ಅಗ್ರಗಣ್ಯ ಯಕ್ಷಗಾನ ಕಲಾವಿದ, ಪರಂಪರೆಯ ಕೊಂಡಿ ಪೆರುವಾಯಿ ನಾರಾಯಣ ಶೆಟ್ಟಿ

ರಕ್ತಬೀಜನ ಪಾತ್ರದಲ್ಲಿ ಪೆರುವಾಯಿ ನಾರಾಯಣ ಶೆಟ್ಟಿ, ಬಲಚಿತ್ರ-ಕುಂಬಳೆ ಸುಂದರ ರಾಯರಿಂದ ಪುರಸ್ಕಾರ

ಅರುವಾಯಿ-ಪೆರುವಾಯಿ ಖ್ಯಾತಿಯ ಜೋಡಿಗಳಲ್ಲಿ ಒಬ್ಬರಾದ ಪೆರುವಾಯಿ ನಾರಾಯಣ ಶೆಟ್ಟರ ಅರುಣಾಸುರ, ಹಿರಣ್ಯಕಶಿಪು, ರಕ್ತಬೀಜ, ಕಂಸ ಪಾತ್ರಗಳು ಟಾಪ್ ಕ್ಲಾಸ್

ಮಂಗಳೂರು: ತೆಂಕುತಿಟ್ಟು ಯಕ್ಷಗಾನ ರಂಗದ ಹಿರಿಯ ವೇಷಧಾರಿ, ಪಾರಂಪರಿಕ ನಾಟ್ಯ, ನಡೆಗಳ ಕೊಂಡಿ ಪೆರುವಾಯಿ ನಾರಾಯಣ ಶೆಟ್ಟಿ ಅವರು ಅಲ್ಪಕಾಲದ ಅನಾರೋಗ್ಯದ ಬಳಿಕ ಮಂಗಳವಾರ ತಡರಾತ್ರಿ ನಿಧನರಾದರು. ಅವರಿಗೆ 81 ವರ್ಷ ವಯಸ್ಸಾಗಿತ್ತು.

ಕಂಚಿನ  ಕಂಠ ಹಾಗೂ ಶ್ರುತಿಬದ್ಧ ಮತ್ತು ಅರ್ಥಪೂರ್ಣವಾದ, ಗತ್ತಿನ ಮಾತುಗಾರಿಕೆಗೆ ಹೆಸರಾಗಿದ್ದ ಪೆರುವಾಯಿ ನಾರಾಯಣ ಶೆಟ್ಟರು ಕಳೆದ ವರ್ಷ ಉಡುಪಿಯಲ್ಲಿ ಕರ್ನಾಟಕ ಸರಕಾರದ ವತಿಯಿಂದ ನಡೆದ ಮೊದಲ ಯಕ್ಷಗಾನ ಸಮ್ಮೇಳನದಲ್ಲಿ ಪ್ರಶಸ್ತಿ ಸ್ವೀಕರಿಸಿದ್ದರು. ಯಕ್ಷಗಾನ ರಂಗಕ್ಕೆ ಅಮೂಲ್ಯ ಆಸ್ತಿಯಾಗಿದ್ದರು ಅವರು.

ಕಟೀಲು ಮೇಳದಲ್ಲಿ ದೀರ್ಘ ಕಾಲ ಸೇವೆ ಸಲ್ಲಿಸಿದ್ದ ಅವರು ನಿವೃತ್ತ ಜೀವನ ಸಾಗಿಸುತ್ತಿದ್ದರು. ಇದಲ್ಲದೆ ತಾಳಮದ್ದಳೆ ಅರ್ಥಧಾರಿಯಾಗಿಯೂ ಅವರು ಪ್ರಸಿದ್ಧಿ ಪಡೆದಿದ್ದರು.

ಅರುವಾಯಿ-ಪೆರುವಾಯಿ ಖ್ಯಾತಿಯ ಜೋಡಿಗಳಲ್ಲಿ ಒಬ್ಬರಾದ ಪೆರುವಾಯಿ ನಾರಾಯಣ ಶೆಟ್ಟರು ವಿಶೇಷವಾಗಿ ಎದುರುಪಾತ್ರಗಳಿಗೆ ಜೀವ ತುಂಬಿದವರು. ಅರುವಾಯಿ-ಪೆರುವಾಯಿ ಜೋಡಿಯಲ್ಲಿ ಮತ್ತೊಬ್ಬರು ಅರುವ ನಾರಾಯಣ ಶೆಟ್ಟಿ ಅವರು ಈಗಾಗಲೇ ನಮ್ಮನ್ನು ಅಗಲಿದ್ದಾರೆ. ಅರುಣಾಸುರ, ರಕ್ತಬೀಜ, ಹಿರಣ್ಯಕಶಿಪು, ರಕ್ತಬೀಜ, ಕಂಸ, ಭೀಷ್ಮ, ಕರ್ಣ  ಪಾತ್ರಗಳನ್ನು ಅವರು ತಮ್ಮದೇ ಶೈಲಿಯಲ್ಲಿ ರಂಗದಲ್ಲಿ ಚಿತ್ರಿಸುವ ಮೂಲಕ, ಪೆರುವಾಯಿ ಶೈಲಿಯನ್ನೇ ಹುಟ್ಟುಹಾಕಿದ್ದರು. ನಾಟಕೀಯ ವೇಷಗಳಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದರು. ಅರ್ಜುನ, ಅತಿಕಾಯ, ಇಂದ್ರಜಿತು, ಕೋಟಿ ಚೆನ್ನಯದ ಕೋಟಿ - ಮುಂತಾದ ಪಾತ್ರಗಳಲ್ಲೂ ಅವರದು ಎತ್ತಿದ ಕೈ.

ಕನ್ನಡ ಮತ್ತು ತುಳು ಭಾಷೆಗಳಲ್ಲಿ ಸಮಾನ ಪಾಂಡಿತ್ಯ ಹೊಂದಿದ್ದ ಪೆರುವಾಯಿ ನಾರಾಯಣ ಶೆಟ್ಟರನ್ನು ರಂಗದಲ್ಲಿ ಬಲಿಪ ನಾರಾಯಣ ಭಾಗವತರು, ಕುರಿಯ ವಿಠಲ ಶಾಸ್ತ್ರಿಗಳೇ ಮುಂತಾದ ಹಿರಿಯರು ಮೆರೆಸಿದರು. ಖಂಡಿತವಾದಿಯಾಗಿದ್ದ ಅವರು ರಂಗದಲ್ಲಿ ನಡೆ ತಪ್ಪಿದರೆ ಅಲ್ಲೇ ದುರುಗುಟ್ಟಿ ನೋಡುುದು, ಅಸಹನೆ ವ್ಯಕ್ತಪಡಿಸುವ ಛಾತಿ ಹೊಂದಿದ್ದರು. ಇದರಿಂದಾಗಿಯೇ ಯಕ್ಷಗಾನದ ಪರಂಪರೆಯ ರಂಗ ನಡೆಗಳನ್ನು ಅವರಿರುವಷ್ಟು ಕಾಲ ಉಳಿಸಿಕೊಂಡು ಬಂದಿದ್ದರು ಎಂಬುದು ಅವರನ್ನು ಬಲ್ಲವರ ಖಚಿತ ನುಡಿ.

ಇಡೀ ರಂಗಸ್ಥಳವನ್ನು ತಮ್ಮ ಗತ್ತುಗಾರಿಕೆಯ ಬೀಸು ಹೆಜ್ಜೆಗಳಿಂದ ಆವರಿಸುವ ಕ್ರಮವಂತೂ ಪ್ರೇಕ್ಷಕರ ಮನದಲ್ಲಿ ಈಗಲೂ ಅಚ್ಚಳಿಯದೆ ಉಳಿದಿದೆ.

1942ರಲ್ಲಿ ಬಂಟ್ವಾಳದ ಪೆರುವಾಯಿ ಎಂಬಲ್ಲಿ ಮದನಪ್ಪ ಶೆಟ್ಟಿ ಮತ್ತು ಅಬ್ಬಕ್ಕ ದಂಪತಿಯ ಪುತ್ರನಾಗಿ ಜನಿಸಿದ ಪೆರುವಾಯಿ ನಾರಾಯಣ ಶೆಟ್ಟರು 6ನೇ ತರಗತಿಗೆ ವಿದ್ಯಾಭ್ಯಾಸ ನಿಲ್ಲಿಸಬೇಕಾಗಿತ್ತು. ಆದರೆ, ಅವರ ಯಕ್ಷಗಾನ ಪಾತ್ರಗಳ ಅರ್ಥವೈಭವವನ್ನು ವಿಶ್ಲೇಷಿಸಿದರೆ, ಅವರ ಅಪಾರ ಜ್ಞಾನಕ್ಕೂ, ವಿದ್ಯಾಭ್ಯಾಸಕ್ಕೂ ಯಾವುದೇ ಸಂಬಂಧವಿಲ್ಲ ಎಂಬಂತಿತ್ತು. ಸ್ವ-ಓದಿನಿಂದಲೇ ಎಲ್ಲ ಬಗೆಯ ಜ್ಞಾನ ಸಂಪಾದಿಸಿದವರು ಅವರು.

ಕುಂಡಾವು ಮೇಳದಲ್ಲಿ ರಂಗಪ್ರವೇಶ ಮಾಡಿದ ಅವರು ಮುಂದೆ ಧರ್ಮಸ್ಥಳ, ಕರ್ನಾಟಕ, ಪೊಳಲಿ, ಕದ್ರಿ, ಕುಂಬಳೆ, ಕುಂಟಾರು, ಕಟೀಲು ಮುಂತಾದ ಯಕ್ಷಗಾನ ಮೇಳಗಳಲ್ಲಿ ವ್ಯವಸಾಯಿಯಾಗಿ ತಿರುಗಾಟ ಮಾಡಿದ್ದ ಅವರು ಆರು ದಶಕಕ್ಕೂ ಹೆಚ್ಚು ಕಾಲ ಯಕ್ಷಗಾನ ರಂಗವನ್ನು ಆಳಿದವರು.

ಕೋವಿಡ್ ಕಾಲದಲ್ಲಿ ಯಕ್ಷಗಾನ ಅಕಾಡೆಮಿಯ ಮಾತಿನ ಮಂಟಪದಲ್ಲಿ ಅವರು ತಮ್ಮ ಯಕ್ಷಗಾನ ಪಯಣದ ಬಗ್ಗೆ ಮನಬಿಚ್ಚಿ ಮಾತನಾಡಿದ್ದರು. ಅದರ ಲಿಂಕ್ ಇಲ್ಲಿದೆ.

ಬಾಯಾರು ಐತಪ್ಪ ಶೆಟ್ಟಿ, ಕುಡಾಣ ಗೋಪಾಲಕೃಷ್ಣ ಭಟ್ ಮತ್ತು ಅಳಿಕೆ ರಾಮಯ್ಯ ರೈ - ಈ ಮೂವರಿಂದ ಯಕ್ಷಗಾನವನ್ನು ಅಭ್ಯಸಿಸಿದ ಪೆರುವಾಯಿ ನಾರಾಯಣ ಶೆಟ್ಟರನ್ನು, ಹಿರಿಯ ಯಕ್ಷಗಾನ ಸಂಶೋಧಕಿ ಮಾರ್ತಾ ಆಶ್ಚನ್ ಏರ್ಪಡಿಸಿದ್ದ ಕುರುಕ್ಷೇತ್ರ ಯಕ್ಷಗಾನ ಕಥಾನಕದಲ್ಲಿ, ಹೊಸಹಿತ್ಲು ಮಹಾಲಿಂಗ ಭಟ್ಟರ ಅಭಿಮನ್ಯು ಪಾತ್ರದ ಸಾರಥಿಯಾಗಿ ಗಮನ ಸೆಳೆದಿದ್ದರು. ಕುರಿಯ ವಿಠಲ ಶಾಸ್ತ್ರಿಗಳು ಪ್ರಭಾವಿತರಾಗಿ ಅವರನ್ನು ಧರ್ಮಸ್ಥಳ ಮೇಳಕ್ಕೆ ಸೇರಿಸಿಕೊಂಡರು. ಕಟೀಲು ಮೇಳದಲ್ಲಿ 23 ವರ್ಷ ಹಾಗೂ ಅಂದಿನ ತೆಂಕು-ಬಡಗು ಎರಡೂ ಯಕ್ಷಗಾನವನ್ನು ಪ್ರದರ್ಶಿಸುತ್ತಿದ್ದ ಪೊಳಲಿ ರಾಜರಾಜೇಶ್ವರಿ ಮೇಳದಲ್ಲಿ 13 ವರ್ಷ ಸೇವೆ ಸಲ್ಲಿಸಿದ್ದರು.

ಗಾಂಭೀರ್ಯದ ಪಾತ್ರ ಚಿತ್ರಣ, ಭಾವ ಪ್ರಧಾನ ಪಾತ್ರ ಪೋಷಣೆ, ಪ್ರತ್ಯುತ್ಪನ್ನಮತಿತ್ವ, ಆಕರ್ಷಕ ಅಂಗ ಸೌಷ್ಟವದ ವೇಷ ಮತ್ತು ಶಿಸ್ತುಬದ್ಧ ನಾಟ್ಯ, ಅಭಿನಯ, ಗತ್ತಿನ ಹೆಜ್ಜೆಯ ಜೊತೆ ಚೊಕ್ಕವಾದ ಮಾತುಗಾರಿಕೆ - ಇವು ಪೆರುವಾಯಿ ನಾರಾಯಣ ಶೆಟ್ಟರ ಬ್ರ್ಯಾಂಡ್ ಎಂದರೂ ತಪ್ಪಾಗಲಾರದು. ತಾಳಮದ್ದಳೆಯಲ್ಲೂ ಅವರದು ಆಕರ್ಷಕ ಮಾತುಗಾರಿಕೆ.

ಪೆರುವಾಯಿ ಅವರಿಗೆ ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ಬೆಂಗಳೂರು ಬಂಟರ ಸಂಘ ಪುರಸ್ಕಾರ, ಯಕ್ಷಗಾನ ಸಾಹಿತ್ಯ ಸಮ್ಮೇಳನ ಪುರಸ್ಕಾರ, ಉಡುಪಿ ತುಳುಕೂಟದಿಂದ ರಾಮದಾಸ ಸಾಮಗ ಸಂಸ್ಮರಣಾ ಪ್ರಶಸ್ತಿ, ದ.ಕ.ಜಿಲ್ಲಾ ರಾಜ್ಯೋತ್ಸವ ಪುರಸ್ಕಾರ, ಉಡುಪಿ ಕಲಾರಂಗದ ಗೌರವ ಮುಂತಾದ ಪ್ರಶಸ್ತಿ-ಗೌರವಗಳು ಸಂದಿವೆ. ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ವತಿಯಿಂದ 2016ನೇ ಸಾಲಿನ ಚೊಚ್ಚಲ ಪಟ್ಲ ಪ್ರಶಸ್ತಿ ಪಡೆದ ಹೆಗ್ಗಳಿಕೆಯೂ ಇವರದು.

ಅಗಲಿದ ಅವರ ದಿವ್ಯಾತ್ಮಕ್ಕೆ ಪರಮಾತ್ಮ ಚಿರಶಾಂತಿ ಕರುಣಿಸಲಿ ಎಂದು ಯಕ್ಷಗಾನ ಡಾಟ್ ಇನ್ ಶ್ರದ್ಧಾಂಜಲಿ ಸಲ್ಲಿಸುತ್ತಿದೆ.

1 ಕಾಮೆಂಟ್‌ಗಳು

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು