ಅಗರಿ ಶ್ರೀನಿವಾಸ ಭಾಗವತರ ಸ್ಮೃತಿ ಗೌರವ ಗ್ರಂಥ ಯಕ್ಷ ಬ್ರಹ್ಮ ಕೃತಿ ಹೇಗಿದೆ?


ಯಕ್ಷಗಾನದ ಗರಿ ಅಗರಿ ಎಂಬ ಮಾತಿದೆ. ಅಂಥ ಅಗ್ರಮಾನ್ಯ ಕಲಾವಿದರ ಸ್ಮೃತಿ ಗೌರವ ಗ್ರಂಥ 'ಯಕ್ಷ ಬ್ರಹ್ಮ' ಇತ್ತೀಚೆಗೆ ಬಿಡುಗಡೆಯಾಗಿದ್ದು ಉಜಿರೆ ಅಶೋಕ ಭಟ್ಟರ ಸಂಪಾದಕತ್ವದಲ್ಲಿ ಮತ್ತು ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನದ ಮೂಲಕ. ಅದರಲ್ಲೇನಿದೆ ಅಂಥದ್ದು? ವಿವರಿಸಿದ್ದಾರೆ ಕುಮಾರ ಸುಬ್ರಹ್ಮಣ್ಯ ಮುಳಿಯಾಲ ಅವರು.
ಕಲಾ ಪ್ರಕಾರವೊಂದರ ಮೂಲ ಸ್ವರೂಪವನ್ನುಳಿಸಿಕೊಂಡು ಅದರಲ್ಲಿ ವೈವಿಧ್ಯತೆಯನ್ನು ಅಳವಡಿಸಿ ತನ್ನದೇ ದಾರಿಯನ್ನು, ನಡೆಯನ್ನು ನಿರ್ಮಿಸಿ, 'ಅಗರಿ ಮಟ್ಟು' ಎಂದು ಸ್ಥಾಪಿಸಿದ ಅಗರಿ ಶ್ರೀನಿವಾಸ ಭಾಗವತರ ಸ್ಮೃತಿ ಗೌರವ ಗ್ರಂಥ "ಯಕ್ಷ ಬ್ರಹ್ಮ". ಉಜಿರೆ ಅಶೋಕ ಭಟ್ಟರ ಸಂಪಾದಕತ್ವದಲ್ಲಿ ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನ ಇದನ್ನು ಪ್ರಕಟಿಸಿದೆ. ಪ್ರತಿಯೊಬ್ಬ ಯಕ್ಷಾಸಕ್ತರ ಮನೆಯಲ್ಲಿರಬೇಕಾದ ಪುಸ್ತಕ ಇದಾಗಿದೆ.

ಯಕ್ಷಗಾನ.ಇನ್ ಅಪ್‌ಡೇಟ್ಸ್ ಪಡೆಯಲು ವಾಟ್ಸ್ಆ್ಯಪ್ ಗ್ರೂಪ್ 5 ಸೇರಿಕೊಳ್ಳಿ ಅಥವಾ ಟೆಲಿಗ್ರಾಂನಲ್ಲಿ ಸೇರಿಕೊಳ್ಳಿ. ಫೇಸ್‌ಬುಕ್ | ಟ್ವಿಟರ್ | ಯೂಟ್ಯೂಬ್ ಇನ್‌ಸ್ಟಾಗ್ರಾಂ ಫಾಲೋ ಮಾಡಿ.

"ನನ್ನ ಸೃಜನಶೀಲ ಚಿಂತನೆಗಳಿಗೆ ಇಂಬುಕೊಟ್ಟು ಹಾಡಿ, ನೃತ್ಯಾಭಿನಯ, ಹಾವ-ಭಾವ- ರಸ ಪ್ರತಿಪಾದನೆಗಳಿಗೆ ಅಗರಿಯವರ ಬಾಗವತಿಕೆಯೂ, ನೆಡ್ಲೆಯವರ ಹಿಮ್ಮೇಳವೂ ಇಲ್ಲದಿರುತ್ತಿದ್ದರೆ ನಾನು ಇಷ್ಟೆಲ್ಲಾ ಸಾಧಿಸಲು ಸಾಧ್ಯವಾಗುತ್ತಿರಲಿಲ್ಲ" - ಕುರಿಯ ವಿಠಲ ಶಾಸ್ತ್ರಿ.

"ಅಗರಿಯವರ ಒಡನಾಟ ನನ್ನ ಕಲಾ ವ್ಯವಸಾಯದಲ್ಲಿ ಹೊಸ ಆಯಾಮವೂ ಸೃಷ್ಟಿಯಾಗುವುದಕ್ಕೆ ಆಸರೆಯಾಯಿತು. ತಿರುಪತಿ ಕ್ಷೇತ್ರ ಮಹಾತ್ಮೆಯ ಮಾಧವ ಭಟ್ಟ ಮತ್ತು ಬಪ್ಪನಾಡು ಕ್ಷೇತ್ರ ಮಹಾತ್ಮೆಯ ಬಪ್ಪ ಬ್ಯಾರಿಯ ಪಾತ್ರಗಳು ಸೃಷ್ಟಿಸಿದ ಸಂಚಲನ ಅಪೂರ್ವವಾದದ್ದು" - ಶೇಣಿ ಗೋಪಾಲ ಕೃಷ್ಣ ಭಟ್ಟ.

"ಭಾಗವತ ಸ್ಥಾನದಲ್ಲಿ ಕುಳಿತವನಿಗೆ ಹಿಮ್ಮೇಳ, ಮುಮ್ಮೇಳ, ಪ್ರಸಂಗ -ಪಾತ್ರ ಹೀಗೆ ರಂಗದ ಸಮಗ್ರ ತಿಳಿವಳಿಕೆ ಇರಬೇಕು. ಅಗರಿಯವರು ನಿಜಾರ್ಥದಲ್ಲಿ ಭಾಗವತೋತ್ತಮರು" -ಕೆರೆಮನೆ ಶಂಭು ಹೆಗಡೆ.

ಯಕ್ಷಗಾನವು ದೃಶ್ಯ -ಕಾವ್ಯವಾಗಿರುವುದೇ ಅದರ ಮಹತ್ವ. ಓದಿ ಕೇಳಿ ತಿಳಿಯುವಾಗ ಆಗುವ ಪರಿಣಾಮಕ್ಕಿಂತ ರಂಗದ ಮೇಲೆ ನೋಡಿದಾಗ ಉಂಟಾಗುವ ಮಾನಸಿಕ ಪರಿಣಾಮ ಹೆಚ್ಚು ಗಾಢವಾದುದು"- ಅಗರಿ ಶ್ರೀನಿವಾಸ ಭಾಗವತ.

ಕೃತಿಗಳಲ್ಲಿ ಸೂಚಿಸಿದ ರಾಗಗಳಿಂದ, ರಸಪುಷ್ಟಿಗಳಿಗೆ ಬೇಕಾದ ರಾಗಗಳಿಗೆ ಹೊಂದಿಸಿಕೊಂಡು ಶ್ರೋತೃ ವೃಂದಕ್ಕೆ ಅರ್ಥವಾಗುವಂತೆಯೂ, ತಾಳ ಲಯಗಳು ಕೆಡದಂತೆಯೂ ಹಾಡಬೇಕಾದರೆ ಎಷ್ಟು ಪರಿಶ್ರಮ ಬೇಕೆಂಬುದನ್ನು ಆ ಕಲೆಯಲ್ಲಿ ವ್ಯವಸಾಯ ಮಾಡಿದವನು ಮಾತ್ರ ತಿಳಿದುಕೊಳ್ಳಲು ಸಾಧ್ಯ. -ಅಗರಿ ಶ್ರೀನಿವಾಸ ಭಾಗವತ.

ಗ್ರಂಥದಲ್ಲಿರುವ ಮೇಲಿನ ಉಲ್ಲೇಖಗಳು ಮನಸ್ಸನ್ನು ಅವರಿಸಿಕೊಳ್ಳುತ್ತವೆ ಮತ್ತು ಅಗರಿಯವರ ಚಿತ್ರಣವನ್ನು ಕಟ್ಟಿಕೊಡುತ್ತವೆ. ಇಂತಹ ಇನ್ನಷ್ಟು ಉಲ್ಲೇಖಗಳು, ಅನುಭವಗಳು ಗ್ರಂಥದಲ್ಲಿ ನಮೂದಿಸಲ್ಪಟ್ಟಿವೆ.

ಯಾರೆಲ್ಲ ಯಕ್ಷಗಾನದ ದಂತಕಥೆಗಳೆಂದು ಹೇಳುತ್ತೇವೆಯೋ ಅವರೆಲ್ಲರ ಲೇಖನವೂ ಈ ಗ್ರಂಥದಲ್ಲಿದೆ. ಅಗರಿಯವರ ಒಡನಾಟದ ಎಲ್ಲರ ಪ್ರಾಮಾಣಿಕ ಅನುಭವಗಳು ಇದರಲ್ಲಿ ದಾಖಲಾಗಿದೆ. ಅಗರಿಯವರ ನಿಷ್ಠೆ, ಬದ್ಧತೆ, ಆಶುಕವಿತ್ವ, ನಿಷ್ಠುರತೆ, ಹಾಸ್ಯ ಪ್ರಜ್ಞೆ, ಇತ್ಯಾದಿ ಎಲ್ಲ ಘಟನೆಗಳನ್ನು ಬೇರೆ ಬೇರೆ ಲೇಖಕರು ನಿರೂಪಿಸಿದ್ದಾರೆ. ಈ ಪುಸ್ತಕದಲ್ಲಿ ಅಗರಿಯವರ ಬಗ್ಗೆ 55 ಲೇಖನಗಳಿವೆ ಮತ್ತು ಕೆ.ವಿ.ಮುಚ್ಚಿನ್ನಾಯರ ಬಗ್ಗೆ 6 ಲೇಖನಗಳಿವೆ.

ಎರಡು ಕಾರಣಗಳಿಗೆ ಈ ಗ್ರಂಥ ಆಪ್ತವಾಗುತ್ತದೆ. ಮೊದಲನೆಯದಾಗಿ ಅಗರಿಯವರ ಬಗ್ಗೆ ಇದು ಒಂದು ದಾಖಲಾತಿ ಇದ್ದಂತೆ. ಎರಡನೆಯದಾಗಿ ಬಹಳಷ್ಟು ಯಕ್ಷಗಾನದ ಹಿರಿಯರ ಲೇಖನವೂ ಇಲ್ಲಿ ದಾಖಲಾಗಿದೆ.

ಇಲ್ಲಿಯ ಲೇಖನಗಳಲ್ಲಿ ಲೇಖಕರು ಬೇರೆ ಬೇರೆಯಾದರೂ ಪ್ರತಿ ಲೇಖನವೂ ಪರಸ್ಪರ ಮುಂದುವರಿಕೆಯಂತಿದೆ, ಆದರೆ ಪುನರಾವರ್ತನೆಗಳಿಲ್ಲ. ಎಲ್ಲರೂ ಅಗರಿಯವರನ್ನು ಮೆಚ್ಚಿಕೊಂಡಿದ್ದಾರೆ, ಅವರ ನಿಷ್ಠುರತೆಯನ್ನು ಸಹಿಸಿಕೊಂಡಿದ್ದಾರೆ, ಅವರ ಪ್ರೀತಿಯನ್ನು ಅಪ್ಪಿಕೊಂಡಿದ್ದಾರೆ.

ಕೃಷ್ಣಪ್ರಕಾಶ ಉಳಿತ್ತಾಯರ ಅಧ್ಯಯನಶೀಲ ಲೇಖನ ಆಸಕ್ತಿಯನ್ನು ಹೆಚ್ಚಿಸುತ್ತದೆ. ಡಾ.ಪ್ರಭಾಕರ ಜೋಶಿಯವರು ಅಗರಿಯವರ ವಿವರವಾದ ಮಾಹಿತಿ ಕೊಟ್ಟಿದ್ದಾರೆ. ಶೇಣಿ, ಸಾಮಗರ ಲೇಖನಗಳು ಅಗರಿಯವರ ಹೆಚ್ಚುಗಾರಿಕೆಯನ್ನು ತಿಳಿಸುತ್ತವೆ. ಕೆರೆಮನೆ ಶಿವರಾಮ ಹೆಗಡೆ, ಮಹಾಬಲ ಹೆಗಡೆ ಇವರ ಲೇಖನಗಳು ಅಗರಿಯವರ ವ್ಯಾಪ್ತಿ ಮತ್ತು ವಿಸ್ತಾರವನ್ನು ಗಮನಕ್ಕೆ ತರುತ್ತವೆ. ಕುರಿಯದವರು ಅಗರಿಯವರ ಸ್ವಾರಸ್ಯಕರ ಸನ್ನಿವೇಶವನ್ನು ತೆರೆದಿಡುತ್ತಾರೆ. ಮುದ್ರಾಡಿಯವರು ಅಗರಿಯವರ ಪದ್ಯದ ಬಗ್ಗೆ ಮಾಹಿತಿಯಿತ್ತಿದ್ದಾರೆ. ರಾಘವ ನಂಬಿಯಾರ್, ಬಲಿಪ ನಾರಾಯಣ ಭಾಗವತರು, ತಾಳ್ತಜೆ ಕೃಷ್ಣ ಭಟ್ಟರು, ವಿದ್ವಾನ್ ಪೆರ್ಲ ಕೃಷ್ಣ ಭಟ್ಟರು, ಮೂಡಂಬೈಲ್ ಗೋಪಾಲಕೃಷ್ಣ ಶಾಸ್ತ್ರಿ,  ರಮಾನಂದ ಬನಾರಿ, ದಾಮೋದರ ಮಂಡೆಚ್ಚರು, ಹಿರಿಯಡ್ಕ ಗೋಪಾಲ ರಾವ್ ಮೊದಲಾದ ಅಗ್ರಗಣ್ಯರ ಲೇಖನಗಳಿವೆ. ಸೇರಾಜೆಯವರು ಕುರಿಯ ಮತ್ತು ಅಗರಿಯವರ ಬಾಂಧವ್ಯದ ಬಗ್ಗೆ ಹೇಳಿದ್ದಾರೆ. ಹೀಗೆ ಯಕ್ಷಗಾನ ಕ್ಷೇತ್ರದ ಅಗ್ರಮಾನ್ಯರೆಲ್ಲಾ ಅಗರಿಯವರ ವ್ಯಕ್ತಿತ್ವದ ಪೂರ್ಣ ಪರಿಚಯ ಮಾಡಿಕೊಟ್ಟಿದ್ದಾರೆ.

ಇದರ ಜೊತೆಗೇ, ದಕ್ಷಿಣೋತ್ತರ ಕನ್ನಡ ಜಿಲ್ಲೆಯ ಅಗ್ರಮಾನ್ಯ ಸಂಘಟಕ ಕೆ.ವಿ.ಮುಚ್ಚಿನ್ನಾಯರ ಬಗೆಗಿನ ಲೇಖನಗಳು ಇರುವುದು ಪುಸ್ತಕದ ಮೌಲ್ಯವನ್ನು ಹೆಚ್ಚಿಸಿದೆ. ಮುಚ್ಚಿನ್ನಾಯರಿಗಿರುವ ಕಲೆಯ ಬಗ್ಗೆ ಮತ್ತು ಕಲಾವಿದರ ಜೊತೆಗಿನ ಉತ್ಕಟ ಪ್ರೀತಿಯ ಬಗ್ಗೆ ಪ್ರಭಾಕರ ಜೋಶಿಯವರು ಬರೆದಿದ್ದಾರೆ. ಉಳಿದಂತೆ ಮೂಡಂಬೈಲು ಶಾಸ್ತ್ರಿಗಳು, ಪ.ರಾಮಕೃಷ್ಣ ಶಾಸ್ತ್ರಿಗಳು, ಮಧುಕರ ಮಲ್ಯರು, ಕುಕ್ಕುವಳ್ಳಿಯವರು ಮುಚ್ಚಿನ್ನಾಯರ ಬಗ್ಗೆ ಆಸಕ್ತಿಯುತವಾಗಿ ಬರೆದಿದ್ದಾರೆ. ಅಶೋಕ ಭಟ್ಟರು ತಮ್ಮ ಮತ್ತು ಮುಚ್ಚಿನ್ನಾಯರ ಆಪ್ತತೆಯ ಬಗ್ಗೆ ಒಡನಾಟದ ಬಗ್ಗೆ ಪ್ರಾಮಾಣಿಕ ಅನಿಸಿಕೆಯನ್ನು ದಾಖಲಿಸಿದ್ದಾರೆ.

ಅಗರಿ ಮತ್ತು ಮುಚ್ಚಿನ್ನಾಯರು ಯಕ್ಷಗಾನ ಕ್ಷೇತ್ರದ ಎರಡು ಮೇರು ವ್ಯಕ್ತಿತ್ವಗಳು. ಇವರಿಬ್ಬರ ಬಗ್ಗೆ ದಾಖಲಾತಿಯೊಂದು ಆದುದಕ್ಕೆ ಯಕ್ಷಗಾನ ರಂಗಭೂಮಿ ಋಣಿಯಾಗಿರಬೇಕು. ಹೀಗೆ ಯಕ್ಷಗಾನ ಕ್ಷೇತ್ರದ ಅಗ್ರಮಾನ್ಯರೆಲ್ಲಾ ಅಗರಿಯವರ ವ್ಯಕ್ತಿತ್ವದ ಪೂರ್ಣ ಪರಿಚಯ ಮಾಡಿಕೊಟ್ಟಿದ್ದಾರೆ.

ಅತ್ಯಂತ ಸಂಗ್ರಹಯೋಗ್ಯ ಪುಸ್ತಕವನ್ನು ಲಭ್ಯವಾಗಿಸಿದ ಕುರಿಯ ಪ್ರತಿಷ್ಠಾನದ ಸಂಚಾಲಕ ಮತ್ತು ಸಂಪಾದಕರಾದ, ಯಕ್ಷಗಾನದ ಅರ್ಥದಾರಿ, ಪ್ರವಚನಕಾರ, ಉತ್ತಮ ಸಂಘಟಕ ಮತ್ತು ಸದಾ ಉತ್ಸಾಹಿಯಾದ ಉಜಿರೆ ಅಶೋಕ ಭಟ್ಟರನ್ನು ಅಭಿನ೦ದಿಸುತ್ತೇನೆ.

 ಹೆಚ್ಚಿನ ಮಾಹಿತಿ ಮತ್ತು ಪುಸ್ತಕಕ್ಕಾಗಿ ಉಜಿರೆ ಅಶೋಕ ಭಟ್ಟರನ್ನು 94492 55666 ರಲ್ಲಿ ಸಂಪರ್ಕಿಸಬಹುದು. 

✍️ ಕುಮಾರ ಸುಬ್ರಹ್ಮಣ್ಯ. ಮುಳಿಯಾಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು