ಮಾ.12ರಂದು ಸಂಪಾಜೆ ಯಕ್ಷೋತ್ಸವ 2022: ಪ್ರಶಸ್ತಿ ಪ್ರದಾನ, ಅದ್ಧೂರಿ ಯಕ್ಷಗಾನ


ಸುಳ್ಯ:
ಸಂಪಾಜೆಯ ಕಲ್ಲುಗುಂಡಿಯಲ್ಲಿ ಪ್ರತಿವರ್ಷ ನಡೆಯುವ ಡಾ.ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ (ರಿ) ವತಿಯಿಂದ ನಡೆಯುವ ಸಂಪಾಜೆ ಯಕ್ಷೋತ್ಸವವು ಈ ಬಾರಿ ಮಾರ್ಚ್ 12ರಂದು ನಡೆಯಲಿದ್ದು, ಭರ್ಜರಿ ಯಕ್ಷಗಾನ ರಸದೌತಣದೊಂದಿಗೆ, ಶಾಸ್ತ್ರೀಯ ಸಂಗೀತ ಸಂಜೆ, ಬ್ರಹ್ಮೈಕ್ಯ ಶ್ರೀ ಶ್ರೀ ಕೇಶವಾನಂದ ಭಾರತೀ ಶ್ರೀಪಾದರ ಪುಣ್ಯಸ್ಮೃತಿ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮಗಳು ನಡೆಯಲಿವೆ.

ಮಾ.12ರ ಶನಿವಾರ ಸಂಜೆ 4ರಿಂದ ಕಲ್ಲುಗುಂಡಿ ಶಾಲಾ ವಠಾರದಲ್ಲಿ ಆರಂಭವಾಗುವ ಕಾರ್ಯಕ್ರಮವು ಮರುದಿನ ಬೆಳಗ್ಗಿನವರೆಗೂ ನಡೆಯಲಿದೆ.

ಯಕ್ಷಗಾನ.ಇನ್ ಅಪ್‌ಡೇಟ್ಸ್ ಪಡೆಯಲು ವಾಟ್ಸ್ಆ್ಯಪ್ ಗ್ರೂಪ್ 5 ಸೇರಿಕೊಳ್ಳಿ ಅಥವಾ ಟೆಲಿಗ್ರಾಂನಲ್ಲಿ ಸೇರಿಕೊಳ್ಳಿ. ಫೇಸ್‌ಬುಕ್ | ಟ್ವಿಟರ್ | ಯೂಟ್ಯೂಬ್ ಇನ್‌ಸ್ಟಾಗ್ರಾಂ ಫಾಲೋ ಮಾಡಿ.

ಎಡನೀರು ಮಠದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಮಹಾಸ್ವಾಮೀಜಿ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದು, ಸುಳ್ಯ ವಾಣಿಜ್ಯ ಮತ್ತು ಕೈಗಾರಿಕೋದ್ಯಮಿಗಳ ಸಂಘದ ಅಧ್ಯಕ್ಷ ಪಿ.ಬಿ.ಸುಧಾಕರ ರೈ ಅವರು ಡಾ.ಕೀಲಾರು ಸಂಸ್ಮರಣೆ ನಡೆಸಲಿದ್ದಾರೆ.

ಯಕ್ಷಗಾನ ಮೇಳಗಳ ವ್ಯವಸ್ಥಾಪಕರಾಗಿ ದುಡಿದ ದಿವಾಕರ ಕಾರಂತ ಮತ್ತು ಪ್ರಸಿದ್ಧ ಯಕ್ಷಗಾನ ಕಲಾವಿದ ಪೆರ್ಲ ಜಗನ್ನಾಥ ಶೆಟ್ಟಿ ಅವರಿಗೆ ಯಕ್ಷೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಪ್ರಸಿದ್ಧ ಕಲಾವಿದ ವಾಸುದೇವ ರಂಗಾ ಭಟ್ ಅವರು ಅಭಿನಂದನ ನುಡಿಗಳನ್ನಾಡಲಿದ್ದಾರೆ. ಬಳಿಕ ಸಂಜೆ 5ರಿಂದ ಚೆನ್ನೈಯ ತ್ರಿಚೂರ್ ಬ್ರದರ್ಸ್ ಎಂದೇ ಖ್ಯಾತರಾಗಿರುವ ಕೃಷ್ಣಮೋಹನ್ ಮತ್ತು ರಾಮ್‌ಕುಮಾರ್ ಮೋಹನ್ ಅವರಿಂದ ಶಾಸ್ತ್ರೀಯ ಸಂಗೀತ ಗಾಯನ ಕಾರ್ಯಕ್ರಮವಿದೆ. ತ್ರಿಚೂರ್ ಆರ್.ಮೋಹನ್ ಮೃದಂಗದಲ್ಲಿ, ಎಲ್.ರಾಮಕೃಷ್ಣನ್ ವಯಲಿನ್ ಹಾಗೂ ಡಿ.ವಿ.ವೆಂಕಟಸುಬ್ರಹ್ಮಣ್ಯಂ ಅವರು ಘಟಂನಲ್ಲಿ ಸಾಥ್ ನೀಡಲಿದ್ದಾರೆ.

7.30ರಿಂದ ಪುಣ್ಯ ಸ್ಮೃತಿ, ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮೈಸೂರಿನ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅಧ್ಯಕ್ಷತೆ ವಹಿಸಲಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ಅಭ್ಯಾಗತರಾಗಿದ್ದು, ಕರ್ನಾಟಕ ಯಕ್ಷಗಾನ ಅಕಾಡೆಮಿ ಮಾಜಿ ಅಧ್ಯಕ್ಷ ಪ್ರೊ.ಎಂ.ಎಲ್.ಸಾಮಗರು ಗುರುವಂದನೆ ನಡೆಸಿಕೊಡಲಿದ್ದಾರೆ. ನ್ಯಾಯವಾದಿ ಕೆ.ಪಿ.ಬಾಲಸುಬ್ರಹ್ಮಣ್ಯ ಮತ್ತು ವೈದಿಕ ವಿದ್ವಾಂಸ ಹಿರಣ್ಯ ವೆಂಕಟೇಶ್ವರ ಭಟ್ ಅವರು ಅಭಿನಂದನ ನುಡಿಗಳನ್ನಾಡಲಿದ್ದಾರೆ.

ಇದೇ ಸಂದರ್ಭ ಸುಪ್ರೀಂ ಕೋರ್ಟ್ ಹಿರಿಯ ನ್ಯಾಯವಾದಿ ಕೆ.ಎನ್.ಭಟ್ ಅವರಿಗೆ ಶ್ರೀ ಕೇಶವಾನಂದ ಭಾರತೀ ರಾಷ್ಟ್ರೀಯ ನ್ಯಾಯ ಪ್ರಶಸ್ತಿ, ಶ್ರೀಕ್ಷೇತ್ರ ಧರ್ಮಸ್ಥಳದ ಡಿ.ಸುರೇಂದ್ರ ಕುಮಾರ್ ಅವರಿಗೆ ಶ್ರೀ ಕೇಶವಾನಂದ ಭಾರತೀ ಶೈಕ್ಷಣಿಕ ಪ್ರಶಸ್ತಿ, ಶರವು ಮಹಾಗಣಪತಿ ದೇವಸ್ಥಾನದ ಆನುವಂಶಿಕ ಮೊಕ್ತೇಸರ ಶ್ರೀ ಶರವು ರಾಘವೇಂದ್ರ ಶಾಸ್ತ್ರಿ ಅವರಿಗೆ ಯಕ್ಷೋತ್ಸವ ವೈದಿಕ ಪ್ರಶಸ್ತಿ, ಚೆನ್ನೈಯ ಅಂತರರಾಷ್ಟ್ರೀಯ ಕಲಾವಿದರಾದ ತ್ರಿಚೂರ್ ಸಹೋದರರಿಗೆ ಶ್ರೀ ಕೇಶವಾನಂದ ಭಾರತೀ ಸಂಗೀತ ಪ್ರಶಸ್ತಿ ಮತ್ತು ಪಂಚ ಮೇಳಗಳ ಸಂಚಾಲಕರಾದ ಪಿ.ಕಿಶನ್ ಹೆಗ್ಡೆ ಅವರಿಗೆ ಶ್ರೀ ಕೇಶವಾನಂದ ಭಾರತೀ ಯಕ್ಷಗಾನಾಧ್ವರ್ಯು ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.

ನಂತರ ರಾತ್ರಿ 9ರಿಂದ 12ರವರೆಗೆ ಚಂದ್ರಾವಳಿ ವಿಲಾಸ, 12ರಿಂದ 3ರವರೆಗೆ ಮಾಯಾ ಮಾರುತೇಯ, ಬೆ.3ರಿಂದ 5ರವರೆಗೆ ಸಹಸ್ರಕವಚ, ಬೆ.5ರಿಂದ 7ರವರೆಗೆ ಮಕರಾಕ್ಷ ಕಾಳಗ ಯಕ್ಷಗಾನ ಪ್ರಸಂಗಗಳು ಪ್ರದರ್ಶನಗೊಳ್ಳಲಿವೆ. ನಾಡಿನ ಹೆಸರಾಂತ ಕಲಾವಿದರು ಈ ಯಕ್ಷೋತ್ಸವದಲ್ಲಿ ಭಾಗಿಯಾಗಿ ಯಕ್ಷಗಾನ ಪ್ರೇಕ್ಷಕರನ್ನು ರಂಜಿಸಲಿದ್ದಾರೆ. ಕಲಾವಿದರ ವಿವರಗಳು ಈ ಕೆಳಗಿವೆ:





ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು