ಬೆಂಗಳೂರಿನಲ್ಲಿ ಐತಿಹಾಸಿಕ ಪೂರ್ಣರಾತ್ರಿ ತಾಳಮದ್ದಲೆ, ಹೊಸ ಪ್ರೇಕ್ಷಕರನ್ನು ತಲುಪಿದ ಸಾರ್ಥಕ್ಯ

ಪೂರ್ಣರಾತ್ರಿ ತಾಳಮದ್ದಳೆಗೆ ರವೀಂದ್ರ ಕಲಾಕ್ಷೇತ್ರದ ಆಸನಗಳು ಭರ್ತಿ
ಬೆಂಗಳೂರು: ಸಂಸ್ಕಾರ, ಸಂಸ್ಕೃತಿ ಪಸರಿಸುವ ವಿಶಿಷ್ಟ ಕಲೆ ಯಕ್ಷಗಾನ. 'ಇದು ಹೇಗೆ ಸರಿ, ಅದು ಯಾಕೆ ಸರಿಯಲ್ಲ' ಮುಂತಾಗಿ ತರ್ಕಿಸುವ ಬುದ್ಧಿ ನಮಗೆ ಶಾಲಾ ಪಠ್ಯದಿಂದ ದೊರೆತಿದ್ದಲ್ಲ, ಬದಲಾಗಿ ತಾರ್ಕಿಕ ಅವಲೋಕನ, ಪದ ಭಂಡಾರ, ಪೌರಾಣಿಕ ಜ್ಞಾನ ಇವೆಲ್ಲ ದೊರೆತಿರುವುದು ಯಕ್ಷಗಾನದಿಂದ ಎಂದು ಹಿರಿಯ ಅರ್ಥವಾದಿ ಜಬ್ಬಾರ್ ಸಮೊ ಸಂಪಾಜೆ ಹೇಳಿದರು.

ನಗರದ ಪ್ರತಿಷ್ಠಿತ ರವೀಂದ್ರ ಕಲಾಕ್ಷೇತ್ರದಲ್ಲಿ ಶನಿವಾರ, ಇದೇ ಮೊದಲ ಬಾರಿಗೆ ಪೂರ್ಣ ರಾತ್ರಿ ನಡೆದ ಯಕ್ಷಗಾನ ತಾಳಮದ್ದಲೆಗೆ ಮುನ್ನ, ಯಕ್ಷ ಸಂಕ್ರಾಂತಿ ವತಿಯಿಂದ 'ಗುರು ಸಂಮಾನ' ಸ್ವೀಕರಿಸಿ ಅವರು ಮಾತನಾಡಿದರು.

ಯಕ್ಷಗಾನ.ಇನ್ ಅಪ್‌ಡೇಟ್ಸ್ ಪಡೆಯಲು ಫೇಸ್‌ಬುಕ್ | ಟ್ವಿಟರ್ | ಯೂಟ್ಯೂಬ್ ಇನ್‌ಸ್ಟಾಗ್ರಾಂ ಫಾಲೋ ಮಾಡಿ.

ಬೈಂದೂರು ಶಾಸಕ ಗುರುರಾಜ್ ಗಂಟಿಹೊಳಿ ಅವರನ್ನು ವಿಶೇಷವಾಗಿ ಗೌರವಿಸಲಾಯಿತು. ಇಬ್ಬರಿಗೂ ಮೈಸೂರು ಪೇಟ, ಯಕ್ಷಗಾನದ ಕಸೆ ಸೀರೆ ಶಾಲು, ಅಡಿಕೆಯ ಹಾರ, ಡ್ರೈಫ್ರುಟ್ಸ್ ಹಾಗೂ ಸ್ಮರಣಿಕೆಗಳನ್ನು ನೀಡಿ ಗೌರವಿಸಲಾಯಿತು. ಹಿರಿಯ ನಟ, ನಿರ್ದೇಶಕ ಸೇತುರಾಂ ಎಸ್‌‌.ಎನ್‌. ಮಾತನಾಡಿದರು. ವೇದಿಕೆಯಲ್ಲಿ ಟಿ. ಶಿವಾನಂದ ಶೆಟ್ಟಿ, ದೀಪಕ್ ಶೆಟ್ಟಿ ಬಾರ್ಕೂರು, ಡಾ.ಬಾಬು ಗೋವಿಂದ ಪೂಜಾರಿ, ರಘುರಾಮ ಶೆಟ್ಟಿ ಎಳ್ಮುಡಿ, ಪ್ರವೀಣ್ ಕುಮಾರ್ ಶೆಟ್ಟಿ, ಅಶ್ವಥ್ ಹೆಗ್ಡೆ ಮೊದಲಾದವರಿದ್ದರು.

ಸುನಿಲ್ ಕುಮಾರ್ ಹೊಲಾಡು ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದ ಸಂಘಟಕ ನಾಗರಾಜ್ ಶೆಟ್ಟಿ ನೈಕಂಬ್ಳಿ ಪ್ರಸ್ತಾವನೆಗೈದರು. ಸಭಾ ಕಾರ್ಯಕ್ರಮದ ಬಳಿಕ, ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಕೃಷ್ಣ ಸಂಧಾನ ಹಾಗೂ ಕರ್ಣಾರ್ಜುನ ಎಂಬ ಎರಡು ಆಖ್ಯಾನಗಳು ಯಕ್ಷಗಾನ ತಾಳಮದ್ದಲೆ ರೂಪದಲ್ಲಿ ಪ್ರಸ್ತುತಿಗೊಂಡವು. ಕಲಾಭಿಮಾನಿಗಳ ಕಲಾಪ್ರೀತಿಗೆ ಸಾಕ್ಷಿಯಾಗಿ ರವೀಂದ್ರ ಕಲಾಕ್ಷೇತ್ರವು ಭರ್ತಿಯಾಗಿತ್ತು.




ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಪೂರ್ಣರಾತ್ರಿ ತಾಳಮದ್ದಲೆ ಕಾರ್ಯಕ್ರಮಕ್ಕೆ ಮುನ್ನ ಬೈಂದೂರು ಶಾಸಕ ಗುರುರಾಜ ಗಂಟಿಹೊಳಿ ಅವರನ್ನು ಸನ್ಮಾನಿಸಲಾಯಿತು. ಹಿರಿಯ ರಂಗಕರ್ಮಿ, ನಿರ್ದೇಶಕ ಸೇತುರಾಂ ಎಸ್.ಎನ್., ಗುರು ಸಂಮಾನ ಪಡೆದ ತಾಳಮದ್ದಲೆ ಅರ್ಥವಾದಿ ಜಬ್ಬಾರ್ ಸಮೊ ಸಂಪಾಜೆ ಮತ್ತಿತರರು ವೇದಿಕೆಯಲ್ಲಿದ್ದರು. ಮಹಾಭಾರತದ 'ಕೃಷ್ಣ ಸಂಧಾನ' ಆಖ್ಯಾನದಲ್ಲಿ ಪ್ರಸಿದ್ಧ ಅರ್ಥವಾದಿಗಳಾದ ಸುಣ್ಣಂಬಳ ವಿಶ್ವೇಶ್ವರ ಭಟ್ ಕೃಷ್ಣನಾಗಿ, ವಾಸುದೇವ ರಂಗ ಭಟ್ ಅವರು ಕೌರವನಾಗಿ, ವಿದುರನಾಗಿ ಸತೀಶ್ ಶೆಟ್ಟಿ ಮೂಡುಬಗೆ ಗಮನ ಸೆಳೆದರು. ಬಡಗು ಹಿಮ್ಮೇಳದಲ್ಲಿ ಚಂದ್ರಕಾಂತ ಮೂಡುಬೆಳ್ಳೆ ಹಾಗೂ ಹೆಬ್ರಿ ಗಣೇಶ್ ಅವರು ಭಾಗವತರಾಗಿ, ಮದ್ದಲೆಯಲ್ಲಿ ಶಶಾಂಕ ಆಚಾರ್ಯ, ಚೆಂಡೆಯಲ್ಲಿ ಕಾರ್ತಿಕ್ ಧಾರೇಶ್ವರ ಇದ್ದರು. ಕರ್ಣಾರ್ಜುನ ತಾಳಮದ್ದಳೆಯಲ್ಲಿ, ಜಬ್ಬಾರ್ ಸಮೊ ಅರ್ಜುನನಾಗಿ, ವಾಸುದೇವ ರಂಗ ಭಟ್ಟರು ಶಲ್ಯನಾಗಿ, ಸಂಕದಗುಂಡಿ ಗಣಪತಿ ಭಟ್ ಕರ್ಣನಾಗಿ, ಸುಧಾಕರ ಜೈನ್ ಸರ್ಪಾಸ್ತ್ರ ಅಶ್ವಸೇನನ ಪಾತ್ರದಲ್ಲಿ ಮೆರೆದರು. ತೆಂಕು ಹಿಮ್ಮೇಳದಲ್ಲಿ ರವಿಚಂದ್ರ ಕನ್ನಡಿಕಟ್ಟೆ, ಅವಿನಾಶ್ ಬೈಪಾಡಿತ್ತಾಯ, ಅರ್ಜುನ್ ಕೊರ್ಡೇಲ್, ಚಕ್ರತಾಳದಲ್ಲಿ ವಿಜಯ್ ಕುಂಬ್ಳೆ ಸಹಕರಿಸಿದರು.

ಬೆಂಗಳೂರಿನಲ್ಲಿ ಪೂರ್ಣರಾತ್ರಿ ಯಕ್ಷಗಾನ ಸವಿದ ಪ್ರೇಕ್ಷಕರು, ಕಲಾವಿದರ ಅನಿಸಿಕೆ

ಕಣ್ಮನ ತಣಿಸಿತು
ರಾಜಧಾನಿಯಲ್ಲಿ ಸಂಘಟಿಸಿದ ಪ್ರಯತ್ನ ಯಶಸ್ವಿಯಾಗಿ ಪ್ರೇಕ್ಷಕರ ಕಣ್ಮನ ತಣಿಸಿದೆ. ಕರಪತ್ರದಲ್ಲಿ ನಮೂದಿಸಿದಂತೆ ಹಳೆ ಬೇರು ಹೊಸ ಚಿಗುರು ಸಮ್ಮೀನಲವನ್ನು ಅಚ್ಚುಕಟ್ಟಾಗಿ ನೈಕಂಬ್ಳಿಯವರು ಸಂಘಟಿಸಿದರು. ತೆಂಕು ಬಡಗಿನ ಕಲಾವಿದರನ್ನು ಸಮ್ಮಿಶ್ರಿಸಿ ಉಭಯ ಕಲೆಗಳನ್ನು ಕರೆತಂದು ರಾಜಧಾನಿಯಲ್ಲಿ ಮೇಳಯಿಸಿದ್ದಾರೆ. ಕಾಲಮಿತಿ ತಾಳಮದ್ದಲೆ ಮಾಧ್ಯಮವನ್ನು ರಾತ್ರಿ ಬೆಳಗಿನ ತನಕ ಆಡಿಸಿದ್ದಾರೆ. ಅವರಿಗೊಂದು ದೊಡ್ಡ ಅಭಿನಂದನೆಗಳು.

ಸಂಧಾನದ ಕೃಷ್ಣನಾಗಿ ಸುಣ್ಣಂಬಳರು ವಿದುರನ ಜತೆ  ಸಂವಾದ ನಡೆಸುತ್ತಾ ಕೌರವನ ಸಭೆಯ ಟೀಕಿಸುತ್ತಾ, ಮುಂದೆ ಕೌರವ ಪಾತ್ರಧಾರಿ ರಂಗಭಟ್ಟರ ಜತೆ ಸಮಜೋಡಿಯಂತೆ ಮಾತು ಬೆಳೆಸಿ, ಕೃಷ್ಣನ ಮಾತುಗಳನ್ನು ಹದವಾಗಿ ಬೆಳೆಸಿ, ಒಪ್ಪ ಓರಣದ ನೈಜ ವಾಗ್ಝರಿಗಳು ಒಡೆಯ ಲಕ್ಷ್ಮಿರಮಣನೀತ ಎಂಬಂತೆ ಪಾತ್ರ ಪೋಷಿಸಿದ್ದಾರೆ.

ಕೌರವನ ಅಹಂಕಾರ ದರ್ಪವನ್ನು ಕಟುವಾಗಿ ಖಂಡಿಸುತ್ತಾ ಚಿಕ್ಕ ಅವಕಾಶದಲ್ಲಿ ಸಿಡುಕಿನಲ್ಲಿ ಮೆರೆದ ಮೂಡುಬಗೆವರ ವಿದುರ ಪಾತ್ರಕ್ಕೆ ನ್ಯಾಯ ದೊರೆತಿದೆ. 

ವಿದುರ ಆಡಿದ ಮಾತಿಗೆ ಉತ್ತರಿಸುತ್ತಾ, ಕೃಷ್ಣನಲ್ಲಿ ತಲೆಕಾಯುವ ಬಿಲ್ಲಿಗೆ ಉತ್ತರ ಹುಡುಕುತ್ತಾ, ಕುರುಸಭೆಯ ಕೌರವವನಾಗಿ ರಂಗಭಟ್ಟರ ಗತ್ತು ಗಾಂಬೀರ್ಯ, ಕೌರವನಾಗಿ ಕಾಣಬೇಕಾದ ಆ ಛಲದ ಮಾತುಗಳು ಛಲದಂಕಚಕ್ರೇಶ್ವರನಿಗೆ ಭೂಷಣ ಎಂಬಂತೆ ಔಚಿತ್ಯಪೂರ್ಣವಾಗಿ ಕಟ್ಟಿದ್ದಾರೆ. 

ದ್ರೌಪದಿಯ ದಾಸ್ಯ ಪ್ರಶ್ನೆ, ವಿದುರನ ಕುಲ, ಕುರುಕುಲದ ಪರಿಹಾಸ್ಯಗಳ ಮಧ್ಯೆ ಹೊಸ ವಾದ ವಿವಾದಗಳ ಕುಲಂಕುಶ ಚರ್ಚೆ ಪ್ರೇಕ್ಷಕರಿಗೆ ಹೊಸ ಬಗೆಯ ಉತ್ತರಕಂಡುಕೊಳ್ಳಲು ವಿಷಯ ದೊರಕಿಸಿತು. 

ಅರ್ಜುನನಾಗಿ ಜಬ್ಬಾರರ ಸುಲಲಿತ, ಅಲ್ಪ ಹಾಗೂ ಪೂರ್ಣ ವಿರಾಮವಿರದ ಅವರ ಮಾತುಗಾರಿಕೆ, ಅವರ ಆ ಕ್ಷೇತ್ರದ ಅನುಭವವು ಹೌದು ಹಾಗೂ ಅವರದ ಶೈಲಿಯೂ ಹೌದಾದರೂ, ಅವರ ಧಾಟಿಯಲ್ಲಿ ಕರ್ಣನನ್ನು ಕುಗ್ಗಿಸುವ ಪ್ರಶ್ನೆಗಳು ಕರ್ಣನನ್ನು ಮಾಡಿದ ಸಂಕದಗುಂಡಿಯವರನ್ನು ಸಂಕಟಕ್ಕೆ  ಸಿಲುಕಿಸಿ ಪ್ರೇಕ್ಷಕರ ಸಿಳ್ಳೆ ಚಪ್ಪಾಳೆ ದಕ್ಕಿಸಿ, ತಾವೊಬ್ಬ ಅಪ್ರತಿಮ ಕಲಾವಿದ, ಮೇರು ಪಂಕ್ತಿ ಎಂಬುದನ್ನು ಸಾಬೀತು ಮಾಡಿದ್ದಾರೆ. 

ಕರ್ಣನ ಪಾತ್ರಧಾರಿ ಸಂಕದಗುಂಡಿಯವರು ಭಾಷೆ ಮತ್ತು ಭಾಷ್ಯ ವಿವರಣೆ ಕೊಡುತ್ತಾ, ಕರ್ಣನ ಕ್ಷಾತ್ರದ ಬಗ್ಗೆ ಕೆಣಕಿದ ಅರ್ಜುನ ಪಾತ್ರಧಾರಿ ದಿಗ್ಗಜರೆನಿಸಿದ ಜಬ್ಬಾರ್‌ಗೆ ಉತ್ತರದ ಮೊನಚು ಮೊದಲು ಸೋತಂತೆ  ಕಂಡರೂ ಅರ್ಜುನನಿಗೆ ಉತ್ತರಿಸುವಲ್ಲಿ ಯಶ ಕಂಡಿದ್ದಾರೆ. 

ತಾಳಮದ್ದಲೆ ಕ್ಷೇತ್ರದ ಹೊಸ ಕಲಾವಿದ (ಹವ್ಯಾಸಿ ಆಗಿರಬಹುದು) ಅಶ್ವತ್ ಹೆಗ್ಡೆಯವರ ಮಾತುಗಾರಿಕೆಯಲ್ಲಿ ಹೊಸತನವಿರದಿದ್ದರೂ, ಅಚ್ಚುಕಟ್ಟಾಗಿ ಹಿರಿತಲೆಯ ಮುಂದೆ ಪ್ರದರ್ಶನ ಕೊಟ್ಟದ್ದು ಅವರಂತ ಬೆಳೆಯುವ ಕಲಾವಿದನಿಗೆ ಒದಗಿಸಿದ ಅವಕಾಶ ಸರಿ ಇದೆ  ಎನ್ನುವಷ್ಟರ ಮಟ್ಟಿಗೆ ಇತ್ತು. 

ಶಲ್ಯನ ಪಾತ್ರ ಮಾಡಿದ ರಂಗಭಟ್ಟರ ಮೊನಚಾದ ಅರ್ಥಪೂರ್ಣ ಮಾತುಗಾರಿಕೆ, ಕರ್ಣ ಪಾತ್ರಧಾರಿಗೆ ಮನಮುಟ್ಟುವಂತೆ ಆಡಿದ ಶೈಲಿ ಎಲ್ಲರಿಗೂ ಇಷ್ಟವಾಯಿತು.  ಬೆಳಗಿನ ಜಾವದಲ್ಲಿ ಸರ್ಪಾಸ್ತ್ರ ಮಾಡಿದ ಸುಧಾಕರ್ ಹೊಸಬೆಟ್ಟುರವರ ಹಾಸ್ಯಭರಿತ ಮಾತುಗಳು ನಿದ್ರಾಮಲಿನಿಂದ ಎಚ್ಚರಿಸಿ ಎಲ್ಲರನ್ನು ಬೆಳಿಗ್ಗೆ ಆರು ಇಪ್ಪತ್ತರ ತನಕವು ಆಟ ಕಣ್ಣು ಮುಚ್ಚಲು ಬಿಡಲಿಲ್ಲ.

ಹಿಮ್ಮೇಳದಲ್ಲಿ ಕನ್ನಡಿಕಟ್ಟೆಯವರ ಅಗರಿ ಶೈಲಿಯ ಪದ್ಯಗಳು, ಹೆಬ್ರಿಯವರ ತೆಂಕು ಬಡಗಿನ ಆಲಾಪನೆಗಳು, ಸುಮಧುರ ಕಂಠದ ಭಾಗವತಿಗೆ, ಮೂಡುಬೆಳ್ಳೆಯವರ ಸಂಧಾನದ ಪದ್ಯದ ಓಘಗಳು ಕೇಳುಗರ ಮನತುಂಬಿಬಂತು. ಅದಕ್ಕೆ ಪೂರಕವಾದ ಚಂಡೆ ಮದ್ದಲೆ ಚಕ್ರತಾಳಗಳು ಸಮ್ಮಿಲಿತವಾಯ್ತು. ಯಾವ ಪದ್ಯವೂ ಐದು ನಿಮಿಷ ಮೀರದೆ ಅಭಾಸವಾಗಲಿಲ್ಲ. 
ಅರ್ಥಪೂರ್ಣವಾದ ಸಭಾಕಾರ್ಯಕ್ರಮ, ತಾಳಮದ್ದಲೆ ಕ್ಷೇತ್ರದಲ್ಲಿ ಹಿರಿಯರಿಗೆ ಮಾಡಿದ ಸನ್ಮಾನ ಅವಶ್ಯಕವಾಗಿ ನಡೆಯಬೇಕಾಗಿತ್ತು, ಅದು ಸಹ ಸಂಪನ್ನವಾಯ್ತು.
-ಚಂದ್ರ ಹೆಗಡೆ, ಮಡೋಡಿ

ಬೆಳಗಿನವರೆಗೂ 250ರಷ್ಟು ಪ್ರೇಕ್ಷಕರು
ತಾಳಮದ್ದಳೆಯ ಗುಂಗಿಂದ ಹೊರಬರಲು ಸರಿ ಸುಮಾರು 2 ದಿನ ಬೇಕಾಯಿತು.

ನಿಮ್ಮ ಸಂಘಟನೆ, ಯಕ್ಷ ಸಂಕ್ರಾಂತಿಯ ಕಳೆದ ಹಲವು ವರ್ಷಗಳ ಸಕ್ಸಸ್ ಕಣ್ಣಾರೆ ಕಂಡ ನನಗೆ ತಾಳಮದ್ದಲೆಗೆ ಜನ ಬರ್ತಾರೆ ಎಂಬ ನಿರೀಕ್ಷೆ ಇತ್ತು, ಆದರೆ ರವೀಂದ್ರ ಕಲಾಕ್ಷೇತ್ರ ಜನಸ್ತೋಮದಿಂದ ತುಳುಕುತ್ತದೆ ಎಂದು ಕನಸಲ್ಲಿಯೂ ಎಣಿಸಿರಲಿಲ್ಲ. ಮತ್ತೆ ಮುಂಜಾವು 6 ಘಂಟೆಯ ವರೆಗೆ 250ಕ್ಕೂ ಹೆಚ್ಚಿನ ಜನ ಇದ್ದು ಆಸ್ವಾದಿಸಿದ್ದು ದಿಗ್ಭ್ರಮೆಗೊಳಿಸಿತು.

ಘಟಾನುಘಟಿ ಕಲಾವಿದರು, ಅದಕ್ಕೆ ಮತ್ತಷ್ಟು ರಸ ತುಂಬಿದ ಹಿಮ್ಮೇಳ ವಾಹ್  ಹೊಗಳಲು ಪದಪುಂಜಗಳಿಲ್ಲ. ನಿಮ್ಮ ಸಂಘಟನೆ, ನಿಮ್ಮೊಂದಿಗೆ ದುಡಿದ ಆ ಕಾರ್ಯಕರ್ತರಿಗೆ ಶರಣು ಶರಣಾರ್ಥಿ. ಮತ್ತೆ ಇವೆಲ್ಲದರ ನಡುವೆ ನನ್ನನ್ನು ಸೋಜಿಗಗೊಳಿಸಿದ್ದು ಬೈಂದೂರ್ ಶಾಸಕರಾದ ಗಂಟಿಹೊಳೆಯವರ ಸರಳತನ, ಸಜ್ಜನಿಕೆ, ವ್ಯಕ್ತಿತ್ವ, ನಿಜಕ್ಕೂ ಆ ಊರ ಜನತೆ ಧನ್ಯರು. ಇನ್ನು ನಮ್ಮ ಜಬ್ಬಾರರ ಗುರು ಸಮ್ಮಾನದ ಮಾತುಗಳು. 

ಆಟ ಅರ್ಥದ ಬಗ್ಗೆ ಕಾಮೆಂಟ್ ಮಾಡುವಷ್ಟು ದೊಡ್ಡವನಲ್ಲ ನಾನು. ಅವರೆಲ್ಲರ ಮಾತುಗಳಿಗೆ ಮರುಳಾಗಿ ನಿದ್ದೆ ಮರೆತು ಅರ್ಥ ಕೇಳಿದ್ದೇನೆ. ಯಕ್ಷ ಸಂಕ್ರಾಂತಿಯ ವತಿಯಿಂದ ಈ ತರಹದ ಕಾರ್ಯಕ್ರಮಗಳು ಮತ್ತೆ ನಡೆಯಲಿ.
-ವಿಘ್ನೇಶ ನಾಯಕ, ಅಂಕೋಲಾ

ಹೊಸ ಪ್ರೇಕ್ಷಕರು
ಯಕ್ಷಗಾನವು ವಲಯದ ಆಚೆಗಿನ ಪ್ರೇಕ್ಷಕರನ್ನು ತಲುಪಿದಾಗ, ಅವರ ಅಭಿಪ್ರಾಯ ಹೆಚ್ಚು ಖುಷಿ ಕೊಡುತ್ತವೆ ಎನ್ನುತ್ತಾರೆ ಕಾರ್ಯಕ್ರಮದ ಸಂಘಟಕ ನಾಗರಾಜ್ ನೈಕಂಬ್ಳಿ. ಅವರು ಹೇಳಿರುವುದು ಈ ಕೆಳಗಿನ ಅಭಿಪ್ರಾಯದ ಕುರಿತಾಗಿ.

ವಾಗ್ವಿಲಾಸದ ಝೇಂಕಾರ... ಕನ್ನಡದ ಕುಶಾಗ್ರಮತಿಗಳ ಕಂಗೊಳಿಸುವ ಪ್ರಭೆ... ವಾಗ್ದೇವಿಯ ಸುಂದರ ವನದಲ್ಲಿ ಒಂದಕ್ಕಿಂತ ಒಂದು ಚೆಲುವಿನ ಸುಮಗಳು... ನೋಡಿದಷ್ಟೂ, ಕೇಳಿದಷ್ಟೂ... ವಿನಯದಿಂದ ಮೌನದ ಮಡಿಲಿಗೆ ಸೇರುವುದೇ ಮಹದಾನಂದ... ಕಾನನದಿ ಮಲ್ಲಿಗೆಯು ಮೌನದಿಂ ಬಿರಿದಂತೆ ಮನವನನುಗೊಳಿಸು ಗುರುವೇ ಹೇ ದೇವ.

ಬಯಲು ಸೀಮೆಯ ದಾವಣಗೆರೆ ಪ್ರದೇಶದವನಾದ ನನಗೆ ಅಭೂತಪೂರ್ವ ಅನುಭವ. ಈ ಹಿಂದೆ ನೀನಾಸಂ ನಲ್ಲಿ ಇದರ ಝಲಕ್ ಸಿಕ್ಕಿತ್ತು. ಕನ್ನಡದ ಶ್ರೇಷ್ಠ ಕಲಾವಿದರು ಹಾಗೂ ವಿದ್ವಾಂಸರ ಮಾತಿನ ಕಲೆ ನಮ್ಮ ಸಾಂಸ್ಕೃತಿಕ ಹೆಮ್ಮೆ. ಯಕ್ಷ ಸಂಕ್ರಾಂತಿ ಸಮೂಹದ ಶ್ರದ್ಧೆ, ಸನ್ನಡತೆ ಹಾಗೂ ಸಮರ್ಪಣಾ ಮನೋಭಾವಕ್ಕೆ ತಲೆ ಬಾಗಿ ವಂದಿಸುತ್ತೇನೆ. ಶ್ರೀ ಜಬ್ಬಾರ್ ಸಮೋ ಅವರನ್ನು ಕಣ್ಣಾರೆ ಕಂಡಿದ್ದು, ಅವರ ಗುರು ಸಮ್ಮಾನದಲ್ಲಿ ಪಾಲ್ಗೊಂಡು ಅವರ ಪುರಾತನ ಪೌರಾಣಿಕ ಪ್ರಜ್ಞೆ ಹಾಗೂ ಕಲಾ ಶ್ರೀಮಂತಿಕೆಗೆ ಬೆರಗಾಗಿದ್ದೇನೆ. ಎಷ್ಟು ಹೇಳಿದರೂ ಕಡಿಮೆಯೇ.

ಶಾಸಕ ಗುರುವಣ್ಣ, ನಾಗರಾಜ ಶೆಟ್ಟಿ ನೈಕಂಬ್ಳಿ ಮತ್ತು ಸಮೂಹದ ಸದಸ್ಯರಿಗೆ ಗೌರವ ನಮನಗಳು. ಚಿರಕಾಲ ನೆನಪಿನಲ್ಲಿ ಉಳಿಯುವ ಕಾರ್ಯಕ್ರಮ. ಮುಂದಿನ ದಿನಗಳ ಕಾರ್ಯಕ್ರಮಗಳ ಮಾಹಿತಿ ನೀಡಿ. ಅಹೋರಾತ್ರಿ ತಾಳಮದ್ದಳೆಯ ಚಿತ್ರೀಕರಣ ನೋಡಲು ಅವಕಾಶ ಮಾಡಿ ಕೊಡಿ. ಮತ್ತೊಮ್ಮೆ ಕಲಾವಿದರೆಲ್ಲರಿಗೆ ನಮಸ್ಕಾರಗಳು.
-ದಿವಾಕರ ಬಿ.ಎಸ್‌.

ಶ್ರೋತೃಗಳ ಔದಾರ್ಯವೇ ಭೂಷಣ
ಪೂರ್ಣರಾತ್ರಿ ತಾಳಮದ್ದಳೆಗೆ ಶ್ರೀ ಸೇತುರಾಂ ಸರ್ ಆಗಮಿಸಿದ್ದರ ಕುರಿತು ಖುಷಿಗೊಂಡ ಜಬ್ಬಾರಣ್ಣ ಮನದ ಮಾತುಗಳು ಇಲ್ಲಿವೆ:

ಇದೊಂದು ಅಪೂರ್ವ ಅವಕಾಶ.ಶ್ರೀ ಸೇತುರಾಮರೊಂದಿಗೆ ವರ್ಷಗಳ ಹಿಂದೆ ಕುಂದಾಪುರದಲ್ಲಿ ವೇದಿಕೆ ಹಂಚಿಕೊಂಡಿದ್ದೆ. ಆಗ ನನಗೆ ಅವರ ಎರಡು ಕೃತಿಗಳನ್ನು ನೆನಪಿನ ಭದ್ರತೆಗಾಗಿ ಉಡುಗೊರೆಯಿತ್ತಿದ್ದರು. ನಾನಂತೂ 'ಶಬ್ದ ಪ್ರಿಯ'. ಸೇತುರಾಮರು ಶಬ್ದಗಳೊಂದಿಗೆ ಆಟವಾಡುವ ಕಲೆಯಲ್ಲಿ ನಿಸ್ಸೀಮರು. ನನಗಿವರು ನೀಡಿದ 'ದಹನ' ಮತ್ತು 'ನಾವಲ್ಲ' ಪುಸ್ತಕಗಳಲ್ಲಿ ಶಬ್ದಗಳನ್ನು ಎಷ್ಟು ಪರಿಣಾಮಕಾರಿಯಾಗಿ ಬಳಸಬಹುದೆಂಬುದರ ದೃಷ್ಟಾಂತಗಳನ್ನು ಕಂಡು ನಾನು ಬೆರಗಾಗಿದ್ದೆ.

ರವೀಂದ್ರ ಕಲಾ ಕ್ಷೇತ್ರದಲ್ಲಿ ಪ್ರಸ್ತುತಿಗೊಂಡು ಅಭೂತಪೂರ್ವ ಯಶ ಸಂಪಾದಿಸಿದ ಇಡೀ ಇರುಳಿನ ತಾಳಮದ್ದಳೆಗೆ ಸೇತುರಾಮರು ಬರುವರೆಂದು ಮೊದಲೇ ತಿಳಿದಿತ್ತು.
ಕಾರ್ಯಕ್ರಮಕ್ಕೆ ಒಪ್ಪೊತ್ತು ಮುಂಚೆಯೇ ಆಗಮಿಸಿದ ಇವರ ಅಪ್ಪುಗೆಯಲ್ಲಿ ಇವರೊಳಗಣ ಒಂದಷ್ಟು ಶಬ್ದಗಳು ನನ್ನೊಳಹೊಕ್ಕವೇನೋ ಎನ್ನುವ ಅನುಭವವಾಗಿ ಹರ್ಷೋಲ್ಲಸಿತನಾಗಿಬಿಟ್ಟಿದ್ದೆ.

ಸಾಂಸ್ಕೃತಿಕ ನಗರ ಬೆಂಗಳೂರಿನವರಷ್ಟೇ ಅಲ್ಲದೆ ವಿವಿಧೆಡೆಗಳಿಂದ ಆಗಮಿಸಿದ ತಾಳಮದ್ದಳೆ ಅಭಿಮಾನಿಗಳ ದಂಡು ತಾಜಾ ಕಲಾ ಪ್ರೀತಿಯೊಂದಿಗೆ ತಮ್ಮ ತನ್ಮಯಚಿತ್ತ ಉಪಸ್ಥಿತಿಯ ಬೆಳಕಿನಲ್ಲಿ ಇಡೀ ರಾತ್ರಿಯನ್ನೇ  ಹಿಮ್ಮಟ್ಟಿಸಿಬಿಟ್ಟಿತು! ಶ್ರೋತೃಗಳ ಔದಾರ್ಯ ಎಷ್ಟಿತ್ತೆಂದರೆ ಪ್ರತಿಯೋರ್ವ ಅರ್ಥದಾರಿಯನ್ನೂ ವೃತ್ತಿಪರ, ಹವ್ಯಾಸಿಗಳೆಂದು ಬೇರ್ಪಡಿಸಿ ಪರಿಗಣಿಸದೆ, ಸರ್ವರನ್ನೂ ಸಮಾನವಾಗಿ ಉತ್ತೇಜಿಸಿ ತಮ್ಮೂರ ಕಲೆಯೊಂದಕ್ಕೆ ಘನ ಗೌರವದ ಮೆರುಗನ್ನೇ ನೀಡಿದರು. 

ನಮ್ಮ ಒಟ್ಟು ಅನುಭವದಲ್ಲಿ ಇಂತಹುದೊಂದು ಸ್ಮರಣೀಯ 'ಸಾಂಸ್ಕೃತಿಕ ಆದರ' ಸಿಕ್ಕಿದ್ದು ಇದೇ ಮೊದಲೆಂಬುದು ನಮ್ಮೆಲ್ಲರ ವಿನಮ್ರ ಅನಿಸಿಕೆ.

ಈ ಸುವರ್ಣಾವಕಾಶ ಒದಗಿಸಿದುವುದರೊಂದಿಗೆ ಅದ್ದೂರಿ ಯಶಸ್ಸಿನ ಪರಿಪೂರ್ಣ ವಾರೀಸುದಾರರಾಗಿ ಕಾಣಿಸಿಕೊಂಡ ಸನ್ಮಿತ್ರ ನೈಕಂಬ್ಳಿ ನಾಗರಾಜ ಶೆಟ್ರಿಗೆ ಧನ್ಯವಾದಗಳು. ಇವರೊಂದಿಗೆ ಅವಿರತವಾಗಿ ಮನಗೂಡಿಸಿ ದುಡಿದ ಗೆಳೆಯರಾದ ಸುನಿಲ್ ಕುಮಾರ್ ಹೊಲಾಡು ಮತ್ತು ನಂದ್ರೊಳ್ಳಿ ಸುರೇಶ ಶೆಟ್ಟಿಯವರಿಗೂ ನಾವು ಕೃತಜ್ಞರು.

ರಾತ್ರಿಯಿಡೀ ಜತೆಗಿದ್ದು ಕಲಾ ಕಲಾಪದಲ್ಲಿ ಮೈಮರೆತು ಭಾಗವಹಿಸಿ ಶಿಳ್ಳೆ, ಕರತಾಡನ, ನಗುಗಳ ಮೂಲಕ ಉತ್ತೇಜಿಸಿದ ಯಕ್ಷಗಾನವನ್ನು ಬದುಕಿನ ಪ್ರಧಾನ ಅಂಗವೋ ಎಂಬಷ್ಟು ಆತ್ಮೀಯತೆಯಿಂದ ಆವಾಹಿಸಿಕೊಂಡ ಅಭಿಮಾನಗಳ ಸಂದಣಿಗೆ ವಿನೀತ ನಮಸ್ಕಾರ. ಬೆಂಗಳೂರಿನ ಸಾಂಸ್ಕೃತಿಕ ಇತಿಹಾಸವೆಂಬುದು ಈ ಪ್ರಬುದ್ಧ ಪ್ರಯೋಗ ಹಾಗೂ ಮಹಾ ಯಶಸ್ಸನ್ನು ತನ್ನ ಉಡಿಯೊಳಗಿರಿಸಿ ಮುಂದಿನ ಅನೇಕ ತಲೆಮಾರುಗಳಿಗೆ ನೆನಪಿಸುತ್ತಿರಲಿ.
- ಜಬ್ಬಾರ್ ಸಮೊ

ಕಲಾವಿದರ ತರ್ಕ ಸಾಮರ್ಥ್ಯಕ್ಕೆ ಪ್ರೇಕ್ಷಕರ ಪ್ರಬುದ್ಧತೆಯ ಮೆರುಗು 
ನಮಸ್ಕಾರ. ತಾಳಮದ್ದಳೆ ಮುಗಿದು ಒಂದು ವಾರ ಆದರೂ ಅದರ ಬಗ್ಗೆ ಬರೆಯಲು ಆಗದೆ ಇರುವುದಕ್ಕೆ ಕ್ಷಮೆ ಇರಲಿ.

ನನ್ನ ಮೊದಲ ತಾಳಮದ್ದಳೆಯ ಅನುಭವ ಸುಮಾರು 2 ದಶಕದ ಮುಂಚಿನದು. ಅಂದಿನ ಪ್ರಭಾಕರ ಜೋಶಿಯವರ ವಾಲಿ, ರಾಮದಾಸ ಸಾಮಗರ ರಾಮ, ವಾಸುದೇವ ಸಾಮಗರ ಸುಗ್ರೀವ ಹಾಗೂ ವಾಸುದೇವ ರಂಗ ಭಟ್ಟರ ತಾರೆ ಇನ್ನೂ ಕಣ್ಣ ಮುಂದಿದೆ.

ಅಂದಿನಿಂದ ಇಲ್ಲಿಯವರೆಗೆ ಯಕ್ಷಗಾನಕ್ಕಿಂತ ತಾಳಮದ್ದಳೆಯೇ ನನ್ನ ಮೆಚ್ಚಿನ ಕಲಾಪ್ರಕಾರ. ಪ್ರತೀ ವರ್ಷ ಬೆಂಗಳೂರಿನಲ್ಲಿ ಬಹಳಷ್ಟು ಪೌರಾಣಿಕ ಯಕ್ಷಗಾನ ನೋಡುತ್ತಿದ್ದರೂ ತಾಳಮದ್ದಳೆ ಮರೀಚಿಕೆಯಾಗಿಯೇ ಉಳಿಯುತಿತ್ತು. ಇಂಥ ಸಮಯದಲ್ಲಿ ಯಕ್ಷ ಸಂಕ್ರಾಂತಿಯ ಪೂರ್ಣರಾತ್ರಿ ತಾಳಮದ್ದಳೆ ಒಂದು ಅವಿಸ್ಮರಣೀಯ ಅನುಭವವೇ ಸರಿ.

ಮೊದಲನೆಯದಾಗಿ, ನನ್ನ ಪ್ರಕಾರ ತಾಳಮದ್ದಳೆ ಕೇವಲ ವಾದ ವಿವಾದದ ವೇದಿಕೆಯಾಗದೆ, ಸಂವಾದದ ವೇದಿಕೆಯಾದರೆ ಉತ್ತಮ. ಮೊನ್ನೆಯ ತಾಳಮದ್ದಳೆಯಲ್ಲಿ ಎಲ್ಲಾ ಕಲಾವಿದರೂ ಒಟ್ಟಿಗೆ ಪ್ರಸಂಗವನ್ನು ಚೆನ್ನಾಗಿ ಪ್ರಸ್ತುತಪಡಿಸಲು ಪ್ರಯತ್ನಿಸಿದ್ದು ಎದ್ದು ಕಾಣುತಿತ್ತು. ಬಹುಷಃ ಇದೇ ಕಾರಣಕ್ಕೆ ಬೆಳಿಗ್ಗಿನ ತನಕ ಅಷ್ಟೊಂದು ಪ್ರೇಕ್ಷಕರು ಉಳಿದದ್ದು.

ಎಲ್ಲಾ ಕಲಾವಿದರೂ ಅತ್ಯುತ್ತಮ ಪ್ರದರ್ಶನ ನೀಡಿ ತಾಳಮದ್ದಳೆಯನ್ನು ಮಹಾನಗರದಲ್ಲಿ ಗೆಲ್ಲಿಸಿದರು ಎನ್ನುವುದು ನಿಸ್ಸಂದೇಹ. ವಿಶ್ವೇಶ್ವರ ಭಟ್ಟರ ಕೌರವನನ್ನು ತುಂಬಾ ಕೇಳಿದ್ದರೂ, ಅವರ ಸಂಧಾನದ ಕೃಷ್ಣ ಇದೇ ಮೊದಲು ಕೇಳಿದ್ದು, ಪ್ರೇಕ್ಷಕರನ್ನು ಅವರು ಹಿಡಿದಿಟ್ಟುಕೊಂಡ ಬಗೆ ಅಪೂರ್ವ. ರಂಗ ಭಟ್ಟರಂತೂ ತಾಳಮದ್ದಳೆಯ ಸವ್ಯಸಾಚಿ ಎನ್ನುವುದನ್ನು ಎರಡೂ ಪ್ರಸಂಗದಲ್ಲಿ ಸಾಬೀತು ಪಡಿಸಿದರು.

ಕೌರವನಾಗಿ ಅವರು ನೀಡಿದ 2 ಊನ ಬುದ್ಧಿ & 2 ಬಾಲ ಬುದ್ಧಿಯ ವಿವರಣೆ ಎಂದೂ ನೆನಪಿನಲ್ಲಿ ಉಳಿಯೋದು ಖಂಡಿತ.. ಇನ್ನು ಕರ್ಣಾರ್ಜುನದಲ್ಲಿ, ಜಬ್ಬಾರ್ ಅವರ ನಿರರ್ಗಳ ಪಾರ್ಥ, ಸಂಕದಗುಂಡಿ ಅವರ 'ಸಾಯಕ ತೊಡುವ ವಿಚಾರ'ದ ತರ್ಕ, ಅವತಾರಗಳ ಪರಿಚಯಿಸುವ ಸರ್ಪಾಸ್ತ್ರ ಇವೆಲ್ಲವೂ ನಿದ್ರೆಯನ್ನು ಮರೆಮಾಡಿದವು.

ಇನ್ನು ಮುಖ್ಯವಾಗಿ, ಪ್ರೇಕ್ಷಕಗಣ ತುಂಬಾ ಪ್ರಬುದ್ದವಾಗಿ, ಒಂದು ಪರಿಪೂರ್ಣ ಸಭೆಯನ್ನು ಕಟ್ಟಿಕೊಟ್ಟಿತು. ಬೆಂಗಳೂರಿನ ಎಷ್ಟೋ ಯಕ್ಷಗಾನಗಳಲ್ಲಿ ವಾಗ್ಮಿಗಳನ್ನು ಕರೆಯಿಸಿ, ಅವರಿಗೆ ಸಮಯದ ಅಭಾವದಿಂದಲೋ ಅಥವಾ ಪ್ರೇಕ್ಷಕರ ಅಸಹನೆಇಂದಲೋ ಸೂಕ್ತ ಅವಕಾಶ ಸಿಗದೇ ಹೋದ್ದದ್ದು ನಮ್ಮ ಕಣ್ಣೆದುರಿಗೆ ಇದೆ.. ಆದರೆ ಮೊನ್ನೆಯ ಸಭೆಯ ಪ್ರಬುದ್ಧತೆ ಒಂದೊಳ್ಳೆಯ ತಾಳಮದ್ದಳೆಗೆ ಅವಕಾಶ ಕೊಟ್ಟಿತು.

ನಾನು ಬಹಳ ನಿರೀಕ್ಷೆ ಇಟ್ಟುಕೊಂಡಿದ್ದ ಶಲ್ಯ ಕರ್ಣರ ತರ್ಕ, ವಿಶ್ಲೇಷಣೆಗಳು & ಅವಸಾನದ ಕರ್ಣನ ಮಾತುಗಳು ಸಮಯದ ಅಭಾವದಿಂದ ತಪ್ಪಿತು ಎಂಬ ಸಣ್ಣ ನಿರಾಸೆ ಬಿಟ್ಟರೆ, ಇದೊಂದು ಕಲಾಕ್ಷೇತ್ರದ ಇತಿಹಾಸದಲ್ಲಿ 'ನ ಭೂತೋ' ದಿನ ಎನ್ನುವುದರಲ್ಲಿ ಎರಡು ಮಾತಿಲ್ಲ.. ಮುಂದೆಯೂ ಯಕ್ಷ ಸಂಕ್ರಾಂತಿ ತಂಡ ಇಂತಹ ಕಾರ್ಯಕ್ರಮ ಮಾಡುವರೆಂಬ ವಿಶ್ವಾಸದಿಂದ 'ನ ಭವಿಷ್ಯತಿ' ಎಂದು ಹೇಳಲಾರೆ.

ಮುಂದೆಯೂ ಇಂತಹ ಕಾರ್ಯಕ್ರಮಗಳನ್ನು ಆಯೋಜನೆಯನ್ನು ಮಾಡಲು ನಿಮಗೆಲ್ಲರಿಗೂ, ಅದನ್ನು ಪ್ರೋತ್ಸಾಹಿಸಲು ನಮಗೆಲ್ಲರಿಗೂ ಭಗವಂತನು ತನು, ಮನ, ಧನ ನೀಡಲಿ ಎಂದು ಹಾರೈಸುವ
- ಸುರೇಶ ಅಡಿಗ ನೀಲಾವರ.

ಕೊನೆಯವರೆಗೂ ಪ್ರೇಕ್ಷಕರಿದ್ದದ್ದೇ ಯಶಸ್ಸಿನ ಸೂಚನೆ
ಒಂದು ಮಾತಿನಲ್ಲಿ ಹೇಳುವುದಾದರೆ. ಮಾಡಿದ್ದು ಸಾರ್ಥಕ ಆಯ್ತು ಅನ್ನಿಸಿತು. ಜನ ಇದ್ದರೆ ಕಾರ್ಯಕ್ರಮ ಚಂದ ಆಗಿದೆ ಎನ್ನುವುದು ಒಂದು ರೀತಿಯಲ್ಲಿ ನಿಜ. ಜನರು ಕೊನೆವರೆಗೆ ಇದ್ದರು ಎನ್ನುವುದು, ಅವರನ್ನು ಇರಿಸಿದ ಕಾರ್ಯಕ್ರಮಕ್ಕೆ ಸಂದ ಗೆಲುವು. ಈ ಗೆಲುವು ಕಾರ್ಯಕ್ರಮ ಆಯೋಜಕರಿಗೆ ಸಲ್ಲಬೇಕಾದದ್ದು. ಇವರ ಗೆಲುವು ತಾಳಮದ್ದಳೆಯ ಹೊಸ ಪರ್ವದ ಗೆಲುವಿಗೆ ನಾಂದಿ ಹಾಡಿದ್ದು ನಿಜ.

ತಾಳಮದ್ದಳೆ ಒಂದು ಮಾಯಾಲೋಕ ಅನ್ನಿಸುವುದು ನನಗೆ. ಆಡುವ ಮಾತನ್ನು ಮಾಧುರ್ಯದ ಸುಮವಾಗಿ ಜೋಡಿಸಿ, ಕಲಾಮಾತೆಗೆ ಸಿಂಗರಿಸಿದಾಗ, ಅದರ ಅಂದ ನೋಡಿ ಕಣ್ ಮನ ತುಂಬಿಕೊಳ್ಳುವ ಸಹೃದಯಿಗಳ ಸಾಗರದಲ್ಲಿ ನಾವೂ ಇರುವುದು ನಮಗೆ ಸಂತೋಷ.

ಕಲಾ ಪ್ರಕಾರ ಯಾವುದೇ ಆದರೂ ಅದನ್ನು ಕಾಣಲು ಅಥವಾ ಕೇಳಲು ಒಂದು ಸಂಸ್ಕಾರ ಬೇಕಂತೆ. ರಾತ್ರಿ ಪೂರ್ತಿ ತಾಳಮದ್ದಳೆಯ ರುಚಿಯ ಸಂಸ್ಕಾರ ಬೆಂಗಳೂರಿಗೆ ಸಿಕ್ಕಿದ್ದು ಸಂತೋಷ. ಮತ್ತೆ ಹೀಗೆ ಆಯೋಜಿಸಲೂ ಒಂದು ಸ್ಥೈರ್ಯ ದೃಢತೆ ಬೇಕು.

ಆ ಪ್ರಯೋಗವನ್ನು ಒಪ್ಪಿದ ಬೆಂಗಳೂರು ಜನತೆ ಸ್ಪೂರ್ತಿ ನೀಡಿದ್ದು ಕಲಾವಿದರಿಗೆ ಮಾತ್ರವಲ್ಲ. ಮುಂದೆ ಹೀಗೆ ಆಯೋಜಿಸುವವರಿಗೆ ಇದೊಂದು ಸ್ಫೂರ್ತಿಯ ಚಿಲುಮೆ. ತಾಳಮದ್ದಳೆ ಎಂದೇ ಮಂಗಳೂರಿನಿಂದ ಬೆಂಗಳೂರಿಗೆ ಹೋರಾಟ ಮೂವರ ಬಳಗ ನಾಲ್ಕಾಗಿ (ದಿನೇಶ್ ಅಣ್ಣ, ಆದಿತ್ಯ ಶರ್ಮಾ, ಶ್ರೀರಾಮಣ್ಣ ) ಸಮಯಕ್ಕೆ ಸರಿಯಾಗಿ ತಲುಪಿದ್ದು ಸಂತಸ ಕೊಟ್ಟಿತು. 

ತಾಳಮದ್ದಳೆ ಆಯೋಜಕರ ಮೇಲೆ ಒಂದು ಆರೋಪ ಇರ್ತದೆ. ತಾಳಮದ್ದಳೆಯನ್ನು ತಾಳಮದ್ದಳೆಗೋಸ್ಕರ ಮಾಡುವುದಿಲ್ಲ ಅಂತ. ಅದಕ್ಕೆ ತುತ್ತಾಗದೆ ತಾಳಮದ್ದಳೆ ಕಾರ್ಯಕ್ರಮ ಆರಂಭವಾಯಿತು. ಅದು ಸಂತಸದ ವಿಷಯ.

ಕೃಷ್ಣ ಸಂಧಾನ ಮತ್ತು ಕರ್ಣ ಪರ್ವ ಬಗ್ಗೆ ಹೇಳುವುದಾದರೆ, ಕಲೆಯ ಬಗ್ಗೆ ಕಲಾವಿದರ ಬಗ್ಗೆ ಮಾತಾಡುವ ಯಾವ ಯೋಗ್ಯತೆಯೂ ನಾನು ಬರೆಯುವ ಅಕ್ಷರಕ್ಕೆ ಇಲ್ಲ. ಕಲೆಯಲ್ಲಿ ಅವರ ಕೃಷಿಗೆ ನಾವು ತಲೆಬಾಗುತ್ತೆನೆ. ಮೊದಲ ಭಾಗದಲ್ಲಿ ನಾನು ತುಂಬಾ ಇಷ್ಟಪಡುವ ವಿಶ್ವಣ್ಣ ರಂಗಣ್ಣ ಅವರ ಸಂವಾದ. ನಿಜಕ್ಕೂ ಮನಸ್ಸಿಗೆ ಮುದ ತಂದಿತು.

ನಾನು ಯಾವತ್ತೂ ಒಂದು ತಾಳಮದ್ದಳೆ ನೋಡಿದ್ರೆ ಒಂದು ನಾಲ್ಕು ವಿಷಯ ಅದರಿಂದ ಹೆಕ್ಕಿ ನಮ್ಮ ಕಿಸೆಗೆ ಹಾಕಿಕೊಳ್ಳುವ ಹಾಗಾದ್ರೆ ಆ ತಾಳಮದ್ದಳೆ ನಮಗೆ ಚಂದ ಆಯ್ತು ಅಂತ. ನಮ್ಮ ಕಿಸೆ ತುಂಬಿತು. ಕಿಸೆಗಳು ತುಂಬಿದವು.

ಇನ್ನು ಹಿಮ್ಮೇಳದ ಭಾಗವತರು ನಾನು ಮೊದಲು ಗೆಜ್ಜೆ ಕಟ್ಟಿದಾಗ ಅವರ ಭಾಗವತಿಗೆಯಲ್ಲಿ ನಡೆದಿದ್ದೆ- ಚಂದ್ರಕಾಂತರು. ಅವರ ಪ್ರತೀ ಪದ್ಯವೂ ಅಸ್ವಾದನೀಯವಾಗಿತ್ತು. ಜೊತೆಯಾದ ಹೆಬ್ರಿ ಗಣೇಶರು ಅವರ ಭಾಗವತಿಗೆಗೂ ವೇಷ ಹಾಕಿದ್ದೆ. ಇಬ್ಬರನ್ನೂ ಕಂಡು ಖುಷಿಯಾಯ್ತು.

ಎರಡನೇ ಭಾಗದಲ್ಲಿ... ಬೆಳಗ್ಗೆ ನಮ್ಮ ತಂಡವನ್ನು ನೋಡಿ, ಪ್ರೀತಿಯಿಂದ ನಿಮ್ಮ ತಂಡಕ್ಕೆ ಹೆಸರು ಕೊಡಬೇಕಾ. ನಿಮ್ಮದ್ದು 'ಪಟ್ಲಮ್ ' ಅಂತ ಹೇಳಿ ಅಕ್ಕರೆಯಿಂದ ಮಾತಾಡಿದ ಜಬ್ಬಾರ್ ಸರ್ ಅವರು ಮತ್ತು ಸಂಕಣ್ಣ. ಭಾಗವತಿಗೆಯಲ್ಲಿ ಜೀವ ತುಂಬಿದ ಕನ್ನಡಿಕಟ್ಟೆ ಅವರು, ಎಲ್ಲರೂ... ಸಮಯದ ಅಭಾವ ಇದ್ದರೂ ನಮ್ಮನ್ನು ಮುಟ್ಟಿದರು. ಕಾರ್ಯಕ್ರಮ ಚಂದ ಆಯ್ತು.

ಮೊದಲ ಪ್ರಯೋಗಕ್ಕೆ ಈ ಯಶಸ್ಸು ನೋಡುಗನಾಗಿ ನನಗೆ ಅನಿರೀಕ್ಷಿತ. ಆಯೋಜಕರ ಪರಿಶ್ರಮ ಅಭಿವಂದನೀಯ. ಎಲ್ಲವೂ ಒಳ್ಳೆಯದೇ ಇತ್ತಾ ಅಂದ್ರೆ, ನೂರು ಒಳ್ಳೆಯದರ ನಡುವೆ ಒಂದೆರಡು ನ್ಯೂನ್ಯತೆ ಇರಬಹುದು. ಆದರೆ ಗುಣಾಧಿಕ್ಯ ಇದ್ದದ್ದು ಸತ್ಯ.

ಪರಮಲಾಭವ ಗಳಿಸೆ ಜೀವಿತವ್ಯಾಪಾರ- |
ಕಿರಬೇಕು ಮೂಲಧನವದು ತತ್ತ್ವದೃಷ್ಟಿ ||
ಚಿರಲಾಭ ಜಗದಾತ್ಮ ಲೀಲಾವಿಹಾರಸುಖ |
ಧರೆಯ ಸುಖ ಮೇಲ್ಬಡ್ಡಿ - ಮಂಕುತಿಮ್ಮ ||

ಮಂಗಳೂರಿಂದ ಬೆಂಗಳೂರು ತಾಳಮದ್ದಳೆ ಅಂತ ಬಂದ ನಮಗೆ ಏನು ಸಿಕ್ಕಿತು ಅಂತ ನೋಡಿದ್ರೆ. ಕಗ್ಗದಂತೆ ತಾಳಮದ್ದಳೆ ಎನ್ನುವ ಪರಮ ಲಾಭದ ಜೊತೆಗೆ, ತತ್ವ ದೃಷ್ಟಿ, ಸುಹೃತ್ ಸ್ನೇಹ ಬಾಂಧವ್ಯ ಜೊತೆ ಹೆಜ್ಜೆ ಹಾಕುವುದು. ಇದರಿಂದ ಸಿಗುವ ಚಿರಲಾಭ ಸ್ನೇಹ ಬಾಂಧವ್ಯ. ಇದನ್ನು ಬಿಟ್ಟು ಸಿಕ್ಕಿದ ಬಡ್ಡಿ, ತುಂಬಾ ಇದೆ. ಅದು ಅರ್ಥದಲ್ಲಿ ಸಿಕ್ಕಿದ ಸ್ವಾರಸ್ಯ ಇರಬಹುದು, ಪದ್ಯದಲ್ಲಿ ಸಿಕ್ಕಿದ ಪರಂಪರೆಯ ಸ್ಪರ್ಶ ಇರಬಹುದು, ಅಥವಾ ಅಲ್ಲಿ ಸಿಕ್ಕಿದ ಆತ್ಮೀಯತೆ ಇರಬಹುದು ಇದೆಲ್ಲಾ ನಮ್ಮ ಪ್ರಾಪ್ತಿ.
ಮತ್ತೆ ಸಿಗೋಣ...
ಯಕ್ಷಗಾನಂ ವಿಶ್ವಗಾನಮ್ 
- ಆದರ್ಶ ಆಚಾರ್ಯ S, ಜನ್ನಾಪುರ (ಚಿಕ್ಕಮಗಳೂರು)

ಚೆನ್ನೈ, ಬೆಳಗಾವಿಯಿಂದಲೂ ಬಂದು ಸವಿದವರು
ಪೂರ್ಣ ರಾತ್ರಿ ತಾಳಮದ್ದಳೆ  ತುಂಬಾ ಚೆನ್ನಾಗಿ ಆಯ್ತು. ನಾವು ಚಿಕ್ಕವರಿದ್ದಾಗ ನೋಡುತ್ತಿದ್ದೆವು. ಬೆಂಗಳೂರಿಗೆ ಬಂದ ಮೇಲೆ ಎಂದೂ ನೋಡುವ ಅವಕಾಶ ಸಿಗಲಿಲ್ಲ. ಈಗ ಪೂರ್ಣ ರಾತ್ರಿ ತಾಳಮದ್ದಳೆ ಇದೆ ಅಂತ ಗೊತ್ತಾದ ತಕ್ಷಣ ನನ್ನೆಲ್ಲಾ ಬೇಕಾದವರಿಗೆ ಮೆಸೇಜ್ ಮಾಡಿಬಿಟ್ಟೆ. ಕೆಲವರು ಬರುತ್ತೇನೆ ಅಂತ ಹೇಳಿದರು. ಅದೇ ರೀತಿ ನನ್ನ ಅಣ್ಣ ಬೆಳಗಾವಿಯಿಂದ ಬಂದರು. ಮತ್ತೊಬ್ಬ ನನ್ನ ಮಗ ಸಹ ಚೆನ್ನೈನಿಂದ ಬಂದು ತಾಳಮದ್ದಲೆ ನೋಡಿ ತುಂಬಾ ಖುಷಿಯಾಗಿ ವಾಪಸ್ ಅವರ ಸ್ಥಾನಕ್ಕೆ ಮರಳಿದರು.

ತಾಳಮದ್ದಳೆ ತುಂಬಾ ತುಂಬಾ ಯಶಸ್ವಿಯಾಗಿ ನಡೆಯಿತು. ನಮಗೆ ಎಲ್ಲರಿಗೂ ಹೊಸ ಅನುಭವ ನೀಡಿತು. ಇನ್ನೊಂದು ವಿಷಯ ಏನು ಅಂದ್ರೆ ಒಂದು ಪ್ರಸಂಗ ಮುಗಿದ ಮೇಲೆ ಮಧ್ಯೆ ಐದು ನಿಮಿಷ ಬ್ರೇಕ್ ಕೊಟ್ಟು ಟೀ ಅಥವಾ ಕಾಫಿ ಕೊಟ್ಟಿದ್ದರೆ ಚೆನ್ನಾಗಿರುತ್ತಿತ್ತು.

ಆಗ ಬೆಳಗಿನ ತನಕ ಮುನ್ನೂರು ನಾನೂರು ಜನರು ಇರುತ್ತಿರೇನೋ ನನ್ನ ಅನಿಸಿಕೆ. ಕ್ಷಮಿಸಿ. ನಾನಂತೂ ತಾಳಮದ್ದಲೆ ಮುಗಿಸುವವರೆಗೆ ಇದ್ದೆ. ಬೆಳಗಿನ ಜಾವದಲ್ಲಿ  ಹಾಸ್ಯ ತುಂಬಾ ಮಜಾ ಕೊಟ್ಟಿತು. ರವೀಂದ್ರ ಕಲಾಕ್ಷೇತ್ರಕ್ಕೆ  ಮೊದಲನೇ ಬಾರಿಗೆ ಬಂದಿದ್ದು ನಾವು. ಕ್ಯಾಂಟೀನ್ ವ್ಯವಸ್ಥೆ ಇದೆ ಅಂತ ಗೊತ್ತೇ ಇರ್ಲಿಲ್ಲ. ನಾನು ಥರ್ಮಸ್ ಫ್ಲಾಸ್ಕ್‌ನಲ್ಲಿ ಕಾಫಿ ಹಾಕಿಕೊಂಡು ಬಂದಿದ್ದೆ. ಇದೇ ರೀತಿಯಲ್ಲಿ ಒಳ್ಳೆಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಇರಿ. ಜೊತೆಗೆ ಭಗವಂತ ಆ ಶಕ್ತಿಯನ್ನು ಕೊಡಲಿ.
ಹರೇ ಕೃಷ್ಣ ಹರೇ ರಾಮ 🙏🙏
-ಭವಾನಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು