ಅಮರಾವತಿಯ ಅಮರ ಚರಿತೆ: ಆನೆಯ ಮೇಲೇರಿ ಬಂದ ದೇವೇಂದ್ರ, ಯಕ್ಷಗಾನ ಕಲಾವಿದರ ಭರ್ಜರಿ ಆಟ


ಕುಂದಾಪುರ:
ವಾಣಿಜ್ಯಾತ್ಮಕವಾಗಿ ಯಕ್ಷಗಾನ ಪ್ರದರ್ಶನ ನೀಡುವ ಟೆಂಟು ಮೇಳಗಳು ಕಲೆಕ್ಷನ್ ಸಮಸ್ಯೆ ಎದುರಿಸುತ್ತಿರುವ ಹಂತದಲ್ಲೇ ಕೋವಿಡ್ ವಕ್ಕರಿಸಿ ಸಮಸ್ಯೆ ಬಿಗಡಾಯಿಸಿತ್ತು. ಇದೀಗ ಕೋವಿಡ್ ಇಳಿಮುಖವಾದ ತಕ್ಷಣ ಯಕ್ಷಗಾನ ಪ್ರದರ್ಶನಗಳು ಏರುಗತಿ ಕಾಣುತ್ತಿವೆ. ಈ ಹಂತದಲ್ಲಿ, ಕುಂದಾಪುರ ನೆಹರೂ ಮೈದಾನದಲ್ಲಿ ಮಾ.5ರ ಶನಿವಾರ ನಡೆದ 'ಅಮರಾವತಿಯ ಅಮರ ಚರಿತೆ' ಯಕ್ಷಗಾನ ಪ್ರದರ್ಶನವು ಹಲವು ವಿಶೇಷಗಳಿಗೆ ಸಾಕ್ಷಿಯಾಯಿತು ಮತ್ತು ಇತಿಹಾಸ ಮರುಕಳಿಸುವಂತೆ ಮಾಡಿತು.

ಬಡಗಿನ ಸಾಲಿಗ್ರಾಮ ಮೇಳ, ತೆಂಕಿನ ಪಾವಂಜೆ ಮೇಳ ಹಾಗೂ ಎರಡೂ ತಿಟ್ಟಿನ ಸುಪ್ರಸಿದ್ಧ ಮಹಿಳಾ ಕಲಾವಿದರನ್ನೊಳಗೊಂಡು ಯಕ್ಷಗಾನ ಪ್ರದರ್ಶನಗೊಂಡಿದ್ದು, ಅಮರಾವತಿಯ ಅಮರ ಚರಿತೆ ಕಥಾಗುಚ್ಛದಲ್ಲಿ, ಐರಾವತದ ಮೇಲೇರಿ ದೇವೇಂದ್ರನ ಆಗಮನವೇ ಸಾಕಷ್ಟು ವೈರಲ್ ಆಯಿತು. ಸಮುದ್ರ ಮಥನ ಪ್ರಸಂಗದಲ್ಲಿ ಹಿಂದೆ ಸಾಕಷ್ಟು ಬಾರಿ ಮಾಡಿರುವಂತೆಯೇ, ದೊಡ್ಡ ಗಾತ್ರದ ಹಾವಿನ ಪ್ರತಿಕೃತಿ, ಮಂದರ ಪರ್ವತ - ಇವೆಲ್ಲವನ್ನೂ ಬಳಸಲಾಗಿತ್ತು. ಮುಮ್ಮೇಳ ಕಲಾವಿದರಿಂದ ಗಿರಕಿಗಳು, ಸುತ್ತುಗಳು ಮತ್ತು ಧಿಗಿಣಗಳು ಜೊತೆಗೆ ನರ್ತನ ವೈವಿಧ್ಯವು ಸಾಕಷ್ಟು ಸದ್ದು ಮಾಡಿದರೆ, ಹಿಮ್ಮೇಳದಲ್ಲಿ ಚೆಂಡೆ-ಮದ್ದಳೆಗಳ ಝೇಂಕಾರ ಕೂಡ ಜನರ ಮನಸ್ಸು ಸೆಳೆಯಿತು.

ಯಕ್ಷಗಾನ.ಇನ್ ಅಪ್‌ಡೇಟ್ಸ್ ಪಡೆಯಲು ವಾಟ್ಸ್ಆ್ಯಪ್ ಗ್ರೂಪ್ 5 ಸೇರಿಕೊಳ್ಳಿ ಅಥವಾ ಟೆಲಿಗ್ರಾಂನಲ್ಲಿ ಸೇರಿಕೊಳ್ಳಿ. ಫೇಸ್‌ಬುಕ್ | ಟ್ವಿಟರ್ | ಯೂಟ್ಯೂಬ್ ಇನ್‌ಸ್ಟಾಗ್ರಾಂ ಫಾಲೋ ಮಾಡಿ.

ಐದಾರು ದಶಕಗಳ ಹಿಂದಿನಿಂದಲೇ ದೇವೇಂದ್ರನು ತನ್ನ ವಾಹನವಾದ ಐರಾವತವನ್ನೇರಿ ಬರುವ ಕಥಾನಕ ಇರುವ ಪ್ರಸಂಗಗಳಲ್ಲಿ ನಿಜವಾದ ಆನೆಯನ್ನೇ ಬಳಸಲಾಗುತ್ತಿತ್ತು. ಅಂತೆಯೇ 70-80ರ ದಶಕದಲ್ಲಿ ಕಟೀಲು ಕ್ಷೇತ್ರದ ನಾಗರಾಜ ಹೆಸರಿನ ಆನೆ, ಉಜಿರೆಯ ಕೃಷ್ಣ ಹೆಸರಿನ ಆನೆಗಳೆಲ್ಲವೂ ಕಟೀಲು, ಮಂಗಳೂರು ಮುಂತಾದೆಡೆ ಸಮುದ್ರ ಮಥನ ಪ್ರಸಂಗದಲ್ಲಿ ಭಾಗವಹಿಸಿವೆ. ದೇವೇಂದ್ರ ಪಾತ್ರಧಾರಿಯು ಇದರ ಮೇಲೇರಿ ಬರುವುದನ್ನು ನೋಡುವುದೇ ಸೊಗಸು. ಕುಮಟಾದಲ್ಲಿ ಪೆರ್ಡೂರು ಮೇಳದ ಆಟದಲ್ಲಿಯೂ ಆನೆ ಬಂದಿತ್ತು. 2013ರಲ್ಲಿ ಉಡುಪಿಯ ರಾಜಾಂಗಣದಲ್ಲಿ ನಡೆದ ಬಡಗು ತಿಟ್ಟು ಯಕ್ಷಗಾನ "ಅಮೃತೋದ್ಭವ" (ಸಮುದ್ರ ಮಥನ) ಪ್ರಸಂಗದಲ್ಲಿ ಉಡುಪಿ ಮಠದ ಆನೆ ಸುಭದ್ರೆಯನ್ನು ಬಳಸಲಾಗಿತ್ತು. ಇದೀಗ ಕುಂದಾಪುರದಲ್ಲಿ ಶನಿವಾರ ಕಾರ್ಯಕ್ರಮದಲ್ಲಿ ಹರಿಹರ ಮಠದ ಆನೆಯನ್ನು ಬಳಸಲಾಗಿದ್ದು, ದಿನೇಶ್ ಶೆಟ್ಟಿ ಕಾವಳಕಟ್ಟೆ ಅವರು ದೇವೇಂದ್ರನಾಗಿ ಆನೆಯ ಮೇಲೇರಿ ಬಂದು ಇತಿಹಾಸ ಮರುಕಳಿಸುವುದಕ್ಕೆ ಸಾಕ್ಷಿಯಾದರು.
ಸುಂದೋಪಸುಂದ ಕಾಳಗದ ದೃಶ್ಯ

ನೆರೆದ ಪ್ರೇಕ್ಷಕರು

ನಿಹಾರಿಕಾ ಭಟ್ - ತಿಲೋತ್ತಮೆ

ಜೋಗತಿ ಮಂಜಮ್ಮ ಅವರಿಗೆ ಗೌರವ

ಗಜರಾಜನಿಂದಲೇ ಹಾರಾರ್ಪಣೆ

ಇಂದ್ರ ಲೋಕದಿಂದ ಗಜ ಗೌರಿ ವ್ರತಕ್ಕೆ ಆಗಮಿಸುತ್ತಿರುವ ಐರಾವತ
ಪಾಂಡವರು
ಅದ್ಭುತ ಚಿತ್ರಗಳನ್ನು ಸೆರೆಹಿಡಿದವರು (ಚಿತ್ರಕೃಪೆ): ಪ್ರಶಾಂತ್ ಮಲ್ಯಾಡಿ, ರಾಹುಲ್ ಆಂಚನ್, ಪ್ರದೀಪ್ ಕುಂದಾಪುರ, ಸುಶೀರ್ ಪೂಜಾರಿ.

ಅಮರಾವತಿಯ ಅಮರ ಚರಿತೆ ಯಕ್ಷಗಾನಕ್ಕೆ ಟಿಕೆಟ್ ಖರೀದಿಸಿ ಬಂದವರೂ ಸೇರಿದಂತೆ ಸುಮಾರು 5000ಕ್ಕೂ ಮಂದಿ ಸಾಕ್ಷಿಯಾದರು. ಇದೊಂದು ಐತಿಹಾಸಿಕ ದಾಖಲೆಯೂ ಆಯಿತು. ಅಮರಾವತಿ (ದೇವೇಂದ್ರನ ಸ್ವರ್ಗಲೋಕ) ಅದ್ದೂರಿ ರಂಗ ಸಜ್ಜಿಕೆ ರೂಪಿಸಲಾಗಿದ್ದರೆ, ಗೌರವ ಪ್ರವೇಶದ ಬದಲು ಇಂದ್ರ ಸಭೆ, ಫಸ್ಟ್ ಕ್ಲಾಸ್ ಬದಲು ಗಂಧರ್ವ ಸಭೆ ಹಾಗೂ ಸೆಕೆಂಡ್ ಕ್ಲಾಸ್ ಬದಲಾಗಿ ಕಿನ್ನರ ಸಭೆ ಎಂದು ಹೆಸರಿಟ್ಟು ಟಿಕೆಟ್ ವಿತರಿಸಲಾಗಿತ್ತು.

ಮೂರು ತಂಡಗಳಿಂದ ಮೂರು ಪ್ರಸಂಗಗಳು
ಇರುಳ ವಿರುದ್ಧ ಬೆಳಕಿನ ಯುದ್ಧದ ಕತೆ ಎಂಬ ಅಡಿಬರಹದಲ್ಲಿ ಉಭಯ ಮೇಳಗಳ ಪ್ರಸಿದ್ಧ ಕಲಾವಿದರು ಮತ್ತು ಮಹಿಳಾ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಜರುಗಿದ ಯಕ್ಷಗಾನವು ಪ್ರೇಕ್ಷಕ ಸಂದೋಹದ ಜನಮನ ಗೆದ್ದಿತು. ಅಮರಾವತಿಯ ಅಮರ ಚರಿತೆ ಶೀರ್ಷಿಕೆಯಲ್ಲಿ ಒಟ್ಟು ಮೂರು ಪ್ರಸಂಗಗಳನ್ನು ಆಡಿ ತೋರಿಸಲಾಯಿತು. ತೆಂಕು-ಬಡಗಿನ ದಿಗ್ಗಜ ಅತಿಥಿ ಕಲಾವಿದರಿಂದ ಸುಂದೋಪಸುಂದ, ಬಡಗಿನ ಸಾಲಿಗ್ರಾಮ ಮೇಳದಿಂದ ಐರಾವತ (ಗಜ ಗೌರಿ ವ್ರತ) ಹಾಗೂ ತೆಂಕಿನಲ್ಲಿ ಪಟ್ಲ ಸತೀಶ್ ಶೆಟ್ಟರ ಪಾವಂಜೆ ಮೇಳದಿಂದ ಸಮುದ್ರ ಮಥನ ಪ್ರಸಂಗವು ಭರ್ಜರಿಯಾಗಿ ಪ್ರದರ್ಶನಗೊಂಡಿತು. ಆಟದಲ್ಲಿ ಆನೆಯು ಐರಾವತ ಪ್ರಸಂಗ ಹಾಗೂ ಸಮುದ್ರ ಮಥನ ಪ್ರಸಂಗದಲ್ಲಿ ಕಾಣಿಸಿಕೊಂಡಿತು.

ರಂಜಿಸಿದ ಅತಿಥಿ ಕಲಾವಿದರು
ಮೇಳದವರಲ್ಲದೆ, ಅತಿಥಿ ಕಲಾವಿದರಾಗಿ ತೆಂಕಿನಲ್ಲಿ ಅಮೃತಾ ಕೌಶಿಕ್ ರಾವ್ (ಭಾಗವತಿಕೆ), ಕೃಷ್ಣಪ್ರಕಾಶ್ ಉಳಿತ್ತಾಯ (ಮದ್ದಳೆ), ರೋಹಿತ್ ಉಚ್ಚಿಲ್ (ಚೆಂಡೆ), ಬಡಗಿನಲ್ಲಿ ಜನ್ಸಾಲೆ ರಾಘವೇಂದ್ರ ಆಚಾರ್ಯ (ಭಾಗವತಿಕೆ), ರಾಕೇಶ್ ಮಲ್ಯ (ಚೆಂಡೆ) ಹಾಗೂ ಅರವಿಂದ ಹೆಗಡೆ (ಮದ್ದಳೆ) ಭಾಗವಹಿಸಿ, ಸುಂದೋಪಸುಂದ ಪ್ರಸಂಗವನ್ನು ಪ್ರಸ್ತುತಪಡಿಸಿದರು.

ಮುಮ್ಮೇಳದಲ್ಲಿ ಪ್ರಸಿದ್ಧ ಮಹಿಳಾ ಕಲಾವಿದರಾದ ನಾಗಶ್ರೀ ಜಿ.ಎಸ್. (ಸುಂದ), ರಂಜಿತಾ ಎಲ್ಲೂರ್ (ಉಪಸುಂದ), ನಿಹಾರಿಕಾ ಭಟ್ (ತಿಲೋತ್ತಮೆ), ಸಾಯಿಸುಮಾ ನಾವಡ (ದೇವೇಂದ್ರ), ಛಾಯಾಲಕ್ಷ್ಮಿ (ವಿಷ್ಣು) ಹಾಗೂ ಮಾನಸಾ ಉಪಾಧ್ಯ (ವರುಣ) ಅವರು ಒಟ್ಟಂದದ ಪ್ರದರ್ಶನ ನೀಡಿದರು.

ಕಾರ್ಯಕ್ರಮಕ್ಕೆ ಮುನ್ನ ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿ, ಹಿರಿಯ ಕಲಾವಿದರಾದ ಬಳ್ಕೂರು ಕೃಷ್ಣ ಯಾಜಿ, ಉಜಿರೆ ನಾರಾಯಣ, ಜನ್ಸಾಲೆ ರಾಘವೇಂದ್ರ ಆಚಾರ್ಯ, ಜಾಗತಿಕ ಬಂಟರ ಸಂಘದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಉಡುಪಿ ಉದ್ಯಮಿ ಡಾ.ಅಶೋಕ್ ಶೆಟ್ಟಿ ಬೆಳ್ಳಾಡಿ ಅವರನ್ನು ಗೌರವಿಸಲಾಯಿತು. ಅತಿಥಿಗಳಿಗೆ ಆನೆಯ ಮೂಲಕವೇ ಹಾರಾರ್ಪಣೆ ಮಾಡಿ ವಿಶೇಷವಾಗಿ ಗೌರವಿಸಲಾಯಿತು.

ಬಾಗಲಕೋಟೆಯ ಹೋಟೆಲ್ ಉದ್ಯಮಿ, ಯಕ್ಷಗಾನ ಪ್ರೇಮಿ ಮಂಜುನಾಥ ಪೂಜಾರಿ ಬೆಳ್ಳಾಡಿ ಅವರ ಕನಸಿನ ಕೂಸು ಈ ಯಕ್ಷಗಾನ. ಅವರ ಸಂಯೋಜನೆಯಲ್ಲಿ ಟಿಕೆಟ್ ಕಲೆಕ್ಷನ್ ಹಾಗೂ ದಾನಿಗಳ ನೆರವಿನೊಂದಿಗೆ ಅದ್ಧೂರಿಯಾಗಿ ನಡೆದ ಈ ಯಕ್ಷಗಾನ ಕಾರ್ಯಕ್ರಮವು ಹೊಸ ಸಾಧ್ಯತೆಗೆ ನಾಂದಿ ಹಾಡಿದ್ದರೆ, ಆನೆಯನ್ನು ತರಿಸಿರುವುದರ ಕುರಿತು ಸಾಮಾಜಿಕ ತಾಣಗಳಲ್ಲಿ ಪರ-ವಿರೋಧ ಚರ್ಚೆಗಳೂ ಸಾಕಷ್ಟು ಹುಟ್ಟಿಕೊಂಡಿವೆ. ಆದರೆ, ಅದ್ಧೂರಿಯ ಆಟದ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು