ಯಕ್ಷಗಾನದ ಚಿಕ್ಕಮೇಳಗಳಿಗೆ ನಿಯಮ: ಯಕ್ಷಗಾನ ವೇಷ ಧರಿಸಿ ಭಿಕ್ಷೆ ಬೇಡುವುದರ ವಿರುದ್ಧವೂ ಕ್ರಮಕ್ಕೆ ಆಗ್ರಹ


ಮಂಗಳೂರು: ಮೇಳಗಳು ಒಳಗಾಗಿ (ಗೆಜ್ಜೆ ಬಿಚ್ಚಿದ ಬಳಿಕ), ಮಳೆಗಾಲದಲ್ಲಿ ಮನೆಮನೆಗೆ ತೆರಳಿ, ಸಣ್ಣ ಪ್ರಸಂಗ ಭಾಗಗಳನ್ನು ಪ್ರದರ್ಶಿಸುವ ಯಕ್ಷಗಾನದ ಚಿಕ್ಕಮೇಳಗಳಿಗೆ ಕೆಲವೊಂದು ನಿಯಮಗಳನ್ನು ರೂಪಿಸಲಾಗಿದೆ.

ತೆಂಕುತಿಟ್ಟು ಚಿಕ್ಕಮೇಳಗಳ ಒಕ್ಕೂಟದ ದಕ್ಷಿಣ ಕನ್ನಡ ಜಿಲ್ಲೆಯ ಕೇಂದ್ರ ಸಮಿತಿಯ ಪದಾಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಸೋಮವಾರ ಮಾಹಿತಿ ನೀಡಿದ್ದಾರೆ.
ಯಕ್ಷಗಾನ ಕಲೆಯನ್ನೇ ಆಶ್ರಯಿಸಿಕೊಂಡಿದ್ದ ಕಲಾವಿದರು, ಮೇಳಗಳ ತಿರುಗಾಟವಿಲ್ಲದ ಮಳೆಗಾಲದಲ್ಲಿ ಜೀವನೋಪಾಯಕ್ಕಾಗಿ ಮತ್ತು ಪೌರಾಣಿಕ ಕಥೆಗಳ ಪ್ರಸಾರಕ್ಕಾಗಿ, ಮನೆಯಲ್ಲೇ ಮನರಂಜನೆಗಾಗಿ ರೂಪಿಸಿದ್ದೇ ಚಿಕ್ಕಮೇಳ ಎಂಬ ವ್ಯವಸ್ಥೆ. ಇದನ್ನು "ರಾಧಾಕೃಷ್ಣ" ಮೇಳ ಎಂದೂ ಕರೆಯಲಾಗುತ್ತದೆ.

ಪ್ರತೀ ಹಿಂದೂಗಳ ಮನೆಯ ಚಾವಡಿಯಲ್ಲಿ ಅವರು ಸಂಜೆ ವೇಳೆ ಚೆಂಡೆ, ಮದ್ದಳೆ, ಭಾಗವತಿಕೆ ಹಾಗೂ ಎರಡು ವೇಷಗಳೊಂದಿಗೆ ಪ್ರದರ್ಶನ ನೀಡುತ್ತಿದ್ದರು. ಕನಿಷ್ಠ ಸಮಯದಲ್ಲಿ ಪುರಾಣ ಅಥವಾ ಇತಿಹಾಸದ ಒಂದು ತುಣುಕನ್ನು ಆಧರಿಸಿ ಪ್ರದರ್ಶನಗೊಳಿಸಿ, ಮನೆಯವರಿಂದ ಗೌರವ ಸಂಭಾವನೆ ಪಡೆದು ಅಲ್ಲಿಂದ ಮುಂದಿನ ಮನೆಗೆ ತೆರಳುವುದು ಪದ್ಧತಿ. ಈ ತಂಡವು ಅಭ್ಯಾಸಿ ಕಲಾವಿದರನ್ನು ಒಟ್ಟು ಮಾಡಿಕೊಂಡು "ಸಂಚಾರಿ ಚಿಕ್ಕ ಮೇಳ" ಹೆಸರಿನಲ್ಲಿ ತಿರುಗಾಟ ಮಾಡುತ್ತಿತ್ತು.
ಸುದ್ದಿಗೋಷ್ಠಿಯಲ್ಲಿ ರಮೇಶ್ ಕುಲಶೇಖರ, ಕಡಬ, ಸರಪಾಡಿ, ಮಾಲೆಮಾರ್, ಕಾವಳಕಟ್ಟೆ

ಆದರೆ, ಕಾಲ ಬದಲಾದಾಗ ಕೆಲವು ಚಿಕ್ಕ ಮೇಳಗಳು ಶಿಸ್ತು ಉಲ್ಲಂಘಿಸಿ ಕೆಲವು ಕಡೆ ಯಕ್ಷಗಾನದ ಬಾಲಪಾಠವೂ ಆಗದವರಿಂದ ಚಿಕ್ಕ ಮೇಳ ಎಂದು ಹೆಸರಿಟ್ಟುಕೊಂಡು ಜಿಲ್ಲೆಯಲ್ಲಿ ಅದೊಂದು ದಂಧೆಯಾಗಿ ಪರಿವರ್ತನೆಗೊಂಡಿದೆ ಎಂಬ ಆರೋಪ ಇತ್ತೀಚೆಗೆ ಕೇಳಿಬಂದಿತ್ತು. ಕಳೆದ ಬಾರಿಯ ತಿರುಗಾಟದ ವೇಳೆ ಒಂದೆರಡು ಅನಪೇಕ್ಷಿತ ಘಟನೆಗಳು ಕೂಡಾ ನಡೆದವು. ಹೀಗೆ ಅಶಿಸ್ತು ಹಾಗೂ ಅಸಂಬದ್ಧ ನಡೆಯಬಾರದು ಎಂಬ ಉದ್ದೇಶದಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಎಲ್ಲಾ ಚಿಕ್ಕ ಮೇಳಗಳ ಮುಖಂಡರನ್ನು ಹಾಗೂ ಕಲಾವಿದರನ್ನು ಒಂದೇ ಛತ್ರದಡಿ ತಂದು, "ತೆಂಕುತಿಟ್ಟು ಚಿಕ್ಕ ಮೇಳಗಳ ಒಕ್ಕೂಟ ಕೇಂದ್ರ ಸಮಿತಿ ದ.ಕ. ಜಿಲ್ಲೆ" ಹೆಸರಿನಲ್ಲಿ ಸಂಸ್ಥೆಯೊಂದನ್ನು ಹುಟ್ಟುಹಾಕಲಾಗಿತ್ತು.

ಎಲ್ಲಾ ಚಿಕ್ಕ ಮೇಳಗಳ ತಂಡಗಳು ನೋಂದಾವಣೆಗೊಂಡು ಒಕ್ಕೂಟದ ಅಧಿಕೃತ ಪರವಾನಗಿ ಪಡೆದು ತಿರುಗಾಟ ಮಾಡುವುದು, ಸಂಜೆ 6 ಗಂಟೆಯಿಂದ ರಾತ್ರಿ 10.30 ತನಕ ಕನ್ನಡ ಮತ್ತು ತುಳುಭಾಷೆಗಳ ಯಾವುದಾದರೂ ಗರಿಷ್ಠ 20 ನಿಮಿಷಗಳನ್ನು ಮೀರದ ಒಳ್ಳೆಯ ಸಂದೇಶ ಇರುವ ಸನ್ನಿವೇಶದ ಪ್ರದರ್ಶನ ನಡೆಸುವುದು ಎಂದು ಸಮಿತಿಯು ಹೇಳಿತ್ತು.

ಈ ಹಿನ್ನೆಲೆಯಲ್ಲಿ ಚಿಕ್ಕಮೇಳಗಳಿಗೆ ರೂಪಿಸಲಾದ ನಿಯಮಗಳನ್ನು ಪತ್ರಿಕಾಗೋಷ್ಠಿಯಲ್ಲಿ ವಿವರಿಸಲಾಯಿತು.

ಯಕ್ಷಗಾನದ ಚಿಕ್ಕಮೇಳಗಳು ಪಾಲಿಸಬೇಕಾದ ನಿಯಮಗಳು
  • ಶಿಸ್ತು, ಸರಳತೆ, ಭಕ್ತಿಯೊಂದಿಗೆ ಮನೆ ಪ್ರವೇಶ.
  • ಮನೆಯೊಳಗೆ ಪ್ರವೇಶ ಮಾಡುವಾಗ ದೇವರ ಫೋಟೋ ವೇಷಧಾರಿಯ ಕೈಯಲ್ಲೇ ಇರಬೇಕು. ಇತರ ಕೆಲಸ ಸಹಾಯಕರು ಸಹಾಯ ಮಾಡಬಹುದು.
  • ಗಣಪತಿ ಸ್ವಸ್ತಿಕ ಕಡ್ಡಾಯ ಎಂದು ಹೇಳಬಾರದು. ಅನುಕೂಲವಿದ್ದರೆ ಮಾಡಿದರೆ ಉತ್ತಮ ಎಂದು ಮಾತ್ರ ಹೇಳಬಹುದು. (ಅಕ್ಕಿ, ತೆಂಗಿನಕಾಯಿ, ಬಾಳೆಹಣ್ಣು, ಬಾಳೆಲೆ, ವೀಳ್ಯದೆಲೆ, ಅಡಿಕೆ)
  • ವೇಷ ಭೂಷಣ ಒಪ್ಪ ಓರಣವಾಗಿರಬೇಕು.
  • ಹಿಮ್ಮೇಳದವರು ಮುಂಡಾಸು ಇಟ್ಟು ತಿಲಕ ಇಟ್ಟು ಶ್ವೇತ ವಸ್ತ್ರಧಾರಿಗಳಾಗಿದ್ದರೆ ಶೋಭೆ.
  • ಒಂದು ಮನೆಯಿಂದ ಇನ್ನೊಂದು ಮನೆಗೆ ಹೋಗುವಾಗ ಮಾತನಾಡಿಕೊಂಡು ಹೋಗುವ ಬದಲು ಮೌನಕ್ಕೆ ಪ್ರಾಶಸ್ತ್ಯ ನೀಡಬೇಕು.
  • ಮನೆಯ ವರಾಂಡ (ಸಿಟೌಟ್) ಅಥವಾ ಚಾವಡಿಯಲ್ಲಿ ಮಾತ್ರ ಪ್ರದರ್ಶಿಸಬೇಕು. ಕರಪತ್ರ ನೀಡಿದ ನಂತರ ಮನೆಯವರು ಒಪ್ಪಿಗೆ ಕೊಟ್ಟ ನಂತರ ಎಲ್ಲಿ ಪ್ರದರ್ಶನ ಮಾಡಬಹುದೆಂದು ಮನೆಯವರಲ್ಲಿ ತಿಳಿದುಕೊಳ್ಳಬಹುದು.
  • ಚೌಕಿಯಿಂದ ಹೊರಟ ಬಳಿಕ ಧೂಮಪಾನ, ಮದ್ಯಪಾನ, ಗುಟ್ಕಾ, ಮಧು ಇತ್ಯಾದಿಗಳ ಸೇವನೆ ಕಡ್ಡಾಯವಾಗಿ ನಿಷೇಧ.
  • ಪ್ರದರ್ಶನ ಸಂದರ್ಭ ಎಲ್ಲಾ ಕಲಾವಿದರು ತಮ್ಮ ಮೊಬೈಲನ್ನು “ಮೌನ” ದಲ್ಲಿ ಇಡಲೇಬೇಕು. ಯಾವುದೇ ಕಾರಣಕ್ಕೂ ಪ್ರದರ್ಶನದ ಮನೆಯಲ್ಲಿ ಮೊಬೈಲ್ ಉಪಯೋಗ ಮಾಡಬಾರದು.
  • ಕೊನೆಗೆ ಭಾಗವತರು ಚಿಕ್ಕಮೇಳ ಹೊರಟ ಕ್ಷೇತ್ರದ ಬಗ್ಗೆ ಹಾಗೂ ಚಿಕ್ಕ ಮೇಳದ ಪ್ರದರ್ಶನ ನೀಡುವ ಪ್ರಯೋಜನದ ಬಗ್ಗೆ ಸಂಕ್ಷಿಪ್ತ ವಿವರಣೆ ನೀಡಬೇಕು.
  • ಕನಿಷ್ಠ 20 ನಿಮಿಷಕ್ಕಿಂತ ಕಡಿಮೆ ಇರದಂತೆ ಪ್ರದರ್ಶನ ಮತ್ತು ಪ್ರಸಾದ ನೀಡಿ ಹೊರಡಬೇಕು.
  • ಪ್ರಸಾದವನ್ನು ನೀಡಿ ಹಿರಿಯರ ಆಶೀರ್ವಾದವನ್ನು (ಅನಗತ್ಯ ಮಾತುಕತೆ ಬೇಡ) ಪಡೆದು ತೆರಳಬೇಕು.
  • ಕರಪತ್ರ ಕೊಡಲು ಹೋಗುವ ವ್ಯಕ್ತಿ ಹಿಂದಿನ ದಿನವೇ ಶುಚಿರ್ಭೂತನಾಗಿ ಮನೆಯವರಿಗೆ ನಮಸ್ಕಾರ ಮಾಡಿ ಕರಪತ್ರ ನೀಡಿ ತಮ್ಮಲ್ಲಿಗೆ ಬರುವ ಸಮಯವನ್ನು ತಿಳಿಸಿದರೆ ಉತ್ತಮ.
  • ಕರಪತ್ರದಲ್ಲಿ ಇಂತಿಷ್ಟು ಮೌಲ್ಯ ನೀಡಬೇಕೆಂದು ಸೂಚಿಸಬಾರದು.
  • ಅತೀ ಪರಿಚಯದವರ ಮನೆಯಾದರೆ ಮಂಗಳದೊಂದಿಗೆ ಮುಕ್ತಾಯ ಮಾಡಿ ಅವರು ವ್ಯವಸ್ಥೆ ಮಾಡಿದ್ದರೆ ಊಟ ಮಾಡಬಹುದು.
  • ಮನೆಯವರು ಪಾನೀಯ ಕೊಟ್ಟರೆ ನಿರಾಕರಿಸಬಾರದು. ಸ್ವಲ್ಪವಾದರು ಎಲ್ಲರೂ ಸ್ವೀಕರಿಸಲೆಬೇಕು.

ಯಕ್ಷಗಾನದ ಚಿಕ್ಕಮೇಳದ ಸಂಘಟಕರಿಗೆ ನಿಬಂಧನೆಗಳು:
  • ತಂಡದ ವ್ಯಕ್ತಿಯ, ಕಲಾವಿದರ ಮತ್ತು ಸಹಾಯಕರ ಹೆಸರು, ವಿಳಾಸ, ಭಾವಚಿತ್ರ, ದೂರವಾಣಿ ಸಂಖ್ಯೆಯು ಕರಪತ್ರದಲ್ಲಿರಬೇಕು.
  • ಕಲಾವಿದರ ಬಗ್ಗೆ ವೃತ್ತಿ ಮೇಳದ ಯಜಮಾನರಿಂದ ಶಿಫಾರಸ್ಸು ಪತ್ರ ಬೇಕು.
  • ತಾವು ಸುತ್ತಾಟ ಮಾಡುವ ಗ್ರಾಮಗಳ ಗ್ರಾಮಾಧಿಕಾರಿ (ಪಿ.ಡಿ.ಒ) ಅವರ ಅನುಮತಿ ಪತ್ರ
  • ದೇವಸ್ಥಾನ ಆಡಳಿತಾಧಿಕಾರಿ / ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರ ಅನುಮತಿ ಪತ್ರ.
  • ತಿರುಗಾಟ ಮಾಡುವ ವ್ಯಾಪ್ತಿಯ ಆರಕ್ಷಕ ಠಾಣೆಯಿಂದ ಅನುಮತಿ (ಇದನ್ನು ವಿಮರ್ಶಿಸಿ)
  • ತಿರುಗಾಟದ ಸಮಯ: ಹತ್ತನಾವಧಿಯಿಂದ ದೀಪಾವಳಿ ತನಕ
  • ತಿರುಗಾಟದ ಅವಧಿ ಸಂಜೆ 5.30 ರಿಂದ 10.30 ರೊಳಗೆ ಮುಗಿಯಬೇಕು.
ಈ ಮೇಲಿನ ನಿಬಂಧನೆಗಳನ್ನು ಉಲ್ಲಂಘಿಸಿದಲ್ಲಿ ಒಕ್ಕೂಟದಿಂದ ಕೈ ಬಿಡಲಾಗುವುದು ಮತ್ತು ಸಂಬಂಧಿತ ದೇವಸ್ಥಾನ ಹಾಗೂ ಪೊಲೀಸ್ ಠಾಣೆಗೆ ಮತ್ತು ಆ ತಂಡ ತಿರುಗಾಟ ಮಾಡುವ ವ್ಯಾಪ್ತಿಯಲ್ಲಿನ ಸಂಘಟನೆಗೆ ತಿರುಗಾಟ ಮಾಡದಂತೆ ಮಾಹಿತಿ ನೀಡಲಾಗುವುದು.
  • ಉಳಿದಂತೆ, ತಂಡದ ಒಂದು ದಿನದ ಸಂಗ್ರಹವನ್ನು ಒಕ್ಕೂಟದ ಕಲಾವಿದರ ಹಿತಚಿಂತನೆಗಾಗಿ ನಿಧಿಗೆ ಅರ್ಪಿಸಬೇಕು. ಇದನ್ನು ಒಕ್ಕೂಟದ ಜಂಟಿ ಹೆಸರಲ್ಲಿ ಉಳಿತಾಯ ಖಾತೆಯಲ್ಲಿ ಇರಿಸಬಹುದು.
  • ತಿರುಗಾಟದ ಕೊನೆಗೆ ಎಲ್ಲಾ ಲೆಕ್ಕಾಚಾರ ಚುಕ್ತಾ ಮಾಡಬೇಕು. ಚುಕ್ತಾ ಆದ ಬಗ್ಗೆ ಕಲಾವಿದರಿಂದ ಸಹಿ ಪಡೆದ ಪತ್ರ ಪಡೆಯಬೇಕು.
  • ಕ್ಷೇತ್ರದಿಂದ ತಂದ ಕಾಣಿಕೆ ಡಬ್ಬಿಯನ್ನು ಮತ್ತೆ ಕ್ಷೇತ್ರಕ್ಕೆ ತಲುಪಿಸಿ ಅದರಲ್ಲಿ ಸಂಗ್ರಹವಾದ ಮೊತ್ತವನ್ನು ನೀಡಿ ಅಧಿಕೃತ ರಶೀದಿಯ ಪ್ರತಿಯನ್ನು ಪಡೆದು ಒಕ್ಕೂಟಕ್ಕೆ ತಲುಪಿಸಬೇಕು.
  • ಸಂಭಾವನೆ ನಿರ್ಧಾರ ತಿರುಗಾಟಕ್ಕಿಂತ ಮೊದಲೇ ಮಾಡಿರಬೇಕು. ಒಪ್ಪಂದ ಪತ್ರಕ್ಕೆ ಸಹಿ ಪಡೆದಿರಬೇಕು. ಪ್ರತಿ ವಾರ ಸಂಭಾವನೆ ನೀಡಬೇಕು
  • ಬೇರೆ ತಂಡದ ಕಲಾವಿದರನ್ನು ತಿರುಗಾಟದ ಮಧ್ಯದಲ್ಲಿ ತಮ್ಮ ತಂಡಕ್ಕೆ ಬಳಸಿಕೊಳ್ಳಬಾರದು.
  • ತಿರುಗಾಟದ ಮಧ್ಯೆ ಯಾವುದೇ ರೀತಿಯ ಅಡಚಣೆಯಾದಲ್ಲಿ ತಕ್ಷಣ ಒಕ್ಕೂಟಕ್ಕೆ ಮಾಹಿತಿ ನೀಡುವುದು.
ಚಿಕ್ಕಮೇಳದ ಯಕ್ಷಗಾನ ಏರ್ಪಡಿಸುವವರಿಗೆ
  • ಪ್ರತೀ ಮನೆಯವರು ಒಕ್ಕೂಟದ ಪರವಾನಗಿ ಇದ್ದವರಿಗೆ ಮಾತ್ರ ಅವಕಾಶ ಮಾಡಿ ಕೊಟ್ಟು, ವ್ಯವಸಾಯಿ ಕಲಾವಿದರ ಬದುಕು ಹಸನಾಗುವಲ್ಲಿ ಸಹಕಾರ ನೀಡಬೇಕಾಗಿ ಒಕ್ಕೂಟದ ಪದಾಧಿಕಾರಿಗಳು ವಿನಂತಿಸಿದ್ದಾರೆ.
  • ಒಂದೇ ಊರಿನಲ್ಲಿ ಎರಡೆರಡು ತಂಡ ಮನೆಗೆ ಭೇಟಿ ನೀಡುವಂತಿಲ್ಲ. ಇನ್ನೊಂದು ತಂಡ ನಿಮ್ಮಲ್ಲಿಗೆ ಬಂದರೆ ಅವಕಾಶ ಕೊಡಬಾರದು
  • ನಿಗದಿತ ಸಮಯ (ರಾತ್ರಿ 10.30) ಕಾರ್ಯಕ್ರಮ ಮುಕ್ತಾಯಗೊಳ್ಳಬೇಕು
  • ತಂಡದಿಂದ ಅನಪೇಕ್ಷಿತ ಘಟನೆ ನಡೆದರೆ ಒಕ್ಕೂಟಕ್ಕೆ ಮನೆಯವರು ದೂರು ನೀಡಬಹುದು.
  • ವ್ಯವಸಾಯ ಮಾಡುತ್ತಿರುವ ಕಲಾವಿದರ ತಂಡಕ್ಕೆ ಬಹುತೇಕ ಒಕ್ಕೂಟ ಪರವಾನಗಿ ನೀಡುತ್ತದೆ.
  • ಒಕ್ಕೂಟದ ಪದಾಧಿಕಾರಿಗಳು ಯಾವುದೇ ಚಿಕ್ಕ ಮೇಳದ ಫಲಾನುಭವಿಗಳು ಅಲ್ಲ
  • ಚಿಕ್ಕ ಮೇಳಗಳ ತಿರುಗಾಟದಲ್ಲಿ ಸಂಗ್ರಹ ಆದ ಸಂಪಾದನೆಯ ಒಂದು ಭಾಗ ಚಿಕ್ಕಮೇಳದ ಕಲಾವಿದರ ಸಂಕಷ್ಟ ನಿಧಿಯಾಗಿ ಠೇವಣಿ ಇಡಲಾಗುವುದು.

ವೇಷ ಧರಿಸಿ ಭಿಕ್ಷೆ ಬೇಡುವುದನ್ನು ನಿಷೇಧಿಸಲು ಆಗ್ರಹ
ಈ ಮಧ್ಯೆ, ಹಿಂದೂ ಹಬ್ಬಗಳ ಸಂದರ್ಭ ಯಕ್ಷಗಾನ ವೇದಿಕೆಯ ಪ್ರದರ್ಶನ ಹೊರತುಪಡಿಸಿದ ಇತರ ಕಾರ್ಯಕ್ರಮಗಳಲ್ಲಿ ಎಂದರೆ ನವರಾತ್ರಿ, ದಸರಾ, ಗಣೇಶೋತ್ಸವ, ಅಷ್ಟಮಿ ಸಂದರ್ಭಗಳಲ್ಲಿ ಯಕ್ಷಗಾನದ ವೇಷಭೂಷಣ ಧಾರಣೆ ಮಾಡಿ ಭಿಕ್ಷಾಟನೆ ಮಾಡುವುದನ್ನು ನಿಷೇಧಿಸಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂದು ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.

ಈ ನಿಯಮವನ್ನು ಉಲ್ಲಂಘನೆ ಮಾಡಿದರೆ ಸಾರ್ವಜನಿಕರು, ಕಲಾಭಿಮಾನಿಗಳು ಅಂತಹಾ ವೇಷಧಾರಿಗಳನ್ನು ತಡೆದು ನಿಲ್ಲಿಸಿ ಸ್ಥಳೀಯ ಆರಕ್ಷಕ ಠಾಣೆಗೆ ತಿಳಿಸಬೇಕೆಂದು ಅವರು ಆಗ್ರಹಿಸಿದ್ದಾರೆ. ಅಲ್ಲದೇ ಅವರಿಗೆ ಬಣ್ಣಹಚ್ಚಿ ವೇಷ ಭೂಷಣ ಬಾಡಿಗೆಗೆ ನೀಡುವವರು ಕೂಡಾ ಕಲೆಯ ಗೌರವ ಉಳಿಸುವುದಕ್ಕಾಗಿ ನಮ್ಮೊಂದಿಗೆ ಕೈ ಜೋಡಿಸಬೇಕೆಂದು ಸಮಿತಿ ವಿನಂತಿಸಿದೆ.

ತೆಂಕುತಿಟ್ಟು ಚಿಕ್ಕ ಮೇಳಗಳ ಒಕ್ಕೂಟ ದ.ಕ ಜಿಲ್ಲೆ ಕೇಂದ್ರ ಸಮಿತಿಯ ಅಧ್ಯಕ್ಷ ಸರಪಾಡಿ ಅಶೋಕ ಶೆಟ್ಟಿ, ಉಪಾಧ್ಯಕ್ಷರಾದ ರಮೇಶ ಕುಲಶೇಖರ, ಮೋಹನ ಕಲಂಬಾಡಿ, ಪ್ರಧಾನ ಕಾರ್ಯದರ್ಶಿ ಕುಮಾರ್ ಮಾಲೆಮಾರ್, ಕಾರ್ಯದರ್ಶಿ ದಿವಾಕರ ದಾಸ್ ಶ್ರುತಿ ಆರ್ಟ್ಸ್, ಜತೆಕಾರ್ಯದರ್ಶಿ ಕಡಬ ದಿನೇಶ ರೈ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

1 ಕಾಮೆಂಟ್‌ಗಳು

ನಿಮ್ಮ ಅಭಿಪ್ರಾಯ ತಿಳಿಸಿ

  1. Eega chende ellade gadibidiyalli baruttare, eche maneyinda ache manege baruvudu gottaagodilla , adudarinda Chende kaddayvagi erali. Dinakke Mane kooda limit erali. Yakshaganada sampradaya uliyali.

    ಪ್ರತ್ಯುತ್ತರಅಳಿಸಿ
ನವೀನ ಹಳೆಯದು