ಬೆಂಗಳೂರು: ಯಕ್ಷಗಾನದ ಆಟದಂತೆ ಜಗಮಗಿಸುವಿಕೆ ಇಲ್ಲ, ವೇಷ ಭೂಷಣಗಳಿಲ್ಲ. ಇಲ್ಲಿ ಮಾತೇ ಪ್ರಧಾನ, ಹಿಮ್ಮೇಳವೂ ಪ್ರಮುಖ. ಮಾತಿನ ವೈಖರಿಯ ಮೂಲಕವೇ ಕಥಾನಕವೊಂದನ್ನು ಕಟ್ಟಿಕೊಡುವ ತಾಳಮದ್ದಲೆ ಎಂಬ ಯಕ್ಷಗಾನದ ರಂಗ ಪ್ರಕಾರವೊಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಇಂದು (ಜು.22ರ ರಾತ್ರಿ 10 ಗಂಟೆಗೆ) ಮೊದಲ ಬಾರಿಗೆ ಪೂರ್ಣರಾತ್ರಿ ನಡೆಯಲಿದೆ.
ಚಿಂತಕರು, ಸಾಹಿತ್ಯಾಸಕ್ತರು ಹಾಗೂ ಜನ ಸಾಮಾನ್ಯ ಪ್ರೇಕ್ಷಕರಿಗೂ ರಂಜನೆ, ಮಾಹಿತಿ, ಪೌರಾಣಿಕ ಕಥೆಯ ಜ್ಞಾನವನ್ನು ಮಾತಿನಲ್ಲೇ ಉಣಿಸುವ, ಕೇಳುಗರನ್ನು ಪುರಾಣ ಪ್ರಪಂಚಕ್ಕೆ ಒಯ್ಯುವ ಕಲಾವಿದರ ವಾಕ್ಪಟುತ್ವ, ವಾದ ಮಂಡನೆ, ಖಂಡನೆ ಮುಂತಾದವು ರಂಜಿಸಲಿವೆ. ಕೃಷ್ಣ ಸಂಧಾನ ಹಾಗೂ ಕರ್ಣಾರ್ಜುನ ಯಕ್ಷಗಾನ ತಾಳಮದ್ದಲೆ ಪ್ರಸಂಗಗಳು ಜು.22ರ ರಾತ್ರಿ 10ರಿಂದ ಯಕ್ಷ ಸಂಕ್ರಾಂತಿ ಹೆಸರಿನಲ್ಲಿ ನಡೆಯಲಿವೆ.
ಯಕ್ಷಗಾನ.ಇನ್ ಅಪ್‌ಡೇಟ್ಸ್ ಪಡೆಯಲು ಫೇಸ್‌ಬುಕ್ | ಟ್ವಿಟರ್ | ಯೂಟ್ಯೂಬ್ | ಇನ್‌ಸ್ಟಾಗ್ರಾಂ ಫಾಲೋ ಮಾಡಿ.
ಯಕ್ಷಗಾನ ಸಂಘಟಕ ನಾಗರಾಜ ಶೆಟ್ಟಿ ನೈಕಂಬ್ಳಿ ಅವರ ಸಂಯೋಜನೆಯಲ್ಲಿ, ಕೃಷ್ಣ ಸಂಧಾನ, ಕರ್ಣಾರ್ಜುನ ಕಥಾನಕಗಳು ರವಿಚಂದ್ರ ಕನ್ನಡಿಕಟ್ಟೆ, ಗಣೇಶ್ ಹೆಬ್ರಿ, ಚಂದ್ರಕಾಂತ ಮೂಡುಬೆಳ್ಳೆ ಅವರ ಭಾಗವತಿಕೆಯಲ್ಲಿ ನಿರೂಪಣೆಗೊಳ್ಳಲಿವೆ. ಅವಿನಾಶ್ ಬೈಪಾಡಿತ್ತಾಯ, ಅರ್ಜುನ್ ಕೊರ್ಡೇಲ್, ಕಾರ್ತಿಕ್ ಧಾರೇಶ್ವರ ಹಾಗೂ ಶಶಾಂಕ್ ಆಚಾರ್ಯ ಅವರು ಚೆಂಡೆ-ಮದ್ದಲೆಯಲ್ಲಿ ಸಹಕರಿಸಲಿದ್ದು, ಕಾರ್ಯಕ್ರಮಕ್ಕೆ ಆಸನ ಕಾದಿರಿಸಲು ಕೇವಲ 1 ರೂ. ಪ್ರವೇಶ ದರ ನಿಗದಿಪಡಿಸಲಾಗಿದೆ. ಆದರೆ, ಈಗಾಗಲೇ ಕಲೆಯ ಪ್ರೋತ್ಸಾಹಕರು ಹೆಚ್ಚಿನ ಮೊತ್ತವನ್ನೂ ನೀಡಿ ಕೈಜೋಡಿಸುತ್ತಿದ್ದಾರೆ.
ದೇವಿದಾಸ ವಿರಚಿತ ಕೃಷ್ಣ ಸಂಧಾನ ಪ್ರಸಂಗದಲ್ಲಿ, ಶ್ರೀಕೃಷ್ಣನಾಗಿ ವಿಶ್ವೇಶ್ವರ ಭಟ್ ಸುಣ್ಣಂಬಳ, ಕೌರವನಾಗಿ ವಾಸುದೇವ ರಂಗಭಟ್ ಹಾಗೂ ವಿದುರನಾಗಿ ಸತೀಶ್ ಶೆಟ್ಟಿ ಮೂಡುಬಗೆ ಅರ್ಥ ಹೇಳಲಿದ್ದಾರೆ. ಬಳಿಕ ಗೇರುಸೊಪ್ಪ ಶಾಂತಪಯ್ಯ ವಿರಚಿತ ಕರ್ಣಾರ್ಜುನ ಪ್ರಸಂಗದಲ್ಲಿ, ಕರ್ಣನಾಗಿ ಸಂಕದಗುಂಡಿ ಗಣಪತಿ ಭಟ್, ಅರ್ಜುನನಾಗಿ ಜಬ್ಬಾರ್ ಸಮೊ ಸಂಪಾಜೆ, ಶಲ್ಯನಾಗಿ ವಾಸುದೇವ ರಂಗಭಟ್, ಕೃಷ್ಣನಾಗಿ ಅಶ್ವಥ್ ಹೆಗ್ಡೆ ಹಾಗೂ ಸರ್ಪಾಸ್ತ್ರವಾಗಿ ಸುಧಾಕರ ಜೈನ್ ಹೊಸಬೆಟ್ಟುಗುತ್ತು ಅವರು ವಾಗ್ವೈಖರಿ ಮೆರೆಯಲಿದ್ದಾರೆ.
ಅಪ್ಪಿ ತಪ್ಪಿಯೂ ಇಂಗ್ಲಿಷ್ ಪದಗಳ ಬಳಕೆಯಾಗದ ಕನ್ನಡದ ವಿಶೇಷ ರಂಗ ಕಲೆಯಾಗಿರುವ ಯಕ್ಷಗಾನದ ಕಂಪು ಈಗ ಕನ್ನಡ ಸಾಹಿತ್ಯ ಲೋಕದ ಪ್ರಧಾನ ವಾಹಿನಿಗೂ ಆಕರ್ಷಣೆಯ ಕೇಂದ್ರವಾಗಿದೆ. ತಾಳಮದ್ದಲೆಯ ಔನ್ನತ್ಯವನ್ನು ರಾಜಧಾನಿಯ ಹೊಸ ಪ್ರೇಕ್ಷಕರಿಗೂ ತಲುಪಿಸುವ ಇರಾದೆ ಸಂಘಟಕರದು. ಹೆಚ್ಚಿನ ವಿವರಕ್ಕೆ ನಾಗರಾಜ ಶೆಟ್ಟಿ ಅವರನ್ನು 9741474255 ಮೂಲಕ ಸಂಪರ್ಕಿಸಬಹುದು.
ಸೂರ್ಯ ಶೆಟ್ಟಿ ನಂದ್ರೊಳ್ಳಿ ಬರೀತಾರೆ:
ಸುಣ್ಣಂಬಳ ವಿಶ್ವೇಶ್ವರ್ ಭಟ್ ಮತ್ತು ವಾಸುದೇವ ರಂಗಾ ಭಟ್: ಈ ಎರಡು ಅದ್ಭುತಗಳು ಒಂದಾದರೆ ಅದೊಂದು ರಸಭಾವಪೂರ್ಣವಾದ ಪುಷ್ಕಳ ಭೋಜನ.
ಪಾತ್ರಗಳ ಪ್ರಸ್ತುತಿಗೆ ಪ್ರಸಂಗ ಪಠ್ಯವೇ ಸಂವಿಧಾನ* ಎಂಬ ಸ್ಥಾಪಿತ ಸೂತ್ರದಿಂದ ಒಂದಿನಿತು ಬೇರಾಗದೆ ಸೃಷ್ಟಿಶೀಲತೆಯೊಂದಿಗೆ ಸಮನ್ವಯತೆ ಸಾಧಿಸಿ ಪುರಾಣ ಗರ್ಭೀತವಾದ ಸಂಗತಿಗಳನ್ನು ರಸಲೇಪಿತವಾದ ಮಾತುಗಳ ಮೂಲಕ ಅಭಿವ್ಯಕ್ತಿಸುತ್ತ ಪರಸ್ಪರ ಸಂವಹನ ಸಾಧಿಸುವ ಇವರಿರ್ವರ ಪಾತ್ರ ಚಿತ್ರಣ ಯಾವ ವಿಷಮತೆಗಳಿಗೂ ಅವಕಾಶ ಕೊಡದಷ್ಟು ಪರಿಪೂರ್ಣ.
ಅವರಿಬ್ಬರು ಒಂದಾದರೆ ಹಾಗೆ, ಅಲ್ಲಿ ಮೂಡುವ ಪ್ರತಿ ಮಾತುಗಳು ಮಲ್ಲಿಗೆ ದಂಡೆಯ ನೆಯ್ಗೆಯಷ್ಟೆ ನಾಜೂಕು. ನವರಸಗಳ ಸುಸ್ಪಷ್ಟ ಸಂವಹನ. ಪೋಣಿಸುವ ಒಂದೊಂದು ಅಕ್ಷರಗಳು ಸಹ ತಾಳಮದ್ದಳೆ ಯಾಕೆ ಕನ್ನಡದ ಶ್ರೀಮಂತ ಕಲೆ ಎನ್ನುವುದರ ಸಮರ್ಥನೆಗೆ ಪ್ರಾತಿನಿಧ್ಯ ವಹಿಸಿಕೊಳ್ಳುತ್ತವೆ.
ಹೌದು!!! ಇಂತಹ ಎರಡು ಮೇರು ಅದ್ಭುತಗಳು ಇದೆ ಶನಿವಾರ ರಾತ್ರಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಸಂಧಾನ ಪ್ರಸಂಗದ ಕೃಷ್ಣ - ಕೌರವರಾಗಿ ಮಹಾಭಾರತದ ಎಂಬ ಮಹಾಕಾವ್ಯದ ಸೌಂದರ್ಯವನ್ನು ಬಗೆಬಗೆಯಾಗಿ ಮೊಗೆ ಮೊಗೆದು ನಮಗೆ ಉಣಿಸುವುದಕ್ಕಿದ್ದಾರೆ..
ತಾಳಮದ್ದಳೆಯೊಂದಿಗೆ ನಿರಂತರ ಅನುಬಂಧತೆ ಹೊಂದಿದ ಪ್ರತಿಯೊಬ್ಬ ಪ್ರೇಕ್ಷಕನು ಮಿಸ್ ಮಾಡಿಕೊಳ್ಳಲಾಗದ, ಮಾಡಿಕೊಳ್ಳಬಾರದ ಒಂದು ಅಪೂರ್ವ ಸಂಯೋಜನೆ ಸಿದ್ಧವಾಗಿದೆ
ಸದಾ ಕೃಷ್ಣನಾಗುವ ವಾಸುದೇವ ರಂಗಾಭಟ್ಟರು ಕೌರವನಾಗುತ್ತಿದ್ದಾರೆ. ಸದಾ ಹೊಸತನ್ನೆ ಹುಡುಕಿ ಹುಡುಕಿ ಕೊಡುವ ರಂಗಣ್ಙನ ಕೌರವ,ಪಾಂಡವರನ್ನು ಧರ್ಮಸಮ್ಮತವಾಗಿ ರಾಜ್ಯಬಾಹಿರರು ಎಂದು ಸ್ಥಾಪಿಸಬಹುದೆ???
ಪಾತ್ರ ಯಾವುದೇ ಇರಲಿ ಎದುರು ಅರ್ಥದಾರಿ ಯಾರೆ ಇರಲಿ ಮೈಕೊಡವಿ ನಿಂತರೆ ಸುಣ್ಣಂಬಳ ವಿಶ್ವೇಶ್ವರ ಭಟ್ಟರನ್ನು ತಡೆಯುವುದು Not everyone's cup of Tea.... ಹಾಗಿರುವಾಗ ವಿಶ್ವಣ್ಣನ ಕೃಷ್ಣ, ಕೌರವನ ವಾದಗಳಿಗೆಲ್ಲ ಅರ್ಥವೆ ಇಲ್ಲ ಎಂದು ಸ್ಥಾಪಿಸಿ ಬೀಗಬಹುದೆ....??
ಸುನಿಲ್ ಹೊಲಾಡು ಬರೀತಾರೆ:
ಕಲಾಕ್ಷೇತ್ರದಲ್ಲೊಂದು ಮಾತಿನ ಕಾಳಗ
ದಶಕಕ್ಕೂ ಮೀರಿ ಯಕ್ಷ ಸಂಕ್ರಾಂತಿ ಶುದ್ದ ಯಕ್ಷಗಾನೀಯ ಪ್ರದರ್ಶನಗಳಿಂದಲೆ ತನ್ನ ತನವನ್ನು ಯಕ್ಷಗಾನ ವಲಯದಲ್ಲಿ ಸ್ಥಾಪಿಸಿಕೊಂಡಿದೆ. ಅನೇಕ ಪ್ರಯೋಗ, ವಿಶಿಷ್ಟ ಪ್ರದರ್ಶನಗಳ ಮೂಲಕ ಕಲಾವಲಯದಲ್ಲಿ ವ್ಯಾಪಿಸಿರುವ ಯಕ್ಷಸಂಕ್ರಾಂತಿಯ ಪ್ರದರ್ಶನಗಳಿಗೆ ಕಾಯುವ ಪ್ರೇಕ್ಷಕ ಗಡಣವೇ ಇದೆ. ಈ ಬಾರಿ ಅಚ್ಚರಿಯೋ ಎಂಬಂತೆ ಬೆಂಗಳೂರಿನಲ್ಲಿ ಪೂರ್ಣ ರಾತ್ರಿಯ ತಾಳಮದ್ದಳೆ ಪ್ರದರ್ಶನಕ್ಕೆ ಮನ ಮಾಡಿದ್ದು ಅನೇಕ ನಿರೀಕ್ಷೆಗಳನ್ನು ಹುಟ್ಟಿಸಿದೆ.
ಸಾವಿರಾರು ಪ್ರದರ್ಶನಗಳನ್ನು ಕಂಡು ಇಂದಿಂಗೂ ತಾಳಮದ್ದಳೆಯಲ್ಲಿ ಅಸ್ತಿತ್ವ ಉಳಿಸಿಕೊಂಡಿರುವ ಪ್ರಸಂಗಗಳಾದ ಶ್ರೀಕೃಷ್ಣ ಸಂಧಾನ ಹಾಗೂ ಕರ್ಣಾರ್ಜುನ ಪ್ರಸಂಗವನ್ನು ಆಯ್ದುಕೊಂಡಿದ್ದೆವೆ. ಪಾತ್ರ ಹಂಚಿಕೆಯಲ್ಲಿಯೂ ವೈಶಿಷ್ಟಗಳಿವೆ, ಪ್ರಯೋಗಗಳಿವೆ!!
ಕೌರವನ ಒಡ್ಡೋಲಗದಿಂದಲೇ ಪ್ರಾರಂಭಗೊಳ್ಳುವ ಕೃಷ್ಣ ಸಂಧಾನದಲ್ಲಿ ಛಲದಂಕ ಚಕ್ರೇಶ್ಚರ ಕೌರವನಾಗಿ ವಾಸುದೇವ ರಂಗಭಟ್ಟರು ತನ್ನ ಅಪ್ರತಿಮ ಪುರಾಣಜ್ಞಾನ, ತರ್ಕ ಶಕ್ತಿಯಿಂದ ಭಿನ್ನವಾಗಿ ಚಿತ್ರಿಸುವ ನಿರೀಕ್ಷೆ ಹುಟ್ಟಿಸಿದರೆ, ಕೌರವನ ಪ್ರಶ್ನೆಗಳಿಗೋ ಸರ್ಮಥನೆಗಳಿಗೊ ಸರ್ಮಥವಾದ ಉತ್ತರಗಳ ಮೂಲಕ, ರಾಜ್ಯವನ್ನು ಪಡೆಯುವಲ್ಲಿ ಪಾಂಡವರ ಅಧಿಕಾರ ಏನು ಎಂಬುದನ್ನು ಸ್ಪಷ್ಟಪಡಿಸುವ ಸಂಧಾನದ ಮುಖ್ಯ ರೂವಾರಿ ಶ್ರೀಕೃಷ್ಣನಾಗಿ ಸುಣ್ಣಂಬಳ ವಿಶ್ವೇಶ್ವರ ಭಟ್ಟರು ಎದುರಾಗಲಿದ್ದಾರೆ. ವಿಶ್ವಣ್ಣ * ರಂಗಣ್ಣನ ಜೋಡಿ ಈಗಾಗಲೇ ತಾಳಮದ್ದಳೆ ಕ್ಷೇತ್ರದಲ್ಲಿ ಮನೆಮಾತಾಗಿದ್ದು, ಇವರ ಮಾತುಗಳು ನಮ್ಮ ಮನ ತಲುಪಲು ಶನಿವಾರದ ತನಕ ಕಾಯಬೇಕಾಗಿದೆ.
ಸಂಧಾನ ಮುಗಿದಲ್ಲಿಗೆ ಸಮರವಾಗಿ ಕರ್ಣಾರ್ಜುನರ ಕಾಳಗ ನಿರೀಕ್ಷೆಯನ್ನು ಇನ್ನಷ್ಟು ಹೆಚ್ಚಿಸಿದೆ. ಎಲವೊ ಸೂತನ ಮಗನೆ ಎಂದು ಪಚಾರಿಸುವ ಪಾರ್ಥನ ಪ್ರಬಲ ಅಕ್ಷೇಪಕ್ಕೆ ತಾನು ಮಾಡಿದ್ದು ಹೇಗೆ ಸರಿ ಎಂಬ ಸಮರ್ಥನೆಯೊಂದಿಗೆ ಸಾಗುತ್ತಾ ತರ್ಕ, ಭಾವನೆಯೊಂದಿಗೆ ಸಾಗುವ ಕರ್ಣನಾಗಿ ಸಂಕದಗುಂಡಿ ಗಣಪತಿ ಭಟ್ ಮಿಂಚಲಿದ್ದಾರೆ. ಪ್ರತಿಜ್ಞಾ ಬದ್ಧನಾಗಿ ಯುದ್ದ ಸನ್ನದ್ದನಾಗುವ ಪಾರ್ಥನಾಗಿ ಹಿರಿಯ ಕಲಾವಿದರಾದ ಜಬ್ಬಾರ ಸಮೋ ಸಂಪಾಜೆಯವರು ಕರ್ಣನ ತಪ್ಪು, ಒಪ್ಪುಗಳನ್ನು ತರ್ಕಕ್ಕೆ ಎಳೆದು, ಅಸ್ಖಲಿತ ವಾಗ್ಧಾರೆಯ ಮೂಲಕ ಪ್ರೇಕ್ಷಕರನ್ನು ಸೆಳೆಯುವುದು ಸುಳ್ಳಲ್ಲ. ತಾಳಮದ್ದಳೆ ಕ್ಷೇತ್ರದ ಪ್ರಭಾವಿ ಯುವ ಕಲಾವಿದ ಸಂಕದಗುಂಡಿ ಹಾಗೂ ಹಿರಿಯ ಕಲಾವಿದರಾದ ಜಬ್ಬಾರರ ಜೋಡಿ ಮೋಡಿ ಮಾಡುವುದು ಖಂಡಿತ. ಕರ್ಣನ ಸಾರಥಿ ಶಲ್ಯನಾಗಿ ವಾಸುದೇವ ರಂಗಭಟ್ಟರು ಕಾಣಿಸಿಕೊಳ್ಳಲಿದ್ದು ಒಂದು ಹೊಸತನದ ಚರ್ಚೆಯ ನಿರೀಕ್ಷೆ ಮೂಡಿದೆ.. ಶಲ್ಯ ಸಾರಥ್ಯಕ್ಕೆ ಪ್ರದರ್ಶನ ಮುಗಿಯುವುದೋ? ಕರ್ಣ ಪರ್ವ ಆಗುವುದೋ? ಉತ್ತರ ಅಂದೇ ಕಂಡು ಕೊಳ್ಳಬೇಕಾಗಿದೆ!!
ಈ ತರ್ಕದ ಕಾಳಗದಲ್ಲಿ ಮುರಿದ ಮನಸ್ಸಿನ ಬಿಲ್ಲು ಮುರಿಯುವ ವಿದುರನಾಗಿ ಕುಂದಾಪುರ ವಲಯದ ಯುವ ಅರ್ಥದಾರಿ ಸತೀಶ ಶೆಟ್ಟಿ ಮೂಡುಬಗೆಯವರು ಸಾಥ್ ನೀಡಿದರೆ, ಪಾರ್ಥ ಸಾರಥಿ ಕೃಷ್ಣನಾಗಿ ಸಾಧಕ ಶ್ರೇಷ್ಟ ಅಶ್ವತ್ಥ ಹೆಗೆಡೆಯವರು ಕಾಣಿಸಿಕೊಳ್ಳಲಿದ್ದಾರೆ. ಪಾರ್ಥನಿಗೆ ಕಚ್ಚಲು ಹಪಹಪಿಸುವ ಅಶ್ವಸೇನನಾಗಿ ಸುಧಾಕರ ಜೈನ್ ಹೊಸಬೆಟ್ಟುಗುತ್ತು ಪ್ರೇಕ್ಷಕರರ ಮೆಚ್ಚುಗೆ ಸಾಧಿಸುವುದನ್ನು ಕಾದು ನೋಡಬೇಕಾಗಿದೆ.
ಈ ಮಾತಿನ ಮಂಟಪಕ್ಕೆ ಸಾರಥಿಗಳಾಗಿ ರವಿಚಂದ್ರ ಕನ್ನಡಿಕಟ್ಟೆ, ಹೆಬ್ರಿ ಗಣೇಶ ಕುಮಾರ್, ಚಂದ್ರಕಾಂತ ಮೂಡುಬೆಳ್ವೆ, ಅಕ್ಷಯ ಆಚಾರ್ಯ, ಕಾರ್ತಿಕ ಧಾರೇಶ್ವರ, ಅವಿನಾಶ ಬೈಪಾಡಿತ್ತಾಯ, ಅರ್ಜುನ್ ಕೊರ್ಡೇಲ್ ಕಾಣಿಸಿಕೊಳ್ಳಲಿದ್ದು, ತೆಂಕು - ಬಡಗಿನ ಹಿಮ್ಮೇಳ ಸಮಾಗಮದಲ್ಲಿ ಸಾರ್ಥಕ ರಾತ್ರಿಯೊಂದು ಸಂಪನ್ನಗೊಂಡರೆ ಅದುವೇ ನಮಗೆ ಸಂತಸ..
ವಾಗರ್ಥದ ಪ್ರವಾಹಕ ಜಬ್ಬಾರ ಸಮೋ ಸಂಪಾಜೆ
ಶ್ರುತಿಬದ್ದವಾದ ಮಾತು, ಅಸ್ಖಲಿತ ವಾಕ್ಪಟುತ್ವ, ನಿಖರ ಪುರಾಣ ಜ್ಞಾನ, ಅನುಭವಗಳ ಆಗರ, ಸನ್ನಿವೇಶಕ್ಕೆ ತಕ್ಕುದಾದ ರಸ - ಭಾವದೊಂದಿಗೆ ಪಾತ್ರ ಚಿತ್ರಿಸುವ ತಾಳಮದ್ದಳೆಯ ಅಗ್ರಮಾನ್ಯ ಕಲಾವಿದರಲ್ಲಿ ಜಬ್ಬಾರಣ್ಣ ವಿರಾಜಮಾನರು.
ಜಬ್ಬಾರ ಸಮೋ ಸಂಪಾಜೆ ಯಕ್ಷಗಾನ - ತಾಳಮದ್ದಳೆ ಕ್ಷೇತ್ರದಲ್ಲಿ ಚಿರಪರಿತ ಹೆಸರು. ಇವರು ತಮ್ಮ ಪ್ರತಿಭೆಯ ಮೂಲಕವೇ ಈ ಕ್ಷೇತ್ರದಲ್ಲಿ ಕಾಣಿಸಿಕೊಂಡು ಉಳಿದು ಬೆಳೆದ ನಿಂತ ಮಹಾವೃಕ್ಷ. ಒಂದು ಕಾಲಕ್ಕೆ ತಾಳಮದ್ದಳೆ ಕ್ಷೇತ್ರ ಕೊಂಚ ಹಿನ್ನಡೆ ಕಂಡುಕೊಂಡು ಪ್ರದರ್ಶನಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾದ ಸಂಧರ್ಭದಲ್ಲಿ ಜಬ್ಬಾರ ಸಮೋ ಅವರ ಆಗಮನ ಬಹುದೊಡ್ಡ ಕೊಡುಗೆಯನ್ನೆ ನೀಡಿದೆ. ತಾಳಮದ್ದಳೆಯಿಂದ ದೂರ ಉಳಿದ ಪ್ರೇಕ್ಷಕರನೇಕರು ತಾಳಮದ್ದಳೆಯತ್ತ ಮತ್ತೊಮ್ಮೆ ಧಾವಿಸಲು ಜಬ್ಬಾರ ಸಮೋ ಅವರ ಕೊಡುಗೆ ಅನನ್ಯ. ಅಲ್ಲಿಂದ ತೊಡಗಿ ಇಂದಿಗೂ ಅದೇ ಛಾಪು ಉಳಿಸಿಕೊಂಡು ಕಲಾಕ್ಷೇತ್ರಕ್ಕೆ ಕೊಡುಗೆಗಳ ಸರಮಾಲೆ ನೀಡಿದ ಜಬ್ಬಾರಣ್ಣನ ಕಲಾಪ್ರೇಮ ಎಲ್ಲರಿಗೂ ಮಾದರಿ.
ಒಂದು ಪ್ರಕರಣಕ್ಕೆ ತೀರ್ಮಾನ ನೀಡುವಲ್ಲಿ ಕೂಲಂಕಷವಾದ ವಿಚಾರಣೆ ಯಾವ ಬಗೆಯಲ್ಲಿ ಮಾಡಬೇಕು ಎಂಬುದಕ್ಕೆ ದ್ಯೋತಕದಂತಿರುವ ಭೀಷ್ಮ ವಿಜಯದ ಪರಶುರಾಮ, ಭಗ್ನಪ್ರೇಮಿಯ ಅಸಹಾಯಕತೆ ಚಿತ್ರಿಸುವ ಸಾಲ್ವ, ತರ್ಕದಿಂದ ಸಾಗಿ ಭಾವನಾತ್ಮಕವಾಗಿ ಕಣ್ಣೀರಿಡುವ ಕರ್ಣ, ಅತಂತ್ರತೆಯ ಪ್ರತೀಕವೋ ಎಂಬಂತೆ ಚಿತ್ರಿಸುವ ತ್ರಿಶಂಕು, ಪ್ರಶ್ನೆಗಳ ಮೇಲೆ ಪ್ರಶ್ನೆಗಳಿಂದ ತನ್ನ ಸಾವು ಹೇಗೆ ಸರಿ ಎಂದು ರಾಮನಿಂದ ಉತ್ತರವನ್ನು ಕೆದಕುವ ವಾಲಿ , ಸಂಧಾನದ ಕೌರವ, ಸುಧನ್ವ ಕಾಳಗದ ಅರ್ಜುನ, ರಾವಣ, ಮಾಗಧ ಮುಂತಾದ ಪಾತ್ರಗಳನ್ನು ಅವರದ್ದೆ ಕಲ್ಪನೆಯಲ್ಲಿ , ಅವರದ್ದೆ ಶೈಲಿಯಲ್ಲಿ ಕೇಳುವ ಸೊಗಸು ನಿಜಕ್ಕೂ ಪ್ರೇಕ್ಷಕರಿಗೆ ರಸಗವಳವೇ ಸರಿ. ಪಾತ್ರದ ಪರಿಧಿಯನ್ನು ಮೀರದೆ ರಂಜನೆಯಿಂದಲೆ ಸಾಗುತ್ತಾ ಪ್ರಸಂಗ ಕಟ್ಟುವ ನಿಸ್ಸೀಮ ಜಬ್ಬಾರಣ್ಣ ಅದೆಷ್ಟೋ ಯುವ ಅರ್ಥದಾರಿಗಳಿಗೆ ಪ್ರೇರಣೆ...
ಮೂರು ತಾಸಿನ ಕೂಟಕ್ಕೆ ನೂರಾರು ಮೈಲಿ ದೂರದಿಂದ ಪ್ರಯಾಣ ಬೆಳೆಸಬೇಕಾದ ಅನಿವಾರ್ಯತೆ ಜಬ್ಬಾರಣ್ಣನಿಗೆ ಬಹಳ ಕಾಡುವುದುಂಟು. ಸಂಪಾಜೆಯಿಂದ ಪ್ರಯಾಣ ಪ್ರಾರಂಭಿಸುವ ಇವರಿಗೆ ಉಡುಪಿ, ಕುಂದಾಪುರ, ಶಿರಸಿ, ಸಿದ್ದಾಪುರ, ಯಲ್ಲಾಪುರ, ಶೃಂಗೇರಿ, ಸಾಗರ ಮುಂತಾದ ಕಡೆ ಕಾರ್ಯಕ್ರಮಗಳೆಂದರೆ ದಿನಪೂರ್ತಿ ಪ್ರಯಾಣದಲ್ಲೆ ಕಳೆಯುವ ಅನಿವಾರ್ಯತೆ. ಆ ಆಯಾಸವನ್ನು ತೋರದೆ ಲವಲವಿಕೆಯಿಂದ ಅರ್ಥದಲ್ಲಿ ಮಿಂಚುವ ಪರಿ ವಿಸ್ಮಯವೇ ಸರಿ. ಸಂಘಟಕರಿಗೆ ಒಂದಿನಿಂತೂ ತೊಂದರೆ ಆಗದಂತೆ ನೆಡೆದುಕೊಳ್ಳುವುದು ಜಬ್ಬಾರಣ್ಣನ ಪರಿಪಾಠ. ಕಲೆ- ಕಲಾವಿದ - ಸಂಘಟಕರ ಈ ಕೊಂಡಿ ಗಟ್ಟಿಯಾಗುವಲ್ಲಿ ಜಬ್ಬಾರರ ಕೊಡುಗೆ ಉಲ್ಲೇಖನೀಯ.
ಯುವ ಕಲಾವಿದರನ್ನು ಬೆಳೆಸುವಲ್ಲಿ ಸದಾ ಹಪಹಪಿಸುವ ಇವರು ಅರ್ಥಕ್ಕೆ ಬರುವ ಯುವ ಕಲಾವಿದರೊಡನೆ ಅವರನ್ನು ಪೋತ್ಸಾಹಿಸಿ ಅರ್ಥ ಹೇಳಿಸುವುದು ಮಾತ್ರವಲ್ಲ ಅವಕಾಶವನ್ನು ನೀಡಿ ಕಲೆಯ ಬೆಳವಣಿಗೆಗೆ ನೀರೆರೆದವರು. ಅವರೊಡನೆ ಅರ್ಥ ಹೇಳಬೇಕೆಂಬ ಕನಸುಹೊತ್ತ ಕಲಾವಿದರಿಗೆ ತೊಡಕಾಗದಂತೆ ಜೊತೆಗೆ ಕುಳಿತು ಅರ್ಥ ಹೇಳಿ, ತಪ್ಪು ಒಪ್ಪುಗಳನ್ನು ತಿದ್ದಿ ಕಲಾ ಸೇವೆಗೈದ ಕಲಾಪೋಷಕರು..
ಹೀಗೆ ಹೇಳುತ್ತಾ ಸಾಗಿದರೆ ಮುಗಿಯದ ಪುಸ್ತಕವಾದೀತು!!! ಅವರೊಂದು ಆಗಸ. ನನ್ನ ದೃಷ್ಟಿಯ ಮಿತಿಗೆ ಕಂಡದನ್ನು ಬರೆಯಬಹುದಷ್ಟೆ!!! ನನ್ನಂಥ ಅನೇಕರಿಗೆ ಸ್ವೂರ್ತಿಯ ಮೂರ್ತಿಯಾದ ಜಬ್ಬಾರಣ್ಣನಿಗೆ ಯಕ್ಷ ಸಂಕ್ರಾಂತಿ ಬಳಗದಿಂದ ಗೌರವ ಸಂಮಾನದ ಯೋಚನೆ ಬಹಳ ದಿನದಿಂದ ನಡೆದಿತ್ತು. ಅದಕ್ಕೆ ಕಾಲ ಸನ್ನಿಹಿತವಾಗಿದೆ.. ಬೆಂಗಳೂರಿನ ಕಲಾಕ್ಷೇತ್ರದಲ್ಲಿ "ಕಲಾಕ್ಷೇತ್ರಕ್ಕೆ ಕೊಡುಗೆಗಳ ಸರದಾರ ಜಬ್ಬಾರಣ್ಣನಿಗೆ ಗೌರವ ಸಂಮಾನ" ಗಣ್ಯರ ಸಮ್ಮುಖದಲ್ಲಿ ನೆಡೆಯಲಿದೆ. ಈ ಅಮೃತಘಳಿಗೆಯಲ್ಲಿ ನೀವು ಸಾಕ್ಷಿಗಳಾದರೆ ಅದು ಸಾರ್ಥಕ ಸಂಮಾನವಾದೀತು. ಕನ್ನಡ ನಾಡು ನುಡಿ ಎಂಬ ರಥಕ್ಕೆ ಗಾಲಿಗಳಂತಿರುವ ಯಕ್ಷಗಾನ - ತಾಳಮದ್ದಳೆ ಕ್ಷೇತ್ರ ಸಾಧಕರಾದ ಜಬ್ಬಾರಣ್ಣನಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ದೊರೆಯಲಿ ಎಂದು ಕನ್ನಡಾಂಬೆಯಲ್ಲಿ ಬೇಡುತ್ತಾ ಗೌರವಿಸೋಣ ಬನ್ನಿ...
- ಸುನಿಲ್ ಕುಮಾರ ಹೊಲಾಡು.
Tags:
ತಾಳಮದ್ದಳೆ