ಹನುಮಗಿರಿ ಮೇಳದ ಇಂದ್ರಪ್ರಸ್ಥ ಯಕ್ಷಗಾನ ಪ್ರಸಂಗ: ಇದನ್ನು ನೋಡಲೇಬೇಕು ಯಾಕೆ?

ಅದ್ಭುತ ಕಲಾವಿದರ ಸಮೂಹವನ್ನೇ ಹೊಂದಿರುವ ಹನುಮಗಿರಿ ಮೇಳದ ಈ ವರ್ಷದ ಕಲಾಕಾಣಿಕೆ ಇಂದ್ರಪ್ರಸ್ಥ. ಇದು ಈಗಾಗಲೇ ಸರ್ವತ್ರ ಶ್ಲಾಘನೆಗೆ ಒಳಗಾಗಿದ್ದು, ಇದನ್ನು ನೋಡಿದ ಯಕ್ಷಾಭಿಮಾನಿ ಅಭಿಜ್ಞಾ ಭಟ್ ಅವರು, ಈ ಪ್ರಸಂಗವನ್ನು ನೋಡಿ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.

ಕಲೆಯೆನ್ನುವುದು ನೋಡುಗನ ಮನಸ್ಸನ್ನು ಅರಳಿಸಿ, ಎದೆಯ ಭಾರವನ್ನು ಇಳಿಸುವಲ್ಲಿ ಪ್ರಧಾನ ಪಾತ್ರವನ್ನು ವಹಿಸುವುದು ಸುಳ್ಳಲ್ಲ. ಸಾಹಿತ್ಯವೂ ಹಾಗೆಯೇ. ಭಾರತೀಯ ಸಂಸ್ಕೃತಿಯಲ್ಲಿ ಕಲಾಸಾಹಿತ್ಯಗಳ ವೈವಿಧ್ಯ ಎನ್ನುವುದು ಪ್ರಧಾನವಾದ ಒಂದು ಅಂಗವಿದ್ದಂತೆ. ಅದರಲ್ಲೂ ಇತಿಹಾಸ ಕಾವ್ಯ, ಪುರಾಣಾದಿಗಳು ಮನುಷ್ಯನಿಗೆ ಮನರಂಜನೆಯ ಜೊತೆಗೆ ಏನನ್ನು ಮಾಡಬೇಕು, ಏನು ಮಾಡಬಾರದು, ಸರಿ ಯಾವುದು, ತಪ್ಪು ಯಾವುದು ಎಂಬುದರ ಸರಿಯಾದ ಮಾಹಿತಿಯನ್ನು ಕಥೆಗಳ ರೂಪದಲ್ಲಿ ನೀಡುವುದು ಸುಳ್ಳಲ್ಲ. ಪೂರ್ವಜರ ಕರ್ಮಗಳು ಹೇಗಿತ್ತು ಎನ್ನುವುದರಲ್ಲಿ ಮುಂದಿನ ತಲೆಮಾರುಗಳಿಗೆ ಪಾಠವಿರಬೇಕು‌. ಪಾಠವಿದ್ದರೆ ಅದು ಆದರ್ಶ ಎನಿಸಿಕೊಳ್ಳುತ್ತದೆ. ಮಹಾಭಾರತವು ಅಂಥದ್ದೊಂದು ಆದರ್ಶ ಗ್ರಂಥ. ವಿಧೇಯಾತ್ಮಕ ವಿಚಾರಗಳನ್ನು ನಿಷೇಧಾತ್ಮಕವಾದ ವಿಚಾರಗಳ ಮೂಲಕ ಸ್ಪಷ್ಟವಾಗಿ ತಿಳಿಯಪಡಿಸುವ ಮಹಾಭಾರತ ನಿಜ ಅರ್ಥದಲ್ಲಿ ಇತಿಹಾಸ ಗ್ರಂಥವೇ. ಅದರ ಚಲನಶೀಲತೆ ಅಥವಾ Dynamism ಎನ್ನುವುದು ಮಹಾಭಾರತದ ವಿಶೇಷತೆ. ಮಹಾಭಾರತದ ಕಥೆಗಳನ್ನು ಹೇಗೆ ಬೇಕಾದರೂ ವಿಮರ್ಶಿಸಬಹುದು. ಹೇಗೆ ಬೇಕಾದರೂ ಪುನರ್‌ರಚನೆ ಮಾಡಬಹುದು, ಎಷ್ಟಾದರೂ ಹೊಸ ಕಥೆಗಳನ್ನು ಸೇರಿಸಬಹುದು, ಯಾವುದೇ ರೀತಿಯ ಕಲೆಗಳ ಮೂಲಕ ಅದನ್ನು ಪ್ರಸ್ತುತಿಪಡಿಸಿ ನೋಟಕರಿಗೆ ನೀಡಬಹುದು.
ಇಂದ್ರಪ್ರಸ್ಥ - ಬಹುಶಃ ಮಹಾಭಾರತವನ್ನು ಯಕ್ಷಗಾನದ ಚೌಕಟ್ಟಿನೊಳಗೆ ಹೊಸ ಪ್ರಕಾರದಲ್ಲಿ ತಂದ ಕೆಲವಾರು ಪ್ರಯೋಗಗಳಲ್ಲಿ ಮುಖ್ಯವಾದುದು ಎನ್ನಬಹುದು. ಪ್ರೇಕ್ಷಕಳಾಗಿ ಕಾಣಬೇಕೆಂಬ ಆಸೆಯಿಂದ ಇದುವರೆಗೆ ಮುಚ್ಚಿಟ್ಟದ್ದಾದರೂ ಕೊನೆಗೊಮ್ಮೆ ತಡೆಯಲಾರದೇ ಯೂಟ್ಯೂಬ್ ತೆರೆದೆ. ಆ ಪ್ರದರ್ಶನದ ಪಾಲಿಗೆ ಏಕೈಕ ಪ್ರೇಕ್ಷಕಳಾಗಿ ಯೂಟ್ಯೂಬಿನಲ್ಲಿ ಕಂಡದ್ದಾದರೂ ನಮ್ಮದೇ ಮನೆಯೊಳಗೆ, ನನ್ನದೇ ಕಣ್ಣೆದುರು ರಂಗಸ್ಥಳವೊಂದು ಕಳೆಕಟ್ಟಿದಂತೆ ಭ್ರಮೆಯುಂಟಾದುದು ಸುಳ್ಳಲ್ಲ. ಇದೊಂದು ಪ್ರಸಂಗ ಮತ್ತದರ ಪ್ರಸ್ತುತಿ ಬಹಳ ವಿಶೇಷವೆನಿಸಿತು ನನಗೆ. ಮಹಾಭಾರತವೆನ್ನುವುದು ಹಲವು ರೀತಿಗಳಲ್ಲಿ, ಅದರಲ್ಲೂ ಪರಂಪರೆಗೆ ಅನುಗುಣವಾಗಿ ಪ್ರಸ್ತುತಪಡಿಸಲ್ಪಟ್ಟರೂ, ಯಕ್ಷಗಾನದ ಗಾಂಭೀರ್ಯಕ್ಕೆ ಕುಂದುಂಟಾಗದಂತೆ ಪರಂಪರೆಯ ಚೌಕಟ್ಟನ್ನು ಕೊಂಚ ಹಿತವಾಗಿಯೇ ಮೀರಿ, ಭಾವನಾತ್ಮಕ ನೆಲೆಯಲ್ಲಿ ಮಹಾಭಾರತದ ಪ್ರದರ್ಶನ ಇದು ಅಪರೂಪ ಎನಿಸಿತು. ಅದರಲ್ಲೂ ಕಲೆಯೊಂದರಲ್ಲಿ ಆಯಾ ಕಾಲಕ್ಕನುಸಾರವಾಗಿ ಮಾಡಬಹುದಾದ ಕೆಲವಾರು ಬದಲಾವಣೆ, ಸುಧಾರಣೆ ಮತ್ತು ಆಧುನೀಕರಣಗಳೊಂದಿಗೆ ಮಾಡಿದ ಪ್ರಸ್ತುತಿ ನೋಟಕರಿಗೆ ಮಹಾಭಾರತದ ಕಥೆಗಳನ್ನು ಹೊಸತಾದ ಒಂದು ರೀತಿಯಿಂದ ಕಾಣುವಲ್ಲಿ ಅನುಕೂಲವನ್ನು ಮಾಡಿಕೊಟ್ಟಿದೆ ಎಂದರೆ ತಪ್ಪಾಗಲಾರದು.

ಆದಿಪರ್ವದ ಕೆಲವಾರು ಪ್ರಸಂಗಗಳನ್ನುಳಿದು ಉಳಿದ ಹೆಚ್ಚಿನ ಕಥೆಗಳೂ ನಿರ್ಲಕ್ಷಿಸಲ್ಪಟ್ಟದ್ದು.  ಹೀಗಿರುವಾಗ ಇಡೀ ಮಹಾಭಾರತಕ್ಕಿದ್ದ ಭಾವನಾತ್ಮಕವಾದ ಹಿನ್ನೆಲೆಯನ್ನು, ದಾಯಾದ್ಯಮತ್ಸರ ಬೆಳೆಯುವುದಕ್ಕೆ ಮತ್ತು ಬೆಳೆಸುವುದಕ್ಕೆ ಪ್ರತಿಯೊಂದು ಪಾತ್ರಗಳಿಗೂ ಇದ್ದ ಕಾರಣಗಳನ್ನು ತೋರಿಸುವಂತೆ ಇಂದ್ರಪ್ರಸ್ಥವಿದೆ. ಮಹಾಭಾರತವನ್ನು ಈ ರೀತಿಯಾಗಿ ಯಕ್ಷಗಾನದಲ್ಲಿ ಕಾಣುವ ನಿರೀಕ್ಷೆ ಇರಲಿಲ್ಲ. ಕಂಡ ಮೇಲಂತೂ ಮಹಾಭಾರತ ಪುಸ್ತಕದಲ್ಲಿರುವ ಸಾಲುಸಾಲುಗಳು ಹೇಳುವ ಕಥೆ ಕೂಡಾ ರಂಗಸ್ಥಳದಲ್ಲಿ ತೋರಿಸಲ್ಪಟ್ಟಂತೆ ಕಣ್ಣಿಗೆ ಕಾಣುತ್ತಿದೆ ಎಂಬುದು ಸ್ವಾನುಭವ. ಪ್ರಸಂಗ ನೋಡುವಾಗ ಅನಿಸಿದ್ದು ಪ್ರಸಂಗ ರಚನೆ, ಕಥಾ ಸಂಯೋಜನೆ, ನಿರ್ದೇಶನ ಮತ್ತು ಪಾತ್ರಪ್ರಸ್ತುತಿ ಎಲ್ಲವೂ ಕೂಡಿ ಆಯಾ ವ್ಯಕ್ತಿಗಳಿಂದ ಅತ್ಯದ್ಭುತವಾಗಿ ನಿರ್ವಹಿಸಲ್ಪಟ್ಟು masterpiece ಎನಿಸಿದೆ ಎಂದು.

ಹನುಮಗಿರಿ ಮೇಳ ಎಂದೂ ತನ್ನ ಪ್ರೇಕ್ಷಕರನ್ನು, ಕಲಾಭಿಮಾನಿಗಳನ್ನು ನಿರಾಸೆಗೆ ತಳ್ಳುವುದಿಲ್ಲ. ಕಾಣುವವರಿಗೆ ಸಂಪೂರ್ಣ ತೃಪ್ತಿಯುಂಟಾಗುವಂತೆ ಮತ್ತು ಈಗಿನ ತಲೆಮಾರಿನ ಗಮನವನ್ನು ಸೆಳೆಯುವಂತೆ - ಒಂದು ವಿಭಿನ್ನವಾದ ರೀತಿಯಲ್ಲಿ, ಕಲೆಯ traditional ಆಯಾಮಗಳಿಗೆ ಕುಂದುಂಟಾಗದಂತೆ ಕಲೆಗೊಂದು modern shade ನೀಡುವ ತಂಡದ ಪ್ರಯತ್ನ ಬಹಳಷ್ಟು ಇಷ್ಟವಾಯಿತು.

ಸುರತ್ಕಲಿನ ಹೊಸಬೆಟ್ಟಿನಲ್ಲಿ ಪ್ರದರ್ಶಿಸಲ್ಪಟ್ಟ ಇಂದ್ರಪ್ರಸ್ಥದಲ್ಲಿ ವೈಯಕ್ತಿಕವಾಗಿ ನನಗೆ ಇಷ್ಟವಾದ ಅಂಶಗಳು ಹಲವು...

1. ಗಾಂಧಾರಿಯ ವಿವಾಹ ಸನ್ನಿವೇಶ. ಅದರಲ್ಲಿ ಸುಬಲನಿಗೆ ಇದ್ದ ಅಸಹಾಯಕತೆ, ಅಥವಾ ಅವನದ್ದಾದ ನಿಲುವು ಗಾಂಧಾರಿಗೆ ಉಂಟುಮಾಡುವ ಪರಿಸ್ಥಿತಿ ಮತ್ತು ಅವಳಿಗಾಗುವ ಆಘಾತ. ಮೊದಲೇ ವರನನ್ನು ಅರಿತಿದ್ದು ಒಪ್ಪಿಕೊಂಡ ಹಾಗೆ ಅಥವಾ ಬೇರೆ ಪ್ರಸಂಗಗಳಲ್ಲಿ ತೋರಿಸುವ ಹಾಗಿನ (ವಧುವು ತಂದೆ/ತಾಯಿಗಾದ್ರೆ ಆದೀತು ಎಂದು ಒಪ್ಪುವುದು) ಸಂದರ್ಭ ಇಲ್ಲಿಲ್ಲದ್ದು ಗಾಂಧಾರಿಯ ಪರಿಸ್ಥಿತಿಯನ್ನು ತೋರಿಸುವ ಹಾಗೆ ಅತ್ಯಂತ ಸೊಗಸಾಗಿ ಚಿತ್ರಿಸಲ್ಪಟ್ಟಿದೆ. ಇಲ್ಲಿ ಮುಖ್ಯವಾಗಿ ಪಾತ್ರಧಾರಿಗಳ ಹಾವಭಾವಗಳನ್ನು ನಾನು ಉಲ್ಲೇಖಿಸಿ ಪ್ರಶಂಸಿಸಲೇಬೇಕು. ಮತ್ತು ಕಥಾರಂಭವಾದಾಗಲೇ ಪ್ರೇಕ್ಷಕರನ್ನು ಕಥೆಯಲ್ಲಿ ತಲ್ಲೀನರಾಗಿಸುವ ಭಾವೋದ್ವೇಗವು ಪ್ರೇಕ್ಷಕ ಮತ್ತು ಕಲಾವಿದರ ನಡುವಿನ ice breaking ಎಂದರೆ ಅತಿಶಯೋಕ್ತಿಯಾಗಲಾರದು.

2. ನಂತರದಲ್ಲಿ ಕಣ್ಣಿಗೆ ಬಟ್ಟೆ ಕಟ್ಟಿಕೊಳ್ಳುವ ಸನ್ನಿವೇಶದಲ್ಲಿ, ಕೇವಲ ಪತಿಭಕ್ತಿಯನ್ನು ಮಾತ್ರ ವೈಭವೀಕರಿಸದೆ, ಎಲ್ಲೋ ಒಂದೆಡೆ ತನಗಾದ ಅನ್ಯಾಯಕ್ಕೆ ಪ್ರತಿಭಟನೆಯೆಂಬಂತೆ, ಬದುಕಿನ ಬಣ್ಣ ಹೋದ ಮೇಲೆ ಮತ್ತೆ ಕಣ್ಣು ಇದ್ದೂ ಪ್ರಯೋಜನ ಏನು ಎಂಬ ಭಾವವನ್ನೂ ಅಲ್ಲಿ ಹೈಲೈಟ್ ಮಾಡಿದ್ದು ನಿಜಕ್ಕೂ ಇಷ್ಟವಾಯ್ತು. ಇದು ನನಗೆ ಭೈರಪ್ಪನವರ ಪರ್ವವನ್ನು ನೆನಪಿಸಿದ್ದು ಸುಳ್ಳಲ್ಲ. ಮುಂದೆಯೂ ಅಷ್ಟೇ, ಅಂಧನನ್ನು ಮದುವೆಯಾದ ತನಗೆ ಎಲ್ಲಕ್ಕಿಂತ ಹೆಚ್ಚು attention ಸಿಗಬೇಕು ಎಂಬ ಅವಳ ಮಾತ್ಸರ್ಯದ ಹಿಂದಿನ ಕಾರಣವನ್ನು ಮಾತಿನಲ್ಲಿ ಹೇಳಿಬಿಟ್ಟರೆ ಇನ್ನೂ ಚಂದವಾಗಬಹುದು. ಅದನ್ನು ಭೀಷ್ಮರೆದುರು ನಯವಾಗಿ ತೆರೆದಿಟ್ಟರೆ ಇನ್ನೂ ಸೊಗಸಾದೀತು ಅನ್ನುವುದು  ಅನಿಸಿಕೆ.

ಸಂತೋಷ್ (ಹಿಲಿಯಾಣ) ಸರ್ ಬಹಳ ಚೆನ್ನಾಗಿ ಗಾಂಧಾರಿ ಪಾತ್ರವನ್ನು ನಿರ್ವಹಿಸಿದ್ದಾರೆ. ಶಕುಂತಲೆ, ಮತ್ತು ದೇವಯಾನಿ ಎರಡರಂತೆಯೇ, ಗಾಂಧಾರಿಯ ಆಂತರ್ಯವನ್ನು ನೇರವಾಗಿಯೇ ಕಂಡು ತಿಳಿದು ಬಂದ ಹಾಗೆಯೇ ಅಭಿನಯಿಸಿದ್ದಾರೆ. ಪ್ರಸಂಗದಲ್ಲಿ ತನ್ನದೇ ಆದ ಛಾಪನ್ನೊತ್ತಿದ ಗಾಂಧಾರಿಯ ಪಾತ್ರ ತುಂಬಾ ಇಷ್ಟವಾಯ್ತು.

3. ಪಾಂಡು - ಪಾತ್ರದ ಪ್ರಾರಂಭದ ಭಾಗ. ಕುಂತೀಸ್ವಯಂವರದಲ್ಲಿ ಸಣ್ಣ ಮಟ್ಟಿನ ಗಾಂಭೀರ್ಯಪೂರ್ಣವಾದ ಶೃಂಗಾರ, ಮತ್ತೆ ಬೇಟೆಯಲ್ಲಿ ವೀರರಸ, ಶಾಪಾನಂತರದಲ್ಲಿ ದುಃಖ, ಮತ್ತೆ ಶೃಂಗಾರ, ಮರಣ.. ಭಾವಗಳು Blend ಆದ ಹಾಗೆ, spectrum ನಂತೆ ಒಂದು ಮುಗಿದಾಕ್ಷಣ ಮತ್ತೊಂದು, ಒಂದರಿಂದ ಇನ್ನೊಂದಕ್ಕೆ ದಾಟುವಾಗ ಅಲ್ಲಿ ಆ ಎರಡು ಭಾವನೆಗಳನ್ನು ಮಿಶ್ರಮಾಡಿದ ರೀತಿ ಅತ್ಯದ್ಭುತವಾಗಿತ್ತು. ನನ್ನಿಂದ ಅತೀ ಹೆಚ್ಚು rewind ಮಾಡಿ ನೋಡಲ್ಪಟ್ಟ ಸನ್ನಿವೇಶಗಳು ಪಾಂಡುವಿನ ಅಪ್ರತಿಮವಾದ ಅಭಿನಯ. Experience matters!🔥

4. ಕುಂತಿ-ಮಾದ್ರಿಯರ ಜತೆ ಚಂದವಾಗಿತ್ತು. ಅದರಲ್ಲೂ ಕುಂತಿ, ಮೂರು ವಿಭಿನ್ನವಾದ ರೀತಿಯಲ್ಲಿ, ಆಕೆಯ ಜೀವನದ ಪ್ರಮುಖವಾದ ಘಟ್ಟಗಳನ್ನು ತೋರಿಸುತ್ತಾ ಮೂಡಿಬಂದ ಪಾತ್ರ. ಪ್ರಾರಂಭದ ಕಸೆವೇಷ ವಿಭಿನ್ನ ಅನಿಸಿತು. ಅಷ್ಟು ವೈಭವದಲ್ಲಿದ್ದ ಒಂದು ಪಾತ್ರ ಮತ್ತೆ ಅನುಭವಿಸಬೇಕಾಗಿ ಬಂದ ಸಂಕಟಗಳನ್ನು ಚಿತ್ರಿಸುವಲ್ಲಿ ಕಲಾವಿದರು ಯಶಸ್ವಿಯಾಗಿದ್ದಾರೆ. ಪ್ರಕೃತಿ ಸೌಂದರ್ಯದ ವರ್ಣನೆಯ ಸನ್ನಿವೇಶದ ನಾಟ್ಯದಲ್ಲಂತೂ ಕುಂತಿ ಮತ್ತು ಮಾದ್ರಿಯರ ಪ್ರದರ್ಶನ ಅತ್ಯಮೋಘವಾಗಿತ್ತು.

5. ಧೃತರಾಷ್ಟ್ರ ತನ್ನೊಳಗಿನ ಕೀಳರಿಮೆಗಳನ್ನು ಹಿಡಿತದಲ್ಲಿಡಲಾಗದೇ ತನ್ನನ್ನೂ ತನ್ನ ಕುಟುಂಬವನ್ನೂ ನರಕವಾಗಿಸಿದ ಒಂದು ದುರಂತ ಪಾತ್ರ. ಜನ್ಮತಃ ಬಂದ ಅಂಧತ್ವದಿಂದ ಮನೆಯವರು ಕೊಡುವ ಪ್ರೀತಿಯನ್ನೂ ಅನುಕಂಪವೆಂದೇ ತಿಳಿದು ಕುಸಿದು ಹೋಗುವ ಧೃತರಾಷ್ಟ್ರನ ಒಳಗಿನ Inferior feeling superior feeling ಆಗುವುದು ತನಗೆ ತಲೆಬಾಗುವವರ ಎದುರು ಮಾತ್ರ. ಮನಃಶಾಸ್ತ್ರ ಪರವಾದ ಕೆಲವು ವಿಚಾರಗಳನ್ನು ಸ್ಪಷ್ಟವಾಗಿಯೇ ಪ್ರಜ್ವಲ್ (ಗುರುವಾಯನಕೆರೆ) ಸರ್ ತೋರಿಸಿದ್ದಾರೆ. ಅಪರೂಪದ ಪಾತ್ರ, ಯಾವುದೇ ರೆಫರೆನ್ಸ್ ಇಲ್ಲದಿದ್ದರೂ ಪಾತ್ರದ ಗಾಂಭೀರ್ಯಕ್ಕೆ ಕೊರತೆಯಾಗದ ಹಾಗೆ ಪ್ರಸ್ತುತಪಡಿಸಿದ್ದಾರೆ. ಅತಿಯಾದ ಪುತ್ರವ್ಯಾಮೋಹ, ಕುಲವೊಂದರ ಅಳಿವಿಗೆ ಹೇಗೆ ಕಾರಣವಾಗುತ್ತದೆ ಎನ್ನುವುದು ಮಕ್ಕಳನ್ನು ಹೇಗೆ ಬೆಳೆಸಬೇಕು, ಮತ್ತು ಅವರನ್ನು ಎಷ್ಟರಮಟ್ಟಿಗೆ ಹಚ್ಚಿಕೊಳ್ಳಬೇಕು ಎನ್ನುವ ವಿಚಾರದಲ್ಲಿ ಲೋಕಕ್ಕೆ ಪಾಠವಾಗುತ್ತದೆ. ಮಗನ ಮುಂದೆ ಧೃತರಾಷ್ಟ್ರನ ವ್ಯಕ್ತಿತ್ವದ ಸೋಲು, ಕಣ್ಣಿಲ್ಲದ ಜೀವವೊಂದು ಕಿವಿಯ ಮೂಲಕ ಕೇಳಿದ್ದನ್ನೆಲ್ಲಾ ನಂಬಲೇಬೇಕಾದ ಪರಿಸ್ಥಿತಿಯಲ್ಲಿ ಜೊತೆಗಿರುವವರು ಆ ಅಸಹಾಯಕತೆಯನ್ನು ದುರುಪಯೋಗಪಡಿಸಿಕೊಳ್ಳುವ ಸ್ಥಿತಿಯನ್ನು ಬಹಳ ಚೆನ್ನಾಗಿಯೇ ತೋರಿಸಿಕೊಟ್ಟಿದೆ.

6. ಶಕುನಿ - ಎಲ್ಲಕ್ಕಿಂತ ಮೊದಲು ಗಮನವನ್ನು ಸೆಳೆದದ್ದು ಮುಖವರ್ಣಿಕೆಯೇ. ಮೇಲೆ ಚಂದ್ರ, ಕೆಳಗೆ ಕತ್ತರಿ. ಚಂದ್ರವಂಶವನ್ನು ಒಡೆಯುವ ಪಾತ್ರವನ್ನು ಮುಖವರ್ಣಿಕೆಯಲ್ಲೇ ತೋರಿಸಿದ್ದು ವಿಶೇಷ ಅಂತ ಕಂಡಿತು. ಪಾತ್ರದ ಆಹಾರ್ಯ ಮಾತ್ರ ನಿಜವಾಗಿಯೂ ವಿಭಿನ್ನವೇ. ವೇಷಭೂಷಣಗಳಲ್ಲಿ ಧಾರಾವಾಹಿಯ ಪ್ರಣೀತ್ ಭಟ್ ಛಾಯೆ ಢಾಳಾಗಿ ಕಂಡರೂ, ನಯವಂಚನೆಯ ಬೆಣ್ಣೆಹಚ್ಚಿದ ಮಾತುಗಳಲ್ಲಿ ಮಾತ್ರ ಧಾರಾವಾಹಿಯ ಶಕುನಿಮಾವನಿಗಿಂತ ಚೆನ್ನಾಗಿ ಮಾತಿನಲ್ಲೇ ಎದುರಿದ್ದವರ ತಲೆತಿರುಗಿಸಿ, ಹುಟ್ಟುವ ಬೆಂಕಿಯಲ್ಲಿ ತನ್ನ ಬೇಳೆಯನ್ನು ಬೇಯಿಸಿಕೊಳ್ಳುವ ಯಕ್ಷಗಾನದ ಈ ಶಕುನಿಮಾವ ಮಾತ್ರ ಪ್ರಸಂಗದಲ್ಲಿ ಆಕರ್ಷಣೆಯ ಬಿಂದುವಾಗಿ ನೋಡುಗರ ದೃಷ್ಟಿಯನ್ನು ತಮ್ಮಲ್ಲೇ ಹಿಡಿದುಕೊಂಡದ್ದು ಸತ್ಯ. ಕೆಲವು ಪಂಚಿಂಗ್‌ಗಳು ಮಾತ್ರ ಅತ್ಯದ್ಭುತ. 
ಭೀಷ್ಮರ ಮುಂದೆ ತಗ್ಗಿದಂತೆ ತೋರಿದರೂ ತಗ್ಗದೇ, ತನ್ನ ಹಠವನ್ನು ಸಾಧಿಸಿಕೊಳ್ಳುವ ಭರ ಮತ್ತು ಇದರಿಂದಾಗಿ ಭೀಷ್ಮಾಚಾರ್ಯರ ಮತ್ತು ಶಕುನಿಯ ನಡುವೆ ನಡೆಯುವ ಶೀತಲ ಸಮರವನ್ನು ಬಿಂಬಿಸಿದ ವಿಧ ಇಷ್ಟವಾಯಿತು.

7. ಭೀಷ್ಮಾಚಾರ್ಯರು ಆರಂಭದಿಂದ ಕೊನೆಯವರೆಗೆ ಗಾಂಭೀರ್ಯವನ್ನು ಬಿಟ್ಟುಕೊಡದ ಪಾತ್ರ. ಹಲವು ಆತಂಕಗಳನ್ನೂ ಭೀತಿಯನ್ನೂ ಒಳಗೊಳಗೇ ಮುಚ್ಚಿಟ್ಟುಕೊಂಡು, ಕೆಟ್ಟದ್ದಾಗದ ಹಾಗೆ ತಡೆಯಲು ಹಗಲಿರುಳೂ ಶ್ರಮಿಸುವ, ಮನೆಯ ಹಿರಿಯರೆಂಬ ನೆಲೆಯಲ್ಲಿ ಸಮಸ್ತರನ್ನೂ ಸರಿಯಾಗಿ ನಡೆಸುವ ಉದ್ದೇಶದಿಂದ ನಿಯಂತ್ರಿಸಲು ಪ್ರಯತ್ನಿಸುವ ಭೀಷ್ಮರು ಎದುರಿರುವವರು ಪ್ರಾಯದಲ್ಲಿ ಅತೀ ಚಿಕ್ಕವರಾದರೂ ಸ್ಥಾನಕ್ಕೆ ಮರ್ಯಾದೆ ಕೊಟ್ಟು, ಆದರೂ ತನ್ನ ವರಿಷ್ಠತೆಯ ಗತ್ತನ್ನು ಬಿಡದೇ ಮಾತನಾಡಿದ ರೀತಿ ಬಹಳ ಇಷ್ಟವಾಯಿತು. ಪಾಂಡವ ಪಕ್ಷಪಾತ, ಕೌರವಪ್ರೀತಿ ಎರಡನ್ನೂ ತೋರದೇ ಸಮಾನವಾಗಿ ನಿಂತ ರೀತಿ ಭೀಷ್ಮಾಚಾರ್ಯರ ವ್ಯಕ್ತಿತ್ವದ ಮೇಲೆ ಇದ್ದ ಗೌರವವನ್ನು ಹೆಚ್ಚಿಸುತ್ತದೆ.

8. ಕೌರವರು ತಮ್ಮ ಹಠ, ದ್ವೇಷ, ಪಾಂಡವರೊಂದಿಗಿನ ಸ್ಪರ್ಧೆ, ಮತ್ಸರಗಳನ್ನು ಚೆನ್ನಾಗಿಯೇ ತೋರಿಸಿಕೊಟ್ಟಿದ್ದಾರೆ. ಪ್ರಮಾಣಕೋಟಿಯ ಸನ್ನಿವೇಶವಂತೂ ಅತ್ಯದ್ಭುತ. ಭೀಮನೊಂದಿಗಿನ ಯುದ್ಧ, ಅವನ ಮೇಲಿನ ಚೂರೇ ಚೂರು ಭಯ, ಅದನ್ನು ಮೀರಿಸುವ ಮಾತ್ಸರ್ಯ, ನಯವಂಚಕತನಗಳು ನೈಜವಾಗಿ ತೋರಿಸಲ್ಪಟ್ಟಿದೆ.

9. ರಾಜ್ಯವಿಂಗಡನೆಯ ವಿಚಾರದಲ್ಲಿ ಉಂಟುಮಾಡಿದ ಗೊಂದಲಗಳು ಸಹಜವಾಗಿಯೇ ತೋರಿಸಲ್ಪಟ್ಟಿದೆ. ವಿಭಜನೆಯೆನ್ನುವುದು ಉಂಟುಮಾಡುವ ದುಃಖ, ಹುಟ್ಟಿಬೆಳೆದ ಮನೆಯನ್ನು ಬಿಟ್ಟುಹೋಗುವ ಪಾಂಡವರ ಮತ್ತು ಗಂಡನ ನೆನಪುಗಳಿರುವ ಅರಮನೆಯನ್ನು ಬಿಟ್ಟುಹೋಗುವಲ್ಲಿ ಕುಂತಿಯ ಸಂಕಟವನ್ನು ಮುಚ್ಚಿಟ್ಟು ತೋರುವ ನಿರ್ಲಿಪ್ತ ಭಾವಗಳು ಅರೆಕ್ಷಣ ಕಣ್ಣನ್ನು ಹಸಿಯಾಗಿಸುತ್ತವೆ.

10. ಹಾಸ್ಯಪಾತ್ರಗಳು ಹೆಚ್ಚಿಲ್ಲದಿದ್ದರೂ ಪ್ರತಿ ಸನ್ನಿವೇಶದಲ್ಲೂ ಸಣ್ಣ ಪ್ರಮಾಣದ ಗಂಭೀರ ಹಾಸ್ಯವಿದ್ದದ್ದು Cherry on the cake ಅನ್ನುವಂತೆ ಪ್ರಸಂಗದ ಅಂದಕ್ಕೆ ಕಲಶವಿಟ್ಟಂತಿತ್ತು. ಆರಂಭದಿಂದ ಕೊನೆಯವರೆಗೂ ಬೇಸರ ಹಿಡಿಸದಂತೆ ಪ್ರೇಕ್ಷಕರ ಕುತೂಹಲವನ್ನು ಕಾಪಿಟ್ಟುಕೊಡುವ ಜವಾಬ್ದಾರಿಯನ್ನು ಹೊತ್ತುಕೊಂಡಂತೆ ಅಲ್ಲಲ್ಲಿ ಗಂಭೀರವಾದ ಸನ್ನಿವೇಶಗಳ ಹಿಂದೆಯೇ ಬಂದುಹೋಗುವ Refreshing ಹಾಸ್ಯ ಈ ಪ್ರಸಂಗದ ವಿಶೇಷತೆ.

11. ಪ್ರತಿ ಪಾತ್ರಗಳ ವಿಚಾರದಲ್ಲಿ ಬಹಳ ಹಿಂದಿನಿಂದಲೇ ಇದ್ದಿರಬಹುದಾದ stereotype ಗಳನ್ನು ಮುರಿಯುವಂತೆ ಪಾತ್ರಪ್ರಸ್ತುತಿ ಇದ್ದದ್ದು ಈ ಪ್ರಸಂಗದ ವೈಶಿಷ್ಟ್ಯ. ಕಥೆಯಾಗಿ ಕೇಳುವಾಗಲೂ ಓದುವಾಗಲೂ ಅಸಹನೆ ಮೂಡಿಸುವ ಕೆಲವು ಪಾತ್ರಗಳು ಕೂಡಾ ಒಂದರೆಕ್ಷಣ ನಮ್ಮ ಅನುಕಂಪವನ್ನು ಕಟ್ಟಿಕೊಳ್ಳುವಂತೆ ಮಾಡಿತು.

12. ಇನ್ನು ಹಿಮ್ಮೇಳದ ಕುರಿತು ಎರಡುಮಾತಿಲ್ಲ. ಪ್ರಸಂಗದುದ್ದಕ್ಕೂ ಕಥೆಗೂ ಕಲಾವಿದರಿಗೂ ಅನುಕೂಲವಾಗುವಂತೆ ಎಲ್ಲೂ ಹದತಪ್ಪದೇ ಸಾಗಿದೆ. ಆಯಾ ಸಂದರ್ಭಕ್ಕೆ ತಕ್ಕಂತೆ ಸನ್ನಿವೇಶಗಳನ್ನು ಪ್ರೇಕ್ಷಕನಿಗೆ ವರ್ಣಿಸುವ ಮಹತ್ತರವಾದ ಜವಾಬ್ದಾರಿಯನ್ನು ಹೊತ್ತ ಯಶಸ್ವೀ ಹಿಮ್ಮೇಳವು ಪ್ರಸಂಗದ ಗೆಲುವಿಗೆ ಮುಖ್ಯ ಕಾರಣವಾಗಿದೆ.

8. ಕೊನೆಯ ಭಾಗವೂ ಅಷ್ಟೇ ಚೆನ್ನಾಗಿ ಬಂದಿದೆ. ಅಲ್ಲಿ ವನವರ್ಣನೆ, ಕೃಷ್ಣಾರ್ಜುನರ ಸಂವಾದ, ಅಗ್ನಿಬ್ರಾಹ್ಮಣನೊಂದಿಗಿನ ಮಾತುಕತೆ, ನಂತರದ ಯುದ್ಧಭಾಗ, ಮಯಾಸುರನ ಶರಣಾಗತಿ ಎಲ್ಲವೂ ಅತ್ಯಂತ ಸುಂದರವಾಗಿ ಮೂಡಿಬಂದಿದೆ. ಖಾಂಡವದಹನ ಭಾಗದಲ್ಲಿ ಅಶ್ವಸೇನನನ್ನು ಸೇರಿಸಿಕೊಂಡದ್ದು ಇಷ್ಟವಾಯ್ತು. 

14. ಕಥೆಯಲ್ಲಿ ಪ್ರಧಾನವಾಗುವ ಕೆಲವಾರು ಸಣ್ಣಪುಟ್ಟ ಪಾತ್ರಗಳ ಬಗ್ಗೆ ಹೇಳಲೇ ಬೇಕು. ಕಿಂಧಮ ಋಷಿ, ಜಿಂಕೆಗಳನ್ನೂ ಒಳಗೊಂಡ ಉಳಿದೆಲ್ಲಾ ಪಾತ್ರಗಳನ್ನು ನಿರ್ವಹಿಸಿದವರು ಕೂಡಾ ಬಹಳ ಚಂದವಾಗಿ ತಮ್ಮ ಪಾತ್ರಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ.

ಒಟ್ಟಂದದಲ್ಲಿ ಹೇಳುವುದಾದರೆ ಆತ್ಮಾಂಜಲಿ, ಶುಕ್ರನಂದನೆ, ಭಾರತಜನನಿಯ ನಂತರ ಅದೇ ಸಾಲಿಗೆ ಸೇರಬಲ್ಲ ಅತ್ಯದ್ಭುತ ಕಥಾನಕ ಇಂದ್ರಪ್ರಸ್ಥ ಅಂದರೆ ತಪ್ಪಾಗಲಾರದು. ಇಂತಹಾ ಅತ್ಯದ್ಭುತ ಪ್ರಸಂಗವನ್ನು ನೇರವಾಗಿ ಕಾಣಲಾಗದ್ದಕ್ಕೆ ವಿಷಾದವಿದೆ. ಯೂಟ್ಯೂಬ್ ಮಾಧ್ಯಮದಲ್ಲಾದರೂ ರಂಗಸ್ಥಳವೇ ಎದುರಿದೆಯೆಂಬಷ್ಟು ತಲ್ಲೀನರಾಗುವಂತೆ ಈ ಪ್ರದರ್ಶನವಿದ್ದುದರಲ್ಲಿ ಅನುಮಾನವಿಲ್ಲ. ಇಷ್ಟೊಂದು ಉತ್ತಮವಾದ ಪ್ರಸಂಗವನ್ನು ರಚಿಸಿ ಪ್ರಸ್ತುತಪಡಿಸಿ ಜನರಿಗೆ ಈಯುವಲ್ಲಿ ಪ್ರತ್ಯಕ್ಷವಾಗಿಯೂ ಪರೋಕ್ಷವಾಗಿಯೂ ಶ್ರಮಿಸಿದ ಪ್ರತಿಯೊಬ್ಬರಿಗೂ ಪ್ರೇಕ್ಷಕಿಯೆಂಬ ನೆಲೆಯಿಂದ ವಂದನೆಗಳನ್ನೂ ಅಭಿನಂದನೆಗಳನ್ನೂ ಸಲ್ಲಿಸುತ್ತೇನೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು