ಮಧೂರು ಗಣಪತಿ ರಾವ್: ಯಕ್ಷಗಾನ ರಂಗದ ಎಂಜಿಆರ್!


ಯಕ್ಷಗಾನವಿಂದು ಈ ಪರಿಯಾಗಿ ಸಮೃದ್ಧವಾಗಿ, ಶ್ರೀಮಂತವಾಗಿ ಬೆಳೆಯುವಲ್ಲಿ ಸಂದುಹೋದ ಕಲಾವಿದರನೇಕರ ಕೊಡುಗೆ ಅಪಾರ. ಅವರ ಕೊಡುಗೆಯನ್ನು ಸ್ಮರಿಸುತ್ತಾ, ಅವರು ಹಾಕಿಕೊಟ್ಟ ಹಾದಿಯಲ್ಲಿ ಮುನ್ನಡೆಯುವುದು ಪ್ರಸ್ತುತ ಯಕ್ಷಗಾನವನ್ನು ವೃತ್ತಿಯಾಗಿ, ಪ್ರವೃತ್ತಿಯಾಗಿ ಸ್ವೀಕರಿಸಿದವರ ಆದ್ಯ ಕರ್ತವ್ಯ. ಹೀಗೆ, ಅನುಕರಿಸಬಹುದಾದ, ಅನುಸರಿಸಬಹುದಾದ ಕೆಲಸ ಮಾಡಿದವರಲ್ಲಿ ಪ್ರಮುಖರು ಮಧೂರು ಗಣಪತಿ ರಾವ್ (M.G.R).

ಯಕ್ಷಗಾನದ ತವರೂರು ಎಂದೇ ಜನಜನಿತವಾದ ಕುಂಬಳೆ ಸೀಮೆಯಿಂದ ಚಿಗುರೊಡೆದ ಮಹಾನ್ ಕಲಾವಿದ ಮಧೂರು ಗಣಪತಿ ರಾವ್. ನಮ್ಮ ತಲೆಮಾರಿನವರು ಮಧೂರು ಗಣಪತಿ ರಾವ್ ಹೆಸರು ಹೇಳಿದ್ದನ್ನು ಹೆಚ್ಚಿನವರು ಕೇಳಿರುತ್ತೀರಿ.

ಮಧೂರು ಗಣಪತಿ ರಾವ್
ಕೂಡ್ಲು ಮೇಳದಲ್ಲಿ ಚಿರಪರಿಚಿತ ಹೆಸರು ಅವರದು. ಯಕ್ಷಗಾನದ ವಿವಿಧ ಅಂಗಗಳಲ್ಲಿ ಪಾರಮ್ಯ ಸಾಧಿಸಿದ್ದ ಕಲಾವಿದ ಮಧೂರು ಗಣಪತಿ ರಾವ್ ಅವರು ಸುಬ್ಬರಾವ್ ಮತ್ತು ರುಕ್ಮಿಣಿ ದಂಪತಿಯ ಪುತ್ರನಾಗಿ 1924ರಲ್ಲಿ ಜನಿಸಿದವರು. ಪರಿಸರದ ಪ್ರಭಾವದಿಂದಾಗಿ ಅವರು ಯಕ್ಷಗಾನಕ್ಕೆ ಸೆಳೆಯಲ್ಪಟ್ಟರು.

ಇವರ ಸಹೋದರರಾಗಿದ್ದ ಮಧೂರು ನಾರಾಯಣ ಹಾಸ್ಯಗಾರರೂ ಆ ಕಾಲದ ಪ್ರಸಿದ್ಧ ಕಲಾವಿದರು. ಗಣಪತಿ ಅವರಿಗೆ ತಮ್ಮಣ್ಣನ ನಿರಂತರ ಪ್ರೋತ್ಸಾಹವಿತ್ತು. ಆರಂಭದಲ್ಲಿ ಧರ್ಮಸ್ಥಳ ಮೇಳದಲ್ಲಿ ಯಕ್ಷಗಾನ ರಂಗಕ್ಕೆ ಕಾಲಿಟ್ಟ ಗಣಪತಿ ರಾಯರು, ನಂತರ ಕೂಡ್ಲು, ಕುದ್ರೋಳಿ, ಮೂಲ್ಕಿ, ಕುಂಡಾವು, ಸುರತ್ಕಲ್, ಉಪ್ಪಳ, ಸುರತ್ಕಲ್, ಮಲ್ಲ ಮೇಳ, ಮಧೂರು ಮೇಳ ಮುಂತಾದವುಗಳಲ್ಲಿ ವೇಷ ಮಾಡಿ ಜನಪ್ರಿಯತೆ ಗಳಿಸಿದ್ದರು. ಐದು ದಶಕಕ್ಕೂ ಹೆಚ್ಚಿನ ಕಲಾಸೇವೆ ಅವರದು.
ವಿಶೇಷವೆಂದರೆ, ಮುಮ್ಮೇಳ ಮಾತ್ರವಲ್ಲದೆ, ಹಿಮ್ಮೇಳದಲ್ಲೂ ಇವರದು ಗಟ್ಟಿ ಕೈ. ಯಕ್ಷಗಾನದ ಸವ್ಯಸಾಚಿ ಎಂಬ ಹೆಸರಿಗೆ ಸೂಕ್ತ ವ್ಯಕ್ತಿ ಇವರು. ತಾಳಮದ್ದಲೆ ಅರ್ಥಧಾರಿಯಾಗಿಯೂ ಹೆಸರು ಗಳಿಸಿದ್ದ ಇವರ ಕರ್ಣ, ಅರ್ಜುನ, ಸುದರ್ಶನ, ಬಬ್ರುವಾಹನ, ಧರ್ಮಾಂಗದ, ಚಂದ್ರಸೇನ, ಇಂದ್ರಜಿತು, ರಕ್ತಬೀಜ, ತಾಮ್ರಧ್ವಜ, ದೇವೇಂದ್ರ, ಋತುಪರ್ಣ ಪಾತ್ರಗಳು ಜನಪ್ರಿಯ. ಆ ಕಾಲದಲ್ಲಿ ಪುತ್ತಿಗೆ ರಾಮಕೃಷ್ಣ ಜೋಯಿಸ ಭಾಗವತರೊಂದಿಗೆ ಹಿಮ್ಮೇಳ ನುಡಿಸಿದ ಅನುಭವ ಮಧೂರು ಗಣಪತಿ ರಾಯರದು.

ಉಳಿಯ ಶ್ರೀ ಧನ್ವಂತರೀ ಯಕ್ಷಗಾನ ಕಲಾ ಸಂಘದ ಸದಸ್ಯರಾಗಿ, ಮಾರ್ಗದರ್ಶಕರೂ ಆಗಿದ್ದರು. ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ಕೇರಳ ಸಂಗೀತ ನಾಟಕ ಅಕಾಡೆಮಿಯ ಗುರುಪೂಜಾ ಗೌರವ ಪಡೆದಿರುವ ಗಣಪತಿ ರಾವ್ ಅವರಿಗೆ, ಉಳಿಯ ಶ್ರೀ ಧನ್ವಂತರೀ ಯಕ್ಷಗಾನ ಕಲಾ ಸಂಘ, ಸುರತ್ಕಲ್ ಮೇಳ, ಎಡನೀರು ತರುಣ  ಕಲಾವೃಂದ, ಕೊಲ್ಯದ ಶಿವಾಜಿ ಸಂಘ ಮತ್ತು ಎಡನೀರು ಮಠ, ಮಧೂರಿನ ಮಿತ್ರ ಕಲಾವೃಂದ, ಉಳಿಯತ್ತಡ್ಕದ ಆದರ್ಶ ಕಲಾ ಸಂಘ, ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ, ಕೂಡ್ಲು ಶ್ರೀ ಗೋಪಾಲಕೃಷ್ಣ ಶಾನುಭೋಗ್ ಪ್ರತಿಷ್ಠಾನ ವತಿಯಿಂದ ಗೌರವಗಳೂ ಸಂದಿವೆ.

ಪಾತ್ರೋಚಿತ ಮಾತುಗಾರಿಕೆ, ಸ್ವಭಾವ, ಘನತೆ ಅರಿತು ಪಾತ್ರ ನಿರ್ವಹಿಸುವ ಗಣಪತಿ ರಾಯರ ಹುಟ್ಟೂರು ಅಡೂರು ಆಗಿದ್ದರೂ ಕ್ರಮೇಣ ಮಧೂರಿಗೆ ವಾಸ್ತವ್ಯ ಬದಲಾಯಿಸಿ ಮಧೂರು ಗಣಪತಿ ರಾವ್ ಎಂದೇ ಪ್ರಸಿದ್ಧರಾದರು. ಉಳಿಯದಲ್ಲಿ ಹಲವಾರು ಕಲಾವಿದರಿಗೆ ತರಬೇತಿ ನೀಡಿರುವ ಅವರು, ಆಕಾಶವಾಣಿ, ದೂರದರ್ಶನ ಕಾರ್ಯಕ್ರಮಗಳಲ್ಲಿಯೂ ಭಾಗವಹಿಸಿದ್ದಾರೆ. ಮಧೂರಿನ ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ  ದೇವಸ್ಥಾನದಲ್ಲಿ ಪ್ರತಿವರ್ಷ ಇವರ ನೇತೃತ್ವದಲ್ಲಿ ಯಕ್ಷಗಾನ ಆಟ, ಕೂಟಗಳು ನಡೆಯುತ್ತಿದ್ದವು.

ಯಕ್ಷಗಾನ ರಂಗದಲ್ಲಿ ಅದ್ಭುತ ಸಾಧನೆ ಮಾಡಿ, ಯಕ್ಷಗಾನಕ್ಕಾಗಿಯೇ ಬದುಕು ಮುಡಿಪಾಗಿಟ್ಟ ಮಧೂರು ಗಣಪತಿ ರಾವ್ ಅವರ ಕುರಿತು ಎನ್‌ಡಿಟಿವಿ ರಾಷ್ಟ್ರೀಯ ವಾಹಿನಿಯಲ್ಲಿ ಸಾಕ್ಷ್ಯಚಿತ್ರವೂ ಪ್ರಸಾರವಾಗಿದೆ. ಅದನ್ನು ಇಲ್ಲಿ ನೋಡಬಹುದು. ಮಧೂರು ಗಣಪತಿ ರಾವ್ 16 ಸೆಪ್ಟೆಂಬರ್ 2012ರಂದು ತಮ್ಮ 89ನೆಯ ವಯಸ್ಸಿನಲ್ಲಿ ಬದುಕಿನ ರಂಗಕ್ಕೆ ವಿದಾಯ ಹಾಡಿದ್ದು, ಅವರ ಮಕ್ಕಳಿಬ್ಬರು ತಂದೆಯ ಹೆಸರು ಚಿರಸ್ಥಾಯಿಯಾಗಿಸುವಲ್ಲಿ ಶ್ರಮಿಸಿದ್ದಾರೆ.

2003ರಲ್ಲಿ ಪ್ರಸಾರವಾದ, ಮಧೂರು ಗಣಪತಿ ರಾವ್ ಕುರಿತ NDTV ಸಾಕ್ಷ್ಯಚಿತ್ರ ಇಲ್ಲಿದೆ:

ಹಿರಿಯ ಹವ್ಯಾಸಿ ಕಲಾವಿದ, ಲೇಖಕ ನಾ.ಕಾರಂತ ಪೆರಾಜೆ ಅವರು ಒಂದು ಕಡೆ ಬರೆದಿದ್ದಾರೆ:
ತಾನು ಸಂಯೋಜಿಸುವ ಎಲ್ಲಾ ಕೂಟಾಟಗಳಲ್ಲಿ ಅಚ್ಚುಕಟ್ಟುತದತ್ತ ಅವರ ಒಲವು ಹೆಚ್ಚು. ಕಾರ್ಯಕ್ರಮ ಶುರುವಾಗುವ ತನಕ ಚಡಪಡಿಕೆ. 'ಆಹ್ವಾನಿತ ಕಲಾವಿದರು ಬರ್ತಾರೋ, ಇಲ್ವೋ' ಎಂಬ ಒತ್ತಡ. 'ಕಾರ್ಯಕ್ರಮ ಒಳ್ಳೆಯದಾಗಬೇಕು' ಎನ್ನುವುದು ಹಿಂದಿರುವ ಕಾಳಜಿ. ಅವರೊಂದಿಗೆ ವೇಷ ಮಾಡುವ ಅನುಭವ ಇದೆಯಲ್ಲಾ, ಅದೊಂದು ರೋಚಕ! ಅನುಭವಿಸಿದವರಿಗೆ ಗೊತ್ತು.

ಪಾಪಣ್ಣ ವಿಜಯ ಪ್ರಸಂಗದದಲ್ಲಿ ಅವರದು 'ಚಂದ್ರಸೇನ', ನನ್ನ ಪಾತ್ರ 'ಗುಣಸುಂದರಿ'. ಪ್ರಸಂಗದ ಆರಂಭಕ್ಕೆ 'ತಂದೆ ಮೇಲೋ, ಗಂಡ ಮೇಲೋ' ಎಂಬ ವಾದ ಶುರುವಾಗುತ್ತದೆ. ಅವರ ಅನುಭವದ ಮಾತಿನ ಪರಿಪಕ್ವತೆಯ ಮುಂದೆ ನಾನು ಮೂಕನಾದಾಗ, ಪ್ರಶ್ನೆಗಳ ಮೂಲಕ ಮಾತನಾಡಿಸುತ್ತಿದ್ದರು. ಧೈರ್ಯ ತುಂಬುತ್ತಿದ್ದರು. ಆ ಬಳಿಕದ ಅವರ ಒಡನಾಟಗಳೆಲ್ಲಾ ಈಗ ನೆನಪು ಮಾತ್ರ.


ಒಂದು ಕ್ಷಣಕ್ಕೆ ಸಿಟ್ಟಾಗುವ, ಮತ್ತೊಂದು ಕ್ಷಣದಲ್ಲಿ ರಾಜಿ ಮಾಡಿಕೊಳ್ಳುವ ಮಗುವಿನ ಮನಸ್ಸು. ಹೇಳುವ ವಿಚಾರವನ್ನು ನೇರವಾಗಿ ಹೇಳುತ್ತಾರೆ. ಹೀಗಾಗಿ ಕೆಲವೊಮ್ಮೆ ಒರಟಾಗಿ ಕಾಣಿಸಿಕೊಳ್ಳುತ್ತಾರೆ. ಆದರೆ ಅವರ ಒಡನಾಟವಿರುವ, ಅವನ ಮನಸ್ಸನ್ನು ಅರಿತ ಮಂದಿಗೆ ಅವರು ಒರಟಲ್ಲ. ಮೃದು.

ಒಮ್ಮೆ ಅವರ ಪರಿಚಯವಾದರೆ ಸಾಕು, ಮತ್ತೆಂದೂ ನಿಮ್ಮನ್ನು ಬಿಡರು. ಅಷ್ಟೊಂದು ಸ್ನೇಹಬಂಧ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು