ಯಕ್ಷಗಾನಕ್ಕೆ ಚಪ್ಪಾಳೆ, ಶಿಳ್ಳೆ - ಬೇಕೋ ಬೇಡವೋ?

ಯಕ್ಷಗಾನ ಆಸ್ವಾದಿಸುತ್ತಿರುವ ಪ್ರೇಕ್ಷಕರು.       ಸಾಂಕೇತಿಕ ಚಿತ್ರ
ವಿದ್ವಾನ್ ಶ್ರೀಹರಿನಾರಾಯಣದಾಸ ಆಸ್ರಣ್ಣ, ಕಟೀಲು ಇವರು ಕೆಲವು ವರ್ಷಗಳ ಹಿಂದೆ ಬರೆದಿದ್ದ ಹಳೆಯ ಲೇಖನವಿದು. ಮಾ.25ರಂದು ಹೆನ್ನಾಬೈಲಿನಲ್ಲಿ ನಡೆದ ಧರ್ಮಸ್ಥಳ ಮೇಳದ ಯಕ್ಷಗಾನ ಪ್ರದರ್ಶನಕ್ಕೆ ಶಿಳ್ಳೆ ಊದುತ್ತಾ ಪದೇ ಪದೇ ಕಿರುಕುಳ ನೀಡುತ್ತಿದ್ದ ವಿಷಯಕ್ಕಾಗಿ, ಕಲಾವಿದರು ರಂಗದಲ್ಲಿಯೇ ತರಾಟೆಗೆ ತೆಗೆದುಕೊಂಡರು ಎಂಬ ವಿಷಯದ ಬಗ್ಗೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧ ಚರ್ಚೆಯಾಗುತ್ತಿರುವ ಹಿನ್ನೆಲೆಯಲ್ಲಿ ಈ ಲೇಖನ ಪ್ರಸ್ತುತ.

ಮನುಷ್ಯ ಈಗಿರುವ ಸ್ಥಿತಿಯೇ ಸರಿ ಎನ್ನುವ ಜಾಯಮಾನದವ. ಅದರಲ್ಲಿ ದುಷ್ಪರಿಣಾಮವೆನ್ನುವುದನ್ನು ತಿಳಿಯುವುದೇ ಇಲ್ಲ. ನಂತರ ಅದರಿಂದ ತೀರ ತೊಂದರೆಯಾಗಿ ಕೈಮೀರಿ ಹೋದ ಮೇಲೆ ಅದರ ದೂಷಣೆ ಆರಂಭವಾಗುತ್ತದೆ. ಆವಾಗ ಏನು ಹೇಳಿದರೂ ಪ್ರಯೋಜನ ಇರುವುದಿಲ್ಲ.

ಚಪ್ಪಾಳೆ , ಸಿಳ್ಳೆ ಸರಿಯೋ ತಪ್ಪೋ ಅನ್ನುವ ವಿಚಾರಕ್ಕಾಗಿ ಈ ಮೊದಲ ಮಾತು. ಚಪ್ಪಾಳೆ ಸರಿ ಎಂದವರೇ ಹೆಚ್ಚು. ಅದು ಕಲಾವಿದರಿಗೆ ಹುರುಪು ನೀಡುವ ಸಾಧನ ಅಂದವರು ಬಹಳ. ಅದು ನೈಜ ಸುಖಾನುಭೂತಿ ಅಂದವರು ಕೆಲವರು. ಸಿಳ್ಳು ಬೇಡ, ಅದು ರಸಭಂಗ ಮಾಡುತ್ತದೆ, ಚಪ್ಪಾಳೆ ಮಾತ್ರ ಬೇಕೇ ಬೇಕು ಅಂದವರು  ಇನ್ನು ಕೆಲವರು. ನಾನು ಚಪ್ಪಾಳೆ ಸಂಪ್ರದಾಯಕ್ಕೆ ವಿರೋಧಿಯೇ. ಆದರೂ ಅದನ್ನು ತಡೆಯಲು ಸಾಧ್ಯವಿಲ್ಲ ಎಂದು ಪ್ರಾಯೋಗಿಕ ಮಾತನ್ನು ಹೇಳಿದವರು ಮತ್ತೆ ಕೆಲವರು. ಬೇಡವೆಂದವರು ನಾನೂ ಸೇರಿ ಕೆಲವರು. ಹೀಗೆ ಒಟ್ಟು ಅಭಿಪ್ರಾಯಗಳು ಬಂದಾಗ ಕಲಾವಿದರು ಚಪ್ಪಾಳೆ ಬೀಳದಿದ್ರೆ ಜನರಿಗೆ ಇಷ್ಟ ಆಗಲಿಲ್ಲ ಎಂದು ಅರ್ಥ ಎಂದು ಅನುಭವದಿಂದ ಹೇಳುತ್ತಾರೆ. ಈ ವಿಚಾರವಾಗಿ ಏನನ್ನಾದರೂ ಅನ್ನಲೇ ಬೇಕು ಎಂದು ಕಂಡಿದ್ದರಿಂದ ನನ್ನ ಕೈ ಅಕ್ಷರಗಳನ್ನು ಜೋಡಿಸಲಾರಂಭಿಸಿತು. ಅದಕ್ಕಾಗಿ ಈ ಲೇಖನ.

ಯಕ್ಷಗಾನ.ಇನ್ ಅಪ್‌ಡೇಟ್ಸ್ ಪಡೆಯಲು ಫೇಸ್‌ಬುಕ್ | ಟ್ವಿಟರ್ | ಯೂಟ್ಯೂಬ್ ಇನ್‌ಸ್ಟಾಗ್ರಾಂ ಫಾಲೋ ಮಾಡಿ. 

ಪ್ರಾಯೋಗಿಕವಾದದ್ದು ಬೇರೆ. ನೈತಿಕವಾಗಿ ಒಪ್ಪತಕ್ಕದ್ದು ಬೇರೆ. ಪ್ರಾಯೋಗಿಕವಾಗಿ ಇಂದಿನ ರಾಜಕಾರಣಿಗಳಿಂದಾಗಿ ಮದ್ಯದಂಗಡಿ ನಿಲ್ಲಿಸಲಾಗದು. ಆದರೆ ಕುಡಿಯುವುದು ತಪ್ಪು ಅನ್ನಬಹುದಷ್ಟೇ? ಆದ್ದರಿಂದ ಪ್ರಾಯೋಗಿಕವನ್ನು ಹೊರತುಪಡಿಸಿ ಮಾತನಾಡೋಣ.

ಇನ್ನೊಂದು, ಕಲಾವಿದರಿಗೆ ಪ್ರೋತ್ಸಾಹಕ್ಕಾಗಿ ಚಪ್ಪಾಳೆ ಅನ್ನುವುದು. ಇದಕ್ಕೆ ಕೆಲವು ಕಲಾವಿದರು ಉತ್ತರಿಸಿದ್ದಾರೆ. ಒಳ್ಳೆಯ ಕಲಾವಿದರು ಹೇಳುತ್ತಾರೆ ಬಿಡಿ. ಆದರೆ  ಎಲ್ಲರೂ ಹೇಳಲಿಕ್ಕಿಲ್ಲ, ಆದರೂ ವಿಮರ್ಶೆಗೆ ಒಡ್ಡಿದರೆ ಕಲಾವಿದರೂ ಇದನ್ನು ಖಂಡಿಸಲೇಬೇಕು. ಯಾಕೆಂದು ಒಮ್ಮೆ ಯೋಚಿಸೋಣ.

ಯಕ್ಷಗಾನವೆಂಬುದೇ ವಿಶೇಷ. ಇಲ್ಲಿ ನೋಟಗಳಿಗಾಗಿ ಪ್ರತ್ಯೇಕ ಪರದೆಗಳಿಲ್ಲ. ಹಿಮ್ಮೇಳವೇ ಪರದೆ. ಹಿಮ್ಮೇಳದ ಭಾಗವತರ ರಾಗ, ಶ್ರುತಿ, ಛಂದೋಬದ್ಧವಾದ ಹಾಗೂ ಸಾಹಿತ್ಯಶುದ್ಧದಿಂದ ಹಾಡಲ್ಪಟ್ಟ ಹಾಡು, ಅದನ್ನನುಸರಿಸಿದ ಸ್ಪಷ್ಟ ಸಾಹಿತ್ಯಗಳಿಂದ ಕೂಡಿದ ಹಿಮ್ಮೇಳದಿಂದ ಹಿನ್ನೋಟ ಮತ್ತು ರಸಗಳು ವೇದ್ಯವಾಗುತ್ತದೆ. ಇದು ಬಿಡಿ. ಸ್ಪಷ್ಟ ಅನುಭವವುಳ್ಳವರ ಚೆಂಡೆನಾದದ ಕೇಳಿಯ ದನಿಯ ಮೂಲಕವೇ ಮೊದಮೊದಲು ಆ ದಿನದ ಪ್ರಸಂಗ ಈ ರಸದ್ದೆಂದು ಊಹಿಸಲಾಗುತ್ತಿತ್ತಂತೆ. ಸಿಳ್ಳು ಮತ್ತು ಚಪ್ಪಾಳೆಯ ಹೊಡೆತ ಇವುಗಳ ಶ್ರುತಿಯನ್ನೇ, ತಾಳವನ್ನೇ ತಲೆಬುಡವನ್ನಾಗಿಸುವುದು ಎಂಬ ವಿಚಾರದಲ್ಲಿ ಯಾರೂ ಅಲ್ಲವೆನ್ನುವಂತಿಲ್ಲ.

ಇನ್ನು ಮುಮ್ಮೇಳದ ಕಲಾವಿದರ ಬಗ್ಗೆ ಹೇಳೋಣವೇ? ತನ್ನ ತಾಳಬದ್ಧವಾದ ಮತ್ತು ಪಾತ್ರಗೌರವಕ್ಕೆ ಉಚಿತವಾದ ಕುಣಿತದಿಂದ ಹಿಮ್ಮೇಳಕ್ಕೆ ಹಿತವಾದ, ಕೆಲವೊಮ್ಮೆ ಮಿತವಾದ, ಕೆಲವೊಮ್ಮೆ ಕುಣಿತವೇ ಇಲ್ಲದ ಮತ್ತು ಕೆಲವೊಮ್ಮೆ ಹೆಚ್ಚಿನ ಕುಣಿತದಿಂದ ಸಾತ್ವಿಕ ಅಭಿನಯದ ಮೂಲಕ ರಸಪುಷ್ಟಿಯನ್ನು ಕಲಾವಿದ ತೋರಿಸಬೇಕು. (ಈಗ ಸಾತ್ವಿಕ ಅಭಿನಯವೆಂದರೆ ಏನೆಂದು ತಿಳಿಯದವರೇ ಹೆಚ್ಚಾಗಿ ಇರುವುದು ದುರಂತ). ಅದಕ್ಕನುಗುಣವಾಗಿ ಅವನ ವಾಚಿಕ ಅಭಿನಯ ತೋರಿಸಬೇಕು. ಇಂತಹ ಸಂದರ್ಭದಲ್ಲಿ ನಿರ್ವೇದ, ಅವೇಗ, ದೈನ್ಯ, ದುಃಖ, ರೋಮಾಂಚಾದಿಗಳು ಸಂಚಾರೀಭಾವಗಳಾಗಿ ಒಬ್ಬಾತನಿಗೆ ವ್ಯಕ್ತವಾದರೆ ಅವನನ್ನು ಸಹೃದಯನೆನ್ನುತ್ತಾರೆ. ಸಹೃದಯನಿಗೆ ಒಳ್ಳೆಯ ಕಲಾವಿದನ ಕರುಣರಸದ ಅಭಿನಯವೂ ಅಳುವಂತೆ ಮಾಡುತ್ತದೆ. ಇಂತಹ ಭಾವಗಳು ಕಲಾವಿದನಿಂದಾಗಿ ದೊರಕುವಂತಿದ್ದರೆ / ವ್ಯಕ್ತವಾಗುವಂತಿದ್ದರೆ ಮಾತ್ರ ಅದು ರೂಪಕವೆನಿಸುತ್ತದೆ. "ತದ್ರೂಪಾರೋಪಾತ್ತು ರೂಪಕಮ್ " ಎನ್ನುವ ಪ್ರಾಜ್ಞರ ಮಾತು ಅದನ್ನೇ ಹೇಳುತ್ತದೆ.

ಕಲಾವಿದನಲ್ಲಿ ಆ ಅಭಿನಯಗಳು ಹೊರಬಂದಾಗ ಸಹೃದಯನಿಗಾಗುವ ಆ ಭಾವವೇ ಅವನು ಸಾವಿರಸಾವಿರ ಜನರ ಮಧ್ಯೆಯೂ ಅವನಿಗೆ ಏಕಾಂತ ಪ್ರಾಪ್ತಿಯಾಗುವಂತೆ ಮಾಡುತ್ತದೆ. ಆ ಏಕಾಂತ ಅವ ಭೂಮಿಯ ಮೇಲೆ ಇದ್ದಾನೆಂದೇ ಒಂದು ಕ್ಷಣಕ್ಕೆ ಮರೆತುಹೋಗಿ ಅವನಿಗೆ ಪರಮ ಆನಂದದ ಅನುಭೂತಿಯಾಗುತ್ತದೆ. ಆ ಅನಂದಾನುಭವ ಅನುಭವೈಕವೇದ್ಯ. ಅಳುತ್ತಾ ಅಳುತ್ತಾ ನೋಡಿದ ರೂಪಕವಾದರೂ ಕೊನೆಗೆ ಅವನಿಗಾಗುವುದು ಆನಂದವೇ. ಹರಿಶ್ಚಂದ್ರ ಪ್ರಸಂಗ ದುಃಖದಾಯಕವಾದರೂ ಅದರಿಂದ ಅವನಿಗಾಗುವುದು ಆನಂದವೇ. ಅದು ಋಷಿಮನೀಷಿಗಳ ಆಮುಷ್ಮಿಕಸ್ಥಿತಿಯಂತೆ. "ಸಂಪತ್ತೌ ಚ ವಿಪತ್ತೌಚ ಮಹತಾಮೇಕರೂಪತಾ" ಎನ್ನುವ ವಾಕ್ಯದಂತೆ. ಅಂತಹ ಆನಂದ ಮೋಕ್ಷಕ್ಕೆ ತುಲ್ಯವಲ್ಲದಿದ್ದರೂ ಮೋಕ್ಷದ ನಂತರದ, ಅದಕ್ಕಿಂತ ಕೆಳಗಿನ ತುರೀಯ ಸುಖ ಇದರಲ್ಲಿ ಲಭ್ಯವಾಗುವದರಿಂದ ಇದನ್ನು ಪ್ರಾಜ್ಞರು ಬ್ರಹ್ಮಾನಂದಸಹೋದರಃ ಎಂದರು. ಇದು ಆದಲ್ಲಿ ಮಾತ್ರ ಆ ಪ್ರದರ್ಶನ ಸಾರ್ಥಕ ಅನ್ನಿಸಲ್ಪಡುತ್ತದೆ. ಆ ಕಾವ್ಯದ ಪ್ರದರ್ಶನ ಸೇವೆ ಎಂದಾಗುತ್ತದೆ. ಆವಾಗ ಶಿವೇತರಕ್ಷತಯೇ (ಅಮಂಗಲ ನಾಶಕ್ಕಾಗಿ) ಮತ್ತು ಸದ್ಯಃ ಪರನಿರ್ವೃತಯೇ (ಮೋಕ್ಷಕ್ಕಾಗಿ) ಎನ್ನುವ ಕಾವ್ಯಪ್ರಯೋಜನವು ಹೊಂದುತ್ತದೆ.

ಚಪ್ಪಾಳೆ ಯಾ ಸಿಳ್ಳೆ ಬಂದಲ್ಲಿ ಸಹೃದಯನಿಗೆ ಏಕಾಂತವೇ ಇಲ್ಲವಾಗುತ್ತದೆ. ಅವನಿಗೆ ಚಪ್ಪಾಳೆಯತ್ತ ಗಮನ ಹರಿಯುತ್ತದೆ. ಸಿಳ್ಳೆಯತ್ತ ಗಮನ ಹೋಗುತ್ತದೆ. ಇದು ಸಹೃದಯನಿಗೆ ಮಾತ್ರವಲ್ಲ, ಕಲಾವಿದನಿಗೂ ಅದೇ ರೀತಿಯ ಅಡಚಣೆಯಾಗುತ್ತದೆ. ಆಗ ಕಲಾವಿದನಿಂದ ಸಾತ್ವಿಕಾಭಿನಯವೂ ಕ್ಷೀಣಿಸುತ್ತದೆ, ಸಹೃದಯನಿಗೂ ಅನುಭೂತಿಯಲ್ಲಿ ಕ್ಷೀಣತೆಯೇ ಲಭಿಸುತ್ತದೆ.

ಒಮ್ಮೆ ಯೋಚಿಸಿ. ಚಪ್ಪಾಳೆ ಸರಿಯಾದರೆ, ಸಿಳ್ಳು ಸರಿಯಾದರೆ ಬ್ಯಾಂಡ್ ಉಪಯೋಗವೂ ಸರಿಯೇ; ಸುಡುಮದ್ದು ಉಪಯೋಗವೂ ಸರಿಯೇ. ನಾಳೆ ವೈಭವಕ್ಕಾಗಿ ಟಾಸೆ, ನಾಸಿಕ್ ಬ್ಯಾಂಡ್ ಸಹ ಬಂದರೆ ಅಚ್ಚರಿಯಲ್ಲ. ಆಗ ಯಕ್ಷಗಾನ ಎನ್ನುವುದು ಮೂಲೆಗುಂಪಾಗುವುದರಲ್ಲಿ ಸಂಶಯವೇ ಇಲ್ಲ. ಆವಾಗ ನಾವು  reality show ನಲ್ಲಿ ಯಕ್ಷಗಾನದ ಪ್ರದರ್ಶಿಸಿದ್ದನ್ನು ಆಕ್ಷೇಪಿಸಿದಂತೆ ಆಕ್ಷೇಪಿಸುವ ಅಧಿಕಾರವನ್ನೂ ಕಳೆದು ಕೊಳ್ಳುತ್ತೇವೆ.

ಪೌರಾಣಿಕವಾಗಿಯೇ ನಡೆಯುವ ಯಕ್ಷಗಾನ ದೇವಲೋಕವೂ ಆಗಬಹುದು; ದಟ್ಟವಾದ ಅರಣ್ಯವೂ ಆಗಬಹುದು; ಅರಸನ ಅರಮನೆಯೂ ಆಗಬಹುದು, ಯುದ್ಧಾಂಗಣವೂ ಆಗಬಹುದು, ಸ್ಮಶಾನವೂ ಆಗಬಹುದು. ಅದನ್ನು ನೋಡುವುದರಲ್ಲಿ ತಲ್ಲೀನನಾದ ಸಹೃದಯರೂ ಅದೇ ದೃಶ್ಯದ ಒಳಗೆ ಇರುತ್ತಾರೆ. ಉದಾಹರಣೆಗೆ ಚೂಡಾಮಣಿಯ ಸುಂದರರಾವಣನು ಸೀತೆಯನ್ನು ಮಾತನಾಡಿಸಿದ ಮೇಲೆ ಹನೂಮಂತ ಚೂಡಾಮಣಿ‌ ನೀಡುವ ಪ್ರಸಂಗ. ಭಾಗವತರು ದುಃಖದ ಅನುಭೂತಿಯನ್ನು ಕೊಡುವ ಪದ್ಯವನ್ನು‌ ಹೇಳುತ್ತಿದ್ದಾಗ ಪದ್ಯದ ರಾಗ ಚೆನ್ನಾಗಿದೆ ಎನ್ನುವ ಕಾರಣಕ್ಕೆ ಜನರೂ ಸೀತೆಯೊಂದಿಗೆ ಅತ್ತು ಆನಂದತುಂದಿಲರಾಗುವ ಸನ್ನಿವೇಶ. ಸಹೃದಯರೂ ಅಶೋಕವನದಲ್ಲಿ ಮುಳುಗಿರುವ ಸಂದರ್ಭ. ಆಗ ಸಿಳ್ಳೆ ಚಪ್ಪಾಳೆ ಹೊರಟರೆ ಕರುಣರಸದಲ್ಲಿ ತೇಲುವುದು ಬಿಟ್ಟು ಅವರು ಕುಳಿತುಕೊಂಡ ಕುರ್ಚಿಯೂ ಅವರಿಗೆ ಕಾಣತೊಡಗಿ ರಸಭಂಗವಾಗುತ್ತದೆ.

ಕೆಲವು ಕಲಾವಿದರು ಸಂಗೀತ, ನಾಟ್ಯದ ಚಪ್ಪಾಳೆಯನ್ನು ಉಲ್ಲೇಖಿಸಿದರು. ಅದರಂತೆ ಇಲ್ಲಿಯೂ ಸಹಜ ಅಂದರು. ಆದರೆ ಅಲ್ಲಿ ಪ್ರತಿ ಪದ್ಯದ ಕೊನೆಗೂ ಒಮ್ಮೆ ಮುಕ್ತಾಯ ಕಾಣುತ್ತೇವೆ. ಒಮ್ಮೆ ಎಲ್ಲರೂ ಏಕಾಂತವನ್ನು ಕಳೆದುಕೊಳ್ಳುತ್ತಾರೆ. ಅಲ್ಲಿ, ಆಗ ಸರಿ ಅನ್ನಿಸಬಹುದು. ಆದರೆ ಅನುಸ್ಯೂತವಾಗಿ ಗಂಟೆಗಳ ಕಾಲ ನಡೆಯುವಂಥದ್ದು. ಮಧ್ಯೆ ಮಧ್ಯೆ ಮುಕ್ತಾಯವನ್ನು ಕಾಣಲಾರೆವು. ಹಾಗಾಗಿ ಅಲ್ಲಿ ಚಪ್ಪಾಳೆ ಸಿಳ್ಳು ವರ್ಜ್ಯವೇ. ಇಡೀ ಪ್ರದರ್ಶನದ ಮುಕ್ತಾಯದಲ್ಲಿ ಇಂತಹ ಅಭಿಪ್ರಾಯದ ವ್ಯಕ್ತತೆಗೆ ಚಪ್ಪಾಳೆ ಯಾ ಸಿಳ್ಳುವಿನ ಉಪಯೋಗದ ಪೂರ್ಣ ಅವಕಾಶವಿದೆ. (ಆ ಸಂದರ್ಭ ಯಾರೂ ಮಾಡುವುದಿಲ್ಲ ಎನ್ನುವುದೇ ವಿಪರ್ಯಾಸ.

ಯಕ್ಷಗಾನದಲ್ಲಿ ಚಪ್ಪಾಳೆ ಯಾ ಸಿಳ್ಳೆ ಬಂದಲ್ಲಿ ಸಹೃದಯನಿಗೆ ಏಕಾಂತವೇ ಇಲ್ಲವಾಗುತ್ತದೆ. ಅವನಿಗೆ ಚಪ್ಪಾಳೆಯತ್ತ ಗಮನ ಹರಿಯುತ್ತದೆ. ಸಿಳ್ಳೆಯತ್ತ ಗಮನ ಹೋಗುತ್ತದೆ. ಇದು ಸಹೃದಯನಿಗೆ ಮಾತ್ರವಲ್ಲ, ಕಲಾವಿದನಿಗೂ ಅದೇ ರೀತಿಯ ಅಡಚಣೆಯಾಗುತ್ತದೆ. ಆಗ ಕಲಾವಿದನಿಂದ ಸಾತ್ವಿಕಾಭಿನಯವೂ ಕ್ಷೀಣಿಸುತ್ತದೆ, ಸಹೃದಯನಿಗೂ ಅನುಭೂತಿಯಲ್ಲಿ ಕ್ಷೀಣತೆಯೇ ಲಭಿಸುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು