ಯಕ್ಷಗಾನ ಕಲಾವಿದ ಜಯಾನಂದ ಸಂಪಾಜೆ ಕಾಲಿಗೆ ಸರ್ಜರಿ: ನೆರವಾಗಲು ಕಲಾಭಿಮಾನಿಗಳಲ್ಲಿ ವಿನಂತಿ

'ಕರ್ಣಾರ್ಜುನ ಕಾಳಗ'ದ ಅರ್ಜುನನ ಪಾತ್ರದಲ್ಲಿ ಜಯಾನಂದ ಸಂಪಾಜೆ (ಎಡಚಿತ್ರ: ಅನಿಲ್ ಎಸ್. ಕರ್ಕೇರ).

ಯಕ್ಷರಂಗದ ದೇವೇಂದ್ರ ಎಂದೇ ಖ್ಯಾತಿ ಪಡೆದ ಅನುಭವಿ ವೇಷಧಾರಿ ಜಯಾನಂದ ಸಂಪಾಜೆ. ಪ್ರಸ್ತುತ ಬಪ್ಪನಾಡು ಮೇಳದಲ್ಲಿ ತಿರುಗಾಟದಲ್ಲಿದ್ದ ಅವರು ಕಳೆದ ತಿಂಗಳು (ಫೆ.17, 2022) ನಾರಾವಿಯಲ್ಲಿ ನಡೆದ 'ನಾಗತಂಬಿಲ' ತುಳು ಯಕ್ಷಗಾನ ಪ್ರಸಂಗದಲ್ಲಿ 
'ಧನರಾಜ'ನೆಂಬ ನಾಯಕ ಪಾತ್ರ ನಿರ್ವಹಿಸುತ್ತಿದ್ದಾಗ, ಧಿಗಿಣ ತೆಗೆಯುವಾಗ ರಂಗಸ್ಥಳದಲ್ಲೇ ಕಾಲ್ಮುರಿತಕ್ಕೊಳಗಾಗಿ ಕುಸಿದು ಬಿದ್ದು, ಆಸ್ಪತ್ರೆ ಸೇರಿದ್ದಾರೆ.

ಅಸ್ಥಿರಜ್ಜು (ಲಿಗಮೆಂಟ್) ಹಾನಿಗೀಡಾಗಿ ಕಾಲಿನಲ್ಲಿ ನೋವಿದ್ದರೂ ಸಾವರಿಸಿಕೊಂಡು, ಪ್ರದರ್ಶನ ನಿಲ್ಲಬಾರದೆಂಬ ಕಾಳಜಿಯಿಂದ ನೋವಿನಲ್ಲೇ ತಮ್ಮ ಅಂದಿನ ಪಾತ್ರವನ್ನು ನಿಭಾಯಿಸಿದವರು. ಅವರ ಪಾತ್ರದ ಕೆಲಸ ಮುಗಿದ ಬಳಿಕ ನಡೆಯಲಾಗದೆ ಅವರನ್ನು ಎತ್ತಿಕೊಂಡೇ ರಂಗಸ್ಥಳದಿಂದ ಚೌಕಿಗೆ (ಬಣ್ಣದ ಮನೆ) ಕರೆದು ತರುವಂತಾಗಿತ್ತು.

ಯಕ್ಷಗಾನ.ಇನ್ ಅಪ್‌ಡೇಟ್ಸ್ ಪಡೆಯಲು ವಾಟ್ಸ್ಆ್ಯಪ್ ಗ್ರೂಪ್ 5 ಸೇರಿಕೊಳ್ಳಿ ಅಥವಾ ಟೆಲಿಗ್ರಾಂನಲ್ಲಿ ಸೇರಿಕೊಳ್ಳಿ. ಫೇಸ್‌ಬುಕ್ | ಟ್ವಿಟರ್ | ಯೂಟ್ಯೂಬ್ ಇನ್‌ಸ್ಟಾಗ್ರಾಂ ಫಾಲೋ ಮಾಡಿ.

ಬಳಿಕ ಉಡುಪಿಯ ಹೈಟೆಕ್ ಆಸ್ಪತ್ರೆಯಲ್ಲಿ ಯಕ್ಷಗಾನಾಭಿಮಾನಿ ವೈದ್ಯ ಡಾ.ಭಾಸ್ಕರಾನಂದ ಕುಮಾರ್ ಅವರ ನೆರವಿನೊಂದಿಗೆ ಮಾ.13ರಂದು ಸರ್ಜರಿ ಮಾಡಲಾಯಿತು. ಇನ್ನು ಆರು ತಿಂಗಳು ರಂಗದಲ್ಲಿ ಕೆಲಸ ಮಾಡುವಂತಿಲ್ಲ, ಬೆಡ್ ರೆಸ್ಟ್ ಅಗತ್ಯ ಎಂದು ವೈದ್ಯರು ಸೂಚಿಸಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಯುತ್ತಿದೆ. ಈ ವಾರ ಡಿಸ್-ಚಾರ್ಜ್ ಆಗಲಿದ್ದು, ನಂತರವೂ ಆಸ್ಪತ್ರೆಗೆ ಬರುತ್ತಿರಬೇಕಾಗುತ್ತದೆ. ಸರ್ಜರಿಗೆ ಈಗಾಗಲೇ ₹3 ಲಕ್ಷ ವೆಚ್ಚವಾಗಿದ್ದು, ಯಕ್ಷಗಾನವನ್ನೇ ನಂಬಿದ್ದ ಅವರಿಗೆ ಕಲಾಭಿಮಾನಿಗಳ ನೆರವಿನ ಅಗತ್ಯವಿದೆ.

ಸದ್ಯ ಬೇರೆ ಯಾವುದೇ ಕೆಲಸವನ್ನೂ ಮಾಡುವಂತಿಲ್ಲ. ಈಗಾಗಲೇ ಕೊರೊನಾದಿಂದ ಸಂಕಷ್ಟಕ್ಕೊಳಗಾಗಿ ಎರಡು ವರ್ಷ ವರಮಾನವಿಲ್ಲದೆಯೇ ದಿನ ದೂಡಿದ್ದ ಅವರ ಕುಟುಂಬದ ಪರಿಸ್ಥಿತಿಯೂ ಹದಗೆಟ್ಟಿದೆ. ಮಗಳು ದ್ವಿತೀಯ ಬಿ.ಕಾಂ., ಮಗ ಪ್ರಥಮ ವರ್ಷದ ಡಿಪ್ಲೊಮಾ ವಿದ್ಯಾಭ್ಯಾಸ ನಡೆಸುತ್ತಿದ್ದು, ಅವರ ಶಿಕ್ಷಣದ ಹೊಣೆಯೂ ಜಯಾನಂದ ಸಂಪಾಜೆ ಅವರ ಮೇಲಿದೆ. ಮನೆ ಕಟ್ಟಲು ಸಾಲವನ್ನು ಪಡೆದಿದ್ದು, ಅದು ತೀರಿಸುವ ಮಹತ್ತರ ಜವಾಬ್ದಾರಿಯೂ ಇದ್ದು, ಹಲವು ಕಂತುಗಳು ಬಾಕಿ ಆಗಿವೆ. ಇದೀಗ ಜೀವನೋಪಾಯದ ಚಿಂತೆಯಲ್ಲಿರುವ ಅವರಿಗೆ ಸಹೃದಯಿ ಯಕ್ಷಗಾನ ಕಲಾಭಿಮಾನಿಗಳ ನೆರವಿನ ಅಗತ್ಯವಿದೆ.

ದೇವೇಂದ್ರ ಪಾತ್ರದಲ್ಲಿ ಜಯಾನಂದ ಸಂಪಾಜೆ,
ಎರಡೂ ಕಾಲೆತ್ತಿ ಧಿಗಿಣ. ಚಿತ್ರ: ಮುರಳಿ ನಾವಡ

ಸಂಪ್ರದಾಯದಂತೆ ಎರಡೂ ಕಾಲೆತ್ತಿ ಧಿಗಿಣ ತೆಗೆದು ಯಕ್ಷಗಾನ ರಂಗದಲ್ಲಿ ರಂಜಿಸುತ್ತಿದ್ದ ಜಯಾನಂದರ ಕಾಲಿನ ಲಿಗಾಮೆಂಟ್ (ಅಸ್ಥಿರಜ್ಜು) ಹರಿದಿದೆ. ಅದರೊಳಗಿನ ಕುಶನ್‌ನಂತಹಾ ಅಂಗಾಂಶವು ಪೂರ್ಣವಾಗಿ ಘಾಸಿಗೊಂಡಿದ್ದು, ಇದಕ್ಕೆ ಅತ್ಯಂತ ಅಪರೂಪದ ಸರ್ಜರಿಯಾಗಬೇಕಿತ್ತು. ಹೀಗಾಗಿ ಶಸ್ತ್ರಚಿಕಿತ್ಸೆಯ ವೆಚ್ಚವೂ ಹೆಚ್ಚು. ಸಾಮಾನ್ಯವಾಗಿ ಅಸ್ಥಿರಜ್ಜು ಮೇಲಿಂದ ಹಾನಿಗೀಡಾಗುತ್ತದೆ, ಅದಕ್ಕಾಗಿದ್ದರೆ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ಲಭ್ಯ. ಮಾ.

ಉಡುಪಿ ಆಸ್ಪತ್ರೆಯಲ್ಲಿ ಯಕ್ಷಗಾನ.ಇನ್ ಜೊತೆ ಮಾತನಾಡಿದ ಜಯಾನಂದರು, "ಯಕ್ಷಗಾನವನ್ನೇ ನೆಚ್ಚಿಕೊಂಡವನು ನಾನು. ಯಕ್ಷಗಾನವೇ ಬದುಕಾಗಿಸಿಕೊಂಡವನು. ಹೀಗಾಗಿ ಭವಿಷ್ಯದ ಬಗ್ಗೆ ಯೋಚಿಸಿರಲಿಲ್ಲ. ಈಗ ಅನಿವಾರ್ಯವಾಗಿ ಈ ದುಃಸ್ಥಿತಿ ಎದುರಾಗಿದೆ. ಸಹೃದಯರ ಆಶೀರ್ವಾದದಿಂದ, ಹಾರೈಕೆಗಳಿಂದ ಚೇತರಿಸಿಕೊಳ್ಳುತ್ತಿದ್ದೇನೆ" ಎಂದು ಹೇಳಿದ್ದು, ಸಹೃದಯಿಗಳ ನೆರವು ಕೇಳಿದ್ದಾರೆ.

ಕಟೀಲು, ಕುಂಟಾರು, ಎಡನೀರು, ಹೊಸನಗರ, ಹನುಮಗಿರಿ ಮುಂತಾದ ಮೇಳಗಳಲ್ಲಿ ಕಳೆದ 32 ವರ್ಷಗಳಿಂದ ವೇಷಧಾರಿಯಾಗಿ ಕಲಾಭಿಮಾನಿಗಳನ್ನು ರಂಜಿಸಿದ್ದ ಜಯಾನಂದ ಸಂಪಾಜೆ, ದೇವೇಂದ್ರ ಪಾತ್ರಕ್ಕೆ ಹೆಸರಾದವರು. ಏಕತಾನತೆಯಂತಿದ್ದ ದೇವೇಂದ್ರನ ಅರ್ಥಗಾರಿಕೆಗೆ ಹೊಸ ಹೊಳಪು ನೀಡಿದವರು. ಇದಲ್ಲದೆ, ರಾಜ ವೇಷ, ಎದುರು ವೇಷಗಳಿಗೆ ಹೆಸರಾದವರು. ಇದೀಗ ಅನಿವಾರ್ಯವಾಗಿ ಬೇರೊಬ್ಬರ ಮುಂದೆ ಕೈಚಾಚಬೇಕಾಗಿಬಂದಿತಲ್ಲ ಎಂಬ ಚಿಂತೆಯಲ್ಲಿದ್ದಾರೆ. ಸಹೃದಯಿಗಳು ಈ ಸಂಕಷ್ಟ ಕಾಲದಲ್ಲಿ ಅವರಿಗೆ ನೆರವಾಗಲು ಬ್ಯಾಂಕ್ ಖಾತೆ ವಿವರ ಕೆಳಗಿದೆ. ಇದನ್ನು ಸಾಧ್ಯವಿದ್ದಷ್ಟು ಮಂದಿಗೆ ತಲುಪಿಸಿ, ಕಲಾವಿದನ ಕುಟುಂಬಕ್ಕೆ ಆಸರೆಯಾಗುವಂತೆ ಕೋರಿಕೆ.

Jayananda S T
Canara Bank, Sampaje
A/c no 0643101006611
IFSC code CNRB 0000643
Google account 9731435243    
Phone pe: 9731435243

ಈ ವಿಡಿಯೊದಲ್ಲಿ ಅವರೇ ಮಾತನಾಡಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು