ಇತ್ತೀಚೆಗೆ ಅಗಲಿದ ಮಹಿಳಾ ಭಾಗವತ ಶ್ರೀಮತಿ ಲೀಲಾವತಿ ಬೈಪಾಡಿತ್ತಾಯ ಅವರನ್ನು ಹತ್ತಿರದಿಂದ ಬಲ್ಲ, ತಮ್ಮ ಪರಿಕಲ್ಪನೆಯ ಹಲವು ಪ್ರಯೋಗಗಳಲ್ಲಿ ತೊಡಗಿಸಿಕೊಂಡಿದ್ದ ಪೃಥ್ವಿರಾಜ್ ಕವತ್ತಾರು, ಲೀಲಕ್ಕನ ಹಾಡುಗಾರಿಕೆಯಲ್ಲೊಂದು ವಿಶಿಷ್ಟತೆಯನ್ನು ಕಂಡಿದ್ದಾರೆ. ಯಕ್ಷಗಾನ ಗೇಯಕ್ರಮವನ್ನು ಕರ್ನಾಟಕ ಸಂಗೀತದೊಂದಿಗೆ ಸಂ-ಯೋಜನೆಗೊಳಿಸಿದ ಭಾಗವತಿಕೆಯ ವಿಶಿಷ್ಟ ಮಾದರಿ ಎಂದಿದ್ದಾರೆ ಅವರು.
ಯಕ್ಷಗಾನ.ಇನ್ ಅಪ್‌ಡೇಟ್ಸ್ ಪಡೆಯಲು ಫೇಸ್‌ಬುಕ್ | ಟ್ವಿಟರ್ | ಯೂಟ್ಯೂಬ್ | ಇನ್‌ಸ್ಟಾಗ್ರಾಂ ಫಾಲೋ ಮಾಡಿ.
ಲೀಲಾವತಿ ಬೈಪಾಡಿತ್ತಾಯರನ್ನು ಕಾಂತಾವರ ಮೇಳದಲ್ಲಾಗಲಿ, ಬೇರೆ ಡೇರೆ ಮೇಳದಲ್ಲಾಗಲೀ ನೋಡಿದ ನೆನಪು ನನಗಿಲ್ಲ. ‘ಪರಕೆದ ಪಿಂಗಾರ’ ಪ್ರಸಂಗವನ್ನು ಬಾಲ್ಯದಲ್ಲಿ ನೋಡಿರುವೆನಾದರೂ, ಮಹಿಳೆಯೊಬ್ಬರು ರಂಗಸ್ಥಳದಲ್ಲಿ ಕುಳಿತು ಹಾಡುತ್ತಿರುವ ಅಸ್ಪಷ್ಟ ಚಿತ್ರಣ ಮಾತ್ರ ಕಣ್ಣಮುಂದೆ ಇದೆ. ಲೀಲಾವತಿ ಬೈಪಾಡಿತ್ತಾಯರನ್ನೂ ಹರಿನಾರಾಯಣ ಬೈಪಾಡಿತ್ತಾಯರನ್ನೂ ನಾನು ಸನಿಹದಿಂದ ನೋಡಿದ್ದು ಬಪ್ಪನಾಡು ಮೇಳದಲ್ಲಿ. ‘ಮಹಾಕಾಯ’ರಂತಿದ್ದ ಅಡ್ಯಾರು ಶಂಕರ ಆಳ್ವರು ಆಗ ಮೇಳದ ಸಂಚಾಲಕರಾಗಿದ್ದರು. ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿಗಳು, ಮಲ್ಪೆ ರಾಮದಾಸ ಸಾಮಗರು, ಕೋಳ್ಯೂರು ರಾಮಚಂದ್ರ ರಾಯರು, ಕರುವೋಳು ದೇರಣ್ಣ ಶೆಟ್ಟರು, ಪೆರುವೋಡಿ ನಾರಾಯಣ ಭಟ್ಟರು, ಬೇಕೂರು ಕೇಶವನವರು, ಮಾಯಿಪ್ಪಾಡಿ ಕುಂಞರಾಮರವರು, ಮುಂಡಾಜೆ ಸದಾಶಿವ ಶೆಟ್ಟರು - ಮೊದಲಾದ ದಿಗ್ಗಜರು ಇದ್ದ ಮೇಳವದು. ಆಗ ಹೆಚ್ಚಿನ ದಿನಗಳಲ್ಲಿ ಪ್ರಸಂಗ ‘ದಕ್ಷಯಜ್ಞ’ವೇ. ಪ್ರತಿದಿನ ಕೋಳ್ಯೂರು ರಾಮಚಂದ್ರ ರಾಯರ ದಾಕ್ಷಾಯಿಣಿ! ಈಗಿನಷ್ಟು ಗೌಜಿಗದ್ದಲಗಳಿಲ್ಲದ ಆ ದಿನಗಳಲ್ಲಿ ಹಾರ್ನ್ ಮೈಕದಲ್ಲಿ ಕೇಳುತ್ತಿದ್ದ ಲೀಲಾವತಿ ಬೈಪಾಡಿತ್ತಾಯರ ಪದಗಳು ಈಗಲೂ ಕಿವಿಯಲ್ಲಿ ಅನುರಣಿಸುತ್ತಿವೆ. ಆದರೆ, ಆಗ ಆ ಕೇಳ್ಮೆಯನ್ನು ಅನುಭವಿಸುವ ಪ್ರೌಢತೆ ನನ್ನಲ್ಲಿ ಇರಲಿಲ್ಲ. ಛೆ! ಅಂಥ ಪದಗಳನ್ನು ಆಗ ಯಾರಾದರೂ ದಾಖಲು ಮಾಡಲಿಲ್ಲವಲ್ಲ ಅಂತ ಈಗ ಅನ್ನಿಸಿ ಬೇಸರವಾಗುತ್ತದೆ.
ಬಪ್ಪನಾಡು ಮೇಳದಲ್ಲಿ ಹರಿನಾರಾಯಣ ಬೈಪಾಡಿತ್ತಾಯರು ಮುಖ್ಯ ಮದ್ಲೆಗಾರರಾಗಿದ್ದರು. ದಂಪತಿಗಳು ಸಂಜೆ 6.30 ಗಂಟೆಯ ಸುಮಾರಿಗೆ ಲ್ಯಾಂಬಿ ಸ್ಕೂಟರ್‌ನಲ್ಲಿ ಆಟದ ಊರಿಗೆ ಬಂದಿಳಿಯುತ್ತಿದ್ದರು. ಊರಿನವರೆಲ್ಲರೂ ಬೆರಗಿನ ಕಣ್ಣುಗಳಿಂದ ಈ ಕಲಾವಿದ ದಂಪತಿಗಳನ್ನೇ ನೋಡುತ್ತಿದ್ದರು. ಸುಮಾರು 9 ಗಂಟೆಯ ಸುಮಾರಿಗೆ ಪೂರ್ವರಂಗದ ಮುಖ್ಯಸ್ತ್ರೀವೇಷಕ್ಕೆ ಹಾಡಲು ಲೀಲಾವತಿ ಬೈಪಾಡಿತ್ತಾಯರು ರಂಗಸ್ಥಳಕ್ಕೆ ಆಗಮಿಸಿದರೆ, ಹರಿನಾರಾಯಣ ಬೈಪಾಡಿತ್ತಾಯರು ಮದ್ದಲೆಯ ಸಾಥಿ ನೀಡಲು ಸಿದ್ಧರಾಗುತ್ತಿದ್ದರು. ಮುಖ್ಯ ಸ್ತ್ರೀವೇಷ ಮುಗಿಸಿ, ಮುಂದೆ ಸುಮಾರು ಇಪ್ಪತ್ತು ನಿಮಿಷ ಅವಧಿಯ ಚೆಂಡೆಪೀಠಿಕೆಗೆ ಲೀಲಾವತಿ ಬೈಪಾಡಿತ್ತಾಯರೇ ಜಾಗಟೆ ಎತ್ತಿಹಿಡಿದು ತಾಳದಲ್ಲಿ ಬಾರಿಸುತ್ತಿದ್ದರು. ಜಾಗಟೆಯಲ್ಲಾದರೂ ಪ್ರತಿದಿನ ಬಾರಿಸುವುದನ್ನೇ ಬಾರಿಸುವುದಲ್ಲವೆ; ಹೇಗೂ ಚೆಂಡೆಪೀಠಿಕೆ ಬಾರಿಸುತ್ತಿರುವವರು ತಮ್ಮ ಪತಿಯೇ ಆಗಿರುವುದರಿಂದ, ಸಲುಗೆಯಲ್ಲಿ ಜಾಗಟೆ-ಕೋಲನ್ನು ಕೆಳಗಿಟ್ಟು ಸ್ವಲ್ಪ ವಿರಮಿಸೋಣ- ಎಂಬ ಔದಾಸೀನ್ಯದ ಭಾವವನ್ನು ಅವರಲ್ಲಿ ಕಂಡಿದ್ದೇ ಇಲ್ಲ. ರಂಗಸ್ಥಳದ ಪ್ರತಿವ್ಯವಹಾರದಲ್ಲಿಯೂ ಅಮಿತ ಶ್ರದ್ಧೆ! [ಇಂಥ ಶ್ರದ್ಧೆಯಿದ್ದ ಮತ್ತೊಬ್ಬರೆಂದರೆ ಬಲಿಪ ನಾರಾಯಣ ಭಾಗವತರು. ಬಿಡಿತ, ಮುಕ್ತಾಯದ ಸಂದರ್ಭದಲ್ಲಿ ಚೆಂಡೆ-ಮದ್ದಲೆಯವರು ನುಡಿಸುವಾಗ, ತಾವು ಜಾಗಟೆಯನ್ನು ಔದಾಸೀನ್ಯದ ಭಾವದಲ್ಲಿ ಬಾರಿಸಿದ ಉದಾಹರಣೆಯೇ ಇಲ್ಲ].
ಲೀಲಾವತಿ ಬೈಪಾಡಿತ್ತಾಯರು ತಡರಾತ್ರಿ ಎರಡು ಗಂಟೆಯವರೆಗೆ ಹಾಡಿ, ಜಾಗಟೆಯನ್ನು ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿಗಳ ಕೈಗೆ ನೀಡಿ ಚೌಕಿಗೆ ನಿರ್ಗಮಿಸುತ್ತಿದ್ದರು. ಚೌಕಿಯ ಒಂದು ಪಾರ್ಶ್ವದಲ್ಲಿ ಸೂಟ್‌ಕೇಸನ್ನೋ ಪೆಟ್ಟಿಗೆಯನ್ನೋ ಬಟ್ಟೆಯ ಪಿಂಡಿಯನ್ನೋ ಅಡ್ಡ ಇರಿಸಿ, ಬಟ್ಟೆ/ಚಾಪೆ ಹಾಸಿ ಮಲಗುತ್ತಿದ್ದರು. ಎಷ್ಟು ನಿದ್ದೆ ಬರುತ್ತಿತ್ತೋ, ಎಷ್ಟು ದಣಿವು ನೀಗಲು ಸಾಧ್ಯವಾಗುತ್ತಿತ್ತೋ ಯಾರು ಬಲ್ಲರು! ಮದ್ಲೆಗಾರನ ಸ್ಥಾನದ ಹೊಣೆಯಲ್ಲಿದ್ದ ಹರಿನಾರಾಯಣ ಬೈಪಾಡಿತ್ತಾಯರು ಬೆಳಗ್ಗಿನವರೆಗೆ ಚೆಂಡೆ ನುಡಿಸಿ, ಚೌಕಿಯಲ್ಲಿ ಮಂಗಲ ಮುಗಿಸಿ, ಪತ್ನಿಯನ್ನು ಎಬ್ಬಿಸಿ, ಅದೇ ಲ್ಯಾಂಬಿ ಸ್ಕೂಟರ್‌ನಲ್ಲಿ ಕೂರಿಸಿ ನಿರ್ಗಮಿಸುತ್ತಿದ್ದರು. ಬಣ್ಣ ಬಿಳಿ-ನಸುನೀಲಿ ಬಣ್ಣದ ಸ್ಕೂಟರ್ ಮಾರ್ಗದ ಕೊನೆಯಲ್ಲಿ ಮರೆಯಾಗುವವರೆಗೂ ನಿಂತು ನೋಡುತ್ತಿದ್ದೆವು.
ಒಬ್ಬ ಮಹಿಳೆ ಭಾಗವತಿಕೆ ಮಾಡುತ್ತಿದ್ದಾರೆ ಎಂಬ ವಿಚಾರವನ್ನು ಬಿಟ್ಟರೆ ಬೇರೇನೂ ವಿಶೇಷ ಆ ದಿನಗಳಲ್ಲಿ ಕಂಡಿರಲಿಲ್ಲ, ಕಾಣುವ ಪ್ರಾಯವೂ ಅದಾಗಿರಲಿಲ್ಲ. ರೇಡಿಯೋದಲ್ಲಿ ಒಂದೆರಡು ಬಾರಿ ಲೀಲಾವತಿ ಬೈಪಾಡಿತ್ತಾಯರ ಹಾಡು ಬಂದಿತ್ತು. ಅವರಲ್ಲದೆ, ಆಗ ರೇಡಿಯೋದ ‘ವನಿತಾವಾಣಿ’ಯಲ್ಲಿ ಪ್ರಸಾರವಾಗುತ್ತಿದ್ದ ಮತ್ತೊಬ್ಬ ಮಹಿಳಾ ಭಾಗವತರ ಧ್ವನಿ ಎಂದರೆ ಮಂಜುಳಾ ಉಜಿರೆ ಎಂಬವರಿದ್ದಿರಬೇಕು ಎಂದು ಅರೆಬರೆ ನೆನಪು. ಅದಲ್ಲದೆ, ಮೇಳವೊಂದರಲ್ಲಿ ಅರುಣಾ ಎಂಬ ಮಹಿಳೆ ಹಾಡುತ್ತಿದ್ದರೆಂಬುದನ್ನು ಕೇಳಿದ್ದೆ. ನೋಡುವ ಅವಕಾಶ ಸಿಕ್ಕಿರಲಿಲ್ಲ. ಆಗಲೂ ಒಬ್ಬಿಬ್ಬರು ಮಹಿಳಾ ಭಾಗವತರು ಇದ್ದರು. ಆದರೆ, ಅನ್ಯಾನ್ಯ ಕಾರಣಗಳಿಗಾಗಿ ಯಕ್ಷಗಾನದಲ್ಲಿ ಹಾಡುವುದನ್ನು ಮುಂದುವರಿಸಲಿಲ್ಲ. ಆದರೆ, ಲೀಲಾವತಿ ಬೈಪಾಡಿತ್ತಾಯರು ಕಲಾಪಯಣವನ್ನು ನಿಲ್ಲಿಸಲಿಲ್ಲ. ಯಾಕೋ ಏನೋ, ಮುಂದಿನ ದಿನಗಳಲ್ಲಿ ಯಕ್ಷಗಾನದ ಕುರಿತ ನನ್ನ ಅನುಭವ ವಿಕಾಸಗೊಳ್ಳುತ್ತಿದ್ದಂತೆ ಅವರ ಭಾಗವತಿಕೆಯನ್ನು ಮತ್ತೆ ಮತ್ತೆ ಕೇಳಬೇಕು ಎಂಬ ಭಾವ ಮೂಡಲಾರಂಭಿಸಿತ್ತು. ಈ ಶೈಲಿಯಲ್ಲೇನೋ ವಿಶೇಷವಿದೆ; ಶಾಸ್ತ್ರೀಯ ಸಂಗೀತವನ್ನೂ ಯಕ್ಷಗಾನ ಹಾಡುಗಾರಿಕೆಯನ್ನೂ ಜೊತೆಜೊತೆಯಾಗಿ ಆಲಿಸುವ ಸೌಖ್ಯವಿದೆ ಎಂದು ಅನ್ನಿಸತೊಡಗಿತ್ತು.
ಮುಂದೆ, ಉಡುಪಿಯ ಯಕ್ಷಗಾನ ಕಲಾರಂಗದ, ಶ್ರೀಕೃಷ್ಣ ಮಠದ ರಾಜಾಂಗಣದ ಎಷ್ಟೋ ಕಾರ್ಯಕ್ರಮಗಳಿಗೆ ಲೀಲಾವತಿ ಬೈಪಾಡಿತ್ತಾಯರನ್ನು ಮತ್ತು ಹರಿನಾರಾಯಣ ಬೈಪಾಡಿತ್ತಾಯರನ್ನು ಅಹ್ವಾನಿಸುವ ಅವಕಾಶ ಒದಗಿತು. ಸೋದೆ ಮಠಾಧೀಶರು ತಮ್ಮ ಪರ್ಯಾಯದ ಅವಧಿಯಲ್ಲಿ ಬೈಪಾಡಿತ್ತಾಯ ದಂಪತಿಗಳನ್ನು ಅಭಿಮಾನದಿಂದ ಆಮಂತ್ರಿಸಿ, ಅವರ ಭಾಗವತಿಕೆಯ ಕಾರ್ಯಕ್ರಮವನ್ನು ಆರಂಭದಿಂದ ಕೊನೆಯವರೆಗೆ ನೋಡಿ ಆನಂದಿಸುತ್ತಿದ್ದರು. ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಲಿ ಕಡೆಕಾರ್ ಅವರು ಬೈಪಾಡಿತ್ತಾಯ ದಂಪತಿಗಳಿಗೆ ಜೊತೆಯಾಗಿ ‘ಯಕ್ಷಗಾನ ಕಲಾರಂಗ’ ಪ್ರಶಸ್ತಿಯನ್ನು ಕೊಡಿಸಿ, ಇದು ಕಲಾಸಾಂಗತ್ಯ ಮತ್ತು ಸಮರಸ ದಾಂಪತ್ಯಕ್ಕೆ ಸಂದ ಗೌರವವೆಂದು ಬಣ್ಣಿಸಿದ್ದರು. ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಲೀಲಾವತಿ ಬೈಪಾಡಿತ್ತಾಯರು [ಬಹುಶಃ ‘ವಾಲಿಮೋಕ್ಷ’ದ ‘ಕರುಣವಿದ್ದರೆ ಸಾಕು’ ಪದ್ಯವಿರಬೇಕು] ಭಾವಪೂರ್ಣವಾಗಿ ಹಾಡಿ ಸೋದೆ ಮಠಾಧೀಶರ ಮೆಚ್ಚುಗೆಗೆ ಪಾತ್ರರಾದದ್ದು ಇನ್ನೂ ನೆನಪಿದೆ. ಮುರಲಿ ಕಡೆಕಾರ್ ಅವರು ಬೈಪಾಡಿತ್ತಾಯ ದಂಪತಿಗಳ ಕುರಿತು ಅಪಾರ ಗೌರವ ಹೊಂದಿದ್ದು, ಅನೇಕ ಪ್ರಶಸ್ತಿ-ಸಂಮಾನಗಳಿಗೂ ಶಿಫಾರಸು ಮಾಡಿದ್ದರು. ಪಲಿಮಾರು ಮಠದ ವಿದ್ಯಾಮಾನ್ಯ ಪ್ರಶಸ್ತಿಯೂ ಅವುಗಳಲ್ಲಿ ಒಂದು. ಪ್ರತಿವರ್ಷ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಪ್ರಕ್ರಿಯೆ ನಡೆಯುತ್ತಿರುವಾಗ, ‘ಈ ಸಲ ಅವರಿಗೊಂದು ಸಿಗಲೇಬೇಕು. ಅವರಿಗಲ್ಲದೆ ಮತ್ತ್ಯಾರಿಗೆ‘ ಎಂದು ಮುರಲಿ ಕಡೆಕಾರ್ ಸ್ವಯಂಪ್ರೇರಿತರಾಗಿ ಬೆಂಗಳೂರಿನ ಆಯ್ಕೆ ಸಮಿತಿಗೆ ಸಂದೇಶ ರವಾನಿಸುತ್ತಿದ್ದರು.
ಈ ಭಾಗವತ-ಮದ್ಲೆಗಾರ ದಂಪತಿಗಳನ್ನು ನಾನು ಕರ್ನಾಟಕದ ಹಲವು ಊರುಗಳಿಗೆ ಯಕ್ಷಗಾನ ಪ್ರದರ್ಶನಕ್ಕೆ ಕರೆದೊಯ್ದಿದ್ದೇನೆ. ಅವುಗಳಲ್ಲಿ ನೆನಪಿಸಲೇಬೇಕಾದ್ದು -
- ನೀನಾಸಂ, ಹೆಗ್ಗೋಡು, ಸಾಗರ
- ಕಿನ್ನರ ಮೇಳ, ತುಮರಿ, ಸಾಗರ
- ಪುರಪ್ಪೇಮನೆ, ಸಾಗರ
- ರಂಗಶಂಕರ, ಬೆಂಗಳೂರು
- ವಿಭಿನ್ನ, ಮಂಗಳೂರು [ಕುಂಭಕರ್ಣ ಕಾಳಗದ ಪೂರ್ವಭಾಗ]
ಪೂರ್ವಸಿದ್ಧತೆ
ಕೆ. ಗೋವಿಂದ ಭಟ್ಟರು, ಸಿದ್ಧಕಟ್ಟೆ ಚೆನ್ನಪ್ಪ ಶೆಟ್ಟರು, ಗೇರುಕಟ್ಟೆ ಗಂಗಯ ಶೆಟ್ಟರು, ಕರ್ಗಲ್ಲು ವಿಶ್ವೇಶ್ವರ ಭಟ್ಟರು, ಉಬರಡ್ಕ ಉಮೇಶ ಶೆಟ್ಟರು, ಸುಣ್ಣಂಬಳ ವಿಶ್ವೇಶ್ವರ ಭಟ್ಟರು, ಸಿದ್ಧಕಟ್ಟೆ ಸದಾಶಿವ ಶೆಟ್ಟಿಗಾರರು, ಬಣ್ಣದ ಸಂಪಾಜೆ ಸುಬ್ರಾಯರು, ಕೈರಂಗಳ ಕೃಷ್ಣ ಮೂಲ್ಯರು, ಶಂಭಯ್ಯ ಕಂಜರ್ಪಣೆಯವರು, ಧರ್ಮಸ್ಥಳ ಚಂದ್ರಶೇಖರರು, ವೇಣೂರು ಭಾಸ್ಕರ ಆಚಾರ್ಯರು, ಕಾರ್ಕಳ ಶಶಿಕಾಂತ ಶೆಟ್ಟರು - ಇಂಥ ಪ್ರಸಿದ್ಧ ಕಲಾವಿದರು ಈ ಪ್ರದರ್ಶನಗಳಲ್ಲಿದ್ದರು. ಕೆಲವು ಕಡೆ ಒಳ್ಳೆಯ ಯಶಸ್ಸು ಸಿಕ್ಕಿತ್ತು. ಇನ್ನು ಕೆಲವು ಕಡೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿದ್ದೂ ಇದೆ. ಆದರೆ, ಹಾಡುಗಾರಿಕೆಯನ್ನು ಮೆಚ್ಚದವರು ಯಾರೂ ಇರಲಿಲ್ಲ. ಪ್ರಸಂಗ ಆರಂಭವಾಗುವ ಪೂರ್ವದಲ್ಲಿ ಲೀಲಾವತಿ ಬೈಪಾಡಿತ್ತಾಯರು ಕಲಾವಿದರೊಂದಿಗೆ ಮಾತನಾಡುತ್ತ, ಪ್ರತಿದೃಶ್ಯಗಳ ವಿವರಗಳನ್ನು ಕೇಳಿ ಖಚಿತಪಡಿಸಿಕೊಳ್ಳುತ್ತ ಪೂರ್ಣವಾಗಿ ತೊಡಗಿಸಿಕೊಳ್ಳುತ್ತಿದ್ದರು. ದೊಡ್ಡ ರಂಗಸ್ಥಳಗಳಲ್ಲಿ ಮೆರೆದ ಪ್ರಖ್ಯಾತ ಭಾಗವತರಾದರೂ ಪ್ರತಿ ಪ್ರದರ್ಶನದಲ್ಲಿಯೂ ಹೊಸದೇ ಎಂಬಂತೆ ಅವರು ಸಿದ್ಧತೆ ಮಾಡಿಕೊಳ್ಳುತ್ತಿರುವುದು ನನಗೆ ಸೋಜಿಗವೆನಿಸುತ್ತಿತ್ತು. ವಿನಮ್ರತೆ ಅವರ ವ್ಯಕ್ತಿತ್ವದ ಸ್ಥಾಯಿ ಭಾವವಾಗಿತ್ತು.
ದುರ್ಗಮ ಸ್ಥಳದಿಂದ...
ನಾನು ‘ಜನವಾಹಿನಿ’ ಎಂಬ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದಾಗ ಅವರದೊಂದು ಸಂದರ್ಶನ ಪ್ರಕಟಿಸಿದ ನೆನಪು. ಈಗ ಅದರ ಪ್ರತಿ ಲಭ್ಯವಿಲ್ಲ. ಆದರೆ, ಉದಯವಾಣಿ ಪತ್ರಿಕೆಯ ‘ಮಹಿಳಾ ಸಂಪದ’ದಲ್ಲಿ ಅವರ ಸಂದರ್ಶನ ಪ್ರಕಟಿಸಿದ್ದೆ. ಅದರ ಪ್ರತಿ ಈಗ ಹುಡುಕಿದರೆ ಸಿಗಲೂಬಹುದು. ಈ ಎರಡು ಸಂದರ್ಶನಗಳಿಗಾಗಿ ಅವರ ಮನೆಗೆ ಸ್ವತಃ ತೆರಳಿದ್ದೆ. ಒಂದು ಸಲ ಬಜ್ಪೆಯಿಂದಲೋ ಸುಂಕದಕಟ್ಟೆಯಿಂದಲೂ ಕಾಲ್ನಡಿಗೆಯಲ್ಲಿಯೇ ಇಳಿಜಾರಿನಲ್ಲಿ ನಡೆದು ಹೋಗಿರಬೇಕು. ಆಮೇಲೊಮ್ಮೆ ತಲಕಳ ಮೇಳದ ಆಟಕ್ಕೆ ಬದಲಿ ಭಾಗವತನಾಗಿ ತೆರಳಿದ್ದೆನಾದರೂ ಅವರ ಮನೆಗೆ ಹೋಗಲಾಗಿರಲಿಲ್ಲ. ಈ ವಿಚಾರವನ್ನು ಏಕೆ ಹೇಳುತ್ತಿದ್ದೇನೆಂದರೆ, ಒಂದು ರೀತಿಯಲ್ಲಿ ದುರ್ಗಮದಂತಿದ್ದ ಆ ಸ್ಥಳದಿಂದ ದಂಪತಿಗಳು ಪ್ರತಿರಾತ್ರಿ ಯಕ್ಷಗಾನಕ್ಕೆ ಬರುತ್ತಿದ್ದರೆಂಬುದನ್ನು ಕಲ್ಪಿಸಿ ಆಶ್ಚರ್ಯವೆನಿಸಿತ್ತು. ಆ ದಿನಗಳಲ್ಲಿ ರಸ್ತೆಯೂ ಸರಿಯಿದ್ದಿರಲಾರದು, ಪ್ರದೇಶವೂ ನಿರ್ಜನವಿದ್ದಿರಬೇಕು.
ಇತ್ತೀಚೆಗಿನ ಸುಮಾರು ಹತ್ತು ವರ್ಷಗಳಿಂದ ಅವರನ್ನು ನಾನು ಬಹಳ ಮಾತನಾಡಿಸುವ ಅವಕಾಶ ಸಿಕ್ಕಿದ್ದು ಕಡಿಮೆ. ಎರಡು ವರ್ಷಗಳ ಹಿಂದೆ, ಉಡುಪಿ ಯಕ್ಷಗಾನ ಕಲಾರಂಗದ ಮೇಲುಸ್ತುವಾರಿಯಲ್ಲಿ ಕೋಳ್ಯೂರು ಶ್ರೀಧರ ರಾಯರು ಒಂದು ತಿಂಗಳ ಪರ್ಯಂತ ಆಯೋಜಿಸಿದ್ದ ‘ಕೋಳ್ಯೂರು ವೈಭವ’ಕ್ಕಾಗಿ ಕೋಳ್ಯೂರು ರಾಮಚಂದ್ರ ರಾಯರ ಕುರಿತು ಬೈಪಾಡಿತ್ತಾಯ ದಂಪತಿಗಳ ಅಭಿಪ್ರಾಯವನ್ನು ಧ್ವನಿ ಮುದ್ರಿಸಬೇಕಾಗಿತ್ತು. ನಾನೇ ಮನೆಗೆ ನೇರವಾಗಿ ಹೋಗಿ ಮಾತನಾಡಿಸೋಣ ಎಂದು ಭಾವಿಸಿದ್ದೆ. ಅವರು ದೇವಸ್ಥಾನದಲ್ಲೇನೋ ಪೂಜೆಯ ತಯಾರಿಯಲ್ಲಿದ್ದುದರಿಂದ ಆ ಸಂದರ್ಭ ಸಂದರ್ಶನಕ್ಕೆ ಅನುಕೂಲವಾಗಿರಲಿಲ್ಲ. ಆಮೇಲೆ, ಒಂದೆರಡು ದಿನಗಳ ಬಳಿಕ ಉಡುಪಿಯ ವಿದ್ಯಾಪ್ರಸಾದರು, ಕೋಳ್ಯೂರು ಶ್ರೀಧರ ರಾಯರೊಂದಿಗೆ ತಲಕಳದ ಮನೆಗೆ ತೆರಳಿ, ಸಂದರ್ಶನವನ್ನು ದಾಖಲಾತಿ ಮಾಡಿದರು. ಆ ಸಂದರ್ಶನದ ವೇಳೆ ಲೀಲಾವತಿ ಬೈಪಾಡಿತ್ತಾಯರ ಸ್ಮೃತಿ ಶಕ್ತಿ ಕುಂದಿರುವುದರ ಬಗ್ಗೆ, ಅವರು ಪತಿಯ ಸಹಾಯದಿಂದ ಹಳೆಯ ಘಟನೆಗಳನ್ನು ನೆನಪಿಸಿಕೊಳ್ಳಲು ಪ್ರಯತ್ನಿಸುತ್ತಿರುವುದರ ಬಗ್ಗೆ ಕೇಳಿ ತುಂಬ ಬೇಸರವಾಗಿತ್ತು.
ಆರಂಭದ ದಿನಗಳಲ್ಲಿ ಅವರನ್ನು ನಮ್ಮ ಪ್ರದರ್ಶನಗಳಲ್ಲಿ ತೊಡಗಿಸಿಕೊಳ್ಳುತ್ತಿರುವಾಗ ನಮ್ಮ ‘ಥಿಯೇಟರ್ ಯಕ್ಷ’ದ ಕಲ್ಪನೆ ಇರಲಿಲ್ಲ. ಕಳೆದ ಕೆಲವು ಸಮಯದಿಂದ ಯಕ್ಷಗಾನದ ಕುರಿತ ನನ್ನ ಚಿಂತನೆ, ಪ್ರಯೋಗಗಳನ್ನು ನಿಕಷಕ್ಕೊಡ್ಡುತ್ತ, ಪರಿಷ್ಕರಿಸಿಕೊಳ್ಳುತ್ತ, ಬದಲಾಯಿಸಿಕೊಳ್ಳುತ್ತ ಬಂದಿದ್ದೇನೆ. ಪ್ರಾಕ್ತನ-ನವೀನ- ಎರಡನ್ನೂ ಸಮನ್ವಯ ಭಾವದಲ್ಲಿ ಸ್ವೀಕರಿಸುವ ಬಗೆಯಲ್ಲಿ ಇವತ್ತಿನ ಪ್ರಯೋಗಗಳನ್ನು ನಡೆಸುತ್ತಿದ್ದೇನೆ. ಈಗ ಭಾಗವತಿಕೆಯ ಸಾಥಿಯಾಗಿ, ರಂಗಚಲನೆಗೆ ಪೂರಕವಾಗಿ ವಯಲಿನ್ ಬಳಸುವಾಗಲೆಲ್ಲ ಲೀಲಾವತಿ ಬೈಪಾಡಿತ್ತಾಯರ ನೆನಪಾಗುತ್ತದೆ. ಅವರನ್ನು ಇಂಥ ಪ್ರಯೋಗಗಳಿಗೆ ಎಷ್ಟೊಂದು ಪರಿಣಾಮಕಾರಿಯಾಗಿ ಬಳಸಬಹುದಿತ್ತು, ಆದರೆ ಸಾಧ್ಯವಾಗಲಿಲ್ಲವಲ್ಲ ಅಂತ ಈಗ ಅನ್ನಿಸತೊಡಗಿದೆ. ಕುಬಣೂರು ಶ್ರೀಧರರಾಯರನ್ನು ನೆನಪಿಸಿಕೊಂಡಾಗಲೂ ಇದೇ ಬೇಸರ ಕಾಡುತ್ತದೆ.
ಭಾಗವತಿಕೆಗೆ ಹೊಸ ಪರಂಪರೆ
ಲೀಲಾವತಿ ಬೈಪಾಡಿತ್ತಾಯರ ಕುರಿತು ವಿಶೇಷ ಅಭಿಮಾನವನ್ನು ಹೊಂದಲು ಒಂದು ಕಾರಣ, ಈಗಾಗಲೇ ಹೇಳಿದಂತೆ ಯಕ್ಷಗಾನದ ಭಾಗವತಿಕೆಯ ನಡೆಗೆ ಭಂಗ ಬಾರದಂತೆ ಅವರು ಅನುಸರಿಸುತ್ತಿದ್ದ ಕರ್ನಾಟಕ ಸಂಗೀತ ಶೈಲಿ ಮತ್ತು ಶುದ್ಧ ಗಮಕಗಳು. ಅವರು ಸಂಗೀತವನ್ನು ಮಧೂರು ಪದ್ಮನಾಭ ಸರಳಾಯರಲ್ಲಿ ಕಲಿತಿದ್ದರು ಎಂಬುದನ್ನು ಕೇಳಿಬಲ್ಲೆ. ಪದ್ಮನಾಭ ಸರಳಾಯರು ಚೆಂಬೈ ವೈದ್ಯನಾಥನ್ ಭಾಗವತರಂಥವರಿಗೆ ವಯಲಿನ್ ನುಡಿಸಿದ ಘನ ವಿದ್ವಾಂಸರು. ಈಗ ನಮ್ಮೊಂದಿಗಿರುವ ಕೋಟೆಕ್ಕಾರ್ ಬಾಬು ರೈಗಳು ಪದ್ಮನಾಭ ಸರಳಾಯರ ಒಡನಾಡಿಗಳಾಗಿದ್ದರು.
ಲೀಲಾವತಿ ಬೈಪಾಡಿತ್ತಾಯರು ಬಲಿಪ ನಾರಾಯಣ ಭಾಗವತರ ಮಾರ್ಗಾನುಸಾರಿಯೆಂದು ಹೇಳುತ್ತೇವಾದರೂ, ಹಾಗೆಂದು ಲೀಲಾವತಿ ಬೈಪಾಡಿತ್ತಾಯರೇ ಒಂದೆಡೆ ಹೇಳಿದ್ದರಾದರೂ ಅವರ ಆದರ್ಶ ವ್ಯಕ್ತಿ ಭಾಗವತ ದಾಮೋದರ ಮಂಡೆಚ್ಚರೆಂದು ನನ್ನ ಅಭಿಮತ. ‘ಪಾತ್ರಕ್ಕೆ ಎಷ್ಟು ಬೇಕೋ ಅಷ್ಟೇ ಹಾಡುವ’ ಬಲಿಪ ನಾರಾಯಣ ಭಾಗವತರ ರಂಗಘನತೆಯ ಗುಣವನ್ನು ಲೀಲಾವತಿ ಬೈಪಾಡಿತ್ತಾಯರು ಅನುಸರಿಸಿರಬೇಕು, ಅನುಸರಿಸಿದ್ದರು. ಕಡತೋಕಾ ಮಂಜುನಾಥ ಭಾಗವತರ ಏರು ಶ್ರುತಿಯ ಗೇಯ ವಿಧಾನ, ರಾಗಗಳ ಸರಳ ಪ್ರಸ್ತುತಿ ಲೀಲಾವತಿ ಬೈಪಾಡಿತ್ತಾಯರನ್ನು ಪ್ರಭಾವಿಸಿರಬೇಕು. ಆದರೂ, ವಿವಿಧ ರಾಗಗಳನ್ನು ಬಳಸಿ, ಭಾವನಾತ್ಮಕವಾಗಿ ಹಾಡುವುದರಲ್ಲಿ ದಾಮೋದರ ಮಂಡೆಚ್ಚರೇ ಲೀಲಾವತಿ ಬೈಪಾಡಿತ್ತಾಯರಿಗೆ ಮಾದರಿಯಾಗಿರಬೇಕು.
ಲೀಲಾವತಿ ಬೈಪಾಡಿತ್ತಾಯರು ತಾಳಘಾತ ಕ್ರಮದಲ್ಲಿ ‘ಸಮಗ್ರಹ’ವನ್ನು ಅನುಸರಿಸುವವರು. ಅಂದರೆ, ತಾಳ ಹಾಕುವ ಇನ್ನಿತರ ಕ್ರಮಗಳಾದ ಆತೀತ ಅಥವಾ ಅನಾಗತ ಗ್ರಹ ಕ್ರಮಗಳನ್ನು ಅವರು ಅನುಸರಿಸುವುದು ಇಲ್ಲವೆಂದಲ್ಲ, ವಿರಳ. ತ್ತಿತ್ತಿತ್ತೈ ತಾಳದಲ್ಲಿಯೂ ಆರಂಭದ ಘಾತಕ್ಕೆ ತಾಕುವಂತೆ ಹಾಡುವ ಒಂದೇ ಮಾದರಿಯ ಕ್ರಮ ಅವರದು. ನೇರವಾಗಿ ಹೇಳುವುದಾದರೆ, ಸಾಹಿತ್ಯವನ್ನು ಸ್ಫುಟವಾಗಿ, ರಾಗಬದ್ಧವಾಗಿ, ಭಾವಪೂರ್ಣವಾಗಿ ಪ್ರಸ್ತುತ ಪಡಿಸುವತ್ತ ಲೀಲಾವತಿ ಬೈಪಾಡಿತ್ತಾಯರ ಲಕ್ಷ್ಯವೇ ಹೊರತು, ತಾಳಲಯದ ಕುಸ್ತಿ-ವರಸೆಗಳಲ್ಲಿ ಅವರಿಗೆ ಆಸಕ್ತಿ ಇರಲಿಲ್ಲ. ಅಂಥ ‘ಸೀದ’ ನಡೆಯ ಪದ್ಯಕ್ಕೆ ಎಷ್ಟು ಬೇಕೋ ಅಷ್ಟೇ, ಹೆಚ್ಚೂ ಅಲ್ಲದ, ಕಡಿಮೆಯೂ ಅಲ್ಲದ ಮದ್ದಲೆ ಹರಿನಾರಾಯಣ ಬೈಪಾಡಿತ್ತಾಯರದ್ದು. ಅದು ಅವರಿಗೆ ಮಾತ್ರ ಪ್ರತ್ಯೇಕವಾಗಿ ಸಿದ್ಧಿಸಿದ ನಾದ ಸೌಖ್ಯ! ಅವರ ಕೆಲವು ಮಂದಿ ಶಿಷ್ಯರ ನುಡಿತ ಕ್ರಮ ನನಗೆ ಇಷ್ಟವಾಗಲು ಅದೇ ಕಾರಣ.
ಲೀಲಾವತಿ ಬೈಪಾಡಿತ್ತಾಯರ ಹಾಡಿನಲ್ಲೊಂದು ವಿಶಿಷ್ಟತೆ ಇದೆ. ಇದು ಕೇವಲ ಅಲಂಕಾರಕ್ಕೆ ಹೇಳುವ ಮಾತಲ್ಲ. ಅನ್ಯರ ಹಾಡುಗಾರಿಕೆಯಲ್ಲಿ ಅದು ಅಲಭ್ಯ!. ಅವರದ್ದೇ ಶಿಷ್ಯೆಯಾಗಿದ್ದ ಭಾಗವತರೊಬ್ಬರಿಗೆ ನಾನು ಹೇಳಿದ್ದೆ- ‘ನಿಮ್ಮ ಪದವನ್ನು ಫಕ್ಕನೆ ಕೇಳಿದಾಗ ಲೀಲಾವತಿ ಬೈಪಾಡಿತ್ತಾಯರ ಹಾಗೆ ಕೇಳಿಸುತ್ತದೆ. ಈ ಶೈಲಿಯನ್ನು ಉಳಿಸಿಕೊಳ್ಳಿ’.
ಲೀಲಾವತಿ ಬೈಪಾಡಿತ್ತಾಯರ ಹಾಡುಗಾರಿಕೆಯನ್ನು ‘ಯಕ್ಷಗಾನದ ಸಾಂಪ್ರದಾಯಿಕ ಶೈಲಿ’ ಎಂದು ನಾನು ವ್ಯಾಖ್ಯಾನಿಸಬಯಸುವುದಿಲ್ಲ. ಆದರೆ, ಅದನ್ನು ಪರಂಪರೆಯ ‘ಮುಂದುವರಿಕೆ’ ಎಂಬಂತೆ ಭಾವಿಸುತ್ತೇನೆ. ಇನ್ನೂ ಕಲಾತ್ಮಕ ಪರಿಭಾಷೆಯಲ್ಲಿ ಹೇಳುವುದಾದರೆ ಇದು ‘ಹೊಸ ಪರಂಪರೆಯ ಶೋಧ’ ಎಂದು ವಿವರಿಸಬಹುದು. ಇದನ್ನು ಕೊಂಚ ವಿಸ್ತರಿಸಿ ಹೇಳೋಣ- ಇವತ್ತು ನಾವು ಪ್ರಯೋಗಗಳ ಬಗ್ಗೆ ಮಾತನಾಡುತ್ತೇವೆ. ಯಕ್ಷಗಾನ ಭಾಗವತಿಕೆಯಲ್ಲಿ ತುಂಬ ಬದಲಾವಣೆಗಳಾಗಿವೆ, ಪ್ರಯೋಗಗಳಾಗಿವೆ. ಯಕ್ಷಗಾನ ಭಾಗವತಿಕೆಯ ಶೈಲಿಯನ್ನು ‘ಬಾಗಿಸಿ’ ಮರುಸಂಯೋಜನೆ ಮಾಡುವುದಾದರೆ [ಬ್ಲೆಂಡ್ ಮಾಡುವುದಾದರೆ], ಅಂಥ ಪ್ರಯೋಗವನ್ನು ಭಾವಗೀತಾತ್ಮಕ ಶೈಲಿಯೊಂದಿಗೊ, ಸುಗಮಸಂಗೀತ ಕ್ರಮದೊಂದಿಗೋ ನಡೆಸುವುದು ಸಾಧ್ಯವಾದೀತು, ಆದರೆ ಅದು ಸಾಧುವಲ್ಲ. ಇದರ ಬದಲಿಗೆ ಶಾಸ್ತ್ರೀಯ ಸಂಗೀತವನ್ನು ಬಳಸಿಕೊಂಡು ಮಾತ್ರ ಭಾಗವತಿಕೆಯ ಹೊಸ ಪಥವನ್ನು ರೂಪಿಸುವ ಪ್ರಯತ್ನ ನಡೆಸುವುದು ಯುಕ್ತ ಎನ್ನುವ ಪಂಥ ನನ್ನದು. ಕಥಕಳಿಯಲ್ಲಿ ಬಳಸಲಾಗುವ ‘ಸೋಪಾನ ಸಂಗೀತಂ’ ಎಂಬುದು ನಿರಂತರ ಶೋಧದಿಂದ ರೂಪುಗೊಂಡ, ಸಾಂಪ್ರದಾಯಿಕ ಗೀತಕ್ರಮವನ್ನು ಶಾಸ್ತ್ರೀಯ ಕ್ರಮಕ್ಕೆ ಬಾಗಿಸಿದ, ಜಡವಾಗದೆ ಕಾಲ ಕಾಲಕ್ಕೆ ತುಸು ತುಸುವೇ ಬದಲಾವಣೆಗೆ ತೆರೆದುಕೊಳ್ಳುವ ಒಂದು ಗಾಯನ ಪದ್ಧತಿ. ಲೀಲಾವತಿ ಬೈಪಾಡಿತ್ತಾಯರಾದರೋ ಎಷ್ಟೋ ವರ್ಷಗಳ ಹಿಂದೆಯೇ ಭಾಗವತಿಕೆಯ ಇಂಥಾದ್ದೊಂದು ಯುಕ್ತವಾದ, ಸಾಧುವಾದ ಪ್ರಯೋಗಶೀಲ ಪ್ರಯತ್ನವನ್ನು- ಅವರಿಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ನಡೆಸಿದ್ದರು- ಎಂಬುದು ಅಭಿಮಾನ ಪಡತಕ್ಕ ಸಂಗತಿ. ಲೀಲಾವತಿ ಬೈಪಾಡಿತ್ತಾಯರು ಯಕ್ಷಗಾನದ ಭಾಗವತ ಶ್ರೇಷ್ಠರ ಸಹಪಂಕ್ತಿ ಭಾಜನರು.