ಅಗಲಿದ ಪಂಜಾಜೆಯವರಿಗೆ ಬೆಂಗಳೂರಿನಲ್ಲಿ ಶ್ರದ್ಧಾಂಜಲಿ, ಯಕ್ಷನಮನ

ಪಂಜಾಜೆ ಅವರಿಗೆ ಯಕ್ಷಗಾನ ನಮನ ಅರ್ಪಿಸಿದ ಬೆಂಗಳೂರಿನ ಹವ್ಯಾಸಿ ಕಲಾವಿದರು

ಬೆಂಗಳೂರು: ಇತ್ತೀಚೆಗೆ ಅಗಲಿದ ಯಕ್ಷಗಾನ ಕಲಾಪೋಷಕ, ಕಲಾವಿದ, ಸಂಘಟಕ ಸೂರ್ಯನಾರಾಯಣ ಪಂಜಾಜೆಯವರಿಗೆ ರಾಜಧಾನಿ ಬೆಂಗಳೂರಿನ ಹವ್ಯಾಸಿ ಯಕ್ಷಗಾನ ಕಲಾವಿದರ ಬಳಗ ಮತ್ತು ಅಭಿಮಾನಿಗಳು ಶ್ರದ್ಧಾಂಜಲಿ ಹಾಗೂ ನುಡಿ ನಮನ, ಯಕ್ಷನಮನ ಕಾರ್ಯಕ್ರಮ ಆಯೋಜಿಸಿದ್ದರು.

ಯಕ್ಷಗಾನ.ಇನ್ ಅಪ್‌ಡೇಟ್ಸ್ ಪಡೆಯಲು ಫೇಸ್‌ಬುಕ್ | ಟ್ವಿಟರ್ | ಯೂಟ್ಯೂಬ್ ಇನ್‌ಸ್ಟಾಗ್ರಾಂ ಫಾಲೋ ಮಾಡಿ.

ಜೂ.4ರ ಭಾನುವಾರ, ಕೋರಮಂಗಲದ ಶ್ರೀಮದ್ ಎಡನೀರು ಮಠದಲ್ಲಿ ಕಾರ್ಯಕ್ರಮ ನಡೆಯಿತು. ಕಾಸರಗೋಡಿನ ಶ್ರೀ ಎಡನೀರು ಮಠದ ಪರಮಪೂಜ್ಯ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ದಿವ್ಯಸಾನ್ನಿಧ್ಯ ವಹಿಸಿ ಮಾತನಾಡಿ, ಯಕ್ಷಗಾನ ಕಲೆಗೆ ಸದಾ ಪೋಷಣೆ ನೀಡುತ್ತಾ ಬಂದ ಶ್ರೀಮಠದ ಮತ್ತು ಪಂಜಾಜೆಯವರ  ನಡುವಣ ಹಲವು ದಶಕಗಳ  ಬಾಂಧವ್ಯವನ್ನು ಉಲ್ಲೇಖಿಸಿ ಮೃತರ ಆತ್ಮಕ್ಕೆ ಶಾಂತಿ ದೊರೆಯಲೆಂದು ಹರಸಿದರು. 
ಎಸ್.ಎನ್.ಪಂಜಾಜೆ ಅವರ ಶ್ರದ್ಧಾಂಜಲಿ, ನುಡಿ ನಮನ, ಯಕ್ಷನಮನ ಕಾರ್ಯಕ್ರಮಕ್ಕೆ ಎಡನೀರು ಶ್ರೀಗಳಿಂದ ಚಾಲನೆ

ಅಧ್ಯಕ್ಷತೆ ವಹಿಸಿದ್ದ ಹಿರಿಯ ಯಕ್ಷಗಾನ ಕಲಾಪೋಷಕ, ಕರ್ನಾಟಕ ಲೋಕಸೇವಾ ಆಯೋಗದ ನಿಕಟಪೂರ್ವ ಅಧ್ಯಕ್ಷ ಟಿ. ಶ್ಯಾಮ ಭಟ್ ಅವರು, ಪಂಜಾಜೆಯವರ ಜೊತೆಗಿನ ತಮ್ಮ ಐದು ದಶಕಗಳ ಒಡನಾಟವನ್ನು ನೆನಪಿಸಿಕೊಂಡರು. ತನ್ನ ಆರ್ಥಿಕ ಶಕ್ತಿಯನ್ನು ಮೀರಿದರೂ ಎದೆಗುಂದದೆ ರಾಜ್ಯದಾದ್ಯಂತ ಹದಿನಾಲ್ಕು ಯಕ್ಷಗಾನ ಸಾಹಿತ್ಯ ಸಮ್ಮೇಳನಗಳನ್ನು ಆಯೋಜಿಸಿದ ಪಂಜಾಜೆಯವರ ಧೈರ್ಯ ಮತ್ತು ಸಾಮರ್ಥ್ಯವನ್ನು ಅವರು ಕೊಂಡಾಡಿದರು.

ಸಂಸ್ಮರಣಾ ಭಾಷಣ ಮಾಡಿದ ಹಿರಿಯ ಯಕ್ಷಗಾನ ವಿಮರ್ಶಕ ಡಾ.ಆನಂದರಾಮ ಉಪಾಧ್ಯರು, ಪಂಜಾಜೆಯವರು ತನ್ನ ಸಮ್ಮೇಳನಗಳಲ್ಲಿ ಕರಾವಳಿಯ ತೆಂಕು ಬಡಗು ಪ್ರಕಾರಗಳ ಜೊತೆಗೆ ದೊಡ್ಡಾಟ, ಸಣ್ಣಾಟ, ಘಟ್ಟದಕೋರೆ, ಶ್ರೀ ಕೃಷ್ಣ ಪಾರಿಜಾತ, ತೊಗಲು ಬೊಂಬೆಯಾಟ ಮೊದಲಾದ ಕರ್ನಾಟಕದ ಯಕ್ಷಗಾನದ ಎಲ್ಲಾ ವೈವಿಧ್ಯಗಳನ್ನು ಒಂದೇ ವೇದಿಕೆಯಲ್ಲಿ ಪ್ರದರ್ಶಿಸುವ ಮೂಲಕ ಹಾಗೂ ಈ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ವಿದ್ವಾಂಸರ ಗೋಷ್ಠಿಗಳನ್ನು ಆಯೋಜಿಸುವ ಮುಖಾಂತರ ಸಮಾಜಕ್ಕೆ ಆದರ್ಶಪ್ರಾಯರಾದರೆಂದು ಸ್ಮರಿಸಿದರು. ಅಲ್ಲದೆ, ದೂರದರ್ಶನದ ಚಂದನ ವಾಹಿನಿಯಲ್ಲಿ ಯಕ್ಷಗಾನದ ಹಲವಾರು ಕಲಾವಿದರಿಗೆ ವೇದಿಕೆಯನ್ನು ಒದಗಿಸಿದ ಅವರ ಸೇವೆಯನ್ನೂ ನೆನಪಿಸಿಕೊಂಡರು.

ಅನಂತ ಮಂಜುನಾಥ ಆಂಬೇಕರ್ - ಉಪಾಸಕರು, ಶ್ರೀ ವಿಜಯದುರ್ಗಾ ಶ್ರೀ ರಾಜರಾಜೇಶ್ವರಿ ಮಹಾಸನ್ನಿಧಾನ, ವಿದ್ಯಾರಣ್ಯಪುರ - ಬೆಂಗಳೂರು ಹಾಗೂ ಅರವಿಂದ ಭಟ್ - ಉಪಾಸಕರು  ಶ್ರೀ ಮೂಕಾಂಬಿಕಾ ಸನ್ನಿಧಿ ತಾತಗುಣಿ , ಬೆಂಗಳೂರು - ಇವರು ಪಂಜಾಜೆಯವರ ಭಕ್ತಿ ಮತ್ತು ಛಲವಂತಿಕೆಯನ್ನು, ಆರ್ಥಿಕ ಸಂಕಷ್ಟಗಳನ್ನು ಮೆಟ್ಟಿನಿಂತು ಕಲೋಪಾಸನೆಯಲ್ಲಿ ತೊಡಗಿಕೊಂಡಿದ್ದ ರೀತಿಯನ್ನು ನೆನಪಿಸಿಕೊಂಡು ಅವರ ಆತ್ಮಕ್ಕೆ ಮೋಕ್ಷ ದೊರಕಲೆಂದು ಹಾರೈಸಿದರು.

ಪಂಜಾಜೆಯವರ ಸಮೀಪವರ್ತಿಗಳಾಗಿದ್ದ ಹಿರಿಯ ಪತ್ರಕರ್ತ ಶ್ರೀಕರ ಭಟ್, ಉದ್ಯಮಿ ಆರ್.ಕೆ. ಭಟ್ ಬೆಳ್ಳಾರೆ, ಯಕ್ಷಗಾನ ಅಕಾಡೆಮಿಯ ನಿಕಟಪೂರ್ವ ಸದಸ್ಯ ಶ್ರೀನಿವಾಸ ಸಾಸ್ತಾನ, ಹಿರಿಯ ಹವ್ಯಾಸಿ ಕಲಾವಿದ ಮಿತ್ತೂರು ಈಶ್ವರ ಭಟ್, ಯಕ್ಷಗುರುಗಳಾದ ಬೇಗಾರು ಶಿವಕುಮಾರ್, ರಘುರಾಮ ಮುಳಿಯ ಇವರು ಪಂಜಾಜೆಯವರ ಜೊತೆಗಿನ ತಮ್ಮ ಒಡನಾಟವನ್ನು ಸ್ಮರಿಸಿದರು.

ಪಂಜಾಜೆಯವರ ಧರ್ಮಪತ್ನಿ, ನಿವೃತ್ತ ಶಿಕ್ಷಕಿ ಮನೋರಮಾ ಮತ್ತು ಪುತ್ರ ಕೈಲಾಸ್ ಭಟ್ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಆಯೋಜನೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಗಣೇಶ ಭಟ್ ಬಾಯಾರು ಪ್ರಾಸ್ತಾವಿಕ  ಮಾತನಾಡಿ ನಿರೂಪಿಸಿದರೆ, ಗೋಪಾಲಕೃಷ್ಣ ಭಟ್ ನಿಡುವಜೆ ಸ್ವಾಗತಿಸಿದರು ಮತ್ತೊಬ್ಬ ಆಯೋಜಕರಾದ ಪೂಕಳ ಕೃಷ್ಣ ಭಟ್ ವಂದನಾರ್ಪಣೆ ಸಲ್ಲಿಸಿದರು.

ಸಭಾಕಾರ್ಯಕ್ರಮದ ಬಳಿಕ ಬೆಂಗಳೂರಿನ ಹವ್ಯಾಸಿ ಕಲಾವಿದರು ಸುಧನ್ವ ಮೋಕ್ಷ ಮತ್ತು ನರಕಾಸುರ ಮೋಕ್ಷ ಎಂಬ ಪ್ರಸಂಗಗಳನ್ನು ಸೊಗಸಾಗಿ ಪ್ರದರ್ಶಿಸಿದರು. ಬೆಂಗಳೂರಿನ ಯಕ್ಷಗಾನ ಪ್ರೇಮಿಗಳು ಮತ್ತು ಪಂಜಾಜೆಯವರ ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿ ಪಂಜಾಜೆಯವರ ನಿಧನಕ್ಕೆ ಸಂತಾಪ ಸೂಚಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು