![]() |
ಧರ್ಮಸ್ಥಳ ಮೇಳದ ಯಕ್ಷಗಾನ ರಂಗಸ್ಥಳದಲ್ಲಿ ಅಯೋಧ್ಯಾಧಿಪ ಶ್ರೀರಾಮ ಪಟ್ಟಾಭಿಷೇಕದ ದೃಶ್ಯ |
ಇಡೀ ಜಗತ್ತೇ ಅಯೋಧ್ಯಾ ರಾಮನ ಪ್ರತಿಷ್ಠಾಪನೆಯ ಸಂಭ್ರಮದಲ್ಲಿದ್ದರೆ, ಧರ್ಮಸ್ಥಳದ ಮೇಳವು ಹಿಂದೆಂದೂ ಕಂಡರಿಯದ ರೀತಿಯಲ್ಲಿ ಶ್ರೀರಾಮ ಪಟ್ಟಾಭಿಷೇಕ ಯಕ್ಷಗಾನ ಪ್ರದರ್ಶಿಸಿದೆ.
ಮಂಗಳೂರು: ಶ್ರೀರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಕೊನೆಗೂ ರಾಮ ಮಂದಿರ ನಿರ್ಮಾಣವಾಗಿದೆ ಮತ್ತು ಅಲ್ಲಿ ಬಾಲ ರಾಮನ ಪ್ರತಿಷ್ಠೆಯೂ ಆಗಿರುವುದನ್ನು ಇಡೀ ದೇಶಕ್ಕೆ ದೇಶವೇ ಸಂಭ್ರಮಿಸಿದೆ. ಯಕ್ಷಗಾನಕ್ಕೂ ರಾಮಾಯಣಕ್ಕೂ ಬಿಡದ ನಂಟು ಇದ್ದು, ಕಲಾವಿದರೆಲ್ಲರೂ ಈ ಸಂಭ್ರಮವನ್ನು ವಿಭಿನ್ನ ರೀತಿಯಲ್ಲಿ ಆಚರಿಸಿದ್ದಾರೆ. ಜನವರಿ 22, 2024ರಂದು ಬಾಲ ರಾಮನ ಪ್ರಾಣ ಪ್ರತಿಷ್ಠೆಯ ಉತ್ಸವದ ದಿನದಂದು ಕರ್ನಾಟಕದ ಬಹುತೇಕ ಯಕ್ಷಗಾನ ಮೇಳಗಳು ಶ್ರೀರಾಮನ ಚರಿತ್ರೆಯನ್ನು ಕೊಂಡಾಡುವ ಯಕ್ಷಗಾನ ಪ್ರಸಂಗಗಳನ್ನೇ ರಂಗಸ್ಥಳದಲ್ಲಿ ಪ್ರದರ್ಶಿಸಿವೆ.
ಅತ್ಯಂತ ಹಳೆಯ ಮೇಳಗಳಲ್ಲೊಂದಾಗಿರುವ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿಯವರು ಕೂಡ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಯನ್ನು ಮೂರು ದಿನಗಳ ಕಾಲವೂ ಶ್ರೀರಾಮ ಪಟ್ಟಾಭಿಷೇಕ ಪ್ರಸಂಗವನ್ನೇ ಪ್ರದರ್ಶಿಸುವ ಮೂಲಕ ಭಾರತೀಯ ಧರ್ಮಸ್ಥಾಪನೆಯ ಕ್ಷಣವನ್ನು ಆಚರಿಸಿದ್ದಾರೆ. ವಿಶೇಷವೆಂದರೆ, ರಂಗಸ್ಥಳದಲ್ಲಿ ಹಿಂದೆಂದೂ ಕಂಡರಿಯದ ರೀತಿಯಲ್ಲಿ ಶ್ರೀರಾಮನ ಪಟ್ಟಾಭಿಷೇಕವನ್ನು ಅವರು ಪ್ರೇಕ್ಷಕರ ಮುಂದಿಟ್ದಿದ್ದಾರೆ.
ವಿಡಿಯೋ ನೋಡಿ:
ರಾಜರ್ಷಿ ಡಾ.ವೀರೇಂದ್ರ ಹೆಗ್ಗಡೆ ಹಾಗೂ ಮೇಳದ ಯಜಮಾನರಾದ ಹರ್ಷೇಂದ್ರ ಕುಮಾರ್ ಅವರ ಪ್ರೇರಣೆಯೊಂದಿಗೆ, ಹೇಮಾವತಿ ಹೆಗ್ಗಡೆಯವರ ಆಶಯದಂತೆ, ಈ ಶ್ರೀ ರಾಮ ಪಟ್ಟಾಭಿಷೇಕೋತ್ಸವದ ದೃಶ್ಯವು ಮೂಡಿಬಂದಿದೆ. ಯಕ್ಷಗಾನೀಯವಾಗಿ ಮೂಡಿಬಂದ ಈ ಪ್ರದರ್ಶನಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.
ಯಕ್ಷಗಾನ.ಇನ್ ಅಪ್ಡೇಟ್ಸ್ ಪಡೆಯಲು ಫೇಸ್ಬುಕ್ | ಟ್ವಿಟರ್ | ಯೂಟ್ಯೂಬ್ | ಇನ್ಸ್ಟಾಗ್ರಾಂ ಫಾಲೋ ಮಾಡಿ. ಹಾಗೂ ನಮ್ಮ ಯಕ್ಷಗಾನ.ಇನ್ ವಾಟ್ಸ್ಆ್ಯಪ್ ಚಾನೆಲ್ ಸೇರಿಕೊಳ್ಳಿ.
ರಾಮ ರಾಜ್ಯದ ಕನಸು ಸಾಕಾರಗೊಂಡ ಈ ಶುಭ ದಿನದಂದು ಶ್ರೀ ರಾಮನ ಆದರ್ಶವನ್ನು ಸಮಾಜಕ್ಕೆ ಉತ್ತಮ ಸಂದೇಶ ಸಾರುವ ವಿಶೇಷ ಪ್ರದರ್ಶನವಾಗಿ ಈ ಯಕ್ಷಗಾನ ಮೂಡಿಬಂದಿದೆ. ಮೇಳದ ಮ್ಯಾನೇಜರ್ ಗಿರೀಶ ಹೆಗ್ಡೆ ಅವರು ಪಟ್ಟಾಭಿಷೇಕದ ವಿಶೇಷ ಪದ್ಯ ರಚನೆಯನ್ನು ಮಾಡಿದ್ದು, ಪುತ್ತಿಗೆ ರಾಮಕೃಷ್ಣ ಜೋಯಿಸರ ಕೃತಿ "ಶ್ರೀರಾಮ ನಿಜ ಪಟ್ಟಾಭಿಷೇಕ" ಪ್ರಸಂಗದ ಒಂದು ಪದ್ಯವನ್ನೂ ಆಯ್ಕೆ ಮಾಡಲಾಗಿದೆ.
ಹಿಮ್ಮೇಳ ಹಾಗೂ ಮುಮ್ಮೇಳದ ಎಲ್ಲಾ ಹಿರಿಯ ಕಿರಿಯ ಕಲಾವಿದರೂ ಈ ಪಟ್ಟಾಭಿಷೇಕೋತ್ಸವದ ದೃಶ್ಯದಲ್ಲಿ ಪಾಲ್ಗೊಂಡಿದ್ದಾರೆ. ಶ್ರೀರಾಮನಾಗಿ ಅನುಭವೀ ಹಿರಿಯ ಕಲಾವಿದ ಸುಬ್ರಾಯ ಹೊಳ್ಳ ಕಾಸರಗೋಡು ಅವರು ರಾಮ ರಾಜ್ಯದ ಆಶಯ ಸಂದೇಶವನ್ನು ಮನಮುಟ್ಟುವಂತೆ ವಿವರಿಸಿದರು.
ಅಯೋಧ್ಯೆಯಲ್ಲಿ ಶ್ರೀರಾಮನ ಪ್ರತಿಷ್ಠಾಪನೆಯನ್ನು ಇಡೀ ಜಗತ್ತೇ ಸಂಭ್ರಮಿಸುವ ಸಂದರ್ಭದಲ್ಲಿ ಯಕ್ಷಗಾನದ ಈ ವಿಶೇಷ ಪ್ರದರ್ಶನ ಜನಮೆಚ್ಚುಗೆಗೆ ಪಾತ್ರವಾಗಿದೆ.
ಈ ಕುರಿತು ಧರ್ಮಸ್ಥಳ ಮೇಳದ ಪ್ರಧಾನ ಭಾಗವತರಾದ ಸಿರಿಬಾಗಿಲು ರಾಮಕೃಷ್ಣ ಮಯ್ಯ ಅವರು ಸಾಮಾಜಿಕ ಜಾಲತಾಣಗಳಲ್ಲಿ ಈ ರೀತಿ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ:
"ಯಕ್ಷಗಾನದಲ್ಲಿ ಕಲಾವಿದರಾಗಿ ರಾಮಾಯಣದ ಹಲವು ಭಾಗಗಳನ್ನು ನೂರಾರು ಬಾರಿ ಪ್ರದರ್ಶಿಸಿದವರು ನಾವು. ಪ್ರಭು ಶ್ರೀ ರಾಮನ ಆದರ್ಶವನ್ನು ಸಮಾಜಕ್ಕೆ ಸಂದೇಶ ರೂಪದಲ್ಲಿ ಒದಗಿಸಿದ ಕಲಾವಿದರಿಂದ ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠೆಯ ಸುಸಂದರ್ಭದಲ್ಲಿ ಇಂತಹ ಯೋಜನೆ ಸಂಕಲ್ಪಿಸಿ ಯಶಸ್ವಿಯಾದುದು ತುಂಬಾ ಸಂತಸವಾಗಿದೆ. ಪ್ರಭು ಶ್ರೀ ರಾಮನ ಆದರ್ಶಗಳು ನಮಗೆ ದಾರಿದೀಪದಂತಿದೆ. ರಾಮ ಮಂದಿರ ಇಂದು ಬೆಳಗಿದೆ. ಯಕ್ಷಗಾನ ಮೇಳದಲ್ಲಿ ಶ್ರೀರಾಮ ಪಟ್ಟಾಭಿಷೇಕದ ಯೋಜನೆ ಸಂಕಲ್ಪಿಸಿ ಯಶಸ್ವಿಗೊಳಿಸಿದ ಸಂತೃಪ್ತಿ ಮೇಳದ ಎಲ್ಲಾ ಕಲಾವಿದರಾದ ನಮಗಿದೆ. ಶ್ರೀ ರಾಮನ ಕೃಪಾಕಟಾಕ್ಷ ಮುಂದಿನ ದಿನಗಳಲ್ಲಿ ನಮಗೆಲ್ಲ ಇರಲಿ" ಎಂದಿದ್ದಾರೆ.
ಆ ದಿನದ ಯಕ್ಷಗಾನ ಪ್ರದರ್ಶನದ ಪಾತ್ರಪರಿಚಯ ಹೀಗಿದೆ:
ಹಿಮ್ಮೇಳದಲ್ಲಿ:
ಹಾಡುಗಾರಿಕೆ - ಸಿರಿಬಾಗಿಲು ರಾಮಕೃಷ್ಣ ಮಯ್ಯ, ಕರುಣಾಕರ ಶೆಟ್ಟಿಗಾರ್ ಕಾಶಿಪಟ್ಟ, ದಿನೇಶ್ ಭಟ್ ಯಲ್ಲಾಪುರ
ಚೆಂಡೆ/ ಮೃದಂಗ ವಾದನ - ಸರಪಾಡಿ ಚಂದ್ರಶೇಖರ, ಹಿರಣ್ಮಯ ಹಿರಿಯಡ್ಕ, ಗಣೇಶ್ ಭಟ್ ಬೆಳಾಲು, ಸ್ಕಂದ ಕೊನ್ನಾರ್.
ಸಂಗೀತ - ಪ್ರಸಾದ್ ಪಿ.ಟಿ., ಚಕ್ರತಾಳ - ಜಗದೀಶ ಚಾರ್ಮಾಡಿ
ಕಾರುಣ್ಯಾಂಬುಧಿ ಶ್ರೀರಾಮ ಪ್ರಸಂಗದ ಪಾತ್ರಗಳು
- ವಿಶ್ವಾವಸು ಗಂಧರ್ವ -ಚಂದ್ರಶೇಖರ ಧರ್ಮಸ್ಥಳ
- ಪತ್ನಿಯರು- ಶರತ್ ಶೆಟ್ಟಿ ತೀರ್ಥಹಳ್ಳಿ, ಚರಣ್ ಗೌಡ ಕುಮಾರ, ಸಚಿನ್
- ಸ್ಥೂಲಶಿರ- ಚಿದಂಬರ ಬಾಬು ಕೋಣಂದೂರು
- ಶಾಪಗ್ರಸ್ತ ವಿಶ್ವಾವಸು - ಸುಬ್ರಾಯ ಹೊಳ್ಳ ಕಾಸರಗೋಡು
- ನ್ಯಗ್ರೋಧ -ಪದ್ಮನಾಭ ಶೆಟ್ಟಿ ಕನ್ನಡಿಕಟ್ಟೆ
- ಕಬಂಧ- ಗಂಗಾಧರ ಪುತ್ತೂರು
- ಧರಿಷ್ಠ- ಚರಣ್ ಗೌಡ ಕಾಣಿಯೂರು
- ಮತಂಗ-ಶಂಭಯ್ಯ ಕಂಜರ್ಪಣೆ
- ಬೇಡರು- ಮಹೇಶ ಮಣಿಯಾಣಿ, ಕುಮಾರ್, ಸಚಿನ್, ಅಶೋಕ, ನಿತಿನ್
- ದೇವೇಂದ್ರ- ಹರಿಶ್ಚಂದ್ರ ಆಚಾರಿ ಚಾರ್ಮಾಡಿ
- ನಾರದ -ಮಹೇಶ ಮಣಿಯಾಣಿ
- ಶಬರಿ -ಸಚಿನ್, ಮುರಳೀಧರ ಕನ್ನಡಿಕಟ್ಟೆ
- ರಾವಣ- ಹರೀಶ್ ಶೆಟ್ಟಿ ಮಣ್ಣಾಪು
- ರಾವಣ ಸನ್ಯಾಸಿ- ಮಹೇಶ ಮಣಿಯಾಣಿ
- ಸೀತೆ-ಶರತ್ ಶೆಟ್ಟಿ ತೀರ್ಥಹಳ್ಳಿ
- ಜಟಾಯು- ಹರಿಶ್ಚಂದ್ರ ಆಚಾರಿ ಚಾರ್ಮಾಡಿ
- ರಾಮ- ವಸಂತ ಗೌಡ ಕಾಯಾರ್ಥಡ್ಕ
- ಲಕ್ಷ್ಮಣ- ಗೌತಮ ಶೆಟ್ಟಿ ಬೆಳ್ಳಾರೆ
- ಮಾತಲಿ- ಚರಣ್ ಗೌಡ ಕಾಣಿಯೂರು
- ವಿಭೀಷಣ- ಕುಮಾರ ಸ್ವಾಮಿ
ಶ್ರೀರಾಮ ಪಟ್ಟಾಭಿಷೇಕ ಪ್ರಸಂಗದ ಕಲಾವಿದರು
- ಶ್ರೀರಾಮ- ಸುಬ್ರಾಯ ಹೊಳ್ಳ ಕಾಸರಗೋಡು
- ಸೀತೆ - ಶರತ್ ಶೆಟ್ಟಿ
- ಲಕ್ಷ್ಮಣ- ಚಂದ್ರಶೇಖರ ಧರ್ಮಸ್ಥಳ
- ಭರತ- ಪದ್ಮನಾಭ ಶೆಟ್ಟಿ ಕನ್ನಡಿ ಕಟ್ಟೆ
- ಶತ್ರುಘ್ನ- ಹರಿಶ್ಚಂದ್ರ ಆಚಾರಿ ಚಾರ್ಮಾಡಿ
- ಹನುಮಂತ- ಚರಣ್ ಗೌಡ ಕಾಣಿಯೂರು
- ವಸಿಷ್ಠ- ಚಿದಂಬರಬಾಬು ಕೋಣಂದೂರು
- ಸುಮಂತ್ರ- ಶಂಭಯ್ಯ ಕಂಜರ್ಪಣೆ
- ಪುರ ಜನರಾಗಿ ಉಳಿದೆಲ್ಲ ಕಲಾವಿದರು: ಮಹೇಶ ಮಣಿಯಾಣಿ, ವಸಂತ ಗೌಡ ಕಾಯರ್ತಡ್ಕ, ಹರೀಶ್ ಶೆಟ್ಟಿ ಮಣ್ಣಾಪು, ಗಂಗಾಧರ ಪುತ್ತೂರು, ಮುರಳೀಧರ ಕನ್ನಡಿಕಟ್ಟೆ, ಶರತ್ ಶೆಟ್ಟಿ, ಗೌತಮ ಶೆಟ್ಟಿ ಬೆಳ್ಳಾರೆ, ಚರಣ್ ಗೌಡ ಕಾಣಿಯೂರು, ಅಶೋಕ ಚಾರ್ಮಾಡಿ, ಸಚಿನ್ ಬೆಳ್ಳೂರು.
- ಆರತಿಗೆ- ಸಚಿನ್ ಬೆಳ್ಳೂರು
ವಿಭಿನ್ನ ಯಕ್ಷಗಾನ ಮೇಳಗಳಿಂದ ಶ್ರೀರಾಮನ ಕಥಾನಕದ ಪ್ರಸಂಗಗಳು
ಅಯೋಧ್ಯೆಯಲ್ಲಿ ಶ್ರೀರಾಮನ ಪ್ರತಿಷ್ಠಾಪನೆ ನಡೆದ ಜ.22ರ ಸೋಮವಾರ 2024ರಂದು ವಿವಿಧ ಮೇಳಗಳು ಪ್ರದರ್ಶಿಸಿದ ಶ್ರೀರಾಮನ ಕಥಾನಕ ಆಧಾರಿತ ಯಕ್ಷಗಾನ ಪ್ರಸಂಗಗಳು ಹೀಗಿವೆ:
22.01.2024 ಸೋಮವಾರ (ಮೇಳಗಳು ಮತ್ತು ಪ್ರಸಂಗ)
- ಧರ್ಮಸ್ಥಳ - ರಾಮ ರಾಮ ಶ್ರೀರಾಮ
- ಹನುಮಗಿರಿ - ನಮೋ ರಘುವಂಶ ದೀಪ
- ಪಾವಂಜೆ -ಅಯೋಧ್ಯಾ ದೀಪ
- ಸಾಲಿಗ್ರಾಮ - ಶ್ರೀರಾಮ ಪಟ್ಟಾಭಿಷೇಕ
- ಪೆರ್ಡೂರು - ಶ್ರೀರಾಮ ಪಟ್ಟಾಭಿಷೇಕ, ಕುಶಲವ
- ಮೆಕ್ಕೆಕಟ್ಟು- ರಾಮಾಶ್ವಮೇಧ
- ಸೂಡಾ - ಶ್ರೀರಾಮ ಚರಿತಂ
- ಮಡಾಮಕ್ಕಿ - ಶ್ರೀ ರಾಮ ದರ್ಶನ
- ಗೆಜ್ಜೆಗಿರಿ- ಅಯೋಧ್ಯಾಧಿಪ ಪಟ್ಟಾಭಿರಾಮ
- ಹಿರಿಯಡಕ - ಶ್ರೀರಾಮ ಚರಿತಂ
- ಹಟ್ಟಿಯಂಗಡಿ - ರಾಮಾಶ್ವಮೇಧ
- ಸುಂಕದಕಟ್ಟೆ - ಅಯೋಧ್ಯೆ ಶ್ರೀರಾಮ
- ಬೆಂಕಿನಾಥೇಶ್ವರ - ಶ್ರೀ ರಾಮ ದರ್ಶನ
- ಕಟೀಲು 1ನೇ ಮೇಳ- ಶ್ರೀ ರಾಮ ಲೀಲಾಮೃತಂ
- ಕಟೀಲು 2ನೇ ಮೇಳ- ಜೈ ಶ್ರೀರಾಮ್
- ಶ್ರೀ ಕ್ಷೇತ್ರ ಅಲಸೆ ಮೇಳ - ಶ್ರೀರಾಮ ದರ್ಶನ
- ಗುಂಡಬಾಳ ಮೇಳ - ಶ್ರೀ ರಾಮ ನಿಜಪಟ್ಟಾಭಿಷೇಕ