![]() |
ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್‌ನ ಮಹತ್ವಾಕಾಂಕ್ಷಿ ಯೋಜನೆ "ಯಕ್ಷಧ್ರುವ ಯಕ್ಷ ಶಿಕ್ಷಣ" ಉದ್ಘಾಟನಾ ಕಾರ್ಯಕ್ರಮದಲ್ಲಿ ಶಾಸಕ ಉಮಾನಾಥ ಕೋಟ್ಯಾನ್, ಡಾ.ಎಂ.ಪ್ರಭಾಕರ ಜೋಶಿ, ಎಂ.ಎಲ್.ಸಾಮಗ, ಭುವನಾಭಿರಾಮ ಉಡುಪ ಮತ್ತಿತರ ಗಣ್ಯರು |
ಕಿನ್ನಿಗೋಳಿ: ಭಾರತೀಯ ಸಂಸ್ಕೃತಿಯ ಎಲ್ಲ ಕಲೆಗಳಿಗಿಂತ ಕರಾವಳಿಯ ಗಂಡುಕಲೆ ಯಕ್ಷಗಾನವು ವಿಶಿಷ್ಟವಾಗಿದ್ದು, ಇದರಲ್ಲಿ ಲಯಬದ್ಧ ಹಾಡುಗಾರಿಕೆ, ವೇಷಗಾರಿಕೆ, ನೃತ್ಯ, ಸ್ಪಷ್ಟ ಉಚ್ಚಾರದ ಮಾತುಗಾರಿಕೆ ಜೊತೆಗೆ ದೈಹಿಕ ವ್ಯಾಯಾಮ ಕೂಡ ದೊರೆಯುತ್ತದೆ ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.
ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್‌ನ ಮಹತ್ವಾಕಾಂಕ್ಷಿ ಯೋಜನೆ "ಯಕ್ಷಧ್ರುವ ಯಕ್ಷ ಶಿಕ್ಷಣ" ಕಾರ್ಯಕ್ರಮಕ್ಕೆ ಕಿನ್ನಿಗೋಳಿ ಸಮೀಪದ ಕಮ್ಮಾಜೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಗುರುವಾರ ಚಾಲನೆ ನೀಡಿ ಅವರು ಮಾತನಾಡಿದರು.
ಯಕ್ಷಗಾನ.ಇನ್ ಅಪ್‌ಡೇಟ್ಸ್ ಪಡೆಯಲು ಫೇಸ್‌ಬುಕ್ | ಟ್ವಿಟರ್ | ಯೂಟ್ಯೂಬ್ | ಇನ್‌ಸ್ಟಾಗ್ರಾಂ ಫಾಲೋ ಮಾಡಿ.
ಯಕ್ಷಗಾನ ಕಲಿಯಲು ತರಗತಿ ಎಲ್ಲಿಗೆ ಎಂದು ಹುಡುಕಿಕೊಂಡು ಹೋಗುವ ಪ್ರಸ್ತುತ ಸನ್ನಿವೇಶದಲ್ಲಿ ಶಾಲೆಗಳಿಗೇ ಬಂದು ಯಕ್ಷಗಾನವನ್ನು ಕಲಿಸಲು ಪಟ್ಲ ಸತೀಶ್ ಶೆಟ್ಟಿ ಮತ್ತು ಅವರ ನೇತೃತ್ವದ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಮುಂದೆ ಬಂದಿದ್ದು ಇದು ಅಭಿನಂದನೀಯ ಎಂದವರು ನುಡಿದರು.
ಯಕ್ಷಗಾನ ವಿದ್ವಾಂಸರಾದ ಡಾ. ಪ್ರಭಾಕರ ಜೋಶಿ, ಎಂ.ಎಲ್ ಸಾಮಗ, ಯಕ್ಷ ಶಿಕ್ಷಣದ ರೂವಾರಿ ಹಾಗೂ ಸಂಚಾಲಕರಾದ ಪಣಂಬೂರು ವಾಸು ಐತಾಳ್, ಯುಗಪುರುಷದ ಭುವನಾಭಿರಾಮ ಉಡುಪ, ಬಿಸಿಎಂ ಇಲಾಖೆಯ ಜಿಲ್ಲಾ ಅಧಿಕಾರಿ ಸಚಿನ್ ಕುಮಾರ್, ಪಟ್ಲ ಫೌಂಡೇಶನಿನ ಪಟ್ಲ ಸತೀಶ್ ಶೆಟ್ಟಿ, ಪುರುಷೋತ್ತಮ ಭಂಡಾರಿ, ಸಿಎ ಸುದೇಶ್ ಕುಮಾರ್ ರೈ, ಶಾಲೆಯ ಪ್ರಿನ್ಸಿಪಾಲ್ ಪುಟ್ಟಸ್ವಾಮಿ ಉಪಸ್ಥಿತರಿದ್ದರು.
ಯಕ್ಷಗಾನವನ್ನು ಉಳಿಸಿ ಬೆಳೆಸುವತ್ತ ಮಹತ್ತರ ಹೆಜ್ಜೆಗಳನ್ನು ಇಟ್ಟಿರುವ ಪಟ್ಲ ಫೌಂಡೇಶನ್ ವತಿಯಿಂದ ಯಕ್ಷ ಶಿಕ್ಷಣ ವಿನೂತನ ಯೋಜನೆಯಾಗಿದೆ. ಪ್ರಸ್ತುತ ಆಧುನಿಕ ವೈಜ್ಞಾನಿಕ ಕಂಪ್ಯೂಟರೀಕರಣದ ಈ ಕಾಲಘಟ್ಟದಲ್ಲಿ ಸಾಂಪ್ರದಾಯಿಕವಾದ ಯಕ್ಷಗಾನವನ್ನು ಮುಂದಿನ ಪೀಳಿಗೆಗೆ ಕಲಿಸಿ ಬೆಳೆಸುವ ಸದುದ್ದೇಶದಿಂದ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಯಕ್ಷ ಶಿಕ್ಷಣ ನೀಡಲು ನಿರ್ಧರಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಪ್ರೌಢ ಶಾಲೆಗಳಲ್ಲಿ ಉಚಿತವಾಗಿ ಫೌಂಡೇಶನಿನ ಮೂಲಕ ವಿದ್ಯಾರ್ಥಿಗಳಿಗೆ ಯಕ್ಷ ಶಿಕ್ಷಣ ನೀಡುವುದಾಗಿ ತೀರ್ಮಾನಿಸಿ ಸಂಬಂಧಪಟ್ಟ ಇಲಾಖೆಗಳ ಅನುಮತಿಯನ್ನು ಪಡೆಯಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಇಲಾಖಾ ಅಧಿಕಾರಿಗಳ ಉತ್ತಮ ಸ್ಪಂದನೆ ದೊರೆತಿದ್ದು, ಪಟ್ಲ ಫೌಂಡೇಶನ್ ವತಿಯಿಂದ ಈಗಾಗಲೇ ಈ ಯೋಜನೆಗಾಗಿ 30 ಮಂದಿ ಪ್ರಸಿದ್ಧ ಯುವ ಯಕ್ಷ ಗುರುಗಳನ್ನು ನೇಮಕ ಮಾಡಲಾಗಿದೆ.
Tags:
ಸುದ್ದಿ