ಯಕ್ಷಗಾನ: ದೇವೀ ಮಾಹಾತ್ಮ್ಯೆ ಎಂಬ ನವ ನವೋನ್ಮೇಷಶಾಲಿನೀ

ಯಕ್ಷಗಾನದ ಬಲು ನಿರೀಕ್ಷೆಯ ಸನ್ನಿವೇಶ ದೇವಿ ಪ್ರತ್ಯಕ್ಷವಾಗುವ ಭಯ-ಭಕ್ತಿ ಭಾವದ ಸಡಗರ

ಅವಿನಾಶ್ ಬೈಪಾಡಿತ್ತಾಯ

ಯಕ್ಷಗಾನ ಎಂದರೆ ಕೇವಲ ಕಲೆಯಲ್ಲ; ಭಕ್ತಿಭಾವ, ಕಲಾಶ್ರೀಮಂತಿಕೆ, ಪರಂಪರೆ, ಉತ್ಸವ, ಗಾನ, ನಾಟ್ಯ, ಮಾತು, ವೇಷಭೂಷಣ, ಅಲಂಕಾರ, ರಂಗುರಂಗಿನ, ಪೂಜೆ - ಹೀಗೆ ಎಲ್ಲ ಭಾವಗಳ ಸಂಗಮ. ಯಕ್ಷಗಾನವೆಂದರೇ ಬೆಳಕಿನ ಸೇವೆ, ರಂಗ ಪೂಜೆ ಅಂತಲೂ ಪರಿಗಣಿಸಬಹುದು. ರಾತ್ರಿ ವೇಳೆ ದೇವರಿಗೆ ಬೆಳಕು (ದೀಪ) ಹಚ್ಚಿ ಭಕ್ತಿಭಾವದಲ್ಲಿ ಮೀಯುವ ಆರಾಧನಾ ಕಲೆ. ಈ ಕಾರಣಕ್ಕಾಗಿಯೇ ಯಕ್ಷಗಾನವೆಂಬ ದೈವೀ ಕಲೆಯು ಐದಾರು ಶತಮಾನಗಳ ಹಿಂದೆ ಹುಟ್ಟಿ, ನಿಧಾನವಾಗಿ ಬೆಳೆಯುತ್ತಾ ಇಂದು ವಿಶ್ವಗಾನವಾಗಿದೆ, ಕಿರಿ-ಹಿರಿಯರೆನ್ನದೆ ಎಲ್ಲ ತಲೆಮಾರುಗಳನ್ನೂ ಆಕರ್ಷಿಸುತ್ತಲೇ ಇದೆ.

ತಂತ್ರಜ್ಞಾನದ ಈ ಯುಗದಲ್ಲಿ ಮೊಬೈಲ್ ದಾಸರಾಗಿರುವ ಪೀಳಿಗೆಯನ್ನೂ ಆಕರ್ಷಿಸುತ್ತಾ ಇರುವುದು ಒಳ್ಳೆಯ ಬೆಳವಣಿಗೆ. ಇಂದು ಶಾಲಾ-ಕಾಲೇಜುಗಳಲ್ಲೇ ಒಂದೊಂದು ಯಕ್ಷಗಾನ ತಂಡವು ತಯಾರಾಗುತ್ತದೆ ಎಂಬುದು ಯಕ್ಷಗಾನದ ಅನನ್ಯ ಆಕರ್ಷಣೆಗೆ ಸಾಕ್ಷಿ. ಇದರ ಜೊತೆಗೆ, ಬೆಳೆಯುವ ಮನಸ್ಸುಗಳಿಗೆ ಸಂಸ್ಕಾರವನ್ನೂ, ಪುರಾಣವನ್ನೂ, ನೀತಿಪಾಠವನ್ನೂ, ಕನ್ನಡವನ್ನೂ ಸದ್ದಿಲ್ಲದೇ ಬೋಧಿಸುತ್ತಿದೆ ಯಕ್ಷಗಾನ. ಮುಖ್ಯವಾಗಿ ಕನ್ನಡ ಸಾಹಿತ್ಯ ಲೋಕಕ್ಕೆ ಯಕ್ಷಗಾನದ ಕೊಡುಗೆ ಅತ್ಯದ್ಭುತ, ಅನನ್ಯ. ಜಗತ್ತಿನ ಯಾವುದೇ ಕಲೆಯು ಒಂದು ಭಾಷೆಯ ಬೆಳವಣಿಗೆಗೆ ಈ ಪರಿಯಾಗಿ ಪೂರಕವಾಗಿರುವ ಉದಾಹರಣೆಗಳಿಲ್ಲ. ಪದ್ಯ ಸಾಹಿತ್ಯದಿಂದ ಹಿಡಿದು, ರಂಗಸ್ಥಳದಲ್ಲಿ, ವೇದಿಕೆಯಲ್ಲಿ ಅರಳುವ ಅಸ್ಖಲಿತ ಆಶು ಸಾಹಿತ್ಯವು, ಪ್ರೇಕ್ಷಕರ ಪದಭಂಡಾರ ವೃದ್ಧಿಗೆ, ಕನ್ನಡ ಭಾಷೆಯ ಸೊಗಡು ವೃದ್ಧಿಗೆ ಸಹಕರಿಸುತ್ತದೆ. ಹೀಗಾಗಿಯೇ ಇದು ಕನ್ನಡದ ಹೆಮ್ಮೆಯ ಕಲೆ ಎಂಬುದರಲ್ಲಿ ಎರಡು ಮಾತಿಲ್ಲ. ಕನ್ನಡ ಸಾಹಿತ್ಯ ಲೋಕಕ್ಕೆ ಐನೂರು ವರ್ಷಗಳಿಂದ ಅದ್ಭುತ ಕೊಡುಗೆಗಳನ್ನು ನೀಡಿರುವ ಯಕ್ಷಗಾನವು ಕರ್ನಾಟಕದ ಪ್ರಾತಿನಿಧಿಕ ಕಲೆಯಾಗಲು ಎಲ್ಲ ರೀತಿಯ ಅರ್ಹತೆಗಳನ್ನು ಪಡೆದಿದೆ. ಇಲ್ಲಿ ಪ್ರತಿದಿನವೂ ಸೃಷ್ಟಿಯಾಗುತ್ತಿರುವ ಆಶು ಸಾಹಿತ್ಯಕ್ಕೆ ಎಣೆಯುಂಟೇ?

ಈ ಪರಿ ಸದ್ದಿಲ್ಲದೆ ಹತ್ತು ಹಲವಾರು ಪ್ರಯೋಜನಗಳನ್ನು ಯೋಜನಾಂತರದಲ್ಲಿ ಪ್ರಸಾರ ಮಾಡುತ್ತಿರುವ, ದೇವಳ ಕೇಂದ್ರಿತ ಯಕ್ಷಗಾನ ಮೇಳಗಳಿಗೆ ಹರಕೆ ಹೊತ್ತು ಆಟ (ಯಕ್ಷಗಾನ) ಆಡಿಸುವವರ ಸಂಖ್ಯೆಯೂ ಹೆಚ್ಚುತ್ತಲೇ ಇದೆ. ಈ ಕಾರಣಕ್ಕಾಗಿಯೇ, ಕಟೀಲು ಮೇಳಗಳ ಸಂಖ್ಯೆಯು ಆರು ಇದ್ದದ್ದು ಕಳೆದ ತಿರುಗಾಟದಲ್ಲಿ (2025 ನವೆಂಬರ್ 16ರಿಂದ 2026 ಮೇ 26), ಏಳನೇ ಮೇಳವನ್ನು ಸೇರಿಸಲಾಗಿದೆ. ಇದು ಹರಕೆಯಾಟಗಳ ಬಾಕಿ ಸಂಖ್ಯೆಯನ್ನು ಕಡಿಮೆಗೊಳಿಸುವ ಪ್ರಯತ್ನವಷ್ಟೇ ಅಲ್ಲದೆ, ಯಕ್ಷಗಾನದ ಅಭಿವೃದ್ಧಿಯ ಸಂಕೇತವೂ ಹೌದು.

ಹಿಂದೆಲ್ಲ ಹರಕೆ ಹೊತ್ತು ಅದನ್ನು ಈಡೇರಿಸಲು ಅವಕಾಶ ಸಿಗಬೇಕಿದ್ದರೆ ಸುಮಾರು ಇಪ್ಪತ್ತೈದು ವರ್ಷಗಳಷ್ಟು ಕಾಯಬೇಕಿತ್ತು (ನಿಗದಿಯಾದ ಯಕ್ಷಗಾನವು ಆಟ ಆಡಿಸುವವರ ತುರ್ತು ಕಾರ್ಯನಿಮಿತ್ತ ರದ್ದಾಗುವಾಗ ಸಿಗುವ ಅವಕಾಶಗಳ ಹೊರತಾಗಿ). ಆದರೆ ಈ ಕಾಯುವಿಕೆಯ ಅಂತರ ಕಿರಿದಾಗುತ್ತಿದೆ ಈಗ. ತನಗೆ ನಿರ್ದಿಷ್ಟ ಕಾರ್ಯದಲ್ಲಿ ಯಶಸ್ಸು ದೊರಕಿದರೆ, ಕನಸು ಈಡೇರಿದರೆ, ಆರೋಗ್ಯ, ಮಕ್ಕಳು, ಉದ್ಯಮದಲ್ಲಿ ಯಶಸ್ಸು - ಹೀಗೆ ವಿವಿಧ ಕಾರಣಗಳಿಗಾಗಿ ಕಟೀಲು ದೇವಿಗೆ ಹರಕೆ ಹೇಳುವವರಿದ್ದಾರೆ. ಅವರ ಇಷ್ಟಾರ್ಥ ಸಿದ್ಧಿಯಾದ ಬಳಿಕ ಕಟೀಲು ದೇವಿಗೆ ಬೆಳಕಿನ ಸೇವೆ - ಯಕ್ಷಗಾನ - ಮಾಡಿಸುವುದೆಂಬ ಹರಕೆಯದು. ಆ ದಿನ ಯಾವ ಪ್ರಸಂಗ (ಭಾಗವತ, ರಾಮಾಯಣ, ಮಹಾಭಾರತ ಇತ್ಯಾದಿ ಪುರಾಣಗಳ) ಆಡಿ ತೋರಿಸಬೇಕೆಂಬ ನಿರ್ಧಾರವೂ ಈ ಹರಕೆ ಸೇವಾಕರ್ತರದು.

ಆದರೆ, ಹೆಚ್ಚಿನವರ ಒಲವು ಕಟೀಲು ದೇವಿಗೆ ದೇವೀ ಮಾಹಾತ್ಮ್ಯೆಯ ಪ್ರಸಂಗದ ಪ್ರದರ್ಶನದ ಸೇವಾರ್ಪಣೆ.

ಅಗರಿ ಶ್ರೀನಿವಾಸ ಭಾಗವತರು ಹಾಗೂ ಹಿರಿಯ ಬಲಿಪ ನಾರಾಯಣ ಭಾಗವತರು ರಚಿಸಿರುವ ಪದ್ಯಸಾಹಿತ್ಯದ ಆಧಾರದಲ್ಲಿ, ಶ್ರೀದೇವೀ ಸಪ್ತಶತೀ ಆಧಾರದ ಕಥಾನಕ ದೇವೀ ಮಾಹಾತ್ಮ್ಯೆ ಯಕ್ಷಗಾನ ರೂಪದಲ್ಲಿ ಊರಲ್ಲೆಲ್ಲಾ ಪ್ರಸಾರವಾಗುತ್ತಿದೆ. ಹಿಂದೆಲ್ಲಾ ದೇವೀ ಮಾಹಾತ್ಮ್ಯೆ ಒಂದು ಆಟ ಪೂರ್ಣವಾಗಿ ಪ್ರದರ್ಶನಗೊಳ್ಳಬೇಕಿದ್ದರೆ ಒಂಬತ್ತು ದಿನ (ರಾತ್ರಿಯಿಡೀ) ಯಕ್ಷಗಾನ ನಡೆಯಬೇಕಿತ್ತು. ಒಂದೊಂದು ದಿನ ಒಂದೊಂದು ಸನ್ನಿವೇಶ, ಧಾರಾವಾಹಿಯಂತೆ ಪ್ರದರ್ಶನ. ಕಾಲಾಂತರದಲ್ಲಿ, ಜನರ ಸಮಯಾವಕಾಶ ಕಡಿಮೆಯಾದಂತೆಲ್ಲಾ, ಹೆಚ್ಚು ಕಾಲ ಅದು ಒಂದು ರಾತ್ರಿಯ (ರಾತ್ರಿ 9ರಿಂದ ಬೆಳಿಗ್ಗೆ 6ರವರೆಗೆ) ಆಖ್ಯಾನವಾಗಿ ಬದಲಾಯಿತು. ಈಗ ಮತ್ತಷ್ಟು ಓರಣವಾಗಿ, ಸಂಜೆ 7ರಿಂದ ಮಧ್ಯರಾತ್ರಿ 12.30ರವರೆಗೆ ಪ್ರದರ್ಶಿಸಲಾಗುತ್ತಿದೆ. ಆದರೆ, ಯಕ್ಷಗಾನ ಪ್ರಸಂಗ ನೀಡುವ ಸಂದೇಶಕ್ಕಾಗಲೀ, ಅದು ನೀಡುವ ರಂಜನೆಗಾಗಲೀ, ಬೋಧನೆಗಾಗಲೀ ಚ್ಯುತಿ ಬಂದಿಲ್ಲ.

ಇಲ್ಲಿ, ಮೇಳಗಳ ಕಲಾವಿದರಿಗೆ ಪ್ರತಿ ದಿನ ಇದೇ ಪ್ರಸಂಗ ಆದರೂ, ಏಕತಾನತೆ ಇರುವುದಿಲ್ಲ. ಇದಕ್ಕೆ ಕಾರಣವೆಂದರೆ, ಯಕ್ಷಗಾನವೆಂಬುದು ಆಶು ಸಾಮರ್ಥ್ಯವಿರುವ (ಸ್ಕ್ರಿಪ್ಟೆಡ್ ಡೈಲಾಗ್ ಇತ್ಯಾದಿಗಳಿಲ್ಲದ) ಜಗತ್ತಿನ ಅತ್ಯಂತ ವಿಶಿಷ್ಟವಾದ ಅನನ್ಯವಾದ, ಕಲೆ. ಮೂಲ ಪದ್ಯದ ಸಾಹಿತ್ಯ ಅದೇ ಆದರೂ, ರಂಗಸ್ಥಳಕ್ಕೇರುವಾಗ ಕಲಾವಿದನಿಗೆ ಹೊಸ ಸ್ಫೂರ್ತಿ. ಪದ್ಯದ ಚೌಕಟ್ಟಿನಲ್ಲೇ ಹೇಳಬೇಕಾದ ಅರ್ಥ (ಅಂದರೆ ಸಂಭಾಷಣೆ), ಪ್ರತಿದಿನವೂ ಬದಲಾಗುತ್ತಿರುತ್ತದೆ. ಕುಣಿತದಲ್ಲಿ ವೈವಿಧ್ಯವಿರುತ್ತದೆ. ರಂಗದಲ್ಲಿ ಆ ಕ್ಷಣ ಹೊಳೆಯುವ, ಸ್ಫುರಿಸುವ ವಾಕ್ಯಗಳು ಮತ್ತು ನಾಟ್ಯವೈವಿಧ್ಯಗಳಿಂದಾಗಿ ದೇವೀ ಮಾಹಾತ್ಮ್ಯೆ ಯಾವತ್ತೂ ಹೊಸತನ ಕಾಯ್ದುಕೊಂಡು ಬಂದಿದೆ. ಕಲಾವಿದರು ಮುಖವರ್ಣಿಕೆಯಲ್ಲಿಯೂ (ವಿಶೇಷವಾಗಿ ರಾಕ್ಷಸ ಬಲಗಳು) ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಿರುತ್ತಾರೆ. ಹೀಗಾಗಿಯೇ, ನಾವು ಹೋದಲ್ಲೆಲ್ಲಾ ಯಕ್ಷಗಾನದ ಪ್ರೇಕ್ಷಕರಿಂದ, ಅಭಿಮಾನಿಗಳಿಂದ ಕೇಳಿಬರುವ ಒಂದು ಮಾತು ಎಂದರೆ, ಆವತ್ತಿನ ದೇವೀ ಮಾಹಾತ್ಮ್ಯೆ ಆಟಕ್ಕಿಂತ ಇವತ್ತಿನದು ತುಂಬಾ ಚಂದವಾಗಿ ಮೂಡಿಬಂದಿದೆ ಅಂತ! ಈ ಮಾತು ಕೇಳಿಬರುವುದು ಸರ್ವೇಸಾಮಾನ್ಯವಾಗಿಬಿಟ್ಟಿದೆ. ಕಲಾವಿದರಿಗೆ ಇದು ದೇವಿಯ ಪ್ರೇರಣೆಯೇ ಸರಿ.

ಈ ತಿರುಗಾಟದ 192 ದಿನಗಳಲ್ಲಿ ಒಂದು ದಿನ ರಜೆ (ಕಟೀಲು ಕ್ಷೇತ್ರದ ಜಾತ್ರೆಯ ಆರಾಟ ಉತ್ಸವ ಪ್ರಯುಕ್ತ) ಹೊರತಾಗಿ, ಕಟೀಲಿನ ಏಳು ಮೇಳಗಳು ಒಟ್ಟು 191 ದಿನಗಳಲ್ಲಿ ಒಟ್ಟು 1323 ಯಕ್ಷಗಾನ (ಆಟ) ಪ್ರದರ್ಶಿಸಿವೆ. 189 ದಿನವೂ ಸೇವಾಕರ್ತರ ಆಟವಾಗಿದ್ದರೆ, ಆರಂಭ ಮತ್ತು ಮುಕ್ತಾಯದ ದಿನ ಕಟೀಲಿನಲ್ಲಿಯೇ ಮೇಳದಿಂದ ಸೇವೆಯಾಟ.

ಒಟ್ಟಾರೆಯಾಗಿ ಈ ವರ್ಷ ಕಟೀಲಿನ ಏಳೂ ಮೇಳಗಳು ಒಟ್ಟು 720 ಬಾರಿ ಶ್ರೀದೇವೀ ಮಾಹಾತ್ಮ್ಯೆ ಪ್ರದರ್ಶಿಸಿವೆ. ಕಟೀಲು ಹೊರತಾಗಿ, ಧರ್ಮಸ್ಥಳ, ಮಂದಾರ್ತಿ, ಹನುಮಗಿರಿ, ಸೌಕೂರು ಸಹಿತವಾಗಿ ಕರಾವಳಿಯಲ್ಲಿ ಇರುವ ಸುಮಾರು 35ರಷ್ಟು ಇತರ ಮೇಳಗಳು ಕೂಡ ಸಾಂದರ್ಭಿಕವಾಗಿ ಶ್ರೀದೇವೀ ಮಾಹಾತ್ಮ್ಯೆ ಪ್ರದರ್ಶಿಸಿವೆ. ಇವೆಲ್ಲ ಸೇರಿದರೆ ಕಳೆದ ಆರು ತಿಂಗಳ ತಿರುಗಾಟದ ಅವಧಿಯಲ್ಲಿ ಸಾವಿರಕ್ಕೂ ಹೆಚ್ಚು ಶ್ರೀದೇವೀ ಮಾಹಾತ್ಮ್ಯೆ ಯಕ್ಷಗಾನ ಪ್ರದರ್ಶನಗೊಂಡಿರುವುದು ಜಗತ್ತಿನ ಬೇರೆ ಯಾವುದೇ ಕಲೆಗಿಲ್ಲದ ಹೆಗ್ಗಳಿಕೆ. ಇದು ಯಕ್ಷಗಾನದ ತಾಕತ್ತು.

ಇಷ್ಟು ಸಂಖ್ಯೆಯಲ್ಲಿ ಪ್ರತೀ ವರ್ಷವೂ ದೇವೀ ಮಾಹಾತ್ಮ್ಯೆ ಆಖ್ಯಾನದ ಯಕ್ಷಗಾನ ಪ್ರದರ್ಶನವಂತೂ ವಿಶ್ವದಾಖಲೆಯೇ. ಇದನ್ನು ಸರಿಗಟ್ಟುವುದು ಯಾವುದೇ ಕಲೆಗೂ ಸಾಧ್ಯವಿಲ್ಲ. ಕಳೆದ ಐದು ಶತಮಾನದಿಂದ ಅದೆಷ್ಟು ಬಾರಿ ದೇವೀ ಮಾಹಾತ್ಮ್ಯೆಯನ್ನು ಯಕ್ಷಗಾನ ಮೇಳಗಳು ಪ್ರದರ್ಶಿಸಿದ್ದವೋ! ಇದರ ದಾಖಲೆ ಯಾರೂ ಇಟ್ಟುಕೊಂಡಿಲ್ಲದ ಕಾರಣ, ಖಚಿತ ಲೆಕ್ಕಾಚಾರ ಅಸಾಧ್ಯ. ಮತ್ತು ದೇವೀ ಮಾಹಾತ್ಮ್ಯೆ ಎಂಬುದು ಸೃಜಿಸಿರುವ ಭಾವನಾ ಲೋಕ ವರ್ಣನೆಗೆ ನಿಲುಕದ್ದು.

ಕಟೀಲಿನ ಏಳು ಮೇಳಗಳಿಂದ ಈ ವರ್ಷ ಪ್ರದರ್ಶನವಾದ ಶ್ರೀದೇವೀ ಮಾಹಾತ್ಮ್ಯೆ:

1ನೇ ಮೇಳ - 113

2ನೇ ಮೇಳ - 108

3ನೇ ಮೇಳ - 96

4ನೇ ಮೇಳ - 91

5ನೇ ಮೇಳ - 107

6ನೇ ಮೇಳ - 105

7ನೇ ಮೇಳ - 100

ದೇವೀ ಮಾಹಾತ್ಮ್ಯೆ ಮಾತ್ರವೇ ಅಲ್ಲ!

ಕಟೀಲು ಮೇಳದಲ್ಲಿ ಶ್ರೀದೇವೀ ಮಾಹಾತ್ಮ್ಯೆ ಮಾತ್ರ ಪ್ರದರ್ಶಿಸುತ್ತಾರೆ ಎಂಬ ತಪ್ಪು ಅಭಿಪ್ರಾಯವೊಂದು ಕೆಲವರಲ್ಲಿರುವುದು ನಾನು ಈ ವರ್ಷ ತಿರುಗಾಟ ಮಾಡಿದ ಸಂದರ್ಭಗಳಲ್ಲಿ ಹಲವರು ಹೇಳುತ್ತಿರುವುದನ್ನು ಕೇಳಿದ್ದೇನೆ. ಕೇಳಿದವರಿಗೆಲ್ಲಾ ಮನವರಿಕೆ ಮಾಡಿದ್ದೇನೆ. ಆದರೆ, ಬೇರೆ ಪೌರಾಣಿಕ ಪ್ರಸಂಗಗಳನ್ನೂ ಆಡಿ ತೋರಿಸಲಾಗುತ್ತದೆ ಎಂಬ ವಿಷಯ ಎಲ್ಲರಿಗೂ ತಲುಪಬೇಕಿದೆ.

ಸಂದುಹೋದ ತಿರುಗಾಟದ ಸಾಲಿನಲ್ಲಿ 7 ಮೇಳಗಳು 191 ದಿನಗಳ ಕಾಲ ಒಟ್ಟು 1337 ರಾತ್ರಿಗಳಲ್ಲಿ ಯಕ್ಷಗಾನ ಪ್ರದರ್ಶಿಸಿವೆ. ಇವುಗಳಲ್ಲಿ ದೇವೀ ಮಾಹಾತ್ಮ್ಯೆ ಪ್ರಸಂಗದ ಸಂಖ್ಯೆ 720 ಆದರೆ, ಉಳಿದ 617 ರಾತ್ರಿಗಳಲ್ಲಿ ವೈವಿಧ್ಯಮಯ ಪ್ರಸಂಗಗಳು ಪ್ರದರ್ಶನಗೊಂಡಿವೆ. ಕಟೀಲು ಕ್ಷೇತ್ರ ಮಾಹಾತ್ಮ್ಯೆ, ಶ್ರೀರಾಮ ಕಾರುಣ್ಯ, ತ್ರಿಪುರ ಮಥನ, ನಳ ದಮಯಂತಿ, ಮಾನಿಷಾದ, ಸತ್ಯಹರಿಶ್ಚಂದ್ರ, ಶ್ರೀದೇವೀ ಲಲಿತೋಪಾಖ್ಯಾನ, ಚತುರ್ಜನ್ಮ ಮೋಕ್ಷ, ದಶಾವತಾರ, ತ್ರಿಜನ್ಮ ಮೋಕ್ಷ, ತುಲಸೀ ಜಲಂಧರ, ಗಾಯತ್ರೀ ಮಹಾತ್ಮೆ, ಗರುಡೋದ್ಭವ ಮುಂತಾದ ಪೂರ್ಣ ಪ್ರದರ್ಶನಗಳಲ್ಲದೆ, ಒಂದೇ ದಿನ ಹಲವು ಪ್ರಸಂಗಗಳನ್ನು ಕೂಡ ಸೇವಾಕರ್ತರ ಅಭಿಲಾಷೆ ಮೇರೆಗೆ ಪ್ರದರ್ಶಿಸಲಾಗಿದೆ. ಕರ್ಣಾರ್ಜುನ, ಗರುಡೋದ್ಭವ, ಗದಾಯುದ್ಧ, ಮೀನಾಕ್ಷೀ ಕಲ್ಯಾಣ, ಶ್ರೀನಿವಾಸ ಕಲ್ಯಾಣ, ದ್ರೌಪದೀ ಪ್ರತಾಪ, ಕೃಷ್ಣಲೀಲೆ - ಕಂಸವಧೆ, ರಕ್ತರಾತ್ರಿ, ಚಕ್ರವ್ಯೂಹ, ದಕ್ಷಾಧ್ವರ, ಗಿರಿಜಾ ಕಲ್ಯಾಣ, ಸುದರ್ಶನೋಪಾಖ್ಯಾನ, ಶ್ರೀಕೃಷ್ಣ ಪಾರಿಜಾತ, ಭಸ್ಮಾಸುರ ಮೋಹಿನಿ, ನರಕಾಸುರ ವಧೆ, ಅಗ್ರಪೂಜೆ, ಗಜೇಂದ್ರ ಮೋಕ್ಷ, ಪುರುಷಾಮೃಗ, ಅಂಧಕ ಮೋಕ್ಷ, ಭೂಕೈಲಾಸ, ವಾಲಿ ಸುಗ್ರೀವ ಕಾಳಗ, ಗರುಡ ಗರ್ವಭಂಗ, ರತಿ ಕಲ್ಯಾಣ, ಶಶಿಪ್ರಭಾ ಪರಿಣಯ, ಸ್ವಯಂಪ್ರಭಾ ಪರಿಣಯ, ಕಾರ್ತವೀರ್ಯಾರ್ಜುನ, ಕೃಷ್ಣಾರ್ಜುನ ಕಾಳಗ, ಭೀಷ್ಮವಿಜಯ - ಹೀಗೆ ವೈವಿಧ್ಯಮಯ ಪ್ರಸಂಗಗಳನ್ನು ಕಟೀಲು ಮೇಳದ ಕಲಾವಿದರು ಮನಮುಟ್ಟುವಂತೆ ಅಭಿನಯಿಸಿ ತೋರಿಸಿದ್ದಾರೆ ಮತ್ತು ಜನರಿಂದ ಶಹಬ್ಬಾಸ್ ಗಿಟ್ಟಿಸಿಕೊಂಡಿದ್ದಾರೆ.

ಈ ರೀತಿ ಹೊಸ ಪ್ರಸಂಗಗಳ ಪ್ರದರ್ಶನವು ಕಲಾವಿದರ ಕಲಾಸಾಮರ್ಥ್ಯವನ್ನು ಹೊರಗೆಡಹಲು ಸೂಕ್ತ ವೇದಿಕೆಯಾಗುತ್ತದೆ. ದೇವೀ ಮಾಹಾತ್ಮ್ಯೆಯಲ್ಲಿ ನಿರ್ದಿಷ್ಟ ಪಾತ್ರವನ್ನಷ್ಟೇ ಮಾಡಬೇಕಾಗಿದ್ದವರಿಗೆ ಹೊಸ ಪ್ರಸಂಗಗಳಲ್ಲಿ ತಮ್ಮ ಅಭಿನಯ ಚಾತುರ್ಯವನ್ನು ಹೊರಗೆಡಹಲು, ಮತ್ತಷ್ಟು ಬೆಳೆಯಲು, ತಮ್ಮೊಳಗಿನ ಕಲಾನೈಪುಣ್ಯವನ್ನು ಒರೆಗೆ ಹಚ್ಚಲು ಅನುಕೂಲ ಮಾಡಿಕೊಡುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು