ಅಯೋಧ್ಯೆಗೆ ಬಂದ ಬಾಲ ರಾಮ | ಯಕ್ಷಗಾನದ ಪಂಚವಟಿ ಪ್ರಸಂಗದಲ್ಲಿ ಕಂಡ ಬೆಳಕು

ಅಯೋಧ್ಯೆಯಲ್ಲಿ ನೆಲಸಿದ ನಗುಮೊಗದ ಮಗು ಬಾಲರಾಮ
ಕೊನೆಗೂ ತನ್ನದೇ ಜನ್ಮಭೂಮಿಯಾದ ಅಯೋಧ್ಯೆಯಲ್ಲಿ ನಿರ್ಮಾಣಗೊಂಡಿರುವ ಭವ್ಯ, ದಿವ್ಯ ಮಂದಿರದಲ್ಲಿ ಬಾಲ ರಾಮನು ವಿರಾಜಮಾನನಾಗಿದ್ದಾನೆ. ಇಲ್ಲಿ ರಾಮಾಯಣದ ಕಥಾನಕ ಹೆಚ್ಚು ಪ್ರಸ್ತುತ. ಯಕ್ಷಗಾನವು ಕೂಡ ರಾಮಾಯಣದ ಪ್ರಚಾರ, ಪ್ರಸಾರದಲ್ಲಿ ಮಹತ್ವ ವಹಿಸಿದ್ದು, ಕರಾವಳಿ-ಮಲೆನಾಡಿನ ಮಕ್ಕಳಿಗೆ ಕೂಡ ರಾಮಾಯಣದ ಕಥೆ ತಿಳಿದಿದ್ದರೆ ಅದು ಯಕ್ಷಗಾನದಿಂದ. ಈ ಬಗ್ಗೆ ಮೆಲುಕು ಹಾಕಿದ್ದಾರೆ ಹವ್ಯಾಸಿ ಕಲಾವಿದ, ಪತ್ರಕರ್ತ ಅವಿನಾಶ್ ಬೈಪಾಡಿತ್ತಾಯ.

ಬಾಲ ರಾಮನು ನನಗೆ ಅಷ್ಟಾಗಿ ಪರಿಚಯವಿಲ್ಲ. ಆದರೆ ಅಯೋಧ್ಯೆಯಲ್ಲಿ ಹುಟ್ಟಿದ ರಾಮನು ವನವಾಸಕ್ಕಾಗಿ ಕಾಡಿಗೆ ಹೋದ ಬಳಿಕ ಅವನ ಪರಿಚಯವಾಗಿತ್ತು ನನಗೆ. ಬಹುಶಃ ನಾನು ಅಮ್ಮನ ಗರ್ಭದಲ್ಲಿರುವಾಗಲೇ ಅಪ್ಪನಂತೂ ರಾಮಾಯಣ ಆಧಾರಿತ ಯಕ್ಷಗಾನಗಳಲ್ಲಿ ಭಾಗವಹಿಸುತ್ತಿದ್ದರೆ, ಅಮ್ಮನೂ ರಾಮಾಯಣ ಕಥೆಗಳನ್ನು ತಿಳಿದುಕೊಂಡು, ಪಂಚವಟೀ ಪ್ರಸಂಗವನ್ನು ಅಭ್ಯಸಿಸುತ್ತಿದ್ದಳು. ಆರೆಸ್ಸೆಸ್, ವಿಶ್ವ ಹಿಂದೂ ಪರಿಷತ್ ಮುಂತಾದವುಗಳಿಗಿಂತಲೂ ಮೊದಲು ನನಗೆ ಮೊದಲು ತಿಳಿದದ್ದು ಶ್ರೀ ರಾಮನೇ. . ಹೇಗಂತೀರಾ?

ಈಗ ಅಯೋಧ್ಯೆಯಲ್ಲಿ ವಿರಾಜಮಾನನಾಗಿರುವ ಬಾಲ ರಾಮನಂತೆಯೇ, ನನಗೂ ಒಂದು ಬಾಲ್ಯವಿತ್ತು. ಆ ಬಾಲ್ಯದಲ್ಲಿ ನನ್ನನ್ನು ಅಪ್ಪ ಅಮ್ಮ ಕರೆದೊಯ್ದದ್ದು ಪಂಚವಟಿಗೆ. ತಾಟಕಿ-ಸುಬಾಹು ಸಂಹಾರ, ಅಹಲ್ಯೋದ್ಧರಣ, ದಶರಥ-ಕೈಕೇಯಿ ಇರುವ ಪಟ್ಟಾಭಿಷೇಕ ಪ್ರಹಸನ, ಭರತನ ಭ್ರಾತೃಪ್ರೇಮ, ಪಂಚವಟಿಯ ಕಾಡಿನೊಳಗೆ ಶೂರ್ಪನಖೆ ಬಂದಿದ್ದು, ಖರ ದೂಷಣ ತ್ರಿಶಿರಾದಿಗಳ ಸಂಹಾರ, ಜಟಾಯು ಮೋಕ್ಷ, ಶಬರಿಯ ಹಣ್ಣು ಕಚ್ಚಿ ಕೊಟ್ಟ ಪ್ರೀತಿ, ವಾಲಿ ಸುಗ್ರೀವರ ಕಥಾನಕ, ಹನುಮಂತನ ಭಕ್ತಿ-ಸ್ನೇಹ, ಲಂಕಾ ದಹನ, ಅಂಗದ ಸಂಧಾನ, ಅತಿಕಾಯ ಮೋಕ್ಷ, ಮಕರಾಕ್ಷ ಸಂಹಾರ, ಇಂದ್ರಜಿತು ಕಾಳಗ, ಕುಂಭಕರ್ಣ ವಧೆ, ಕೊನೆಗೆ ರಾವಣ ಸಂಹಾರ...

ಆ ಪಂಚವಟೀ ಪ್ರಸಂಗವಿದೆಯಲ್ಲ, ಅದರಲ್ಲೇ ನನ್ನ ಕನ್ನಡವೂ ಬೆಳಗಿದ್ದು, ತಾಳವೂ ಗಟ್ಟಿಯಾಗಿದ್ದು ಮತ್ತು ಹಾಡುವ ವೈಖರಿಯಿದೆಯಲ್ಲ, ಯಕ್ಷಗಾನದ ಮಟ್ಟು (ರಾಗ ಅಲ್ಲ) - ಅದು ಯಕ್ಷಗಾನವನ್ನು ಆಪ್ತವಾಗಿಸಿದ್ದು. ನೋಡಿ ನಿರ್ಮಲ ಜಲ ಸಮೀಪದಿ... ಎಂದು ಸೌರಾಷ್ಟ್ರ ತ್ರಿವುಡೆಯಲ್ಲಿ ಹೇಳುತ್ತಲೇ ಆ ತಾಳಕ್ಕೆ ಮದ್ದಳೆ ನುಡಿಸಲು ಅಪ್ಪ ಹೇಳಿಕೊಟ್ಟಿದ್ದು ಈಗಲೂ ಅಚ್ಚೊತ್ತಿ ನಿಂತಿದೆ. ವಿಶೇಷವಾಗಿ ಯಕ್ಷಗಾನದ ಎಲ್ಲ ರೀತಿಯ ಮಟ್ಟುಗಳಿಗೆ, ತಾಳಗಳಿಗೆ ಅಭ್ಯಾಸಕ್ಕೆ ಸೂಕ್ತವಾದ ಪ್ರಸಂಗವೆಂದರೆ ಪಾರ್ತಿಸುಬ್ಬನ ಈ ಪಂಚವಟೀ ಪ್ರಸಂಗ.
ನೋಡಿ ನಿರ್ಮಲ ಜಲಸಮೀಪದಿ ಮಾಡಿಕೊಂಡರು ಪರ್ಣಶಾಲೆಯ ರೂಢಿಪಾಲರು ಪಂಚವಟಿಯ ಕಾಡಿನೊಳಗೆ.
ಆ ಸಂದರ್ಭದಲ್ಲಿ
ವನದ ಫಲಗಳ ಕೊಯ್ದು ಲಕ್ಷ್ಮಣ ದಿನದಿನದಿ ತಾ ತಂದುಕೊಡುವನು ವನದೊಳತಿಸುಖದಿಂದ ಕಳೆದರು ದಿನವ ಕೆಲವು.

ಇಂತಿರುವಾಗ, ನಿಧಾನ ಭೈರವಿ ಝಂಪೆಯಲ್ಲಿ ಒಂದು ದಿನ ಅಲ್ಲಿರುವ ಋಷಿಗಳು ಬಂದು ರಾಮನ ಚರಣಕೆರಗುತ ರಾಕ್ಷಸರ ಉಪಟಳದ ಕುರಿತು ದೂರುತ್ತಾರೆ.

ಈಗಲೂ ಕಿವಿಗೆ ಕೇಳಿಸುವ ಅಷ್ಟತಾಳದ ಪದ್ಯ, ಚಿತ್ತವಿಸಯ್ಯ ರಾಮ ನಿನ್ನೆ ಘೋರ ದನುಜನೊಬ್ಬ ಬಂದು ವ್ಯರ್ಥ ವಂಚಿಸುತ್ತ ನಮ್ಮನು ಯಜ್ಞಶಾಲೆಯ ಕಿತ್ತು ಬಿಸಾಡಿ ಪೋದನು ಎಂದು ಉಡಾಫೆಗೆ ತಿರುಗಿ, ಮಕ್ಕಳಾದ ನಮಗೆ ತೀವ್ರ ಕುತೂಹಲ ಮೂಡಿಸಿದ್ದ - ಮೂರು ಮಂಡೆಯವನೊಬ್ಬ ಘೋರದಾನವ ಬಂದ ಎನ್ನುವ ಪದ ಆಗಲೂ ಈಗಲೂ ಅಚ್ಚರಿಗೆ ಕಾರಣವಾಗಿತ್ತು.

ಎಂದು ಹುಯ್ಲಿಟ್ಟ ಋಷಿಗಳ ಮಾತ ಕೇಳ್ದು ರಘುನಂದನನು ನಸುನಗುತ ಅಭಯ ಕೊಡುವುದು, ಆಗ ಸೀತೆಯು ಅಂಜುವುದು. ಘನ ಘೋರಡವಿ, ಅಲ್ಲಿ ರಕ್ಕಸರು ಹಿಂದೆ ಅನೇಕ 
ವನಿತೆಯರನು ಒಯ್ದಿಹರಂತೆ ಈ ವಿಪಿನದೊಳಿರುವದು ಕಷ್ಟ ರಾಘವಾ, ಮತ್ತೊಬ್ಬ ಖಳನಿರುವನಂತೆ ಮಸ್ತಕಂಗಳು ಹತ್ತುಂಟಂತೆ, ಆ ಮೇಲವಗೆ, ಹಸ್ತಂಗಳಿಪ್ಪತ್ತುಂಟಂತೆ ಅಂತೆಲ್ಲ ಹುಯ್ದಾಡುವಳು ಸೀತೆ.

ಮಕ್ಕಳಾಗಿದ್ದ ನಮಗೆ ಅದೇ ಹೊತ್ತಿಗೆ ಅಬ್ಬರದ ಚೆಂಡೆಯ ಪೆಟ್ಟಿನ ಏರು ಪದದ ಸಂದರ್ಭವಂತೂ ಮರೆಯಲಾಗದು.

ಅಗ್ಗಳದ ದನುಜರಟ್ಟುಳಿಯನಾಲಿಸಿ ರಾಮ ಶೀಘ್ರದಿಂ ಜನಕನಂದನೆಗೆ ಧೈರ್ಯವ ಪೇಳಿದ ಬಳಿಕ, ಭೋರ್ಗರೆವ ರಕ್ಕಸರ ದಂಡು ಬಾಯ್ಬಿಟ್ಟೊದರೆ
ನಿರ್ಘೋಷದಬ್ಬರದ ಗಮಕದಾರ್ಭಟೆಯ ಸಿಡಿ
ಲೊಗ್ಗರದ ಬೊಬ್ಬೆಯಿಂ ಶೂರ್ಪಣಖೆ ಬಂದಳಾ
ಕಾನನಕೆ ಕುಲಗೇಡಿಯು
ಅಂತ ಧಿತ್ತ ಕೊಟ್ಟ ಬಳಿಕ ಶೂರ್ಪಣಖೆಯ ಪ್ರವೇಶವಿದೆಯಲ್ಲ! ಎದೆ ಝಲ್ಲೆನಿಸುವಂತಿತ್ತು. ಬಳಿಕ, ಘಂಟಾರವ ಮಟ್ಟಿನ ಅಷ್ಟತಾಳದ ಪದ್ಯಕ್ಕೆ, ಯಾರೋ ಮಾನವ ಮಾಂಸದ ವಾಸನೆ ಗ್ರಹಿಸಿದ ಶೂರ್ಪಣಖೆ ಹೀಗೆ ಒದರುತ್ತಾಳೆ - ಆರೆಲೋ ಮನುಜ ಈ ವನದೊಳಿಪ್ಪನಾರೆಲೋ ಮನುಜ, ಬಾರಿ ಬಾರಿಗೆ ಮೈಯ ವಾಸನೆ ಬೀರುತಿದೆ ಪೊಸ ಗಮರು ನಿಶಿಚರ ವೀರರೆಲ್ಲರು ಬನ್ನಿ ನಮ್ಮಯ ಪಾರಣೆಗೆ ತುತ್ತಾಗಿ ಬಂದವನಾರೆಲೋ ಮನುಜ ಇದರ ಬಳಿಕ, ಭೈರವಿ ಅಷ್ಟ ತಾಳದಲ್ಲಿ, ಖಂಡ ಖಂಡವ ಬೇರೆ ಬೇರೆ, ತುಂಡು ತುಂಡಾಗೆಸಗಿ ನುಂಗುವೆ ಅಂತ ಹೆದರಿಸುವುದು ನಮಗೆ ತುಂಬ ಚಂದ!

ಅದರ ನಡುವೆ, ಆರ್ಭಟೆ ಕೇಳಿ ಶರ ಚಾಪ ಹಿಡಿದು ಹೊರಡುವ ಪತಿ ಶ್ರೀರಾಮನಿಗೆ, ತಿತ್ತಿತ್ತೈ ತಾಳದಲ್ಲಿ, ರಾಘವ ನೀ ಎನ್ನ ಬಿಟ್ಟು ಪೋಗದಿರಯ್ಯ, ಈಗ ಬಂದಳಾ ರಾಕ್ಷಸಿ ಕೂಗುತಾಳೆ ಆರ್ಭಟಿಸಿ ಅಂತ ಭಯಪಡುತ್ತಾಳೆ. ಈ ದಟ್ಟಾರಣ್ಯದಲ್ಲಿ ಪತ್ನಿ ಸೀತೆಗೆ, ಏಕ ತಾಳದಲ್ಲಿ ಅಂಜಬೇಡೆಲೆ ಸೀತೆ, ಮಿಥಿಲೇಂದ್ರ ಕುಲಜಾತೆ ಎಂದು ಧೈರ್ಯ ಹೇಳುತ್ತಾನೆ ರಾಮ.

ಆ ನಂತರದಲ್ಲಿ ರಾಮ ಬಂದುದನ್ನರಿತ ರಾಕ್ಷಸಿಯು ಹದಿನಾರು ವತ್ಸರದ ಹೆಣ್ಣಾಗಿ ಮಾಯಕದ ರೂಪಿನಲಿ ಕಾಯವನು ಕಪಟದಾಕೃತಿಗೆ ಬದಲಿಸಿ, ರಾಮನನ್ನು ಮೋಹಿಸಿ, ಆದಿ ತಾಳದಲ್ಲಿ ಅತಿಕುಲವತಿ ನಾನು, ಪೃಥಿವಿ ಪಾಲಕ ನೀನು ಎನ್ನುತ್ತಾ ನೀ ಗುಣನಿಧಿಯೆಂದು ನಿನ್ನ ಸೇರಿದೆ ಬಂದು ಅಂತನ್ನುವುದು. ರಾಮನು, ಏಕತಾಳ/ತಿತ್ತಿತ್ತೈಯಲ್ಲಿ, ಮದನನ ಪಟ್ಟದ ರಾಣಿ, ನೀನು ಮೊದಲೇ ಬಂದುದಿಲ್ಲವಿತ್ತು, ನಾನು ಏಕಪತ್ನೀವ್ರತಸ್ಥ, ನಮ್ಮಿಂದ ನೂರ್ಮಡಿಗೆ ಚೆಲುವ ಲಕ್ಷ್ಮಣನ ಬಳಿ ಸಾರೆಂದೆನಲು, ರೂಪಕ ತಾಳದಲ್ಲಿ ಶೂರ್ಪಣಖೆಯು, ಚಂದದಿಂದ ಬಂದಳಬ್ಜಲೋಚನೆ ಪದಕ್ಕೆ ಲಾಸ್ಯದ ನಾಟ್ಯವಾಡುತ್ತಾ ಬರುವುದು, ಕನ್ನಡಿಯನು ತೆಗೆದು ನೋಡುತ, ಮೊಗವು ಚೆನ್ನಾಗಿಹುದೆಂದು ಅತಿ ನಗಾಡುತ ಮುಂದುವರಿಯುತ್ತಾಳೆ.


ತದನಂತರದಲ್ಲಿ, ಅಷ್ಟತಾಳದಲ್ಲಿ ಕಾಮಸನ್ನಿಭ ಮಾತ ಕೇಳು, ತಾಳಲಾರೆನು, ಸುಪ್ರೇಮದಿಂದಲೆ ಕೂಡು ಸರಸ ಮಾತಾಡು ಅಂತ ಉಡಾಫೆ ತಾಳಕ್ಕೆ ತಿರುಗುವಳು. ಆಗ ಲಕ್ಷ್ಮಣನು ಅಷ್ಟ ತಾಳದಲ್ಲಿ, ಮಂದಗಮನೆ ಇಂಥ ಸುದ್ದಿಯೊಂದನೆನ್ನೊಳಾಡದಿರು, ಮುಂದೆ ಬ್ರಹ್ಮಚಾರಿ ನಾ, ಬಂದ ದಾರಿಗೆ ಸುಂಕವಿಲ್ಲ ಎಂದು ಕಳುಹಿಸುತ್ತಾಳೆ. ಆಗ ಖತಿಗೊಂಡ ಶೂರ್ಪಣಖೆ, ಅಷ್ಟ ತಾಳದಲ್ಲಿ, ಏಕಪತ್ನಿಯ ವ್ರತ ನಿನಗೆ, ಬ್ರಹ್ಮಚಾರಿತ್ವ ಸಾಕಾರಿಸುತಿದೆ ತಮ್ಮನಿಗೆ ಎಂದು ದೂಷಿಸುವಳು. ಅಷ್ಟರಲ್ಲಿ, ಚದುರೆ ಬಾ ಬಾರೆಂದು ಕರೆವ ರಾಮನು, ಬೆನ್ನಿನಲ್ಲಿ ಕುರುಹು ಬರೆದು, ತಮ್ಮ ಲಕ್ಷ್ಮಣನಿಗೆ ತೋರೆಂದ ಮಾತನು ಕೇಳಿ ನಲವಿನಿಂದ ತಮ್ಮನೆಡೆಗೆ ಬರುವಳು ಶೂರ್ಪಣಖೆ.

ಶೂರ್ಪಣಖೆಯು ತನಗೆ ಬೆನ್ನು ತೋರಿಸಿದಾಗ ಅಣ್ಣನಾಜ್ಞೆಯ ನೋಡಿ ಲಕ್ಷ್ಮಣ, ತನ್ನ ಮನದಲಿ ತಾನೆ ನಗುತಲಿ ಅಂತ ಸೌರಾಷ್ಟ್ರ ತ್ರಿವುಡೆಯ ಉಠಾವಿನ ಮದ್ದಳೆಯ ನುಡಿತಕ್ಕೆ, ಮೂಗು-ಮೊಲೆಗಳ ಕತ್ತರಿಸಿದಾಗ, ಶೂರ್ಪಣಖೆ ನಿಜರೂಪ ತಾಳಿ, ಆರ್ಭಟಿಸುತ್ತಾ ತನ್ನಣ್ಣರಿರುವಲ್ಲಿಗೆ ಓಡುತ್ತಾಳೆ. ಅದರ ನಡುವೆ, ಎತ್ತ ಹೋದರೆತ್ತ ಬಿಡುವುದಿಲ್ಲ, ನಿನ್ನ ಹೆಂಡತಿಯ ಎತ್ತಿ ಕೊಂಡೊಯ್ಯದಿದ್ದರೆ ನೋಡು ಅಂತ ಸವಾಲು ಹಾಕುತ್ತಾಳೆ. ಅಲ್ಲಿಗೆ ಖರ ದೂಷಣರ ಪ್ರವೇಶ- ದುರುಳೆಯಾಡಿದ ನುಡಿದ ದುಷ್ಟ ಖರ ಕೇಳುತ್ತಾ... ಅಂತ ಭೈರವಿ ಝಂಪೆಯ ಏರು ಪದದ ಬಳಿಕ ದೂಷಣ, ತ್ರಿಶಿರರೂ ಸೇರಿಕೊಳ್ಳುತ್ತಾರೆ. ಅವರಿಬ್ಬರೂ ರಾಮ ಲಕ್ಷ್ಮಣರಿದ್ದಲ್ಲಿಗೆ ದಾಳಿಯಿಟ್ಟು, ಆರೆಲೋ ಮುಂದಿರುವ ಧೀರನೇ ಅಂತ ಏರು ಪದಕ್ಕೆ ಘರ್ಜಿಸುತ್ತಾರೆ. ಈ ಹಾಡುಗಳ ಸರಪಣಿಯಲ್ಲಿಯೇ ಭೈರವಿ ಏಕ, ಮಾರವಿ ಏಕ ತಾಳದ ಏರು ಪದಗಳು ವಿಜೃಂಭಿಸುತ್ತವೆ. ಅಲ್ಲಿಗೆ ಖರ-ದೂಷಣ ತ್ರಿಶಿರರ ವಧೆಯಾಗುತ್ತದೆ.

ನಂತರ ಮುಂದಕ್ಕೆ ಮತ್ತೊಂದು ಕುತೂಹಲದ ಪ್ರಸಂಗ ವಾಲಿ ಸುಗ್ರೀವರ ಕಾಳಗ - ಇವೆಲ್ಲವೂ ನಾನು ಸಣ್ಣವನಿರುವಾಗ ಚೆಂಡೆ-ಮದ್ದಳೆ ಅಭ್ಯಾಸಕ್ಕೂ, ಮನೆಗೆ ಭಾಗವತಿಕೆ ಕಲಿಯಲು ಬರುತ್ತಿದ್ದವರಿಗೆ ತಾಳ- ಮಟ್ಟುಗಳ ಅಭ್ಯಾಸಕ್ಕೂ ಅತ್ಯಂತ ಪೂರಕವಾದ ಪ್ರಸಂಗಗಳಿವು.

ಇವುಗಳೊಂದಿಗೆ ಬೆಳೆಯುತ್ತಲೇ, ಮಧ್ಯೆ ಮಧ್ಯೆ ರಾಮಾಯಣದ ಬೇರೆ ಬೇರೆ ಕಥನಗಳನ್ನು ಯಕ್ಷಗಾನದ ಮೂಲಕ ಕೇಳಿ ತಿಳಿಯುತ್ತಾ ಬೆಳೆದವರು ನಾವು. ಆಗೆಲ್ಲ ನಮಗೆ ಅಯೋಧ್ಯೆ ಎಂಬ ಸಾಕೇತಪುರ, ಜನಕಪುರಿ ಮಿಥಿಲೆ, ಅವಧ ರಾಜ್ಯ, ಇಕ್ಷ್ವಾಕು (ಸೂರ್ಯ) ವಂಶ, ಪಂಚವಟಿ (ಈಗಿನ ನಾಸಿಕ), ದಂಡಕಾರಣ್ಯ, ಸರಯೂ ನದಿ, ಕಿಷ್ಕಿಂದೆ, ಸಮುದ್ರ, ರಾಮಸೇತು, ಲಂಕೆ... ಇವೆಲ್ಲವೂ ನಮಗೆ ಗೊತ್ತಿತ್ತು.

ಬುದ್ಧಿ ಬೆಳೆಯುವ ಹಂತದಲ್ಲಿ ರಾಮಾಯಣ ಸೀರಿಯಲ್ ಪ್ರಸಾರವಾಗುತ್ತಿತ್ತು. ಯಾರದ್ದೋ ಮನೆಗೆ ಹೋಗಿ ಟಿವಿ ನೋಡುತ್ತಿದ್ದೆವು. ಇವುಗಳು ಮೇಳೈಸಿ ನಮ್ಮೊಳಗೆ ರಾಮನು ನಿಧಾನವಾಗಿ ಬೆಳೆಯುತ್ತಿದ್ದ. ಈಗ ಐದು ಶತಮಾನಗಳ ಭಾರತೀಯರ ವಾಂಛೆಯೊಂದು ಈಡೇರಿ, ಬಾಲ ರಾಮನು ಮರಳಿ ಅಯೋಧ್ಯೆಯೊಳಗೆ ವಿರಾಜಮಾನನಾಗಿದ್ದಾನೆ.  ಈ ಬಾಲರಾಮನ ಮುದ್ದಾದ ಮುಖದ ವಿಗ್ರಹ ಕಡೆದದ್ದು ಕನ್ನಡಿಗನೇ ಎಂಬ ಹೆಮ್ಮೆಯೊಂದಿಗೆ ಹೊಸ ಇತಿಹಾಸಕ್ಕೆ ಇಡೀ ದೇಶವು ಸಂಭ್ರಮಿಸಿದ್ದನ್ನು ನೋಡಿದರೆ, ರಾಮ ಯಾವ ಜಾತಿಯವನು ಅಂತೆಲ್ಲ ಗೊತ್ತಿಲ್ಲ. ರಾಮ ಸಮಸ್ಯೆಯಾಗಿರಲಿಲ್ಲ, ರಾಮ ಎಂಬ ಎರಡಕ್ಷರವು ಬದುಕಿನ ಎಲ್ಲ ಸಮಸ್ಯೆಗಳಿಗೆ ಪರಿಹಾರ ಎಂಬ ಸಂದೇಶವೊಂದು ಬಿತ್ತರವಾಗಿದೆ. ಜಗತ್ತಿನಾದ್ಯಂತ ಭಾರತೀಯತೆ, ಭಾರತೀಯತೆಯ ಅಸ್ಮಿತೆಯೊಂದು ಮೇಳೈಸಿದೆ. ಇಂಥ ಚಂದವನ್ನು ನಮ್ಮ ಜೀವಿತಾವಧಿಯಲ್ಲಿ ಕಂಡ ನಾವು ಧನ್ಯರಲ್ಲದೆ ಮತ್ತೇನು?

ಆಗಮಾರ್ತಂತು ದೇವಾನಾಂ, ಗಮನಾರ್ತಂತು ರಾಕ್ಷಸಾಂ
(ದೇವರು ಒಳಬರಲಿ, ರಾಕ್ಷಸರು ಹೊರ ಹೋಗಲಿ)
-ಅವಿನಾಶ್ ಬೈಪಾಡಿತ್ತಾಯ

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು