ಮೇ 26: ಯಕ್ಷಧ್ರುವ ಪಟ್ಲ ಸಂಭ್ರಮ 2024ಕ್ಕೆ ಕಿಚ್ಚ ಸುದೀಪ್ ಮೆರುಗು, ಕೊಂಡದಕುಳಿ ಅವರಿಗೆ ಪಟ್ಲ ಪ್ರಶಸ್ತಿ

ಮಂಗಳೂರು: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ( ರಿ) ಮಂಗಳೂರು ವತಿಯಿಂದ 2024ನೇ ವರ್ಷದ ಯಕ್ಷಧ್ರುವ ಪಟ್ಲ ಸಂಭ್ರಮ ಕಾರ್ಯಕ್ರಮವು ಮೇ 26 ರಂದು ಅಡ್ಯಾರ್‌ನಲ್ಲಿರುವ ಅಡ್ಯಾ‌ರ್ ಗಾರ್ಡನ್‌ನಲ್ಲಿ ಜರುಗಲಿದೆ. 

ಆ ದಿನ ಬೆಳಿಗ್ಗೆ 7.45ರಿಂದ ಚೌಕಿಪೂಜೆ, ಅಬ್ಬರ ತಾಳ, ಬಳಿಕ ಮಹಿಳಾ ಯಕ್ಷಗಾನ ನಡೆಯಲಿದೆ. ಮಹಿಳಾ ಯಕ್ಷಗಾನಕ್ಕೆ ಗಿರೀಶ್ ರೈ ಕಕ್ಕೆಪದವು, ಪ್ರಫುಲ್ಲಚಂದ್ರ ನೆಲ್ಯಾಡಿ, ಗುರುಪ್ರಸಾದ್ ಬೊಳಿಂಜಡ್ಕ, ಪ್ರಶಾಂತ್ ವಗೆನಾಡು, ಕೌಶಿಕ್ ರಾವ್ ಪೂರ್ಣೇಶ್ ಅವರು ಹಿಮ್ಮೇಳದಲ್ಲಿರುತ್ತಾರೆ.

ಬಳಿಕ 9 ಗಂಟೆಗೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಗಳ ದಿವ್ಯ ಉಪಸ್ಥಿತಿಯಲ್ಲಿ ಶ್ರೀ ಕ್ಷೇತ್ರ ಕಟೀಲಿನ ವೆಂಕಟರಮಣ ಆಸ್ರಣ್ಣ ಆಶೀರ್ವಚನ ನೀಡಲಿದ್ದಾರೆ. ಕಾರ್ಯಕ್ರಮವನ್ನು ಮುಂಬೈ ಹೇರಂಭ ಕೆಮಿಕಲ್ಸ್ ಇಂಡಸ್ಟ್ರೀಸ್ ಸಂಸ್ಥೆಯ ಸಿಎಂಡಿ ಕುಳೂರು ಕನ್ಯಾನ ಸದಾಶಿವ ಶೆಟ್ಟಿ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ವಹಿಸಲಿದ್ದಾರೆ. ಪಾವಂಜೆ ಕ್ಷೇತ್ರದ ಆಡಳಿತ ಮೊಕೇಸರ ಶಶೀಂದ್ರ ಕುಮಾರ್ ಶುಭಾಶಂಸನೆಗೈಯಲಿದ್ದಾರೆ.
ಆರೋಗ್ಯ ಶಿಬಿರದ ಉದ್ಘಾಟನೆಯನ್ನು ಮನೋವೈದ್ಯ ಡಾ.ರವೀಶ್ ತುಂಗಾ ನೆರವೇರಿಸಲಿದ್ದಾರೆ. ರಕ್ತದಾನ ಶಿಬಿರವನ್ನು ಡಾ. ಶ್ರೀಧರ್ ಉದ್ಘಾಟಿಸಲಿದ್ದಾರೆ. ಉಚಿತ ಕಣ್ಣು ಪರೀಕ್ಷೆ, ಕನ್ನಡ ವಿತರಣೆಯೂ ಇದೆ. ಸಭಾ ಕಾರ್ಯಕ್ರಮದ ಬಳಿಕ 11 ಗಂಟೆಗೆ ಯುವ ಭಾಗವತರಿಂದ ಗಾನ ವೈಭವ ನಡೆಯಲಿದೆ. ಕಾವ್ಯಶ್ರೀ ಅಜೇರು, ಡಾ.ಪ್ರಖ್ಯಾತ್ ಶೆಟ್ಟಿ, ಅಮೃತಾ ಅಡಿಗ, ಚಿನ್ಮಯ ಭಟ್, ಸೃಜನ್ ಹೆಗ್ಡೆ, ಭರತ್ ಶೆಟ್ಟಿ, ದಿನೇಶ್ ಬೆಪ್ಡೆ, ಮನ್ವಿತ್ ಇರಾ ಅವರ ಹಾಡುಗಾರಿಕೆಗೆ ರೋಹಿತ್ ಉಚ್ಚಿಲ, ರಾಘವೇಂದ್ರ ಹೆಗಡೆ, ಉದಯ ಐರೋಡಿ, ಮಯೂರ ನಾಯ್ಗ, ಕೌಶಲ್ ರಾವ್, ಸತ್ಯಜಿತ್ ರಾವ್, ರಾಜೇಂದ್ರ ಕೃಷ್ಣ ಚೆಂಡೆ-ಮದ್ದಳೆ-ಚಕ್ರತಾಳ ನುಡಿಸುವರು. ಸಂಯೋಜನೆ ಮಾಧವ ಬಂಗೇರ ಕೊಳತ್ತಮಜಲು ಹಾಗೂ ನಿರೂಪಣೆ ಪ್ರೊ.ಪವನ್ ಕಿರಣಕೆರೆ.

ಮಧ್ಯಾಹ್ನ 1 ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಕನ್ಯಾಡಿ ರಾಮ ಕ್ಷೇತ್ರದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಭಾಗವಹಿಸಲಿದ್ದು, ಸಭಾಧ್ಯಕ್ಷತೆಯನ್ನು ಶಶಿ ಕ್ಯಾಟರರ್ಸ್ ಸಂಸ್ಥೆ, ಉಜಿರೆ ಕಾಶಿ ಪ್ಯಾಲೇಸ್ ಸಂಸ್ಥೆಯ ಮಾಲಕ ಶಶಿಧರ್ ಬಿ. ಶೆಟ್ಟಿ ಬರೋಡಾ ವಹಿಸಲಿದ್ದಾರೆ. ಅತಿಥಿಗಳಾಗಿ ಜಮ್ಮು ಕಾಶ್ಮೀರ ಸರಕಾರದ ಪ್ರಿನ್ಸಿಪಲ್ ಸೆಕ್ರೆಟರಿ ಐಎಎಸ್ ಅಧಿಕಾರಿ ರಾಜೇಶ್ ಪ್ರಸಾದ್ ಭಾಗವಹಿಸಲಿದ್ದು, ಮಧ್ಯಾಹ್ನ 2.30ಕ್ಕೆ ಯಕ್ಷಧ್ರುವ ಯಕ್ಷಶಿಕ್ಷಣ ವಿದ್ಯಾರ್ಥಿಗಳಿಂದ, ರಾಕೇಶ್ ರೈ ಅಡ್ಕ, ರಕ್ಷಿತ್ ಶೆಟ್ಟಿ ಪಡ್ರೆ, ದೀವಿತ್ ಕೋಟ್ಯಾನ್ ಪೆರಾಡಿ ಸಂಯೋಜನೆಯಲ್ಲಿ ಯಕ್ಷಗಾನ ಪ್ರದರ್ಶನ ನಡೆಯಲಿದೆ.

ಸಂಜೆ 3.30 ಗಂಟೆಗೆ ಉಜಿರೆ ಅಶೋಕ ಭಟ್ ಸಂಯೋಜನೆಯಲ್ಲಿ ಪರಂಪರೆಯ ಯಕ್ಷಗಾನ ಕಿರಾತಾರ್ಜುನ ಪ್ರದರ್ಶನಗೊಳ್ಳಲಿದೆ. ಇದರಲ್ಲಿ ಕುರಿಯ ಗಣಪತಿ ಶಾಸ್ತ್ರಿಗಳ ಭಾಗವತಿಕೆ, ಪದ್ಯಾಣ ಶಂಕರನಾರಾಯಣ ಭಟ್, ಪದ್ಮನಾಭ ಉಪಾಧ್ಯ, ಕುದ್ರೆಕೂಡ್ಲೂ ರಾಮಮೂರ್ತಿ ಹಿಮ್ಮೇಳದಲ್ಲಿ, ಜಗದಾಭಿರಾಮ ಪಡುಬಿದ್ರಿ, ಮಹೇಶ್ ಮಣಿಯಾಣಿ, ಬಾಲಕೃಷ್ಣ ಮಿಜಾರು, ಮುರಳೀಧರ ಕನ್ನಡಿಕಟ್ಟೆ, ಪ್ರಸಾದ್ ಸವಣೂರು ಮುಮ್ಮೇಳದಲ್ಲಿ ವಿಜೃಂಭಿಸಲಿದ್ದಾರೆ.

ಸಂಜೆ 5.15ಕ್ಕೆ ಶ್ರೀಕ್ಷೇತ್ರ ಒಡಿಯೂರಿನ ಗುರುದೇವಾನಂದ ಸ್ವಾಮೀಜಿ ಉಪಸ್ಥಿತಿಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದ್ದು, ಕನ್ಯಾನ ಸದಾಶಿವ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ನಟ ಕಿಚ್ಚ ಸುದೀಪ್ ಭಾಗವಹಿಸಲಿದ್ದಾರೆ ಎಂದು ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಮಾಹಿತಿ ನೀಡಿದರು.

ಕಾರ್ಯಕ್ರಮದ ಬಳಿಕ 7.30ಕ್ಕೆ ಹಾಸ್ಯ ಕಲಾವಿದರಿಂದ ಯಕ್ಷಗಾನ ಹಾಸ್ಯ ವೈಭವ ಪ್ರದರ್ಶನಗೊಳ್ಳಲಿದೆ. ರವಿಚಂದ್ರ ಕನ್ನಡಿಕಟ್ಟೆ, ಸತ್ಯನಾರಾಯಣ ಪುಣಿಚಿತ್ತಾಯ, ಚೈತನ್ಯಕೃಷ್ಣ ಪದ್ಯಾಣ, ಶಿತಿಕಂಠ ಭಟ್, ಲವಕುಮಾರ್ ಐಲ ಹಿಮ್ಮೇಳದಲ್ಲಿ ಕೋಡಪದವು, ಬಂಗಾಡಿ, ಗುರುವಾಯನಕೆರೆ, ಕಡಬ, ಸುರತ್ಕಲ್ ಮುಂತಾದ ಯಕ್ಷಗಾನ ಹಾಸ್ಯಗಾರರ ಮುಮ್ಮೇಳವಿರುತ್ತದೆ.
ಯಕ್ಷಧ್ರುವ ಕಲಾಗೌರವ 2024 ಸ್ವೀಕರಿಸಲಿರುವ ವಿವಿಧ ಕ್ಷೇತ್ರಗಳ ಸಾಧಕರು

ರಾಮಚಂದ್ರ ಹೆಗಡೆ ಕೊಂಡದಕುಳಿ ಅವರಿಗೆ ₹1 ಲಕ್ಷ ಗೌರವಧನ ಸಹಿತ 2024ರ ಸಾಲಿನ ಯಕ್ಷಧ್ರುವ ಪಟ್ಲ ಪ್ರಶಸ್ತಿ ನೀಡಿ ಗೌರವಿಸಲಾಗುವುದು. 2024ನೇ ಸಾಲಿನ ಯಕ್ಷಧ್ರುವ ಮಹಾಪೋಷಕ ಪ್ರಶಸ್ತಿಯನ್ನು ಸಿಎ ದಿವಾಕರ್ ರಾವ್ ಮತ್ತು ಶೈಲಾ ದಿವಾಕರ್ ಪಡೆಯಲಿದ್ದಾರೆ. ಇದೇ ಸಂದರ್ಭ ₹20 ಸಾವಿರ ನಗದಿನೊಂದಿಗೆ ಯಕ್ಷಗಾನ ಸಹಿತ ವಿವಿಧ ಕ್ಷೇತ್ರಗಳ ಹಿರಿಯ ಸಾಧಕರು ಯಕ್ಷಧ್ರುವ ಕಲಾ ಗೌರವ ಸ್ವೀಕರಿಸಲಿದ್ದಾರೆ. 3,500 ಕಲಾವಿದರಿಗೆ ಉಚಿತ ಅಪಘಾತ ವಿಮಾ ಯೋಜನೆ, ವೈದ್ಯಕೀಯ ಮತ್ತು ಆರ್ಥಿಕ ನೆರವು, ಅಶಕ್ತರಿಗೆ ಧನಸಹಾಯ, ಗೃಹ ನಿರ್ಮಾಣಕ್ಕೆ ಸಹಾಯ ಧನ, ಸರಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಯಕ್ಷಶಿಕ್ಷಣ ಯೋಜನೆ, ವಿದ್ಯಾರ್ಥಿ ಪ್ರತಿಭಾ ಪುರಸ್ಕಾರ ನಡೆಯಲಿದೆ ಎಂದವರು ವಿವರಿಸಿದರು.

ಆಳ್ವಾಸ್ ಶಿಕ್ಷಣ ಸಂಸ್ಥೆಯ ಸಹಯೋಗದೊಂದಿಗೆ ಸುಮಾರು 3,500 ವಿದ್ಯಾರ್ಥಿಗಳಿಗೆ ಯಕ್ಷಗಾನ ಕಲೆಯ ಬೇರೆ ಬೇರೆ ಆಯಾಮಗಳ ಸ್ಪರ್ಧೆ ನಡೆಸಲಾಗಿದ್ದು, ಇದರಲ್ಲಿ 1,700 ವಿದ್ಯಾರ್ಥಿಗಳು ವೇಷಭೂಷಣಗಳೊಂದಿಗೆ ಒಂದೇ ದಿನ ರಂಗ ಪ್ರವೇಶ ಮಾಡಿರುವುದು ಯಕ್ಷಗಾನದಲ್ಲಿ ದಾಖಲೆಯಾಗಿದೆ ಎಂದವರು ಮಾಹಿತಿ ನೀಡಿದರು.

ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಕೆ ಭಂಡಾರಿ, ಕೋಶಾಧಿಕಾರಿ ಸುದೇಶ್ ಕುಮಾರ್ ರೈ, ಸಂಘಟನಾ ಕಾರ್ಯದರ್ಶಿ ಕದ್ರಿ ನವನೀತ ಶೆಟ್ಟಿ, ಬಾಳ ಜಗನ್ನಾಥ ಶೆಟ್ಟಿ, ಪ್ರದೀಪ್ ಆಳ್ವ ಕದ್ರಿ, ಉಪಾಧ್ಯಕ್ಷ ಡಾ.ಮನು ರಾವ್, ಜತೆ ಕಾರ್ಯದರ್ಶಿ ರಾಜೀವ ಪೂಜಾರಿ ಕೈಕಂಬ, ರವಿ ಶೆಟ್ಟಿ ಅಶೋಕನಗರ ಸುದ್ದಿಗೋಷ್ಠಿಯಲ್ಲಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು