ಯಕ್ಷಗಾನ ಪ್ರಸಂಗಕರ್ತೃ, ಜಾನಪದ ವಿದ್ವಾಂಸ, ಸಾಹಿತಿ ಪ್ರೊ. ‌ಅಮೃತ ಸೋಮೇಶ್ವರ ನಿಧನ


ಮಂಗಳೂರು: ಅನೇಕ ಜನಪ್ರಿಯ ಯಕ್ಷಗಾನ ಪ್ರಸಂಗಗಳನ್ನು ರಚಿಸಿ ಮನೆಮಾತಾಗಿರುವ, ಕನ್ನಡ ಮತ್ತು ತುಳು ಭಾಷೆಯ ವಿದ್ವಾಂಸ ಪ್ರೊ. ಅಮೃತ ಸೋಮೇಶ್ವರ (88) ವಯೋಸಹಜ ಅನಾರೋಗ್ಯದಿಂದ ಶನಿವಾರ ಬೆಳಿಗ್ಗೆ ನಿಧನರಾದರು. 1935ರ ಸೆ.27ರಂದು ಕೋಟೆಕಾರು ಸಮೀಪ ಅಡ್ಯ ಎಂಬಲ್ಲಿ ಜನಿಸಿದ ಅವರಿಗೆ 88 ವರ್ಷ ವಯಸ್ಸಾಗಿತ್ತು.

ಉಳ್ಳಾಲ ಸಮೀಪದ ಸೋಮೇಶ್ವರದಲ್ಲಿರುವ ಮನೆ ‘ಒಲುಮೆ’ ಯಲ್ಲಿ ಅವರು ಶನಿವಾರ (ಡಿ.6) ಬೆಳಿಗ್ಗೆ 9:15ರ ಸುಮಾರಿಗೆ ಕೊನೆಯುಸಿರೆಳೆದರು ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.

ಯಕ್ಷಗಾನ.ಇನ್ ಅಪ್‌ಡೇಟ್ಸ್ ಪಡೆಯಲು ಫೇಸ್‌ಬುಕ್ | ಟ್ವಿಟರ್ | ಯೂಟ್ಯೂಬ್ ಇನ್‌ಸ್ಟಾಗ್ರಾಂ ಫಾಲೋ ಮಾಡಿ.

ಕರಾವಳಿ ಕರ್ನಾಟಕದ ಮೇರು ಕಲೆಯಾದ ಯಕ್ಷಗಾನದಲ್ಲಿ 30ಕ್ಕೂ ಹೆಚ್ಚು ಪ್ರಸಂಗಗಳನ್ನು ರಚಿಸಿರುವ ಅವರು, ಜಾನಪದ, ಭೂತಾರಾಧನೆ ಕ್ಷೇತ್ರದಲ್ಲಿ ಸಾಕಷ್ಟು ಸಂಶೋಧನೆ ನಡೆಸಿ ನೂರಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ. ಅಮರ ಶಿಲ್ಪಿ ವೀರ ಕಲ್ಕುಡ, ಘೋರ ಮಾರಕ, ಸಹಸ್ರ ಕವಚ ಮೋಕ್ಷ, ಕಾಯಕಲ್ಪ, ಅಮರ ವಾಹಿನಿ, ತ್ರಿಪುರ ಮಥನ, ಆದಿಕವಿ ವಾಲ್ಮೀಕಿ, ಚಾಲುಕ್ಯ ಚಕ್ರೇಶ್ವರ ಮುಂತಾದ ಯಕ್ಷಗಾನ ಪ್ರಸಂಗಗಳಂತೂ ಜನಪ್ರಿಯತೆಯ ಉತ್ತುಂಗಕ್ಕೇರಿದ್ದವು. ವಿಶೇಷವಾಗಿ ಧರ್ಮಸ್ಥಳ ಮೇಳದ ತಿರುಗಾಟಕ್ಕೆ ಇವರ ಪ್ರಸಂಗಗಳೇ ಅಚ್ಚುಮೆಚ್ಚು. ‘ಯಕ್ಷಗಾನ ಕೃತಿ ಸಂಪುಟ’ ಇವರ ಜಾನಪದ ಯಕ್ಷಗಾನ ಸಂಶೋಧನೆಯ ಫಲವಾಗಿ ಮೂಡಿಬಂದ ಬಹು ಮೌಲಿಕ ಕೃತಿ.

ಮದರಾಸು ವಿಶ್ವವಿದ್ಯಾಲಯದಿಂದ ಕಲಾ ವಿಭಾಗದಲ್ಲಿ ಪದವಿ ಪಡೆದಿರುವ ಅಮೃತ ಸೋಮೇಶ್ವರರು, ಸಂಶೋಧಕ, ಅನುವಾದಕ, ವಿಮರ್ಶಕ, ಜಾನಪದ ತಜ್ಞ, ಕವಿ, ಕಥೆಗಾರ ಹಾಗೂ ನಿವೃತ್ತ ಪ್ರಾಧ್ಯಾಪಕರಾಗಿ ಜನಪ್ರಿಯರಾಗಿದ್ದಾರೆ. ಕರಾವಳಿ ಕರ್ನಾಟಕದ ಯಕ್ಷಗಾನ, ಜಾನಪದ, ಭೂತಾರಾಧನೆ ಕ್ಷೇತ್ರದಲ್ಲಿ ಸಾಕಷ್ಟು ಸಂಶೋಧನೆ ನಡೆಸಿದ್ದು, ನೂರಕ್ಕೂ ಹೆಚ್ಚಿನ‌ ಸಂಖ್ಯೆಯಲ್ಲಿ ಕೃತಿಗಳನ್ನು ಹೊರತಂದಿದ್ದಾರೆ.

ಕಥೆ, ಸಾಹಿತ್ಯ, ಕವನ, ಸಣ್ಣ ಕಥೆ, ಕಾದಂಬರಿ,ನಾಟಕ, ವ್ಯಕ್ತಿ ಚಿತ್ರಣ, ಜನಾಂಗ‌ದ ಪರಿಚಯ, ಸಾಹಿತ್ಯ ಪರಿಚಯ, ರೇಡಿಯೋ ರೂಪಕ, ನೃತ್ಯರೂಪಕ, ಸ್ವತಂತ್ರ ಗಾದೆ, ಶಬ್ಧ ಕೋಶ, ಸಂಸ್ಕೃತಿ ಚಿಂತನ, ವಚನ‌ ಸಾಹಿತ್ಯ, ಕುಚೋದ್ಯ ಕೋಶ, ಅಂಕಣ ಲೇಖನ, ನವಸಾಕ್ಷರರಿಗೆ ಸಾಹಿತ್ಯ, ಯಕ್ಷಗಾನ ವಿಚಾರ ವಿಮರ್ಶೆ, ಸಂಪಾದನೆ, ಸಹ ಸಂಪಾದಿತ ಹಲವು ಕೃತಿಗಳು ಇವರ ಸಾಹಿತ್ಯ ಸೇವಾ ಪರಿಧಿಯಲ್ಲಿವೆ.

ತುಳುವಿನಲ್ಲಿ ಕವನ‌ ಸಂಗ್ರಹ, ಪಾಡ್ದನ‌ ಸಂಗ್ರಹ, ನಾಟಕ‌, ಅನುವಾದಿತ ಕಾವ್ಯ, ಅನುವಾದಿತ ನಾಟಕ, ತುಳು ಜಾನಪದ ಕುರಿತಾದ ಸಂಶೋಧನೆ, ಭಕ್ತಿಗೀತೆ, ಭಾವಗೀತೆಗಳ ಕೃತಿಗಳ ಮೂಲಕ ಅವರು ಸಾಹಿತ್ಯ ಲೋಕದಲ್ಲಿ ಮಿನುಗುವ ನಕ್ಷತ್ರದಂತಿದ್ದರು.

ನೆಚ್ಚಿನ ಪ್ರಾಧ್ಯಾಪಕರಾಗಿ, ಕಲೆ-ಸಾಹಿತ್ಯ-ಸಂಶೋಧನಾಸಕ್ತರಿಗೆ ಪ್ರೇರಕರಾಗಿ, ಮಾರ್ಗದರ್ಶಕರಾಗಿ ಗುರುತಿಸಿಕೊಂಡ ಅವರು, 1993ರಲ್ಲಿ ಅಧ್ಯಾಪನ ವೃತ್ತಿಯಿಂದ ನಿವೃತ್ತರಾಗಿದ್ದರು. ತಾವು ಓದಿದ ಅಲೋಷಿಯಸ್ ಕಾಲೇಜಿನಲ್ಲಿ ಅಧ್ಯಾಪಕರಾಗಿ ಕೆಲಸ ಆರಂಭಿಸಿದ ಅವರು, ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದಿಂದ ಎಂ.ಎ.ಪದವಿ ಪಡೆದ ಬಳಿಕ ಪುತ್ತೂರು ಸೈಂಟ್ ಫಿಲೋಮಿನ ಕಾಲೇಜಿನಲ್ಲಿ ಉಪನ್ಯಾಸಕರಾಗಿ, ವಿವೇಕಾನಂದ ಕಾಲೇಜಿನಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾಗಿದ್ದರು.

ಅವರ ಸಾಧನೆಗೆ ಮಂಗಳೂರು‌ ವಿವಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿತ್ತು. ಅಲ್ಲದೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ ಶತಮಾನೋತ್ಸವ ಪ್ರಶಸ್ತಿ,  ಕರ್ನಾಟಕ ಸಾಹಿತ್ಯ ಅಕಾಡೆಮಿಯ 2020 ನೇ ಸಾಲಿನ ’ಗೌರವಶ್ರೀ’ ಪ್ರಶಸ್ತಿ, ಮಣಿಪಾಲ ಅಕಾಡೆಮಿಯ ಮಾಹೆ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಅಮೃತ ಸೋಮೇಶ್ವರರಿಗೆ ಸಂದಿದ್ದವು.

ತುಳು ಭಾಷೆ ಹಾಗೂ ಸಾಹಿತ್ಯಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ 2016ನೇ ಸಾಲಿನಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಭಾಷಾ ಸಮ್ಮಾನ್ ಪ್ರಶಸ್ತಿಯನ್ನು ನೀಡಿ ಅವರನ್ನು ಗೌರವಿಸಲಾಗಿತ್ತು.

ಅವರಿಗೆ ಪತ್ನಿ ನರ್ಮದಾ, ಮಕ್ಕಳಾದ ಚೇತನ್ ಸೋಮೇಶ್ವರ, ಜೀವನ್ ಸೋಮೇಶ್ವರ, ಸೊಸೆಯಂದಿರಾದ ರಾಜೇಶ್ವರಿ, ಸತ್ಯ ಜೀವನ್, ಮೊಮ್ಮಕ್ಕಳಾದ ಸೃಜನ್ ಸೋಮೇಶ್ವರ ಹಾಗೂ ಸೃಷ್ಟಿ ಸೋಮೇಶ್ವರ ಇದ್ದಾರೆ.

ಸೋಮೇಶ್ವರ ಪುರಸಭೆ ಕಚೇರಿ ಬಳಿಯ ಅವರ ಸ್ವಗೃಹದಲ್ಲಿ ಮೃತದೇಹದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ನಾಳೆ, ಭಾನುವಾರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.


ಶ್ರೀ ಅಮೃತ ಸೋಮೇಶ್ವರ ಅವರು ಬರೆದ ಯಕ್ಷಗಾನ ಪ್ರಸಂಗಗಳು (32)
  • 1. ಅಮರಶಿಲ್ಪಿ ವೀರಕಲ್ಕುಡ
  • 2. ಸಹಸ್ರಕವಚಮೋಕ್ಷ
  • 3. ಕಾಯಕಲ್ಪ
  • 4. ಪುತ್ತೂರಮುತ್ತು
  • 5. ಅಮರವಾಹಿನಿ
  • 6. ತ್ರಿಪುರ ಮಥನ
  • 7. ಮಹಾಕಲಿ ಮಗಧೇಂದ್ರ 
  • 8. ವಂಶವಾಹಿನಿ
  • 9. ಮಹಾಶೂರ ಭೌಮಾಸುರ 
  • 10. ಚಕ್ರವರ್ತಿ ದಶರಥ 
  • 11. ಚಂದ್ರಮತೀ ಸ್ವಯಂವರ 
  • 12. ವರುಣಯಾಗ
  • 13. ಸಾರ್ವಭೌಮ ಸಹಸ್ರಾನೀಕ
  • 14. ಚಾಲುಕ್ಯ ಚಕ್ರೇಶ್ವರ
  • 15. ಅಂಧಕಮೋಕ್ಷ 
  • 16. ಘೋರ ಮಾರಕ
  • 17.ಮಾರಿಷಾ ಕಲ್ಯಾಣ 
  • 18. ಅಂಗುಲಿಮಾಲಾ
  • 19. ಅಮರವೀರದ್ವಯ ಕೋಟಿಚೆನ್ನಯ
  • 20. ಅರುಣ ಸಾರಥ್ಯ
  • 21. ಋಷ್ಯಶೃಂಗ
  • 22. ತನಿಯ-ಗುರುವರ ಕಾಳಗ
  • 23. ಪ್ರಜ್ಞಾವಿಜಯ
  • 24. ಭುವನಭಾಗ್ಯ 
  • 25. ಮದಿರಾಸುರ ಮರ್ದನ 
  • 26. ಮಿತ್ರಭೇದ 
  • 27. ವಿದ್ಯಾವಿಜಯ 
  • 28. ಶ್ರೀದೇವಿಭಗವತಿ
  • 29. ಸಂಗ್ಯಾ  ಬಾಳ್ಯಾ 
  • 30. ಸತ್ಯನಾಪುರದ ಸಿರಿ  
  • 31. ಸಿರಿರಾಮ ಪಾದುಕೆ   
  • 32. ರುಧಿರ ಮೋಹಿನಿ
  • ಮಾಹಿತಿ ಕೃಪೆ: ಯಕ್ಷಾನುಗ್ರಹ ಬಳಗ

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು