ಕನ್ನಡ ಕರಾವಳಿಯ ಅದ್ಭುತ ರಂಗ ಕಲೆಯಾಗಿರುವ ಯಕ್ಷಗಾನದ ಪರಂಪರೆ ಉಳಿಸುವ ನಿಟ್ಟಿನಲ್ಲಿ ತಮ್ಮದೇ ಆದ ಕೊಡುಗೆ ಸಲ್ಲಿಸಿದವರು ಈ ರಂಗದ ಹಿಮ್ಮೇಳ ಗುರುಗಳಲ್ಲಿ ಅಗ್ರಮಾನ್ಯರಾದ ಹಾಗೂ 2020ರ ಕರ್ನಾಟಕ ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಶ್ರೀ ಕೆ.ಹರಿನಾರಾಯಣ ಬೈಪಾಡಿತ್ತಾಯರು. ಬಾಲ್ಯದಿಂದಲೇ ಯಕ್ಷಗಾನವನ್ನು ಅಪ್ಪಿಕೊಂಡಿದ್ದ ಅವರಿಗೆ ಸುಮಾರು ಆರು ದಶಕಗಳ ತಿರುಗಾಟದ ಅನುಭವವಿದೆ.
ಧರ್ಮಸ್ಥಳ ಯಕ್ಷಗಾನ ಕೇಂದ್ರದಲ್ಲಿ ಹನ್ನೆರಡು ವರ್ಷಗಳ ಕಾಲ ಹಿಮ್ಮೇಳ ಗುರುಗಳಾಗಿ ಸೇವೆ ಸಲ್ಲಿಸಿರುವ ಅವರು, ಹಲವಾರು ಶಿಷ್ಯರನ್ನು ರಂಗಕ್ಕೆ ನೀಡಿದ್ದಾರೆ. ಶಿಷ್ಯರೀಗ ವಿವಿಧ ಮೇಳಗಳಲ್ಲಿ ಪ್ರಧಾನ ಪಾತ್ರವಹಿಸಿ ಪ್ರಸಿದ್ಧರಾಗಿದ್ದಾರೆ. ಸುಮಾರು ಇನ್ನೂರಕ್ಕೂ ಹೆಚ್ಚು ಹಿಮ್ಮೇಳ ವಾದಕರನ್ನು ರೂಪಿಸಿರುವ ಖ್ಯಾತಿ ಇವರಿಗೆ ಸಲ್ಲುತ್ತದೆ. ಅಲ್ಲದೆ, ಹಲವು ಕಿರಿಯರಿಗೆ ಯಕ್ಷಗಾನ ಕಲಿಯುವಂತೆ ಆಗ್ರಹಿಸಿ, ಪ್ರೇರೇಪಿಸಿದವರು ಅವರು.
ಯಕ್ಷಗಾನವು ಇವರನ್ನು ಯಾವ ಪರಿ ಆಕರ್ಷಿಸಿತ್ತೆಂದರೆ, 7ನೇ ತರಗತಿಗೇ ವಿದ್ಯಾಭ್ಯಾಸ ನಿಲ್ಲಿಸಿ ಆ ರಂಗದತ್ತ ಹೆಜ್ಜೆ ಇಟ್ಟರು. ಆರಂಭದಲ್ಲಿ ‘ಚೆಂಡೆಯ ಗಂಡುಗಲಿ’ ನೆಡ್ಲೆ ನರಸಿಂಹ ಭಟ್ ಅವಲ್ಲಿ ಶಿಷ್ಯತ್ವ ಪಡೆದು, ಚೆಂಡೆ-ಮದ್ದಳೆ ವಾದನದಲ್ಲಿ ವಿಶಿಷ್ಟ ಛಾಪು ಮೂಡಿಸಿದ ಹರಿನಾರಾಯಣ ಅವರ ಕುಟುಂಬವೇ ಯಕ್ಷಗಾನ ಪರಂಪರೆಯದು. ಕಡಬ ಬೈಪಾಡಿ ಬೀಡು ಮನೆತನದವರಾದ ಇವರ ಸಹೋದರರು [ಮೋಹನ ಬೈಪಾಡಿತ್ತಾಯ (ಹಿಮ್ಮೇಳ ವಾದಕರು), ಕೇಶವ ಬೈಪಾಡಿತ್ತಾಯ (ಹಿಮ್ಮೇಳ ವಾದಕರು) ಮತ್ತು ಅನಂತ ಬೈಪಾಡಿತ್ತಾಯ (ವೇಷಧಾರಿ, ಅರ್ಥಧಾರಿ, ಭಾಗವತರು)] ಕೂಡ ಯಕ್ಷಗಾನ ವ್ಯವಸಾಯಿಗಳು. ವಿವಾಹಾನಂತರದಲ್ಲಿ, ಸಂಗೀತ ಕಲಿತಿದ್ದ ಪತ್ನಿ ಲೀಲಾ ಬೈಪಾಡಿತ್ತಾಯರನ್ನೂ ಈ ರಂಗಕ್ಕೆ ಎಳೆದು ತಂದು, ತರಬೇತಿ ನೀಡಿ ಪ್ರಥಮ ವೃತ್ತಿಪರ ಮಹಿಳಾ ಭಾಗವತರಾಗಿ ರೂಪಿಸಿರುವುದರಲ್ಲಿ ಅಚ್ಚರಿಯೇನಿಲ್ಲ.
ಆರಂಭದಲ್ಲಿ ಕಡಬ ಪುರುಷಯ್ಯ ಆಚಾರ್ಯರಿಂದ ಯಕ್ಷಗಾನದ ಬಾಲಪಾಠ ಪಡೆದು ಮೃದಂಗ ವಿದ್ವಾನ್ ಕಾಂಚನ ಕೆ.ವಿ.ಮೂರ್ತಿ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತದ ಮೃದಂಗದ ನಡೆಗಳನ್ನು ಅರಿತುಕೊಂಡು, ಸಮಗ್ರವಾಗಿ ಮೃದಂಗ ಸಾಹಿತ್ಯವನ್ನು ತಮ್ಮದಾಗಿಸಿಕೊಂಡರು. 15ನೇ ವಯಸ್ಸಿಗೇ ಮೇಳದ ತಿರುಗಾಟ ಆರಂಭಿಸಿದ ಅವರು ಕುಂಡಾವು ಇರಾ ಸೋಮನಾಥೇಶ್ವರ ಮೇಳದಲ್ಲಿ 2 ವರ್ಷ, ಧರ್ಮಸ್ಥಳ, ಕೊಲ್ಲೂರು, ಕೂಡ್ಲು, ಸುಬ್ರಹ್ಮಣ್ಯ, ಪುತ್ತೂರು, ಸುರತ್ಕಲ್, ಕರ್ನಾಟಕ, ಅರುವ, ಕುಂಬಳೆ, ಬಪ್ಪನಾಡು, ತಲಕಳ ಮುಂತಾದ ಟೆಂಟ್ ಮತ್ತು ಬಯಲಾಟ ಮೇಳಗಳಲ್ಲಿ ವ್ಯವಸಾಯ ಮಾಡಿ ಸುಮಾರು ಆರು ದಶಕಗಳಿಂದ ಯಕ್ಷ ಕಲಾ ಮಾತೆಯ ಸೇವೆ ಮಾಡಿ ಈಗ ನಿವೃತ್ತಿ ಜೀವನ ನಡೆಸುತ್ತಿದ್ದಾರೆ. ಪ್ರಮುಖ ಭಾಗವತರಾದ ದಾಮೋದರ ಮಂಡೆಚ್ಚರು, ಹಿರಿಯ ಅಗರಿ ಭಾಗವತರು, ಕಡತೋಕ ಮಂಜುನಾಥ ಭಾಗವತರು, ಬಲಿಪ ನಾರಾಯಣ ಭಾಗವತರು, ಹಿಮ್ಮೇಳ ವಾದಕರಾದ ಚಿಪ್ಪಾರು ಕೃಷ್ಣಯ್ಯ ಬಲ್ಲಾಳ್, ನೆಡ್ಲೆ ನರಸಿಂಹ ಭಟ್, ಕುದ್ರೆಕೂಡ್ಲು ರಾಂ ಭಟ್, ಕಾಸರಗೋಡು ವೆಂಕಟ್ರಮಣ ಮದ್ಲೆಗಾರ್, ಚಕ್ಕುಲಿ ಗೋಪಾಲಕೃಷ್ಣ ಭಟ್ ಮುಂತಾದವರೊಂದಿಗೆ ಒಡನಾಟದಿಂದ ತಮ್ಮ ವಾದನವನ್ನು ಪಕ್ವಗೊಳಿಸಿಕೊಂಡವರು.
ವಿವಾಹವಾದ ಬಳಿಕ, ಅದಾಗಲೇ ಸಂಗೀತ ಕಲಿತಿದ್ದ ಪತ್ನಿ ಲೀಲಾ ಬೈಪಾಡಿತ್ತಾಯರಿಗೆ ಯಕ್ಷಗಾನ ಭಾಗವತಿಕೆಯನ್ನು ಹೇಳಿಕೊಟ್ಟು, ಅವರನ್ನು ಪ್ರಥಮ ವೃತ್ತಿಪರ ಮಹಿಳಾ ಭಾಗವತರು ಎಂಬ ಕೀರ್ತಿ ಶಿಖರಕ್ಕೆ ಏರಿಸುವಲ್ಲಿ, ಬೈಪಾಡಿತ್ತಾಯರ ಪರಿಶ್ರಮವಿದೆ.
ಶೇಣಿ ಗೋಪಾಲಕೃಷ್ಣ ಭಟ್, ಕುಂಬಳೆ ಸುಂದರ ರಾವ್, ಬಣ್ಣದ ಮಾಲಿಂಗ, ಬಣ್ಣದ ಕುಟ್ಯಪ್ಪು, ಪಡ್ರೆ ಚಂದು, ಕೋಳ್ಯೂರು ರಾಮಚಂದ್ರ ರಾವ್, ಪಾತಾಳ ವೆಂಕಟ್ರಮಣ ಭಟ್, ಪುತ್ತೂರು ನಾರಾಯಣ ಹೆಗ್ಡೆ, ಪುತ್ತೂರು ಕೃಷ್ಣ ಭಟ್, ಹೊಸಹಿತ್ಲು ಮಹಾಲಿಂಗ ಭಟ್, ಎಂಪೆಕಟ್ಟೆ ನಾರಾಯಣ ರೈ, ವಿಟ್ಲ ಗೋಪಾಲಕೃಷ್ಣ ಜೋಷಿ ಮುಂತಾದ ಘಟಾನುಘಟಿ ಹಿರಿಯರನ್ನು ರಂಗದಲ್ಲಿ ಕುಣಿಸಿದ್ದಾರೆ ಮತ್ತು ಹೊಸ ಪೀಳಿಗೆಯ ಕಲಾವಿದರನ್ನೂ ರಂಗದಲ್ಲಿ ಮೆರೆಯುವಂತೆ ಮಾಡಿದ್ದಾರೆ.
12 ವರ್ಷ ಧರ್ಮಸ್ಥಳದ ಯಕ್ಷಗಾನ ಲಲಿತ ಕಲಾ ಕೇಂದ್ರದಲ್ಲಿ ಹಿಮ್ಮೇಳದ ಗುರುಗಳಾಗಿ ಚೆಂಡೆ, ಮದ್ದಳೆ, ಭಾಗವತಿಕೆ ಕಲಿಸಿರುವ ಇವರ ಶಿಷ್ಯರೇ ಈಗ ಟೆಂಟ್ ಮತ್ತು ಬಯಲಾಟ ಮೇಳಗಳಲ್ಲಿ ಕೀರ್ತಿಶಾಲಿಗಳಾಗಿರುವುದು ಅವರ ಗುರುತನದ ಹಿರಿಮೆಗೆ ಸಾಕ್ಷಿ.
ಬಹುಶಃ ಮಂಗಳೂರಿನಲ್ಲೇ ಮೊದಲ ಬಾರಿಗೆ ಮಹಾಮಾಯಿ ದೇವಸ್ಥಾನದಲ್ಲಿ ಯಕ್ಷಗಾನದ ಹಿಮ್ಮೇಳ ಪಾಠ ಆರಂಭಿಸಿದ ಹೆಗ್ಗಳಿಕೆಯೂ ಇವರದು. ಕಟೀಲು, ಮೂಡುಬಿದಿರೆ, ಕಾರ್ಕಳ, ತಲಕಳ ಮುಂತಾದೆಡೆ ಯಕ್ಷಗಾನ ತರಬೇತಿ ನೀಡುತ್ತಾ, ಯಕ್ಷಗಾನದ ಪರಂಪರೆಗೆ ಧಕ್ಕೆಯಾಗದಂತೆ ಕಲಾವಿದರನ್ನು ರೂಪಿಸಿದ್ದಾರೆ.
ಮುಂಬಯಿ, ಗುಜರಾತ್, ಚೆನ್ನೈ, ದೆಹಲಿ, ಕೊಯಮತ್ತೂರು ಮುಂತಾದೆಡೆಯೂ ಯಕ್ಷಗಾನ ಪ್ರದರ್ಶನಗಳಲ್ಲಿ ಭಾಗವಹಿಸಿ ಸೈ ಅನ್ನಿಸಿಕೊಂಡಿರುವ ಇವರದು ಮೂಲತಃ ಪೂಜೆಯ ಪರಂಪರೆಯ ಮನೆತನ. ಸುಬ್ರಹ್ಮಣ್ಯ ಮಠದಲ್ಲಿಯೂ ಕೆಲವು ಕಾಲ ಸೇವೆ ಸಲ್ಲಿಸಿದ್ದರು.
ಪ್ರಸ್ತುತ, ಕಲಿಕೆಯ ಆಸಕ್ತಿಯುಳ್ಳ ಮಕ್ಕಳಿಗೆ ಮನೆಯಲ್ಲೇ ಚೆಂಡೆ, ಮದ್ದಳೆ, ಭಾಗವತಿಕೆ ತರಬೇತಿ ನೀಡುತ್ತಾ, ಅವರನ್ನು ರಂಗಕ್ಕೆ ತರುವಲ್ಲಿ ಶ್ರಮಿಸುತ್ತಿದ್ದಾರೆ. ಮೂಡುಬಿದಿರೆಯ ಆಲಂಗಾರು ದೇವಸ್ಥಾನದಲ್ಲಿ ಶಿಷ್ಯರನ್ನು ತರಬೇತುಗೊಳಿಸಿದ್ದು, ಶಿಷ್ಯ ವೃಂದದ ಚೆಂಡೆ ಜುಗಲ್ಬಂದಿ ನಡೆಸುವ ಮೂಲಕ ಯಕ್ಷಗಾನದಲ್ಲಿ ಹೊಸ ಸಾಧ್ಯತೆಯನ್ನೂ ಆವಿಷ್ಕರಿಸಿದ್ದಾರೆ. ಇದು ಅವರ ವಿಶೇಷ ರಂಗ ವಿನ್ಯಾಸ. ಜೊತೆಗೆ, ಶಿಷ್ಯರಿಗಾಗಿ ಚೆಂಡೆ-ಮದ್ದಳೆಯ ಪಠ್ಯ ಪುಸ್ತಕವನ್ನು (ಧೀಂಕಿಟ) ಹೊರತಂದಿದ್ದಾರೆ. ಜೊತೆಗೆ, ತಮ್ಮದೇ ಕುಟುಂಬದ ಹಿಮ್ಮೇಳವಿರುವ ಯಕ್ಷಗಾನ ಪೂರ್ವರಂಗದ ಆಡಿಯೊ ಸಿಡಿಯನ್ನೂ ಹೊರತಂದಿದ್ದಾರೆ.
ಇವರ ಕಲಾಸೇವೆಯನ್ನು ಪರಿಗಣಿಸಿ ವಿವಿಧೆಡೆ ಅಭಿಮಾನಿಗಳು ಸನ್ಮಾನಿಸಿದ್ದಾರೆ. ಕರ್ನಾಟಕ ಯಕ್ಷಗಾನ ಅಕಾಡೆಮಿಯೂ ಇವರ ಸೇವೆಯನ್ನು ಗುರುತಿಸಿ 2020ರ ಯಕ್ಷ ಸಿರಿ ಪ್ರಶಸ್ತಿ ನೀಡಿ ಗೌರವಿಸಿದೆ. ಕದ್ರಿಯ ಹವ್ಯಾಸಿ ಬಳಗದ ದಶಮಾನ ಸಮ್ಮಾನ, ಅಖಿಲ ಭಾರತ ಯಕ್ಷಗಾನ ಸಾಹಿತ್ಯ ಸಮ್ಮೇಳನ, ಶ್ರೀಕೃಷ್ಣ ಯಕ್ಷ ಸಭಾ, ಮಂಗಳೂರು, ಅರುವ ಕೊರಗಪ್ಪ ಶೆಟ್ಟಿ ಸಾಂಸ್ಕೃತಿಕ ಪ್ರತಿಷ್ಠಾನ, ಯಕ್ಷಗಾನ ಕಲಾರಂಗ ಉಡುಪಿ ಇದರ ಪಡಾರು ನರಸಿಂಹ ಶಾಸ್ತ್ರಿ ಪ್ರಶಸ್ತಿ, ಪುತ್ತೂರು ಆಂಜನೇಯ ಯಕ್ಷಗಾನ ಕಲಾಸಂಘದ ಗೌರವ, ಗುರುಗಳಾದ ನೆಡ್ಲೆ ನರಸಿಂಹ ಭಟ್ ಹೆಸರಿನ ಪ್ರಶಸ್ತಿ, ಪುತ್ತೂರು ನಾರಾಯಣ ಹೆಗ್ಡೆ ಸ್ಮೃತಿ ಗೌರವ, ಕಡಬ ಸಂಸ್ಮರಣಾ ಪುರಸ್ಕಾರ 2020 - ಇವೆಲ್ಲವೂ ಅವರಿಗೆ ಸಂದ ಪುರಸ್ಕಾರಗಳಲ್ಲಿ ಕೆಲವು.
80ರ ಹರೆಯದಲ್ಲೂ ಕಟೀಲು ಮೇಳದ ರಂಗಸ್ಥಳದಲ್ಲಿ ಸೇವೆ ಮಾಡಿರುವುದು ಅವರ ಕಲಾಪ್ರೀತಿಗೆ ಸಾಕ್ಷಿ.
ಅವರಿಗೆ 75 ತುಂಬಿದ ಸಂದರ್ಭದಲ್ಲಿ, ಪತ್ನಿಯೊಂದಿಗೆ ಅವರನ್ನು ಶಿಷ್ಯರೆಲ್ಲ ಸೇರಿಕೊಂಡು ಶ್ರೀ ಹರಿಲೀಲಾ-75 ಯಕ್ಷಾಭಿನಂದನಂ, ಶಿಷ್ಯಾಭಿವಂದನಂ, ಯಕ್ಷನಾದೋತ್ಸವಂ ಹೆಸರಿನಲ್ಲಿ ಅದ್ದೂರಿ ಕಾರ್ಯಕ್ರಮ ಏರ್ಪಡಿಸಿ ಗೌರವಿಸಿರುವುದು ಇತಿಹಾಸ.
ಸುದೀರ್ಘ ಯಕ್ಷಗಾನ ರಂಗಾನುಭವ ಹೊಂದಿರುವ ಇವರು ಕಡಬ, ಎಕ್ಕಾರು, ಅಳದಂಗಡಿ, ಬಳಿಕ ಬಜಪೆ ಬಳಿಯ ತಲಕಳ ಎಂಬಲ್ಲಿ ವಾಸವಿದ್ದು, ಇದೀಗ ಪುನರೂರಿನಲ್ಲಿ ಪುತ್ರ ಅವಿನಾಶ್ ಬೈಪಾಡಿತ್ತಾಯ (ಕಟೀಲು ಮೇಳದ ಕಲಾವಿದ) ಅವರೊಂದಿಗೆ ವಾಸವಾಗಿದ್ದು, ಅಲ್ಲಿಯೇ ಶಿಷ್ಯರನ್ನು ರೂಪಿಸುತ್ತಿದ್ದಾರೆ.
ಸಂಕ್ಷಿಪ್ತ ಪರಿಚಯ
* ಜನನ: 13 ನವೆಂಬರ್ 1946
* ಹುಟ್ಟೂರು: ದಕ್ಷಿಣ ಕನ್ನಡ ಜಿಲ್ಲೆಯ ಕಡಬದ ಕೆಂಚಭಟ್ರೆ
* ಪತ್ನಿ: ಕೆ.ಲೀಲಾ ಬೈಪಾಡಿತ್ತಾಯ, ಖ್ಯಾತ ಮಹಿಳಾ ಭಾಗವತರು
* ಹೆತ್ತವರು: ರಾಮಕೃಷ್ಣ ಬೈಪಾಡಿತ್ತಾಯ ಮತ್ತು ಪದ್ಮಾವತಿ ಅಮ್ಮ
* ವಿದ್ಯಾಭ್ಯಾಸ: 7ನೇ ತರಗತಿ
* ಶಾಸ್ತ್ರೀಯ ಸಂಗೀತ ಮೃದಂಗ: ಮೃದಂಗ ವಿದ್ವಾನ್ ಕೆ.ವಿ.ಮೂರ್ತಿ ಅವರಿಂದ ಕಲಿಕೆ
* ಯಕ್ಷ ರಂಗಾನುಭವ: 1965ರಿಂದೀಚೆಗೆ, ಸುಮಾರು ಆರು ದಶಕಗಳು
* ಮೇಳಗಳು: ಕುಂಡಾವು, ಧರ್ಮಸ್ಥಳ, ಕೊಲ್ಲೂರು, ಕೂಡ್ಲು, ಸುಬ್ರಹ್ಮಣ್ಯ, ಪುತ್ತೂರು, ಸುರತ್ಕಲ್, ಕರ್ನಾಟಕ, ಅರುವ, ಕುಂಬಳೆ, ಬಪ್ಪನಾಡು, ತಲಕಳ
* ಪ್ರಸ್ತುತ ವಿಳಾಸ: “ಶ್ರೀ ಹರಿಲೀಲಾ”, 1-64/10, ಪ್ರಥಮ್ ನಿಧಿ ಲೇಔಟ್, ಪುನರೂರು, ವಯಾ ಕಿನ್ನಿಗೋಳಿ, ಮುಲ್ಕಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ, ಕರ್ನಾಟಕ – 574150
Yakshagana.in ಸೇರಿಕೊಳ್ಳಿ: ವಾಟ್ಸ್ಆ್ಯಪ್ | ಟೆಲಿಗ್ರಾಂ | ಫೇಸ್ಬುಕ್ | ಟ್ವಿಟರ್ | ಯೂಟ್ಯೂಬ್ | ಇನ್ಸ್ಟಾಗ್ರಾಂ
Tags:
ಕಲಾವಿದ
