ರಾಜ್ಯ ಪ್ರಶಸ್ತಿ ಪುರಸ್ಕೃತ ಬಣ್ಣದ ವೇಷದ ಕಲಾವಿದ ಪೇತ್ರಿ ಮಾಧವ ನಾಯ್ಕ ನಿಧನ

ಚಿತ್ರಗಳು: ಇಂಟರ್ನೆಟ್ ಕೃಪೆ. ಬಲಚಿತ್ರ ಕೃಪೆ: ಸುದೇಶ್ ಶೆಟ್ಟಿ
ಉಡುಪಿ: ಬಡಗುತಿಟ್ಟಿನ ಬಣ್ಣದ ವೇಷ ಹಾಗೂ ಮುಂಡಾಸು ವೇಷದಲ್ಲಿ ತಮ್ಮದೇ ಆದ ವೈಶಿಷ್ಟ್ಯವನ್ನು ಮೆರೆದಿದ್ದ ಯಕ್ಷಗಾನ ಕಲಾವಿದ ಪೇತ್ರಿ (ಚೇರ್ಕಾಡಿ) ಮಾಧವ ನಾಯ್ಕ (84 ವರ್ಷ) ಅವರು ತಮ್ಮ ಸ್ವಗೃಹದಲ್ಲಿ ಬುಧವಾರ (05 ಜೂ. 2024) ನಿಧನರಾದರು. 

ಮಾರಣಕಟ್ಟೆ, ಮಂದಾರ್ತಿ, ಪೆರ್ಡೂರು, ಸಾಲಿಗ್ರಾಮ, ಅಮೃತೇಶ್ವರೀ, ಕೊಲ್ಲೂರು ಹಾಗೂ ಮುಲ್ಕಿ ಮೇಳಗಳಲ್ಲಿ ಸುಮಾರು 23 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಅವರು, ಡಾ. ಶಿವರಾಮ ಕಾರಂತರ ನೇತೃತ್ವದ ಯಕ್ಷರಂಗದಲ್ಲಿ 30 ವರ್ಷಗಳ ಕಾಲ ವೇಷಧಾರಿಯಾಗಿ ಕಲಾ ಪ್ರತಿಭೆಯನ್ನು  ಮೆರೆದು, 53ಕ್ಕೂ ಹೆಚ್ಚು ವರ್ಷಗಳ ಕಾಲ ಯಕ್ಷಗಾನ ಸೇವೆ ಸಲ್ಲಿಸಿದ್ದಾರೆ.
ಪೇತ್ರಿ ಮಾಧವ ನಾಯ್ಕರು. ಚಿತ್ರ: ಪ್ರಶಾಂತ್ ಮಲ್ಯಾಡಿ
ಯಕ್ಷಗಾನ ಕ್ಷೇತ್ರದಲ್ಲಿ ಪ್ರಮುಖ ವೇಷಧಾರಿಯಾಗಿ ವಿವಿಧ ದೇಶಗಳನ್ನು ಸಂಚರಿಸಿದ್ದರು. ಬಣ್ಣದ ವೇಷಕ್ಕೆ ವಿಶೇಷ ಕೊಡುಗೆಯನ್ನು ನೀಡಿದ ಮಾಧವ ನಾಯ್ಕರು ರಾವಣ, ಘಟೋತ್ಕಚ, ಹಿಡಿಂಬಾಸುರ, ತಾರಾಕಾಸುರ, ಶೂರ್ಪನಖೆ, ಹಿಡಿಂಬೆ, ಲಂಕಿಣಿ, ವೃತ್ರಜ್ವಾಲೆ ಹೀಗೆ ಗಂಡು ಬಣ್ಣ ಮತ್ತು ಹೆಣ್ಣು ಬಣ್ಣ ಎರಡರಲ್ಲೂ ನೈಪುಣ್ಯ ಹೊಂದಿದ್ದರು.

1940ರ ಸೆ.11ರಂದು ಬ್ರಹ್ಮಾವರದ ಚೇರ್ಕಾಡಿಯ ಪೇತ್ರಿ ಸಮೀಪದ ಹಲುವಳ್ಳಿಯಲ್ಲಿ ವಾಮನ ನಾಯ್ಕ - ಮೈದಾ ಬಾಯಿ ದಂಪತಿಯ ಪುತ್ರನಾಗಿ ಜನಿಸಿದ ಅವರು, ತಮ್ಮ ಸೋದರ ಮಾವ, ತಾಳಮದ್ದಳೆಯ ಹೆಸರಾಂತ ಕಲಾವಿದರಾಗಿದ್ದ ತಿಮ್ಮಪ್ಪ ನಾಯ್ಕರೇ ಮೊದಲ ಗುರು. ಹೇರಂಜಾಲು ವೆಂಕಟರಮಣ ಗಾಣಿಗರಿಂದಲೂ ಹೆಜ್ಜೆಗಾರಿಕೆಯನ್ನು ಕರಗತ ಮಾಡಿಕೊಂಡವರು.

14ನೇ ವರ್ಷಕ್ಕೇ ಮಾರಣಕಟ್ಟೆ ಮೇಳದಲ್ಲಿ ಗೆಜ್ಜೆ ಕಟ್ಟಿ ರಂಗವೇರಿದ ಅವರು, ಡಾ.ಕಾರಂತರೊಂದಿಗೆ ದುಬೈ, ಕೆನಡಾ, ಜಪಾನ್, ರಷ್ಯಾ, ಇಟಲಿ ಸಹಿತ ಐರೋಪ್ಯ ರಾಷ್ಟ್ರಗಳಲ್ಲಿ ಸಂಚರಿಸಿ ಯಕ್ಷಗಾನದ ಪ್ರಸಾರದಲ್ಲಿ ಮಹತ್ತ್ವದ ಪಾತ್ರ ವಹಿಸಿದ್ದರು.

ಹಾರಾಡಿ ರಾಮ ಗಾಣಿಗ, ಕುಷ್ಟ ಗಾಣಿಗ, ನಾರಾಯಣ ಗಾಣಿಗ, ವೀರಭದ್ರ ನಾಯ್ಕ, ಹೇರಂಜಾಲು ಸಹೋದರರು, ಹಳ್ಳಾಡಿ ಮಂಜಯ್ಯ ಶೆಟ್ಟಿ, ಅರಾಟೆ ಮಂಜುನಾಥ, ಮೊಳಹಳ್ಳಿ ಹೆರಿಯ ನಾಯ್ಕ, ಕೆರೆಮನೆ ಮಹಾಬಲ ಹೆಗಡೆ, ಚಿಟ್ಟಾಣಿ ರಾಮಚಂದ್ರ ಹೆಗಡೆ, ಕುಮಟಾ ಗೋವಿಂದ ನಾಯ್ಕ ಮುಂತಾದವರ ಒಡನಾಟದಲ್ಲಿ, ಯಕ್ಷಗಾನದ ಪರಂಪರೆಯ ಚೌಕಟ್ಟಿನಲ್ಲಿ ಹಲವಾರು ಪಾತ್ರಗಳಿಗೆ ಪೇತ್ರಿ ಮಾಧವ ನಾಯ್ಕರು ಜೀವ ತುಂಬಿದ್ದರು.

ಪೇತ್ರಿ ಮಾಧವ ನಾಯಕರ ಕಲಾ ಸೇವೆಗೆ ಕರ್ನಾಟಕ ರಾಜ್ಯೋತ್ಸವ, ಯಕ್ಷಗಾನ ಅಕಾಡೆಮಿ, ಯಕ್ಷಗಾನ ಕಲಾರಂಗ ಸಹಿತ ಹಲವು ಪ್ರಶಸ್ತಿಗಳು ಸಂದಿವೆ. ಕಳೆದ ವಾರ ಮಂದಾರ್ತಿ ಮೇಳದ ಸೇವೆಯಾಟದ ದಿನ ₹1 ಲಕ್ಷ ಮೊತ್ತದ ಪ್ರತಿಷ್ಠಿತ ಹಾರಾಡಿ ರಾಮಗಾಣಿಗ ಪ್ರಶಸ್ತಿ ಅವರಿಗೆ ಪ್ರದಾನ ಮಾಡಲಾಗಿತ್ತು.

ಪೇತ್ರಿ ಮಾಧವ ನಾಯಕರು ಪತ್ನಿ, ಓರ್ವ ಪುತ್ರಿ, ಐವರು ಪುತ್ರರು ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ. ಪರಂಪರೆಯ ಕೊಂಡಿಯಾಗಿ, ಬಡಗು ಮತ್ತು ಬಡಾಬಡಗು ತಿಟ್ಟಿನ ವೇಷಗಾರಿಕೆಗೆ ಮಾಹಿತಿ ಕೋಶವೇ ಆಗಿದ್ದ ಪೇತ್ರಿ ಮಾಧವ ನಾಯ್ಕರ ಅಗಲುವಿಕೆಯು ಯಕ್ಷಗಾನ ರಂಗಕ್ಕೆ ತುಂಬಲಾರದ ನಷ್ಟ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು