ಪಾತ್ರ ಕಳಚುತ್ತಲೇ ಕಲಾಲೀನರಾದ ಯಕ್ಷಗಾನ ಕಲಾವಿದ ಪುತ್ತೂರು ಗಂಗಾಧರ ಜೋಗಿ

2024ರ ಏಪ್ರಿಲ್ 21ರಂದು ಬಾರ್ಕೂರಿನಲ್ಲಿ‌ ಶ್ರೀ ಧರ್ಮಸ್ಥಳ ಕ್ಷೇತ್ರಮಹಾತ್ಮೆ ಪ್ರಸಂಗದಲ್ಲಿ ಕುಕ್ಕಿತ್ತಾಯ ಪಾತ್ರದಲ್ಲಿ ಗಂಗಾಧರ ಜೋಗಿ ಪುತ್ತೂರು. ಇದೇ ಪಾತ್ರ ಮುಗಿಸಿ ಅವರು ನಿನ್ನೆ ರಾತ್ರಿ ಕಲಾಲೀನರಾಗಿದ್ದಾರೆ. ಚಿತ್ರಕೃಪೆ: ಎಂ.ಎಲ್.ಭಟ್ ಸಾಗರ. (ಎಡ ಚಿತ್ರ). ಬಲಚಿತ್ರದಲ್ಲಿ, ಗಂಗಾಧರ ಪುತ್ತೂರು.

ಮಂಗಳೂರು: ಸರಳತೆ, ಸಜ್ಜನಿಕೆ ಮತ್ತು ವಿನಯಶೀಲತೆಯ ಸಾಕಾರಮೂರ್ತಿ, ಯಾವುದೇ ಪಾತ್ರಗಳಿಗೂ ಜೀವ ತುಂಬಬಲ್ಲ‌ ಸಮರ್ಥ ಯಕ್ಷಗಾನ ಕಲಾವಿದ ಪುತ್ತೂರು ಗಂಗಾಧರ ಜೋಗಿ (60) ಅವರು ರಂಗದಲ್ಲಿ‌ ಪಾತ್ರ ಮುಗಿಸಿ, ಚೌಕಿಗೆ ಬಂದು‌ ಬದುಕಿನ ಪಾತ್ರವನ್ನೂ ಮುಗಿಸಿದ ಆಘಾತಕಾರಿ ಘಟನೆ ಕೋಟದಲ್ಲಿ ನಿನ್ನೆ ಮಧ್ಯರಾತ್ರಿ ಘಟಿಸಿದೆ.

ಮೇ 01ರಂದು ರಾತ್ರಿ 12.55ರ ವೇಳೆಗೆ, ಕೋಟದಲ್ಲಿ‌ ನಡೆದ ಧರ್ಮಸ್ಥಳ ಮೇಳದ ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ ಯಕ್ಷಗಾನ ಪ್ರಸಂಗದಲ್ಲಿ ಕುಕ್ಕಿತ್ತಾಯ ಪಾತ್ರ ನಿರ್ವಹಿಸಿ, ಪಾತ್ರದ ಪ್ರದರ್ಶನ ಮುಗಿಸಿ ಚೌಕಿಗೆ ಬಂದು ಕಿರೀಟ, ವೇಷಭೂಷಣಗಳನ್ನು ಕಳಚಿ, ಬಣ್ಣವನ್ನು ತೆಗೆಯುತ್ತಿರುವ ಕೊನೆಯ ಹಂತದಲ್ಲಿ ಅವರಿಗೆ ಹೃದಯಾಘಾತವಾಯಿತು. ಅವರಿಗೆ 60 ವರ್ಷ ವಯಸ್ಸಾಗಿತ್ತು.

ರಂಗ ಅಥವಾ ಚೌಕಿಯಿಂದಲೇ ಕಲಾಲೀನರಾದ ಪುಣ್ಯಾತ್ಮರ ಸಾಲಿಗೆ ಗಂಗಾಧರ ಜೋಗಿ ಅವರೂ ಸೇರ್ಪಡೆಯಾದರು ಎಂಬುದು ಬೆಳ್ಳಬೆಳಗ್ಗೆ ತೆಂಕುತಿಟ್ಟು ಯಕ್ಷಗಾನ‌ ಅಭಿಮಾನಿಗಳನ್ನು ಆಘಾತ, ದುಃಖದ ಕಡಲಲ್ಲಿ ಮುಳುಗಿಸಿತು.
ಪುಂಡುವೇಷ, ಸ್ತ್ರೀ ವೇಷ, ಬಣ್ಣದ ವೇಷ, ರಾಕ್ಷಸ ವೇಷ, ಹಾಸ್ಯ ವೇಷ, ಹೆಣ್ಣು ಬಣ್ಣ, ಕಿರೀಟ ವೇಷ - ಹೀಗೆ ಯಾವುದೇ ರೀತಿಯ ವೇಷ ವೈವಿಧ್ಯವನ್ನು ರಂಗದಲ್ಲಿ ಸಮರ್ಥವಾಗಿ ಮತ್ತು ಲವಲವಿಕೆಯಿಂದ ಬಿಂಬಿಸುತ್ತಿದ್ದ ಅತ್ಯಂತ ವಿನಯಶೀಲ ಕಲಾವಿದ ಅವರು. ಅವರ ಬಣ್ಣಗಾರಿಕೆಯಲ್ಲಿನ ವಿನೂತನತೆಯೂ ಹಲವು ಬಾರಿ ಗಮನ ಸೆಳೆದಿದ್ದವು. ಆದರೆ, ಇಷ್ಟು ಪ್ರತಿಭೆಯಿದ್ದರೂ ಅವರಿಗೆ ಪ್ರಚಾರ ಸಿಕ್ಕಿದ್ದು ತೀರಾ ಕಡಿಮೆ ಎಂಬುದು ಕಲಾವಿದರಾದಿಯಾಗಿ, ಯಕ್ಷಗಾನ ಅಭಿಮಾನಿಗಳೂ ನೆನಪಿಸಿಕೊಳ್ಳುತ್ತಿರುವ ವಿಚಾರ.

ನಗುಮೊಗದ ಸವ್ಯಸಾಚಿ ಕಲಾವಿದ ಪುತ್ತೂರು ಗಂಗಾಧರ ಜೋಗಿ

ಪುತ್ತೂರು ಗಂಗಾಧರ ಜೋಗಿಯವರು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯಲ್ಲಿ ಕಳೆದ 42 ವರ್ಷಗಳಿಂದ ನಿರಂತರವಾಗಿ ಸೇವೆ ಸಲ್ಲಿಸಿದವರು ಮತ್ತು ದಣಿವರಿಯದ ಕಲಾವಿದ.

ರಂಗ‌ ನಿರ್ದೇಶಕರಾದ ಭಾಗವತರು ತನಗೆ ನೀಡಿದ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಷ್ಠೆಯಿಂದ ಮಾಡುತ್ತಾ ಬಂದ ಕಲಾಮಾತೆಯ ಸುಪುತ್ರ. ಪ್ರಸಂಗದಲ್ಲಿ ಎಷ್ಟು ವೇಷಗಳನ್ನೂ ನಿರ್ವಹಿಸಬಲ್ಲ ಪ್ರತಿಭಾವಂತ ಕಲಾವಿದ. ಎಲ್ಲ ಪಾತ್ರಗಳನ್ನೂ ನಿಭಾಯಿಸಬಲ್ಲ ಅಪರೂಪದ ಸವ್ಯಸಾಚಿ ಎಂದು ಕರೆಯಬಹುದಾದ ಮುಮ್ಮೇಳ ಕಲಾವಿದರಾಗಿದ್ದರು ಗಂಗಾಧರ ಜೋಗಿ. ಇಂತಹಾ ಕಲಾವಿದರೇ ಮೇಳದ ನಿಜವಾದ ಆಸ್ತಿ. ಆದರೆ ಇವರು ಪ್ರಚಾರಕ್ಕೆ ಬಾರದ ಪ್ರತಿಭಾವಂತರೂ ಹೌದು. ಇಂಥ ಕಲಾವಿದ ಸೃಷ್ಟಿಗೊಳ್ಳುವುದೇ ಅಪರೂಪಕ್ಕೆ ಅಪರೂಪ. ಮತ್ತು ಅವರು ನಿರ್ವಹಿಸಿದ ಪಾತ್ರಗಳನ್ನು ನೆನಪಿಸಿಕೊಂಡರೆ, ನಾವು ಎಂಥಾ ಅದ್ಭುತ ಆಸ್ತಿಯನ್ನು ಕಳೆದುಕೊಂಡಿದ್ದೇವೆ ಎಂಬುದು ಮನದಟ್ಟಾಗುತ್ತದೆ. (ಕೆಳಗೆ ಅವರ ವೇಷಗಳ ಚಿತ್ರಗಳ ಕೊಲಾಜ್ ನೋಡಿ)

ಸುದೀರ್ಘ ಅನುಭವವಿದ್ದರೂ ಮತ್ತು ಹಿರಿಯ ಕಲಾವಿದರಾಗಿದ್ದರೂ ಸಣ್ಣಪುಟ್ಟ ಪಾತ್ರಗಳಾದ ಗುರು ಶಿಷ್ಯರು, ಬೇಟೆಯವರು, ಸಖಿಯರು, ಬ್ರಾಹ್ಮಣರು ಮುಂತಾದ ಪಾತ್ರಗಳನ್ನು ಒಂದಿನಿತೂ ನಿರ್ಲಕ್ಷ್ಯ ಇಲ್ಲದೆ, ತಮ್ಮ ಪ್ರಧಾನ ಪಾತ್ರದ ಬಳಿಕ ಬೇರೇನೂ ಕೆಲಸವಿಲ್ಲದಿದ್ದರೆ ವೇಷಕಟ್ಟಿ ತಾವಾಗಿಯೇ ಬಂದು ರಂಗ ಸೇರಿಕೊಳ್ಳುತ್ತಿದ್ದರು. ಇದು ಅವರಲ್ಲಿದ್ದ ಅತ್ಯಂತ ದೊಡ್ಡ ಗುಣ ಮತ್ತು ಕಲಾ ಕೈಂಕರ್ಯದ ಮೇಲಿದ್ದ ನಿಷ್ಠೆಯ ಪ್ರತೀಕ.

ಶ್ರೀ ಮಂಜುನಾಥ ಸ್ವಾಮಿಯ ಅನುಗ್ರಹ, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ರಾಜರ್ಷಿ ಡಾ| ವೀರೇಂದ್ರ ಹೆಗ್ಗಡೆ, ಡಿ. ಹರ್ಷೇಂದ್ರ ಕುಮಾರರ ಆಶೀರ್ವಾದ, ಸಹಕಲಾವಿದರ ಸಹಕಾರವನ್ನವರು ಸದಾ ಸ್ಮರಿಸುತ್ತಿದ್ದರು.

1964ರ ಆಗಸ್ಟ್ 12ರಂದು ಪುತ್ತೂರು ತಾಲೂಕು ಕೋಡಿಂಬಾಡಿ ಸಮೀಪ ಸೇಡಿಯಾಪು ಎಂಬಲ್ಲಿ ನಾರಾಯಣಯ್ಯ ಮತ್ತು ಲಕ್ಷ್ಮೀ ಅಮ್ಮ ದಂಪತಿಯ ಮಗನಾಗಿ ಜನಿಸಿದ ಗಂಗಾಧರ ಜೋಗಿಯವರು ಕೋಡಿಂಬಾಡಿ ಶಾಲೆಯಲ್ಲಿ 7ನೇ ತರಗತಿವರೆಗೆ ಓದಿದರು. ಎಳವೆಯಲ್ಲೇ ಇವರಿಗೆ ಯಕ್ಷಗಾನಾಸಕ್ತಿ ಅತೀವವಾಗಿತ್ತು. ಪುತ್ತೂರು ಪರಿಸರದಲ್ಲಿ ನಡೆಯುತ್ತಿದ್ದ ಪ್ರದರ್ಶನಗಳನ್ನು ಬಿಡದೆ ನೋಡುತ್ತಿದ್ದ ಅಪ್ಪಟ ಯಕ್ಷಗಾನಾಭಿಮಾನಿಯಾಗಿದ್ದರವರು.

ಯಕ್ಷಗಾನ ಕಲೆಯ ಬಗೆಗೆ ಇವರಿಗಿರುವ ಆಸಕ್ತಿಯನ್ನು ಗಮನಿಸಿದ ಹಿರಿಯ ಕಲಾವಿದ ಕುಂಬಳೆ ಶ್ರೀಧರ ರಾಯರು, 1981ರಲ್ಲಿ ಬಾಲಕ ಗಂಗಾಧರನನ್ನು ಶ್ರೀ ಧರ್ಮಸ್ಥಳ ಯಕ್ಷಗಾನ ಕಲಿಕಾ ಕೇಂದ್ರಕ್ಕೆ ಕರೆದೊಯ್ದರು. ಅಲ್ಲಿ ಗುರುಗಳಾದ ಕೆ. ಗೋವಿಂದ ಭಟ್ ಮತ್ತು ಕರ್ಗಲ್ಲು ವಿಶ್ವೇಶ್ವರ ಭಟ್ಟರಿಂದ ಗಂಗಾಧರ ಅವರು ಯಕ್ಷಗಾನ ಹೆಜ್ಜೆಗಾರಿಕೆ ಕಲಿತು ಧರ್ಮಸ್ಥಳ ಮೇಳದ ಮೂಲಕವೇ ಯಕ್ಷಗಾನ ರಂಗಕ್ಕೆ ಬಾಲಕಲಾವಿದನಾಗಿ ಸೇರ್ಪಡೆಯಾದರು. ಪೂರ್ವರಂಗದ ಬಾಲಗೋಪಾಲ, ಮುಖ್ಯ ಸ್ತ್ರೀವೇಷ, ಪ್ರಸಂಗದಲ್ಲಿ ತನ್ನ ಪಾಲಿಗೆ ಬಂದ ಪಾತ್ರಗಳನ್ನು ಶ್ರದ್ಧೆಯಿಂದ ನಿರ್ವಹಿಸುತ್ತಾ ಹಂತ ಹಂತವಾಗಿ ಬೆಳೆದು ಬಂದು ಪುತ್ತೂರು ಗಂಗಾಧರ ಜೋಗಿ ಅಪಾರ ರಂಗಾನುಭವ ಉಳ್ಳವರು. ಅದಕ್ಕೂ ಮಿಗಿಲಾಗಿ ರಂಗಾಸಕ್ತಿ ಉಳ್ಳವರು.

ಧರ್ಮಸ್ಥಳ ಕ್ಷೇತ್ರ ಮಹಾತ್ಮ್ಯೆಯ ಮಾಲತಿ ಪಾತ್ರ (ಕುಂಬಳೆ ಸುಂದರ ರಾಯರು ಮತ್ತು ಕೆ. ಗೋವಿಂದ ಭಟ್ಟರು ನಿರ್ವಹಿಸಿದ ಗೋವಿಂದ ದೀಕ್ಷಿತನ ಪಾತ್ರದ ಜತೆ) ಅಲ್ಲದೆ ಅನೇಕ ಸ್ತ್ರೀಪಾತ್ರಗಳಲ್ಲಿ ಇವರು ಮಿಂಚಿದರು. ಕಸೆ ಸ್ತ್ರೀವೇಷ, ಗರತಿ ವೇಷಗಳು, ಶೃಂಗಾರ ಪಾತ್ರಗಳಲ್ಲೂ ಸೈ ಅನ್ನಿಸಿಕೊಂಡರು. ಕಡತೋಕ ಮಂಜುನಾಥ ಭಾಗವತರು, ಪುತ್ತಿಗೆ ರಘುರಾಮ ಹೊಳ್ಳರು, ಪುತ್ತೂರು ನಾರಾಯಣ ಹೆಗ್ಡೆ, ಎಂಪೆಕಟ್ಟೆ ರಾಮಯ್ಯ ರೈ, ಕುಂಬಳೆ ಸುಂದರ ರಾವ್, ಕೆ. ಗೋವಿಂದ ಭಟ್, ಕುಂಬಳೆ ಶ್ರೀಧರ ರಾವ್, ಪುತ್ತೂರು ಶ್ರೀಧರ ಭಂಡಾರಿ, ನಿಡ್ಲೆ ಗೋವಿಂದ ಭಟ್, ಉಬರಡ್ಕ ಉಮೇಶ ಶೆಟ್ಟಿ, ತಾರಾನಾಥ ಬಲ್ಯಾಯ, ವಸಂತ ಗೌಡ ಮುಂತಾದ ಕಲಾವಿದರ ಮಾರ್ಗದರ್ಶನ ಮತ್ತು ಒಡನಾಟದಿಂದ ಪರಿಪಕ್ವ ಕಲಾವಿದರಾಗಿ ಬೆಳೆದರು.

ದೆಹಲಿಯ ರಾಷ್ಟ್ರಪತಿ ಭವನ, ದುಬೈ, ಬೆಹರಿನ್, ಅಬುಧಾಬಿ ಮೊದಲಾದೆಡೆಯೂ ಯಕ್ಷಗಾನ ಪ್ರದರ್ಶನಗಳಲ್ಲಿ ಅವರು ಭಾಗವಹಿಸಿದ್ದಾರೆ. ಕರ್ಗಲ್ಲು ಯಕ್ಷರೂಪಕ ತಂಡದಲ್ಲಿ ಒಂದು ವರ್ಷ, ಮುಳಿಯಾಲ ಭೀಮ ಭಟ್ಟರ ತಂಡದಲ್ಲಿ 10 ವರ್ಷ, 26 ವರ್ಷ ನಿಡ್ಲೆ ಮಹಾಗಣಪತಿ ಯಕ್ಷಗಾನ ಮಂಡಳಿಯ ಮಳೆಗಾಲದ ಕಾರ್ಯಕ್ರಮಗಳಲ್ಲಿ ಗಂಗಾಧರ ಅವರು ಸೇವೆ ಸಲ್ಲಿಸಿದ್ದಾರೆ. ಅನೇಕ ಸಂಘ-ಸಂಸ್ಥೆಗಳಿಂದ ಗಂಗಾಧರ ಅವರು ಗೌರವಿಸಲ್ಪಟ್ಟಿದ್ದಾರೆ. ಅವರು ಮಡದಿ ಕುಶಾಲಾಕ್ಷಿ ಜೋಗಿ ಹಾಗೂ ಪುತ್ರ ಜ್ಞಾನೇಶರನ್ನು ಅಗಲಿದ್ದಾರೆ.

ಅವರು ರಂಗದಲ್ಲಿ ಇನ್ನಷ್ಟು ಕಾಲ ಪಾತ್ರವೈವಿಧ್ಯಗಳೊಂದಿಗೆ ಕಲಾಮಾತೆಯ ಸೇವೆ ಮಾಡಬೇಕಿತ್ತು ಎಂಬುದು ಯಕ್ಷಗಾನಾಭಿಮಾನಿಗಳ ಹಾರೈಕೆ ಆಗಿತ್ತು. ಆದರೆ ವಿಧಿಯ ನಿರ್ಣಯ ಬೇರೆಯೇ ಆಗಿತ್ತು. ಅವರು ಅಕಾಲದಲ್ಲಿ ಕಲಾಲೀನರಾಗಿದ್ದಾರೆ.

ಪುತ್ತೂರು ಗಂಗಾಧರ ಜೋಗಿ ಅವರಿಗೆ ಯಕ್ಷಗಾನ ಡಾಟ್ ಇನ್ ಆಶ್ರುತರ್ಪಣ ಸಲ್ಲಿಸುತ್ತದೆ. ಓಂ ಶಾಂತಿ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು