ಬಡಗುತಿಟ್ಟು ಯಕ್ಷಗಾನದ ಸಮಕಾಲೀನ ಶ್ರೇಷ್ಠ ಹಾಸ್ಯ ಕಲಾವಿದರಾದ ಶ್ರೀಧರ ಭಟ್ ಕಾಸರಕೋಡ ಅವರು ನಮ್ಮನ್ನು ಅಕಾಲಿಕವಾಗಿ ಅಗಲಿದ್ದಾರೆ. ಅವರಿಗೆ 52 ವರ್ಷ ವಯಸ್ಸಾಗಿತ್ತು.
ಸುಮಾರು ಮೂರುವರೆ ದಶಕಗಳಿಂದ ಯಕ್ಷಗಾನ ರಂಗಭೂಮಿಯ ಅತ್ಯಂತ ಜನಪ್ರಿಯ ಮತ್ತು ಸಮಕಾಲೀನ ಪ್ರಮುಖ ಹಾಸ್ಯ ಕಲಾವಿದರಾದ ಶ್ರೀಧರ ಭಟ್ ಅವರು ನಮ್ಮನ್ನು ಅಗಲಿದ ಸುದ್ದಿ ಇಂದು (31 ಜುಲೈ 2026) ಯಕ್ಷಗಾನ ಕ್ಷೇತ್ರದಲ್ಲಿ ಬರಸಿಡಿಲಿನಂತೆ ಬಂದು ಅಪ್ಪಳಿಸಿದೆ. ಹೊಟ್ಟೆ ಹುಣ್ಣಾಗುವಷ್ಟು ನಗಿಸುತ್ತಿದ್ದ ಶ್ರೀಧರ ಕಾಸರಕೋಡ ಅವರು ನಿಧನರಾಗಿದ್ದು, ಯಕ್ಷಗಾನ ರಂಗವನ್ನು ಅಳುವಿನಲ್ಲಿ ಮುಳುಗಿಸಿದ್ದಾರೆ.
ಇತ್ತೀಚೆಗಷ್ಟೇ ಒಮ್ಮೆ ಆಕಸ್ಮಿಕವಾಗಿ ಕುಸಿದುಬಿದ್ದಿದ್ದರು ಎಂದು ಅವರ ಆಪ್ತರು ಮಾಹಿತಿ ನೀಡಿದ್ದಾರೆ. ನಿದ್ದೆಗೆಟ್ಟು ಕಲಾರಸಿಕರನ್ನು ರಂಜಿಸುವ ಯಕ್ಷಗಾನ ಕಲಾವಿದರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನ ಕೊಡಬೇಕಿದೆ ಎಂದು ಕಲಾಭಿಮಾನಿಗಳು, ತಜ್ಞರು ಎಚ್ಚರಿಕೆ ನೀಡುತ್ತಲೇ ಇದ್ದಾರೆ.
ಯಕ್ಷಗಾನ ರಂಗಭೂಮಿಯ ಅತ್ಯಂತ ಜನಪ್ರಿಯ ಮತ್ತು ಸಮಕಾಲೀನ ಪ್ರಮುಖ ಹಾಸ್ಯ ಕಲಾವಿದರಾದ ಶ್ರೀಧರ ಭಟ್, ಅನಾರೋಗ್ಯದಿಂದಾಗಿ ಮಣಿಪಾಲ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ನಿಧನರಾಗಿದ್ದು, ಯಕ್ಷಗಾನ ಅಭಿಮಾನಿಗಳು ದುಃಖ ಹಾಗೂ ಆಘಾತ ವ್ಯಕ್ತಪಡಿಸಿದ್ದಾರೆ.
ಅದ್ಭುತ ಪ್ರತ್ಯುತ್ಪನ್ನಮತಿಯ ಶ್ರೀಧರ ಭಟ್ ಕಾಸರಕೋಡು
ತಮ್ಮ ಚುರುಕಾದ ಮಾತುಗಾರಿಕೆ, ಪ್ರತ್ಯುತ್ಪನ್ನಮತಿ, ರಂಗಸ್ಥಳದ ಸಮಯಪ್ರಜ್ಞೆ ಮತ್ತು ಅದ್ಭುತ ಹಾಸ್ಯ ಟೈಮಿಂಗ್ ಮೂಲಕ ಅವರು ಅಪಾರ ಅಭಿಮಾನಿಗಳನ್ನು, ಖ್ಯಾತಿಯನ್ನೂ ಗಳಿಸಿದ್ದರು. ಕೆಲವು ಸಮಯದಿಂದ ಅವರಿಗೆ ಅನಾರೋಗ್ಯ ಕಾಡುತ್ತಿತ್ತು. ಇಂದು ಬೈಂದೂರಿನ ಗೋಳಿಹೊಳೆಯಲ್ಲಿ ನಡೆಯಬೇಕಿದ್ದ ಮಾಗಧವಧೆ ಪ್ರಸಂಗದಲ್ಲಿಯೂ ಅವರ ಭಾಗವಹಿಸುವಿಕೆ ನಿಗದಿಯಾಗಿತ್ತು. ಆದರೆ, ಅವರು ಕಾಲನ ಕರೆಗೆ ಓಗೊಟ್ಟು, ಅಭಿಮಾನಿಗಳನ್ನು ಶೋಕಸಾಗರದಲ್ಲಿ ಮುಳುಗಿಸಿದ್ದಾರೆ.
ಚಿತ್ರಾಕ್ಷಿ ಕಲ್ಯಾಣದಲ್ಲಿ ಅವರ ಪಾತ್ರ ಹೇಳುವ ವಿಚಾರವು ಈಗಲೂ ಗುನುಗುನಿಸುತ್ತಿದೆ. ಭೂಲೋಕದವರು ಸಶರೀರಿಗಳಾಗಿ ಸ್ವರ್ಗಕ್ಕೆ ಬರುವುದು ಹೇಗೆ ಸಾಧ್ಯವೆಂದರೆ, ಅವರು ಕಲಾವಿದರಾಗಿದ್ದರೆ ಮಾತ್ರ. ಕಲಾವಿದ ಒಂದು ದಿನಕ್ಕೆ ಎಷ್ಟು ಜನಕ್ಕೆ ಸುಖ ಕೊಡುತ್ತಾನೆ ಗೊತ್ತೇ? ನೇತ್ರಾನಂದ, ಕರ್ಣಾನಂದ, ಭಾವಾನಂದ, ಆತ್ಮಾನಂದ, ನಿತ್ಯಾನಂದ ಕೊಡುತ್ತಾನೆ. ಅಷ್ಟು ಸುಖ ಕೊಡುವ ಕಲಾವಿದನಿಗೆ ಆ ಪ್ರೇಕ್ಷಕರು ಕೊಡುವ ಆಶೀರ್ವಾದ ಉಂಟಲ್ಲ... ಕಲಾವಿದ ಸಾಯುವುದಿಲ್ಲ, ಟುಂಯ್ ಅಂತ ಮೇಲೆ ಹೋಗುತ್ತಾನೆ ಅಂತ ಅವರು ಹೇಳಿರುವುದು ಈಗ ಕೇವಲ ನೆನಪು.
ಶ್ರೀಧರ ಭಟ್ ಕಾಸರಕೋಡ ಹಿನ್ನೆಲೆ: ಇವರು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಕರಾವಳಿ ಗ್ರಾಮವಾದ ಕಾಸರಕೋಡು ಮೂಲದವರಾಗಿದ್ದಾರೆ. ಯಕ್ಷಗಾನದ ಸಾಂಪ್ರದಾಯಿಕ ಶೈಲಿಯಂತೆ ಇವರ ಜನ್ಮಸ್ಥಳವೇ ಇವರ ಹೆಸರಿನೊಂದಿಗೆ ಗುರುತಿಸಿಕೊಂಡಿದೆ. ಯಕ್ಷಗಾನದ ಪ್ರಮುಖ ಪ್ರಕಾರಗಳಲ್ಲಿ ಒಂದಾದ ಬಡಗುತಿಟ್ಟು ಶೈಲಿಯಲ್ಲಿ ಶ್ರೀಧರ ಭಟ್ಟರು ಸಿದ್ಧಹಸ್ತರಾಗಿದ್ದಾರೆ. ಇವರು ತಮ್ಮ ಸುದೀರ್ಘ ಕಲಾ ಪ್ರಯಾಣದಲ್ಲಿ ಕರಾವಳಿಯ ಪ್ರಸಿದ್ಧ ವಾಣಿಜ್ಯ ಮೇಳ ಸಾಲಿಗ್ರಾಮ ಮೇಳ ಸೇರಿದಂತೆ ಹಲವು ಮುಂಚೂಣಿ ಮೇಳಗಳಲ್ಲಿ ವೃತ್ತಿಪರ ಕಲಾವಿದರಾಗಿ ಸುದೀರ್ಘ ಕಾಲ ತಿರುಗಾಟ ನಡೆಸಿದ್ದಾರೆ.
ಪ್ರಮುಖ ಬಡಗುತಿಟ್ಟು ಮೇಳಗಳಲ್ಲಿ ಅತಿಥಿ ಕಲಾವಿದರಾಗಿಯೂ ಸೇವೆ ಸಲ್ಲಿಸಿದ್ದಾರೆ. ಕಳೆದ ಹಲವು ದಶಕಗಳಿಂದ ರಂಗಸ್ಥಳದಲ್ಲಿ ಸಕ್ರಿಯವಾಗಿರುವ ಇವರು, ಯಕ್ಷಗಾನದ ಹಾಸ್ಯ ವಿಭಾಗಕ್ಕೆ ತಮ್ಮದೇ ಆದ ವಿಶಿಷ್ಟ ಕೊಡುಗೆ ನೀಡುತ್ತಾ ಬಂದಿದ್ದಾರೆ.
ಯಕ್ಷಗಾನ ಕ್ಷೇತ್ರ ಕಂಡ ಒಬ್ಬ ಅಪರೂಪದ ಶ್ರೇಷ್ಠ ಹಾಸ್ಯ ಕಲಾವಿದರಾಗಿರುವ ಶ್ರೀಧರ ಭಟ್ ಕಾಸರಕೋಡರಲ್ಲಿ ಅಭಿಜಾತವಾಗಿ ಹಾಸ್ಯ ಪ್ರವೃತ್ತಿ ಇತ್ತು. ತನಗಿರುವ ಧ್ವನಿ ಗಾಂಭೀರ್ಯದ ಕೊರತೆಯನ್ನು ತನ್ನ ವಿನೂತನ ವಿಚಾರಗಳ ಹೊಳಹುಗಳಿಂದ ತುಂಬಿಸಿಕೊಳ್ಳುತ್ತಿದ್ದ ಚತುರಮತಿಯಾಗಿದ್ದಲ್ಲದೆ, ವಿಶೇಷವಾದ ಆಕರ್ಷಕ ಬಣ್ಣಗಾರಿಕೆಯಿಂದಲೂ ಚಿತ್ರ ವಿಚಿತ್ರವಾದ ಕುಣಿತಗಳಿಂದಲೂ ಅವರು ಹಾಸ್ಯಪಾತ್ರವನ್ನು ರಂಗದಲ್ಲಿ ಕಳೆಗಟ್ಟುವಂತೆ ಮಾಡುತ್ತಿದ್ದರು.
ಸಾಂಪ್ರದಾಯಿಕ ಚೌಕಟ್ಟನ್ನು ಮೀರಿ ಪ್ರಸ್ತುತ ಜಗತ್ತಿನ ವಿದ್ಯಮಾನಗಳನ್ನು (ಸಾಮಾಜಿಕ ಕಾಳಜಿ, ತಂತ್ರಜ್ಞಾನ, ನಿಯಮಗಳು) ಪುರಾಣ ಕಥೆಗಳೊಂದಿಗೆ ಹಾಸ್ಯಭರಿತವಾಗಿ ಜೋಡಿಸುವಲ್ಲಿ ಇವರು ಪ್ರಸಿದ್ಧರು. ವಿಶೇಷವಾಗಿ ಪುರೋಹಿತ, ಮುದುಕ, ಅಜ್ಜಿ ಮುಂತಾದ ಹಾಸ್ಯ ಪಾತ್ರಗಳಲ್ಲಿ ಜನರಂಜಿಸಿದ ಇವರು, 'ಚಂದ್ರಹಾಸ ಚರಿತ್ರೆ' ಮತ್ತಿತರ ಕೆಲವು ಪ್ರಸಂಗಗಳಲ್ಲಿ ಇವರು ನಿರ್ವಹಿಸುವ ಸಾಂಪ್ರದಾಯಿಕ ಪುರೋಹಿತರ ಪಾತ್ರಗಳು ಅತ್ಯಂತ ಜನಪ್ರಿಯವಾಗಿವೆ.
ಸಹಜ ಹಾಸ್ಯದಿಂದ ಭಾಗವತರ ಹಾಗೂ ಇತರ ಪಾತ್ರಧಾರಿಗಳ ಕಾಲೆಳೆಯುವ ಕಲಾಧರನಂತಹ ಹಾಸ್ಯ ಪಾತ್ರಗಳಲ್ಲಿ ಇವರು ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸುತ್ತಾರೆ. 'ಕನಕಾಂಗಿ ಕಲ್ಯಾಣ' ಮತ್ತು 'ಚಿತ್ರಾಕ್ಷಿ ಕಲ್ಯಾಣ' ಮುಂತಾದ ಪ್ರಸಂಗಗಳಲ್ಲಿ ಇವರ ಹಾಸ್ಯ ವೇಷಗಳು ಯೂಟ್ಯೂಬ್ ಹಾಗೂ ಸೋಶಿಯಲ್ ಮೀಡಿಯಾಗಳಲ್ಲಿ ಸದಾ ವೈರಲ್ ಆಗುತ್ತಿರುತ್ತವೆ. ಕರಾವಳಿ ಹಾಗೂ ಮಲೆನಾಡಿನಾದ್ಯಂತ ಇರುವ ಹಲವಾರು ಯಕ್ಷಗಾನ ಸಂಘಟನೆಗಳು, ಕಲಾಭಿಮಾನಿ ಬಳಗಗಳು ಮತ್ತು ಸಾಂಸ್ಕೃತಿಕ ಸಂಸ್ಥೆಗಳು ಇವರ ಸುದೀರ್ಘ ಕಲಾ ಸೇವೆಯನ್ನು ಮತ್ತು ಪ್ರತಿಭೆಯನ್ನು ಗುರುತಿಸಿ ಗೌರವಿಸಿವೆ.
ಶ್ರೀಧರ ಭಟ್ಟರ ಹಾಸ್ಯದ ಒಂದು ತುಣುಕು ಇಲ್ಲಿದೆ. (ಇಲ್ಲಿ ಕ್ಲಿಕ್ ಮಾಡಿ) ಕೊಂಕಣಿ ಭಾಷೆಯನ್ನಿಟ್ಟುಕೊಂಡು, ನಾಟ್ಯಶಾಸ್ತ್ರ ರೂಪುಗೊಂಡಿತು ಎಂದು ಅವರು ವಿವರಿಸುವ ಪರಿ ಕೇಳುವುದೇ ಚೆಂದ.
ಅಗಲಿದ ಅವರ ಆತ್ಮಕ್ಕೆ ಯಕ್ಷಗಾನ ಕಲಾಮಾತೆಯು ದಿವ್ಯಸಾನ್ನಿಧ್ಯ ನೀಡಿ ಒಡಗೂಡಿಸಿಕೊಳ್ಳಲಿ ಎಂದು ಯಕ್ಷಗಾನ.ಇನ್ ತಾಣವು ಶ್ರದ್ಧಾಂಜಲಿ ಸಲ್ಲಿಸುತ್ತದೆ.
