![]() |
ಬೆಂಗಳೂರಿನ "ಶ್ರೀಹರಿಲೀಲಾ" ಮನೆಯಲ್ಲಿ ಭಾಗವತ ಮೋಹನ ಕಲಂಬಾಡಿ ನೇತೃತ್ವದಲ್ಲಿ ಪ್ರದರ್ಶನ ನೀಡಿದ ಕಾರ್ಕಳ ವಿಷ್ಣುಮೂರ್ತಿ ಕೃಪಾಶ್ರಿತ ಚಿಕ್ಕಮೇಳ |
ಚಿಕ್ಕ ಮೇಳ ಎಂದರೆ, ವಿಶೇಷವಾಗಿ ಮಳೆಗಾಲದಲ್ಲಿ, ಯಕ್ಷಗಾನದ ಮೇಳಗಳೆಲ್ಲವೂ ದೇವರ ಸೇವೆ ಮುಗಿಸಿ ಗೆಜ್ಜೆ ಬಿಚ್ಚಿ, ತಿರುಗಾಟ ನಿಲ್ಲಿಸಿದ ಬಳಿಕ, ಎರಡು ವೇಷಗಳಷ್ಟೇ (ಪುರುಷ ಹಾಗೂ ಸ್ತ್ರೀವೇಷ) ಮನೆ ಮನೆಗೆ ಹೋಗಿ, ಹಿಮ್ಮೇಳದೊಂದಿಗೆ ಸಣ್ಣ ಕಥಾಭಾಗವನ್ನು, ವಿಶೇಷವಾಗಿ ಸಂವಾದದಲ್ಲೇ ಕತೆ ಹೇಳಬಹುದಾದ ಯಕ್ಷಗಾನವನ್ನು ಪ್ರದರ್ಶಿಸುವುದು. ಇದು ಬಹಳ ಹಿಂದಿನಿಂದಲೂ ಚಾಲ್ತಿಯಲ್ಲಿದ್ದ ಸಂಪ್ರದಾಯ. ಇದು ಮನೆಯಲ್ಲಿರುವ ಮಕ್ಕಳಿಗೆ ಪುರಾಣ ಜ್ಞಾನ ಹೆಚ್ಚಿಸುವಲ್ಲಿ, ನಮ್ಮ ಸಂಪ್ರದಾಯ, ಸಂಸ್ಕೃತಿಯ ಕುರಿತು ಹೆಮ್ಮೆ ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.
ಯಕ್ಷಗಾನ.ಇನ್ ಅಪ್‌ಡೇಟ್ಸ್ ಪಡೆಯಲು ಫೇಸ್‌ಬುಕ್ | ಟ್ವಿಟರ್ | ಯೂಟ್ಯೂಬ್ | ಇನ್‌ಸ್ಟಾಗ್ರಾಂ ಫಾಲೋ ಮಾಡಿ.
ಮಳೆಗಾಲದಲ್ಲಿ ಈ ಚಿಕ್ಕ ಮೇಳಗಳು ನಿರ್ದಿಷ್ಟವಾದ ದೇವಸ್ಥಾನವೊಂದರ ಮೂಲಕ ತಿರುಗಾಟ ಆರಂಭಿಸುತ್ತವೆ. ಯಕ್ಷಗಾನದ ಕಲಾವಿದರೇ ಈ ಮೇಳದಲ್ಲಿಯೂ ಭಾಗವಹಿಸುತ್ತಾರೆ. ಯಕ್ಷಗಾನದ ಅಭಿಮಾನಿಗಳು ತಮ್ಮ ಮನೆಗೆ ಇಂಥ ಚಿಕ್ಕಮೇಳಗಳನ್ನು ಆಹ್ವಾನಿಸಿ, ಪ್ರದರ್ಶನ ಏರ್ಪಡಿಸುತ್ತಾರೆ. ಕಲಾವಿದರಿಗೆ ಮಳೆಗಾಲದ ಸಂಪಾದನೆಯೂ ಆಯಿತು, ದೇವರ ಸೇವೆಯೂ ಆಯಿತು ಎಂಬ ಭಾವ. ಅಕ್ಕಿ, ತೆಂಗಿನಕಾಯಿ, ಬಾಳೆ ಹಣ್ಣು ಸಹಿತ ಕಾಣಿಕೆಯನ್ನು ನೀಡುತ್ತಾರೆ.
ನೋಡಿ:
ಈ ಮೇಳಗಳು ತೆಂಕು ತಿಟ್ಟಿಗೆ ಮಾತ್ರವೇ ಸೀಮಿತವಾಗದೆ, ಉತ್ತರದ ಬಡಗು ತಿಟ್ಟಿನಲ್ಲಿಯೂ ಮಳೆಗಾಲದಲ್ಲಿ ತಿರುಗಾಟ ನಡೆಸುತ್ತವೆ ಮತ್ತು ಇತ್ತೀಚೆಗೆ ದೂರದ ಬೆಂಗಳೂರಿಗೂ ಕಾಲಿರಿಸಿವೆ.
ಇತ್ತೀಚೆಗೆ ಕೆಲವು ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದೇ ಯಕ್ಷಗಾನ ಅಭಿಮಾನಿಗಳನ್ನು ಕೆರಳಿಸಲು ಕಾರಣ. ಇದರಲ್ಲಿ, ಯಕ್ಷಗಾನದ ಪದ್ಯ ಸಾಹಿತ್ಯವನ್ನು ಹಾಡುತ್ತಲೇ, ಸಾಹಿತ್ಯಕ್ಕೂ ಅಭಿನಯಕ್ಕೂ ಸಂಬಂಧವೇ ಇಲ್ಲದ ರೀತಿಯಲ್ಲಿ ವೇಷಗಳು ನರ್ತಿಸುತ್ತಿದ್ದವು. ಚಿಕ್ಕಮೇಳಗಳಿಗೆ ನಿಷೇಧ ಹೇರಬೇಕು, ಇಲ್ಲದಿದ್ದರೆ ಯಕ್ಷಗಾನದ, ಕಲೆಯ ಮರ್ಯಾದೆ ಹೋಗುತ್ತದೆ ಎಂಬುದು ಎಲ್ಲರ ಆತಂಕ, ಆಗ್ರಹ.
ಕಲೆಗೆ ಆಗುತ್ತಿರುವ ಅಪಚಾರವನ್ನು ಮನಗಂಡು, ಯಕ್ಷಗಾನ ಕಲಾವಿದರು, ಸಂಘಟಕರು ಎಚ್ಚೆತ್ತುಕೊಂಡಿದ್ದಾರೆ. ಚಿಕ್ಕ ಮೇಳಗಳನ್ನು ಉಳಿಸುವುದಕ್ಕಾಗಿ, ಮತ್ತನ್ನು ಅದನ್ನೇ ನಂಬಿ ಮಳೆಗಾಲದಲ್ಲಿ ಜೀವನ ಸಾಗಿಸುವ ನಿಜ ಕಲಾವಿದರ ಹಿತದೃಷ್ಟಿಯಿಂದ ಜು.19ರಂದು ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ, ಯಕ್ಷಗಾನ ಅಕಾಡೆಮಿ ಮಾಜಿ ಸದಸ್ಯ, ಹಿರಿಯ ಕಲಾವಿದ ಸರಪಾಡಿ ಅಶೋಕ್ ಶೆಟ್ಟಿ ನೇತೃತ್ವದಲ್ಲಿ ಸಮಾಲೋಚನಾ ಸಭೆ ನಡೆಯಿತು.
ದಕ್ಷಿಣ ಕನ್ನಡದಲ್ಲಿರುವ ಚಿಕ್ಕ ಮೇಳಗಳ ಸಂಚಾಲಕರು, ಕಲಾವಿದರು ಸೇರಿದಂತೆ ಸುಮಾರು 25 ಮಂದಿ ಸಭೆಯಲ್ಲಿ ಪಾಲ್ಗೊಂಡಿದ್ದು, ಚಿಕ್ಕಮೇಳಗಳಿಗೂ ನಿರ್ದಿಷ್ಟ ನಿಯಮಾವಳಿಗಳನ್ನು ರೂಪಿಸಬೇಕೆಂಬ ಬಗ್ಗೆ ಸಮಾಲೋಚನೆ ನಡೆಯಿತು.
ಚಿಕ್ಕ ಮೇಳ ಹೇಗಿರಬೇಕು, ಯಾವ ವ್ಯಾಪ್ತಿ, ತಿರುಗಾಟ ಮಾಡುವ ಕಲಾವಿದರಿಗೆ ಇರಬೇಕಾದ ಅರ್ಹತೆ, ಜೊತೆಗೆ ಇರಬೇಕಾದ ಪರಿಕರಗಳು - ಇವುಗಳ ಕುರಿತಾಗಿ ಚರ್ಚೆ ನಡೆಯಿತು. ಇದು ತುರ್ತು ಸಭೆಯಾಗಿದ್ದು, ಹೆಚ್ಚಿನವರಿಗೆ ಪಾಲ್ಗೊಳ್ಳಲು ಸಾಧ್ಯವಾಗಿರಲಿಲ್ಲ. ಹೀಗಾಗಿ, ಮತ್ತಷ್ಟು ವಿಸ್ತೃತ ಚರ್ಚೆಗಾಗಿ ಜುಲೈ 27ರಂದು ಗುರುವಾರ ಬಿ.ಸಿ.ರೋಡ್‌ನ ಸ್ಪರ್ಶ ಕಲಾಮಂದಿರದಲ್ಲಿ ಮತ್ತೊಂದು ಸಭೆಯನ್ನು ಕರೆಯಲಾಗಿದೆ.
ಚಿಕ್ಕಮೇಳದ ತಿರುಗಾಟಕ್ಕೆ ನಿಯಮಗಳನ್ನು ರೂಪಿಸುವ ಕುರಿತಾಗಿ ಯೋಚನೆ ನಡೆಯುತ್ತಿದ್ದು, ಅದರ ಪ್ರಕಾರ, ಚಿಕ್ಕಮೇಳಗಳು ಆಯಾ ದೇವಸ್ಥಾನದ ಅನುಮತಿ ಪತ್ರ ಹೊಂದಿರಬೇಕು, ಮೇಳದ ಕಲಾವಿದರಾಗಿದ್ದರೆ ಆ ಮೇಳದ ಅನುಮತಿ ಪತ್ರ, ತಿರುಗಾಟ ನಡೆಸುವ ಊರಿನ ಗ್ರಾಮ ಪಂಚಾಯತ್‌ನಿಂದ ಅನುಮತಿ ಪತ್ರ ಹಾಗೂ ಆಯಾ ಊರಿನ ಪೊಲೀಸ್ ಠಾಣೆಯಿಂದಲೂ ಅನುಮತಿ ಪತ್ರ ತೆಗೆದುಕೊಳ್ಳುವ ಕುರಿತು ಚರ್ಚಿಸಲಾಗುತ್ತದೆ.
ಈ ಸಭೆಯಲ್ಲಿ ಚಿಕ್ಕಮೇಳಗಳ ವ್ಯವಸ್ಥಾಪಕರು, ಸಂಚಾಲಕರು, ಪ್ರತಿನಿಧಿಗಳು ಭಾಗವಹಿಸುವಂತೆ ಕಲಾವಿದ ದಿನೇಶ್ ರೈ ಕಡಬ ವಿನಂತಿಸಿದ್ದಾರೆ.
Tags:
ಸುದ್ದಿ