ಯಕ್ಷಗಾನದ ದಶಾವತಾರಿ ಎಂದೇ ಖ್ಯಾತರಾಗಿದ್ದ ಸಾರ್ವಕಾಲಿಕ ಶ್ರೇಷ್ಠ ಕಲಾವಿದ ಹಾಗೂ ರಂಗದ ಆಸ್ತಿಯೇ ಆಗಿ ಮೆರೆದ ಸೂರಿಕುಮೇರು ಕೆ. ಗೋವಿಂದ ಭಟ್ ಅವರು ಮಾರ್ಚ್ 20ರ ಶನಿವಾರ ತೀರ್ಥಹಳ್ಳಿಯ ತಮ್ಮ ಮಗನ ಮನೆಯಲ್ಲಿ ವಯೋಸಹಜ ಕಾಯಿಲೆಯಿಂದ ನಿಧನ ಹೊಂದಿದದ್ದಾರೆ. ಅವರು ಮೂವರು ಪುತ್ರರು ಹಾಗೂ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಅಗಲಿದ್ದಾರೆ. ಅವರ ನೆನಪಿನ ಲೇಖನ.
ಬಂಟ್ವಾಳ ತಾಲೂಕಿನ ಕುಕ್ಕೆಮನೆಯ ಶಂಕರನಾರಾಯಣ ಭಟ್ ಮತ್ತು ಲಕ್ಷ್ಮಿಅಮ್ಮ ದಂಪತಿಯ ಐವರು ಪುತ್ರರಲ್ಲೊಬ್ಬರಾದ ಗೋವಿಂದ ಭಟ್ಟರು ಓದಿದ್ದು ಕೇವಲ ಏಳನೇ ತರಗತಿ. 11ನೇ ವಯಸ್ಸಿನಲ್ಲಿ ಯಕ್ಷಗಾನ ರಂಗಕ್ಕೆ ಪ್ರವೇಶಿಸಿ, ಏಳು ದಶಕಗಳ ಕಾಲ ಯಕ್ಷಗಾನದ ಸೇವೆಯಲ್ಲಿ, ಅದರ ಉಪಾಸನೆಯಲ್ಲಿ ತೊಡಗಿಸಿಕೊಂಡವರು.
ಯಕ್ಷಗಾನ.ಇನ್ ಅಪ್‌ಡೇಟ್ಸ್ ಪಡೆಯಲು ಫೇಸ್‌ಬುಕ್ | ಟ್ವಿಟರ್ | ಯೂಟ್ಯೂಬ್ | ಇನ್‌ಸ್ಟಾಗ್ರಾಂ ಫಾಲೋ ಮಾಡಿ.
ಯಕ್ಷಗಾನದ ಸೀಮಾಪುರುಷ ಕುರಿಯ ವಿಠಲ ಶಾಸ್ತ್ರಿಗಳ ಶಿಷ್ಯರಾಗಿ, ಪರಮಶಿವನ್ ಅವರಲ್ಲಿ ಭರತನಾಟ್ಯವನ್ನು ಅಭ್ಯಾಸ ಮಾಡಿ ಯಕ್ಷಗಾನದ ನೃತ್ಯ ವಿಭಾಗದಲ್ಲಿ ಔನ್ನತ್ಯವನ್ನು ಸಾಧಿಸಿದ್ದ ಗೋವಿಂದ ಭಟ್ಟರು, ಯಕ್ಷಗಾನದ ಆಹಾರ್ಯ, ಆಂಗಿಕ, ವಾಚಿಕ, ಸಾತ್ವಿಕ ಈ ನಾಲ್ಕೂ ಅಂಗಗಳಲ್ಲಿ ಸಿದ್ಧಿ - ಪ್ರಸಿದ್ಧಿ ಪಡೆದಿದ್ದರು. ಅನನ್ಯ ಕಲಾವಿದ ಗೋವಿಂದ ಭಟ್ಟರು ಬಡಗು ತಿಟ್ಟಿನಲ್ಲೂ ವೇಷಮಾಡಿ ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸಿದ್ದರು. ಧರ್ಮಸ್ಥಳ ಮೇಳವೊಂದರಲ್ಲೇ ಐದುವರೆ ದಶಕಗಳ ತಿರುಗಾಟ ನಡೆಸಿದ್ದರು. ಮೂಲ್ಕಿ, ಕೂಡ್ಲು, ಇರಾ (ಕುಂಡಾವು), ಸುರತ್ಕಲ್ ಮೇಳಗಳಲ್ಲೂ ಕಲಾಸೇವೆ ಸಲ್ಲಿಸಿದ್ದರು. ಸ್ತ್ರೀವೇಷ, ಪುಂಡುವೇಷ, ರಾಜವೇಷ, ಹಾಸ್ಯ, ಬಣ್ಣ ಹೀಗೆ ಎಲ್ಲಾ ಪ್ರಕಾರದ ಪಾತ್ರಗಳನ್ನೂ ಸಮರ್ಥವಾಗಿ ನಿರ್ವಹಿಸಿ, ದೀರ್ಘಕಾಲ ನಾಯಕ- ಪ್ರತಿನಾಯಕ ಪಾತ್ರಗಳ ಮೂಲಕ ಕಲಾರಸಿಕರಿಗೆ ಸಂತೋಷ ನೀಡಿದ್ದರು.
ಧರ್ಮಸ್ಥಳ ಕೇಂದ್ರವೂ ಸೇರಿದಂತೆ ಹಲವು ಕಡೆಗಳಲ್ಲಿ ಆಸಕ್ತರಿಗೆ ಯಕ್ಷಗಾನ ತರಬೇತಿ ನೀಡಿ ನೂರಾರು ಶಿಷ್ಯರನ್ನು ಈ ಕ್ಷೇತ್ರಕ್ಕೆ ತಂದ ಹೆಗ್ಗಳಿಕೆ ಇವರದು. ತಮ್ಮ ಅಸಾಧಾರಣ ವಾಗ್ವೈಖರಿ, ಠೇಂಕಾರದ ಕಂಠಸಿರಿಯೊಂದಿಗೆ, ಕೂಟದಲ್ಲೂ ಸಮರ್ಥ ಅರ್ಥಧಾರಿಯಾಗಿ ಸ್ಥಾಪಿಸಿಕೊಂಡಿದ್ದರು. ಮಣಿ ಮೇಖಲೆ, ಕನಕ ರೇಖೆ, ಕಾವೇರಿ ಮಹಾತ್ಮೆ, ಮೂರುವರೆ ವಜ್ರಗಳು, ರಾಜಶೇಖರ ವಿಲಾಸ, ಮಹಾವೀರ ಸಮ್ರಾಟ ಅಶೋಕ, ನಹುಷೇಂದ್ರ ಎಂಬ ಏಳು ಯಕ್ಷ ಪ್ರಸಂಗಗಳನ್ನು ಕೂಡ ಅವರು ಬರೆದಿದ್ದಾರೆ.
ಯಕ್ಷಗಾನದ ಮೇರು ಕಲಾವಿದ ಗೋವಿಂದ ಭಟ್ಟರಿಗೆ ಕೇಂದ್ರಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ನೂರಾರು ಪ್ರಶಸ್ತಿಗಳು ಬಂದಿದ್ದವು. ಸೋದೆ ಮಠಾಧೀಶ ಶ್ರೀಶ್ರೀ ವಿಶ್ವವಲ್ಲಭ ತೀರ್ಥರ ಪ್ರಥಮ ಪರ್ಯಾಯ ಸಂದರ್ಭದಲ್ಲಿ ಉಡುಪಿಯ ಅವರ ಅಭಿಮಾನಿ ಬಳಗ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಒಂದು ವಾರ 'ಗೋವಿಂದ ವೈಭವ' ನಡೆಸಿ ಅವರ ಪ್ರಸಿದ್ಧ ವೇಷಗಳ ದಾಖಲೀಕರಣದೊಂದಿಗೆ ಅವರ ಅಮೃತ ವರ್ಷವನ್ನು ಔಚಿತ್ಯಪೂರ್ಣವಾಗಿ ಆಚರಿಸಿತ್ತು. ಉಡುಪಿಯ 'ಯಕ್ಷಗಾನ ಕಲಾರಂಗ ಪ್ರಶಸ್ತಿ'ಯೂ ಅವರಿಗೆ ದೊರೆತಿತ್ತು.
ನಿತ್ಯೋತ್ಸಾಹಿ ಕಲಾವಿದ ಗೋವಿಂದ ಭಟ್ಟರು ಜೀವಮಾನವನ್ನೇ ಯಕ್ಷಗಾನಕ್ಕೆ ಮೀಸಲಿಟ್ಟವರು. ತಮ್ಮ 80ರ ವಯಸ್ಸಿನಲ್ಲಿಯೂ ರಕ್ತಬೀಜನ ಸವಾಲುದಾಯಕ ಪಾತ್ರವನ್ನು ಸಮರ್ಥವಾಗಿ ರಂಗದಲ್ಲಿ ನಿಭಾಯಿಸಿದವರು. (2020ರ ಫೆ.5ರಂದು ಪಂಜದಲ್ಲಿ ನಡೆದ ಧರ್ಮಸ್ಥಳ ಮೇಳದ ಯಕ್ಷಗಾನ ದೇವಿ ಮಹಾತ್ಮೆ ಪ್ರಸಂಗದಲ್ಲಿ).
ರಾಜವೇಷಕ್ಕಾಗಿಯೇ ಹುಟ್ಟಿದವರು!
ಸುಂದರ ಆಳಂಗ, ರಾಜವೇಷಕ್ಕೊಪ್ಪುವ ಶರೀರ, ಅದ್ಭುತವಾದ ಮನಸೆಳೆಯುವ ಠೇಂಕಾರದ ಶಾರೀರ, ಶಿಸ್ತುಬದ್ಧ ಬಣ್ಣಗಾರಿಕೆ, ಸೊಗಸಾಗಿ ಒಪ್ಪುವಂತೆ ಕಟ್ಟುವ ವೇಷಭೂಷಣಗಳು, ಸೊಗಸಾದ ಅಭಿನಯ ಕೌಶಲ್ಯ, ಅವರ್ಣನೀಯ ಆನಂದ ನೀಡುವ ಸುಂದರ ನೃತ್ಯಗಾರಿಕೆ, ಪ್ರತೀ ಪದದ ಮುಕ್ತಾಯದವರೆಗೂ ಕುಣಿಯುವ ರಂಗನಿಷ್ಠೆ, ಹದ ತಪ್ಪದ, ಅಸ್ಖಲಿತ ಮಾತುಗಳು, ತೂಕಬದ್ಧ, ಗಂಭೀರ ನಡೆಗಳು - ಇವೆಲ್ಲವೂ ಗೋವಿಂದ ಭಟ್ಟರನ್ನು ವರ್ಣಿಸಲೆಂದೇ ರೂಪುಗೊಂಡ ಪದಗುಚ್ಛಗಳೆನ್ನಬಹುದು. ಅಷ್ಟು ಸೊಗಸು ಅವರ ವೇಷ.
ಬಾಲಗೋಪಾಲ, ಸ್ತ್ರೀ ವೇಷದಿಂದ ತೊಡಗಿ ಬಣ್ಣದ ವೇಷದವರೆಗೆ ನಿರ್ವಹಿಸಬಲ್ಲ ಅಪಾರ ಪ್ರತಿಭೆಯ ಗೋವಿಂದ ಭಟ್ಟರು ಕಿರೀಟ ವೇಷದಲ್ಲಿ ಮೆರೆದವರು. ಭರತನಾಟ್ಯ, ಕಥಕ್ ಅಭ್ಯಸಿಸಿದ್ದರೂ, ಅದನ್ನು ಯಕ್ಷಗಾನದೊಳಕ್ಕೆ ತುರುಕಲಿಲ್ಲ, ಬದಲಾಗಿ ಯಕ್ಷಗಾನೀಯ ಚೌಕಟ್ಟಿನಲ್ಲಿ, ಯಕ್ಷಗಾನದ ಆಹಾರ್ಯಕ್ಕೆ ಅನುಗುಣವಾದ ಅಂಶಗಳನ್ನೇ ಯಕ್ಷಗಾನಕ್ಕೆ ಸೇರಿಸಿಕೊಂಡು, ಯಕ್ಷಗಾನದ ಬೆಳವಣಿಗೆಗೆ ಕಾರಣರಾದರು. ಅವರ ಪಾರಂಪರಿಕ ಹೆಜ್ಜೆಗಾರಿಕೆಯನ್ನು ನೋಡುವುದೇ ಚಂದ.
ಗಾಂಭೀರ್ಯದ ತೆರೆಯಾಚೆಗೆ ನಸು ವಿನೋದವೂ ಸುಳಿಯುತ್ತಿದ್ದ ಅವರ ಅರ್ಥಗಾರಿಕೆಯನ್ನು ಹಲವಾರು ಕ್ಯಾಸೆಟ್‌ಗಳಲ್ಲಿ ಆನಂದಿಸಬಹುದು.
ವೈಶಂಪಾಯನ ಸರೋವರದಿಂದ ಮೇಲೇಳುವ ಕೌರವ, ಶಿವನನ್ನು ನಿಂದಿಸುವ ದಕ್ಷ, ವಸಿಷ್ಠನ ಮುಂದೆ ಪ್ರತಿಜ್ಞಾಬದ್ಧನಾಗುವ ಕೌಶಿಕ, ಭೂದೇವಿಯನ್ನು ತುಡುಕುವ ಹಿರಣ್ಯಾಕ್ಷ, ದೀಕ್ಷೆಯನ್ನು ಬಿಸುಟೇಳುವ ಇಂದ್ರಜಿತು, ತ್ರಿಶಂಕುವನ್ನು ಸ್ವರ್ಗಕ್ಕೇರಿಸುವ ವಿಶ್ವಾಮಿತ್ರ, ಕೃಷ್ಣನನ್ನು ಎದುರಿಸುವ ಜಾಂಬವ, ರಾಕ್ಷಸಶೃಂಗಾರದ ಭೌಮಾಸುರ, ಕೃಷ್ಣನನ್ನು ಪಚಾರಿಸುವ ಮಾಗಧ,... ಹೀಗೆ ಹಲವು ವೇಷಗಳು ಕಣ್ಣೆದುರು ಕಾಣಿಸುತ್ತವೆ. ತಿದ್ದಿ ತೀಡಿದ ಅಚ್ಚುಕಟ್ಟಾದ ಕುಣಿತ, ಅಪ್ರತಿಮ ಅಭಿನಯ ಕೌಶಲ, ನಿಂತದ್ದೇ ಭಂಗಿ, ಕಾಲಿಟ್ಟದ್ದೇ ಹೆಜ್ಜೆ, ಅನನ್ಯ ಲಯಜ್ಞಾನ, ತರ್ಕಕ್ಕೆ ನಿಂತರೆ ಎದುರಾಳಿಯನ್ನು ಶರಶಯ್ಯೆಯಲ್ಲಿ ಮಲಗಿದ ಭೀಷ್ಮನಂತೆಸಗುವ ಮಾತಿನ ಕೌಶಲ, ಎಳ್ಳಿನಿತೂ ವಿಕಾರವಿಲ್ಲದ ಸರ್ವಾಂಗಸುಂದರ ವೇಷ. ಕಲಾನಿಷ್ಠೆ, ಪಾತ್ರನಿಷ್ಠೆ, ಮೇಳನಿಷ್ಠೆ ಮುಪ್ಪುರಿಗೊಂಡ ಮೂರ್ತರೂಪಕ್ಕೆ ಇನ್ನೊಂದು ಹೆಸರೇ ಕೆ.ಗೋವಿಂದ ಭಟ್ ಅಂತ ಹಿರಿಯ ಕಲಾವಿದ ತಾರಾನಾಥ ವರ್ಕಾಡಿ ಅವರು ತಮ್ಮ ಗುರುಗಳಾದ ಗೋವಿಂದ ಭಟ್ಟರ ಪಾತ್ರಪೋಷಣೆಯ ಮೇಲೆ ಬೆಳಕು ಚೆಲ್ಲಿದ್ದಾರೆ.
ನಿರಂತರ ಅಧ್ಯಯನಶೀಲತೆಯಿಂದ, ಕಲೋಪಾಸನೆಯಿಂದ ಪರಿಪಕ್ವಗೊಂಡ ಗೋವಿಂದ ಭಟ್ಟರಿದ್ದಾರೆ ಎಂದರೆ ಅವರ ವೇಷವನ್ನು ನೋಡಲೆಂದೇ ಬರುವವರ ಸಂಖ್ಯೆ ಬಹಳಷ್ಟಿತ್ತು. ಅಂಥ ಸ್ಟಾರ್ ಕಲಾವಿದರು ಸೂರಿಕುಮೇರು. ಧರ್ಮಸ್ಥಳ ಮೇಳವೊಂದರಲ್ಲೇ ಸುದೀರ್ಘ ಕಾಲ ಕಲಾಸೇವೆ ಮಾಡಿ, ನಿವೃತ್ತಿಯಾದ ಮೇಲೂ ಅವಕಾಶ ಸಿಕ್ಕಿದಾಗಲೆಲ್ಲ ಮೇಳಕ್ಕೆ ಹೋಗಿ ವೇಷ ಮಾಡುತ್ತಿದ್ದ ಅವರ ಕಲಾಪ್ರೀತಿ ಅನನ್ಯ.
ಜನ್ಮ ಇಸವಿಯ ಗೊಂದಲ
ಗೋವಿಂದ ಭಟ್ಟರ ಜನ್ಮ ವರ್ಷದ ಬಗ್ಗೆ ನಿಖರ ಮಾಹಿತಿ ಸಿಕ್ಕಿಲ್ಲ. ಅವರ ಎಪ್ಪತ್ತು ತಿರುಗಾಟಗಳು ಪುಸ್ತಕದಲ್ಲಿ 1938 ಮಾರ್ಚ್ 22 ಅಂತ ಜನ್ಮದಿನಾಂಕ ನಮೂದಾಗಿದ್ದರೆ, 1940 ಅಂತ ಮತ್ತೊಂದು ಮಾಹಿತಿ ಹೇಳುತ್ತದೆ. ಗೋವಿಂದ ಭಟ್ಟರೇ ಒಂದು ಕಡೆ, ತಾವು 11ನೇ ವರ್ಷಕ್ಕೆ ಯಕ್ಷಗಾನ ರಂಗಕ್ಕೆ (ಧರ್ಮಸ್ಥಳ ಮೇಳ) ಪ್ರವೇಶಿಸಿದೆ ಅಂತ ಹೇಳಿಕೊಂಡಿದ್ದಾರೆ. ಅದರ ಪ್ರಕಾರ 1940 ಸರಿ ಎನಿಸುತ್ತದೆ.
ಅನ್ವರ್ಥಕ ಹೆಸರು ಸವ್ಯಸಾಚಿ
ತಾರಾನಾಥ ಬಲ್ಯಾಯರು ತಮ್ಮ ಫೇಸ್‌ಬುಕ್ ಪೋಸ್ಟ್‌ನಲ್ಲಿ ಬರೆದಿದ್ದನ್ನು ಓದಿದರೆ, ಗೋವಿಂದ ಭಟ್ಟರ ಶ್ರೇಷ್ಠತೆಯ ಬಗೆಗೆ ಅರಿವಾಗುತ್ತದೆ. ಕಲಾವಿದ, ವೇಷಧಾರಿ, ಅರ್ಥಧಾರಿ, ಬರೆಹಗಾರ, ಪ್ರಸಂಗಕರ್ತ, ಕಲಾಗುರು,... ಹೀಗೆ ಸಾವಿರ ಬಾಹುಗಳ ವಿರಾಟ್ಪುರುಷನಂತೆ ಬಹುಮುಖದ ಪ್ರತಿಭೆಗಳಿಂದ ಸಾವಿರದ ಚೈತನ್ಯವಾಗಿ ರಂಗಸ್ಥಳದಲ್ಲಿ ಉಳಿಯುವವರು ಕೆ.ಗೋವಿಂದ ಭಟ್. ಈ ಸಂದರ್ಭದಲ್ಲಿ ಅವರೊಳಗಿನ ಕಲಾವಿದನನ್ನು ಗುರುತಿಸಿ ಬೆಳಗಿಸಿದ ಕಡತೋಕಾ ಮಂಜುನಾಥ ಭಾಗವತರನ್ನು ನೆನೆಯಲೇಬೇಕು.
ಕಡುಬಡತನದಿಂದ ಹೊಟ್ಟೆ ಹೊರೆಯಲು ಕಲಾಜೀವನಕ್ಕೆ ಕಾಲಿಟ್ಟು ಕಲಾಶ್ರೀಮಂತಿಕೆಯನ್ನು ಇನ್ನಿಲ್ಲದಂತೆ ಮೆರೆಸಿ ಅಗ್ನಿದಿವ್ಯದ ನಡುವೆ ನಡೆದ ಅವರ ಕಲಾಯಾನ ಬೆರಗು ಮೂಡಿಸುವಂಥದ್ದು. ಭಾವಹೀನ ಕಾಲವು ಕಲಾಸರಸ್ವತಿಯ ತಾರಹಾರದ ಒಂದೊಂದೇ ರನ್ನವಣಿಗಳನ್ನು ಕಳಚುತ್ತಿದೆ. ಕೆ.ಗೋವಿಂದ ಭಟ್ಟರಂತಹ ಕೊಹಿನೂರ್ ವಜ್ರವೂ ಕಳಚಿಹೋಯಿತು. ಯಕ್ಷಗಾನ ಹೋರಾಟವನ್ನು ಅಪೇಕ್ಷಿಸುವ ಕ್ಷಾತ್ರಕಲೆ. ಗುರುಗಳು ಇಲ್ಲಿ ಹೋರಾಡಿ ಗೆದ್ದಿದ್ದಾರೆ. ಚೌಕಿಯ ಒಳಗೆ, ಹೊರಗೆ, ರಂಗಸ್ಥಳದಲ್ಲಿ, ಸಮಾಜದಲ್ಲಿ ಕಲಾವಿದರು ಹೇಗಿರಬೇಕೆಂಬ ಮೇಲ್ಪಂಕ್ತಿಯನ್ನು ಹಾಕಿಕೊಟ್ಟಿದ್ದಾರೆ. ಇಂದು ಸಾಧನೆಯ ಕೊರತೆ ಬಹುವಾಗಿ ಕಾಡುವ ರಂಗಸ್ಥಳದ ಬದುಕಿನಲ್ಲಿ ಕೆ.ಗೋವಿಂದ ಭಟ್ಟರಂತಹ ಕಲಾವಿದರು ಮತ್ತೆ ಕಾಣಿಸಿಕೊಳ್ಳುವರೋ ಕಾದು ನೋಡಬೇಕು ಎಂದಿದ್ದಾರೆ ತಾರಾನಾಥರು.
ಇದಲ್ಲದೆ, ಚೆಂಡೆ-ಮದ್ದಳೆ ಹಾಗೂ ಹಾಡುಗಾರಿಕೆಯನ್ನೂ ಬಲ್ಲವರಾಗಿದ್ದರು ಗೋವಿಂದ ಭಟ್ಟರು. ಹರಿಕಥೆಯನ್ನೂ ಮಾಡುತ್ತಿದ್ದರು. ಹೀಗಾಗಿ ಸವ್ಯಸಾಚಿ ಎಂಬುದು ಉತ್ಪ್ರೇಕ್ಷೆಯಲ್ಲ. ಒಂದರ್ಥದಲ್ಲಿ ಗೋವಿಂದ ಭಟ್ಟರ ಯಕ್ಷೋಪಾಸನೆ ನ ಭೂತೋ, ನ ಭವಿಷ್ಯತಿ.
ಸುದೀರ್ಘ ಕಾಲ ತಿರುಗಾಟದ ಅವಧಿಯಲ್ಲಿ ಹ್ಯಾಲೋಜನ್ ಲೈಟಿಗೆ ಕಣ್ಣನ್ನು ಒಡ್ಡಿಕೊಂಡ ಪರಿಣಾಮ ಅವರ ಕಣ್ಣುಗಳ ಮೇಲೂ ಆಗಿತ್ತು. ಆದರೂ ಮೇಳ ಬಿಡದ ಅವರು, ಆಗಾಗ್ಗೆ ವೇಷ ಕಟ್ಟಿ ಆನಂದಾನುಭೂತಿ ಹೊಂದುತ್ತಿದ್ದರು. ಅದಕ್ಕೆ ತಕ್ಕಂತೆ, ನೀವು ವೇಷ ಮಾಡದಿದ್ದರೂ ಪರವಾಗಿಲ್ಲ, ಮೇಳಕ್ಕೆ ಬನ್ನಿ ಅಂತ ಧರ್ಮಸ್ಥಳ ಮೇಳದ ಯಜಮಾನರು ಪ್ರೀತಿಯಿಂದಲೇ ಹೇಳಿದ್ದರು. ನಿವೃತ್ತ ಜೀವನದಲ್ಲಿ ಮನೆಯಲ್ಲಿ ಸುಮ್ಮನೆ ಕೂರಲಾಗದು, ರಂಗ ಬಿಡಲು ಮನಸ್ಸಿಲ್ಲದ ಪರಿಸ್ಥಿತಿ ಅವರದಾಗಿತ್ತು.
ಕಷ್ಟಕರ ಜೀವನ
ಗೋವಿಂದ ಭಟ್ಟರ ತ್ರಾಸದಾಯಕ ಬದುಕಿನ ಆರಂಭದ ಬಗ್ಗೆ ಡಾ.ಪ್ರಭಾಕರ ಶಿಶಿಲರು ಲೇಖನವೊಂದರಲ್ಲಿ ಸಾಕಷ್ಟು ಮಾಹಿತಿ ಕಲೆಹಾಕಿದ್ದಾರೆ. 1940ರ ಮಾರ್ಚ್ 22ರಂದು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲದ ಬಳಿಯ ಕೋಡಪದವು ಕುಕ್ಕೆಮನೆಯಲ್ಲಿ ಕಡು ದಾರಿದ್ರ್ಯದ ಕುಟುಂಬ ಒಂದರಲ್ಲಿ ಭಟ್ಟರ ಜನನ. ಇವರ ಪೂರ್ವಿಕರು ಉತ್ತರಕನ್ನಡ ಜಿಲ್ಲೆಯ ಪ್ರಖ್ಯಾತ ಚೀಮುಳ್ಳು ಶಾಸ್ತ್ರಿಗಳ ವಂಶಕ್ಕೆ ಸೇರಿದವರು. ಬಡತನದಿಂದಾಗಿ ಪೂರ್ವಿಕರು ತೆಂಕಿನತ್ತ ವಲಸೆ ಬಂದು ಅಲ್ಲಲ್ಲಿ ನೆಲೆ ಕಂಡುಕೊಂಡರು. ಲಕ್ಷ್ಮೀ ಅಮ್ಮ ಮತ್ತು ಕಿನಿಲ ಶಂಕರನಾರಾಯಣ ಭಟ್ಟರ ಐವರು ಮಕ್ಕಳಲ್ಲಿ ಗೋವಿಂದ ಭಟ್ಟರು ಮೂರನೆಯವರು. ಗೋವಿಂದ ಭಟ್ಟರ ಬದುಕು ವಸ್ತುಶಃ ಕಣ್ಣೀರ ಕತೆಯಾಗಿತ್ತು. ಅವರ ಅಜ್ಜನ ಆಸ್ತಿಯನ್ನು ದಾಯಾದಿಗಳು ಕಬಳಿಸಿದ್ದರು. ಇದರ ಪರಿಣಾಮ ನೇರವಾಗಿ ಗೋವಿಂದರ ಬದುಕಿನ ಮೇಲೆ. ತುತ್ತು ಅನ್ನಕ್ಕಾಗಿ ಹೋಟೆಲ್ ಕ್ಲೀನರ್ ಆಗಿ, ಪೌರೋಹಿತ್ಯಕ್ಕೆ ಪರಿಕರ್ಮಿಯಾಗಿಯೂ ದುಡಿದಿದ್ದರು ಗೋವಿಂದ ಭಟ್. ಅಪ್ಪನಿಗೆ ಪಾರ್ಶ್ವವಾಯು ಬಡಿದಾಗ, ಅಮ್ಮನ ಮಾಂಗಲ್ಯ, ಕಿವಿಯೋಲೆಯನ್ನೂ ಮಾರಬೇಕಾಗಿಬಂದಿತ್ತು.
1951ರಲ್ಲಿ ಕುರಿಯ ವಿಠಲ ಶಾಸ್ತ್ರಿಗಳ ಮೂಲಕ ಧರ್ಮಸ್ಥಳ ಮೇಳ ಸೇರಿಕೊಂಡರು. ನಂತರ ಪೆರುವಡಿ ಸುಬ್ರಾಯ ಭಟ್ಟರ ನೇತೃತ್ವದ ಮೂಲ್ಕಿ ಮೇಳಕ್ಕೆ ಸೇರಿ, ಆ ಮೇಳದಲ್ಲಿದ್ದ ಸಣ್ಣ ತಿಮ್ಮಪ್ಪ ಎಂಬ ಅಸಾಮಾನ್ಯ ಕಲಾವಿದನಿಂದ ವೈವಿಧ್ಯಮಯ ಮುಖ ವರ್ಣಿಕೆ ಮತ್ತು ವಿವಿಧ ಪಾತ್ರಗಳ ಅಭಿವ್ಯಕ್ತಿ ವಿಧಾನ ಕಲಿತುಕೊಂಡರು. ಪುತ್ತೂರು ನಾರಾಯಣ ಹೆಗ್ಡೆಯವರಿಂದಲೂ ಸಾಕಷ್ಟು ಕಲಿತುಕೊಂಡರು. ಆ ಮಳೆಗಾಲದಲ್ಲಿ ಯಕ್ಷಗಾನದಲ್ಲಿ ಸುಪ್ರಸಿದ್ಧರಾಗಿದ್ದ ಬಲಿಪ ನಾರಾಯಣ ಭಾಗವತರಲ್ಲಿದ್ದು, ಪದ್ಯ ಮತ್ತು ಮಾತುಗಾರಿಕೆ ಕಲಿಯಲು ಅವಕಾಶವಾಯಿತು. ಮಳೆಗಾಲ ಕಳೆದ ಮೇಲೆ ಕಾಂದಿಲ್ಕರರ ನೇತೃತ್ವದಲ್ಲಿನ ಕೂಡ್ಲು ಮೇಳಕ್ಕೆ ಸೇರಿ, ಶೇಣಿ ಗೋಪಾಲಕೃಷ್ಣ ಭಟ್, ದಾಮೋದರ ಮಂಡೆಚ್ಚ, ದೊಡ್ಡ ಸಾಮಗ, ಕದ್ರಿ ವಿಷ್ಣು ಮುಂತಾದವರ ಸಾಹಚರ್ಯ ಪಡೆದು, ಸಾಕಷ್ಟು ಕಲಿಯುವ ಅವಕಾಶ ದೊರಕಿತು. ಬಳಿಕ ಸುರತ್ಕಲ್ ಮೇಳ, ನಂತರ 1955ರಲ್ಲಿ ಕುಂಡಾವು ಮೇಳ ಎಂದು ಕರೆಯಲ್ಪಡುವ ಇರಾ ಸೋಮನಾಥೇಶ್ವರ ಯಕ್ಷಗಾನ ಮಂಡಳಿಯನ್ನು ಸೇರಿಕೊಂಡು ಹದಿನಾಲ್ಕು ವರ್ಷಗಳ ಅಖಂಡ ತಿರುಗಾಟ ನಡೆಸಿದರು. ಆ ಮೇಳದ ಯಜಮಾನ ಕಲ್ಲಾಡಿ ಕೊರಗಪ್ಪ ಶೆಟ್ಟರು ಕಲಾವಿದರ ಬಗ್ಗೆ ಅಪಾರ ಗೌರವ ಹೊಂದಿದ್ದರು. ಅಲ್ಲಿ ವೀರಭದ್ರ ನಾಯಕ, ರಾಮದಾಸ ಸಾಮಗ, ಕುಂಬಳೆ ಸುಂದರರಾವ್ ಮುಂತಾದ ನುರಿತ ಕಲಾವಿದರ ಒಡನಾಟ.
ಕುಂಡಾವು ಮೇಳದಲ್ಲಿದ್ದಾಗಲೇ ಕನಕ ರೇಖೆ- ರತ್ನ ಕಂಕಣ ಎಂಬ ಪ್ರಸಂಗ ರಚಿಸಿದ್ದು, ಅದು 141 ಪ್ರಯೋಗಗಳನ್ನು ಕಂಡು ಯಶಸ್ವಿಯಾಯಿತು. ರಾಮದಾಸ ಸಾಮಗರ ಶಿಷ್ಯನಾಗಿ ಗೋವಿಂದ ಭಟ್ಟರು ತುಂಬಾ ಪ್ರಗತಿ ಸಾಧಿಸಿದರು. 1968ರಲ್ಲಿ ಭಟ್ಟರು ಧರ್ಮಸ್ಥಳ ಮೇಳಕ್ಕೆ ಸೇರಿಕೊಂಡು ಅಖಂಡ 50ಕ್ಕೂ ಹೆಚ್ಚು ವರ್ಷಗಳ ತಿರುಗಾಟ ನಡೆಸಿದರು. ಇದರ ನಡುವೆ 1966ರಲ್ಲಿ ಸಾವಿತ್ರಿ ಎಂಬ ದೂರದ ಸಂಬಂಧಿಯೊಡನೆ ಗೋವಿಂದ ಭಟ್ಟರ ವಿವಾಹವಾಯಿತು.
ಧರ್ಮಸ್ಥಳ ಮೇಳದಲ್ಲಿ ಘಟಾನುಘಟಿಗಳಾದ ಕಡತೋಕ ಮಂಜುನಾಥ ಭಾಗವತ, ಚಿಪ್ಪಾರು ಕೃಷ್ಣಯ್ಯ ಬಳ್ಳಾಳ್ ಮತ್ತು ಮಾಂಬಾಡಿ ಸುಬ್ರಹ್ಮಣ್ಯ ಭಟ್ಟರು, ವಿಟ್ಲ ಗೋಪಾಲಕೃಷ್ಣ ಜೋಷಿ, ಕುಂಬಳೆ ಸುಂದರ ರಾವ್, ಪುತ್ತೂರು ನಾರಾಯಣ ಹೆಗ್ಡೆ, ಎಂಪೆಕಟ್ಟೆ ರಾಮಯ್ಯ ರೈ, ಪಾತಾಳ ವೆಂಕಟ್ರಮಣ ಭಟ್, ಕಡಬ ಸಾಂತಪ್ಪ, ಮುಳಿಯ ಭೀಮ ಭಟ್, ಶ್ರೀನಿವಾಸ ಆಚಾರ್ಯ, ಚಂದ್ರಗಿರಿ ಅಂಬು, ಪಕಳಕುಂಜ ಕೃಷ್ಣ ನಾಯ್ಕ, ಪುತ್ತೂರು ಶ್ರೀಧರ ಭಂಡಾರಿ, ಉಬರಡ್ಕ ಉಮೇಶ್ ಶೆಟ್ಟಿ ಮುಂತಾದವರಿದ್ದರು.
ಭಟ್ಟರು ಕುಂಡಾವು ಮೇಳದಲ್ಲಿದ್ದಾಗ ಸ್ಪರ್ಧೆಯ ಜೋಡಾಟ ಏರ್ಪಡುತ್ತಿತ್ತು. ವೀರರಸ ಪ್ರಧಾನ ಪ್ರಸಂಗಗಳಲ್ಲಿ ಆ ಕಾಲದ ಪ್ರಸಿದ್ಧ ಕಲಾವಿದರಾದ ಅಳಿಕೆ ರಾಮಯ್ಯ ರೈ, ಕೇದಗಡಿ ಗುಡ್ಡಪ್ಪ ಗೌಡ, ಕದ್ರಿ ವಿಷ್ಣು, ಪಡ್ರೆ ಚಂದು, ಅಪ್ಪಯ್ಯ ಮಣಿಯಾಣಿ, ಅರುವ ಕೊರಗಪ್ಪ ಶೆಟ್ಟಿ, ಕೋಳ್ಯೂರು ರಾಮಚಂದ್ರ ರಾವ್, ಕ್ರಿಶ್ಚಿಯನ್ ಬಾಬು, ಹೊಸಹಿತ್ಲು ಮಹಾಲಿಂಗ ಭಟ್- ಮುಂತಾದವರೆದುರು ಸರಿ ಮಿಗಿಲೆನಿಸಿ ಎಲ್ಲರಿಂದಲೂ ಹೊಗಳಿಸಿಕೊಂಡವರು ಭಟ್ಟರು.
ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಯಕ್ಷಗಾನ ಗುರುಗಳಾಗಿಯೂ ಹಲವು ಶಿಷ್ಯರನ್ನು ತಯಾರಿಸಿದ್ದ ಗೋವಿಂದ ಭಟ್ಟರು, ತೆಂಕು ತಿಟ್ಟಿನಲ್ಲಿ ನೃತ್ಯ ವೈವಿಧ್ಯವಿಲ್ಲ ಎಂಬ ಅಭಿಪ್ರಾಯವನ್ನು ಸುಳ್ಳು ಮಾಡಲು ಪಣತೊಟ್ಟವರು. ನೆಡ್ಲೆ ನರಸಿಂಹ ಭಟ್, ಚಿಪ್ಪಾರು ಕೃಷ್ಣಯ್ಯ ಬಲ್ಲಾಳ್ ಮತ್ತು ಕರ್ಗಲ್ಲು ವಿಶ್ವೇಶ್ವರ ಭಟ್ಟರೊಡಗೂಡಿ ತೆಂಕುತಿಟ್ಟು ಯಕ್ಷಗಾನ ಕಲಿಕೆಗೆ ಬಾಯಿತಾಳವನ್ನು ರೂಪಿಸಿದರು. ಮೌಖಿಕ ಸಂಪ್ರದಾಯವಾಗಿ ಬೆಳೆದು ಬಂದಿದ್ದ ಯಕ್ಷಗಾನಕ್ಕೆ ಅಕ್ಷರದ ರೂಪು ಕೊಡುವ ಪ್ರಯತ್ನದಲ್ಲಿ, ಪ್ರತಿಯೊಂದು ತಾಳಕ್ಕೂ 10-12 ವಿಧದ ಕುಣಿತದ ಆವಿಷ್ಕಾರ ಮಾಡಿಕೊಟ್ಟರು. ಏಕತಾಳಕ್ಕೆ ದಾಖಲೆಯ 24 ಕುಣಿತಗಳನ್ನೂ ಮಾಡಿ ತೋರಿಸಿದರು.
1985ರಲ್ಲಿ ಉಡುಪಿಯಲ್ಲಿ ಡಾ. ಶಿವರಾಮ ಕಾರಂತರ ಅಧ್ಯಕ್ಷತೆಯಲ್ಲಿ ನಡೆದ ಯಕ್ಷಗಾನ ಪ್ರಾತ್ಯಕ್ಷಿಕೆಯಲ್ಲಿ ಇದನ್ನು ಪ್ರದರ್ಶಿಸಿ, ಕಾರಂತರೂ ತೆಂಕುತಿಟ್ಟಿನಲ್ಲಿ ಇಷ್ಟೂ ನರ್ತನ ವೈವಿಧ್ಯ ಇದೆಯೇ ಎಂದು ಅಚ್ಚರಿಪಟ್ಟಿದ್ದರು. ಜಪಾನ್, ಅಬುಧಾಬಿ, ಬಹ್ರೈನ್, ದುಬಾಯಿಗಳಲ್ಲಿ ಯಕ್ಷಗಾನ ಯಾತ್ರೆಯಲ್ಲಿ ಭಾಗಿಯಾಗಿದ್ದ ಗೋವಿಂದ ಭಟ್ಟರು ದೆಹಲಿಯಲ್ಲಿ ರಾಷ್ಟ್ರಪತಿಯವರೆದುರೂ ಯಕ್ಷಗಾನ ಪ್ರದರ್ಶಿಸಿದ್ದರು.
ಗೋವಿಂದ ಭಟ್ಟರನ್ನು ಕಳೆದುಕೊಂಡು ಯಕ್ಷಗಾನ ಕ್ಷೇತ್ರವು ಬಡವಾಗಿದೆ. ಅಧ್ಯಯನಶೀಲರಾಗಿ ತೆಂಕುತಿಟ್ಟು ಯಕ್ಷಗಾನದ ಆಹಾರ್ಯ, ವಾಚಿಕ, ನಾಟ್ಯಕ್ಕೆ ವಿಶೇಷ ಹೊಳಪು ನೀಡಿದ ಪುತ್ರನನ್ನು ಯಕ್ಷಗಾನ ರಂಗವು ಕಳೆದುಕೊಂಡಿದೆ. ಅಗಲಿದ ಚೇತನಕ್ಕೆ ಸದ್ಗತಿ ದೊರೆಯಲಿ.



