ಆ.13ರಂದು ವಿಟ್ಲ ಯಕ್ಷೋತ್ಸವ: ಗೌರವ ಪುರಸ್ಕಾರ, ವಿಶಿಷ್ಟ ವಾಚಿಕೋತ್ಸವ, ಕಾಡಮಲ್ಲಿಗೆ ಯಕ್ಷಗಾನ

Vitla Yakshotsava Kadamallige Yakshagana

ಮಂಗಳೂರು: ಸ್ವಾತಂತ್ರ್ಯೋತ್ಸವ ಪ್ರಯುಕ್ತ 2023ರ 'ವಿಟ್ಲ ಯಕ್ಷೋತ್ಸವ' ಕಾರ್ಯಕ್ರಮವು ವಿಟ್ಲದ ಜೇಸೀಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಗಸ್ಟ್ 13ರ ಭಾನುವಾರ ನಡೆಯಲಿದ್ದು, ವಾಚಿಕೋತ್ಸವ, ಯಕ್ಷಗಾನ ಹಾಗೂ ಗೌರವ ಪುರಸ್ಕಾರ ಪ್ರದಾನ ಕಾರ್ಯಕ್ರಮಗಳು ಜರುಗಲಿವೆ.

ಗೌರವ ಪುರಸ್ಕಾರ
ಯಕ್ಷಮಿತ್ರರು ವಿಟ್ಲ, ವಾಟ್ಸ್ಆ್ಯಪ್ ಬಳಗದ ಸಹಯೋಗದಲ್ಲಿ ಭಾನುವಾರ ಈ ಕಾರ್ಯಕ್ರಮ ನಡೆಯಲಿದ್ದು, ಕಾರ್ಯಕ್ರಮದಲ್ಲಿ ದಿಗ್ವಿಜಯ ಗ್ರೂಪ್ ಆಫ್ ಕಂಪನೀಸ್ ಅಧ್ಯಕ್ಷ ದಿನಕರ ಭಟ್ ಮಾವೆ ಅವರಿಗೆ ಕಲಾಪೋಷಕ ಗೌರವ ಪುರಸ್ಕಾರ ನೀಡಲಾಗುತ್ತದೆ. ಹಿರಿಯ ಅರ್ಥಧಾರಿ, ನಿವೃತ್ತ ಉಪನ್ಯಾಸಕ ಶಂಭು ಶರ್ಮ ವಿಟ್ಲ ಇವರಿಗೆ ಹುಟ್ಟೂರ ಗೌರವ ಪುರಸ್ಕಾರ ಹಾಗೂ ಹವ್ಯಾಸಿ ಹಿಮ್ಮೇಳ ವಾದಕ ಪಿ.ಜಿ.ಜಗನ್ನಿವಾಸ ರಾವ್ ಮತ್ತು ರಾಜ್ಯ ಪ್ರಶಸ್ತಿ ಪುರಸ್ಕೃತ ಕಲಾವಿದ ಅಶೋಕ್ ಶೆಟ್ಟಿ ಸರಪಾಡಿ ಅವರಿಗೆ ಗೌರವ ಪುರಸ್ಕಾರ ಪ್ರದಾನಿಸಲಾಗುತ್ತದೆ. ಇದೇ ಸಂದರ್ಭದಲ್ಲಿ, ಸಸಿಹಿತ್ಲು ಭಗವತಿ ಮೇಳದಲ್ಲಿ ಸುದೀರ್ಘ ತಿರುಗಾಟ ನಡೆಸಿ ಅಕಾಲಿಕವಾಗಿ ಅಗಲಿದ ಕಲಾವಿದ ದಿ.ಜಗದೀಶ್ ನಲ್ಕ ಅವರ ಕುಟುಂಬಕ್ಕೆ ಯಕ್ಷ ಸಾಂತ್ವನ ನಿಧಿ ಅರ್ಪಿಸಲಾಗುತ್ತದೆ.

ಯಕ್ಷಗಾನ.ಇನ್ ಅಪ್‌ಡೇಟ್ಸ್ ಪಡೆಯಲು ಫೇಸ್‌ಬುಕ್ | ಟ್ವಿಟರ್ | ಯೂಟ್ಯೂಬ್ ಇನ್‌ಸ್ಟಾಗ್ರಾಂ ಫಾಲೋ ಮಾಡಿ.

ವಾಚಿಕೋತ್ಸವ
ಅಪರಾಹ್ನ 1.30ರಿಂದ ವಾಚಿಕೋತ್ಸವದಲ್ಲಿ ಅರುಣಾಸುರ - ಬೃಹಸ್ಪತಿ, ಅರ್ಜುನ - ಊರ್ವಶಿ ಹಾಗೂ ಈಶ್ವರ -ಹನೂಮಂತ ಪಾತ್ರಗಳ ಸಂವಾದವು ಯಕ್ಷಗಾನದ ತಾಳಮದ್ದಳೆಯ ರೂಪದಲ್ಲಿ ವಿಶಿಷ್ಟವಾಗಿ ಪ್ರಸ್ತುತಗೊಳ್ಳಲಿದೆ. ಇದರಲ್ಲಿ ಭಾಗವತರಾಗಿ ಸತೀಶ್ ಪುಣಿಂಚಿತ್ತಾಯ, ಸತ್ಯನಾರಾಯಣ ಪುಣಿಂಚಿತ್ತಾಯ, ಎಸ್.ಸುರೇಶ್ ಶೆಟ್ಟಿ, ಗಣೇಶ್ ಕುಮಾರ್ ಹೆಬ್ರಿ ಹಾಗೂ ಮಹೇಶ್ ಕನ್ಯಾಡಿ ಅವರು ಭಾಗವಹಿಸಲಿದ್ದಾರೆ. ಹಿಮ್ಮೇಳದಲ್ಲಿ ಪಿ.ಜಿ.ಜಗನ್ನಿವಾಸ ರಾವ್, ಕೃಷ್ಣಪ್ರಕಾಶ್ ಉಳಿತ್ತಾಯ, ರಾಘವೇಂದ್ರ ಹೆಗಡೆ ಯಲ್ಲಾಪುರ, ಹರೀಶ್ ರಾವ್ ಅಡೂರು ಹಾಗೂ ರಾಮಪ್ರಸಾದ್ ವಧ್ವ ಭಾಗವಹಿಸುವರು. ಮುಮ್ಮೇಳದಲ್ಲಿ ವಾಚಿಕ ವೈಭವವನ್ನು ಪ್ರಸ್ತುತಪಡಿಸುವವರು ಶಂಭು ಶರ್ಮ ವಿಟ್ಲ, ರಾಧಾಕೃಷ್ಣ ಕಲ್ಚಾರ್, ವಿಶ್ವೇಶ್ವರ ಭಟ್ ಸುಣ್ಣಂಬಳ, ವಾಸುದೇವ ರಂಗಾ ಭಟ್ ಮಧೂರು, ಗಣಪತಿ ಭಟ್ ಸಂಕದಗುಂಡಿ ಹಾಗೂ ಗಣೇಶ್ ಶೆಟ್ಟಿ ಕನ್ನಡಿಕಟ್ಟೆ.

ಕಾಡಮಲ್ಲಿಗೆ ಯಕ್ಷಗಾನ
ಸಂಜೆ 7.30ರಿಂದ ಯಕ್ಷಗಾನ ಲೋಕದಲ್ಲಿ ಐತಿಹಾಸಿಕ ದಾಖಲೆ ಮಾಡಿದ ಪ್ರಸಂಗ, ಅನಂತರಾಮ ಬಂಗಾಡಿ ವಿರಚಿತ 'ಕಾಡಮಲ್ಲಿಗೆ' ತುಳು ಯಕ್ಷಗಾನವು ಪ್ರದರ್ಶನಗೊಳ್ಳಲಿದೆ. ಹಿಮ್ಮೇಳದಲ್ಲಿ ಭಾಗವತರಾಗಿ ರವಿಚಂದ್ರ ಕನ್ನಡಿಕಟ್ಟೆ, ಶಿವಪ್ರಸಾದ್ ಎಡಪದವು, ಚೆಂಡೆ-ಮದ್ದಲೆಯಲ್ಲಿ ಚಂದ್ರಶೇಖರ ಭಟ್ ಕೊಂಕಣಾಜೆ, ಶಿತಿಕಂಠ ಭಟ್ ಉಜಿರೆ, ಚೈತನ್ಯಕೃಷ್ಣ ಪದ್ಯಾಣ ಹಾಗೂ ಲವಕುಮಾರ್ ಐಲ ಭಾಗವಹಿಸುವರು. ಸ್ತ್ರೀಪಾತ್ರಗಳಲ್ಲಿ ಸಂಜಯ್ ಕುಮಾರ್ ಗೋಣಿಬೀಡು, ಶ್ರೀನಿವಾಸ ರೈ ಕಡಬ, ರಕ್ಷಿತ್ ಪಡ್ರೆ, ಸುದರ್ಶನ್ ಸೂರಿಂಜೆ, ಪವನ್‌ರಾಜ್ ಧರ್ಮಸ್ಥಳ, ಹಾಸ್ಯ ಪಾತ್ರಗಳಲ್ಲಿ ಮೋಹನ್ ಮುಚ್ಚೂರು, ಸುಂದರ ಬಂಗಾಡಿ ಮತ್ತು ದಿನೇಶ್ ಶೆಟ್ಟಿಗಾರ್ ಕೋಡಪದವು ರಂಜಿಸಲಿದ್ದಾರೆ.

ಪ್ರಮುಖ ಪಾತ್ರಗಳಲ್ಲಿ ರಾಜ್ಯಪ್ರಶಸ್ತಿ ಪುರಸ್ಕೃತ ಅಶೋಕ್ ಶೆಟ್ಟಿ ಸರಪಾಡಿ, ಸದಾಶಿವ ಕುಲಾಲ್ ವೇಣೂರು, ಗಣೇಶ್ ಚಂದ್ರಮಂಡಲ, ಜಯಾನಂದ ಸಂಪಾಜೆ, ಗಣೇಶ್ ಶೆಟ್ಟಿ ಕನ್ನಡಿಕಟ್ಟೆ, ಪ್ರಜ್ವಲ್ ಕುಮಾರ್ ಗುರುವಾಯನಕೆರೆ, ರವಿಭಟ್ ನೆಲ್ಯಾಡಿ, ಸಂತೋಷ ಕರಂಬಾರು, ಮುಖೇಶ್ ದೇವಧರ್, ನಿತಿನ್ ಪಡುಬಿದ್ರೆ, ಶ್ರೀನಿವಾಸ ಕೋಡಪದವು, ಆತ್ಮರಂಜನ್ ಶೆಟ್ಟಿ ಬೊಂಡಾಲ, ಸ್ವಸ್ತಿಕ್ ಶರ್ಮ ಪಳ್ಳತ್ತಡ್ಕ, ಅಜಿತ್ ಪುತ್ತಿಗೆ ಹಾಗೂ ಕಿಶನ್ ಅಗ್ಗಿತ್ತಾಯ ಇರುತ್ತಾರೆ. ರಮೇಶ್ ಕಜೆ, ಚಿನ್ಮಯಿ ಭಟ್ ಅಡ್ಯನಡ್ಕ ಹಾಗೂ ಆದಿತ್ಯ ಬರಕೆರೆ ಅವರು ಚಕ್ರತಾಳದಲ್ಲಿ ಸಹಕರಿಸಲಿದ್ದಾರೆ

ವಿಟ್ಲ ಯಕ್ಷೋತ್ಸವದ ಆಮಂತ್ರಣ ಪತ್ರಿಕೆಯನ್ನು ಕಟೀಲು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಸನ್ನಿಧಾನದಲ್ಲಿ ಲಕ್ಷ್ಮೀನಾರಾಯಣ ಆಸ್ರಣ್ಣ ಹಾಗೂ ಕಮಲಾದೇವಿ ಆಸ್ರಣ್ಣ ಅವರು ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಕುಮಾರ್ ಭಟ್ ಪಂಜಿಗದ್ದೆ, ಹರೀಶ್ ಕೊಳ್ತಿಗೆ, ರವಿಚಂದ್ರ ಪದ್ಯಾಣ ಉಪಸ್ಥಿತರಿದ್ದರು ಎಂದು ಕಾರ್ಯಕ್ರಮದ ಸಂಯೋಜಕ ಮುರಾರಿ ಭಟ್ ಪಂಜಿಗದ್ದೆ ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು