ಯಾಕಿಷ್ಟು ಬೇಗ ಭಾಗವತ್ರೇ!?: ಧಾರೇಶ್ವರರಿಗೆ ಹಾಲಾಡಿ ರಾಘವೇಂದ್ರ ಮಯ್ಯರಿಂದ ಆಪ್ತ ಅಕ್ಷರ ನಮನ


ಬದುಕಿನ ರಂಗಸ್ಥಳದಿಂದ ಸ್ವರ್ಗದ ಇಂದ್ರಸಭೆಯಲ್ಲಿ ಗಾಯನ ಸುಧೆ ಹರಿಸಲು ಹೊರಟು, ಲಕ್ಷಾಂತರ ಅಭಿಮಾನಿಗಳನ್ನು ಅಗಲಿದ ಭಾಗವತ, ರಂಗ ಮಾಂತ್ರಿಕ ಸುಬ್ರಹ್ಮಣ್ಯ ಧಾರೇಶ್ವರ ಅವರ ಬಗ್ಗೆ ಈ ಕಾಲದ ಶ್ರೇಷ್ಠ ಭಾಗವತರಲ್ಲೊಬ್ಬರಾದ ರಾಘವೇಂದ್ರ ಮಯ್ಯ ಹಾಲಾಡಿ ಅವರು ನುಡಿನಮನ ಸಲ್ಲಿಸಿದ್ದಾರೆ. ಇಬ್ಬರ ನಡುವಿನ ಪ್ರೀತಿ, ವಿರೋಧ, ಅಣ್ಣ-ತಮ್ಮ ಭಾವನೆ - ಇವೆಲ್ಲವೂ ಇಲ್ಲಿ ವ್ಯಕ್ತವಾಗಿದೆ. ಫೇಸ್‌ಬುಕ್ ಪುಟದಲ್ಲಿ ಧಾರೇಶ್ವರರಿಗೆ ಹಾಲಾಡಿ ರಾಘವೇಂದ್ರ ಮಯ್ಯರು ಸಲ್ಲಿಸಿದ ಶ್ರದ್ಧಾಂಜಲಿ ಇಲ್ಲಿದೆ:
ಧಾರೇಶ್ವರ... ಲಕ್ಷಾಂತರ ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದ ಒಂದ್ ಹೆಸರು... ಹಂಗಾರಕಟ್ಟೆ ಕಲಾಕೇಂದ್ರದಲ್ಲಿ ಐರೋಡಿ ಸದಾನಂದ ಹೆಬ್ಬಾರರ ಸಾರಥ್ಯದಲ್ಲಿ ಗುರು ನಾರ್ಣಪ್ಪ ಉಪ್ಪೂರರ ಮಾರ್ಗದರ್ಶನದಲ್ಲಿ ಹಾಗೂ ಧಾರೇಶ್ವರರು ಗುರು ಹಾಗೂ ಒಡನಾಡಿಯಾಗಿ ಹೊರಹೊಮ್ಮಿದ ವಿದ್ಯಾರ್ಥಿ ನಾನೂ ಒಬ್ಬ ಎನ್ನಲು ಹೆಮ್ಮೆಯಾಗುತ್ತದೆ.

ಮೊತ್ತಮೊದಲ ಬಾರಿಗೆ ನಾನು ಶ್ರೀ ಅಮೃತೇಶ್ವರಿ ಮೇಳವನ್ನು ಗುರು ನಾರಣಪ್ಪ ಉಪ್ಪೂರರ ಆಜ್ಞೆ ಹಾಗೂ ಆಶೀರ್ವಾದದೊಂದಿಗೆ ಸೇರಿದಾಗ ನಾನು ಸಂಗೀತ ಮಾಡಿ ರಂಗಸ್ಥಳ ಇಳಿದಾಗ ನನ್ನ ನಂತರ ಭಾಗವತಿಗೆ ಮಾಡಲು ಧಾರೇಶ್ವರರು ಆಗಮಿಸುತ್ತಿದ್ದರು. ಆಗ ಶಿವಾನಂದನೂ ನಮ್ಮೊಡನೇ ಇದ್ದರು. ನಂತರ ಗುರು ನಾರ್ಣಪ್ಪ ಉಪ್ಪೂರರು ರಂಗ ಪ್ರವೇಶಿಸುತ್ತಿದ್ದರು. ಇದು ಸುಮಾರು 43 ವರ್ಷಗಳ ಹಿಂದಿನ ಕತೆ.
ಅದಕ್ಕೂ ಮೊದಲೇ ಧಾರೇಶ್ವರರು ತನ್ನ ಯಕ್ಷರಂಗದ ಮೊದಲ ಹೆಜ್ಜೆಯನ್ನು ಶ್ರೀ ಅಮೃತೇಶ್ವರಿ ಮೇಳದಲ್ಲೇ ಪ್ರಾರಂಭಿಸಿ ಸಂಗೀತದ ಹಂತವನ್ನು ಮುಗಿಸಿ ಭಾಗವತಿಕೆಗೆ ಕಾಲಿಟ್ಟ ಸಮಯ. ಅಲ್ಲಿಂದ ಗುರು ನಾರಣಪ್ಪ ಉಪ್ಪೂರರ ಮರಣದ ನಂತರ ಕಾರಣಾಂತರಗಳಿಂದ ಅಮೃತೇಶ್ವರಿ ಹೋಗಿ ಹಿರೇಮಹಾಲಿಂಗೇಶ್ವರ ಮೇಳವಾದಾಗಲೂ ನಾವಿಬ್ಬರೂ ಜೊತೆಯಾಗಿ  ಸಾಗಿದೆವು.. ಒಟ್ಟು ಇದ್ದ ಎರಡೂ ವರ್ಷವೂ ಅಣ್ಣ ತಮ್ಮನ ಹಾಗೇ ಇದ್ದ ನಾವು ಕಡೆಗೆ ಅವರೊಂದು ಮೇಳ, ನಾನೊಂದು ಮೇಳವಾಗಿ ದೂರವಾದೆವು.

ದೈವಾನುಕೃಪೆಯೋ ಎಂಬಂತೆ ಮತ್ತೆ ಪುನಃ ಹಲವಾರು ವರ್ಷಗಳ ನಂತರ ನನ್ನ ಹಾಗೂ ಧಾರೇಶ್ವರರ ಜೊತೆ ಪೆರ್ಡೂರು ಮೇಳದಲ್ಲಾಯಿತು. ಆದರೂ ಬಹುಶಃ ದೇವರಿಗೆ ಅದು ಅಷ್ಟು ಇಷ್ಟ ಇಲ್ಲವಿತ್ತೇನೋ... ಯಾಕೆಂದರೆ ಯಾವ್ದೋ ಒಂದು ಕಾರಣಕ್ಕೆ ಅವರ ಹಾಗೂ ನನ್ನ ಮಧ್ಯೆ ಮನಸ್ತಾಪ ಬೆಳೆಯಿತು. ಅದಾದ ಎಷ್ಟೋ ವರ್ಷ ನಮ್ಮಿಬ್ಬರ ನಡುವೆ ಎದುರು ಬದುರಾದಗಲೂ ಮಾತುಕತೆಯೇ ಇರ್ಲಿಲ್ಲ.


ಮತ್ತೇ ಸುಮಾರು ವರ್ಷಗಳ ಬಳಿಕ ಅವರೇ ಮುಂದೆ ಬಂದು ರಾಘು ರಾಘು ಎಂದು ಮಾತಾಡಿಸತೊಡಗಿದರು. ನಾನು ಹಳೆಯದೆಲ್ಲವನ್ನು ಮರೆತು ಅವರೊಡನೆ ಬೆರೆಯತೊಡಗಿದೆ. ಇತೀಚಿನ ದಿನಗಳಲ್ಲಂತೂ ಎಲ್ಲೇ ಸಿಕ್ಕಿದರೂ ಅತೀ ಆತ್ಮೀಯತೆಯಿಂದ ಮಾತನಾಡಿಸುತ್ತಿದ್ದರು. ಎಷ್ಟೋ ಸಲ ನಾನು ಅವರ ಮನೆಗೆ ಹೋದಾಗಲೂ ಅಥವಾ ಹೊರಗಡೆ ಸಿಕ್ಕಿದಾಗಲೂ ಯಕ್ಷಗಾನದ ಇಂದಿನ ಸ್ಥಿತಿಗತಿ ಹಾಗೂ ಅಂದಿನ ಸ್ಥಿತಿಗತಿಯ ಬಗ್ಗೆ ಬಹಳಷ್ಟು ಚರ್ಚಿಸುತ್ತಿದ್ದೆವು.

ಒಮ್ಮೆ ಕಾರ್ಯಕ್ರಮವೊಂದರಲ್ಲಿ ಧಾರೇಶ್ವರರು ನನ್ನ ಬಗ್ಗೆ ಹೆಮ್ಮೆಯಿಂದ  "ನಮ್ ರಾಘವೇಂದ್ರ ಮಯ್ಯರು ಯಾವುದೇ ಕೆಲಸಕ್ಕೆ ಇಳಿಯುದಿಲ್ಲ. ಇಳ್ದಾಂತಂದ್ರೆ ಅದನ್ನ ಸಾಧಿಸಿಯೇ ಬಿಡುವಷ್ಟು ಸಾಮರ್ಥ್ಯ ಅವನಲ್ಲುಂಟು... ಹಳ್ಳಿಯಿಂದ ದಿಲ್ಲಿಯವರೆಗೆ ಯಾವ್ದೇ ಕೆಲಸವನ್ನು ಸರಾಗವಾಗಿ ಮಾಡಿಕೊಡಬಲ್ಲ ವ್ಯಕ್ತಿ" ಎಂದು ಹೇಳಿದ್ದರು. ನನಗಾಗ ಅವ್ರ ಮಾತುಗಳನ್ನ ಕೇಳಿ ಅವರಿಟ್ಟ ಪ್ರೀತಿಗೆ ನಿಜವಾಗಿಯೂ ಸಂತಸದಿಂದ ಗದ್ಗದಿತನಾಗಿದ್ದೆ.

ಯಕ್ಷಗಾನ ರಂಗಕ್ಕೆ ಹೇಳಿ ಮಾಡಿಸಿದಂತೆ ಇದ್ದ ಅತ್ಯುತ್ತಮ ಭಾಗವತ ಶ್ರೀ ಧಾರೇಶ್ವರರು. ಹಳೆಯ ಸಂಪ್ರದಾಯವನ್ನು ಬಿಡದೆ ಹೊಸ ಬಗೆಯ ಪ್ರಯೋಗಗಳನ್ನು ಮಾಡಿ ಎಷ್ಟೋ ಮುಮ್ಮೇಳ ಕಲಾವಿದರನ್ನು ಇವ ಇಂತವ ಅಂತ ಜನ ಗುರುತಿಸುವಂತೆ ಮಾಡಿದ್ದು ಅವರು.

ಕಿರಿಮಂಜೇಶ್ವರದಲ್ಲಿ ತಾಳಮದ್ದಳೆಯ ಸರಣಿಯನ್ನು ಪ್ರಾರಂಭಿಸಿದ ಮೊತ್ತ ಮೊದಲ ಸರಣಿಯಲ್ಲಿ "ರಾಘು ನೀ ಮತ್ ಯಾವ್ ಕಾರಣಕ್ಕೂ ಬ್ಯಾಡ ಅಂಬುಕಿಲ್ಲೇ" ಅಂತ ಶರತ್ತೂ ಹಾಕಿ ನನ್ನನ್ನು ಗೌರವಿಸಿದ್ದರು.

ಸಾಧಾರಣ ಕಾಳಿಂಗ ನಾವಡರ ನಂತರ ಇಡೀ ರಂಗಸ್ಥಳವನ್ನು ತನ್ನ ಹಿಡಿತದಲ್ಲಿಟ್ಟುಕೊಂಡು ಇಂದಿನ ಕಾಲದಲ್ಲಿ ರಂಗವನ್ನು ಆಳುತ್ತಿದ್ದ ಏಕೈಕ ರಂಗ ಮಾಂತ್ರಿಕ ಧಾರೇಶ್ವರರಾಗಿದ್ದರು.
ಅಂದು ಒಂದು ಕಾಲಕ್ಕೆ ನಿಂತಂತ ಪೆರ್ಡೂರು ಮೇಳ ಪುನಃ ಪ್ರಾರಂಭವಾಗಿ ಮೊದಲ ವರ್ಷ ಬಯಲಾಟ ಮೇಳವಾಗಿ ಮುಂದುವರೆದು ಎರಡನೇ ವರ್ಷಕ್ಕೆ ಟೆಂಟ್ ಮೇಳವಾಗಿ ಶ್ರೀಯುತರ ದಕ್ಷ ನಿರ್ದೇಶನದಲ್ಲಿ ಮೇಲೆದ್ದಿತು. ಆ ಸಮಯದಲ್ಲಿ ಇಡೀ ಮೇಳವನ್ನು ಫೀನಿಕ್ಸ್ ಪಕ್ಷಿಯಂತೆ ಮತ್ತೆ ಮೇಲೇಳುವಂತೆ ಮಾಡಿದ್ದೂ ಅವರೇ. ಆ ಸಮಯದಲ್ಲಿ ಅವರು ಮೇಳಕ್ಕಾಗಿ ತನ್ನ ಸರ್ವಸ್ವವನ್ನು ಧಾರೆ ಎರೆದಿದ್ದರು.

ಅವರಂಥ ಒಬ್ಬ ನಿಷ್ಠಾವಂತ, ಪ್ರತಿಭಾವಂತ, ತಾಳ್ಮೆಯ ಸಾಕಾರಮೂರ್ತಿ ಕಾಣ ಸಿಗುವುದು ತುಂಬಾ ಕಷ್ಟಸಾಧ್ಯ. ಒಮ್ಮೆ ಮೇಳ ಬಿಟ್ಟ ಶ್ರಿಯುತರು ಮತ್ತೆ ಪುನಃ ಎರಡು ವರ್ಷಗಳ ಹಿಂದೆ ಆಪತ್ಕಾಲದಲ್ಲಿ ಪೆರ್ಡೂರು ಮೇಳಕ್ಕೆ ವರದಾನವಾದ್ರು.

ಅವರ-ನನ್ನ ಕೊನೆಯ ಭೇಟಿ ಚಂಡೆ ಶಿವಾನಂದನ ಮನೆಯಲ್ಲಿ. ಮೆಕ್ಕೆಕಟ್ಟು ಮೇಳದಲ್ಲಿ ಪ್ರಶಸ್ತಿ ಸ್ವೀಕರಿಸಿ ಶಿವಾನಂದನ ಮನೆಗ್ ಊಟಕ್ಕೆ ಹೋಗಿದ್ದಾರೆ ಎಂದು ತಿಳಿದು ಅಲ್ಲಿಗೆ ಧಾವಿಸಿದ್ದೆ. ಆಗಲೂ ಅಷ್ಟೆ ಪ್ರೀತಿಯಿಂದ ಮಾತನಾಡಿ "ಬೇಗ್ ಹುಷಾರಾಗಿ ಬತ್ನಾ ರಾಘು" ಅಂದಿದ್ದರು.

ಆದರೆ ವಿಧಿಯ ಸಂಕಲ್ಪ ಬೇರೆಯೇ ಇದ್ದಿತ್ತು.

ನಿಮ್ಮೊಡನೆ ಒಡನಾಡಿದ ಆ ದಿನಗಳ ನಾನೆಂದೂ ಮರೆಯಲಾರೆ. ನಿಮ್ಮ ಮದುವೆಯ ಸಂದರ್ಭದಲ್ಲೂ ನಾವು ದಂಟ್ಕಲ್ ಸತೀಶ, ಶಿವಾನಂದ ಮಾಡಿದ ಗಮ್ಮತ್ತು ತಲೆಹರಟೆ ಹೀಗೆ ಒಂದೇ ಎರಡೇ. ಒಂದೇ ಒಂದು ಬೇಸರವೆಂದರೆ ಇಲ್ಲಿಯವರೆಗೆ ನಮಗೆಲ್ಲ ಒಬ್ಬ ಮಾರ್ಗದರ್ಶಕ, ತಿದ್ದಿ ತೀಡುವುದಕ್ಕೆ, ಜೊತೆಗೆ ನಮಗೆ ಅರ್ಥವಾಗದ್ದನ್ನ ಕೇಳಿ ತಿಳಿಯುವುದಕ್ಕೆ ಒಬ್ಬರಿದ್ದಾರೆ ಎನ್ನುವ ಭಾವನೆ ಇತ್ತು. ಇನ್ನು ಮುಂದೆ ಗೊತ್ತಿಲ್ಲಾ.

ಮನುಷ್ಯ ಎಂದ ಮೇಲೆ ಒಂದು ದಿನ ಹುಟ್ಟುವುದು, ಒಂದು ದಿನ ಸಾಯುವುದು ಸಹಜವೇ ಆದರೂ ಸಾಯುವ ಪ್ರಾಯ ನಿಮ್ಮದಾಗಿರಲಿಲ್ಲವಲ್ಲ, ಅದೇ ಬೇಸರ ಮತ್ತೆ ಮತ್ತೆ ಕಾಡುತಿದೆ. ಈಗ ಎಲ್ಲವೂ ಮುಗಿದಿದೆ. ನಿಮ್ಮ ಚಿತೆಗೆ ಅಗ್ನಿ ಸ್ಪರ್ಶ ಕೊಡುವಾಗಲೂ ನನಗನಿಸಿದ್ದೊಂದೇ, ಯಾಕಿಷ್ಟು ಬೇಗ ಭಾಗವತ್ರೆ.... ಎಲ್ಲೋ ಬಂದು ರಾಘು ಅಂತ ಕರೆಯುತ್ತೀರೇನೋ ಎಂಬ ಭಾವ. ನಿಮ್ಮ ಚಿತೆಯ ಬೆಂಕಿ ಮೇಲೇಳುವುದನ್ನು ಕಂಡು ಮನೆಗೆ ಹೊರಟ ನನಗೂ ನನ್ನ ಹೆಂಡತಿಗೂ ಮೂಡಿದ ಭಾವ ಎಂತು ನಂಬುವುದು ಇದನ್ನ! ಹೆಜ್ಜೆಗಳು ಭಾರವಾದವೇ ಹೊರತು ಉತ್ತರವಿಲ್ಲ.

ಹೋಗಿಬನ್ನಿ... ಭಾಗವತರೇ ಅನ್ನಲೇ? ಅಣ್ಣಯ್ಯಾ ಅನ್ನಲೇ? ಗೊತ್ತಿಲ್ಲ... ನೀವು ಹೊರಟಾಗಿದೆ. ನಿಮ್ಮಾಜ್ಞೆಯನ್ನು ಮೀರಲುಂಟೆ?

ಕಳುಹಿಸಿಕೊಡುತ್ತೇವೆ ಭಾರವಾದ ಹೃದಯದಿಂದ. ಆತ್ಮ ಪರಮಾತ್ಮನಲ್ಲಿ ಸೇರಲಿ. ಮಹಾಬಲೇಶ್ವರನ ಸಾಯುಜ್ಯ ಸೇರಲಿ.
🙏🙏🙏
ನಿಮ್ಮ ರಾಘು....
ರಾಘವೇಂದ್ರ ಮಯ್ಯ, ಹಾಲಾಡಿ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು