಯಾಭಿನಯಗಳು, ಖಚಿತ ಬಿಡ್ತಿಗೆಗಳಿಂದೊಡಗುಡಿದ ಚಂಡೆ ಮದ್ದಳೆಗಳು - ಹೀಗೆ ಶಾಸ್ತ್ರೀಯವಲ್ಲದ್ದು ಇಲ್ಲಿ ಯಾವುದೂ ಇಲ್ಲ. ಯಕ್ಷಗಾನದ ಸಂಭಾಷಣೆಗೂ ಸಹ ಅದರದ್ದೇ ಆದ ಸ್ವರೂಪ ಇದೆ. 

ಯಕ್ಷಗಾನ.ಇನ್ ಅಪ್‌ಡೇಟ್ಸ್ ಪಡೆಯಲು ಫೇಸ್‌ಬುಕ್ | ಟ್ವಿಟರ್ | ಯೂಟ್ಯೂಬ್ ಇನ್‌ಸ್ಟಾಗ್ರಾಂ ಫಾಲೋ ಮಾಡಿ.

ಯಾಕೆ ಜಾನಪದವಾಗಿ ಉಳಿದಿಲ್ಲ?
ಜಾನಪದ ಕಲೆಗೆ ಯಾವುದೇ ನಿರ್ದಿಷ್ಟವಾದ ಚೌಕಟ್ಟು ಇರುವುದಿಲ್ಲ. ಅವು ಸ್ವಚ್ಛಂದವಾಗಿ ಹುಟ್ಟಿ ಬೆಳೆಯುವಂತಹವು. ಕಲಾವಿದರ ಮತ್ತು ಆ ಆ ಪರಿಸರದ ಲಹರಿಗನುಗುಣವಾಗಿ ರೂಪುಗೊಳ್ಳುವಂತಹವು. ಬದಲಾವಣೆಗೂ ಅಲ್ಲದೇ ಅವಕಾಶವಿದೆ.  ಅದರಿಂದ ಆ ಕಲೆಗಳ ಮಹತ್ವವೇನೂ ಕಡಿಮೆಯಾಗುವುದಿಲ್ಲ. ಅವು ಇರಬೇಕಾದ್ದೇ ಹಾಗೆ. ದೊಡ್ಡಾಟ, ಸಣ್ಣಾಟ, ಕೃಷ್ಣ ಪಾರಿಜಾತ ಮೊದಲಾದವುಗಳನ್ನೆಲ್ಲ ನಾವು ಅದಕ್ಕೆ ಉದಾಹರಿಸಬಹುದು. ಅವನ್ನು ನಾವು ಯಕ್ಷಗಾನಕ್ಕೆ ಹೋಲಿಸಲು ಬರುವುದಿಲ್ಲ.

ಒಂದು ಶಾಸ್ತ್ರಬದ್ಧ- ಶಾಸ್ತ್ರಶುದ್ಧ ಕಲೆಯಾಗಿರುವ ಯಕ್ಷಗಾನವನ್ನು ಅದು ಹೇಗೆ ಜಾನಪದಕ್ಕೆ ಸೇರಿಸಲು ಸಾಧ್ಯ? ಮತ್ತು ಸೇರಿಸುವ ಅಗತ್ಯವಿದೆಯೇ? ಸೇರಿಸಿಯಾದರೂ ಪ್ರಯೋಜನವೇನು? ಸೇರಿಸಬೇಕಾದ ಅಗತ್ಯವಾದರೂ ಏನಿದೆ? ಯಕ್ಷಗಾನ ಶಾಸ್ತ್ರೀಯ ಕಲೆ ಎಂದು ಒಪ್ಪಿಕೊಂಡರೆ ಹಾನಿಯೇನಿದೆ? ಹಾಗೆ ಹೇಳಲು ಸಂಕೋಚ ಏಕೆ?

ಬದಲಾವಣೆ ಬೇರೆ, ಸುಧಾರಣೆ ಬೇರೆ
ಈಚೆಗೆ ಒಬ್ಬರು ಹಿರಿಯ ಯಕ್ಷಗಾನ ಕಲಾವಿದರು " ಅದು ಜಾನಪದವೂ ಅಲ್ಲ, ಶಾಸ್ತ್ರೀಯವೂ ಅಲ್ಲ " ಎಂದು  ಹೇಳಿದರು. ಈ ವಿಷಯದಲ್ಲಿ ಆಳವಾದ ಅಧ್ಯಯನ ನಡೆಸಿಯೇ ಕೆರೆಮನೆ ಮಹಾಬಲ ಹೆಗಡೆಯವರು "ಅದು ಶಾಸ್ತ್ರೀಯ ಕಲೆ" ಎಂದು ಸ್ಪಷ್ಟವಾಗಿ ಹೇಳಿದರು. ಆಧಾರಗಳನ್ನೂ ಕೊಟ್ಟರು. ಜಾನಪದ ಕಲೆಗಳ ಸ್ವಾತಂತ್ರ್ಯ, ಸ್ವಚ್ಛಂದತೆ, ಯಾವುದೂ ಯಕ್ಷಗಾನಕ್ಕಿಲ್ಲ. ಅದಕ್ಕೊಂದು ನಿರ್ದಿಷ್ಟ ಶೈಲಿಯೇ ಇದೆ. ಆ ಶೈಲಿಯನ್ನು ಈಚೆಗೆ ಕೆಲ ಅಪ್ರಬುದ್ಧರು ಕೆಡಿಸಲು ಪ್ರಯತ್ನಿಸುತ್ತಿದ್ದಾರೆ ಎನ್ನುವುದು ಬೇರೆ ವಿಚಾರ. ಶುದ್ಧ ಪ್ರೇಕ್ಷಕ ಪ್ರಜ್ಞೆಯೂ ಮಾಯವಾಗುತ್ತಿದೆ. ಯಕ್ಷಗಾನ ಮನಸ್ಸಿಗೆ ಬಂದಂತೆ ಬದಲಾಯಿಸುವ ಕಲೆ ಅಲ್ಲ. ಅದರದೇ ಆದ ಶೈಲಿಯ ಚೌಕಟ್ಟು ಇದೆ ಮತ್ತು ಇರಲೂಬೇಕು. ಬದಲಾಯಿಸಲು ಹೋದರೆ ಅದು ಮತ್ತಾವುದೋ ಕಲೆ ಆದೀತು. ಸುಧಾರಿಸುವುದಕ್ಕೆ ಯಾರೂ ಬೇಡ ಅನ್ನುವುದಿಲ್ಲ. ಬದಲಾವಣೆ ಬೇರೆ, ಸುಧಾರಣೆ ಬೇರೆ.

ಒಟ್ಟಾರೆ ಯಕ್ಷಗಾನ ಒಂದು ಶಾಸ್ತ್ರೀಯ ಕಲೆಯಾಗಿಯೇ ಉಳಿಯಲಿ, ಬೆಳೆಯಲಿ. ಅದನ್ನು ಜಾನಪದಕ್ಕೆ ಸೇರಿಸುವ ಪ್ರಯತ್ನ ಬೇಕಾಗಿಲ್ಲ. ಸೇರಿಸಲು ಹೋದರೂ ಅವು ಸೇರುವುದಿಲ್ಲ.

ಲೇಖನ: ಎಲ್. ಎಸ್. ಶಾಸ್ತ್ರಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು