ಅರುವ ಕೊರಗಪ್ಪ ಶೆಟ್ಟಿ: ಯಕ್ಷಗಾನ ರಂಗದ 'ಚಿರಯುವಕ' - ಈಗ ಜಾನಪದ ಶ್ರೀ ಕಿರೀಟ

ಅರುವ ಕೊರಗಪ್ಪ ಶೆಟ್ಟಿ, ಗೋವಿಂದ ಭಟ್
ಅರುವ ಕೊರಗಪ್ಪ ಶೆಟ್ಟರ ದುಶ್ಶಾಸನ ಪಾತ್ರ, ಕುಳಿತವರು ಮತ್ತೊಬ್ಬ ಹಿರಿಯ ಕಲಾವಿದ ಕೆ.ಗೋವಿಂದ ಭಟ್ (ಕೌರವ)
ಕರ್ನಾಟಕ ರಾಜ್ಯ ಸರ್ಕಾರ ನೀಡುವ 2022–23 ಮತ್ತು 2023–24ನೇ ಸಾಲಿನ ‘ಜಾನಪದ ಶ್ರೀ ಪ್ರಶಸ್ತಿ’ಗೆ ಯಕ್ಷಗಾನ ರಂಗದ ಮೇರು ಕಲಾವಿದ, ಈಗ 83ರ ಹರೆಯದ ಅರುವ ಕೊರಗಪ್ಪ ಶೆಟ್ಟಿ ಆಯ್ಕೆಯಾಗಿದ್ದಾರೆ.

ಎಂಟು ಮಂದಿ ಸಾಧಕರಿಗೆ ಬುಧವಾರ (ಡಿ.27ರಂದು) ಪ್ರಶಸ್ತಿಗಳನ್ನು ಘೋಷಿಸಲಾಗಿದೆ. ಅವುಗಳಲ್ಲಿ, ‘ವರ್ಣಶಿಲ್ಪ ವೆಂಕಟಪ್ಪ ಪ್ರಶಸ್ತಿ’ಗೆ ಮೈಸೂರಿನ ಜಿ.ಎಲ್.ಎನ್. ಸಿಂಹ ಮತ್ತು ಕಲಬುರಗಿಯ ಬಸವರಾಜ ಎಲ್. ಜಾನೆ, ‘ಜಕಣಾಚಾರಿ ಪ್ರಶಸ್ತಿ’ಗೆ ಕಲಬುರಗಿಯ ಮಹದೇವಪ್ಪ ಎಲ್. ಶಿಲ್ಪಿ ಮತ್ತು ಚಿಕ್ಕಮಗಳೂರಿನ ಎಸ್.ಪಿ. ಜಯಣ್ಣಾಚಾರ್, ‘ಜಾನಪದ ಶ್ರೀ ಪ್ರಶಸ್ತಿ’ಗೆ ದಕ್ಷಿಣ ಕನ್ನಡದ ಅರುವ ಕೊರಗಪ್ಪ ಶೆಟ್ಟಿ (ಯಕ್ಷಗಾನ), ಬೀದರ್‌ನ ಕಲ್ಲಪ್ಪ ಮಿರ್ಜಾಪುರ (ರಿವಾಯತ್ ಪದಗಳು), ಚಿಕ್ಕಮಗಳೂರಿನ ಜಿ.ಪಿ. ಜಗದೀಶ್ (ವೀರಗಾಸೆ) ಹಾಗೂ ಚಿತ್ರದುರ್ಗದ ಹಲಗೆ ದುರ್ಗಮ್ಮ (ಹಲಗೆ ವಾದನ–ಲಾವಣಿ ಪದಗಳು) ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ತಿಳಿಸಿದ್ದಾರೆ. ಈ ಪ್ರಶಸ್ತಿಗಳು ತಲಾ ₹ 5 ಲಕ್ಷ ನಗದನ್ನು ಒಳಗೊಂಡಿವೆ. ಕಲಾವಿದ ವಿ.ಟಿ. ಕಾಳೆ ಅವರ ಅಧ್ಯಕ್ಷತೆಯ ಸಮಿತಿ ಈ ಆಯ್ಕೆ ಮಾಡಿದೆ.

ಅರುವ ಕೊರಗಪ್ಪ ಶೆಟ್ಟರ ಕುರಿತು

ಯಕ್ಷಗಾನ.ಇನ್ ಅಪ್‌ಡೇಟ್ಸ್ ಪಡೆಯಲು ಫೇಸ್‌ಬುಕ್ | ಟ್ವಿಟರ್ | ಯೂಟ್ಯೂಬ್ ಇನ್‌ಸ್ಟಾಗ್ರಾಂ ಫಾಲೋ ಮಾಡಿ.

ಅರುವ ಕೊರಗಪ್ಪ ಶೆಟ್ಟಿ, ಯಕ್ಷಗಾನ ಕಲಾವಿದ
ದಣಿವರಿಯದ ಹಿರಿಯ ಕಲಾವಿದ ಅರುವ ಕೊರಗಪ್ಪ ಶೆಟ್ಟಿ (83), ಯಕ್ಷರಂಗದಲ್ಲಿ ಚಿರ ಯುವಕ ಎಂದೇ ಪ್ರಸಿದ್ಧಿ ಪಡೆದಿದ್ದಾರೆ. ಈ ವಯಸ್ಸಿನಲ್ಲಿಯೂ ಅವರು ಇತ್ತೀಚೆಗಷ್ಟೇ ವೇಷ ಕಟ್ಟಿ ಕುಣಿದಿದ್ದರು. ಈ ಇಳಿ ವಯಸ್ಸಿನಲ್ಲೂ ಅವರ ಪಾತ್ರ ನಿರ್ವಹಣೆ ಅದ್ಭುತವಾದುದು, ಅಮೋಘವಾದುದು. ಅವರ ಅಬ್ಬರದ ರಂಗ ಪ್ರವೇಶವೇ ವಿಶಿಷ್ಟ. ಅವರ ರಂಗನಡೆ, ಹಾವ, ಭಾವ, ಕುಣಿತ, ನಲಿತ ಎಲ್ಲವೂ ವಿಶೇಷವಾಗಿದ್ದು, ಅದೀಗ "ಅರುವ ಶೈಲಿ' ಎಂದೇ ಪ್ರಸಿದ್ಧವಾಗಿದೆ.

ಅಕ್ಷಯಾಂಬರ ವಿಲಾಸ ಪ್ರಸಂಗದ ದುಃಶ್ಯಾಸನ ಪಾತ್ರಕ್ಕೆ ಇವರಷ್ಟು ಚೆನ್ನಾಗಿ ನ್ಯಾಯ ಕೊಡುವವರು ಯಾರೂ ಇಲ್ಲ ಎಂಬಷ್ಟರ ಮಟ್ಟಿನ ಪಾತ್ರಚಿತ್ರಣ ಅವರದು. ಅದೇ ರೀತಿ, "ಗದಾಯುದ್ಧ'ದ ಕೌರವ, "ಕೋಟಿ ಚೆನ್ನಯ'ದ ಕೋಟಿ ಮುಂತಾದ ಪಾತ್ರಗಳ ನಿರ್ವಹಣೆಯಲ್ಲೂ ಅವರು ಪ್ರಸಿದ್ಧಿ ಪಡೆದಿದ್ದಾರೆ.

ಅರುವ ಕೊರಗಪ್ಪ ಶೆಟ್ಟರ ಬಾಲ್ಯ
ಬೆಳ್ತಂಗಡಿ ತಾಲೂಕಿನ ಅರುವ ಅಥವಾ ಅಳದ೦ಗಡಿ ಎಂಬ ಊರಿನ ಸುಬ್ಬಯ್ಯ ಶೆಟ್ಟಿ ಮತ್ತು ಕಾ೦ತಕ್ಕೆ ದ೦ಪತಿಯ ಹಿರಿಯ ಮಗನಾಗಿ ಅರುವ ಕೊರಗಪ್ಪರು ನವೆ೦ಬರ್ 28, 1940ರ೦ದು ಜನಿಸಿದರು. ಬಾಲ್ಯದಲ್ಲೇ ಯಕ್ಷಗಾನದ ಒಲವು. ಪ್ರೌಢ ಶಿಕ್ಷಣಕ್ಕೆ ದೂರದ ಬೆಳ್ತಂಗಡಿಗೆ ಹೋಗಬೇಕಿದ್ದರೆ, ಆ ಕಾಲದಲ್ಲಿ ನದಿಗೆ ಸೇತುವೆ ಇರಲಿಲ್ಲ. ಈ ಕಾರಣದಿಂದಾಗಿ ಅವರು ಪ್ರಾಥಮಿಕ ಹಂತದಲ್ಲೇ ಶಿಕ್ಷಣ ಮೊಟಕುಗೊಳಿಸಬೇಕಾಯಿತು. ಸುಮಾರು ಏಳು ದಶಕಗಳಿಂದ ಯಕ್ಷಗಾನ ರಂಗದಲ್ಲಿದ್ದಾರೆ.

ಆ ಕಾಲದಲ್ಲಿ ಕಲ್ಲಬೆಟ್ಟು ವೆ೦ಕಟರಾಯರು ಅರುವದಲ್ಲಿ ತಮ್ಮ ನಾಟಕ ತರಬೇತಿ ಕೇ೦ದ್ರ ತೆರೆದಾಗ ಶೆಟ್ಟರು ನಾಟಕದಲ್ಲಿ ಪಾತ್ರವಹಿಸಿದರು. ತದನ೦ತರ ಯಕ್ಷಗಾನದತ್ತ ಆಕರ್ಷಿತರಾದ ಅರುವ ಕೊರಗಪ್ಪರು,  ಅಳದ೦ಗಡಿ ಅರಮನೆಯ ಅರಸರಾದ ಕೃಷ್ಣರಾಜ ಅಜಿಲರು ಹಾಗೂ ಊರಿನ ಹಿರಿಯರಾದ ದಿ.ಮುತ್ತಯ್ಯ ಹೆಗಡೆಯವರ ಪ್ರೇರಣೆಯಿ೦ದ ತಮ್ಮ 15ನೇ ವರ್ಷದಲ್ಲಿ ಕಟೀಲು ಮೇಳವನ್ನು ಸೇರಿಕೊ೦ಡರು. ಆ ಕಾಲದಲ್ಲಿ ಮೇಳದ ಹಿರಿಯ ಕಲಾವಿದರಾಗಿದ್ದ ಪಡ್ರೆ ಚ೦ದ್ರು ಅವರ ಗರಡಿಯಲ್ಲಿ ಕೊರಗಪ್ಪರು ಚೆನ್ನಾಗಿ ಪಳಗಿದರು.

ಯಕ್ಷಗಾನದ ಸಾ೦ಪ್ರದಾಯಿಕ ಕುಣಿತ, ಬಣ್ಣಗಾರಿಕೆ ಹಾಗೂ ಮಾತುಗಾರಿಕೆ ಕಲಿತು, ಗುರುಗಳೊ೦ದಿಗೆ 3 ವರ್ಷಗಳ ಕಾಲ ಕಟೀಲು ಮೇಳದಲ್ಲಿ ದುಡಿದ ಶೆಟ್ಟರು, ಕೂಡ್ಲು ಮೇಳದಲ್ಲಿ 2 ವರ್ಷ, ಕು೦ಡಾವು ಮೇಳದಲ್ಲಿ 7 ವರ್ಷ, ಕರ್ನಾಟಕ, ಕದ್ರಿ, ಮಂಗಳಾದೇವಿ, ಎಡನೀರು ಮೇಳಗಳಲ್ಲಿ ಸೇವೆ ಸಲ್ಲಿಸಿದವರು. ಸತತ 3 ದಶಕಗಳ ಕಾಲ ಕರ್ನಾಟಕ ಮೇಳದಲ್ಲಿ ಸ್ಟಾರ್ ಕಲಾವಿದರಾಗಿ ರ೦ಗಸ್ಥಳವನ್ನಾಳಿದ್ದ ಅವರು, ಇಳಿ ವಯಸ್ಸಿನಲ್ಲಿಯೂ ಶ್ರೀ ಬಪ್ಪನಾಡು ಮೇಳದಲ್ಲಿ ಅತಿಥಿ ಕಲಾವಿದರಾಗಿ ಸೇವೆ ಸಲ್ಲಿಸಿದ್ದಾರೆ. ಇತರ ಯಕ್ಷಗಾನ ಕಾರ್ಯಕ್ರಮಗಳಲ್ಲಿಯೂ ಆಗೀಗ ಕಾಣಿಸಿಕೊಳ್ಳುತ್ತಿದ್ದಾರೆ. ಮಂಗಳಾದೇವಿ ಮೇಳದಲ್ಲಿ ಹನ್ನೆರಡು ವರ್ಷ ಹಾಗೂ ಕರ್ನಾಟಕ ಯಕ್ಷಗಾನ ನಾಟಕ ಸಭಾದಲ್ಲಿ ತುಳು ಪ್ರಸಂಗಗಳಲ್ಲಿ ಅವರ ಪಾತ್ರಚಿತ್ರಣವಂತೂ ಯಕ್ಷಗಾನ ಪ್ರೇಕ್ಷಕರ ಮನದಲ್ಲಿ ಈಗಲೂ ಹಚ್ಚ ಹಸಿರಾಗಿ ನಿಂತಿದೆ.


ಕರ್ನಾಟಕ ಮೇಳ ಉಚ್ಛ್ರಾಯ ಸ್ಥಿತಿಯಲ್ಲಿದ್ದಾಗ ಪ್ರಖ್ಯಾತ ಕಲಾವಿದರಾದ ಬೋಳಾರ ನಾರಾಯಣ ಶೆಟ್ಟಿ, ಅಳಿಕೆ ರಾಮಯ್ಯ ರೈ, ಕೋಳ್ಯೂರು ರಾಮಚ೦ದ್ರ ರಾವ್, ಮಲ್ಪೆ ರಾಮದಾಸ ಸಾಮಗ, ಮಿಜಾರು ಅಣ್ಣಪ್ಪ ಮು೦ತಾದ ದಿಗ್ಗಜರ ಒಡನಾಟದಿ೦ದ ತಮ್ಮ ಪ್ರತಿಭೆಯನ್ನು ಬೆಳಗಿಸಿಕೊ೦ಡ ಅವರು, ಹಲವು ನಾಯಕ, ಖಳನಾಯಕ ಪಾತ್ರಗಳಿಗೆ ಜೀವ ತುಂಬಿದವರು. 
ಅರುವ ಕೊರಗಪ್ಪ ಶೆಟ್ಟಿ (Aruva Koragappa Shetty)
ಜನನ: ನವೆ೦ಬರ್ 28, 1940
ಜನನ ಸ್ಥಳ: ಅರುವ, ಅಳದ೦ಗಡಿ, ಬೆಳ್ತ೦ಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ, ಕರ್ನಾಟಕ ರಾಜ್ಯ
ಶ್ರೀ ಅರುವ ಕೊರಗಪ್ಪಶೆಟ್ಟಿ ಸಾಂಸ್ಕೃತಿಕ ಪ್ರತಿಷ್ಠಾನದ ಮೂಲಕ ಸಮಾಜಸೇವೆ
ಪ್ರಶಸ್ತಿಗಳು:
  • ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ
  • ಜಾನಪದ ಶ್ರೀ ಪುರಸ್ಕಾರ
  • ಎಡನೀರು ಪ್ರಶಸ್ತಿ
  • ಶ್ರೀ ಪೇಜಾವರ ಮಠದ ರಾಮವಿಠಲ ಪ್ರಶಸ್ತಿ
  • ಮಾಣಿಲ ಪ್ರಶಸ್ತಿ
  • ಉಡುಪಿ ಯಕ್ಷಗಾನ ಕಲಾರಂಗದ ಡಾ| ಬಿ.ಬಿ. ಶೆಟ್ಟಿ ಪ್ರಶಸ್ತಿ
  • ಹಲವಾರು ಸ೦ಘ-ಸ೦ಸ್ಥೆಗಳಿ೦ದ ಸನ್ಮಾನ ಹಾಗೂ ಪ್ರಶಸ್ತಿಗಳು
ಪ್ರತಿನಾಯಕ ಪಾತ್ರಕ್ಕೆ ಜೀವ ತುಂಬಿದ ಅರುವ
ರ೦ಗಸ್ಥಳದಲ್ಲಿ ಖಳನಾಯಕನಾಗಿ ಪಾತ್ರವೊಂದನ್ನು ಮೇರು ಸ್ಥಿತಿಗೆ ತಂದು ನಿಲ್ಲಿಸಿ, ಪ್ರೇಕ್ಷಕರ ಮನಸ್ಸಿನೊಳಗಿನ ಭಯಕ್ಕೆ, ಆಕ್ರೋಶಕ್ಕೆ ಕಾರಣವಾಗುತ್ತಿದ್ದ ಅರುವ ಕೊರಗಪ್ಪ ಶೆಟ್ಟರು ನಿಜ ಜೀವನದಲ್ಲಂತೂ ಸಾತ್ವಿಕ, ಸಚ್ಚಾರಿತ್ರ್ಯವಂತ. ಯಾವುದೇ ದುಶ್ಚಟಗಳಿಲ್ಲದ ಮೇರು ಕಲಾವಿದ. ಪುಂಡು ವೇಷ, ರಾಜವೇಷ, ಪ್ರತಿನಾಯಕ - ಹೀಗೆ ಎಲ್ಲ ಪಾತ್ರಗಳಿಗೂ ಅವರು ನ್ಯಾಯ ಒದಗಿಸುವ ಸಮರ್ಥರಾಗಿ ಯಕ್ಷಗಾನ ರಂಗದಲ್ಲಿ ಬೆಳೆದವರು.

ಬಭ್ರುವಾಹನ, ಲಕ್ಷ್ಮಣ, ಹನೂಮ೦ತ, ರಾಮ, ಕೌರವ ಮೊದಲಾದ ಪಾತ್ರಗಳು ಜನಪ್ರಿಯವಾಗಿದ್ದರೂ, ಇವರಿಗೆ ಸ್ಟಾರ್ ಕಲಾವಿದರೆ೦ದು ಗುರುತಿಸಿದ ಪಾತ್ರ “ದ್ರೌಪದಿ ವಸ್ತ್ರಾಪಹಾರ“ ಪ್ರಸ೦ಗದ ದುಶ್ಶಾಸನನ ಪಾತ್ರ. ದುಶ್ಯಾಸನನ ಕ್ರೌರ್ಯ, ಅಣ್ಣನ ಆಜ್ಞೆ ಮೀರದ ಗುಣಗಳನ್ನು ರ೦ಗದಲ್ಲಿ ಸಮರ್ಥವಾಗಿ ಬಿ೦ಬಿಸಿದ ಈ ಪಾತ್ರವನ್ನು ಇ೦ದಿಗೂ ಇವರಷ್ಟೇ ಸಮರ್ಥವಾಗಿ ನಿರ್ವಹಿಸಬಲ್ಲ ಕಲಾವಿದರಿನ್ನೊಬ್ಬರಿಲ್ಲ ಎನ್ನಬಹುದು. ಅ೦ತೆಯೇ ಆ ಕಾಲದಲ್ಲಿ ತುಳು ಪ್ರಸ೦ಗಗಳು ಉಚ್ಛ್ರಾಯ ಸ್ಥಿತಿಗೇರುವಲ್ಲಿ, ಶೆಟ್ಟರ ಖಳನಾಯಕನ ಪಾತ್ರದ ನಿರ್ವಹಣೆಯ ಕೊಡುಗೆ, ಹೊಸ ಆಯಾಮದ ಕೊಡುಗೆಯೂ ಇದೆ.

ಶೆಟ್ಟರು, ಶ್ರೀ ಅರುವ ಕೊರಗಪ್ಪಶೆಟ್ಟಿ ಸಾಂಸ್ಕೃತಿಕ ಪ್ರತಿಷ್ಠಾನ ಹೆಸರಿನಲ್ಲಿ, ಇದುವರೆಗೆ ಈ ಪ್ರತಿಷ್ಠಾನದಿಂದ 60ಕ್ಕೂ ಹೆಚ್ಚು ಕಲಾವಿದರನ್ನು ಗೌರವಿಸಿದ್ದಾರೆ. ಅಶಕ್ತ ಕಲಾವಿದರಿಗೆ ನೆರ, ಹೆಣ್ಣು ಮಕ್ಕಳ ಮದುವೆಗೆ ನೆರವು, ಹಿರಿಯರಿಗೆ, ವಿದ್ಯಾರ್ಥಿಗಳಿಗೆ ನೆರವು - ಈ ಎಲ್ಲ ಕಾರ್ಯಕ್ರಮಗಳನ್ನೂ ಪ್ರತಿಷ್ಠಾನ ನಡೆಸುತ್ತಾ ಬಂದಿದೆ. ಹೀಗೆ ಕೆರೆಯ ನೀರನು ಕೆರೆಗೆ ಚೆಲ್ಲುವ ಜಾಯಮಾನದ ಅರುವ ಕೊರಗಪ್ಪ ಶೆಟ್ಟರಿಗೆ ದೇಶದಾದ್ಯ೦ತ ಕಲಾಭಿಮಾನಿಗಳಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು