ಕರ್ನಾಟಕ ಯಕ್ಷಗಾನ ಅಕಾಡೆಮಿಗೆ ತಲ್ಲೂರು ಶಿವರಾಂ ಶೆಟ್ಟಿ ಅಧ್ಯಕ್ಷ, ಪರಿಚಯ, ಸದಸ್ಯರ ಪಟ್ಟಿ ಇಲ್ಲಿದೆ

ತಲ್ಲೂರು ಶಿವರಾಮ ಶೆಟ್ಟಿ (ಎಡ ಚಿತ್ರ).

ಬೆಂಗಳೂರು: ಲೋಕಸಭೆ ಚುನಾವಣೆ ಘೋಷಣೆಗೆ ಕೆಲವೇ ಕ್ಷಣಗಳ ಮುಂಚಿತವಾಗಿ ಕರ್ನಾಟಕ ಸರಕಾರವು ವಿವಿಧ ಅಕಾಡೆಮಿಗಳಿಗೆ ಪದಾಧಿಕಾರಿಗಳನ್ನು ಘೋಷಿಸಿದ್ದು, ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾಗಿ ಉಡುಪಿ ಜಿಲ್ಲೆಯ ಯಕ್ಷಗಾನ ಕಲಾಪೋಷಕ ತಲ್ಲೂರು ಶಿವರಾಂ ಶೆಟ್ಟಿಯವರನ್ನು ನೇಮಿಸಲಾಗಿದೆ.

ಯಕ್ಷಗಾನ ಅಕಾಡೆಮಿಯ ಸದಸ್ಯರಾಗಿ ರಾಘವ ಹೆಚ್., ಕೃಷ್ಣಪ್ಪ ಪೂಜಾರಿ, ಗುರುರಾಜ್ ಭಟ್, ವಿನಯ ಕುಮಾರ್ ಶೆಟ್ಟಿ, ವಿಜಯ ಕುಮಾರ್ ಶೆಟ್ಟಿ ಮುಲ್ಕಿ, ಮೋಹನ್ ಕೊಪ್ಪಳ, ಸತೀಶ್ ಅಡಪ ಸಂಕಬೈಲು, ರಾಜೇಶ್ ಕಳೈ, ದಯಾನಂದ ಪಿ. ಹಾಗೂ ಜಿ.ವಿ.ಎಸ್. ಉಳ್ಳಾಲ ಅವರನ್ನು ನೇಮಿಸಲಾಗಿದೆ.
ಕೊರೊನಾ ಕಾಲದಲ್ಲಿ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾಗಿದ್ದ ಎಂ.ಎ.ಹೆಗಡೆಯವರ ನಿಧನಾನಂತರ ಹಾಗೂ ನಂತರದ ಚುನಾವಣೆಗಳ ಬಳಿಕ ಯಕ್ಷಗಾನ ಅಕಾಡೆಮಿಯೂ ಸೇರಿದಂತೆ ವಿವಿಧ ಅಕಾಡೆಮಿಗಳಿಗೆ ಯಾರನ್ನೂ ನೇಮಿಸಲಾಗಿರಲಿಲ್ಲ. ಇದೀಗ ಚುನಾವಣೆ ಘೋಷಣೆಯಾಗುತ್ತಿರುವಂತೆಯೇ ಅಕಾಡೆಮಿ ಅಧ್ಯಕ್ಷ, ಸದಸ್ಯರನ್ನು ನೇಮಕ ಮಾಡಲಾಗಿದೆ.

ಅಧ್ಯಕ್ಷರಾಗಿ ಹಾಗೂ ಸದಸ್ಯರಾಗಿ ಎಲ್ಲ ಯಕ್ಷಗಾನ ಕಲಾಪ್ರೇಮಿಗಳು, ಕಲಾಪೋಷಕರು, ಕಲಾವಿದರಿಗೆ ಯಕ್ಷಗಾನ ಡಾಟ್ ಇನ್ ವತಿಯಿಂದ ತುಂಬು ಹೃದಯದ ಅಭಿನಂದನೆಗಳು. ಜೊತೆಗೆ, ಯಕ್ಷಗಾನ ಪರಂಪರೆಯ ರಕ್ಷಣೆಯಲ್ಲಿ ಮಹತ್ತರ ಪಾತ್ರ ವಹಿಸಬೇಕಾದ ಅನಿವಾರ್ಯತೆಯಿರುವ ಈ ಕಾಲಘಟ್ಟದಲ್ಲಿ ಅವರಿಂದ ಅತ್ಯುತ್ತಮ ಕೆಲಸ ಕಾರ್ಯಗಳು ನಡೆದು, ಯಕ್ಷಗಾನಕ್ಕೆ ಶ್ರೇಯಸ್ಸಾಗಲಿ ಎಂದು ಹಾರೈಕೆ.

ಯಕ್ಷಗಾನ ಅಕಾಡೆಮಿಗೆ ಹೊಸ ಸಾರಥಿ: ತಲ್ಲೂರು ಶಿವರಾಂ ಶೆಟ್ಟಿ

ಕುಂದಾಪುರ ತಾಲೂಕಿನ ತಲ್ಲೂರಿನವರಾಗಿರುವ ಶಿವರಾಂ ಶೆಟ್ಟರು ಹೋಟೆಲ್ ಉದ್ಯಮಿಯಾಗಿ ಮತ್ತು ಸಾಹಿತಿಯಾಗಿ, ಅದಕ್ಕೂ ಮಿಗಿಲಾಗಿ ಕಲಾಪ್ರೇಮಿಯಾಗಿ ಗುರುತಿಸಿಕೊಂಡವರು. ಯಕ್ಷಗಾನ ಕಲಾರಂಗ ಹಾಗೂ ರಂಗಭೂಮಿ ಉಡುಪಿ, ಉಡುಪಿ ಜಿಲ್ಲಾ ಹೋಟೆಲ್ ಮಾಲೀಕರ ಸಂಘ ಮುಂತಾದವುಗಳ ಅಧ್ಯಕ್ಷರಾಗಿಯೂ ದುಡಿದಿರುವ ಅವರು, ಸಾಕಷ್ಟು ಕೃತಿಗಳನ್ನು ರಚಿಸಿದ್ದಾರೆ.

ಬೆಂಗಳೂರಿನ ಭಾರತ ರತ್ನ ಸರ್. ಎಂ. ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಪ್ರತಿಷ್ಠಾನ ಟ್ರಸ್ಟ್ ವತಿಯಿಂದ ಸಮಗ್ರ ಸಾಹಿತ್ಯ ಸೇವೆ ಮತ್ತು ಜೀವಮಾನ ಸಾಧನೆಗಾಗಿ ನೀಡುವ ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿಗೆ ತಲ್ಲೂರು ಶಿವರಾಮ ಶೆಟ್ಟಿ ಭಾಜನರಾಗಿದ್ದಾರೆ.

ತಮ್ಮದೇ ಆದ ತಲ್ಲೂರು ಫ್ಯಾಮಿಲಿ ಟ್ರಸ್ಟ್ ಮೂಲಕ ಜಾನಪದ ಕಲೆಯ ಉಳಿವು ಬೆಳವಣಿಗೆಗಾಗಿ ಉಡುಪಿ ಜಿಲ್ಲೆಯ ವಿವಿಧ ಕಡೆಗಳಲ್ಲಿ ಜಾನಪದ ವೈಭವ ಕಾರ್ಯಕ್ರಮ ಹಮ್ಮಿಕೊಂಡು ಜಾನಪದ ಕಲೆಗಳ ಪ್ರದರ್ಶನದ ಜೊತೆಗೆ ಸಾಧಕ ಜಾನಪದ ಕಲಾವಿದರಿಗೆ, ಜಾನಪದ ಸಂಘಟಕರಿಗೆ ಪ್ರಶಸ್ತಿ ನೀಡಿ ಗೌರವಿಸುವ ಕಾರ್ಯ ನಡೆಸಿದ್ದಾರೆ. ತಮ್ಮ ಹೆತ್ತವರ ಹೆಸರಿನಲ್ಲಿ ತಲ್ಲೂರು ಕನಕಾ ಅಣ್ಯಯ್ಯ ಶೆಟ್ಟಿ ಪ್ರಶಸ್ತಿ ಸ್ಥಾಪಿಸಿ ಪ್ರತೀ ವರ್ಷ ಪ್ರಸಿದ್ಧ ಯಕ್ಷಗಾನ ವಿದ್ವಾಂಸರನ್ನು ಗುರುತಿಸಿ ಯಕ್ಷ ಪ್ರಶಸ್ತಿ ನೀಡುತ್ತಾ ಬಂದಿದ್ದಾರೆ.

ಶಾಲಾ ಕಾಲೇಜು ವಿದ್ಯಾರ್ಥಿಗಳಲ್ಲಿ ನೈತಿಕ ಮೌಲ್ಯ, ಸಂಸ್ಕಾರ ಬೆಳೆಸುವ ಆಶಯದೊಂದಿಗೆ 200ಕ್ಕೂ ಅಧಿಕ ಶಾಲೆಗಳಿಗೆ 28 ಸಾವಿರಕ್ಕೂ ಹೆಚ್ಚು ಪುಸ್ತಕ ವಿತರಿಸಿದ್ದಾರೆ. ಅವರ ಕಲಾಸಂಚಯ – ‘ದಕ್ಷಿಣ ಭಾರತದ ಕೆಲವು ಅನುಷ್ಠಾನ ಕಲೆಗಳು’ ಕೃತಿಗೆ ಕರ್ನಾಟಕ ಜಾನಪದ ಅಕಾಡೆಮಿಯ 2022ನೇ ಸಾಲಿನ ಪುಸ್ತಕ ಬಹುಮಾನ, 2021ನೇ ಸಾಲಿನ ಕನ್ನಡ ಪುಸ್ತಕ ಪ್ರಾಧಿಕಾರ ಪ್ರಶಸ್ತಿ ಲಭಿಸಿದೆ. ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಗೌರದ ಡಾಕ್ಟರೇಟ್ ನೀಡಿ ಗೌರವಿಸಿದೆ.

ಯಕ್ಷಗಾನ ಕಲಾರಂಗ ಅಧ್ಯಕ್ಷರಾಗಿದ್ದರೂ ಯಕ್ಷಗಾನ ಗೊತ್ತಿಲ್ಲ ಎಂಬ ಮಾತು ಕೇಳಿ 60ಹರೆಯದಲ್ಲಿ ಅವರು ಇಂದ್ರಾಳಿ ಯಕ್ಷಗಾನ ಕೇಂದ್ರಕ್ಕೆ ಹೋಗಿ, ಬನ್ನಂಜೆ ಸಂಜೀವ ಸುವರ್ಣರ ಶಿಷ್ಯತ್ವ ಪಡೆದು, ಶ್ರೀಕೃಷ್ಣ, ಹನೂಮಂತ, ಪರಶುರಾಮ, ಮಯೂರಧ್ವಜ ಮುಂತಾದ ಪಾತ್ರಗಳನ್ನೂ ನಿರ್ವಹಿಸಿ ಜನಮನ ಗೆದ್ದವರು. ಆ ಬಳಿಕವೂ ಅವರು ವೇಷ ಹಾಕಿ ಕುಣಿದಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು