ಅ.25ರಂದು ಸಿರಿಬಾಗಿಲಿನಲ್ಲಿ ಯಕ್ಷಗಾನ ಹಿಮ್ಮೇಳ ಕಲಾವಿದರಿಗೆ ಮಾಹಿತಿಪೂರ್ಣ ಶಿಬಿರ


ಕಾಸರಗೋಡು: ಯಕ್ಷಗಾನ ಕಲೆಯ ಪರಂಪರೆಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ‘ಯಕ್ಷಗಾನ ಕಲೆಯ ದೀಪಕ್ಕೆ ತೈಲಧಾರೆಗಳಾಗೋಣ...’ ಎಂಬ ಶೀರ್ಷಿಕೆಯಲ್ಲಿ ಯಕ್ಷಗಾನ ಹಿಮ್ಮೇಳ ಕಲಾವಿದರ ಶಿಬಿರ ಅ. 25ರಂದು ಭಾನುವಾರ ಸಿರಿಬಾಗಿಲಿನಲ್ಲಿ ನಡೆಯಲಿದೆ.

ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಶ್ರೀ ಕೇಶವಾನಂದ ಭಾರತಿ ಸ್ಮೃತಿ ಮಂದಿರದಲ್ಲಿ ಬೆಳಗ್ಗೆ 9:30ರಿಂದ ದಿನವಿಡೀ ನಡೆಯುವ ಶಿಬಿರವನ್ನು ಪ್ರತಿಷ್ಠಾನದ ಸಹಸಂಸ್ಥೆಯಾದ ‘ಯಕ್ಷಾನುಗ್ರಹ’ ವಾಟ್ಸ್‌ಆ್ಯಪ್ ಬಳಗದ ಸಹಯೋಗದಲ್ಲಿ ಆಯೋಜಿಸಲಾಗಿದೆ.
ಯಕ್ಷಗಾನ ಹಿಮ್ಮೇಳದ ಲಯಬ್ರಹ್ಮ ಎಂದೇ ಗುರುತಿಸಿಕೊಂಡಿದ್ದ ಕೀರ್ತಿಶೇಷ ದಿವಾಣ ಭೀಮ ಭಟ್ ಅವರ ಸ್ಮರಣೆಯೊಂದಿಗೆ ನಡೆಯುವ ಕಾರ್ಯಕ್ರಮದಲ್ಲಿ ತೆಂಕುತಿಟ್ಟು ಯಕ್ಷಗಾನ ಕ್ಷೇತ್ರದ ನೂರಕ್ಕೂ ಹೆಚ್ಚು ಕಲಾವಿದರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.

ದಿವಾಣ ಭೀಮ ಭಟ್ ಅವರ ಸಂಸ್ಮರಣೆಯನ್ನು ತಾಳಮದ್ದಳೆಯ ಅರ್ಥಧಾರಿ ರಾಧಾಕೃಷ್ಣ ಕಲ್ಚಾರ್ ವಿಟ್ಲ ನೆರವೇರಿಸಲಿದ್ದಾರೆ. ಯಕ್ಷಗಾನ ಹಿಮ್ಮೇಳ ಗುರು ಹರಿನಾರಾಯಣ ಬೈಪಾಡಿತ್ತಾಯ ಕಾರ್ಯಕ್ರಮ ಉದ್ಘಾಟಿಸಲಿದ್ದು, ಅನನ್ಯ ಫೀಡ್ಸ್ ಹುಬ್ಬಳ್ಳಿಯ ನಿರ್ದೇಶಕ ದಿವಾಣ ಗೋವಿಂದ ಭಟ್ ಅಧ್ಯಕ್ಷತೆ ವಹಿಸಲಿದ್ದಾರೆ. ಹಿರಿಯ ಕಲಾವಿದರಾದ ಪದ್ಯಾಣ ಶಂಕರನಾರಾಯಣ ಭಟ್ ಹಾಗೂ ಕರ್ಗಲ್ಲು ವಿಶ್ವೇಶ್ವರ ಭಟ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ವಿಶೇಷ ಸಂಪನ್ಮೂಲ ವ್ಯಕ್ತಿಗಳಾಗಿ ಸುಬ್ರಾಯ ಸಂಪಾಜೆ, ಕೃಷ್ಣ ಪ್ರಸಾದ್ ಉಳಿತ್ತಾಯ, ಗೋಪಾಲಕೃಷ್ಣ ಭಟ್ ಪುಂಡಿಕಾಯಿ ಹಾಗೂ ಅಂಡಾಲ ದೇವಿಪ್ರಸಾದ್ ಶೆಟ್ಟಿ ಭಾಗವಹಿಸಲಿದ್ದಾರೆ. ಪ್ರಾತ್ಯಕ್ಷಿಕೆ ಮತ್ತು ಸಂವಾದದಲ್ಲಿ ಶ್ರೀಗಳಾದ ಬಲಿಪ ಶಿವಶಂಕರ ಭಟ್, ರಮೇಶ ಭಟ್ ಪುತ್ತೂರು, ಲಕ್ಷ್ಮೀನಾರಾಯಣ ರಾವ್ ಅಡೂರು, ಮುರಾರಿ ಕಡಂಬಳಿತ್ತಾಯ, ಗಣೇಶ ಭಟ್ ಬೆಳಾಲು, ಪುರುಷೋತ್ತಮ ಭಟ್ ನಿಡುವಜೆ, ಹರಿಪ್ರಸಾದ್ ಕಾರಂತ ಸರಪಾಡಿ, ಅವಿನಾಶ್ ಬೈಪಾಡಿತ್ತಾಯ, ತಲ್ಪನಾಜೆ ವೆಂಕಟರಮಣ ಭಟ್, ಶ್ರೀಮತಿ ಶಾಲಿನಿ ಹೆಬ್ಬಾರ್, ಸ್ಕಂದಾ ಕೊನ್ನಾರ್, ಲಕ್ಷ್ಮೀ ನಾರಾಯಣ ಹೊಳ್ಳ, ಮಯೂರ ನಾಯ್ಗ, ವಿಶ್ವಾಸ್ ಭಟ್ ಕರ್ಬೆಟ್ಟು, ಮನ್ವಿತ್ ಇರಾ ಭಾಗವಹಿಸುವರು.

ಸಂಜೆ 4:30ಕ್ಕೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆನುವಂಶಿಕ ಅರ್ಚಕರಾದ ವಿದ್ವಾನ್ ಶ್ರೀ ಶ್ರೀಹರಿನಾರಾಯಣದಾಸ ಆಸ್ರಣ್ಣ ಕಟೀಲು ಅವರು ವಿಶೇಷ ಅತಿಥಿಯಾಗಿ ಭಾಗವಹಿಸಿ ಸಮಾರೋಪ ಭಾಷಣ ಮಾಡಲಿದ್ದಾರೆ. ಡಾ. ಶ್ರೀಕೃಷ್ಣ ಭಟ್ ಸುಣ್ಣಂಗುಳಿ ಕಾರ್ಯಕ್ರಮ ಅವಲೋಕನ ಮಾಡಲಿದ್ದು, ರಾಜಾರಾಮ ಹೊಳ್ಳ ಕೈರಂಗಳ ಹಾಗೂ ದೀವಿತ್ ಕೋಟ್ಯಾನ್ ಪೆರಾಡಿ ಅವರು ನಿರ್ವಹಣೆ ಮಾಡಲಿದ್ದಾರೆ.

ಆಸಕ್ತ ಕಲಾವಿದರು ಹಾಗೂ ಕಲಾಭಿಮಾನಿಗಳು ವಿಶೇಷವಾಗಿ ಹಿಮ್ಮೇಳ ಕಲಾವಿದರು ಈ ಉಚಿತ ಶಿಬಿರದಲ್ಲಿ ಭಾಗವಹಿಸಿ, ತಮ್ಮ ಯಕ್ಷಗಾನ ಜ್ಞಾನ ಹೆಚ್ಚಿಸಿಕೊಂಡು, ಯಕ್ಷಗಾನದ ಪರಂಪರೆಯ ಉಳಿವಿನ ನಿಟ್ಟಿನಲ್ಲಿ ಯಕ್ಷಗಾನ ದೀವಿಗೆಗೆ ತೈಲಧಾರೆಯಾಗುವಂತೆ ಸಿರಿಬಾಗಿಲು ಪ್ರತಿಷ್ಠಾನವು ಪ್ರಕಟಣೆಯಲ್ಲಿ ತಿಳಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು