ಗಾನ ರಸ ಧಾರೆ ಹರಿಸಿದ ಎಲೆಕ್ಟ್ರಿಷಿಯನ್: ಸುಬ್ರಹ್ಮಣ್ಯ ಧಾರೇಶ್ವರ ನಿಧನ ಸೃಷ್ಟಿಸಿದ ನಿರ್ವಾತ


ಬಡಗುತಿಟ್ಟು ಯಕ್ಷಗಾನದ ಪ್ರಖ್ಯಾತ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಎಲೆಕ್ಟ್ರಿಷಿಯನ್ ಆಗಿ ಯಕ್ಷಗಾನ ರಂಗದ ಸಂಪರ್ಕ ಪಡೆದವರು. ನಂತರ ಭಾಗವತ ಶ್ರೇಷ್ಠರಾಗಿದ್ದೊಂದು ಇತಿಹಾಸ.
ಬೆಂಗಳೂರು: ಬಡಗುತಿಟ್ಟಿನ ಯಕ್ಷಗಾನ ರಂಗದಲ್ಲಿ ಪ್ರಯೋಗಶೀಲತೆಯ ಮೂಲಕ ವಿನೂತನ ಅಲೆ‌ ಎಬ್ಬಿಸಿದ್ದ, ಗಾನ ರಸ ಧಾರೆ ಹರಿಸಿದ್ದ ರಾಜ್ಯಪ್ರಶಸ್ತಿ ವಿಜೇತ ಸುಬ್ರಹ್ಮಣ್ಯ ಧಾರೇಶ್ವರ ಅವರು ಇಂದು (ಏ. 25, 2024 ಗುರುವಾರ) ನಸುಕಿನ ಜಾವದಲ್ಲಿ ಇಹಲೋಕ ಯಾತ್ರೆ ಮುಗಿಸಿದರು.

ಯಕ್ಷಗಾನ ರಂಗದಲ್ಲಿ ಸುಮಾರು 46 ವರ್ಷ ಸಕ್ರಿಯರಾಗಿದ್ದ ಅವರಿಗೆ 67 ವರ್ಷ ವಯಸ್ಸಾಗಿತ್ತು. ಬೆಂಗಳೂರಿನಲ್ಲಿ ಪುತ್ರನೊಂದಿಗೆ (ಬಡಗುತಿಟ್ಟಿನ ಶ್ರೇಷ್ಠ ಚೆಂಡೆವಾದಕರಾಗಿ ಗುರುತಿಸಿಕೊಂಡಿರುವ ಕಾರ್ತಿಕ್ ಧಾರೇಶ್ವರ) ವಾಸವಾಗಿದ್ದ ಸುಬ್ರಹ್ಮಣ್ಯ ಧಾರೇಶ್ವರರು ಅಲ್ಪಕಾಲದ ಅಸೌಖ್ಯದ ಬಳಿಕ ಇಂದು ಮುಂಜಾನೆ ಕೊನೆಯುಸಿರೆಳೆದರು.

ಹಂಗಾರಕಟ್ಟೆ ಯಕ್ಷಗಾನ ಕೇಂದ್ರದಲ್ಲಿ ಎಂ.ನಾರ್ಣಪ್ಪ ಉಪ್ಪೂರರ ಶಿಷ್ಯರಾದ ಧಾರೇಶ್ವರರು, ಕಾಳಿಂಗ ನಾವಡರ ಒಡನಾಡಿಯಾಗಿ ರಂಗ ಪ್ರವೇಶಿಸಿದವರು. ತಮ್ಮ ಸುಮಧುರ ಕಂಠ, ತಮ್ಮದೇ ಶೈಲಿ, ರಂಗ ತಂತ್ರದಿಂದ ಹಲವು ಪೌರಾಣಿಕ ಮತ್ತು ಹೊಸ ಪ್ರಸಂಗಗಳಿಗೆ ಜೀವ ತುಂಬಿದ್ದರು. ಯಕ್ಷಗಾನ ಕಲಾರಂಗ ‌ಅವರಿಗೆ ನಾರ್ಣಪ್ಪ ಉಪ್ಪೂರ ಪ್ರಶಸ್ತಿ ನೀಡಿ ಗೌರವಿಸಿತ್ತು. ಚಿಟ್ಟಾಣಿ ರಾಮಚಂದ್ರ ಹೆಗಡೆ ಪ್ರಶಸ್ತಿ ಸೇರಿದಂತೆ ಹಲವು ಪುರಸ್ಕಾರಗಳಿಗೆ ಭಾಜನರಾಗಿದ್ದರು.

ಯಕ್ಷಗಾನದಲ್ಲಿ ‘ಕರಾವಳಿ ಕೋಗಿಲೆ’ ಎಂದೇ ಪ್ರಸಿದ್ಧಿ ಪಡೆದ ಸುಬ್ರಹ್ಮಣ್ಯ ಧಾರೇಶ್ವರರಿಗೆ 2022ರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಒಲಿದಿತ್ತು.

1957ರ ಸೆ.5ರಂದು ಗೋಕರ್ಣದಲ್ಲಿ ಜನಿಸಿದ ಅವರು ಚಿಕ್ಕವರಾಗಿದ್ದಾಗಲೇ ಸಂಗೀತದಲ್ಲಿ ಆಸಕ್ತಿ ಹೊಂದಿದ್ದರು. ಸ್ಥಳೀಯ ಹವ್ಯಾಸಿ ಸಂಗೀತಕಾರ ಜಟ್ಟಯ್ಯ ಭಟ್ ಇವರ ಸಂಗಡ ಹಾರ್ಮೋನಿಯಂ ನುಡಿಸಲು ಹೋಗುತ್ತಿದ್ದರು. ನಂತರ ದಕ್ಷಿಣ ಕನ್ನಡದ ಅಮೃತೇಶ್ವರಿ ಮೇಳದಲ್ಲಿ ವಿದ್ಯುತ್ ಕೆಲಸಗಾರರಾಗಿ (ಮೇಳದ ಎಲೆಕ್ಟ್ರಿಷಿಯನ್ ಆಗಿ) ಸೇರಿಕೊಂಡರು.

ಕ್ರಮೇಣ ಭಾಗವತಿಕೆಯಲ್ಲಿ ಆಸಕ್ತಿ ತೋರಿ ಮೇಳದ ಮುಖ್ಯ ಭಾಗವತರಾದ ನಾರ್ಣಪ್ಪ ಉಪ್ಪೂರ ಅವರಿಂದ ಯಕ್ಷಗಾನ ಹಾಡುಗಾರಿಕೆ ಕಲಿಯಲು ಪ್ರಾರಂಭಿಸಿದರು. ಅಲ್ಲಿಂದ ಅವರ ಪಥವೇ ಬದಲಾಯಿತು. ನಂತರ ಹಿಂತಿರುಗಿ ನೋಡದ ಅವರು ಯಕ್ಷಗಾನ ಕ್ಷೇತ್ರದಲ್ಲಿ ಸುದೀರ್ಘ 46 ವರ್ಷಗಳ ಸೇವೆ ಸಲ್ಲಿಸಿದ್ದಾರೆ.

1978ರಿಂದ 1985ರ ತನಕ ಕೋಟದ ಅಮೃತೇಶ್ವರಿ ಯಕ್ಷಗಾನ ಮಂಡಳಿಯಲ್ಲಿ ಸಹ ಭಾಗವತರಾಗಿ ದುಡಿಮೆ ಮಾಡಿದರು. ನಂತರ 1986ರಿಂದ 2012ರವರಗೆ 26 ವರ್ಷಗಳ ಕಾಲ ಪೆರ್ಡೂರು ಮೇಳದಲ್ಲಿ ಪ್ರಧಾನ ಭಾಗವತರಾಗಿ, ನಿರ್ದೇಶಕ, ಕಥಾ ಸಂಯೋಜಕನಾಗಿ ಮೇಳವನ್ನು ಮುನ್ನೆಡೆಸಿದ ಹಿರಿಮೆ ಅವರದು. 2021ರಲ್ಲಿ ಅವರು ಮತ್ತೊಮ್ಮೆ ಪೆರ್ಡೂರು ಮೇಳದ ಪ್ರಧಾನ ಭಾಗವತರಾಗಿ ಕೆಲಸ ಮಾಡಿದ್ದರು.

ಯಕ್ಷಗಾನ ರಂಗದಲ್ಲಿ ಪ್ರಥಮವಾಗಿ ಹೊಸ ರಾಗಗಳನ್ನು, ಹೊಸ ತಾಂತ್ರಿಕತೆಯನ್ನು ಯಶಸ್ವಿಯಾಗಿ ಬಳಸಿ, ಪೌರಾಣಿಕ, ಐತಿಹಾಸಿಕ ಹಾಗೂ ಸಾಮಾಜಿಕ ಯಕ್ಷಗಾನ ಪ್ರಸಂಗ ರಚನೆ, ನಿರ್ದೇಶನ, ಸಂಯೋಜನೆ ಹಾಗೂ ಪ್ರದರ್ಶನ ನೀಡಿದರು. ಧಾರೇಶ್ವರರಿಗೆ ‘ಕರಾವಳಿ ರತ್ನ’, ‘ಕನ್ನಡ ಕುಲಭೂಷಣ’, ‘ಶ್ರೀ ಗುರು ನರಸಿಂಹ’, ‘ಶ್ರೀರಾಮ ವಿಠಲ’, ‘ನಾರ್ಣಪ್ಪ ಉಪ್ಪೂರು’, ‘ಕಾಳಿಂಗ ನಾವುಡ’ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳು ದೊರೆತಿವೆ.

400 ಕ್ಕೂ ಹೆಚ್ಚು ಯಕ್ಷಗಾನ ಕ್ಯಾಸೆಟ್‌ಗಳಲ್ಲಿ ತಮ್ಮ ಕಂಠವನ್ನು ಮೆರೆಸಿದ್ದ ಸುಬ್ರಹ್ಮಣ್ಯ ಧಾರೇಶ್ವರರು ಪತ್ನಿ, ಪುತ್ರ, ಪುತ್ರಿಯನ್ನು ಹಾಗೂ ಅಪಾರ ಯಕ್ಷಗಾನ ಬಂಧುಗಳನ್ನು ಅಗಲಿದ್ದಾರೆ.
ಎಲೆಕ್ಟ್ರಿಷಿಯನ್‌ನಿಂದ ರಂಗ ನಿಯಂತ್ರಣದವರೆಗೆ...

ಯಕ್ಷಗಾನ ರಂಗಸ್ಥಳಕ್ಕೆ ಲೈಟಿಂಗ್ ಮಾಡುತ್ತಿದ್ದ ಹುಡುಗ ಯಕ್ಷಗಾನ ಕಲೆಯ ಬಲೆಯಲ್ಲಿ ಸಿಲುಕಿ, ರಂಗವನ್ನೇ ನಿಯಂತ್ರಿಸಬಲ್ಲ ಶಕ್ತಿಯಾಗಿ ಬೆಳೆದದ್ದೊಂದು ರೋಚಕ ಕಥೆಯೇ ಸರಿ.

ಯಕ್ಷಗಾನ ಕ್ಷೇತ್ರದಲ್ಲಿ ಹೊಸತನದ ಅಲೆ ಎಬ್ಬಿಸಿದ್ದ ಭಾಗವತ ಕಾಳಿಂಗ ನಾವಡರ ನಿರ್ಗಮನದ ಬಳಿಕ ನಿರ್ವಾತವನ್ನು ತುಂಬಲು ತುಂಬ ಪ್ರಯತ್ನ ಪಟ್ಟವರು ಧಾರೇಶ್ವರರು. ಯಕ್ಷಗಾನ ಹಿಮ್ಮೇಳದೊಂದಿಗೆ ವೈವಿಧ್ಯಮಯ ಹಾಡುಗಳ ಪ್ರಸ್ತುತಿಯ ಪ್ರಯೋಗವನ್ನು ಮಾಡುತ್ತಾ ಬಂದವರು.

ಯಕ್ಷಗಾನ ಕ್ಷೇತ್ರದಲ್ಲಿ 46 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಅವರು ಬಡಗು ತಿಟ್ಟಿನಲ್ಲಿ ಹೊಸ ಅಲೆ‌ ಎಬ್ಬಿಸಿದ್ದ ಡೇರೆ ಮೇಳವಾದ ಪೆರ್ಡೂರು ಮೇಳದಲ್ಲಿ 28 ವರ್ಷಗಳ ಕಾಲ ಪ್ರಧಾನ ಭಾಗವತರಾಗಿ, ರಂಗ ನಿರ್ದೇಶಿಸಿ ರಂಗ ಮಾಂತ್ರಿಕ ಎಂದು ಕರೆಸಿಕೊಂಡವರು ಧಾರೇಶ್ವರರು.

ಅಮೃತೇಶ್ವರಿ ಮೇಳದಲ್ಲಿ ಎಲೆಕ್ಟ್ರಿಷಿಯನ್ ಆಗಿ ಅವರು ತಮ್ಮ ಯಕ್ಷಗಾನ ತಿರುಗಾಟ ಆರಂಭಿಸಿದ್ದರು. ಬಳಿಕ ಕಾಳಿಂಗ ನಾವಡರ ಧ್ವನಿಗೆ ಮಾರುಹೋಗಿ ಭಾಗವತನಾಗುವ ಕನಸು ಕಂಡು, ಗುರು ನಾರ್ಣಪ್ಪ ಉಪ್ಪೂರರ ಗುರುತನದಲ್ಲಿ ಭಾಗವತಿಗೆ ಅಭ್ಯಾಸ ಮಾಡಿದರು. ಬಳಿಕ ಹಿರೇಮಹಾಲಿಂಗೇಶ್ವರ ಮೇಳ ಹಾಗೂ ಶಿರಸಿ ಮೇಳದಲ್ಲೂ ಭಾಗವತರಾದ ನಂತರ ಪೆರ್ಡೂರು ಮೇಳದಲ್ಲಿ ಮೆರೆದರು ಮತ್ತು ವಾಣಿಜ್ಯಾತ್ಮಕ ಕೋನದಿಂದ ಯಕ್ಷಗಾನ ಪ್ರಸಂಗಗಳಿಗೆ ಹೊಸ ಹೊಳಪು ಕೊಟ್ಟು ರಂಗದಲ್ಲಿ ಅವುಗಳನ್ನು ಮೆರೆಸಿದರು ಮತ್ತು ತಾವು ಕೂಡ ಸ್ಟಾರ್ ಭಾಗವತರಾಗಿ ಗುರುತಿಸಿಕೊಂಡರು. ಅವರಿದ್ದಾರೆಂದರೆ ಟೆಂಟ್ ಆಟಗಳು ಹೌಸ್ ಫುಲ್ ಆಗುತ್ತಿತ್ತು ಎಂಬ ಕಾಲವೂ ಇತ್ತು.

ಸುಬ್ರಹ್ಮಣ್ಯ ಧಾರೇಶ್ವರರು ಆರಂಭದಿಂದಲೇ ಹಾಡುವ ಬಗೆಗೆ ಒಲವಿದ್ದವರು. ಮೊದಲು ಸಂಗೀತಾಭ್ಯಾಸ ‌ಮಾಡಿ ವಿವಿಧೆಡೆ ಕಾರ್ಯಕ್ರಮ ನೀಡುತ್ತಿದ್ದರು. ನಡುವೆ ಎಲೆಕ್ಟ್ರಿಕಲ್ ಕೆಲಸ ಕಾರ್ಯಗಳಲ್ಲಿ ಪರಿಣತಿ ಸಾಧಿಸಿ, ಎಲೆಕ್ಟ್ರಿಕ್ ಅಂಗಡಿ ಹಾಕಿದ್ದರು ಮತ್ತು ಯಕ್ಷಗಾನ ಮೇಳಕ್ಕೆ ಲೈಟಿಂಗ್ ವ್ಯವಸ್ಥೆ ಮಾಡಿಕೊಡುತ್ತಿದ್ದರು. ಹೀಗೆ ಅವರ ನಂಟು ಯಕ್ಷಗಾನದೊಂದಿಗೆ ಆರಂಭವಾಗಿತ್ತು.

ಆದರೆ ಇವರೊಳಗಿನ ಹಾಡಿನ ಪ್ರತಿಭೆ ಗುರುತಿಸಿದ ಪ್ರಾಚಾರ್ಯ ನಾರಣಪ್ಪ ಉಪ್ಪೂರರ ಪ್ರೇರಣೆಯಿಂದ ಯಕ್ಷಗಾನ ಭಾಗವತಿಕೆಯನ್ನು ಕಲಿತು ರಂಗಕ್ಕೇರಿಯೇಬಿಟ್ಟರು. ಅಲ್ಲಿಗೆ ಬಡಗುತಿಟ್ಟು ಯಕ್ಷಗಾನ ರಂಗದಲ್ಲಿ ಹೊಸದೊಂದು ಧ್ರುವತಾರೆ ಉದಯಿಸಿದಂತಾಯಿತು. ಆರಂಭದಲ್ಲಿ ಪೂರ್ವರಂಗದ ಭಾಗವತಿಕೆ ಮಾಡುತ್ತಾ, ಮೇಳದ ಎಲೆಕ್ಟ್ರಿಷಿಯನ್ ಆಗಿ ಕೆಲಸ ಮುಂದುವರಿಸುತ್ತಿದ್ದರು. ನಂತರ, ನಿಧಾನವಾಗಿ ಪೂರ್ಣಪ್ರಮಾಣದ ಭಾಗವತರಾಗಿ ರೂಪುಗೊಂಡರು.

ಸದಾ ಹೊಸತನಕ್ಕೆ ತುಡಿಯುತ್ತಿದ್ದ ಸುಬ್ರಹ್ಮಣ್ಯ ಧಾರೇಶ್ವರರ ಮನಸ್ಸು ಕೂಡ ಪೆರ್ಡೂರು ಮೇಳದಲ್ಲಿ ಹೊಸ ಹೊಸ ಪ್ರಸಂಗಗಳನ್ನು ಹೊಸತನದಲ್ಲಿ ನಿರ್ದೇಶಿಸುವ ಮೂಲಕ ಅರಳತೊಡಗಿತು. ಇದೇ ಕಾರಣಕ್ಕೆ ರಂಗಮಾಂತ್ರಿಕ ಎನಿಸಿದ್ದರು. ಕೀರ್ತಿಯ ಉತ್ತುಂಗದಲ್ಲಿ ಇದ್ದಾಗಲೇ ಮೇಳ ತಿರುಗಾಟ ನಿಲ್ಲಿಸಿ, ಹಾಡುಗಾರಿಕೆಯಲ್ಲಿ ಹೊಸ ಪ್ರಯೋಗಗಳನ್ನು ಮಾಡುತ್ತಾ ಧಾರೇಶ್ವರ ಯಕ್ಷ ಬಳಗ ಮೂಲಕ ಯಕ್ಷಗಾನ ಕಾರ್ಯಕ್ರಮಗಳನ್ನು ಸಂಯೋಜಿಸುತ್ತಿದ್ದರು.

ಮೇಳ ಬಿಟ್ಟು 10 ವರ್ಷದ ಬಳಿಕ ಧಾರೇಶ್ವರರು ಮತ್ತೆ ಪೆರ್ಡೂರು ಮೇಳಕ್ಕೆ ಅನಿವಾರ್ಯ ಸಂದರ್ಭದಲ್ಲಿ 2021ರಲ್ಲಿ ತಿರುಗಾಟವನ್ನೂ ಮಾಡಿದ್ದರು. ಯಕ್ಷಗಾನದ ಬದುಕಿನುದ್ದಕ್ಕೂ ತಮ್ಮ ಕಂಠದ ಮೂಲಕ ಅಭಿಮಾನಿಗಳನ್ನು ಸೆಳೆದಿಟ್ಟುಕೊಂಡಿದ್ದ ರಂಗ ಮಾಂತ್ರಿಕನ ಅಗಲುವಿಕೆ ಬಡಗುತಿಟ್ಟು ಯಕ್ಷಗಾನ ರಂಗಕ್ಕೆ ತುಂಬಲಾರದ ನಷ್ಟ.

ಸುದ್ದಿ ತಿಳಿದು ಯಕ್ಷಗಾನ ಅಭಿಮಾನಿಗಳು ಆಘಾತ ವ್ಯಕ್ತಪಡಿಸಿ ಕಂಪನಿ ಮಿಡಿದಿದ್ದಾರೆ. ಅವರ ಪಾರ್ಥಿವ ಶರೀರವನ್ನು ಅವರ ಊರಾದ ಕುಂದಾಪುರದ ಕಿರಿಮಂಜೇಶ್ವರಕ್ಕೆ ಇಂದು‌ ಸಂಜೆ ತರಲಾಗುತ್ತದೆ.

ಅವರ ಆತ್ಮಕ್ಕೆ ಸದ್ಗತಿ ಪ್ರಾಪ್ತಿಯಾಗಲಿ ಎಂದು Yakshagana.in ಜಾಲತಾಣದ ವತಿಯಿಂದ ಚರಮಾಂಜಲಿ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು