ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಭವನ ಲೋಕಾರ್ಪಣೆ: ಯಕ್ಷಗಾನದ ಹೆಮ್ಮೆ ಎಂದ ಡಾ.ವೀರೇಂದ್ರ ಹೆಗ್ಗಡೆ


ಕಾಸರಗೋಡು: ಯಕ್ಷಗಾನದ ಉನ್ನತಿಗೆ ಕಾಸರಗೋಡಿನ ಕೊಡುಗೆ ಅಪಾರ. ಪಾರ್ತಿಸುಬ್ಬ ಮೊದಲ್ಗೊಂಡು ಇಂದಿನ ಹೊಸ ಪೀಳಿಗೆಯ ಕಲಾವಿದರು ಈ ಸರ್ವಾಂಗ ಸುಂದರ ಕಲೆಯನ್ನು ಸಮೃದ್ಧಿಗೊಳಿಸಿದ್ದಾರೆ. ಅವರೆಲ್ಲರನ್ನೂ ಸ್ಮರಿಸುವ ಜೊತೆಯಲ್ಲಿ ಈ ಕಲೆಯನ್ನು ಉಳಿಸಿ ಬೆಳೆಸಬೇಕಾದುದು ಕಲಾವಿದರು, ಕಲಾಭಿಮಾನಿಗಳ ಕರ್ತವ್ಯ ಎಂದು ಹೇಳಿರುವ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ, ಕರ್ನಾಟಕದಲ್ಲಿ ಅಸಾಧ್ಯವಾಗಿದ್ದನ್ನು ಕಾಸರಗೋಡಿನ ಮಣ್ಣಿನಲ್ಲಿ ಸಾಧಿಸಿರುವುದು ಅಭಿನಂದನೀಯ ಎಂದು ಹೇಳಿದರು.

ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಆಶ್ರಯದಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಮತ್ತು ಕಲಾಪೋಷಕರ ಸಹಕಾರದೊಂದಿಗೆ ಸಿರಿಬಾಗಿಲಿನಲ್ಲಿ ನಿರ್ಮಿಸಲಾದ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಭವನವನ್ನು ಡಿ.26ರ ಮಂಗಳವಾರ ಅಧಿಕೃತವಾಗಿ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ನಿರಕ್ಷರಿಗಳನ್ನೂ ಜ್ಞಾನವಂತರನ್ನಾಗಿಸಿದ ಕಲೆ ಯಕ್ಷಗಾನ. ಇಂಥ ಯಕ್ಷಗಾನವನ್ನು ಸಂರಕ್ಷಣೆ ಮಾಡಿದ ಕೀರ್ತಿ ಗಡಿನಾಡು ಕಾಸರಗೋಡಿಗೆ ಸಲ್ಲುತ್ತದೆ. ಈ ಭವ್ಯ ಭವನವು ಯಕ್ಷಗಾನಕ್ಕೆ ದೊಡ್ಡ ಕೊಡುಗೆಯಾಗಲಿದೆ ಎಂದ ಅವರು, ಸಿರಿಬಾಗಿಲು ರಾಮಕೃಷ್ಣ ಮಯ್ಯರು ತಮ್ಮ ತಂದೆಯವರ ನೆನಪಿನಲ್ಲಿ, ಯಕ್ಷಗಾನದ ಪಿತಾಮಹ ಪಾರ್ತಿಸುಬ್ಬನ ನೆಲದಲ್ಲಿ ಶ್ರೇಷ್ಠ ಭವನವನ್ನು ನಿರ್ಮಿಸಿ ಯಕ್ಷಗಾನವನ್ನು ನಿರಂತರವಾಗಿಸಲು ಶ್ರಮಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದು ಹೇಳಿದರು. 







ಯಕ್ಷದರ್ಶಿನಿ, ಗ್ರಂಥಾಲಯ ಉದ್ಘಾಟನೆ, ಪುಸ್ತಕಗಳ ಬಿಡುಗಡೆ
ಯಕ್ಷದರ್ಶಿನಿಯನ್ನು ಉದ್ಯಮಿ ಸದಾಶಿವ ಶೆಟ್ಟಿ ಕುಳೂರು ಕನ್ಯಾನ ಉದ್ಘಾಟಿಸಿದರು. ಉದ್ಯಮಿ ಕೆ.ಕೆ. ಶೆಟ್ಟಿ ಅವರು ಭವನದಲ್ಲಿರುವ ಗ್ರಂಥಾಲಯಕ್ಕೆ ಚಾಲನೆ ನೀಡಿದರು.

ಇದೇ ಸಂದರ್ಭದಲ್ಲಿ ಯಕ್ಷಾನುಗ್ರಹ ವಾಟ್ಸ್ಆ್ಯಪ್ ಬಳಗದ ಮೂಲಕ ಸಂಪಾದಿತವಾದ, ಯಕ್ಷಗಾನದ ವೈಭವಕ್ಕೆ ಕಾರಣರಾಗಿ ಮರೆಯಾದ ಹಿರಿಯ ಕಲಾವಿದರ ವಿವರಗಳಿರುವ 'ಮರೆಯಲಾರದ ಮಹಾನುಭಾವರು' (4 ಸಂಪುಟಗಳು), ಕೊಕ್ಕಡ ವೆಂಕಟ್ರಮಣ ಭಟ್ ಅವರ 'ಸರಿಗನ್ನಡ - ಸರಿ ಕನ್ನಡ', ಸಿರಿಬಾಗಿಲುವ ವೆಂಕಪ್ಪಯ್ಯನವರ ಸಮಗ್ರ ಕೃತಿಗಳು 'ಸಿರಿಬಾಗಿಲು' ಹಾಗೂ ಶ್ರದ್ಧಾ ಹೊಳ್ಳ ಅವರ ಕವನ ಸಂಕಲನ - ಈ ಪುಸ್ತಕಗಳನ್ನು ಎಡನೀರು ಮಠಾಧೀಶ ಶ್ರೀಸಚ್ಚಿದಾನಂದ ಭಾರತೀ ಶ್ರೀಪಾದರು ಹಾಗೂ ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಬಿಡುಗಡೆಗೊಳಿಸಿದರು.

ಧರ್ಮಸ್ಥಳದ ಡಾ.ವೀರೇಂದ್ರ ಹೆಗ್ಗಡೆಯವರನ್ನು ಸಿರಿಬಾಗಿಲು ಪ್ರತಿಷ್ಠಾನದ ಪರವಾಗಿ ಮತ್ತು ವಿವಿಧ ಸಂಸ್ಥೆಗಳ ಪರವಾಗಿ ಸನ್ಮಾನಿಸಲಾಯಿತು. ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಕಾರ್ಯದರ್ಶಿ ಪ್ರಕಾಶ್ ಮತ್ತಿಹಳ್ಳಿ ಉಪಸ್ಥಿತರಿದ್ದರು. ಸಂಚಾಲಕ ಡಾ.ಜಯಪ್ರಕಾಶ್ ನಾರಾಯಣ್ ತೊಟ್ಟಿತ್ತೋಡಿ ಸ್ವಾಗತಿಸಿದರು. ಕೊಂಡೆವೂರು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಆಶೀರ್ವಚನ ನೀಡಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಮುಖೇಶ್, ಲಕ್ಷ್ಮೀನಾರಾಯಣ ಕಾವು ಇದ್ದರು. ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಕೋಶಾಧಿಕಾರಿ, ಭಾಗವತ ರಾಮಕೃಷ್ಣ ಮಯ್ಯ ಪ್ರಸ್ತಾವನೆಗೈದರು. ಶ್ರುತಕೀರ್ತಿ ರಾಜ್ ವಂದಿಸಿದರು.

ಕಾರ್ಯಕ್ರಮದ ವಿಡಿಯೋ:

ಸಂಜೆ ನಡೆದ ಸಭಾ ಕಾರ್ಯಕ್ರಮದಲ್ಲಿ ಕಾಸರಗೋಡು ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು ಶಾಸಕ ಎನ್.ಎ.ನೆಲ್ಲಿಕುನ್ನು, ಮಧೂರು ಗ್ರಾಪಂ ಅಧ್ಯಕ್ಷ ಕೆ.ಗೋಪಾಲಕೃಷ್ಣ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಕಾರ್ಯದರ್ಶಿ ಪ್ರಕಾಶ್ ಮತ್ತಿಹಳ್ಳಿ, ಮಂಗಳೂರಿನ ಧರ್ಮದರ್ಶಿ ಹರಿಕೃಷ್ಣ ಪುನರೂರು, ಮಂಗಳೂರು ಕಲ್ಕೂರ ಪ್ರತಿಷ್ಠಾನದ ಪ್ರದೀಪ್ ಕುಮಾರ್ ಕಲ್ಕೂರ ಮತ್ತಿತರರಿದ್ದರು. ರಾಜಾರಾಮ ರಾವ್, ಡಾ.ಶ್ರುತಕೀರ್ತಿರಾಜ್ ನಿರೂಪಿಸಿದರು. ಯೋಗೀಶ್ ರಾವ್ ಚಿಗುರುಪಾದೆ ವಂದಿಸಿದರು.

ಕಾರ್ಯಕ್ರಮದ ಅಂಗವಾಗಿ ವಿವಿಧ ಭಾಗವತರಿಂದ ಗಾನಾರ್ಚನೆ, ಹಾಗೂ ಕೊನೆಯಲ್ಲಿ ಶ್ರೀ ಧರ್ಮಸ್ಥಳ ಮೇಳದವರಿಂದ 'ನಂದಿ ನಂದಿನಿ' ಯಕ್ಷಗಾನ ಬಯಲಾಟ ನಡೆಯಿತು.

ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ ಮತ್ತು ಭವನ
ಯಕ್ಷಗಾನ ಕಲೆ, ಸಾಹಿತ್ಯ, ಸಂಘಟನೆ, ಪ್ರಕಾಶನ ಮುಂತಾದ ಸಾಂಸ್ಕೃತಿಕ ಚಟುವಟಿಕೆಗಳಿಗಾಗಿ ಈ ಭವನ ತಲೆಯೆತ್ತಿದ್ದು, ಇಲ್ಲಿ ಈಗಾಗಲೇ ಹತ್ತಾರು ಯಕ್ಷಗಾನೀಯ ಅಧ್ಯಯನ ಯೋಗ್ಯ ಕಾರ್ಯಕ್ರಮಗಳು ಮೂಡಿಬಂದಿವೆ. ಪ್ರತಿಷ್ಠಾನದ ವತಿಯಿಂದ ರಂಗ ಪ್ರಸಂಗ, ಅರ್ಥಾಂತರಂಗ, ಯಕ್ಷ  ಕಾವ್ಯಾಂತರಂಗ, ತಾಳಮದ್ದಲೆ, ಪೂರ್ವರಂಗ ಅಭಿಯಾನ, ಸಮಾಜಕ್ಕೆ ಜಾಗೃತಿ ಸಂದೇಶ ಸಾರುವ ಪ್ರದರ್ಶನಗಳು, ವಿಶೇಷ ರಂಗ ಸಂಯೋಜನೆಯ ಯಕ್ಷಗಾನ ಪ್ರದರ್ಶನಗಳು ಮುಂತಾಗಿ 500ಕ್ಕೂ ಹೆಚ್ಚು ಕಾರ್ಯಕ್ರಮಗಳು ನಡೆದಿವೆ. 2020ರಲ್ಲಿ ಕೋವಿಡ್  ಮಹಾಮಾರಿಯ ಬಾಧೆಯ ಸಂದರ್ಭದಲ್ಲಿ ಕೊರೊನಾ ಯಕ್ಷ ಜಾಗೃತಿ ಯಕ್ಷಗಾನ ಪ್ರದರ್ಶನ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಪಸರಿಸಿ, ಜನಮನ್ನಣೆ ಗಳಿಸಿ, ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕರ ಮೆಚ್ಚುಗೆಗೂ ಪಾತ್ರವಾಗಿದೆ. ಲಾಕ್ ಡೌನ್ ಸಂದರ್ಭದಲ್ಲಿ ಗಡಿನಾಡು ಕಾಸರಗೋಡಿನ ಕಲಾವಿದರಿಗಾಗಿ ಕೆಲವು ಪ್ರದರ್ಶನಗಳು ಮೂಡಿಬಂದವು. ಅಲ್ಲದೆ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸಹಯೋಗದಲ್ಲಿ ಬಣ್ಣಗಾರಿಕೆಯ ಶಿಬಿರವೂ ನಡೆದಿತ್ತು.

ಯಕ್ಷಗಾನದ ಮೂಲ ಸ್ವರೂಪ ಉಳಿವಿಗಾಗಿ ಪ್ರಯತ್ನ, ದಾಖಲೀಕರಣ, ಯಕ್ಷಗಾನ ವಿದ್ಯಾರ್ಥಿಗಳನ್ನು, ವೃತ್ತಿ ಕಲಾವಿದರನ್ನು, ಹವ್ಯಾಸಿ ಕಲಾವಿದರನ್ನು ಆಮಂತ್ರಿಸಿ ಶಿಬಿರಗಳು, ಯಕ್ಷಗಾನ ಕೀರ್ತಿ ಶೇಷ ಕಲಾವಿದರುಗಳ ಸಮಗ್ರ ಮಾಹಿತಿ ಸಂಗ್ರಹ, ದಾಖಲೀಕರಣ, ಬಣ್ಣಗಾರಿಕೆಯ ಕುರಿತಾದ ಸಮಗ್ರ ಮಾಹಿತಿ ಮುಂದಿನ ದಿನಗಳಲ್ಲಿ ಕಲಾಸಕ್ತ ಬಂಧುಗಳಿಗೆ ನೀಡುವ ಉದ್ದೇಶವಿದೆ. ಅಧ್ಯಯನಕ್ಕಾಗಿ ಬರುವವರಿಗೆ ಖರೀದಿಸಿದ ಜಾಗದಲ್ಲಿ ಅತಿಥಿಗೃಹದ ನಿರ್ಮಾಣ ಯೋಜನೆಗಳೂ ಇವೆ ಎಂದು ಇದರ ರೂವಾರಿ ರಾಮಕೃಷ್ಣ ಮಯ್ಯರು ವಿವರಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು