ಪೊಳಲಿ ಯಕ್ಷೋತ್ಸವ 2026: ಕಲ್ಲಾಡಿ, ಬೈಪಾಡಿತ್ತಾಯರು ಹಾಗೂ ಕಲಾವಿದರಿಗೆ ಗೌರವ


ಪೊಳಲಿ ಯಕ್ಷೋತ್ಸವ 2026ರಲ್ಲಿ ಕಲ್ಲಾಡಿ ದೇವಿಪ್ರಸಾದ ಶೆಟ್ಟಿಯವರಿಗೆ ಪೊಳಲಿ ಯಕ್ಷೋತ್ಸವ 2026 ಗೌರವ ಹಾಗೂ ಇದೇ ಮೊದಲ ಬಾರಿಗೆ ದಿನೇಶ ಅಮ್ಮಣ್ಣಾಯರ ನೆನಪಿನಲ್ಲಿ ಪ್ರಾರಂಭಿಸಿದ ಸ್ಮೃತಿ ಗೌರವ ಪ್ರಶಸ್ತಿಯನ್ನು ಹಿರಿಯ ಗುರು, ಅಮ್ಮಣ್ಣಾಯರ ಭಾವ ಹರಿನಾರಾಯಣ ಬೈಪಾಡಿತ್ತಾಯರಿಗೆ ನೀಡಿ ಗೌರವಿಸಲಾಗುತ್ತಿದೆ.

ಮಂಗಳೂರು: ಯಕ್ಷಕಲಾ ಪೊಳಲಿ ಇದರ 31ನೇ ವರ್ಧಂತಿ (2026) ಪ್ರಯುಕ್ತ ಪೊಳಲಿ ಯಕ್ಷೋತ್ಸವವು ನವರಾತ್ರಿಯ ಆರಂಭದ ದಿನವಾದ ಅ.11ರಂದು ಪೊಳಲಿ ಕ್ಷೇತ್ರದಲ್ಲಿ ನಡೆಯುತ್ತಿದೆ. ಈ ಸಂದರ್ಭದಲ್ಲಿ ಹಿರಿಯ ಕಲಾವಿದರು, ಸಂಘಟಕರು ಮತ್ತು ಸಂಸ್ಥೆಗಳಿಗೆ ಗೌರವ ನೀಡಲಾಗುತ್ತಿದ್ದು, ಅಗಲಿದ ಕಲಾವಿದರ ಸಂಸ್ಮರಣೆ ಸಹಿತ ಇಡೀ ದಿನ ಯಕ್ಷಗಾನವೂ ನಡೆಯಲಿದೆ.

ಯಕ್ಷಗಾನ.ಇನ್ ಅಪ್‌ಡೇಟ್ಸ್ ಪಡೆಯಲು ಫೇಸ್‌ಬುಕ್ | ಟ್ವಿಟರ್ | ಯೂಟ್ಯೂಬ್ | ಇನ್‌ಸ್ಟಾಗ್ರಾಂ ಫಾಲೋ ಮಾಡಿ. 

ಪೊಳಲಿ ಯಕ್ಷೋತ್ಸವ 2026 ಭಾನುವಾರ ಬೆಳಿಗ್ಗೆ 8.30ಕ್ಕೆ ಚೌಕಿಪೂಜೆಯಿಂದ ಆರಂಭಗೊಂಡು, ತೆಂಕು ತಿಟ್ಟಿನ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಬೆ.9ರಿಂದ 3ರವರೆಗೆ ಎಂ.ಕೆ.ರಮೇಶ ಆಚಾರ್ಯ ವಿರಚಿತ ರಾಜಾ ಯಯಾತಿ, ಮಧ್ಯಾಹ್ನ 3ರಿಂದ 5.30ರವರೆಗೆ ಅಜಪುರ ವಿಷ್ಣು ಭಾಗವತ ವಿರಚಿತ ಇಂದ್ರ ಕೀಲಕ ಹಾಗೂ ಸಭಾ ಕಾರ್ಯಕ್ರಮದ ಬಳಿಕ ಸಂಜೆ 7ರಿಂದ 10.30ರವರೆಗೆ ಕಡಂದಲೆ ರಾಮ ಭಟ್ಟ ವಿರಚಿತ ರಾಮಾಂಜನೇಯ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.

ಸಭಾ ಕಾರ್ಯಕ್ರಮದಲ್ಲಿ ಕಟೀಲು ಏಳು ಮೇಳಗಳ ಸಂಚಾಲಕ ಕಲ್ಲಾಡಿ ದೇವಿಪ್ರಸಾದ ಶೆಟ್ಟಿ ಅವರಿಗೆ ಪೊಳಲಿ ಯಕ್ಷೋತ್ಸವ ಪ್ರಶಸ್ತಿ 2026, ಹಿರಿಯ ಯಕ್ಷಗಾನ ಗುರು ಹರಿನಾರಾಯಣ ಬೈಪಾಡಿತ್ತಾಯ ಅವರಿಗೆ ರಸರಾಗ ಚಕ್ರವರ್ತಿ ದಿನೇಶ ಅಮ್ಮಣ್ಣಾಯ ಸ್ಮೃತಿ ಗೌರವ ನೀಡಿ ಸನ್ಮಾನಿಸಲಾಗುತ್ತದೆ. ಇದೇ ಸಂದರ್ಭದಲ್ಲಿ ಯಕ್ಷಸಂಗಮ ಮೂಡುಬಿದಿರೆ, ಪುಳಿಂಚ ಸೇವಾ ಪ್ರತಿಷ್ಠಾನ ಮಂಗಳೂರು, ಜಿ.ರಾಘವೇಂದ್ರ ಪುತ್ತೂರಾಯ ಕೈಕಂಬ (ಹಳೆಯ ಯಕ್ಷಗಾನ ಪ್ರಸಂಗಗಳ ಸಂಗ್ರಾಹಕರು) ಇವರಿಗೆ ಪೊಳಲಿ ಯಕ್ಷಕಲಾ ಗೌರವ ನೀಡಲಾಗುತ್ತದೆ.

ಇದಲ್ಲದೆ, 15 ಮಂದಿ ಕಲಾವಿದರನ್ನು ಗೌರವಿಸಲಾಗುತ್ತದೆ. ಅವರೆಂದರೆ, ಸಿರಿಬಾಗಿಲು ರಾಮಕೃಷ್ಣ ಮಯ್ಯ, ಹೊಸಮೂಲೆ ಗಣೇಶ ಭಟ್, ರಾಧಾಕೃಷ್ಣ ಕಲ್ಚಾರ್, ಮೋಹನ ಬೈಪಾಡಿತ್ತಾಯ, ಎಂ.ಕೆ.ರಮೇಶ್ ಆಚಾರ್ಯ, ನಿಡ್ಲೆ ಗೋವಿಂದ ಭಟ್, ಪೂಕಳ ಲಕ್ಷ್ಮೀನಾರಾಯಣ ಭಟ್, ಉಜಿರೆ ನಾರಾಯಣ ಹಾಸ್ಯಗಾರ, ಕೈರಂಗಳ ಕೃಷ್ಣ ಮೂಲ್ಯ, ಪೆರ್ಲ ಜಗನ್ನಾಥ ಶೆಟ್ಟಿ, ವಸಂತ ಗೌಡ ಕಾಯರ್ತಡ್ಕ, ಗಣೇಶಪುರ ಗಿರೀಶ ನಾವಡ, ದಿವಾಕರ ರೈ ಸಂಪಾಜೆ, ಹರಿನಾರಾಯಣ ಭಟ್ ಎಡನೀರು ಹಾಗೂ ಮೋನಪ್ಪ ಗೌಡ.

ಈ ವೇಳೆ, ಅಗಲಿದ ಹಿರಿಯ ಕಲಾವಿದರಾದ ಲೀಲಾವತಿ ಬೈಪಾಡಿತ್ತಾಯ, ಕೆ.ಗೋವಿಂದ ಭಟ್, ಶಂಭು ಶರ್ಮ ವಿಟ್ಲ, ಗಣೇಶ ಕೊಲೆಕಾಡಿ, ಶೇಖರ ಶೆಟ್ಟಿ ಕುಂಬ್ರ ಇವರ ಸಂಸ್ಮರಣೆಯೂ ನಡೆಯಲಿದೆ. ಯಕ್ಷಕಲಾ ಪೊಳಲಿಯ ರೂವಾರಿ ಜನಾರ್ದನ ಅಮ್ಮುಂಜೆಯವರು ಊರ-ಪರವೂರವರು ಹಾಗೂ ಶ್ರೀ ಪೊಳಲಿ ರಾಜರಾಜೇಶ್ವರಿ ಕ್ಷೇತ್ರರದ ಸಹಕಾರದಲ್ಲಿ ಈ ಯಕ್ಷೋತ್ಸವ ನಡೆಸುತ್ತಿದ್ದಾರೆ.

ಪೊಳಲಿ ಯಕ್ಷೋತ್ಸವ ಪ್ರಶಸ್ತಿ ಪುರಸ್ಕೃತ ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ

ಬಂಟ್ವಾಳ ತಾಲೂಕಿನ ಇರಾ ಗ್ರಾಮದ 'ಕಲ್ಲಾಡಿ' ಎಂಬ ಪುಟ್ಟ ಊರು ಇಂದು ನಾಡಿನಾದ್ಯಂತ ಪ್ರಸಿದ್ಧಿ ಪಡೆಯಲು ಕಲ್ಲಾಡಿ ಮನೆತನದ ಯಕ್ಷಗಾನ ಸೇವೆ ಮತ್ತು ಅವರ ಯಜಮಾನಿಕೆಯೇ ಪ್ರಮುಖ ಕಾರಣ. ಇಂಥ ಕುಟುಂಬದಿಂದ ಬಂದ ದೇವಿಪ್ರಸಾದ ಶೆಟ್ಟರು ಈಗ ಕಟೀಲಿನ ಏಳು ಮೇಳಗಳ ಯಜಮಾನಿಕೆಯನ್ನು ಯಶಸ್ವಿಯಾಗಿ ಮುನ್ನಡೆಸುತ್ತಾ ಕಲೆಯ ಸಂವರ್ಧನೆ, ಧರ್ಮ ಪ್ರಸಾರದ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರಿಗೆ ಈ ಬಾರಿಯ (2026) ಪೊಳಲಿ ಯಕ್ಷೋತ್ಸವ ಪುರಸ್ಕಾರ ನೀಡಿ ಗೌರವಿಸಲಾಗುತ್ತಿದೆ.

ಯಕ್ಷಗಾನ ರಂಗದಲ್ಲಿ ಕಲ್ಲಾಡಿ ಪರಂಪರೆ

ಕಲ್ಲಾಡಿ ಕೊರಗ ಶೆಟ್ಟಿಯವರು 1939ರಲ್ಲಿ ಕಟೀಲು ಮೇಳದ ಯಜಮಾನಿಕೆಯನ್ನು (ಸಂಚಾಲಕತ್ವ) ವಹಿಸಿಕೊಂಡರು. ಆ ಕಾಲದಲ್ಲಿ ಯಕ್ಷಗಾನ ಮೇಳಗಳನ್ನು ನಡೆಸುವುದು ಅತ್ಯಂತ ಕಷ್ಟಕರವಾಗಿತ್ತು. ಆದರೂ ಎದೆಗುಂದದೆ ಕಲಾವಿದರಿಗೆ ಆಸರೆಯಾಗಿ ನಿಂತು ಕಟೀಲು ಮೇಳ ಹಾಗೂ ಕುಂಡಾವು ಮೇಳಗಳನ್ನು ಯಶಸ್ವಿಯಾಗಿ ಮುನ್ನಡೆಸಿದರು. ಅಂದಿನಿಂದ ಇಂದಿನವರೆಗೂ (ಮಧ್ಯದಲ್ಲಿ ಒಂದೆರಡು ವರ್ಷ ಹೊರತುಪಡಿಸಿ) ಕಟೀಲು ಶ್ರೀ ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಮಂಡಳಿಯ ಎಲ್ಲಾ ಮೇಳಗಳ ಉಸ್ತುವಾರಿ ಮತ್ತು ನಿರ್ವಹಣೆಯನ್ನು ಪುತ್ರ ಕಲ್ಲಾಡಿ ವಿಠಲ ಶೆಟ್ಟರು ಹಾಗೂ ಈಗ ಕಲ್ಲಾಡಿ ದೇವಿಪ್ರಸಾದ ಶೆಟ್ಟರು ಸಮರ್ಥವಾಗಿ ನಡೆಸಿಕೊಂಡು ಬಂದಿದ್ದಾರೆ.

ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿಯವರು ಕಳೆದ ಸುಮಾರು ಎರಡು ದಶಕಗಳಿಂದ (2005ರಿಂದ) ಕಟೀಲು ಮೇಳಗಳ ಯಜಮಾನರಾಗಿ/ಸಂಚಾಲಕರಾಗಿ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಯಕ್ಷಗಾನ ರಂಗದಲ್ಲಿ ಹಾಗೂ ಕಲಾಭಿಮಾನಿಗಳಲ್ಲಿ ಇಂದಿಗೂ ಅವರನ್ನು ಗೌರವದಿಂದ 'ಯಜಮಾನರು' ಎಂದೇ ಸಂಬೋಧಿಸಲಾಗುತ್ತದೆ.

ಚಾಣಾಕ್ಷ ನಿರ್ವಹಣೆ: ಯಕ್ಷಗಾನ ಮೇಳಗಳನ್ನು ನಡೆಸುವುದು ಸುಲಭದ ಮಾತಲ್ಲ. ಮೇಳದ ನಷ್ಟ, ಸಾಲದ ಬಾಧೆ ಅಥವಾ ಕಲಾವಿದರ ಮನಸ್ಸು ನೋಯಿಸದೆ ಮುನ್ನಡೆಸುವುದು ದೊಡ್ಡ ಸವಾಲು. ದೇವಿಪ್ರಸಾದ್ ಶೆಟ್ಟಿಯವರು ತಮ್ಮ ಅಜ್ಜ ಹಾಗೂ ತಂದೆಯಿಂದ ಬಳುವಳಿಯಾಗಿ ಬಂದ ಆಡಳಿತ ಸೂಕ್ಷ್ಮಗಳನ್ನು ಅತಿ ಸಣ್ಣ ವಯಸ್ಸಿನಲ್ಲೇ ಗ್ರಹಿಸಿ, ಕಟೀಲಿನ 7 ಮೇಳಗಳನ್ನು ಅತ್ಯಂತ ಜಾಣ್ಮೆಯಿಂದ ಮೇಳಗಳನ್ನು ನಡೆಸುತ್ತಿದ್ದಾರೆ.

ದೇವಿಪ್ರಸಾದ್ ಶೆಟ್ಟಿಯವರು ಕೇವಲ ಸಾಂಪ್ರದಾಯಿಕ ಶೈಲಿಗೆ ಸೀಮಿತವಾಗದೆ, ಬದಲಾದ ಕಾಲಘಟ್ಟಕ್ಕೆ ತಕ್ಕಂತೆ ಮೇಳದ ನಿರ್ವಹಣೆಯಲ್ಲಿ ಹೊಸ ಸುಧಾರಣೆಗಳು ಹಾಗೂ ತಂತ್ರಜ್ಞಾನ/ಆಡಳಿತಾತ್ಮಕ ಬದಲಾವಣೆಗಳನ್ನು ತಂದಿದ್ದಾರೆ. ಶಿಸ್ತು ಮತ್ತು ಕಟ್ಟಿನಿಟ್ಟಿನ ಕ್ರಮಗಳ ಜೊತೆಗೆ ಕಲಾವಿದರ ಬಗ್ಗೆ ದಯೆ ಹಾಗೂ ಕಾಳಜಿ ವಹಿಸುವ ಗುಣ ಹೊಂದಿದ್ದಾರೆ.

ದಿನೇಶ ಅಮ್ಮಣ್ಣಾಯ ಸ್ಮೃತಿ ಗೌರವ ಪಡೆಯುತ್ತಿರುವ
ಹಿಮ್ಮೇಳ ಗುರು ಕೆ. ಹರಿನಾರಾಯಣ ಬೈಪಾಡಿತ್ತಾಯ

ಕರಾವಳಿಯ ಗಂಡುಕಲೆಯಾದ ಯಕ್ಷಗಾನ ರಂಗಕ್ಕೆ ತಮ್ಮದೇ ಆದ ವಿಶಿಷ್ಟ ಕೊಡುಗೆ ನೀಡಿದ ಅಗ್ರಮಾನ್ಯ ಹಿಮ್ಮೇಳ ಗುರುಗಳಲ್ಲಿ ಕೆ. ಹರಿನಾರಾಯಣ ಬೈಪಾಡಿತ್ತಾಯರು (81 ವರ್ಷ) ಪ್ರಮುಖರು. ಸುಮಾರು ಆರು ದಶಕಗಳಿಗೂ ಹೆಚ್ಚು ಕಾಲ ಯಕ್ಷಗಾನ ಕ್ಷೇತ್ರದಲ್ಲಿ ನಿರಂತರ ಸೇವೆ ಸಲ್ಲಿಸಿರುವ ಇವರು, 2020ರ ಕರ್ನಾಟಕ ಯಕ್ಷಗಾನ ಅಕಾಡೆಮಿಯ 'ಯಕ್ಷಸಿರಿ' ಪ್ರಶಸ್ತಿ ಸೇರಿದಂತೆ ಹಲವು ಗೌರವಗಳಿಗೆ ಭಾಜನರಾಗಿದ್ದಾರೆ.

ಬಾಲ್ಯ ಮತ್ತು ಹಿನ್ನೆಲೆ
  • ಜನನ: 13 ನವೆಂಬರ್ 1946
  • ಹುಟ್ಟೂರು: ದಕ್ಷಿಣ ಕನ್ನಡ ಜಿಲ್ಲೆಯ ಕಡಬದ ಕೆಂಚಭಟ್ರೆ
  • ತಂದೆ-ತಾಯಿ: ರಾಮಕೃಷ್ಣ ಬೈಪಾಡಿತ್ತಾಯ ಮತ್ತು ಪದ್ಮಾವತಿ ಅಮ್ಮ
  • ವಿದ್ಯಾಭ್ಯಾಸ: 7ನೇ ತರಗತಿಯವರೆಗೆ ಮಾತ್ರ ಶಿಕ್ಷಣ ಪಡೆದಿದ್ದರೂ, ಬಾಲ್ಯದಲ್ಲೇ ಯಕ್ಷಗಾನದತ್ತ ತೀವ್ರ ಆಕರ್ಷಿತರಾಗಿ ಶಿಕ್ಷಣವನ್ನು ತೊರೆದು ಕಲಾಕ್ಷೇತ್ರಕ್ಕೆ ಧುಮುಕಿದರು.
  • ಕುಟುಂಬ: ಕಡಬ ಬೈಪಾಡಿ ಬೀಡು ಮನೆತನಕ್ಕೆ ಸೇರಿದ ಇವರ ಕುಟುಂಬವೇ ಯಕ್ಷಗಾನ ಪರಂಪರೆಯದು. ಇವರ ತಂದೆ ರಾಮಕೃಷ್ಣ ಬೈಪಾಡಿತ್ತಾಯರು, ಚಿಕ್ಕಪ್ಪಂದಿರು ಎಲ್ಲರೂ ಯಕ್ಷಗಾನದ ಅರ್ಥಧಾರಿಗಳಾಗಿದ್ದವರು. ಕಿರಿಯ ಸಹೋದರರಾದ ಮೋಹನ ಬೈಪಾಡಿತ್ತಾಯ, ಕೇಶವ ಬೈಪಾಡಿತ್ತಾಯ ಹಾಗೂ ಅನಂತ ಬೈಪಾಡಿತ್ತಾಯರೂ ಯಕ್ಷಗಾನ ರಂಗದಲ್ಲೇ ಸಕ್ರಿಯರಾಗಿದ್ದವರು.
ಕಲಾ ಪಯಣ ಮತ್ತು ತರಬೇತಿ
ಗುರುಗಳು: ಆರಂಭದಲ್ಲಿ ಕಡಬ ಪುರುಷಯ್ಯ ಆಚಾರ್ಯರಿಂದ ಯಕ್ಷಗಾನದ ಬಾಲಪಾಠ ಕಲಿತರು. ನಂತರ 'ಚೆಂಡೆಯ ಗಂಡುಗಲಿ' ನೆಡ್ಲೆ ನರಸಿಂಹ ಭಟ್ ಅವರ ಬಳಿ ಮೇಳದ ತಿರುಗಾಟದ ಸಂದರ್ಭದಲ್ಲಿಯೇ ಶಿಷ್ಯತ್ವ ಪಡೆದು ಚೆಂಡೆ-ಮದ್ದಳೆಯಲ್ಲಿ ನೈಪುಣ್ಯ ಸಾಧಿಸಿದರು.

ಸಂಗೀತ ಮೃದಂಗ: ಮೃದಂಗ ವಿದ್ವಾನ್ ಕಾಂಚನ ಕೆ.ವಿ. ಮೂರ್ತಿ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತದ ಮೃದಂಗ ವಾದನದ ಪಟ್ಟುಗಳನ್ನು ಕರಗತ ಮಾಡಿಕೊಂಡರು.

ಮೇಳಗಳ ತಿರುಗಾಟ: 15ನೇ ವಯಸ್ಸಿಗೆ ಮೇಳದ ತಿರುಗಾಟ ಆರಂಭಿಸಿದ ಇವರು, ಕುಂಡಾವು ಇರಾ ಸೋಮನಾಥೇಶ್ವರ ಮೇಳದಿಂದ ಹಿಡಿದು ಧರ್ಮಸ್ಥಳ, ಕೊಲ್ಲೂರು, ಕೂಡ್ಲು, ಸುಬ್ರಹ್ಮಣ್ಯ, ಪುತ್ತೂರು, ಅಳದಂಗಡಿ, ಬಪ್ಪನಾಡು, ಕುಂಬಳೆ, ತಲಕಳ ಮೇಳಗಳಲ್ಲಿ ಆರು ದಶಕಗಳ ಕಾಲ ಸೇವೆ ಸಲ್ಲಿಸಿದ್ದಾರೆ.

ಪ್ರಸಿದ್ಧ ಕಲಾವಿದರ ಒಡನಾಟ: ನೆಡ್ಲೆ ನರಸಿಂಹ ಭಟ್, ದಿವಾಣ ಭೀಮ ಭಟ್, ಕುದ್ರೆಕೂಡ್ಲು ರಾಮ ಭಟ್, ಶೇಣಿ ಗೋಪಾಲಕೃಷ್ಣ ಭಟ್, ಕುಂಬಳೆ ಸುಂದರ ರಾವ್, ಪಾತಾಳ ವೆಂಕಟ್ರಮಣ ಭಟ್, ಕೋಳ್ಯೂರು ರಾಮಚಂದ್ರ ರಾವ್, ದಾಮೋದರ ಮಂಡೆಚ್ಚ, ಬಲಿಪ ನಾರಾಯಣ ಭಾಗವತ ಮುಂತಾದ ದಿಗ್ಗಜರೊಂದಿಗೆ ರಂಗಸ್ಥಳ ಹಂಚಿಕೊಂಡ ಅನುಭವ ಇವರಿಗಿದೆ.

ಹರಿನಾರಾಯಣ ಬೈಪಾಡಿತ್ತಾಯರ ವಿಶಿಷ್ಟ ಸಾಧನೆ ಮತ್ತು ಕೊಡುಗೆಗಳು

ಪ್ರಥಮ ವೃತ್ತಿಪರ ಮಹಿಳಾ ಭಾಗವತರ ನಿರ್ಮಾಣ: ಮದುವೆಯಾದ ಸಂದರ್ಭದಲ್ಲಿ ಸಂಗೀತ ಅಭ್ಯಾಸ ಮಾಡಿದ್ದ ತಮ್ಮ ಪತ್ನಿ ಲೀಲಾ ಬೈಪಾಡಿತ್ತಾಯ ಅವರಿಗೆ ಯಕ್ಷಗಾನ ಭಾಗವತಿಕೆ ತರಬೇತಿ ನೀಡಿ, ಅವರನ್ನು ಯಕ್ಷಗಾನ ರಂಗದ ಪ್ರಥಮ ವೃತ್ತಿಪರ ಮಹಿಳಾ ಭಾಗವತರನ್ನಾಗಿ ರೂಪಿಸಿದ ಕೀರ್ತಿ ಹರಿನಾರಾಯಣ ಅವರಿಗೆ ಸಲ್ಲುತ್ತದೆ.

ಗುರುವಾಗಿ: ಧರ್ಮಸ್ಥಳದ ಯಕ್ಷಗಾನ ಲಲಿತ ಕಲಾ ಕೇಂದ್ರದಲ್ಲಿ 12 ವರ್ಷಗಳ ಕಾಲ, ಕಟೀಲು ಯಕ್ಷಗಾನ ತರಬೇತಿ ಕೇಂದ್ರದಲ್ಲಿ ಹಾಗೂ ಮಂಗಳೂರು, ಕಡಬ, ಬೆಳಾಲು, ಕಾರ್ಕಳ, ಮೂಡುಬಿದಿರೆ, ತಲಕಳ ಮುಂತಾದೆಡೆ ಹಲವು ವರ್ಷಗಳ ಕಾಲ ಹಿಮ್ಮೇಳ ಗುರುಗಳಾಗಿ ಸೇವೆ ಸಲ್ಲಿಸಿ, ಹಲವಾರು ಶಿಷ್ಯರನ್ನು ಯಕ್ಷಗಾನ ರಂಗಕ್ಕೆ ನೀಡಿದ್ದಾರೆ.

ಮಂಗಳೂರಿನ ಮಹಾಮಾಯಿ ದೇವಸ್ಥಾನದಲ್ಲಿ ಪ್ರಥಮ ಬಾರಿಗೆ ಯಕ್ಷಗಾನ ಹಿಮ್ಮೇಳ ತರಬೇತಿ ಆರಂಭಿಸಿದ ಕೀರ್ತಿ ಇವರದು. ತಮ್ಮ ಶಿಷ್ಯವೃಂದದಿಂದ ಚೆಂಡೆ ಜುಗಲ್ಬಂದಿ'ಯಂತಹ ನೂತನ ಪ್ರಯೋಗಗಳನ್ನು ಯಕ್ಷಗಾನದಲ್ಲಿ ಪರಿಚಯಿಸಿದರು.

ಗ್ರಂಥ ಹಾಗೂ ಆಡಿಯೋ ಸಿಡಿ: ಶಿಷ್ಯರ ಅನುಕೂಲಕ್ಕಾಗಿ ಚೆಂಡೆ-ಮದ್ದಳೆಯ ಅಭ್ಯಾಸ ಪಠ್ಯವಾದ 'ಧೀಂಕಿಟ' ಪುಸ್ತಕವನ್ನು ಮತ್ತು ಪತ್ನಿ ಮಕ್ಕಳು ಹಿಮ್ಮೇಳದಲ್ಲಿರುವ ಯಕ್ಷಗಾನ ಪೂರ್ವರಂಗದ ಆಡಿಯೋ ಸಿಡಿಯನ್ನು ಹೊರತಂದಿದ್ದಾರೆ.

ಪ್ರಶಸ್ತಿ ಮತ್ತು ಗೌರವಗಳು
  • ಕರ್ನಾಟಕ ಯಕ್ಷಗಾನ ಅಕಾಡೆಮಿಯ 'ಯಕ್ಷಸಿರಿ ಪ್ರಶಸ್ತಿ' (2020)
  • ಉಡುಪಿ ಯಕ್ಷಗಾನ ಕಲಾರಂಗದ 'ಪಡಾರು ನರಸಿಂಹ ಶಾಸ್ತ್ರಿ ಪ್ರಶಸ್ತಿ'
  • ನೆಡ್ಲೆ ನರಸಿಂಹ ಭಟ್ ಸ್ಮರಣಾರ್ಥ ಪ್ರಶಸ್ತಿ
  • ಪುತ್ತೂರು ನಾರಾಯಣ ಹೆಗ್ಡೆ ಸ್ಮೃತಿ ಗೌರವ ಹಾಗೂ ಕಡಬ ಸಂಸ್ಮರಣಾ ಪುರಸ್ಕಾರ
  • ಇವರ 75ರ ಹರೆಯದ ಸಂಭ್ರಮದಲ್ಲಿ ಶಿಷ್ಯವೃಂದ ಮತ್ತು ಅಭಿಮಾನಿಗಳು 'ಶ್ರೀ ಹರಿಲೀಲಾ-75' ಯಕ್ಷಾಭಿನಂದನಂ ಹೆಸರಿನಲ್ಲಿ ಬೃಹತ್ ಗೌರವ ಸಮಾರಂಭವನ್ನು ಆಯೋಜಿಸಿದ್ದರು.

ಪ್ರಸ್ತುತ ಇವರು ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ತಾಲೂಕಿನ ಪುನರೂರಿನಲ್ಲಿ ತಮ್ಮ ಪುತ್ರ ಹಾಗೂ ಕಟೀಲು ಮೇಳದ ಕಲಾವಿದರಾದ ಅವಿನಾಶ್ ಬೈಪಾಡಿತ್ತಾಯ ಅವರೊಂದಿಗೆ ವಾಸವಾಗಿದ್ದು, ಇಳಿ ವಯಸ್ಸಿನಲ್ಲಿಯೂ ಆಸಕ್ತ ಮಕ್ಕಳಿಗೆ ಮನೆಯಲ್ಲೇ ಹಿಮ್ಮೇಳ ತರಬೇತಿ ನೀಡುತ್ತಾ ಕಲಾ ಸೇವೆಯನ್ನು ಮುಂದುವರಿಸುತ್ತಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು