ಅಂಗದ ಸಂಧಾನ: ಕಾವ್ಯಶ್ರೀ ನಾಯಕ್, ಜಗನ್ನಿವಾಸರಾವ್, ಅವಿನಾಶ್ ಬೈಪಾಡಿತ್ತಾಯ, ಉಜಿರೆ ಅಶೋಕ ಭಟ್, ರಾಧಾಕೃಷ್ಣ ಕಲ್ಚಾರ್ ವಿಟ್ಲ. |
ತುಮಕೂರು: ಯಾವುದೇ ಕವಿಗೆ ಕೃತಿಯೊಂದನ್ನು ರಚಿಸಲು ಸಾಮಾನ್ಯವಾಗಿ ವಾರಗಟ್ಟಲೆ, ತಿಂಗಳುಗಟ್ಟಲೆ ಬೇಕಾಗುತ್ತದೆ. ಆದರೆ ರಾತ್ರಿ ಬೆಳಗಾಗುವುದರೊಳಗೆ ಒಂದಿಡೀ ಪ್ರಸಂಗದ ಪದ್ಯಗಳನ್ನು ರಚಿಸುವ ಸಾಮರ್ಥ್ಯ ಯಕ್ಷಗಾನ ಕವಿಗಳಿಗೆ, ಕಲಾವಿದರಿಗೆ ಇರುತ್ತದೆ. ಇದು ಯಕ್ಷಗಾನದ ಹಿರಿಮೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ಜಿ.ಎಲ್.ಹೆಗಡೆ ಹೇಳಿದ್ದಾರೆ.
ತುಮಕೂರಿನ ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ಶನಿವಾರ (ಮಾ.5, 2022) ಸಂಜೆ ಕರ್ನಾಟಕ ಯಕ್ಷಗಾನ ಅಕಾಡೆಮಿ ವತಿಯಿಂದ ನಡೆದ ಮೂಡಲಪಾಯ ಕೃತಿಗಳ ಲೋಕಾರ್ಪಣೆ, ಪ್ರದರ್ಶನ, ಪಡುವಲಪಾಯ ಯಕ್ಷಗಾನ ತಾಳಮದ್ದಳೆ ಪ್ರದರ್ಶನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಸೃಜನಶೀಲತೆ, ಸೃಷ್ಟಿ ಶೀಲತೆಗೆ ಯಕ್ಷಗಾನ ಸಾಕ್ಷಿ. ಈ ಕಾರಣಕ್ಕಾಗಿಯೇ ಯಕ್ಷಗಾನದ ಹಿರಿಮೆ-ಗರಿಮೆಯನ್ನು ರಾಜ್ಯಕ್ಕೆ ಪರಿಚಯಿಸುವ ನಿಟ್ಟಿನಲ್ಲಿ ರಾಜ್ಯಮಟ್ಟದ ಯಕ್ಷಗಾನ ಸಾಹಿತ್ಯ ಸಮ್ಮೇಳನ ಆಯೋಜಿಸುವಂತೆ ಸರಕಾರಕ್ಕೆ ಮನವಿ ಮಾಡಲಾಗಿತ್ತು. ತತ್ಫಲವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಬಾರಿಯ ಬಜೆಟ್‌ನಲ್ಲಿ ಯಕ್ಷಗಾನ ಸಮ್ಮೇಳನಕ್ಕೆ ಅವಕಾಶ ನೀಡಿದ್ದಾರೆ. ಇದಕ್ಕಾಗಿ ಸರಕಾರಕ್ಕೆ ಕೃತಜ್ಞತೆ ಸಲ್ಲಿಸುವುದಾಗಿ ಡಾ.ಹೆಗಡೆ ಹೇಳಿದರು.
ಯಕ್ಷಗಾನ.ಇನ್ ಅಪ್‌ಡೇಟ್ಸ್ ಪಡೆಯಲು ವಾಟ್ಸ್ಆ್ಯಪ್ ಗ್ರೂಪ್ 5 ಸೇರಿಕೊಳ್ಳಿ ಅಥವಾ ಟೆಲಿಗ್ರಾಂನಲ್ಲಿ ಸೇರಿಕೊಳ್ಳಿ. ಫೇಸ್‌ಬುಕ್ | ಟ್ವಿಟರ್ | ಯೂಟ್ಯೂಬ್ | ಇನ್‌ಸ್ಟಾಗ್ರಾಂ ಫಾಲೋ ಮಾಡಿ.
ಮೂಡಲಪಾಯ ಹಿಂದುಳಿದಿದೆ ಎಂಬುದು ನಿಜವಾದರೂ, ಇದರ ಏಳಿಗೆಗಾಗಿ ಯುವ ಜನರು ಮುಂದೆ ಬರಬೇಕಿದೆ. ಯಕ್ಷಗಾನದ ಮತ್ತೊಂದು ಕವಲು ಆಗಿರುವ ಮೂಡಲಪಾಯ ಬೆಳೆಯಬೇಕಿದ್ದರೆ ಕಲಾವಿದರ, ಪೋಷಕರ ತ್ಯಾಗದ ಅಗತ್ಯವಿದೆ. ಕಲಾವಿದರು ಅಧ್ಯಯನ, ಅಭ್ಯಾಸಗಳಲ್ಲಿ ತೊಡಗಿಕೊಳ್ಳಬೇಕಿದೆ. ಹೀಗಾದಲ್ಲಿ ಮಲೆನಾಡು-ಮೈಸೂರು ಭಾಗದಲ್ಲಿ ಸಕ್ರಿಯವಾಗಿರುವ ಮೂಡಲಪಾಯ ಹಾಗೂ ಕರಾವಳಿ-ಮಲೆನಾಡು ಭಾಗದಲ್ಲಿ ವೈಭವೋಪೇತವಾಗಿ ನಡೆಯುತ್ತಿರುವ ಪಡುವಲಪಾಯ ಯಕ್ಷಗಾನಗಳು ಒಂದಾಗಿ, ಯಕ್ಷಗಾನವು ರಾಜ್ಯದ ಕಲೆಯಾಗಿ ಬೆಳೆಯುವುದರಲ್ಲಿ ಅನುಮಾನವಿಲ್ಲ ಎಂದು ಅಕಾಡೆಮಿ ಅಧ್ಯಕ್ಷರು ಹೇಳಿದರು.
ಯಕ್ಷಗಾನವು ಕನ್ನಡ ಭಾಷೆ ಬೆಳೆಸಿ ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದ ಅವರು, ಮೂಡಲಪಾಯ, ಪಡುವಲಪಾಯ ಭಿನ್ನತೆಗಳಿದ್ದರೂ ನಾವೆಲ್ಲರೂ ಒಂದೇ. ಸಮಗ್ರವಾಗಿ ಇದು ಯಕ್ಷಗಾನವೇ ಎಂದರು.
ಯಕ್ಷಗಾನ ಅಕಾಡೆಮಿ ಪ್ರಕಟಿಸಿದ, ಭಾಗವತ ಕಲ್ಮನೆ ಎ.ಎಸ್.ನಂಜಪ್ಪ ಹಾಗೂ ಎ.ಎನ್.ಚನ್ನಬಸವಯ್ಯ ರಚಿಸಿರುವ ಮೂಡಲಪಾಯ ಯಕ್ಷಗಾನ ಪ್ರಸಂಗಗಳ ಕೃತಿಗಳ ಕುರಿತು ತುಮಕೂರು ವಿವಿ ಕನ್ನಡ ಪ್ರಾಧ್ಯಾಪಕ ಪ್ರೊ.ಡಿ.ವಿ.ಪರಶಿವಮೂರ್ತಿ ಅವರು ಮಾತನಾಡಿ, ಕಲಾವಿದರೇ ಕೃತಿ ರಚಿಸಿರುವುದರಿಂದ ಭಾಷೆಗಿಂತ ಭಾವನೆಗೆ ಹೆಚ್ಚು ಮಹತ್ವ ದೊರೆತಿದೆ ಎಂದರು.
ಕೃತಿಗಳನ್ನು ವಿದ್ವಾಂಸ ಡಾ.ಚಿಕ್ಕಣ್ಣ ಎಣ್ಣೆಕಟ್ಟಿ ಅವರು ಪರಿಚಯಿಸುತ್ತಾ, ತುಮಕೂರು ಜಿಲ್ಲೆಯಲ್ಲಿ 183 ಭಾಗವತರಿದ್ದು, ಎಂಟು ಮಂದಿ ಪ್ರಸಂಗ ರಚನೆಯಲ್ಲಿ ತೊಡಗಿಕೊಂಡಿದ್ದಾರೆ. ಹರಿಕಥೆ ವಿದ್ವಾಂಸ, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಡಾ.ಲಕ್ಷ್ಮಣದಾಸ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ, ಕರ್ನಾಟಕ ಯಕ್ಷಗಾನ ಅಕಾಡೆಮಿ ರಿಜಿಸ್ಟ್ರಾರ್ ಎಸ್.ಎಚ್.ಶಿವರುದ್ರಪ್ಪ, ಅಕಾಡೆಮಿ ಸದಸ್ಯ ಸಂಚಾಲಕಿ ಆರತಿ ಪಟ್ರಮೆ ಉಪಸ್ಥಿತರಿದ್ದರು.
ಬಳಿಕ ಅರಳಗುಪ್ಪೆ ಸಿದ್ಧಿವಿನಾಯಕ ಹವ್ಯಾಸಿ ಯಕ್ಷಗಾನ ಕಲಾಸಂಘ (ರಿ) ವತಿಯಿಂದ 'ದಕ್ಷ ಯಜ್ಞ' ಮೂಡಲಪಾಯ ಯಕ್ಷಗಾನ ಪ್ರದರ್ಶನಗೊಂಡಿತು. ನಂತರದಲ್ಲಿ ಕರಾವಳಿಯ ಪ್ರಸಿದ್ಧ ಯಕ್ಷಗಾನ ಕಲಾವಿದರಿಂದ 'ಅಂಗದ ಸಂಧಾನ' ತಾಳಮದ್ದಳೆ (ಪಡುವಲಪಾಯ) ಜರುಗಿತು. ಹಿಮ್ಮೇಳದಲ್ಲಿ ಕಾವ್ಯಶ್ರೀ ನಾಯಕ್, ಶ್ರೀಪತಿ ನಾಯಕ್ ಆಜೇರು, ಪುತ್ತೂರು ಜಗನ್ನಿವಾಸ ರಾವ್, ಅವಿನಾಶ್ ಬೈಪಾಡಿತ್ತಾಯ, ಬೆಂಗಳೂರು, ಮುಮ್ಮೇಳದಲ್ಲಿ ಉಜಿರೆ ಅಶೋಕ್ ಭಟ್, ರಾಧಾಕೃಷ್ಣ ಕಲ್ಚಾರ್ ವಿಟ್ಲ, ಶಶಾಂಕ ಅರ್ನಾಡಿ, ಬೆಂಗಳೂರು, ಡಾ.ಸಿಬಂತಿ ಪದ್ಮನಾಭ ಅವರು ಉತ್ತಮವಾಗಿ ನಡೆಸಿಕೊಟ್ಟರು.
Tags:
ಸುದ್ದಿ