ಕಟೀಲು ಮೇಳ: ಜ.14ರಿಂದ ರಾತ್ರಿ ಪೂರ್ತಿ ಯಕ್ಷಗಾನ - ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧ ಚರ್ಚೆ


ಮಂಗಳೂರು: ಕಟೀಲು ಶ್ರೀ ದುರ್ಗಾ‍ಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿಯ ಆರು ಮೇಳಗಳು ಇದುವರೆಗೆ ಕಾಲಮಿತಿಯಲ್ಲಿ ಪ್ರದರ್ಶನವಾಗುತ್ತಿದ್ದ ಯಕ್ಷಗಾನ ಪ್ರಸಂಗಗಳನ್ನು ಮಕರ ಸಂಕ್ರಾಂತಿಯ ಬಳಿಕ ರಾತ್ರಿಯಿಂದ ಮುಂಜಾನೆವರೆಗೆ ಪ್ರದರ್ಶಿಸುವುದಾಗಿ ಆಡಳಿತವು ಘೋಷಿಸಿದೆ.

ಹೈಕೋರ್ಟ್‌ ಇತ್ತೀಚೆಗೆ ನೀಡಿದ ತೀರ್ಪಿನ ಮುಂದುವರಿದ ಭಾಗವಾಗಿ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಸಮಿತಿಯು ಈ ನಿರ್ಧಾರವನ್ನು ಪ್ರಕಟಿಸಿದೆ. ಜನವರಿ 14ರಿಂದಲೇ ರಾತ್ರಿ ಪೂರ್ತಿಯಾಗಿ ಯಕ್ಷಗಾನ ನಡೆಯಲಿದೆ. ಆದರೆ ಇದಕ್ಕೆ ಕೆಲವೊಂದು ಷರತ್ತುಗಳಿರುತ್ತವೆ. ಈ ಕುರಿತು ಆಡಳಿತ ಮಂಡಳಿಯು ಎಲ್ಲ ಆರು ಮೇಳಗಳ ವ್ಯವಸ್ಥಾಪಕರಿಗೆ ಸೂಕ್ತ ನಿರ್ದೇಶನಗಳನ್ನೂ ನೀಡಿದೆ ಎಂದು ತಿಳಿದುಬಂದಿದೆ.
ಈ ಹಿಂದೆ, ಎಂದರೆ 2022ರ ನವೆಂಬರ್ 15ರಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಆದೇಶ ಹೊರಡಿಸಿ, ಯಕ್ಷಗಾನ ಪ್ರದರ್ಶನದ ಅವಧಿಯನ್ನು ಸಂಜೆ 5 ರಿಂದ ಮಧ್ಯರಾತ್ರಿ 12.30ಕ್ಕೆ ಸೀಮಿತಗೊಳಿಸುವಂತೆ ಕಟ್ಟುಪಾಡು ವಿಧಿಸಿದ್ದರು. ಯಕ್ಷಗಾನ ಪ್ರದರ್ಶನದ ಸಂದರ್ಭದಲ್ಲಿ ಧ್ವನಿಯು ಶಬ್ದ ಮಾಲಿನ್ಯ ನಿಯಂತ್ರಣ ನಿಯಮಗಳ ನಿಗದಿತ ಮಿತಿಗಿಂತ ಹೆಚ್ಚು ಇರುತ್ತದೆ ಎಂಬ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ರಾತ್ರಿ 12.30ರ ಬಳಿಕ ಯಕ್ಷಗಾನ ಪ್ರದರ್ಶನಕ್ಕೆ ನಿರ್ಬಂಧ ವಿಧಿಸಿದ್ದರು. ಇದನ್ನು ಪ್ರಶ್ನಿಸಿ ಕಟೀಲು ದೇವಸ್ಥಾನದ ಭಕ್ತರಲ್ಲಿ ಒಬ್ಬರಾದ ಕೃಷ್ಣಕುಮಾರ್‌ ಎಂಬವರು ಹೈಕೋರ್ಟ್‌ ಮೊರೆ ಹೋಗಿದ್ದರು.

ಶಬ್ದಮಾಲಿನ್ಯ ನಿಯಂತ್ರಣ ನಿಯಮಗಳ ಪ್ರಕಾರ ವಿಧಿಸಿರುವ ಮಿತಿಗಳನ್ನು ಅನುಸರಿಸಿ ರಾತ್ರಿ ಪೂರ್ತಿ ಯಕ್ಷಗಾನ ಪ್ರದರ್ಶನ ಏರ್ಪಡಿಸುವುದಕ್ಕೆ ಅಭ್ಯಂತರ ಇಲ್ಲ ಎಂದು ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಅವರು ಈ ಅರ್ಜಿಯ ವಿಚಾರಣೆ ವೇಳೆ ಹೈಕೋರ್ಟ್‌ಗೆ ನಿವೇದಿಸಿಕೊಂಡಿದ್ದರು. ಈ ನಿಯಮಗಳಿಗೆ ಅನುಸಾರವಾಗಿ ಯಕ್ಷಗಾನ ಪ್ರದರ್ಶಿಸಲು ಕಕ್ಷಿದಾರರು ಬದ್ಧರಿದ್ದಾರೆ ಎಂದು ಅರ್ಜಿದಾರರ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದರು.

‘ಕೋವಿಡ್ ಸಮಸ್ಯೆ ಕಾಣಿಸಿಕೊಳ್ಳುವುದಕ್ಕೆ ಮುಂಚಿತವಾಗಿ ಇದ್ದಂತೆ ರಾತ್ರಿ ಪೂರ್ತಿ ಯಕ್ಷಗಾನ ಪ್ರದರ್ಶನ ಏರ್ಪಡಿಸಲು ಜಿಲ್ಲಾಧಿಕಾರಿ ಅನುಮತಿ ನೀಡಬಹುದು. ಆದರೆ ನಿಯಮ ಉಲ್ಲಂಘನೆಯಾದಲ್ಲಿ ಜಿಲ್ಲಾಧಿಕಾರಿ ಸೂಕ್ತ ಕ್ರಮ ಕೈಗೊಳ್ಳಬಹುದು’ ಎಂದು ಹೈಕೋರ್ಟ್‌ ನ್ಯಾಯಮೂರ್ತಿ ಬಿ.ನಾಗಪ್ರಸನ್ನ ಅವರು ತೀರ್ಪು ನೀಡಿದ್ದರು.

ಕಟೀಲು ಮೇಳಗಳ ಎಲ್ಲ ಯಕ್ಷಗಾನಗಳೂ ದೇವಿಗೆ ಹರಕೆ ಸೇವೆಯ ರೂಪದಲ್ಲಿ ಜರುಗುತ್ತವೆ. ಇಲ್ಲಿ ಮನರಂಜನೆ ಪ್ರಧಾನ ಅಲ್ಲ ಮತ್ತು ಪ್ರೇಕ್ಷಕರ ಸಂಖ್ಯೆಯೂ ಮುಖ್ಯವಾಗಿರುವುದಿಲ್ಲ. ಪರಂಪರೆಯಂತೆ ಹರಕೆ ಹೇಳಿಕೊಂಡ ಭಕ್ತರು ರಾತ್ರಿಪೂರ್ತಿ ಯಕ್ಷಗಾನ ನಡೆಸಿ ದೇವಿಯ ಕೃಪೆಗೆ ಪಾತ್ರರಾಗುವುದು ಮುಖ್ಯ. ಭಕ್ತರ ಅಭಿಲಾಷೆಯೂ ಇದೇ ಆಗಿತ್ತು ಮತ್ತು ಈಗ ಬೆಳಗಿನವರೆಗೆ ಯಕ್ಷಗಾನ ಪ್ರದರ್ಶನಕ್ಕಿರುವ ಅಡೆತಡೆಗಳು ನಿವಾರಣೆಯಾಗಿವೆ. ಹೀಗಾಗಿ ಮೊದಲಿನಂತೆ ಕಟೀಲು ಕ್ಷೇತ್ರದಿಂದ ನಡೆಯುವ ಆರು ಮೇಳಗಳಲ್ಲೂ ರಾತ್ರಿ ಪೂರ್ತಿ ಯಕ್ಷಗಾನ ನಡೆಸಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷ ಹಾಗೂ ಆನುವಂಶಿಕ ಮೊಕ್ತೇಸರ ಕೊಡೆತ್ತೂರುಗುತ್ತು ಸನತ್‌ ಕುಮಾರ್‌ ಶೆಟ್ಟಿ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಶಬ್ದಮಾಲಿನ್ಯದ ಕುರಿತ ನಿಬಂಧನೆಗಳನ್ನು ಮೀರದಂತೆ ಕ್ರಮ ಕೈಗೊಳ್ಳಬೇಕಾಗಿರುವುದರಿಂದ, ರಾತ್ರಿ ವೇಳೆ ಧ್ವನಿಯ ಮಟ್ಟ ಕಡಿಮೆಗೊಳಿಸುವ ಬಗ್ಗೆ ಸೂಕ್ತ ಎಚ್ಚರಿಕೆ ತೆಗೆದುಕೊಳ್ಳುವಂತೆ ಎಲ್ಲ ಮೇಳಗಳ ವ್ಯವಸ್ಥಾಪಕರಿಗೆ ಸೂಚಿಸಲಾಗಿದೆ.


ಕಟೀಲು ದೇವಸ್ಥಾನದ ಆಡಳಿತ ಸಮಿತಿಯ ಈ ನಿರ್ಧಾರವು ಮಿಶ್ರ ಪ್ರತಿಕ್ರಿಯೆಗೆ ಕಾರಣವಾಗಿದೆ. ಕೆಲವು ಭಕ್ತರಲ್ಲಿ ಇದು ಸಂತಸ ಮೂಡಿಸಿದ್ದರೆ, ಕಲಾವಿದರ ವಲಯದಲ್ಲಿ ಆತಂಕಭರಿತ ಪ್ರತಿಕ್ರಿಯೆಗಳು ಕೇಳಿಬರುತ್ತಿವೆ.

ಕಟೀಲು ಕ್ಷೇತ್ರದ ಭಕ್ತರಿಂದ ಹೋರಾಟ
ಯಕ್ಷಗಾನ ಹಿಂದಿನಂತೆಯೇ ರಾತ್ರಿಯಿಂದ ಬೆಳಗಿನವರೆಗೆ ನಡೆಯಬೇಕು ಎಂದು ಒತ್ತಾಯಿಸಿ ಭಕ್ತರು ಶ್ರೀ ಕಟೀಲು ಯಕ್ಷಸೇವಾ ಸಮನ್ವಯ ಸಮಿತಿ ರಚಿಸಿ, ಅದರ ನೇತೃತ್ವದಲ್ಲಿ ಅಲ್ಲಲ್ಲಿ ಸಭೆ ನಡೆಸಿ ಸರ್ಕಾರವನ್ನು ಒತ್ತಾಯಿಸಿದ್ದರು. 2022ರ ನ.6ರಂದು ಬಜಪೆಯ ಶಾರದಾ ಶಕ್ತಿ ಮಂಟಪದಿಂದ ಕಟೀಲು ಕ್ಷೇತ್ರದವರೆಗೆ 'ಕಟೀಲಮ್ಮನೆಡೆ ಭಕ್ತರ ನಡೆ' ಪಾದಯಾತ್ರೆ ಹಮ್ಮಿಕೊಂಡು ಸರ್ಕಾರದ ಮೇಲೆ ಒತ್ತಡ ಹೇರುವ ಪ್ರಯತ್ನ ನಡೆಸಿದ್ದರು. ಕರಾವಳಿಯ ವಿವಿಧ ಊರುಗಳಿಂದ ಬಂದಿದ್ದ ಭಕ್ತರು, ಯಕ್ಷಗಾನಾಭಿಮಾನಿಗಳು ಈ ಪಾದಯಾತ್ರೆಯಲ್ಲಿ ಜೊತೆಗೂಡಿದ್ದರು. ಈ ಕುರಿತು ಕಾನೂನು ಹೋರಾಟವನ್ನೂ ಸಮನ್ವಯ ಸಮಿತಿ ನಡೆಸಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು