![]() |
| ಸಾಂದರ್ಭಿಕ ಚಿತ್ರ |
ನಿಜವಾಗಿಯೂ ಯಕ್ಷಗಾನವನ್ನು ಆಸ್ವಾದಿಸುವ ಪರವಾಗಿ ಧ್ವನಿಯೆತ್ತುವವರು ಯಾರೂ ಇಲ್ಲದಾಗಿ ಹೋಯಿತು.
ಯಕ್ಷಗಾನ.ಇನ್ ಅಪ್‌ಡೇಟ್ಸ್ ಪಡೆಯಲು ಫೇಸ್‌ಬುಕ್ | ಟ್ವಿಟರ್ | ಯೂಟ್ಯೂಬ್ | ಇನ್‌ಸ್ಟಾಗ್ರಾಂ ಫಾಲೋ ಮಾಡಿ.
ಒಂದು ಸಣ್ಣ ಉದಾಹರಣೆಯ ಮೂಲಕ ವಿಷಯದ ಗಂಭೀರತೆ ಅರಿಯೋಣ. ಮದ್ಯಸೇವನೆಯು ವ್ಯಕ್ತಿಯ ಆರೋಗ್ಯಕ್ಕೆ ಮಾತ್ರವೇ ಅಲ್ಲ, ಕುಟುಂಬದ, ಸಮಾಜದ ಆರೋಗ್ಯಕ್ಕೂ ಹಾನಿಕರ. ಹಾಗಂತ, ಕುಡಿತವನ್ನು ನಿಲ್ಲಿಸಲಾಗುತ್ತದೆಯೇ? ಕುಡಿತವು ಹಾಳು ಅಂತ ಶಾಪ ಹಾಕುವವರೂ ಇರುತ್ತಾರೆ, ಕುಡಿತದಿಂದಲೇ ನಮ್ಮ ಜೀವನ, ಕುಡಿತ ಒಳ್ಳೆಯದು ಎನ್ನುವವರೂ ಇದ್ದಾರೆ; ಕೆಲವೆಡೆ ಮದ್ಯವನ್ನೇ ಪ್ರಸಾದ ರೂಪದಲ್ಲಿ ಸೇವಿಸುತ್ತಾರೆ, ಅರ್ಪಿಸುತ್ತಾರೆ ಅಂತಲೂ, ನಾವು ಕುಡಿದರೆ ನಿಂಗೇನು ಅಂತ ಪ್ರಶ್ನಿಸುವವರೂ ಇರುತ್ತಾರೆ. ಇಲ್ಲಿ ಗಮನಿಸಬೇಕಾದ ವಿಚಾರವೆಂದರೆ, ನಮಗೆ ಒಳ್ಳೆಯದು ಅನ್ನಿಸಿದ್ದು, ಇನ್ನೊಬ್ಬರಿಗೆ ಕೆಟ್ಟದ್ದು ಆಗುತ್ತದೆ. ಬೇರೊಬ್ಬರಿಗೆ ಕೆಟ್ಟದ್ದು ಅನ್ನಿಸುವುದು ನಮಗೆ ಒಳ್ಳೆಯದು ಅನ್ನಿಸುತ್ತದೆ. ವಿಷಯ ಇಷ್ಟೆ. ಅವರವರ ಭಾವ.
ಆದರೆ ಇದನ್ನು ಹೀಗೇ ಸುಮ್ಮನೇ ಬಿಡುವಂತಿಲ್ಲ. ಕುಡಿತ ಮಿತಿ ಮೀರಿದರೆ ಮಾತ್ರ ಅದರಿಂದ ದೊಡ್ಡ ಸಮಸ್ಯೆ ಎದುರಾಗುವುದು. ಯಾವುದೇ ಆಗಲಿ, ಮಿತಿಯಲ್ಲಿದ್ದರೆ ಅದು ದೇಹದ, ದೇಶದ ಆರೋಗ್ಯಕ್ಕೆ ಒಳ್ಳೆಯದು.
ಹಾಗೆಯೇ ಈ ಶಿಳ್ಳೆ-ಚಪ್ಪಾಳೆಗಳು ಕೂಡ. ಕಲಾವಿದನಿಗೆ ಹುರುಪು ನೀಡುತ್ತದೆ ಎಂಬ ವಾದ ಹೌದು. ತಪ್ಪಿಲ್ಲ ಅದರಲ್ಲಿ. ಆದರೆ, ಮಿತಿ ಮೀರಿದರೆ? ಯಕ್ಷಗಾನ ಪ್ರದರ್ಶನಕ್ಕೇ ಅಡ್ಡಿಯಾದರೆ? ಯಕ್ಷಗಾನ ಆಸ್ವಾದಿಸಲು ಬಂದ ನಿಜವಾದ ಪ್ರೇಕ್ಷಕನನ್ನು ಕಾಪಾಡುವವರು ಯಾರು? ಆತನ ಪರವಾಗಿ ಧ್ವನಿಯೆತ್ತುವವರು ಯಾರು?
ಯಕ್ಷಗಾನದ ವಿಷಯದಲ್ಲಿ ನಾವು ಹೆಚ್ಚು ಆಸ್ಥೆಯಿಂದ ನಮ್ಮದೇ ಮಣ್ಣಿನ ಕಲೆಯ ಬಗ್ಗೆ ತುಂಬ ಹೆಮ್ಮೆ ಪಡುವ ವಿಚಾರ ಒಂದಿದೆ. ಅದೆಂದರೆ, ಯಕ್ಷಗಾನವೊಂದು ಇಡೀ ಪ್ರಪಂಚದಲ್ಲೇ ಸರಿಸಾಟಿಯಿಲ್ಲದ ಶ್ರೇಷ್ಠ ಕಲೆ. ಇಲ್ಲಿ, ಗಾಯನ ಇದೆ, ವಾದನ ಇದೆ, ತಾಳ-ಲಯಗಳಿವೆ, ನಾಟ್ಯ ಇದೆ, ವೇಷಭೂಷಣ ಇದೆ, ಅಭಿನಯ ಇದೆ, ಕಣ್ಣುಗಳ-ಹುಬ್ಬುಗಳ ಚಲನೆಯಲ್ಲೇ ಕಥೆಯನ್ನು ಕೇಳ/ನೋಡಬಹುದು. ಮಾತಿನಷ್ಟೇ ಮೌನದಿಂದಲೂ ಬಿಂಬಿತವಾಗುವ ಸನ್ನಿವೇಶದ ಭಾವವನ್ನು ಅರ್ಥೈಸಿಕೊಳ್ಳಬಹುದು. ಪಾತ್ರಧಾರಿಯೊಬ್ಬ ಹೇಳಿದ್ದಕ್ಕೆ ಎದುರಿನ ವೇಷಧಾರಿಯೊಬ್ಬ ಟಕ್ಕನೇ ಉತ್ತರ ಕೊಡುವ ಆಶುಸಾಹಿತ್ಯಕ್ಕೆ ಹೆಸರಾಗಿರುವ ಅರ್ಥಗಾರಿಕೆ ಇಲ್ಲಿದೆ. ಇವೆಲ್ಲ ಯಾವುವೂ ಸ್ಕ್ರಿಪ್ಟೆಡ್ ಅಲ್ಲ. ಕಲಾವಿದರ ಅನುಭವ, ಅಧ್ಯಯನದಿಂದ ಪ್ರಾಪ್ತಿಯಾದ ವರ್ಣರಂಜಿತ ಗಾಯನ-ವಾದನಸೌಂದರ್ಯವುಳ್ಳ ನಾಟ್ಯಾಭಿನಯಭರಿತ ಮಾತಿನ ಲೋಕವಿದು. ಇಲ್ಲಿ ಪ್ರತಿಯೊಂದು ಕ್ಷಣವೂ ಆಸ್ವಾದನೆಗೆ ಯೋಗ್ಯವಾದದ್ದು. ಕಲಾವಿದರೆಲ್ಲರೂ ಪರಕಾಯಪ್ರವೇಶ ಮಾಡುವಷ್ಟು ಆಸ್ಥೆಯಿಂದ, ಶ್ರದ್ಧೆಯಿಂದ, ನಿಷ್ಠೆಯಿಂದ, ಏಕಾಗ್ರತೆಯಿಂದ ತಮ್ಮ ನಾಟ್ಯಭಾವಾಭಿನಯಸಾಮರ್ಥ್ಯವನ್ನು ಪ್ರೇಕ್ಷಕರಿಗೆ ಉಣಬಡಿಸುತ್ತಾರೆ. ಪ್ರೇಕ್ಷಕನೂ ಅಷ್ಟೇ, ಅಷ್ಟೇ ಆಸ್ಥೆಯಿಂದ, ಶ್ರದ್ಧೆಯಿಂದ, ಏಕಾಗ್ರತೆಯಿಂದ ಇವನ್ನೆಲ್ಲ ವೀಕ್ಷಿಸಿ, ತಮ್ಮೆಲ್ಲ ನೋವುಗಳನ್ನು ಮರೆತು, ಈ ಅಲೌಕಿಕ ಲೋಕದಲ್ಲಿ ತಾವೂ ಒಂದಾಗಿಬಿಟ್ಟಿರುತ್ತಾರೆ.
ಒಂದು ತೀರಾ ದುಃಖರಸದ ಪದ್ಯ, ಭಾಗವತರಂತೂ ಕರುಣರಸದಿಂದ ಅತ್ಯದ್ಭುತವಾಗಿ ಹಾಡಿ ಮುಗಿಸುತ್ತಾರೆ - ಅದೋ ಶಿಳ್ಳೆ-ಚಪ್ಪಾಳೆಗಳ ಸುರಿಮಳೆಯಾದರೆ ಹೇಗಿರುತ್ತದೆ? ಧುತ್ತನೇ ಆ ಲೋಕದಿಂದ ವಾಸ್ತವ ಜಗತ್ತಿಗೆ ಪ್ರೇಕ್ಷಕ ಇಳಿಯುತ್ತಾನೆ, ಜಗದ ಜಂಜಡದಲ್ಲಿ ಮತ್ತೆ ಮುಳುಗುವಂತಾಗುತ್ತಾನೆ. ಏಕಾಗ್ರಚಿತ್ತನಾಗಿ ಕಲಾ ಪ್ರದರ್ಶನವನ್ನು ವೀಕ್ಷಿಸಲು, ಆನಂದಿಸಲು, ಆಸ್ವಾದಿಸಲು, ತಿಳಿದುಕೊಳ್ಳಲು ಬಂದಿರುವ ಪ್ರೇಕ್ಷಕನಿಗೆ ರಸಭಂಗವಾಯಿತು. ಯಕ್ಷಗಾನದ ಮೇಲಿನ ಅತೀವ ಶ್ರದ್ಧೆ, ಪ್ರೀತಿಯಿಂದ ಬಂದಿರುವ ಪ್ರೇಕ್ಷಕನಿಗೆ, ಅದನ್ನು ಅಸ್ವಾದಿಸಲು ಬಿಡದೆ, ಪದೇ ಪದೇ ಪೀಪಿ ಊದುವುದು, ಶೀಟಿ ಹಾಕುವುದು, ಚಪ್ಪಾಳೆ ತಟ್ಟುವುದು - ಈ ಎಲ್ಲ ಅಪಕರ್ಷಣೆಗಳಿಂದ ಕಲೆಯನ್ನು ಆಸ್ವಾದಿಸುವುದು ಹೇಗೆ ಸಾಧ್ಯ? ಯಕ್ಷಗಾನದ ಕಲಾ ಶ್ರೀಮಂತಿಕೆಯುಳ್ಳ ಕಲೆಯ ಇಂಚಿಂಚನ್ನೂ ಆನಂದಿಸಲು ಬಂದವನಿಗೆ ಹೇಗಾಗಬೇಡ?
ಆದರೆ ಯಕ್ಷಗಾನ ಆಸ್ವಾದಿಸುವ ವಿಧಾನವೇ ವಿಭಿನ್ನ...
ಯಕ್ಷಗಾನದ ವಾಚಿಕಾಭಿನಯ, ಆಂಗಿಕಾಭಿನಯ, ಆಹಾರ್ಯ (ವೇಷ ಭೂಷಣ), ಸಾತ್ತ್ವಿಕಾಭಿನಯಗಳ ಜೊತೆಗೆ, ಚೆಂಡೆ-ಮದ್ದಳೆಯ ನುಡಿತ, ಪದ್ಯದ ಸಾಹಿತ್ಯ, ವಾಚಿಕದ ನಡುವೆ ಅಂದರೆ ವೇಷಧಾರಿಗಳು ಅರ್ಥದ ನಡುವೆ ನೀಡುವ Pause, ನಿಟ್ಟುಸಿರು, ಮೆಲ್ಲುಸಿರು, ಭಾಗವತರು ಸಂದರ್ಭಕ್ಕೆ ತಕ್ಕಂತೆ ಬಳಸುವ ಪದ್ಯದ ಶೈಲಿ (ಮಟ್ಟು), ವಿಶೇಷವಾಗಿ ಕರುಣರಸದಲ್ಲಿ ಹಿಮ್ಮೇಳ ಮುಮ್ಮೇಳದ ಕಲಾವಿದರೆಲ್ಲರೂ ಏಕೋಮನಸ್ಸಿನಿಂದ, ಶ್ರದ್ಧೆಯಿಂದ ಒಂದು ಕಥೆಯನ್ನು ಕಟ್ಟಿಕೊಡುವ ಪರಿ, ಇದನ್ನು ಪ್ರೇಕ್ಷಕರು ಏಕಾಗ್ರಚಿತ್ತದಿಂದ ಆಲಿಸಿ, ಪುಟ್ಟ ರಂಗಸ್ಥಳದ ಎದುರು ಕೂತು, ತಾವೂ ಆ ಅಲೌಕಿಕ ಲೋಕಕ್ಕೆ ಪ್ರವೇಶಿಸುವ ಆಸ್ವಾದನೆ... ಒಂದು ಕ್ಷಣ ಸ್ವರ್ಗಲೋಕದಲ್ಲಿ, ಮತ್ತೊಂದು ಕ್ಷಣ ರಾಕ್ಷಸಲೋಕದಲ್ಲಿ ಪ್ರೇಕ್ಷಕರು ಕೂಡ ಏಕಚಿತ್ತದಿಂದ ತೇಲಾಡುವುದು ಸಾಧ್ಯ ಹೇಗೆಂದರೆ, ರಂಗದ ಮೇಲಿನ ಪ್ರತಿಯೊಂದು ಚಲನೆಯನ್ನೂ ಆತ ಸ್ಪಷ್ಟವಾಗಿ ಕೇಳಿಸಿಕೊಂಡರೆ. ಇಲ್ಲಿ, ಪಕ್ಕದಲ್ಲೇ ಬ್ಯಾಂಡು ವಾದ್ಯ ಊದಿದರೆ, ಗರ್ನಾಲ್-ಸುಡುಮದ್ದು ಸಿಡಿಸಿದರೆ, ಪೀಪಿ ಊದಿದರೆ ಇಲ್ಲಿ ರಸಭಂಗ ಆಗುತ್ತದೆ. ಪ್ರೇಕ್ಷಕ ದಿಢೀರನೇ ಕಲ್ಪನಾಲೋಕದಿಂದ ವಾಸ್ತವಲೋಕಕ್ಕೆ ಬರುತ್ತಾನೆ. ನಿಜವಾದ ಪ್ರೇಕ್ಷಕರಿಗೆ ಕಲೆಯನ್ನು ಆಸ್ವಾದಿಸಲು ತೊಂದರೆಯಾಗುತ್ತದೆ. ರಂಗದ ಸೌಂದರ್ಯ ಕೆಡುತ್ತದೆ, ಆತನ ಏಕಾಗ್ರತೆಗೆ ಭಂಗವಾಯಿತು, ಭಾವಲೋಕದಲ್ಲಿದ್ದ ಕಲಾವಿದರ ಏಕಾಗ್ರತೆಗೂ ಭಂಗವಾಗಿ ಪ್ರದರ್ಶನದ ಮುಂದಿನ ಭಾಗದಲ್ಲಿ ಅವರಿಂದ ಉತ್ತಮ ಪ್ರಸ್ತುತಿಯನ್ನು ನಿರೀಕ್ಷಿಸಲಾಗದು.
ಯಕ್ಷಗಾನವನ್ನು ಪರಿಪೂರ್ಣ ಕಲೆ ಅಂತ ಯಾಕೆ ಕರೆಯುತ್ತಾರೆಂದರೆ, ಅದರಲ್ಲಿರುವ ಕಲಾಶ್ರೀಮಂತಿಕೆಗೆ. ಅದು ಜನರ ಮನಸ್ಸನ್ನು ಹಿಡಿದಿಟ್ಟು, ದಿನದ ಜಂಜಡ ಮರೆಯುವಂತೆ, ಕೆಟ್ಟದ್ದನ್ನು ಮಾಡಿದರೆ ಶಿಕ್ಷೆ ಕಟ್ಟಿಟ್ಟ ಬುತ್ತಿ ಎಂಬುದನ್ನು ಅರಿಯುವಂತೆ, ಗುರುಗಳಿಗೆ, ಹಿರಿಯರಿಗೆ ಗೌರವಿಸಬೇಕು, ದೇವರ ಬಗ್ಗೆ ಶ್ರದ್ಧಾ ಭಕ್ತಿ ಮತ್ತು ಭಯವೂ ಇರಬೇಕು, ಒಳ್ಳೆಯದು ಮಾಡಿದರೆ ಒಳ್ಳೆಯದೇ ಸಿಗುತ್ತದೆ - ಇವೆಲ್ಲವನ್ನೂ ಬೋಧಿಸುವ ವಿಶಿಷ್ಟ ರಂಗ ಕಲೆ ಯಕ್ಷಗಾನ. ರಂಗಸ್ಥಳದೆದುರು ಕುಳಿತ ಪುಟ್ಟ ಮಗುವೊಂದು ಕೂಡ ಖುಷಿಯಿಂದ ತಾಳಕ್ಕೆ ಸರಿಯಾಗಿ ಕೈಕಾಲು ಆಡಿಸುತ್ತದೆ (ಗಮನಿಸಿ, ಸದ್ದು ಮಾಡದೆಯೇ) ಎಂದರೆ ಯಕ್ಷಗಾನ ಒದಗಿಸುವ ಆಕರ್ಷಣೆ ಎಂಥದ್ದು ಅಂತ ತಿಳಿಯಬಹುದು. ಇಂಥ ಯಕ್ಷಗಾನದಲ್ಲಿ ರಸಾಭಾಸಕ್ಕೆ ಆಸ್ಪದ ನೀಡುವ ಶಿಳ್ಳೆ ಚಪ್ಪಾಳೆಗಳು, ಮಿತಿಯಲ್ಲಿದ್ದರಷ್ಟೇ ಚೆಂದ ಚೆಂದ. ಮೊನ್ನೆ ಆದಂತೆ, ಪ್ರದರ್ಶನದ ಮಧ್ಯೆ ಮಧ್ಯೆ ಪದೇ ಊದುತ್ತಾ ಇದ್ದರೆ, ಪ್ರೇಕ್ಷಕರಿಗೂ, ಕಲಾವಿದರಿಗೂ ರಸಭಂಗ.
ಮಿತಿ ಇರಲಿ...
ಮೊದಲನೆಯದಾಗಿ, ಚಪ್ಪಾಳೆ, ಶಿಳ್ಳು ಇವ್ಯಾವುವೂ ತಪ್ಪಲ್ಲ. ಸಿನಿಮಾದಲ್ಲಿ ನಾಯಕ/ನಾಯಕಿ ಎಂಟ್ರಿ ಕೊಡುವಾಗ, ಒಳ್ಳೆಯ ಹಾಡು ಹಾಕಿದಾಗ, ಸ್ಕ್ರಿಪ್ಟ್ ಮಾಡಿದ ಡೈಲಾಗ್ ಅನ್ನು ಪರದೆಯಲ್ಲಿ ಉದುರಿಸಿದಾಗ... ಇವೆಲ್ಲಕ್ಕೂ ಮೇರೆ ಮೀರಿ ಶಿಳ್ಳು ಚಪ್ಪಾಳೆಗಳನ್ನು ಕೇಳಿದ್ದೇವೆ. ಸಿನಿಮಾಗಳು ಕಣ್ಣಿಗೆ ಹಬ್ಬ ಅಷ್ಟೇ, ಅಲ್ಲಿ ಎಷ್ಟೇ ಗಲಾಟೆ ಮಾಡಿದರೂ, ಜನ ಬರುವುದು ತಾವು ಪೂಜಿಸುವ ನಾಯಕ, ನಾಯಕಿ ಇರುತ್ತಾರೆಂಬ ಕಾರಣಕ್ಕೆ. ಅದು ಅವರ ಅಭಿಮಾನ, ಹೀಗಾಗಿ ಎಷ್ಟು ಬೇಕಾದರೂ ಶಿಳ್ಳೆ ಚಪ್ಪಾಳೆ ಹಾಕಿದರೂ ಅದು ತಪ್ಪಾಗದು. ಅಂತೆಯೇ ಕಂಬಳದಲ್ಲಿ, ಕೋಳಿ ಕಟ್ಟದಲ್ಲಿಯೋ ಉತ್ಸಾಹಕ್ಕೆ, ಪ್ರಚೋದನೆಗೆ, ವಿಜಯಕ್ಕೆಲ್ಲ ಶಿಳ್ಳೆ ಊದುತ್ತಾರೆ. ಅಲ್ಲಿ ಕಲಾಸ್ವಾದನೆಗೆ ಅಡ್ಡಿಯಾಗುವುದಿಲ್ಲ.
ಯಕ್ಷಗಾನದ ವಿಷಯದಲ್ಲಿ ಚಪ್ಪಾಳೆ ವಿಷಯಕ್ಕೆ ಬಂದರೆ, ಕಲಾವಿದರು ಪ್ರತ್ಯುತ್ಪನ್ನಮತಿಯಿಂದ ಒಳ್ಳೆಯ ವಾಕ್ಯ ಹೇಳಿದರೆ, ಭಾಗವತರು ಒಳ್ಳೆಯದಾಗಿ ಹಾಡು ಹಾಡಿದರೆ, ಕಲಾವಿದ ಧಿಗಿಣ ಅಥವಾ ಮಂಡಿಯೂರಿ ತಿರುಗಿದರೆ, ಇಲ್ಲೆಲ್ಲ ಶಿಳ್ಳೆ, ಚಪ್ಪಾಳೆಯ ಪ್ರೋತ್ಸಾಹ - ಅದು ಕೂಡ ಕ್ಷಣ ಕಾಲಕ್ಕೆ ಬರುತ್ತಿತ್ತು. ಅದೂ ತಪ್ಪಲ್ಲ. ಅಥವಾ ಪ್ರಸಿದ್ಧಿ ಪಡೆದ ಭಾಗವತರು ರಂಗಕ್ಕೆ ಕಾಲಿಡುವಾಗ ಜೋರಾದ ಚಪ್ಪಾಳೆ, ಶಿಳ್ಳೆ. ಇವೆಲ್ಲಕ್ಕೂ ಒಂದು ಮಿತಿ ಅಂತ ಇರುತ್ತಿತ್ತು. ಆ ಮಿತಿಯಲ್ಲಿದ್ದರೆ ಎಲ್ಲವೂ ಚಂದವೇ.
ನಾನು ಹಿಂದಿನಿಂದಲೂ ಬಡಗು ಹಾಗೂ ತೆಂಕಿನ ಸಾಕಷ್ಟು ಯಕ್ಷಗಾನ ಪ್ರದರ್ಶನಗಳನ್ನು ನೋಡುತ್ತಾ ಬಂದವ. ಬಡಗಿನಲ್ಲಿ ಶಿಳ್ಳೆ ಚಪ್ಪಾಳೆಗಳು ಸಾಮಾನ್ಯ ಎಂಬಂತಾಗಿಬಿಟ್ಟಿವೆ. ಅದೇ ಕಾರಣಕ್ಕೆ, ಅದು ಸಹಜ, ಸಾಮಾನ್ಯವಲ್ಲವೇ, ಹೊಸತೇನೂ ಅಲ್ಲ ಎಂಬ ಭಾವನೆ ಬಡಗಿನ ಯಕ್ಷಗಾನ ರಂಗದಲ್ಲಿ ಮೂಡಿದೆ. ಇದಕ್ಕಾಗಿಯೇ ಆ ಕಡೆಯಿಂದ ಒಂದಿಷ್ಟು ರೋಷಾವೇಶ ಹೆಚ್ಚಾಗಿಯೇ ಕೇಳಿಬಂದಿದೆ. ತೆಂಕಿನ ಭಾಗದಲ್ಲಿ ಹಾಗಿಲ್ಲ. ಇಲ್ಲಿ ಶಿಳ್ಳೆ ಚಪ್ಪಾಳೆಗಳು ಬಡಗಿಗೆ ಹೋಲಿಸಿದರೆ ಕಡಿಮೆ. ತೀರಾ ಇತ್ತೀಚೆಗೆ ಶಿಳ್ಳೆ ಚಪ್ಪಾಳೆಗಳು ಕೇಳಿಬರತೊಡಗಿವೆಯಷ್ಟೆ.
ತೆಂಕಾಗಲೀ, ಬಡಗಾಗಲೀ, ಯಾವುದೇ ಪ್ರೇಕ್ಷಕನ ಅತ್ಯಂತ ಮಹತ್ತರ ಜವಾಬ್ದಾರಿ ಎಂದರೆ, ಒಂದೇಸೂತ್ರ - ತನ್ನಿಂದಾಗಿ ಇತರ ಪ್ರೇಕ್ಷಕರಿಗೆ, ಕಲೆಗೆ ಮತ್ತು ಕಲಾವಿದರಿಗೆ ಒಂದಿನಿತೂ ರಸಭಂಗವಾಗದಂತೆ ನೋಡಿಕೊಳ್ಳುವುದು. ಈ ಜವಾಬ್ದಾರಿ ನಿಭಾಯಿಸುವ ಪ್ರೇಕ್ಷಕನು ಕಲೆಯನ್ನು ಸಂಪೂರ್ಣವಾಗಿ ಆಸ್ವಾದಿಸುತ್ತಾ, ತನ್ನ ಮನೋದೈಹಿಕ ಆರೋಗ್ಯವನ್ನೂ ಚೆನ್ನಾಗಿರಿಸಿಕೊಳ್ಳುವಲ್ಲಿ ತನಗರಿವಿಲ್ಲದಂತೆಯೇ ತೊಡಗುತ್ತಾನೆ. ಈ ಏಕಸೂತ್ರವನ್ನು ಅಳವಡಿಸಿಕೊಂಡರೆ, ಕಲೆಗೂ, ಕಲಾವಿದರಿಗೂ ಪ್ರೋತ್ಸಾಹ ನೀಡಿದಂತೆಯೇ. ಇಷ್ಟೇ.
ಚಪ್ಪಾಳೆಯ ಪ್ರೋತ್ಸಾಹ ಒಳ್ಳೆಯದೇ. ಮಿತಿ ಇರಬೇಕು. ಯಕ್ಷಗಾನದಲ್ಲಿರುವ ಸಾಹಿತ್ಯವನ್ನು, ಸಂಗೀತವನ್ನು, ಅರ್ಥಗಾರಿಕೆಯನ್ನು, ನಾಟ್ಯವನ್ನು, ಅಭಿನಯಚಾತುರ್ಯವನ್ನು, ಪ್ರತ್ಯುತ್ಪನ್ನಮತಿಯನ್ನು ಅರಿತುಕೊಳ್ಳುವಲ್ಲಿ ಪ್ರಬುದ್ಧ ಮತ್ತು ಸಭ್ಯ ಪ್ರೇಕ್ಷಕರಿಗೆ ದೊರೆಯುವ ಆನಂದವೇ ಬೇರೆ. ನಡುನಡುವೆ ಅಗತ್ಯವೇ ಇಲ್ಲದ ಶಿಳ್ಳೆಯ ಮೂಲಕ ರಸಭಂಗ ಮಾಡುವ ಪ್ರೇಕ್ಷಕರಲ್ಲಿ ಯಕ್ಷಗಾನದ ಪ್ರೇಕ್ಷಕ-ಪ್ರಜ್ಞೆ ಜಾಗೃತವಾಗಬೇಕಿದೆ.
ಇದು ಕುಹಕವಲ್ಲ, ವಾಸ್ತವ ವಿಷಯ. ಹಾಗೆ ಹೇಳುವುದಿದ್ದರೆ, ಯಕ್ಷಗಾನದ ಪ್ರತಿಯೊಂದು ವಿಚಾರಕ್ಕೂ ಶಿಳ್ಳೆ, ಚಪ್ಪಾಳೆ ಹಾಕಿ ಪ್ರೋತ್ಸಾಹಿಸಬೇಕು. ಅಷ್ಟು ಸಮೃದ್ಧವಾದ ಕಲೆಯದು. ಭಾಗವತನ ಹಾಡು, ಚೆಂಡೆಯವನ ಬಿಡಿತ, ಮದ್ದಳೆಯವನ ನುಡಿತ, ಚಕ್ರತಾಳದವನ ಶೈಲಿ, ವೇಷಧಾರಿಯ ಧಿಗಿಣ, ನಾಟ್ಯ, ಅರ್ಥ - ಎಲ್ಲವೂ ಸದಾ ಹೊಸತು. ಎಲ್ಲದಕ್ಕೂ ಚಪ್ಪಾಳೆ, ಶಿಳ್ಳೆ ಹಾಕಿದರೆ ಹೇಗಿರುತ್ತದೆ?
ಒಂದು ಸನ್ನಿವೇಶ, ಹಾಡು, ಕುಣಿತ ಮುಗಿದು ನಿಲ್ಲಿಸಿದ ಬಳಿಕ ಮೆಚ್ಚುಗೆಯ ರೂಪದಲ್ಲಿ ಸಭ್ಯ ಸಭಾಸ್ಪಂದನೆ ಸೂಕ್ತ. ಅದೂ ಬೇಡ, ನೇರವಾಗಿ ಕಲಾವಿದರನ್ನೇ ಹೋಗಿ ಕೈಕುಲುಕಿ ಚೆನ್ನಾಗಿ ನಿರ್ವಹಿಸಿದ್ದೀರಿ ಎಂದು ಹಾರೈಸಿದರೆ ಅದಕ್ಕಿಂತ ದೊಡ್ಡ ಪ್ರೋತ್ಸಾಹ, ಪ್ರೇರಣೆ ಕಲಾವಿದನಿಗೆ ಬೇರೆ ಬೇಕಾ? ಕಲೆಗೂ ತೊಂದರೆಯಿಲ್ಲ, ಪ್ರೇಕ್ಷಕರಿಗೂ ತೊಂದರೆಯಿಲ್ಲ, ಕಲಾವಿದರ ಏಕಾಗ್ರತೆಗೂ ಭಂಗವಿಲ್ಲ. ಯಕ್ಷಗಾನ ಕಲೆಯ ರಕ್ಷಣೆಯಲ್ಲಿ ಕಲಾವಿದರಷ್ಟೇ ಹೊಣೆಗಾರಿಕೆ ಸಭ್ಯ ಪ್ರೇಕ್ಷಕರ ಮೇಲೆ ಕೂಡ ಇದೆ. ನಿಜವಾದ ಯಕ್ಷಗಾನವನ್ನು, ಒಳ್ಳೆಯ ಕಲಾವಿದರನ್ನು ಅವರೇ ಬೆಳೆಸಬೇಕು. ಯಕ್ಷಗಾನಕ್ಕೆ ಒಗ್ಗದ ಅಪಸವ್ಯಗಳಿಗೆಲ್ಲ ಶಿಳ್ಳೆ-ಚಪ್ಪಾಳೆ ಹಾಕದಂತೆ ಎಚ್ಚರಿಕೆಯೂ ಇರಬೇಕಾಗುತ್ತದೆ.
ಅಷ್ಟೇ.
-ಅವಿನಾಶ್ ಬೈಪಾಡಿತ್ತಾಯ
