2024ರ ಯಕ್ಷಗಾನ ತಿರುಗಾಟ: ಕರಾವಳಿಯಲ್ಲೀಗ ಮತ್ತೆ ಬೆಳಗಲಾರಂಭಿಸಿದೆ ಯಕ್ಷ ರಾತ್ರಿ! ಹೊಸ ಪ್ರಸಂಗಗಳು ಯಾವುವು?


ಮಂಗಳೂರು:
ಮಳೆಗಾಲದಿಂದೀಚೆಗೆ ರಾಜಧಾನಿ ಬೆಂಗಳೂರಿನಲ್ಲಿ ಭರ್ಜರಿಯಾಗಿಯೇ ಯಕ್ಷಗಾನದ ಚೆಂಡೆ ಮದ್ದಳೆಯ ಸದ್ದು ಕೇಳಿಸಿದ ನಂತರದಲ್ಲಿ, ದೀಪಾವಳಿ ಕಳೆದ ಬಳಿಕ ಕರಾವಳಿಯಲ್ಲೀಗ ಚೆಂಡೆ-ಮದ್ದಳೆಯ ಕಲರವಕ್ಕೆ ವೇದಿಕೆ ಸಜ್ಜಾಗಿದೆ. ಇದು ಯಕ್ಷಗಾನ ಮೇಳಗಳು ದಿಗ್ವಿಜಯಕ್ಕೆ ಹೊರಡುವ ಸಮಯ.
ಈಗಾಗಲೇ ಪ್ರಮುಖ ಮೇಳಗಳು ಹಾಗೂ ಸಣ್ಣಪುಟ್ಟ ಮೇಳಗಳು ಸೇರಿದಂತೆ 70ಕ್ಕೂ ಹೆಚ್ಚು ಮೇಳಗಳು ಕರಾವಳಿ-ಮಲೆನಾಡಿನಲ್ಲಿವೆ. 2024ರಲ್ಲಿ ಹೊಸ ಅಚ್ಚರಿಯಾಗಿ, ಹೊಸದೊಂದು ಡೇರೆ ಮೇಳದ ಉದಯ. ಕುಸಿಯುತ್ತಾ ಕುಸಿಯುತ್ತಾ ಪ್ರಸ್ತುತ ಎರಡಕ್ಕೇ ಸೀಮಿತವಾಗಿದ್ದ ಡೇರೆ ಮೇಳಗಳ ಸಂಖ್ಯೆಗೆ ಈ ಬಾರಿ ಹೊಸ ಸೇರ್ಪಡೆ ಮೆಕ್ಕೆಕಟ್ಟು ಮೇಳ.
ಕೆಲವು ಯಕ್ಷಗಾನ ಮೇಳಗಳು ಈಗಷ್ಟೇ 2024ನೇ ಸಾಲಿನ ತಿರುಗಾಟ ಆರಂಭಿಸಿದ್ದರೆ, ಈ ತಿಂಗಳಾಂತ್ಯದೊಳಗೆ ಬಹುತೇಕ ಎಲ್ಲ ಮೇಳಗಳು ಅಶ್ವಮೇಧಕ್ಕೆ ಹೊರಡಲಿವೆ. ಹೊಸ ಮೇಳಗಳು, ಹೊಸ ಪ್ರಸಂಗಗಳು, ಯಾವ ಕಲಾವಿದರು ಯಾವ ಮೇಳಕ್ಕೆ, ಯಾವ ಕಲಾವಿದರಿಗೆ ಮೇಳದಲ್ಲಿ ಬಡ್ತಿ ಸಿಕ್ಕಿತು, ಹೊಸ ಪ್ರತಿಭೆಗಳೇನಾದರೂ ಬಂದಿವೆಯೇ ಎಂಬೆಲ್ಲ ಕುತೂಹಲಗಳಿಗೆ ಶೀಘ್ರವೇ ತೆರೆ ಬೀಳಲಿವೆ.

ಯಕ್ಷಗಾನ.ಇನ್ ಅಪ್‌ಡೇಟ್ಸ್ ಪಡೆಯಲು ಫೇಸ್‌ಬುಕ್ | ಟ್ವಿಟರ್ | ಯೂಟ್ಯೂಬ್ ಇನ್‌ಸ್ಟಾಗ್ರಾಂ ಫಾಲೋ ಮಾಡಿ.

ಪ್ರಮುಖ ಮೇಳಗಳ ತಿರುಗಾಟ
ಧರ್ಮಸ್ಥಳ ಮೇಳವು ನ.3ರಿಂದ ಕ್ಷೇತ್ರದಲ್ಲಿ ಸೇವೆಯಾಟ ಆರಂಭಿಸಿದ್ದು, ನ.20ರವರೆಗೆ ನಡೆಯಲಿದೆ. ನ.21ರಿಂದ ಹೊರಗಡೆಗೆ ತಿರುಗಾಟ ಹೊರಡಲಿದೆ. ಕಟೀಲಿನ ಆರು ಮೇಳಗಳು ನ.25ರಿಂದ ತಿರುಗಾಟ ಆರಂಭಿಸುತ್ತಿವೆ.

ಕಮಲಶಿಲೆ ಮೇಳ ನ.5ರಂದು ಸೇವೆಯಾಟ ಆರಂಭಿಸಿದ್ದು ಈ ಬಾರಿ ವಿಶೇಷವಾಗಿ ಒಂದು ವಾರ ಕಾಲ ನ. 17ರವರೆಗೆ ಬೆಂಗಳೂರಿನಲ್ಲಿ ಪ್ರದರ್ಶನ ನೀಡಲಿದೆ.

ಹಟ್ಟಿಯಂಗಡಿ ಮೇಳ ನ. 5ರಂದು, ಪಾವಂಜೆ ಮೇಳ ನ.13ರಂದು, ಕೋಟ ಅಮೃತೇಶ್ವರಿ ಮೇಳ ನ.17, ಮಾರಣಕಟ್ಟೆ ಮೇಳ ನ.18ರಿಂದ, ಸಾಲಿಗ್ರಾಮ ಮೇಳ ನ.18ರಿಂದ, ಹನುಮಗಿರಿ ಮೇಳ ನ.20ರಿಂದ, ಪೆರ್ಡೂರು ಮೇಳ ನ.20ರಿಂದ ತಿರುಗಾಟ ಶುರು ಮಾಡಲಿದೆ.

ಗೆಜ್ಜೆಗಿರಿ ಮೇಳವು ನ.22ರಂದು ಸೇವೆಯಾಟ ಮಾಡಿ ಡಿ.25ರ ವರೆಗೆ ಗೋವಾ, ಗುಜರಾತ್‌, ಮುಂಬಯಿ ಮೊದಲಾದೆಡೆ ಪ್ರದರ್ಶನ ನೀಡಲಿದೆ. ಗೋಳಿಗರಡಿ ಮೇಳ ನ.24ರಿಂದ, ಸೌಕೂರು ಮೇಳ ನ.27ರಿಂದ, ಸಿಗಂದೂರು ಮೇಳ ನ.27ರಿಂದ, ಹಾಲಾಡಿ ಮೇಳ ಡಿ.2ರಿಂದ, ಹಿರಿಯಡ್ಕ ಮೇಳ ಡಿ.14ರಿಂದ ತಿರುಗಾಟ ಆರಂಭಿಸಲಿವೆ. ಕೆಲವು ಮೇಳಗಳ ತಿರುಗಾಟಕ್ಕೆ ಇನ್ನಷ್ಟೇ ದಿನ ನಿಗದಿಯಾಗಬೇಕಿದೆ.

ಇನ್ನೊಂದು ಡೇರೆ ಮೇಳ ಆರಂಭ
ತೆಂಕುತಿಟ್ಟಿನಲ್ಲಿ ಸದ್ಯಕ್ಕೆ ಯಾವುದೇ ಡೇರೆ ಮೇಳಗಳು ಉಳಿದಿಲ್ಲ. ಆದರೆ ಬಡಗುತಿಟ್ಟಿನಲ್ಲಿ ಸಾಲಿಗ್ರಾಮ ಹಾಗೂ ಪೆರ್ಡೂರು ಮೇಳಗಳು ಉಳಿದುಕೊಂಡಿವೆ ಮತ್ತು ಈ ಬಾರಿಯೂ ತಿರುಗಾಟಕ್ಕೆ ಹೊರಟಿವೆ. ಕಳೆದ ಬಾರಿ ಬಡಗುತಿಟ್ಟಿನ ಬಯಲಾಟ ಮೇಳವಾಗಿದ್ದ ಮೆಕ್ಕೆಕಟ್ಟು ಮೇಳವು ಈ ಬಾರಿ ಡೇರೆ ಮೇಳವಾಗಲಿದೆ. ಈ ಬಾರಿ ದೇವದಾಸ ಈಶ್ವರಮಂಗಲ ಅವರು ರಚಿಸಿರುವ ಪ್ರಶ್ನಾರ್ಥಕ ಚಿಹ್ನೆ (?) ಪ್ರಸಂಗವೂ ಪ್ರದರ್ಶನವಾಗಲಿದ್ದು, ಮೆಕ್ಕೆಕಟ್ಟು ಮೇಳದಲ್ಲಿ ಪ್ರದರ್ಶನಗೊಳ್ಳಲಿದೆ. ಅದೇ ರೀತಿ, ಬೈಂದೂರಿನ ಕಳವಾಡಿಯಿಂದ ನೂತನ ಮೇಳವೊಂದು ಆರಂಭವಾಗಲಿದೆ. ಪಾವಂಜೆ ಎರಡನೆ ಮೇಳ ಆರಂಭವಾಗುವ ಬಗ್ಗೆ ಊಹಾಪೋಹಗಳೂ ಕೇಳಿಬರುತ್ತಿವೆ.

ದೇವಿ ಮಹಾತ್ಮೆಯ ತಣಿಯದ ಭಕ್ತಿ, ಆಕರ್ಷಣೆ
ಕರಾವಳಿ ಭಾಗದಲ್ಲಿ 70ಕ್ಕೂ ಹೆಚ್ಚು ಮೇಳಗಳು (ದೊಡ್ಡ ಹಾಗೂ ಚಿಕ್ಕ) ಯಕ್ಷಗಾನ ವ್ಯವಸಾಯದಲ್ಲಿ ತೊಡಗಿದ್ದು, ಪ್ರತಿ ವರ್ಷ 7,500ಕ್ಕೂ ಹೆಚ್ಚು ಪ್ರದರ್ಶನಗಳು ನಡೆಯುತ್ತವೆ. ವಿಭಿನ್ನ ಕ್ಷೇತ್ರ ಮಹಾತ್ಮೆ, ಪೌರಾಣಿಕ ಪ್ರಸಂಗಗಳು, ಸಾಮಾಜಿಕ ಕಾಲ್ಪನಿಕ ಕಥಾನಕಗಳ ನಡುವೆ, ಶ್ರೀ ದೇವಿ ಮಹಾತ್ಮೆಯ ಆಕರ್ಷಣೆ ಕುಂದಿಲ್ಲ. ಬಹುತೇಕ ಎಲ್ಲ ಮೇಳಗಳೂ ದೇವಿ ಮಹಾತ್ಮೆ ಪ್ರಸಂಗವನ್ನು ಆಡಿಸುತ್ತವೆ. ಇದಕ್ಕೆ ಆಟ ಆಡಿಸುವವರ, ಹರಕೆ ಹೊತ್ತವರ ಬೇಡಿಕೆ ಕಾರಣವಾಗಿದ್ದು, ಕಟೀಲು ಮೇಳದಲ್ಲಿ ಮಾತ್ರವಲ್ಲದೆ ಇತರ ಮೇಳಗಳೂ ದೇವಿ ಮಹಾತ್ಮೆ ಪ್ರದರ್ಶಿಸುತ್ತವೆ.

ಈ ವರ್ಷದ ಹೊಸ ಪ್ರಸಂಗಗಳು
  • ಧರ್ಮಸ್ಥಳ: ವಿಶ್ವವಂದ್ಯ ವಿನಾಯಕ, ಗಂಧರ್ವ ಕನ್ಯೆ
  • ಸಾಲಿಗ್ರಾಮ: ಸಾಹಿತಿ ಪನ್ನಾಲಾಲ್‌ ಪಠೇಲರ ಗುಜರಾತಿ ಕಾದಂಬರಿ ಆಧಾರಿತ, ದೇವದಾಸ ಈಶ್ವರ ಮಂಗಲ ಅವರ ಶುಭಲಕ್ಷಣ
  • ಹನುಮಗಿರಿ: ವಾಸುದೇವ ರಂಗಾ ಭಟ್‌ ಕಥಾ ಸಂಯೋಜನೆ, ಪ್ರಸಾದ್‌ ಮೊಗೆಬೆಟ್ಟು ಪದ್ಯ ರಚನೆಯ ಸಾಕೇತ ಸಾಮ್ರಾಜ್ಞಿ
  • ಪೆರ್ಡೂರು: ಪ್ರೊ| ಪವನ್‌ ಕಿರಣ್‌ಕೆರೆ ಅವರ ಪರ್ಣಕುಟೀರ
  • ಪಾವಂಜೆ ಮೇಳ: ಭಾರತ ವರ್ಷಿಣಿ
  • ಹಿರಿಯಡಕ ಮೇಳ: ದೇವದಾಸ ಈಶ್ವರ ಮಂಗಲ ಅವರ ಜಾಜಿ ಮಲ್ಲಿಗೆ, ಪ್ರಶಾಂತ್‌ ಸಿ.ಕೆ. ರಚನೆ, ದಯಾನಂದ ಕೋಡಿಕಲ್‌ ಪದ್ಯ ರಚನೆಯ ಮಣಿ ಮಂಚೊದ ಮಂತ್ರಮೂರ್ತಿ
  • ಸೌಕೂರು: ಕೊಕ್ಕರ್ಣೆ ಸದಾಶಿವ ಅಮೀನ್‌ ರಚನೆಯ ಭಗವತಿ ಭೈರವಿ, ಕೌಲಾಳಿ ಚಂದ್ರಶೇಖರ ಶೆಟ್ಟಿ ರಚನೆಯ ಮಂಗಳ ತರಂಗಿಣಿ, ಪ್ರಮೋದ್‌ ಪೂಜಾರಿ ಬೆಳ್ವೆ ರಚನೆಯ ಚಿತ್ತೇರಿ ಶ್ರೀವನದುರ್ಗೆ
  • ಕಳವಾಡಿ: ಡಾ| ಬಸವರಾಜ ಶೆಟ್ಟಿಗಾರ್‌ ಅವರ ಕಳವಾಡಿ ಮಾರಿಕಾಂಬಾ ಕ್ಷೇತ್ರ ಮಹಾತ್ಮ್ಯೆ, ಯಕ್ಷಾನಂದ ಕುತ್ಪಾಡಿ ಅವರ ಕಾರುಣ್ಯ ಸ್ವಾಮಿ ಕೊರಗಜ್ಜ, ಶುಭಾಶಯ ಜೈನ್‌ ರಚನೆಯ ಕೆಂಪುಕೊಳ, ವಿದ್ಯಾಶ್ರೀ ಆಚಾರ್ಯ ಯಳಜಿತ್‌ ಅವರ ನಾಗ ನಿರ್ಮಲೆ
  • ಸಸಿಹಿತ್ಲು: ದೇವದಾಸ ಈಶ್ವರ ಮಂಗಲ ಅವರ ಪೊರ್ಲುದ ಮರ್ಲೆದಿ, ವಸಂತ ಬಂಟ್ವಾಳ ರಚನೆ, ಕುಳಾಯಿ ಮಾಧವ ಭಂಡಾರಿ ಪದ್ಯ ರಚನೆಯ ಕಲ್ಜಿಗದ ಸತ್ಯ
  • ನೀಲಾವರ: ಎಂ.ಕೆ. ರಮೇಶ ಆಚಾರ್ಯರ ಕನ್ನಡ ಕುಲರತ್ನ, ರಾಘವೇಂದ್ರ ಪೂಜಾರಿ ಗಿಳಿಯಾರು ರಚನೆಯ ಕಡಲ ಕಣ್ಮಣಿ
  • ಗೋಳಿಗರಡಿ: ಸುರೇಶ್‌ ಕುಲಾಲ್‌ ಹಂದಿಗದ್ದೆ ರಚನೆಯ ಶುಭ ಸಂಭ್ರಮ, ಶಿವಶಕ್ತಿ ಗುಳಿಗ, ಬಿ.ಕೆ. ಶ್ರೀನಿವಾಸ ಸಾಲಿಯಾನ್‌ ಬೋಂದೆಲ್‌ ರಚನೆಯ ಕಾರ್ಣಿಕದ ಕೊರಗಜ್ಜ, ಡಾ| ಬಸವರಾಜ್‌ ಶೆಟ್ಟಿಗಾರ್‌ ರಚನೆಯ ಜೋಗಿ ಜೆಡ್ಡು ಜಟ್ಟಿಗೇಶ್ವರ ಕ್ಷೇತ್ರ ಮಹಾತ್ಮೆ
  • ಸಿಗಂದೂರು: ಪ್ರೊ| ಪವನ್‌ ಕಿರಣ್‌ಕೆರೆ ಅವರ ರಾಗ ಚಂದ್ರಿಕೆ
  • ಗೆಜ್ಜೆಗಿರಿ: ದೇವದಾಸ ಈಶ್ವರ ಮಂಗಲ ಅವರ ಕಾಲ ಕಲ್ಜಿಗ, ನಿತಿನ್‌ ಕುಮಾರ್‌ ತೆಂಕಕಾರಂದೂರು ರಚನೆ, ಯೋಗೀಶ್‌ ರಾವ್‌ ಚಿಗುರುಪಾದೆ ಪದ್ಯರಚನೆಯ ಕುಲದೈವೊ ಬ್ರಹ್ಮ, ನಿತಿನ್‌ ಕುಮಾರ್‌ ತೆಂಕಕಾರಂದೂರು ರಚನೆ, ಮಾಧವ ಭಂಡಾರಿ ಕುಳಾಯಿ ಪದ್ಯರಚನೆಯ ಎಡ್ಮೂರ ಮೊಗೇರ ಸತ್ಯೊಲು
  • ಹಾಲಾಡಿ: ಪ್ರೊ| ಪವನ್‌ ಕಿರಣ್‌ಕೆರೆ ರಚನೆಯ ಶುಭ ನಕ್ಷತ್ರ
  • ಮೆಕ್ಕೆಕಟ್ಟು ಮೇಳ: ದೇವದಾಸ ಈಶ್ವರ ಮಂಗಲ ಅವರ ಪ್ರಶ್ನಾರ್ಥಕ ಚಿಹ್ನೆ, ಅಂಬಿಕಾ ವಕ್ವಾಡಿ ಕಥೆ, ಬೇಳೂರು ವಿಷ್ಣುಮೂರ್ತಿ ನಾಯಕ್‌ ಪದ್ಯ ರಚನೆಯ ಪ್ರೇಮ ಪಂಜರ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು