ಕಬ್ಬಿನಾಲೆ ಅವರಿಗೆ ಪಾರ್ತಿಸುಬ್ಬ ಪ್ರಶಸ್ತಿ, ಕೊಕ್ಕಡ ಈಶ್ವರ ಭಟ್, ಹಳ್ಳಾಡಿ, ಕರ್ಕಿ ಅವರಿಗೆ ಯಕ್ಷಗಾನ ಅಕಾಡೆಮಿ ಪ್ರಶಸ್ತಿ


ಬೆಂಗಳೂರು: ಯಕ್ಷಗಾನ ಪ್ರಸಂಗಕರ್ತ, ಸಾಹಿತಿ ಹಾಗೂ ಕಲಾವಿದ ಕಬ್ಬಿನಾಲೆ ವಸಂತ ಭಾರದ್ವಾಜ್‌ ಅವರು ಕರ್ನಾಟಕ ಯಕ್ಷಗಾನ ಅಕಾಡೆಮಿ ನೀಡುವ 2021ನೇ ಸಾಲಿನ ‘ಪಾರ್ತಿಸುಬ್ಬ ಪ್ರಶಸ್ತಿ’ಗೆ ಆಯ್ಕೆಯಾಗಿದ್ದು, ಕೊಕ್ಕಡ ಈಶ್ವರ ಭಟ್, ಹಳ್ಳಾಡಿ ಜಯರಾಮ ಶೆಟ್ಟಿ, ವರದ ಹಾಸ್ಯಗಾರ ಮುಂತಾದವರಿಗೆ 2021ನೇ ಸಾಲಿನ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ.

ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ಜಿ.ಎಲ್‌.ಹೆಗಡೆ ಅವರು ಸುದ್ದಿಗೋಷ್ಠಿಯಲ್ಲಿ ಸೋಮವಾರ ಅಕಾಡೆಮಿ ಪ್ರಶಸ್ತಿ ಪುರಸ್ಕೃತರ ಬಗ್ಗೆ ಮಾಹಿತಿ ನೀಡಿದರು.
ಕಬ್ಬಿನಾಲೆ ವಸಂತ ಭಾರದ್ವಾಜರಿಗೆ ಪಾರ್ತಿಸುಬ್ಬ ಪುರಸ್ಕಾರ

ಯಕ್ಷಗಾನ.ಇನ್ ಅಪ್‌ಡೇಟ್ಸ್ ಪಡೆಯಲು ವಾಟ್ಸ್ಆ್ಯಪ್ ಗ್ರೂಪ್ 5 ಸೇರಿಕೊಳ್ಳಿ ಅಥವಾ ಟೆಲಿಗ್ರಾಂನಲ್ಲಿ ಸೇರಿಕೊಳ್ಳಿ. ಫೇಸ್‌ಬುಕ್ | ಟ್ವಿಟರ್ | ಯೂಟ್ಯೂಬ್ ಇನ್‌ಸ್ಟಾಗ್ರಾಂ ಫಾಲೋ ಮಾಡಿ.

ಮೂಲತಃ ಹೆಬ್ರಿಯ ವಸಂತ ಭಾರದ್ವಾಜ ಅವರು ಕಾವ್ಯ, ವಿಮರ್ಶೆ, ಗೀತರೂಪಕ, ನಿಘಂಟು ಮುಂತಾದ ಸಾಹಿತ್ಯ ಪ್ರಕಾರಗಳಲ್ಲಿ 100ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ತುಳುಭಾಷೆಯಲ್ಲೂ ಸಾಹಿತ್ಯ ಸೇವೆ ಸಲ್ಲಿಸಿದ್ದಾರೆ. ಯಕ್ಷಗಾನ ತಾಳಮದ್ದಳೆ ಕಲಾವಿದರಾಗಿ, ಗಮಕಕಲೆಯಲ್ಲಿ ವ್ಯಾಖ್ಯಾನಕಾರರಾಗಿ ಪ್ರಸಿದ್ಧರು. ಯಕ್ಷಗಾನದ ಮೂಲಪುರುಷ ಎಂದೇ ಖ್ಯಾತ ಪಾರ್ತಿಸುಬ್ಬನ ಹೆಸರಿನಲ್ಲಿ ನೀಡಲಾಗುವ ಈ ಪ್ರಶಸ್ತಿಯು ₹1 ಲಕ್ಷ ನಗದು ಒಳಗೊಂಡಿರಲಿದೆ.

ಪರಿಪೂರ್ಣ ಯಕ್ಷಗಾನ ಕಲಾವಿದರಾದ ಸತ್ಯನಾರಾಯಣ ವರದ ಹಾಸ್ಯಗಾರ (ಕರ್ಕಿ), ಮುತ್ತಪ್ಪ ತನಿಯ ಪೂಜಾರಿ (ಹೊರನಾಡು ಕನ್ನಡಿಗ), ತೆಂಕುತಿಟ್ಟು ಯಕ್ಷಗಾನ ಗುರು ಹಾಗೂ ಸಂಘಟಕ ನರೇಂದ್ರಕುಮಾರ್‌ ಜೈನ್‌ (ಉಜಿರೆ), ಭಾಗವತಿಕೆ ಮತ್ತು ಮುಖವೀಣೆ ಕಲಾವಿದ ಮೂಡಲಗಿರಿಯಪ್ಪ (ಕಡವೀಗೆರೆ, ತುಮಕೂರು) ಹಾಗೂ ಭಾಗವತ ಮತ್ತು ಮೂಡಲಪಾಯ ಕಲಾವಿದ ಎನ್‌.ಟಿ.ಮೂರ್ತಾಚಾರ್ಯ (ನೆಲ್ಲಿಗೆರೆ, ಮಂಡ್ಯ) ಇವರು ತಲಾ ₹50 ಸಾವಿರ ಮೌಲ್ಯದ ಗೌರವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಬಡಗುತಿಟ್ಟಿನ ಹಾಸ್ಯ ಕಲಾವಿದ ಹಳ್ಳಾಡಿ ಜಯರಾಮ ಶೆಟ್ಟಿ (ಕುಂದಾಪುರ), ಗೋಪಾಲ ಗಾಣಿಗ ಆಜ್ರಿ (ಉಡುಪಿ), ಸೀತೂರು ಅನಂತಪದ್ಮನಾಭ ರಾವ್‌ (ಚಿಕ್ಕಮಗಳೂರು), ಕಡತೋಕ ಲಕ್ಷ್ಮೀನಾರಾಯಣ ಶಂಭು ಭಾಗವತ (ಹೊನ್ನಾವರ), ತೆಂಕುತಿಟ್ಟಿನಿಂದ ಬೋಳಾರ ಸುಬ್ಬಯ್ಯ ಶೆಟ್ಟಿ (ಮಂಗಳೂರು), ರಾಮ ಸಾಲಿಯಾನ್‌ ಮಂಗಲ್ಪಾಡಿ (ಕಾಸರಗೋಡು), ಕೊಕ್ಕಡ ಈಶ್ವರ ಭಟ್‌ (ಬಂಟ್ವಾಳ), ಪರಿಪೂರ್ಣ ಯಕ್ಷಗಾನ ಕಲಾವಿದ ಅಡಿಗೋಣ ಬೀರಣ್ಣ ನಾಯ್ಕ (ಅಂಕೋಲ), ಮೂಡಲಪಾಯ ಯಕ್ಷಗಾನ ಕಲಾವಿದ ಭದ್ರಯ್ಯ (ಬೆಂಗಳೂರು), ಕೇಳಿಕೆ ಕಲಾವಿದ ಬಸವರಾಜಪ್ಪ (ಕೋಲಾರ) ಇವರು ತಲಾ ₹25 ಸಾವಿರ ನಗದು ಸಹಿತದ ‘ಯಕ್ಷಸಿರಿ’ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

‘ಪುಸ್ತಕ ವಿಭಾಗದಲ್ಲಿ, ಕಾಸರಗೋಡಿನ ಕೆ.ರಮಾನಂದ ಬನಾರಿಯವರ ‘ಅರ್ಥಾಯನ’ ಹಾಗೂ ಮೈಸೂರಿನ ಎಚ್‌.ಆರ್‌.ಚೇತನ ಅವರ ‘ಮೂಡಲಪಾಯ ಯಕ್ಷಗಾನ’ ಕೃತಿಗಳು 2020ನೇ ಸಾಲಿನ ಪುಸ್ತಕ ಬಹುಮಾನಕ್ಕೆ ಆಯ್ಕೆಯಾಗಿವೆ. ಇವರಿಗೆ ತಲಾ ₹25 ಸಾವಿರ ನಗದು ಹಾಗೂ ಪ್ರಮಾಣಪತ್ರ ಸಿಗಲಿದೆ. ಇದೇ ಮಾರ್ಚ್ ಕೊನೆಯ ವಾರದಲ್ಲಿ ಕಾರ್ಕಳದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಏರ್ಪಡಿಸಲಾಗಿದೆ’ ಎಂದು ಅಕಾಡೆಮಿ ಅಧ್ಯಕ್ಷ ಡಾ.ಜಿ.ಎಲ್.ಹೆಗಡೆ ತಿಳಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು